ಮೂಸಂಬಿ
ಮೊಸಂಬಿ | |
---|---|
Scientific classification | |
ಸಾಮ್ರಾಜ್ಯ: | plantae
|
ಕುಲ: | |
ಪ್ರಜಾತಿ: | C. limetta
|
Binomial name | |
Citrus limetta |
ಮೂಸಂಬಿಯು ನಿಂಬೆ ಜಾತಿಯ ಒಂದು ಪ್ರಭೇದ.[೧] ಇದು ರೂಟೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ. ಸಾತ್‌ಕುಡಿ ಪರ್ಯಾಯನಾಮ. ನಿಂಬೆ, ಕಿತ್ತಳೆ, ಚಕೋತ ಮುಂತಾದ ಜಂಬೀರ ಫಲವೃಕ್ಷಗಳ ಹತ್ತಿರ ಸಂಬಂಧಿ.
ಇತಿಹಾಸ
[ಬದಲಾಯಿಸಿ]ಮೂಸಂಬಿಯನ್ನು ಒಂದನೆಯ ಶತಮಾನದಲ್ಲಿ ರೋಮನ್ನರ ತೋಟಗಳಲ್ಲಿ ಮೊತ್ತ ಮೊದಲ ಬಾರಿಗೆ ಬೆಳೆಸಲಾಯಿತೆಂದು ಹೇಳಲಾಗಿದೆ. ಅನಂತರ ಬರಗಾಲದಲ್ಲಿ ನಾಶವಾಯಿತೆಂದು ಟಾಲ್ಕೋವಸ್ಕಿ ಎಂಬ ವಿಜ್ಞಾನಿ ತಿಳಿಸಿದ್ದಾನೆ (1938). ಆದರೆ ಗೆಲಿಸಿಯೋ ಪ್ರಕಾರ ಮೂಸಂಬಿ 15ನೆಯ ಶತಮಾನಕ್ಕೆ ಮುಂಚೆ ಯುರೋಪಿನಲ್ಲಿ ಪರಿಚಿತವಾಗಿರಲಿಲ್ಲ. 15ನೆಯ ಶತಮಾನದ ಆದಿಭಾಗದಲ್ಲಿ ದಕ್ಷಿಣ ಯುರೋಪಿನಲ್ಲಿ ಪರಿಚಿತವಾಗಿರಲಿಲ್ಲ. 15ನೆಯ ಶತಮಾನದ ಆದಿಭಾಗದಲ್ಲಿ ದಕ್ಷಿಣ ಯುರೋಪಿನಲ್ಲಿ ಇದನ್ನು ಬೆಳೆಯಲು ಪ್ರಾರಂಭ ಮಾಡಿದರು.
ವ್ಯಾಪ್ತಿ
[ಬದಲಾಯಿಸಿ]ಮೂಸಂಬಿಯ ತವರು ಚೀನ ಮತ್ತು ಇಂಡಿಯ ಎಂದು ಹೇಳಲಾಗಿದೆ. ಈಗ ಇದನ್ನು ಉಪ-ಉಷ್ಣವಲಯದ ಎಲ್ಲ ಭಾಗಗಳಲ್ಲಿ ಬೆಳೆಸಲಾಗುತ್ತಿದೆ.
ಸಸ್ಯ ವಿವರಣೆ
[ಬದಲಾಯಿಸಿ]ಇದು ಎತ್ತರದಲ್ಲಿ ೮ ಮಿ. ಮುಟ್ಟಬಹುದಾದ ಒಂದು ಚಿಕ್ಕ ಮರ. ಮೂಸಂಬಿಯು ಅಸಮ ರೂಪದ ಶಾಖೆಗಳು, ಮತ್ತು ತುಲನಾತ್ಮಕವಾಗಿ ನಯವಾದ, ಕಂದು-ಬೂದು ಮಿಶ್ರಿತ ತೊಗಟೆಯನ್ನು ಹೊಂದಿರುತ್ತದೆ.
ಇದು ನಿತ್ಯಹರಿದ್ವರ್ಣ ವೃಕ್ಷ. ತೆಳುವಾದ ಹಾಗೂ ಕೊಂಚ ಮೊಂಡು ತುದಿಯ ಮುಳ್ಳುಗಳುಂಟು. ಎಲೆಗಳು ಅಂಡಾಕಾರದವು 7.5-10 ಸೆಂ.ಮೀ. ಉದ್ದ ಇವೆ. ಎಲೆತೊಟ್ಟಿನ ಮೇಲೆ ಕಿರಿಯಗಲದ ರೆಕ್ಕೆಗಳುಂಟು.
ಹಣ್ಣುಗಳು ಗೋಳಾಕಾರದವು. ಬಣ್ಣ ಹಳದಿ ಇಲ್ಲವೆ ಕಿತ್ತಳೆ. ಸಿಪ್ಪೆ ಸಾಕಷ್ಟು ಮಂದವಾಗಿದ್ದು ತೊಳೆಗಳಿಗೆ ಬಿಗಿಯಾಗಿ ಅಂಟಿರುತ್ತದೆ. ತೊಳೆಗಳು ಹಳದಿ, ಕಿತ್ತಳೆ ಅಥವಾ ಕೆಂಪುಮಿಶ್ರಿತ ಬಣ್ಣದವು. ಹಣ್ಣುಗಳಿಗೆ ಸಿಹಿ ಅಥವಾ ಹುಳಿ ರುಚಿಯುಂಟು.
ಕೃಷಿ
[ಬದಲಾಯಿಸಿ]ಮೂಸಂಬಿಯನ್ನು ಉಪ-ಉಷ್ಣವಲಯದ ದೇಶಗಳಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಜಂಬೀರ ಜಾತೀಯ ಹಣ್ಣುಗಳ ಪೈಕಿ ಪ್ರಪಂಚದಲ್ಲಿ ಬೆಳೆಯುವ ಮೂರನೆಯ ಎರಡು ಭಾಗದಷ್ಟು ಪಾಲು ಈ ಮೂಸಂಬಿಯದು. ಮೂಸಂಬಿ ಕೃಷಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ್ದು ಮೊದಲಸ್ಥಾನ. ಭಾರತ ಆರನೆಯ ಸ್ಥಾನ ಪಡೆದಿದೆ.
ಭಾರತದಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಇದರ ಕೃಷಿಗೆ ಹೆಸರಾಗಿವೆ. ಆಂಧ್ರ, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ್, ಒರಿಸ್ಸ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯಗಳಲ್ಲಿ ಕೂಡ ಗಣನೀಯವಾಗಿ ಮೂಸಂಬಿಯನ್ನು ಬೆಳೆಸಲಾಗುತ್ತದೆ.
ಮೂಸಂಬಿ ವಿಭಿನ್ನ ವಾಯುಗುಣವುಳ್ಳ ಪ್ರದೇಶಗಳಿಗೆ ಹೊಂದಿಕೊಂಡು ಬೆಳೆಯುತ್ತದಾದರೂ ಹಿಮಪ್ರದೇಶಗಳಲ್ಲಿ ಬೆಳೆಯುವುದು ಕಷ್ಟಕರ. ಇದನ್ನು ಬೆಳೆಯಲು ಖುಷ್ಕಿ ಮತ್ತು ಶುಷ್ಕ ಸ್ಥಿತಿ ಹಾಗೂ ತೇವಾಂಶಪೂರಿತ ವಾಯುಗುಣವುಳ್ಳ ಅಸ್ಸಾಮ್ ಮತ್ತು ಬೆಟ್ಟಗುಡ್ಡ ಪ್ರದೇಶಗಳಾದ ದಕ್ಷಿಣ ಭಾರತ ಯುಕ್ತ ಪ್ರದೇಶ ಎಂದು ಹೇಳಲಾಗಿದೆ.
ಬಗೆಗಳು
[ಬದಲಾಯಿಸಿ]ಮೂಸಂಬಿಯಲ್ಲಿ ನಾಲ್ಕು ಬಗೆಗಳಿವೆ: 1. ಸಾಮಾನ್ಯ ಮೂಸಂಬಿ, 2. ಹುಳಿ ರಹಿತ ಮೂಸಂಬಿ, 3. ಪಿಗ್‌ಮಂಟ್ ಉಳ್ಳ ಮೂಸಂಬಿ, 4. ನೇವಲ್ ಮೂಸಂಬಿ. ಅಲ್ಲದೆ ಬೆಳೆಯುವ ಶ್ರಾಯವನ್ನು ಅನುಸರಿಸಿ, ಮುಂಗಾರು, ಮಧ್ಯಕಾಲಿಕ ಹಾಗೂ ಹಿಂಗಾರು ಬಗೆಗಳೆಂದು ವಿಂಗಡಿಸಲಾಗಿದೆ.
ಉಪಯೋಗಗಳು
[ಬದಲಾಯಿಸಿ]ಮೂಸಂಬಿಯ ತಾಜಾ ಹಣ್ಣುಗಳನ್ನು ಹಾಗೆಯೇ ತಿನ್ನಲು ಊಟದ ಜೊತೆಯಲ್ಲಿ ಬಳಸುವರಲ್ಲದೆ ಇದರ ರಸವನ್ನು ತೆಗೆದು ತಾಜಾ ಸ್ಥಿತಿಯಲ್ಲಿಯೊ ಅಥವಾ ಶೈತ್ಯೀಕರಿಸಿ, ಪ್ಯಾಶ್ಚರೀಕರಿಸಿ ಹಾಗೂ ಸಾಂದ್ರೀಕರಿಸಿಯೊ ಉಪಯೋಗಿಸುತ್ತಾರೆ.[೨]
ಇದರ ಹಣ್ಣಿನ ಸಿಪ್ಪೆಯಿಂದ ಅತ್ಯಂತ ಉಪಯುಕ್ತ ಉಪೋತ್ಪನ್ನಗಳಾದ ಎಣ್ಣೆ ಪೆಕ್ಟಿನ್ ಮತ್ತು ಹಸುಗಳ ಮೇವನ್ನು ತಯಾರಿಸಲು ಉಪಯೋಗಿಸುತ್ತಾರೆ. ಮೂಸಂಬಿ ಹಣ್ಣಿನಲ್ಲಿ ಅತಿ ಹೆಚ್ಚು ವಿಟಮಿನ್ 'ಸಿ' ಅಂಶವಿರುವುದರಿಂದ ಇದು ತುಂಬ ಒಳ್ಳೆಯ ಹಣ್ಣೆಂದು ಪ್ರಸಿದ್ಧವಾಗಿದೆ.[೩] ಮೂಸಂಬಿಯ ಸಿಪ್ಪೆಯನ್ನು ರುಚಿ ಕೊಡುವ ವಸ್ತುವನ್ನಾಗಿ ಹಾಗೂ ಕಷಾಯಪಾಕ (ಸಿರಪ್) ತಯಾರಿಕೆಯಲ್ಲಿ ಬಳಸುತ್ತಾರೆ. ಸಿಪ್ಪೆಗಳಲ್ಲಿರುವ ಸಕ್ಕರೆ ಅಂಶವನ್ನು ಹುದುಗಿಸಿ ಅಸಿಟೋನ್ ಮತ್ತು ಬ್ಯೂಟೈಲ್ ಮದ್ಯಸಾರವನ್ನು ಉತ್ಪಾದಿಸಲಾಗುತ್ತದೆ. ಮೂಸಂಬಿ ರಸವನ್ನು ರಕ್ತ ಶುದ್ಧೀಕರಣಕ್ಕೆ ಮತ್ತು ಹಸಿವು ಹೆಚ್ಚಿಸುವುದಕ್ಕೆ ಬಳಸುವುದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://naturesproduce.com/encyclopedia/sweet-lime/
- ↑ https://indianexpress.com/article/lifestyle/health/sweet-lime-mosambi-benefits-diet-8056544/
- ↑ Gopalan, C.; Rama Sastri, B. V.; Balasubramanian, S. C. (1989). "Nutritive Value of Indian Foods". google.co.in.