ಮಿಥ್ಯಾಪಾದಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಬಾಸ್ ಮಿಥ್ಯಾಪಾದಗಳನ್ನು ಚಾಚುತ್ತಿರುವ ಅಮೀಬಾ ಪ್ರೋಟಿಯಸ್

ಮಿಥ್ಯಾಪಾದಗಳು ಎಂದರೆ ಪ್ರೋಟೋಜೋವ ವಿಭಾಗದ ಸಾರ್ಕೊಡೈನ ಮತ್ತು ರೈಜಾಂಡ ವರ್ಗಕ್ಕೆ ಸೂಕ್ಷ್ಮ ಪ್ರಾಣಿಗಳ ವಿಶೇಷ ರಚನೆಗಳು (ಸೂಡೊಪೋಡಿಯ). ಪ್ರಾಣಿಗಳು ಆಹಾರವನ್ನು ಹಿಡಿಯಲು ಇವು ಉಪಯುಕ್ತ. ಇವು ತಾತ್ಕಾಲಿಕವಾಗಿರಬಹುದು ಇಲ್ಲವೆ ಅರೆಶಾಶ್ವತವಾಗಿರಬಹುದು.

ಮಿಥ್ಯಾಪಾದಗಳ ಬಗೆಗಳು[ಬದಲಾಯಿಸಿ]

ಆಕಾರ ಹಾಗೂ ರಚನೆಗಳ ಆಧಾರದ ಮೇಲೆ ನಾಲ್ಕು ಬಗೆಯ ಮಿಥ್ಯಾಪಾದಗಳನ್ನು ಗುರುತಿಸಬಹುದು.[೧]

  1. ಲೋಬೊಪಾಡ್ ಎಂಬವು ಅಗಲವಾಗಿ ದುಂಡನೆಯ ತುದಿಗಳನ್ನು ಹೊಂದಿದ್ದು, ಎಕ್ಟೊಪ್ಲಾಸಮ್ ಮತ್ತು ಎಂಡೊಪ್ಲಾಸಮ್ ಎರಡನ್ನೂ ಒಳಗೊಂಡಿದೆ. ಉದಾಹರಣೆಗೆ ಅಮೀಬ ಪ್ರೋಟಿಯಸ್.
  2. ಫೈಲೊಪಾಡ್ ಎಂಬವು ಚೂಪಾಗಿದ್ದು, ಎಕ್ಟೊಪ್ಲಾಸಮನ್ನು ಮಾತ್ರ ಒಳಗೊಂಡಿವೆ. ಉದಾಹರಣೆಗೆ ಟೆಸ್ಟೆತಿಯಾ.
  3. ರೈಜೊ ಅಥವಾ ರೆಟಿಕ್ಯೂಲೊಪಾಡ್[೨] ಎಂಬ ಬಗೆಯವು ದಾರದಂಥ ಕವಲುಗಳಿಂದ ಕೂಡಿವೆ. ಇವುಗಳಲ್ಲಿಯ ಕೋಶದ್ರವ್ಯವನ್ನು ಎಕ್ಟೊಪ್ಲಾಸಮ್ ಮತ್ತು ಎಂಡೊಪ್ಲಾಸಮ್ ಎಂದು ವಿಂಗಡಿಸಲು ಬರುವುದಿಲ್ಲ. ಉದಾಹರಣೆಗೆ ಫರ‍್ಯಾಮಿನಿಫೆರ ಟೆಸ್ಟೆಸಿ. ಈ ಮೇಲಿನ ಮೂರು ಬಗೆಯ ಮಿಥ್ಯಾಪಾದಗಳು ತಾತ್ಕಾಲಿಕ ತೆರನಾದವು.
  4. ನಾಲ್ಕನೆಯ ಬಗೆಯಾದ ಆಕ್ಸೊಪಾಡ್‍ಗಳು ಕಿರಣಗಳಂತಿರುವ ಅರೆಶಾಶ್ವತ ಮಿಥ್ಯಾಪಾದಗಳು. ಪ್ರತಿ ಆಕ್ಸೊಪಾಡಿನ ಮಧ್ಯೆ ಪಿಡುಸಾದ ಕೋಲಿನ ರಚನೆಯೂ, ಇದರ ಸುತ್ತ ತೆಳುವಾದ ಕೋಶದ್ರವ್ಯವೂ ಇವೆ. ಕೋಶದ್ರವ್ಯ ಸದಾಕಾಲವೂ ಚಲಿಸುತ್ತಿರುತ್ತದೆ.[೩] ಉದಾಹರಣೆಗೆ ಹೀಲಿಯೊಜೋವ ಮತ್ತು ರೇಡಿಯೋಲೇರಿಯ.

ಮಿಥ್ಯಾಪಾದಗಳು ಒಂದೊಂದು ಜಾತಿ ಅಥವಾ ಗುಂಪಿನಲ್ಲಿ ಬಹುಪಾಲು ಒಂದೇ ತೆರನಾಗಿರುವುದರಿಂದ ಪ್ರಭೇದಗಳ ವರ್ಗೀಕರಣದಲ್ಲಿ ಬಹಳ ಮಹತ್ತ್ವದ ಪಾತ್ರ ವಹಿಸಿವೆ. ಕೆಲವೊಮ್ಮೆ ಪರಿಸ್ಥಿತಿಯ ಬದಲಾವಣೆಯಿಂದ ವ್ಯತ್ಯಾಸ ತೋರಬಹುದು.

ಅಮೀಬ ರೀತಿಯ ಚಲನೆ[ಬದಲಾಯಿಸಿ]

ಮಿಥ್ಯಾಪಾದಗಳ ಸಹಾಯದಿಂದ ನಡೆಯುವ ಚಲನೆಗೆ ಅಮೀಬ ರೀತಿಯ ಚಲನೆ ಎಂದು ಹೆಸರು. ಈ ಬಗೆಯ ಚಲನೆ ಪ್ರಾಣಿಚಲನೆಯಲ್ಲಿ ಅತ್ಯಂತ ಪ್ರಾಚೀನವಾದದ್ದೆಂದು ತಿಳಿಯಲಾಗಿದೆ. ಅದರ ಅಭ್ಯಾಸ ಸ್ನಾಯುಗಳ ಸಂಕೋಚನ ಕ್ರಿಯೆಯ ಮೇಲೆ ಹೆಚ್ಚು ಬೆಳಕನ್ನು ಬೀರಬಲ್ಲದು ಎಂಬ ನಂಬಿಕೆಯೂ ಇದೆ. ಮುಖ್ಯವಾಗಿ ಚಲನೆಯಲ್ಲಿ ಭಾಗವಹಿಸುವ ಲೋಬೊಪಾಡ್‌ಗಳು ಮುಂಚಾಚುವ ಮತ್ತು ಹೊರಚಾಚುವ ಎಂಬ ಎರಡು ರೀತಿಯಲ್ಲಿ ರೂಪುಗೊಳ್ಳುತ್ತವೆ. ಮೊದಲನೆಯ ರೀತಿಯಲ್ಲಿ ಬಾಹ್ಯಜೀವರಸ ಉಬ್ಬಿಕೊಂಡು ಮುಂದೆ ಚಾಚುತ್ತದೆ. ಇದರೊಳಗೆ ಅಂತರಜೀವರಸ ಸಮವಾಗಿ ಹರಿಯುವುದು. ಎರಡನೆಯ ರೀತಿಯಲ್ಲಿ ಹೊರಮೈಯ ಒಂದು ಭಾಗ ಒಡೆದು ಅಂತರಜೀವರಸ ಮತ್ತು ಬಾಹ್ಯಜೀವರಸಗಳೆರಡೂ ಸ್ಫೋಟಗೊಳ್ಳುವಂತೆ ಅದರಲ್ಲಿ ಧುಮುಕುವುವು. ಲೋಬೊಪಾಡುಗಳು ಯಾವ ರೀತಿಯಲ್ಲಿಯೇ ರೂಪುಗೊಳ್ಳಲಿ, ಅವು ಬೇರೆ ಬೇರೆ ದಿಕ್ಕಿನಲ್ಲಿ ಹುಟ್ಟುವುದರಿಂದ ಪ್ರಾಣಿ ಸರಳ ರೇಖೆಯಲ್ಲಿ ಚಲಿಸದೆ ಅಂಕು ಡೊಂಕಾಗಿ ಚಲಿಸುವುದು. ಅಮೀಬ ರೀತಿಯ ಚಲನೆಯನ್ನು ಅರ್ಥಮಾಡಿಕೊಳ್ಳಲು ಮೇಲ್ಮೈ ತುಯ್ತ ಸಿದ್ಧಾಂತ ಮತ್ತು ಸಾಂದ್ರತೆಯ ಬದಲಾವಣೆಯ ಸಿದ್ಧಾಂತಗಳು ಬಳಕೆಯಲ್ಲಿದ್ದು ಅವನ್ನೇ ಈಗ ಸದ್ಯಕ್ಕೆ ಎಲ್ಲ ಪ್ರಾಣಿ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಮೊದಲನೆಯ ಸಿದ್ಧಾಂತ ತೀರ ದ್ರವರೂಪಿಯಾದ ಮಿಥ್ಯಾಪದಿಗಳಿಗೂ ಎರಡನೆಯದು ಉಳಿದ ಮಿಥ್ಯಾಪದಿಗಳಿಗೂ ಅನ್ವಯವಾಗುವುದು.

ಉಲ್ಲೇಖಗಳು[ಬದಲಾಯಿಸಿ]

  1. Patterson, David J. "Amoebae: Protists Which Move and Feed Using Pseudopodia". tolweb.org. Tree of Life Web Project. Retrieved 2017-11-12.
  2. "Reticulopodia". eForams. Archived from the original on 2007-07-17. Retrieved 2005-12-30.
  3. "Pseudopodia". Arcella.nl. May 23, 2017. Archived from the original on 2018-12-16. Retrieved 2018-12-16.{{cite web}}: CS1 maint: unfit URL (link)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: