ವಿಷಯಕ್ಕೆ ಹೋಗು

ಅಮೀಬಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೀಬಾ
Scientific classification
ಕ್ಷೇತ್ರ:
ವಿಭಾಗ:
ಗಣ:
ಕುಟುಂಬ:
ಕುಲ:
ಅಮೀಬಾ

Species

ಅಮೀಬಾ ಪ್ರೊಟೆಸ್

ಅಮೀಬಾ ಒಂದು ಏಕಾಣುಜೀವಿ, ಬಹುಸೂಕ್ಷ್ಮ ಜೀವಿ. ಕೇವಲ ೦.೨೫ ಮಿ.ಮೀಟರ್‌ನಿಂದ ೨.೫ ಮಿಲಿಮೀಟರ್‌ನವರೆಗೆ ಇರುವ ಇದನ್ನು ಸೂಕ್ಷ್ಮದರ್ಶಕದಲ್ಲಷ್ಟೇ ನೋಡಬಹುದಾಗಿದೆ. ಕೆಲವು ನೀರು ಮತ್ತು ಜೌಗು ಪ್ರದೇಶಗಳಲ್ಲಿ ಜೀವಿಸಿದರೆ, ಕೆಲವು ಮನುಷ್ಯ ಹಾಗೂ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ. ಹೊಂಡ ಮಡುಗಳಲ್ಲೂ, ಕೆಸರು, ಎಲೆ ಮುಂತಾದ ಪದಾರ್ಥಗಳ ಮೇಲೂ ಹರಿದಾಡುತ್ತದೆ. ಪ್ರೊಟೊಜ಼ೋವನ್ ವರ್ಗಕ್ಕೆ ಸೇರಿದೆ.

ಅಮೀಬಾದ ದೇಹರಚನೆ.

ದೇಹರಚನೆ

[ಬದಲಾಯಿಸಿ]

ದೇಹರಚನೆ ಅತ್ಯಂತ ಸರಳ. ಕೇವಲ ಒಂದೇ ಜೀವಕೋಶವನ್ನು ಇದು ಹೊಂದಿದ್ದು, ಇದಕ್ಕೆ ಯಾವುದೇ ಆಕಾರವಿರುವುದಿಲ್ಲ. ಕ್ಷಣಕ್ಷಣಕ್ಕೂ ಇದರ ಆಕಾರ ಬದಲಾಗುತ್ತಿರುತ್ತದೆ. ಎಲ್ಲ ಜೀವಿಕೋಶಗಳಲ್ಲಿರುವ ಜೀವದ್ರವ್ಯ (ಜೀವರಸ) ಇದರಲ್ಲಿರುತ್ತದೆ. ಇದರ ಸುತ್ತ ತೆಳುವಾದ ಸ್ಥಿತಿಸ್ಥಾಪಕತ್ವ ಇರುವ ಕವಚ ಇರುತ್ತದೆ. ಈ ಕವಚದ ಮೂಲಕ ನೀರು ಮತ್ತು ಆಮ್ಲಜನಕ ಜೀವಕೋಶವನ್ನು ಪ್ರವೇಶಿಸುತ್ತದೆ.

ಜೀವರಸದ ಹೊರ ಆವರಣ (ಎಕ್ಟೊಪ್ಲಾಸಂ) ತಿಳಿಯಾಗಿ ಪಾರದರ್ಶಕವಾಗಿದ್ದು ಒಳಾವರಣ (ಎಂಡೊಪ್ಲಾಸಂ) ಕಣಕಣವಾಗಿ ಹೆಚ್ಚು ದ್ರವರೂಪಿಯಾಗಿದೆ. ಒಳರಸದಲ್ಲಿ ಒಂದು ನಡುಬೀಜ (ನ್ಯೂಕ್ಲಿಯಸ್), ವರ್ತುಲಾಕಾರದ ಒಂದು ಸಂಕೋಚನಾವಕಾಶ (ಕಂಟ್ರ್ಯಾಕ್ಟೈಲ್ ವ್ಯಾಕ್ಯುಯೊಲ್) ಹಾಗೂ ಆಹಾರದಿಂದ ತುಂಬಿದ ಹಲವು ಆಹಾರ ಕುಹರಗಳೂ ಇವೆ. ಅದರ ದೇಹದಿಂದ ಆಗಾಗ ನೂಕಲ್ಪಡುತ್ತಿರುವ ಕೋಡುಗಳಂತಿರುವ ಮಿಥ್ಯಾಪಾದಗಳೆಂಬ (ಸೂಡೊಪೋಡಿಯ) ಅಂಗಗಳೇ ಇದಕ್ಕೆ ಕಾರಣ. ಇವು ಅದರ ಚಲನಾಂಗಗಳು. ಅಮೀಬಾ ತನ್ನ ಇಚ್ಛೆಯಂತೆ ಮಿಥ್ಯಾಪಾದಗಳನ್ನು ನೀಡಬಲ್ಲದು. ಅವನ್ನು ಬೇಡವಾದಾಗ ನಾಶಪಡಿಸಲೂಬಲ್ಲದು.[] ಆದ್ದರಿಂದ ಅವು ಸದಾಕಾಲ ಕಂಡರೂ ಶಾಶ್ವತಾಂಗಗಳಲ್ಲ. ಮಿಥ್ಯಾಪಾದಗಳು ಎಲ್ಲ ದಿಕ್ಕುಗಳಲ್ಲೂ ಹುಟ್ಟುವುದರಿಂದ ಅಮೀಬ ಬೇಕಾದ ದಿಕ್ಕಿನಲ್ಲಿ ಚಲಿಸಬಲ್ಲುದು. ಆದರೂ ಅದೊಂದು ಮಂದಗಾಮಿ ಪ್ರಾಣಿ. ವೇಗ ಮಿನಿಟಿಗೆ 3"/125 ಮಾತ್ರ. ಎಲ್ಲ ಪ್ರಾಣಿಗಳಂತೆ ಅದರ ಚಲನೆಯೂ ಉದ್ದೇಶಪೂರ್ವಕವಾದುದು.

ಆಹಾರವನ್ನು ಪಡೆಯುವ ಕ್ರಮ

[ಬದಲಾಯಿಸಿ]

ಹೆಚ್ಚು ಪ್ರಕಾಶವಿರುವ ಸ್ಥಳವನ್ನು ತ್ಯಜಿಸಿ, ಆಹಾರವಿರುವ ದಿಕ್ಕಿಗೆ ಚಲಿಸುವುದು ಅದರ ಸ್ವಭಾವ. ಆಹಾರ ಸಿಕ್ಕಾಗ ಅದರ ಸುತ್ತಲೂ ಮಿಥ್ಯಾಪಾದಗಳನ್ನು ಪಸರಿಸಿ ಅದನ್ನು ಪೂರ್ತಿಯಾಗಿ ಆವರಿಸುವುದು. ಹೀಗೆ ಆವರಿಸಲ್ಪಟ್ಟ ಆಹಾರ ಒಳಜೀವರಸವನ್ನು ಸೇರಿ, ತನ್ನೊಡನೆ ಸೇರಿದ ನೀರು, ಸ್ರಾವಗಳನ್ನೊಳಗೊಂಡು ಆಹಾರಕುಹರವಾಗಿ ರೂಪುಗೊಳ್ಳುವುದು. ಹೀಗೆ ಬಂಧಿತವಾದ ಆಹಾರ ಜೀರಕರಸದಿಂದ ಪಚನವಾಗಿ ಒಳಜೀವರಸದಲ್ಲಿ ಲೀನವಾಗಿ ಅಮೀಬದ ಬೆಳೆವಣಿಗೆಗೆ ಕಾರಣವಾಗುವುದು. ಅಮೀಬಾ ಶ್ವಾಸೋಚ್ಛ್ವಾಸ ಕ್ರಿಯೆಗಾಗಿ ತನ್ನ ಸುತ್ತಮುತ್ತಲಿರುವ ನೀರಿನಲ್ಲಿ ಬೆರೆತ ಆಮ್ಲಜನಕವನ್ನೇ ಉಪಯೋಗಿಸುವುದು. ಆಮ್ಲಜನಕ ದೇಹವನ್ನು ಪ್ರವೇಶಿಸಿ ಆಹಾರದ್ರವ್ಯಗಳ ಮೇಲೆ ಪ್ರತಿಕ್ರಿಯೆ ಮಾಡಿ, ನೀರು ಮತ್ತು ಶಕ್ತಿಯನ್ನು ಹೊರಹೊಮ್ಮಿಸುವುದು. ಈ ಶಕ್ತಿಯಿಂದಲೇ ಅಮೀಬಾ ತನ್ನ ಚಟುವಟಿಕೆಗಳನ್ನೆಲ್ಲ ನಡೆಸುವುದು. ಈ ಕ್ರಿಯೆಯಲ್ಲಿ ಹುಟ್ಟಿದ ಇಂಗಾಲದ ಡೈಆಕ್ಸೈಡ್ ದೇಹದಿಂದ ನೇರವಾಗಿ ಹೊರಗೆ ಹೋಗುವುದು, ಇಲ್ಲವೆ ಸಂಕೋಚನ ಕುಹರದಲ್ಲಿ ಸಂಗ್ರಹವಾಗುವುದು.

ಸಂಕೋಚನ ಕುಹರದ ಕಾರ್ಯ: ಇವುಗಳ ಜೊತೆಗೆ ದೇಹದಲ್ಲಿ ಸದಾಕಾಲ ಪ್ರವೇಶಿಸುತ್ತಿರುವ ಹೊರಗಿನ ನೀರೂ ಸಂಕೋಚನ ಕುಹರವನ್ನು ಸೇರುವುದು. ಸಂಕೋಚನ ಕುಹರ ಹೀಗೆ ತುಂಬಿಕೊಳ್ಳುತ್ತ ಬಹಳ ದೊಡ್ಡದಾಗಿ ಒಮ್ಮೆಲೇ ಸಂಕೋಚಹೊಂದಿ ಒಳಗಿನ ಪದಾರ್ಥಗಳನ್ನೆಲ್ಲ ಹೊರಗೆ ಎಸೆಯುವುದು. ಜಲನಿಯಂತ್ರಣ ಹೀಗೆ ಸಂಕೋಚನ ಕುಹರದ ಮುಖ್ಯ ಕಾರ್ಯ.[] ಈ ಜಲ ಪರಿಕ್ರಮಣ ಶ್ವಾಸೋಚ್ಛ್ವಾಸ ಹಾಗೂ ವಿಸರ್ಜನಕ್ರಿಯೆಗಳಲ್ಲಿ ಅಪ್ರತ್ಯಕ್ಷವಾಗಿ ಭಾಗವಹಿಸುವುದು.

ಅಮೀಬಾ ವಂಶಾಭಿವೃದ್ಧಿ

[ಬದಲಾಯಿಸಿ]

ಅಮೀಬಾ ಪೂರ್ಣ ಬೆಳೆವಣಿಗೆ ಹೊಂದಿದ ಮೇಲೆ ನಿರ್ಲಿಂಗರೀತಿಯ ವಂಶಾಭಿವೃದ್ದಿಗೆ ಸಿದ್ಧವಾಗುವುದು. ಈ ಕ್ರಿಯೆಯಲ್ಲಿ ನಡುಬೀಜ ಸರಿಯಾಗಿ ಎರಡು ಸೀಳಾಗುವುದು. ಜೀವರಸ ಎರಡು ಭಾಗವಾಗುವುದು. ಪರಿಣಾಮವಾಗಿ ಎರಡು ಚಿಕ್ಕ ಅಮೀಬಾ ಪ್ರಾಣಿಗಳು ನಿರ್ಮಾಣವಾಗುವುವು. ಇವು ಕೂಡ ತಮ್ಮ ತಾಯಿಯಂತೆ ಚಲಿಸುತ್ತ, ಆಹಾರವನ್ನು ಸೇವಿಸುತ್ತ ಬೆಳೆದು ದೊಡ್ಡವಾಗಿ ಸಂತಾನ ಪಡೆಯುವುವು. ಇಂಥ ಸಂತಾನೋತ್ಪತ್ತಿ ಮಾದರಿಗೆ ದ್ವಿದಳನ (ಬೈನರಿ ಫಿಷನ್) ಎಂದು ಹೆಸರು. ಇಲ್ಲಿ ತಾಯಿಯೇ ಒಡೆದು ಎರಡಾಗುವುದರಿಂದ ಅದು ಇಲ್ಲವಾಗುವುದಾದರೂ ತನ್ನ ಸಂತಾನರೂಪದಲ್ಲಿ ಮುಂದುವರಿಯುವುದರಿಂದ ಅದು ಅಮರವೆಂದೇ ಹೇಳಬೇಕು.

ಅಮೀಬಾ ಸೂಕ್ಷ್ಮ ಪ್ರಾಣಿಯಾದರೂ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬಲ್ಲುದು. ನೀರು ಬತ್ತಿದಾಗ ಇಲ್ಲವೆ ಅತಿ ಚಳಿಯಾದಾಗ, ತನ್ನ ಮಿಥ್ಯಾಪಾದಗಳನ್ನು ಒಳಸೇದಿಕೊಂಡು, ದುಂಡಗಾಗಿ, ತನ್ನ ಸುತ್ತಲೂ ಸಂರಕ್ಷಕ ಕವಚವನ್ನು ನಿರ್ಮಿಸಿಕೊಳ್ಳುವುದು. ಈ ಪರಿಸ್ಥಿತಿ ಅನುಕೂಲ ಪರಿಸ್ಥಿತಿ ಒದಗಿದೊಡನೆ ರಕ್ಷಾ ಕವಚವನ್ನು ಒಡೆದು ಅಮೀಬ ಹೊರಬಂದು, ಮೊದಲಿನಂತೆ ಜೀವಿಸಲು ತೊಡಗುವುದು.

ಬಹುದಳನ: ಕೆಲವು ವೇಳೆ ಈ ಅವಸ್ಥೆಯಲ್ಲಿಯೇ ಅದರ ನಡುಬೀಜ ಎಷ್ಟೋಸಲ ವಿಭಾಗವಾಗುವುದು; ಪ್ರತಿಯೊಂದು ಚಿಕ್ಕ ಭಾಗದ ಸುತ್ತಲೂ ಜೀವರಸ ಸಂಗ್ರಹವಾಗಿ ಎಷ್ಟೋ ಬೀಜಕಣಗಳು (ಸ್ಪೋರ್ಸ್) ಉತ್ಪನ್ನವಾಗುವುವು. ಪರಿಸ್ಥತಿ ಅನುಕೂಲವಾಗಿ ರಕ್ಷಾಕವಚ ಒಡೆದಾಗ ಹೊರಬರುವ ಪ್ರತಿಯೊಂದು ಬೀಜಕಣವೂ ಚಿಕ್ಕ ಚಿಕ್ಕ ಅಮೀಬಾದ ರೂಪತಾಳುವುದು. ಇಂಥ ಸಂತಾನೋತ್ಪತ್ತಿಕ್ರಮಕ್ಕೆ ಬಹುದಳನ (ಮಲ್ಟಿಪಲ್ ಫಿಷನ್) ಎಂದು ಹೆಸರು. ಈ ಮಾದರಿಯಲ್ಲಿ ಒಂದುಸಾರಿಗೆ ಸುಮಾರು 500ರ ವರೆಗೆ ಚಿಕ್ಕ ಮರಿಗಳು ಹುಟ್ಟಿಕೊಳ್ಳುತ್ತವೆ.

ಛಾಯಾಂಕಣ

[ಬದಲಾಯಿಸಿ]
Amoeba proteus in motion
Amoeba engulfing a diatom

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]


ಉಲ್ಲೇಖಗಳು

[ಬದಲಾಯಿಸಿ]
  1. Singleton, Paul (2006). Dictionary of Microbiology and Molecular Biology, 3rd Edition, revised. Chichester, UK: John Wiley & Sons. pp. 32. ISBN 978-0-470-03545-0.
  2. Alberts Eds.; et al. (2007). Molecular Biology of the Cell 5th Edition. New York: Garland Science. p. 663. ISBN 9780815341055.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮೀಬಾ&oldid=1202711" ಇಂದ ಪಡೆಯಲ್ಪಟ್ಟಿದೆ