ವಿಷಯಕ್ಕೆ ಹೋಗು

ಮರುಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರುಗ
ಹೂ ಬಿಟ್ಟ ಮರುಗ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
ಓ. ವಲ್ಗೇರ್
Binomial name
ಒರಿಗಾನಮ್ ವಲ್ಗೇರ್
ಹೂಮೊಗ್ಗುಗಳೊಂದಿಗೆ ಬೆಳೆಯುತ್ತಿರುವ ತುದಿ

ಮರುಗ ಲ್ಯಾಮಿಯೇಸಿ ಕುಟುಂಬಕ್ಕ ಸೇರಿದ ಒಂದು ಸುವಾಸನಾಯುಕ್ತ ಔಷಧೀಯ ಸಸ್ಯ. ಇದರ ವೈಜ್ಞಾನಿಕ ಹೆಸರು ಒರಿಗಾನಮ್ ವಲ್ಗೇರ್ ಎಂದು. ಪುದೀನ ಹಾಗೂ ದವನಗಳ ಹತ್ತಿರದ ಸಂಬಂಧಿ. ಇದರಿಂದ ಪಡೆಯಲ್ಪಡುವ ತೈಲ ಹಲವಾರು ರೋಗಗಳಿಗೆ ಔಷಧವಾಗಿ ಉಪಯೋಗಿಸಲ್ಪಡುತ್ತದೆ.

ವ್ಯಾಪ್ತಿ

[ಬದಲಾಯಿಸಿ]

ಇದು ಹಿಮಾಲಯದ ಸಮಶೀತೋಷ್ಣ ಪ್ರದೇಶಗಳಲ್ಲಿ, ಕಾಶ್ಮೀರದಿಂದ ಸಿಕ್ಕಿಮ್‌ವರೆಗೆ 1.500-3.600 ಮೀ ಎತ್ತರದ ಪರ್ವತಗಳಲ್ಲಿ ಬೆಳೆಯುತ್ತದೆ. ಯೂರೋಪ್, ಉತ್ತರ ಆಫ್ರಿಕ, ಉತ್ತರ ಮತ್ತು ಪಶ್ಚಿಮ ಏಷ್ಯಗಳಲ್ಲೂ ಉಂಟು. ಭಾರತದಲ್ಲಿ ಇದನ್ನು ಹೂತೋಟಗಳಲ್ಲಿ ಬೆಳೆಸುವುದಿದೆ. ಸಿಮ್ಲಾ ಮತ್ತು ಕಾಶ್ಮೀರಗಳಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ.

ಸಸ್ಯ ವಿವರಣೆ

[ಬದಲಾಯಿಸಿ]

ಇದು ಬಹುವಾರ್ಷಿಕ ಮೂಲಿಕೆ ಸಸ್ಯ. ಇದರ ಸಾಮಾನ್ಯ ಎತ್ತರ 20-90 ಸೆಂಮೀ. ಎಲೆಗಳು ಸರಳ; 1.5 ಸೆಂಮೀ ಉದ್ದ, 0.6 ಸೆಂಮೀ ಅಗಲ ಇದ್ದು ಅಂಡಾಕಾರದವಾಗಿವೆ. ಎಲೆಯಲಗಿನ ಮೇಲೆಲ್ಲ ನವುರಾದ ರೋಮಗಳುಂಟು.[] ಇಡೀ ಗಿಡ, ಪ್ರಧಾನವಾಗಿ ಎಲೆಗಳು, ಸುವಾಸನಾಯುಕ್ತ. ಹೂಗಳು ಊದಾ ಇಲ್ಲವೆ ನಸುಗೆಂಪು ಬಣ್ಣದವು; ಸೀಮಾಕ್ಷಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ.

ಬೀಜಗಳಿಂದ, ಕಾಂಡ ಮತ್ತು ಬೇರು ತುಂಡುಗಳಿಂದ ವೃದ್ಧಿ. ಗಿಡ ನೆಡುವ ಕಾಲ ಮೈದಾನಗಳಲ್ಲಿ ಅಕ್ಟೋಬರ್, ಬೆಟ್ಟ ಸೀಮೆಗಳಲ್ಲಿ ಮಾರ್ಚಿ-ಏಪ್ರಿಲ್.

ಉಪಯೋಗಗಳು

[ಬದಲಾಯಿಸಿ]

ಈ ಸಸ್ಯದಿಂದ ಪಡೆಯಲಾಗುವ ಪರಿಮಳಯುಕ್ತ ಚಂಚಲತೈಲ ಉದರಶೂಲೆ, ಅತಿಸಾರ ಮತ್ತು ಉನ್ಮಾದಗಳಲ್ಲಿ ಉತ್ತೇಜಕವಾಗಿ ಉಪಯುಕ್ತವೆನಿಸಿದೆ. ಸಂಧಿವಾತ ಸಂದರ್ಭಗಳಲ್ಲಿ ಇದನ್ನು ನೋವಿರುವ ಗಂಟುಗಳಿಗೆ ಹಚ್ಚುವುದುಂಟು. ಹಲ್ಲುನೋವನ್ನು ಇದು ಶಮನ ಮಾಡುವುದೆನ್ನಲಾಗಿದೆ. ಈ ತೈಲವನ್ನು ಕಿವಿನೋವಿದ್ದಾಗ ಹಾಕಿದರೆ ನೋವು ವಾಸಿಯಾಗುತ್ತದೆ. ಕೂದಲ ಬೆಳೆವಣಿಗೆಗೆ ಉತ್ತೇಜನಕಾರಿ. ಹಿತವಾದ ಪರಿಮಳದಿಂದಾಗಿ ಇದರ ಎಲೆಗಳನ್ನು ಮಲ್ಲಿಗೆ ಮುಂತಾದ ಹೂಗಳ ಮಾಲೆಯಲ್ಲಿ ಹೂಗಳ ಮಧ್ಯೆ ಇಟ್ಟು ಕಟ್ಟುವುದುಂಟು. ಕೇಶಾಲಂಕಾರಕ್ಕಾಗಿ ಕೂಡ ಉಪಯೋಗಿಸುತ್ತಾರೆ. ದೇವತಾರ್ಚನೆಗೂ ಇದು ಪವಿತ್ರ ಎಂಬ ಭಾವನೆ ಹಿಂದೂಗಳಲ್ಲಿದೆ. ಮರುಗದ ಎಲೆಗಳು ಖಾದ್ಯ ಯೋಗ್ಯ.[] ಇವುಗಳ ಚಟ್ನಿ ಬಲು ರುಚಿಕರ ಎಂದು ಹೆಸರಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. BP Pimple, AN Patel, PV Kadam, MJ Patil. Microscopic evaluation and physicochemical analysis of Origanum majorana Linn leaves Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.. Asian Pacific Journal of Tropical Disease 2, S897-S903.
  2. "Marjoram, Herb". Food Reference. Retrieved 28 February 2017.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮರುಗ&oldid=1169806" ಇಂದ ಪಡೆಯಲ್ಪಟ್ಟಿದೆ