ದವನ

ವಿಕಿಪೀಡಿಯ ಇಂದ
Jump to navigation Jump to search
ಒಣಗಿಸಿದ ದವನ

ದವನ ಆಸ್ಟರೇಸೀ (ಕಂಪಾಸಿûಟೀ) ಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಮೂಲಿಕೆ. ಆರ್ಟಿಮಿಸಿಯ ಫ್ಯಾಲೆನ್ಸ್ ಇದರ ವೈಜ್ಞಾನಿಕ ಹೆಸರು. ದವನಕ್ಕೆ ಸೊಗಸಾದ ಪರಿಮಳ ಉಂಟು. ಇದನ್ನು ಮಧ್ಯ ಮತ್ತು ದಕ್ಷಿಣ ಭಾರತಗಳಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ದವನ 1/2' - 1' ಎತ್ತರಕ್ಕೆ ಬೆಳೆಯುವುದು. ಇದನ್ನು ಸಾಮಾನ್ಯವಾಗಿ ಹೊಲಗಳಲ್ಲಿ ಇತರ ಹೂ ಗಿಡಗಳ ಬೆಲೆಯಂತೆಯೇ ಬೆಳೆಸುತ್ತಾರೆ. ಇದರ ಕಾಂಡ ಒರಟು. ಮೇಲೆಲ್ಲ ನುಣುಪಾದ ತುಪ್ಪಳ ಉಂಟು. ಎಲೆಗಳು ಸಂಯುಕ್ತ ಮಾದರಿಯವು. ಕಿರುಎಲೆಗಳು ಛಿದ್ರಛಿದ್ರವಾಗಿವೆ. ಸಸ್ಯ ಅನೇಕ ಕವಲುಗಳಿಂದ ಕೂಡಿದ್ದು ಒಂದೊಂದರ ತುದಿಯಲ್ಲಿ ಹೂಗೊಂಚಲು ಮೂಡುವುವು. ಹೂಗೊಂಚಲು ಚಂಡುಮಂಜರಿ ಬಗೆಯದು. ಇದು ಗುಂಡಗೆ ಸುಮಾರು 1/3" ಅಗಲ ಇದೆ. ಅನೇಕ ಹೂಗೊಂಚಲುಗಳು ಪ್ಯಾನಿಕಲ್ ಮಾದರಿಯ ರೆಂಬೆಗಳ ರೂಪದಲ್ಲಿ ಸಮಾವೇಶಗೊಂಡಿವೆ. ಈ ಕುಟುಂಬದ ಇತರ ಗಿಡಗಳಂತೆ ದವನದ ಹೂ ಗೊಂಚಲಿನಲ್ಲೂ ರೇಫ್ಲಾರೆಟ್ ಮತ್ತು ಡಿಸ್ಕ್ ಫ್ಲಾರೆಟ್ ಎಂಬ ಎರಡು ಬಗೆಯ ಕಿರಿಹೂಗಳು ಉಂಟು. ರೇಫ್ಲಾರೆಟ್ಟುಗಳು ಹೆಣ್ಣು ಹೂಗಳಾಗಿರಬಹುದು. ಇಲ್ಲವೆ ಬಂಜೆ ಹೂಗಳಾಗಿರಬಹುದು ಡಿಸ್ಕ್ ಫ್ಲಾರೆಟ್ಟುಗಳು ದ್ವಿಲಿಂಗಿಗಳು. ಫಲಗಳು ಎಕೀನ್ ಮಾದರಿಯವು.

ದವನದ ರೆಂಬೆ ಮತ್ತು ಹೂಗಳನ್ನು ಹೆಚ್ಚಾಗಿ ಪೂಜೆ ಪುನಸ್ಕಾರಗಳಲ್ಲಿ ಬಳಸಲಾಗುವುದಲ್ಲದೆ ಇತರ ಹೂಗಳ ಜೊತೆ ಸೇರಿಸಿ ತುರಾಯಿಗಳಲ್ಲಿ ಬಳಸಿ ಅಲಂಕರಣಕ್ಕಾಗಿ ಉಪಯೋಗಿಸುವರು. ಇದರ ಸುಗಂಧ ತೈಲದ ಸೇಕಡ ಇಳುವರಿ ಬಹಳ ಕಡಿಮೆ (0.20% ರಿಂದ 0.58%). ತೈಲಕ್ಕೆ ಸುಗಂಧ ದ್ರವ್ಯಗಳ ಉದ್ಯಮದಲ್ಲಿ ಹೆಚ್ಚಾಗಿ ಬೇಡಿಕೆ ಇದೆ. ಇದನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಬಳಸುವರು. ಭಾರತದಿಂದ ಅಮೆರಿಕ ಮತ್ತು ಇತರ ಪಾಶ್ಚಾತ್ಯ ದೇಶಗಳಿಗೆ ರಫ್ತಾಗುತ್ತಿದೆ. ಈ ಗಿಡಕ್ಕೆ ಕೆಲವು ಔಷಧೀಯ ಗುಣಗಳೂ ಉಂಟು. ಇದರ ಕಷಾಯವನ್ನು ಹೊಟ್ಟೆ ಬೇನೆಯ (ಅಜೀರ್ಣವ್ಯಾಧಿ) ಚಿಕಿತ್ಸೆಗೆ, ಜ್ವರ ಇಳಿಸುವಿಕೆಗೆ ಹಾಗೂ ಜಂತುನಾಶಕ ವಸ್ತುವಾಗಿ ಬಳಸುತ್ತಾರೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದವನ&oldid=904267" ಇಂದ ಪಡೆಯಲ್ಪಟ್ಟಿದೆ