ಭಾರತೀಯ ಹೋಮ್ ರೂಲ್ ಚಳವಳಿ
೧೯೧೬-೧೯೧೮ರ ನಡುವೆ ಸುಮಾರು ಎರಡು ವರ್ಷಗಳ ಕಾಲ ನಡೆದ ನಡೆದ ಇಂಡಿಯನ್ ಹೋಮ್ ರೂಲ್ ಚಳವಳಿಯು, ಐರಿಶ್ ಸ್ವರಾಜ್ಯ ಚಳುವಳಿ ಮತ್ತು ಇತರ ಸ್ವರಾಜ್ಯ ಚಳವಳಿಗಳ ಮಾದರಿಯಲ್ಲೇ ಭಾರತದಲ್ಲಿ ನಡೆದ ಒಂದು ದೊಡ್ಡ ಆಂದೋಲನ.
ಅನ್ನಿ ಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕ್ ಅವರ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಆರಂಭಕ್ಕೆ ವೇದಿಕೆಯಾಗಿ ಹೊರಹೊಮ್ಮಿದ ಈ ಆಂದೋಲನ, ಇಂಗ್ಲಿಷ್ ಮಾತನಾಡುವ ಮೇಲ್ವರ್ಗದ ವಿದ್ಯಾವಂತ ಭಾರತೀಯರನ್ನೂ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿತು.
೧೯೨೦ರಲ್ಲಿ ಆಲ್ ಇಂಡಿಯಾ ಹೋಮ್ ರೂಲ್ ಲೀಗ್ ತನ್ನ ಹೆಸರನ್ನು ಸ್ವರಾಜ್ಯ ಸಭಾ ಎಂದು ಬದಲಾಯಿಸಿಕೊಂಡಿತು.
ಭಾರತೀಯ ಹೋಮ್ ರೂಲ್ ಧ್ವಜ
[ಬದಲಾಯಿಸಿ]ಐದು ಕೆಂಪು ಮತ್ತು ನಾಲ್ಕು ಹಸಿರು ಅಡ್ಡ ಪಟ್ಟೆಗಳಿರುವ ಈ ಧ್ವಜದ ಮೇಲಿನ ಎಡ ಚತುರ್ಭುಜದಲ್ಲಿ ಯೂನಿಯನ್ ಜಾಕ್ ಇತ್ತು. ಇದು ಹೋಮ್ ರೂಲ್ ಚಳವಳಿಯ ಮೂಲಕವಾಗಿ ಸಾಧಿಸಲು ಪ್ರಯತ್ನಿಸಿದ ಪ್ರಭುತ್ವದ ಸ್ಥಿತಿಯನ್ನು ಸೂಚಿಸುತ್ತದೆ. ಬಲ ಮೇಲ್ಭಾಗದಲ್ಲಿ ನಕ್ಷತ್ರ ಮತ್ತು ಅರ್ಧಚಂದ್ರಾಕಾರ ರಚನೆ ಇದೆ. ಎಡಭಾಗದಲ್ಲಿ ಹಿಂದೂಗಳು ಪವಿತ್ರವೆಂದು ಭಾವಿಸುವ ಸಪ್ತರ್ಷಿ ಮಂಡಲದಾಕಾರದಲ್ಲಿ ಏಳು ನಕ್ಷತ್ರಗಳನ್ನೂ ಇಲ್ಲಿ ಅಳವಡಿಸಲಾಗಿದೆ.
ಹೋಮ್ ರೂಲ್ ಚಳವಳಿಯ ಹಿನ್ನೆಲೆ
[ಬದಲಾಯಿಸಿ]೧೯೧೪ರ ಜುಲೈನಲ್ಲಿ ಆರಂಭವಾದ ಮೊದಲನೇ ವಿಶ್ವಯುದ್ಧದ ಹಿನ್ನೆಲೆಯಲ್ಲಿ ಭಾರತೀಯ ಹೋಮ್ ರೂಲ್ ಚಳವಳಿ ಆರಂಭವಾಯಿತು. ೧೯೦೯ರಲ್ಲಿ ಬ್ರಿಟಿಷ್ ಸರ್ಕಾರ ಜಾರಿಗೆ ತಂದ (The ಭಾರತೀಯ ಪರಿಷತ್ ಅಧಿನಿಯಮ ೧೯೦೯) ಕಾಯಿದೆಯು, ಭಾರತದ ರಾಷ್ಟ್ರೀಯ ನಾಯಕರುಗಳು ಮಾಡಿದ್ದ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಯಿತು. ಹೀಗಿದ್ದರೂ ಕೂಡ, ತಿಲಕರಂಥ ನಾಯಕರನ್ನು ಅಂದಿನ ಬರ್ಮಾದೇಶದ ಮಂಡಾಲೆಯಲ್ಲಿ ಬಂಧನದಲ್ಲಿರಿಸಿದ್ದು ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಒಡಕಿನ ಕಾರಣಗಳಿಂದಾಗಿ ಬ್ರಿಟಿಷ್ ಸರ್ಕಾರದ ಈ ಕ್ರಮಕ್ಕೆ ಅಷ್ಟೊಂದು ತೀವ್ರತರವಾದ ವಿರೋಧವೇನೂ ವ್ಯಕ್ತವಾಗಲಿಲ್ಲ.
ಭಾರತದಲ್ಲಿನ ಬ್ರಿಟಿಷರ ಆಳ್ವಿಕೆ ಸಂಪೂರ್ಣವಾಗಿ ಸ್ವಾರ್ಥಲಾಲಸೆಯಿಂದ ಕೂಡಿತ್ತು. ಅವರು ತಮ್ಮ ಲಾಭಕ್ಕಾಗಿ ಭಾರತ ದೇಶದ ಎಲ್ಲ ವರ್ಗದ ಜನಸಮುದಾಯವನ್ನೂ ಶೋಷಣೆ ಮಾಡಿದರು.
೧೯೧೫ರ ಹೊತ್ತಿಗೆ, ಅನೇಕ ಹೊಸ ವಿಚಾರಗಳು ಭಾರತದ ರಾಷ್ಟ್ರವಾದಿ ಚಳುವಳಿಯನ್ನು ಮತ್ತೊಂದು ಹೊಸ ಹಂತಕ್ಕೆ ಕೊಂಡೊಯ್ಯುವ ವೇದಿಕೆಯನ್ನು ಸಿದ್ಧಪಡಿಸಿದವು. ಅನ್ನಿ ಬೆಸೆಂಟ್ ಅವರ ಹೆಚ್ಚಿದ ಘನತೆ, ಬರ್ಮಾದಲ್ಲಿನ ಸೆರೆವಾಸದಿಂದ ಬಿಡುಗಡೆಯಾಗಿ ಭಾರತಕ್ಕೆ ಹಿಂದಿರುಗಿದ್ದ ತಿಲಕರು ಹಾಗೂ ಕಾಂಗ್ರೆಸ್‌ನಲ್ಲಿನ ಒಡಕನ್ನು ನಿವಾರಿಸಿಕೊಳ್ಳುವ ಪ್ರಯತ್ನಗಳು, ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಮತ್ತೊಮ್ಮೆ ಗರಿಗೆದರುವಂತೆ ರಂಗೇರುವಂತೆ ಮಾಡಿದವು. ಇದೇ ವೇಳೆ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ದಂಗೆಯೆಬ್ಬಿಸಲು ಯೋಜಿಸಿಲಾಗಿದ್ದ ಗದರ್ ಪಿತೂರಿಯನ್ನು ತಿಳಿದು ಅದನ್ನು ಹತ್ತಿಕ್ಕಿದ್ದ ಬ್ರಿಟಿಷ್ ಆಡಳಿತದ ವಿರುದ್ಧ ಭಾರೀ ಆಕ್ರೋಶದ ವಾತಾವರಣ ಸೃಷ್ಟಿಯಾಗಿತ್ತು.
೧೯೧೫ರಲ್ಲಿ ಜಾರಿಗೆ ಬಂದ Defence of India Act ಕಾಯ್ದೆಯೂ ಸೇರಿದಂತೆ, ಬ್ರಿಟಿಷರು ಅನುಸರಿಸುತ್ತಿದ್ದ ದಮನಕಾರಿ ಮತ್ತು ನಿಗ್ರಹಕಾರಿ ನೀತಿಗಳೂ ಕೂಡ ಹೋಮ್ ರೂಲ್ ಚಳವಳಿಯ ಆರಂಭಕ್ಕೆ ಕಾರಣವಾದವು.
ಮೊದಲನೆಯ ಮಹಾಯುದ್ಧದ ಹಿನ್ನೆಯಲ್ಲಿನ ಬೆಳವಣಿಗೆಗಳು
[ಬದಲಾಯಿಸಿ]ಮೊದಲನೇ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ಪಾಲ್ಗೊಳ್ಳುವಿಕೆ ಮತ್ತು ಜರ್ಮನಿ, ಆಸ್ಟ್ರಿಯ-ಹಂಗೆರಿ ಹಾಗೂ ಆಟೋಮನ್ ಸಾಮ್ರಾಜ್ಯದ ವಿರುದ್ಧದ ಯುದ್ಧದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ಹೋರಾಡುವ ವಿಚಾರದಲ್ಲಿ ಬಹುತೇಕ ಭಾರತೀಯರು ಮತ್ತು ದೇಶದ ರಾಜಕೀಯ ಮುಖಂಡರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದರು. ಜರ್ಮನಿ ಹಾಗೂ ಆಸ್ಟ್ರಿಯ-ಹಂಗೆರಿ ದೇಶಗಳ ಜೊತೆಗೆ ಇಸ್ಲಾಮ್ ಧರ್ಮ ಅನುಸರಿಸುವ ಆಟೋಮನ್ ಸಾಮ್ರಾಜ್ಯದ ಸುಲ್ತಾನರು ಪಾಲ್ಗೊಂಡಿದ್ದು ಭಾರತದ ಮುಸ್ಲಿಮರನ್ನು ಕೆರಳಿಸಿತ್ತು, ಏಕೆಂದರೆ ಅವರು ತುರ್ಕಿಯ ಸುಲ್ತಾನರನ್ನು ಪ್ರವಾದಿ ಮಹಮದ್ ಅವರ ವಾರಸುದಾರರೆಂದೇ ಭಾವಿಸಿದ್ದರು.
ಅನೇಕ ಭಾರತೀಯ ಕ್ರಾಂತಿಕಾರಿಗಳು ಮೊದಲ ಮಹಾಯುದ್ಧವನ್ನು ವಿರೋಧಿಸಿದರು, ಆದರೆ ಸೌಮ್ಯವಾದಿಗಳು ಮತ್ತು ಉದಾರವಾದಿಗಳು ಯುದ್ಧವನ್ನು ಬೆಂಬಲಿಸಿದರು. ಭಾರತದ ರಾಜಕೀಯ ರಂಗದಲ್ಲಿ ಒಡಕುಂಟುಮಾಡಿದ ಈ ಬೆಳವಣಿಗೆ, ಸ್ವಯಂ-ಆಡಳಿತಕ್ಕಾಗಿನ ಭಾರತೀಯರ ಕೂಗು ಕೇಳಿಸದಂತೆ ಮಾಡಿತು. ಹೀಗಿದ್ದರೂ ಕೂಡ “ಇಂಗ್ಲೆಂಡಿನ ಅವಶ್ಯಕತೆ ಭಾರತದ ಅವಕಾಶ” ಎಂದು ಘೋಷಿಸಿದ ಅನ್ನಿ ಬೆಸೆಂಟ್ ಅವರು, ತಾವು ಸಂಪಾದಕರಾಗಿದ್ದ ನ್ಯೂ ಇಂಡಿಯ ನ್ಯೂಸ್ ಪೇಪರ್ (New India newspaper) ಮೂಲಕ ವಸಾಹತುಶಾಹಿ ಬ್ರಿಟಿಷ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಭಾರತದ ಸ್ವರಾಜ್ಯಕ್ಕಾಗಿ ಸ್ಪಷ್ಟ ಮತ್ತು ಖಚಿತವಾದ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಆದರೆ ಐರ್ಲೆಂಡ್ ಗೆ ಸಂಬಂಧಿಸಿದ ವಿಚಾರದಂತೆಯೇ, ಮಹಾ ಯುದ್ಧ ನಡೆಯುತ್ತಿರುವ ಸನ್ನಿವೇಶದಲ್ಲಿ ಯಾವುದೇ ಬದಲಾವಣೆಗಳ ಬಗ್ಗೆ ಚರ್ಚಿಸಲು ಬ್ರಿಟಿಷ್ ಸರ್ಕಾರ ನಿರಾಕರಿಸಿತು. ಇದು ಸ್ವರಾಜ್ಯ ಚಳುವಳಿಯ ಆರಂಭಕ್ಕೆ ವೇದಿಕೆ ಸೃಷ್ಟಿಮಾಡಿತು.
ಹೋಮ್ ರೂಲ್ ಚಳವಳಿಗೆ ಅಡಿಪಾಯ
[ಬದಲಾಯಿಸಿ]೧೯೧೬ ಮತ್ತು ೧೯೧೮ರ ನಡುವೆ, ಮೊದಲ ಮಹಾಯುದ್ಧ ನಡೆಯುತ್ತಿದ್ದ ಸಮಯದಲ್ಲಿ, ಪ್ರಮುಖ ಭಾರತೀಯ ಮುಖಂಡರಾದ ಜೋಸೆಫ್ ಬ್ಯಾಪ್ಟಿಸ್ಟ, ಮುಹಮ್ಮದ್ ಅಲಿ ಜಿನ್ನಾ, ಬಾಲ ಗಂಗಾಧರ ತಿಲಕ್, ಜಿಎಸ್ ಖಾಪರ್ಡೆ, ಸರ್ ಎಸ್. ಸುಬ್ರಹ್ಮಣ್ಯ ಅಯ್ಯರ್, ಸತೇಂದ್ರ ನಾಥ್ ಬೋಸ್ ಮತ್ತು ಆ ವೇಳೆಗೆ ಥಿಯೊಸಾಫಿಕಲ್ ಸೊಸೈಟಿಯಲ್ಲೂ ಮಹತ್ವದ ಸ್ಥಾನದಲ್ಲಿ ಗುರುತಿಸಿಕೊಂಡಿಸಿದ್ದ ಅನ್ನಿ ಬೆಸೆಂಟ್ ಅವರೆಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದರು. ಭಾರತದಾದ್ಯಂತ ಚಳವಳಿಯಲ್ಲಿ ತೊಡಗಿದ್ದ ಎಲ್ಲ ಒಕ್ಕೂಟಗಳನ್ನು ಒಗ್ಗೂಡಿಸಿ ಒಂದೇ ರಾಷ್ಟ್ರೀಯ ಒಕ್ಕೂಟವನ್ನು ಆಯೋಜಿಸಿ, ಅದರ ಮೂಲಕ ನಿರ್ದಿಷ್ಟವಾಗಿ ಹೋಮ್ ರೂಲ್ ಅಥವ ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲೇ ಸ್ವಾಯತ್ತ ಭಾರತ ಸರ್ಕಾರ ರಚಿಸಿಕೊಳ್ಳಲು ಹಕ್ಕೊತ್ತಾಯ ಮಂಡಿಸಲು ನಿರ್ಧರಿಸಿದರು. ಬಾಲಗಂಗಾಧರ ತಿಲಕರು ೧೯೧೬ರ ಏಪ್ರಿಲ್ ನಲ್ಲಿ ಬೆಳಗಾವಿಯಲ್ಲಿ ನಡೆದ ಬಾಂಬೆ ಪ್ರಾಂತೀಯ ಕಾಂಗ್ರೆಸ್ ಸಮ್ಮೇಳನದಲ್ಲಿ ಮೊದಲ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು. ಆ ನಂತರ ಸೆಪ್ಟೆಂಬರ್ ೧೯೧೬ರಲ್ಲಿ ಅನ್ನಿ ಬೆಸೆಂಟ್ ಅವರು, ಮದರಾಸಿನ ಅಡ್ಯಾರ್ ನಲ್ಲಿ ಎರಡನೇ ಲೀಗ್ ಸ್ಥಾಪಿಸಿದರು. ತಿಲಕರು ಆರಂಭಿಸಿದ ಒಕ್ಕೂಟ ಮಹಾರಾಷ್ಟ್ರ (ಬಾಂಬೆ ನಗರವನ್ನು ಹೊರತುಪಡಿಸಿದಂತೆ), ಕರ್ನಾಟಕ, ಕೇಂದ್ರ ಪ್ರಾಂತ್ಯಗಳು ಮತ್ತು ಬೇರಾರ್ (ಹೈದರಾಬಾದಿನ ನಿಜಾಮರ ಆಡಳಿತದಲ್ಲಿದ್ದ ಪ್ರದೇಶ)ಗಳಲ್ಲಿ ಕಾರ್ಯೋನ್ಮುಖವಾದರೆ, ಅನ್ನಿ ಬೆಸೆಂಟ್ ಅವರ ನೇತೃತ್ವದ ಒಕ್ಕೂಟ ಭಾರತದ ಉಳಿದ ಭಾಗಗಳಲ್ಲಿ ಚಟುವಟಿಕೆ ಆರಂಭಿಸಿತು. ಆದರೆ, ಈ ಚಳವಳಿಯಲ್ಲಿ ಪಾಲ್ಗೊಳ್ಳಲು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಿಗೆ ಅವಕಾಶ ನೀಡಿರಲಿಲ್ಲ.
ಆ ಹೊತ್ತಿನಲ್ಲಿ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದ ಈ ಬೆಳವಣಿಗೆಯು, ೧೯೧೬ರ ಲಕ್ನೋ ಒಪ್ಪಂದದ ಬಳಿಕ ಒಟ್ಟುಗೂಡಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅಖಿಲ ಭಾರತ ಮುಸ್ಲಿಂ ಲೀಗ್‌ನ ಅನೇಕ ಸದಸ್ಯರನ್ನು ತನ್ನತ್ತ ಸೆಳೆಯಿತು. ಹೋಮ್ ರೂಲ್ ಚಳವಳಿಯ ನಾಯಕರು ಮೊನಚು ಮಾತುಗಳಿಂದ ಕೂಡಿದ ಭಾಷಣಗಳನ್ನು ಮಾಡಿ ಜನರನ್ನು ಹುರಿದುಂಬಿಸಿದರು. ಸ್ವ ಆಡಳಿತಕ್ಕಾಗಿ ಆಗ್ರಹಿಸಿ ಲಕ್ಷಾಂತರ ಭಾರತೀಯರು ಸಹಿ ಮಾಡಿದ ಮನವಿ ಪತ್ರಗಳನ್ನು ಬ್ರಿಟಿಷ್ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ಸೌಮ್ಯವಾದಿ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳನ್ನು ಜೊತೆಗೂಡಿಸಿದ್ದು ಹಾಗೂ ಮುಸ್ಲಿಂ ಲೀಗ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವೆ ಏಕಮತ ಸಾಧಿಸಿದ್ದು ಅನ್ನಿ ಬೆಸೆಂಟ್ ಅವರು ಮಾಡಿದ ಅಸಾಧಾರಣ ಸಾಧನೆಯಾಗಿತ್ತು.
ಈ ಚಳವಳಿ ತೀವ್ರವಾಗುತ್ತಿದ್ದಂತೆ ೧೯೧೭ರಲ್ಲಿ ಬ್ರಿಟಿಷ್ ಸರ್ಕಾರವು ಅನ್ನಿ ಬೆಸೆಂಟ್ ರನ್ನು ಬಂಧಿಸಿತು. ದೇಶವ್ಯಾಪಿ ಪ್ರತಿಭಟನೆಗೆ ಕಾರಣವಾದ ಈ ಕ್ರಮದಿಂದ, ಚಳವಳಿ ಭಾರತದ ಮೂಲೆ ಮೂಲೆಯ ಹಳ್ಳಿಗಳಿಗೂ ವ್ಯಾಪಿಸಿತು. ಮಹಮ್ಮದ್ ಅಲಿ ಜಿನ್ನಾರಂತಹ ಅನೇಕ ಸೌಮ್ಯವಾದಿ ನಾಯಕರು ಈ ಚಳುವಳಿಗೆ ಧುಮುಕಿದರು. ಲೀಗ್ ನ ಮುಖಂಡರು ಸಿಂಧ್, ಪಂಜಾಬ್, ಗುಜರಾತ್, ಸಂಯುಕ್ತ ಪ್ರಾಂತ್ಯಗಳು(ಈಗಿನ ಉತ್ತರ ಪ್ರದೇಶ, ಉತ್ತರಾಖಂಡ), ಕೇಂದ್ರ ಪ್ರಾಂತ್ಯಗಳು(ಮಧ್ಯಪ್ರದೇಶ, ಚತ್ತೀಸ್ ಘಡ, ಮಹಾರಾಷ್ಟ್ರ), ಬಿಹಾರ, ಒರಿಸ್ಸಾ ಮತ್ತು ಮದ್ರಾಸ್ ಪ್ರದೇಶಗಳಲ್ಲೂ ಜನ ಜಾಗೃತಿ ಮೂಡಿಸಿ ರಾಜಕೀಯ ಚಳವಳಿಗೆ ಇಂಬು ನೀಡಿದರು.
ಹೋಮ್ ರೂಲ್ ಚಳವಳಿಯ ಪರಿಣಾಮಗಳು ಮತ್ತು ಅನ್ನಿ ಬೆಸೆಂಟ್ ಅವರ ಬಂಧನದ ನಂತರದಲ್ಲಿ ಉಂಟಾದ ಪರಿಸ್ಥಿತಿಯಿಂದ ಬ್ರಿಟಿಷ್ ಸರ್ಕಾರ ಒತ್ತಡಕ್ಕೊಳಗಾಯಿತು. ಭಾರತದ ಉಸ್ತುವಾರಿ ವಹಿಸಿದ್ದ ಬ್ರಿಟಿಷ್ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಎಡ್ವಿನ್ ಸ್ಯಾಮುಯೆಲ್ ಮಾಂಟೆಗು(Edwin Samuel Montagu [೧]) ಅವರು, ೧೯೧೭ರ ಆಗಸ್ಟ್ ೨೦ರಂದು ಬ್ರಿಟನ್ ಸದನದಲ್ಲಿ(ಹೌಸ್ ಆಫ್ ಕಾಮನ್ಸ್), “ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿಯೇ, ಭಾರತದಲ್ಲಿನ ಆಡಳಿತದ ಎಲ್ಲ ವಿಭಾಗಗಳಲ್ಲಿ ಭಾರತೀಯರ ಒಳಗೊಳ್ಳುವಿಕೆ ಹಾಗೂ ಜವಾಬ್ದಾರಿಯುತ ಸರ್ಕಾರಗಳನ್ನು ಜಾರಿಗೆ ತರುವ ದೃಷ್ಟಿಯಿಂದ ಸ್ವ ಆಡಳಿತ ಸಂಸ್ಥೆಗಳನ್ನು ಹಂತಹಂತವಾಗಿ ರೂಪಿಸುವುದು ಬ್ರಿಟಿಷ್ ಸರ್ಕಾರದ ನೀತಿಯಾಗಿದೆ” ಎಂದು ಹೇಳಿಕೆ ನೀಡಿದರು.
ಹೋಮ್ ರೂಲ್ ಚಳವಳಿ ತೀವ್ರವಾಗಿದ್ದ ಈ ಸಮಯದಲ್ಲಿ ನೆಲ್ಲೂರು, ಕರ್ನೂಲ್, ಬಳ್ಳಾರಿ, ಕಡಪ, ಕಾಕಿನಾಡ, ರಾಜಮಂಡ್ರಿ ಮತ್ತು ವಿಶಾಖಪಟ್ಟಣಗಳಲ್ಲಿ ಸಭೆಗಳು ನಡೆದವು. ಕರ್ನೂಲ್‌ನಲ್ಲಿನ ಸಭೆಯಲ್ಲಿ ಆ ಭಾಗದ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ, ಪಾಣ್ಯಮ್ ನ ರಾಜ ಸರ್ ಪಿವಿ ಮಾಧವ ರಾವ್ ಅವರು ಹೋಮ್ ರೂಲ್ ಲೀಗ್ ಅನ್ನು ಬೆಂಬಲಿಸಿ ಮಾತನಾಡಿದರು. ಬ್ರಿಟಿಷ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಅಧಿಕಾರಶಾಹಿ ವರ್ಗಕ್ಕೆ ಸೇರಿದ ಹೆಚ್ಚಿನವರು, ದೇಶದ ಜನರ ಬೇಕುಬೇಡಗಳನ್ನು ಮತ್ತು ಆ ಕಾಲಕ್ಕೆ ತಕ್ಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಗುಡುಗಿದರು. ಆ ಬಳಿಕ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸಭೆಗಳು ನಡೆದವು. ಅವುಗಳ ಮುಕ್ತಾಯದ ನಂತರ ಅನೇಕ ಪ್ರಮುಖ ಮುಖಂಡರು ಅನ್ನಿ ಬೆಸೆಂಟ್ ನೇತೃತ್ವದ ಲೀಗ್‌ಗೆ ಬೆಂಬಲ ವ್ಯಕ್ತಪಡಿಸಿದರು.
ಭಾರತದಲ್ಲಿ ಹೋಮ್ ರೂಲ್ ಚಳವಳಿಯ ಮಹತ್ವ ಮತ್ತು ಪ್ರಭಾವ
[ಬದಲಾಯಿಸಿ]ಹೋಮ್ ರೂಲ್ ಚಳವಳಿಯು ಭಾರತದಲ್ಲಿನ ರಾಷ್ಟ್ರೀಯತಾವಾದಿ ಚಟುವಟಿಕೆಗಳನ್ನು ಮತ್ತೊಮ್ಮೆ ಸಕ್ರಿಯಗೊಳಿಸಿತು. ಇದು ಕ್ರಾಂತಿಕಾರಿ ಮುಖಂಡರು ಮತ್ತೊಮ್ಮೆ ಕಾಂಗ್ರೆಸ್ ಪ್ರವೇಶಿಸಲು ದಾರಿ ಮಾಡಿಕೊಟ್ಟಿತು. ಒಟ್ಟಾರೆ, ಈ ಚಳುವಳಿಯು ಭಾರತದಲ್ಲಿನ ಬ್ರಿಟಿಷ್ ಆಡಳಿತದ ಮೇಲೆ ಭಾರೀ ಒತ್ತಡ ಸೃಷ್ಟಿಸುವಲ್ಲಿ ಸಫಲವಾಯಿತು. ಸ್ವಾಯತ್ತ ಆಡಳಿತಕ್ಕಾಗಿ ಆಗ್ರಹಿಸಿದ ಈ ಆಂದೋಲನವು, ನಂತರದ ದಿನಗಳಲ್ಲಿ ರಾಷ್ಟ್ರೀಯತೆಯ ಭಾವನೆಗಳು ಹೆಚ್ಚು ಬಲಗೊಳ್ಳಲು ಕಾರಣವಾಯಿತು. ಈ ಎಲ್ಲ ಹೋರಾಟಗಳ ಸರಣಿಗಳು, ಅಂತಿಮವಾಗಿ ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಲು ಕಾರಣವಾದವು.
ಹೋಮ್ ರೂಲ್ ಚಳವಳಿಯ ಅವನತಿ
[ಬದಲಾಯಿಸಿ]ಆದರೆ, ಸ್ವಾಯತ್ತ ಸರ್ಕಾರದ ಬಗ್ಗೆ ಬ್ರಿಟಿಷರಿಂದ ಆಶ್ವಾಸನೆಗಳು ದೊರೆತ ಕೆಲ ದಿನಗಳ ಬಳಿಕ ಬಾಲಗಂಗಾಧರ ತಿಲಕ್ ಅವರು, ವ್ಯಾಲೆಂಟೈನ್ ಚಿರೋಲ್ ವಿರುದ್ಧ ತಾವು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸುವ ಸಲುವಾಗಿ ಇಂಗ್ಲೆಂಡಿಗೆ ತೆರಳಿದರು. ಇತ್ತ ಅನ್ನಿ ಬೆಸೆಂಟ್ ಅವರು, ಸುಧಾರಣೆಗಳಿಗೆ ಸಂಬಂಧಿಸಿದಂತೆ ಬ್ರಿಟಿಷ್ ಸರ್ಕಾರ ನೀಡಿದ್ದ ಭರವಸೆಗಳಿಂದಲೇ ತೃಪ್ತಿಪಟ್ಟುಕೊಂಡು ಸುಮ್ಮನಾಗಿದ್ದರು. ಹೀಗಾಗಿ, ಹೋಮ್ ರೂಲ್ ಚಳವಳಿಯನ್ನು ಮುನ್ನಡೆಸಲು ನಾಯಕತ್ವವೇ ಇಲ್ಲದಂತಾಯಿತು.
ಇಂಥ ಸನ್ನಿವೇಶದಲ್ಲಿ ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ವೇದಿಕೆಯಲ್ಲಿ ಪ್ರಮುಖರಾಗಿ ಹೊರಹೊಮ್ಮಿದರು. ಗಾಂಧೀಜಿಯವರ ಅಹಿಂಸಾತ್ಮಕ ಮಾರ್ಗದ ಸತ್ಯಾಗ್ರಹ ಮತ್ತು ಸಾಮೂಹಿಕವಾದ ಶಾಂತಿಯುತ ಕಾನೂನು ಭಂಗ ಚಳವಳಿ ಮುನ್ನೆಲೆಗೆ ಬಂದ ಮೇಲೆ, ಹೋಮ್ ರೂಲ್ ಚಳವಳಿ ಸಂಪೂರ್ಣವಾಗಿ ಸ್ಥಗಿತವಾಯಿತು. ಗಾಂಧಿಯವರ ಹಿಂದೂ ಜೀವನಶೈಲಿ, ನಡವಳಿಕೆಗಳು ಮತ್ತು ಭಾರತೀಯ ಸಂಸ್ಕೃತಿ ಮತ್ತು ದೇಶದ ಜನ ಸಾಮಾನ್ಯರ ಬಗ್ಗೆ ಅವರು ಹೊಂದಿದ್ದ ಗೌರವ, ಗಾಂಧೀಜಿಯವರಿಗೆ ಅಪಾರ ಜನಪ್ರಿಯತೆ ಸಿಗುವಂತೆ ಮಾಡಿತು. ತೆರಿಗೆ ಹೇರಿಕೆ ವಿರೋಧಿಸಿ ಚಂಪಾರಣ್, ಬಿಹಾರ ಮತ್ತು ಖೇಡಾ ಹಾಗೂ ಗುಜರಾತ್ ಪ್ರಾಂತ್ಯಗಳ ರೈತರು ಬ್ರಿಟಿಷ್ ಸರ್ಕಾರದ ವಿರುದ್ಧ ನಡೆಸಿದ ಹೋರಾಟವನ್ನು ಮುನ್ನಡೆಸಿ ಗೆಲುವು ಸಾಧಿಸಿದ ಮೇಲಂತೂ ಗಾಂಧೀಜಿಯವರು ರಾಷ್ಟ್ರ ನಾಯಕರಾಗಿ ಬೆಳೆದುನಿಂತರು.
ಆಗಸ್ಟ್ ಘೋಷಣೆ ಎಂದೂ ಕರೆಯಲ್ಪಡುವ ಮಾಂಟೆಗು ಘೋಷಣೆಯ ನಂತರ, ಹೋಮ್ ರೂಲ್ ಲೀಗ್ ತನ್ನ ಚಳವಳಿಯನ್ನು ಸ್ಥಗಿತಗೊಳಿಸಲು ಒಪ್ಪಿಕೊಂಡಿತು. ಆ ಬಳಿಕ ಸೌಮ್ಯವಾದಿ ಮುಖಂಡರು ಈ ಲೀಗ್ ನ ಸದಸ್ಯತ್ವವನ್ನೇ ತ್ಯಜಿಸಿದರು. ಬ್ರಿಟಿಷ್ ಸರ್ಕಾರವು, ಭಾರತ ದೇಶದ ಆಡಳಿತದಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ವ್ಯವಸ್ಥೆಯನ್ನು ಕ್ರಮೇಣವಾಗಿ ಸುಧಾರಿಸುತ್ತದೆ ಎಂದು ಹೋಮ್ ರೂಲ್ ಲೀಗ್ ನಂಬಿತ್ತು.
ಹೋಮ್ ರೂಲ್ ಲೀಗ್ ವಿಸರ್ಜನೆ
[ಬದಲಾಯಿಸಿ]೧೯೨೦ರಲ್ಲಿ, ಆಲ್ ಇಂಡಿಯಾ ಹೋಮ್ ರೂಲ್ ಲೀಗ್ ಕಾಂಗ್ರೆಸ್ ನಲ್ಲಿ ವಿಲೀನವಾಯಿತು ಮತ್ತು ಮಹಾತ್ಮ ಗಾಂಧಿಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಚಳವಳಿಯು, ಗಾಂಧೀಜಿಯವರ ನಾಯಕತ್ವದಲ್ಲಿ ಸಂಪೂರ್ಣ ಜನಾಂದೋಲನವಾಗಿ ಪರಿವರ್ತನೆಯಾಯಿತು. ಹೋಮ್ ರೂಲ್ ಚಳವಳಿಯಲ್ಲಿ ಪಾತ್ರವಹಿಸಿದ್ದ ಹಲವು ಮುಖಂಡರು ಈ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದರು.
ಟಿಪ್ಪಣಿಗಳು
[ಬದಲಾಯಿಸಿ]೧೯೧೬ರಲ್ಲಿ ಸುರೈಯ್ಯ ತಯ್ಯಾಬ್ಜಿ ಅವರು ಧ್ವಜದ ೩೦ ಹೊಸ ವಿನ್ಯಾಸಗಳನ್ನು, ಮದ್ರಾಸ್ ಹೈಕೋರ್ಟ್ ಸದಸ್ಯರು ನೀಡಿದ್ದ ಹಣಕಾಸಿನ ನೆರವಿನಿಂದ ಒಂದು ಪುಸ್ತಿಕೆಯ ರೂಪದಲ್ಲಿ ಸಿದ್ಧಪಡಿಸಿ ನೀಡಿದ್ದರು. ಆದರೆ, ಈ ಎಲ್ಲ ಪ್ರಸ್ತಾಪಗಳು ಮತ್ತು ಶಿಫಾರಸುಗಳು ಧ್ವಜ ಹೊಂದಬೇಕೆಂಬ ಬಯಕೆಯನ್ನು ಜೀವಂತವಾಗಿರಿಸಲಷ್ಟೇ ಸೀಮಿತವಾಗಿದ್ದವು. ಅದೇ ವರ್ಷ ಅನ್ನಿ ಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕರು ಹೋಮ್ ರೂಲ್ ಚಳವಳಿಯ ಭಾಗವಾಗಿ ಹೊಸದೊಂದು ಧ್ವಜವನ್ನು ಅಂಗೀಕರಿಸಿದ್ದರು. ಆ ಧ್ವಜದ ಎಡ ಚತುರ್ಭುಜದ ಮೇಲ್ಭಾಗದಲ್ಲಿ ಯೂನಿಯನ್ ಜಾಕ್ ಇತ್ತು. ಬಲ ಮೇಲ್ಭಾಗದಲ್ಲಿ ನಕ್ಷತ್ರ ಇರುವ ಅರ್ಧಚಂದ್ರಾಕಾರ ರಚನೆ ಹಾಗೂ ಬಲ ಮೂಲೆ ಗೆರೆಗೆ ಅನುಗುಣವಾಗಿ ಏಳು ನಕ್ಷತ್ರಗಳನ್ನು ಚಿತ್ರಿಸಲಾಗಿತ್ತು. ಇವುಗಳ ಹಿನ್ನೆಲೆಯಲ್ಲಿ ಐದು ಕೆಂಪು ಮತ್ತು ನಾಲ್ಕು ಹಸಿರು ಅಡ್ಡ ಪಟ್ಟೆಗಳಿದ್ದವು. ಬ್ರಿಟಿಷ್ ಸರ್ಕಾರವು, ಕೊಯಮತ್ತೂರಿನ ಮ್ಯಾಜಿಸ್ಟ್ರೇಟರ ಆದೇಶದ ಮೂಲಕ ಈ ಧ್ವಜದ ಬಳಕೆಯನ್ನು ನಿಷೇಧಕ್ಕೊಳಪಡಿಸಿತು ಹಾಗೂ ಇದು, ಭಾರತದ ರಾಷ್ಟ್ರೀಯತೆಯನ್ನು ಪ್ರತಿನಿಧಿಸಲು ಯಾವುದೇ ಧ್ವಜ ಬಳಕೆ ವಿರುದ್ಧ ಬ್ರಿಟಿಷರು ಕೈಗೊಂಡ ಈ ಮೊದಲ ಕ್ರಮವಾಗಿತ್ತು. ಇದಾದ ಬಳಿಕ ದೇಶದಲ್ಲಿ ರಾಷ್ಟ್ರ ಧ್ವಜದ ಪ್ರಾಮುಖ್ಯತೆ ಬಗ್ಗೆ ದೇಶಾದ್ಯಂತ ಸಾರ್ವಜನಿಕ ಚರ್ಚೆಗಳು ಶುರುವಾದವು.
ಆಕರಗಳು
[ಬದಲಾಯಿಸಿ]- ನೆಹರು, ಜವಾಹರಲಾಲ್ (1 ಮಾರ್ಚ್ 1945). ಒಂದು ಆತ್ಮಚರಿತ್ರೆ (1 ಆವೃತ್ತಿ). ಕಲ್ಕತ್ತಾ: ಬೋಡೆಲ್
- ಡೌಗ್ಲಾಸ್ ಇ. ಹೇನ್ಸ್ (1991). ರೆಟೋರಿಕ್ ಅಂಡ್ ರಿಚುಯಲ್ ಇನ್ ಕಲೋನಿಯಲ್ ಇಂಡಿಯ. ದಿ ಶೇಪಿಂಗ್ ಆಫ್ ಎ ಪಬ್ಲಿಕ್ ಕಲ್ಚರ್ ಇನ್ ಸೂರತ್ ಸೊಸೈಟಿ 1852-1928. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ. ಪುಟ 215. ISBN 9780520067257
- ವಿರ್ಮಾನಿ 1999, ಪುಟಗಳು 176-177
- ಅನಾಮಧೇಯ. "ಹೋಮ್ ರೂಲ್ ಮೂವ್‌ಮೆಂಟ್ (1916) | ರೀಸನ್, ಆಬ್ಜೆಕ್ಟಿವ್, ನೇಚರ್, ಸಿಗ್ನಿಫಿಕೆನ್ಸ್ ಅಂಡ್ ಇಂಪ್ಯಾಕ್ಟ್ - ವ್ರೈಡಲ್". wryddle.com. 2021-02-18 ಮರು ಸಂಪಾದಿಸಲಾಗಿದೆ.
- ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ (ಭಾರತದ ಸ್ವಾತಂತ್ರ್ಯ ಹೋರಾಟ) ಬಿಪನ್ ಚಂದ್ರ, ಪುಟ 161
- ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ( ಬಿಪನ್ ಚಂದ್ರ, ಪುಟ 168
- ಮಾಮಿಡಿಪುಡಿ ವೆಂಕಟರಂಗಯ್ಯ (1969). ದಿ ಫ್ರೀಡಮ್ ಸ್ಟ್ರಗಲ್ ಇನ್ ಆಂಧ್ರ ಪ್ರದೇಶ್ (ಆಂಧ್ರಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟ): 1906–1920. (ಆಂಧ್ರಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಸಂಕಲನಕ್ಕಾಗಿ ಆಂಧ್ರಪ್ರದೇಶ ರಾಜ್ಯ ಸಮಿತಿ ರಚಿಸಲಾಗಿತ್ತು) ಪುಟ 368.
- ಮಾಮಿಡಿಪುಡಿ ವೆಂಕಟರಂಗಯ್ಯ (1969). ದಿ ಫ್ರೀಡಮ್ ಸ್ಟ್ರಗಲ್ ಇನ್ ಆಂಧ್ರ ಪ್ರದೇಶ್ : 1906-1920. ಪುಟ 113,286.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- India Home Rule, League of America materials in the South Asian American Digital Archive (SAADA)
- ಇಂಡಿಯನ್ ಹೋಮ್ ರೂಲ್, ಲೀಗ್ ಆಫ್ ಅಮೇರಿಕಾ ಮೆಟೀರಿಯಲ್ಸ್ ಇನ್ ಸೌತ್ ಏಶಿಯನ್ ಅಮೇರಿಕನ್ ಡಿಜಿಟಲ್ ಆರ್ಕೈವ್ (ಎಸ್ ಎ ಎ ಡಿ ಎ)
- ಭಾರತೀಯ ಹೋಮ್ ರೂಲ್ ಲೀಗ್ ಚಳುವಳಿ Archived 2021-06-28 ವೇಬ್ಯಾಕ್ ಮೆಷಿನ್ ನಲ್ಲಿ.