ಬರೋಡಾ ಡೈನಮೈಟ್ ಪ್ರಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬರೋಡಾ ಡೈನಮೈಟ್ ಪ್ರಕರಣವು ಇಂದಿರಾ ಗಾಂಧಿ ಸರ್ಕಾರ ಭಾರತದಲ್ಲಿ ತುರ್ತುಪರಿಸ್ತಿತಿಯ ಸಂದರ್ಭದಲ್ಲಿ (೧೯೭೫ - ೭೭) ವಿರೋಧ ಪಕ್ಷದ ನಾಯಕ ಜಾರ್ಜ್ ಫರ್ನಾಂಡಿಸ್ ಮತ್ತು ಇತರ ೨೪ ಜನರ ವಿರುದ್ಧ ಪ್ರಾರಂಭಿಸಿದ ಕ್ರಿಮಿನಲ್ ಪ್ರಕರಣಕ್ಕೆ ಬಳಸಲ್ಪಟ್ಟ ಪದವಾಗಿದೆ.[೧]

ಬರೋಡಾ ಡೈನಮೈಟ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಸಮಾಜವಾದಿ ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಅವರನ್ನು ೧೯೭೬ ರಲ್ಲಿ ಬಂಧಿಸಲಾಯಿತು.

ಮುಖ್ಯ ಪ್ರಕರಣ[ಬದಲಾಯಿಸಿ]

ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಸರ್ಕಾರಿ ಸಂಸ್ಥೆಗಳು ಮತ್ತು ರೈಲ್ವೆ ಹಳಿಗಳನ್ನು ಸ್ಫೋಟಿಸಲು ಜಾರ್ಜ್ ‍ಫೆರ್ನಾಂಡಿಸ್ ಮತ್ತು ಇತರರು ಡೈನಮೈಟ್ ಕಳ್ಳಸಾಗಣೆ ಮಾಡಿದ್ದಾರೆ ಎಂದು ಕೇಂದ್ರ ತನಿಖಾ ದಳವು (ಸಿಬಿಐ) ಆರೋಪಿಸಿತು. ಸರ್ಕಾರವನ್ನು ಉರುಳಿಸಲು ರಾಜ್ಯದ ವಿರುದ್ಧ ಯುದ್ಧ ನಡೆಸಿದ ಆರೋಪವೂ ಅವರ ಮೇಲಿತ್ತು. ಆರೋಪಿಗಳನ್ನು ಜೂನ್ ೧೯೭೬ ರಲ್ಲಿ ಬಂಧಿಸಿ ದೆಹಲಿಯ ತಿಹಾರ್ ಕಾರಾಗೃಹದಲ್ಲಿ ಸೆರೆ ಇಡಲಾಯಿತು.

ಇತರ ಪ್ರಮುಖ ಆರೋಪಿಗಳಲ್ಲಿ ವಿರೇನ್ ಜೆ. ಷಾ, ಜಿ.ಜಿ.ಪರಿಖ್, ಸಿಜಿಕೆ ರೆಡ್ಡಿ, [೨] ಪ್ರಭುದಾಸ್ ಪಟ್ವಾರಿ, ಮತ್ತು ದೇವಿ ಗುಜ್ಜರ್ ಸೇರಿದ್ದಾರೆ. ಘಟನೆಯ ಸ್ಥಳವು ಬರೋಡಾ ಆಗಿದ್ದರೂ ಸಹ, ಈ ಪ್ರಕರಣವು ರಾಷ್ಟ್ರೀಯ ಪರಿಣಾಮಗಳನ್ನು ಹೊಂದಿದೆ ಎಂದು ಸಿಬಿಐ ವಾದಿಸಿದ್ದರಿಂದ ದೆಹಲಿಯಲ್ಲಿ ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲಾಯಿತು.

ಆರೋಪ[ಬದಲಾಯಿಸಿ]

ಕೇಂದ್ರ ತನಿಖಾ ದಳದ ಚಾರ್ಜ್‌ಶೀಟ್ ಪ್ರಕಾರ ತುರ್ತು ಪರಿಸ್ಥಿತಿಯನ್ನು ಹೇರುವುದರ ವಿರುದ್ಧ ಪ್ರತಿರೋಧಕ್ಕಾಗಿ ಭೂಗತವಾಗಿದ್ದ ನಾಯಕರಲ್ಲಿ ಫರ್ನಾಂಡಿಸ್ ಒಬ್ಬರು. ಅವರು ಜುಲೈ ೧೯೭೫ ರಲ್ಲಿ ಗುಜರಾತ್‌ ಅಲ್ಲಿ ಭೂಗತವಾದರು ಮತ್ತು ಆ ಕಾಲದ ಇತರ ಸಮಾಜವಾದಿಗಳ ಜೊತೆಗೆ ತುರ್ತು ಪರಿಸ್ಥಿತಿಯನ್ನು ವಿರೋಧಿಸುತ್ತಿದ್ದರು. ಫರ್ನಾಂಡಿಸ್ ಸಹ-ಆರೋಪಿಗಳೊಂದಿಗೆ ರಹಸ್ಯ ಸಭೆ ನಡೆಸಿದರು ಎಂದು ಚಾರ್ಜ್‍ಶೀಟ್ ಹೇಳಿದೆ, "ಸರ್ಕಾರವನ್ನು ಉರುಳಿಸಲು ಕಾನೂನುಬಾಹಿರ ಕೃತ್ಯಗಳನ್ನು ಮಾಡಲು ಕ್ರಿಮಿನಲ್ ಪಿತೂರಿ ನಡೆಸಿದೆ. ಭಾರತ್ ಪಟೇಲ್ ಎಂಬುವರ ಮೂಲಕ ಡೈನಮೈಟ್, ಡಿಟೋನೇಟರ್ ಮತ್ತು ಫ್ಯೂಸ್ ವೈರ್ ನಂತಹ ಬಿಡಿಭಾಗಗಳನ್ನು ಸಂಗ್ರಹಿಸಲು ಯೋಜಿಸಲಾಗಿದೆ" ಎಂದು ಅದು ಹೇಳಿದೆ. ಸ್ಫೋಟಕಗಳನ್ನು ಸಂಗ್ರಹಿಸುವ ಮೊದಲು, ಪಟೇಲ್ ಹ್ಯಾಲೊಲ್‌ನ ಕಲ್ಲುಗಣಿಯಲ್ಲಿ ಸ್ಫೋಟಕಗಳ ಬಳಕೆಗಾಗಿ ಪರೀಕ್ಷೆ ಮಾಡಲಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.[೩]

ಬರೋಡಾ (ಈಗ ವಡೋದರಾ) ನಗರದ ರೌಪುರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಪೊಲೀಸರು ಸ್ಫೋಟಕಗಳನ್ನು ಪತ್ತೆ ಮಾಡಿದ್ದರು. ೧೯೭೬ ರ ಜೂನ್‌ನಲ್ಲಿ ಫರ್ನಾಂಡಿಸ್‌ನನ್ನು ಮತ್ತು ದೇಶದ ವಿವಿಧ ಭಾಗಗಳಿಂದ ೨೨ ಮಂದಿ ಬಂಧಿಸಿ ದೆಹಲಿಯ ತಿಹಾರ್ ಜೈಲಿನಲ್ಲಿ ದಾಖಲಿಸಲಾಯಿತು.

೧೯೭೭ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಫೆರ್ನಾಂಡಿಸ್ ಬಿಹಾರದ ಮುಜಫರ್ಪುರದಿಂದ ಹೋರಾಡಿದರು. ಅವರ ಬೆಂಬಲಿಗರು ಫೆರ್ನಾಂಡಿಸ್ ಜೈಲಿನ ಪಂಜರ ಮತ್ತು ಸರಪಳಿಗಳಲ್ಲಿ ಇರುವ ಚಿತ್ರದೊಂದಿಗೆ ಪ್ರಚಾರ ಮಾಡಿ ಗೆಲ್ಲಿಸಿದರು. ೧೯೭೭ ರಲ್ಲಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರ ಈ ಪ್ರಕರಣವನ್ನು ಹಿಂತೆಗೆದುಕೊಂಡಿತು ಮತ್ತು ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಿತು.

ಸ್ನೇಹಲತಾ ರೆಡ್ಡಿ[ಬದಲಾಯಿಸಿ]

ಸ್ನೇಹಲತಾ ರೆಡ್ಡಿ ಭಾರತೀಯ ಚಲನಚಿತ್ರ ನಟಿ. ಸ್ನೇಹಲತಾ ಮತ್ತು ಅವರ ಪತಿ ತುರ್ತು ಪರಿಸ್ಥಿತಿ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ್ದರು. [೪] ಸ್ನೇಹಲತಾ ಜಾರ್ಜ್ ಫರ್ನಾಂಡಿಸ್ ಅವರ ಆಪ್ತರಾಗಿದ್ದರು ಮತ್ತು ೨ ಮೇ ೧೯೭೬ ರಂದು ಅವರನ್ನು ಬಂಧಿಸಲಾಯಿತು. ಬರೋಡಾ ಡೈನಮೈಟ್ ಪ್ರಕರಣದ ಭಾಗವಾಗಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಜಾರ್ಜ್ ಫರ್ನಾಂಡಿಸ್ ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದ್ದರೂ, ಸ್ನೇಹಲತಾ ಅವರ ಹೆಸರು ಅಂತಿಮ ಚಾರ್ಜ್‌ಶೀಟ್‌ನಲ್ಲಿ ಇರಲಿಲ್ಲ. ಹಾಗಿದ್ದರೂ, ಅವರನ್ನು ಬೆಂಗಳೂರಿನ ಜೈಲಿನಲ್ಲಿ ಖೈದಿಯಾಗಿ ಇರಿಸಲಾಗಿತ್ತು, ಅಮಾನವೀಯ ಸ್ಥಿತಿಯಲ್ಲಿ ನೋಡಿಕೊಳ್ಳಲಾಯಿತು ಮತ್ತು ಸತತವಾಗಿ ಹಿಂಸಿಸಲಾಯಿತು. ನಂತರ ಅವರ ಆರೋಗ್ಯವು ಹದಗೆಟ್ಟಾಗ, ಅವರನ್ನು ಜನವರಿ ೧೫, ೧೯೭೭ ರಂದು ಪೆರೋಲ್‍ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ಜನವರಿ ೨೦, ೧೯೭೭ ರಂದು ದೀರ್ಘಕಾಲದ ಆಸ್ತಮಾ ಮತ್ತು ಶ್ವಾಸಕೋಶದ ಸೋಂಕಿನಿಂದ ಪೆರೋಲ್ ಬಿಡುಗಡೆಯಾದ ಐದು ದಿನಗಳ ನಂತರ ಅವರು ನಿಧನರಾದರು, ತುರ್ತು ಪರಿಸ್ಥಿತಿಯ ಮೊದಲ ಹುತಾತ್ಮರಲ್ಲಿ ಒಬ್ಬರು. [೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "George Fernandes Rebel". livemint.com.
  2. "Right to rebel by CGK Reddy". india_today.
  3. "Baroda Dynamite Case, a key chapter in Fernandes' life". Business Standard.
  4. "snehalata reddys as mother". The Hindu.