ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಇಂದ ಪುನರ್ನಿರ್ದೇಶಿತ)
ಭಾರತೀಯ ದಂಗೆ

ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಇವರ ಆಡಳಿತದ ಬಗ್ಗೆಯೂ ಜನರಲ್ಲಿ ಅಸಮಾಧಾನವಿತ್ತು. ಅಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಿಸಿತ್ತು. ಇದನ್ನು ಭಾರತೀಯ ಇತಿಹಾಸಕಾರರು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು 'ಸಿಪಾಯಿ ದಂಗೆ' ಮಾತ್ರ ಎಂದಿದ್ದಾರೆ.[೧]

ವಿವಿಧ ವಿದ್ವಾಂಸರ ಪ್ರಕಾರ ಇದೊಂದು ಸಂಪೂರ್ಣ ಸಿಪಾಯಿ ದಂಗೆ ಹೊರತು ಮತ್ತೇನೂ ಅಲ್ಲ ಸ್ವಲ್ಪಮಟ್ಟಿನ ಜನತೆಯ ಹೋರಾಟವಾಗಿತ್ತು ಎಂದು ಆಂಗ್ಲ ವಿದ್ವಾಂಸರಾದ ವಿ.ಎ.ಸ್ಮಿತ್ ಹೇಳಿದ್ದಾರೆ. ಭಾರತೀಯ ಇತಿಹಾಸಕಾರ ಹಾಗು ವಿದ್ವಾಂಸ ವಿ. ಡಿ. ಸಾರ್ವಕರ್ ತಮ್ಮ 1857 'ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸೈನಿಕ ಮತ್ತು ಸಂಗ್ರಾಮದ ಹಿನ್ನೆಲೆಯಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟದ ಚರ್ಚೆಗಳು ಮುಂದಿನಂತೆ ಇವೆ.[೨]

ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಭಾರತದ ರಾಜ್ಯಗಳು

ರಾಜಕೀಯ ಹಿನ್ನೆಲೆ[ಬದಲಾಯಿಸಿ]

 1. ಬಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಮತ್ತು ಸಹಾಯಕ ಸೈನ್ಯ ಪದ್ಧತಿ ನೀತಿಗಳು ಅಸಮಾಧಾನ ಉಂಟುಮಾಡಿದವು.
 2. ಜಮೀನ್ದಾರಿ ಭೂಮಿಯನ್ನು ವಶಪಡಿಸಿಕೊಂಡಿದ್ದು.
 3. ಭಾರತೀಯರಿಗೆ ಉನ್ನತ ಹುದ್ದೆಗಳ ನಿರಾಕರಣೆ.
 4. ಬ್ರಿಟಿಷ್ ಅಧಿಕಾರಿಗಳ ಭ್ರಷ್ಟ ಮತ್ತು ನಿರಂಕುಶ ಆಡಳಿತ.

ರಾಜಕೀಯ ಕಾರಣಗಳು[ಬದಲಾಯಿಸಿ]

ಬ್ರಿಟಿಷರು ಜಾರಿಗೆ ತಂದಿದ್ದ 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ಇಂಗ್ಲಿಷರ ಕಾಲದಲ್ಲಿ ಲಾರ್ಡ್ ಡಾಲ್ ಹೌಸಿಯು ಜಾರಿಗೆ ತಂದಿದ್ದನು. ಈ ನೀತಿಯಿಂದಾಗಿ ಹಲವು ದೇಶಿ ಸಂಸ್ಥಾನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು. ಈ ನೀತಿಯಿಂದಾಗಿ ಸತಾರ, ಜೈಪುರ, ರವಾನಿ, ಉದಯಪುರ ಇತ್ಯಾದಿ ದೇಶೀಯ ಸಂಸ್ಥಾನಗಳು ಬ್ರಿಟಿಷರ ವಶವಾದವು. ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಪಡೆದ ಮಕ್ಕಳಿಗೆ ನೀಡುತ್ತಿದ್ದ. ಆದರೆ 'ದತ್ತುಮಕ್ಕಳಿಗೆ ಹಕ್ಕಿಲ್ಲ' ನೀತಿಯ ಪ್ರಕಾರ ಇದು ಕಾನೂನು ವಿರೋಧಿ ಆಗುತ್ತಿತ್ತು. ಈ ನೀತಿಯ ಪ್ರಕಾರ ಡಾಲ್‌ಹೌಸಿಯು ತಂಜಾವೂರು ಮತ್ತು ಕರ್ನಾಟಕ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದುಪಡಿಸಿದನು, ಪರಿಣಾಮವಾಗಿ ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು. ಇದು ಬ್ರಿಟಿಷರ ವಿರುದ್ಧದ 1857ರ ಪ್ರತಿಭಟನೆಗೆ ಪ್ರೇರಕವಾಯಿತು.

ಆರ್ಥಿಕ ಕಾರಣ[ಬದಲಾಯಿಸಿ]

 1. ಬ್ರಿಟಿಷರ ಭೂಕಂದಾಯ ನೀತಿಗಳಿಂದಾಗಿ ಜೀವನಾಧಾರ ಉದ್ಯೋಗಗಳನ್ನು ಭಾರತೀಯರು ಕಳೆದುಕೊಂಡರು.
 2. ಬ್ರಿಟಿಷರ ಕೈಗಾರಿಕಾ ನೀತಿಯಿಂದಾಗಿ ಭಾರತದ ಗುಡಿ ಕೈಗಾರಿಕೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು.
 3. ಕಡಿಮೆ ಬೆಲೆಗೆ ಭಾರತದಿಂದ ಕಚ್ಚಾ ವಸ್ತುಗಳನ್ನು ಕೊಂಡು ಅವುಗಳನ್ನು ತಮ್ಮ ದೇಶಕ್ಕೆ ಸಾಗಿಸಿ ಸಿದ್ಧ ವಸ್ತುಗಳನ್ನು ತಯಾರಿಸಿ, ಮತ್ತೆ ಅವುಗಳನ್ನು ಭಾರತಕ್ಕೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು.
 4. ದಾದಾಬಾಯಿ ನವರೋಜಿ ಅವರ 'ಸಂಪತ್ತಿನ ಸೋರಿಕೆ ಸಿದ್ದಾಂತ' ಪುಸ್ತಕವೂ ಭಾರತೀಯರಲ್ಲಿ ಬ್ರಿಟಿಷರ ಆಡಳಿತ ವಿರುದ್ಧ ದನಿಯೆತ್ತುವಂತೆ ಮಾಡಿತು.

ಸಾಮಾಜಿಕ ಕಾರಣ[ಬದಲಾಯಿಸಿ]

 1. ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಬ್ರಿಟಿಷರ ಮಧ್ಯಪ್ರವೇಶ.
 2. ಕ್ರಿಶ್ಚಿಯನ್ ಮಿಷನರಿಗಳಿಗೆ ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಉತ್ತೇಜನ ಕೊಟ್ಟಿದ್ದು.
 3. ಸತಿ ಪದ್ದತಿ ರದ್ದು ಮಾಡಿದ್ದು ಹಾಗೂ ವಿಧವಾ ಪುನರ್ ವಿವಾಹಕ್ಕೆ ಅವಕಾಶ ಮಾಡಿಕೊಟ್ಟಿದ್ದು ಹಾಗೂ ಇತರ ಹಿಂದೂ ಸುಧಾರಣೆಗಳಿಂದ ಬ್ರಿಟಿಷರ ಮೇಲೆ ಹೋರಾಟ ಮಾಡಲು ಭಾರತೀಯರಲ್ಲಿ ಪ್ರೇರಣೆ ಆಯ್ತು.
 4. ಭಾರತೀಯರ ಬಗ್ಗೆ ಅವಹೇಳನಕಾರಿ ಮನೋಭಾವನೆ ಹಾಗೂ ಬ್ರಿಟಿಷರು ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಅವಹೇಳನ ಮಾಡಿದ್ದು ಸಂಪ್ರದಾಯಬದ್ಧ ಸಮಾಜಕ್ಕೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಕಾರಣವಾಯಿತು.

ಸೈನಿಕ ಕಾರಣ[ಬದಲಾಯಿಸಿ]

ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ನಡುವೆ ಸ್ಥಾನಮಾನ ಮತ್ತು ವೇತನಗಳಲ್ಲಿ ತಾರತಮ್ಯ, ಭಾರತೀಯರಿಗೆ ಸೈನ್ಯದಲ್ಲಿ ಉನ್ನತ ಹುದ್ದೆಗಳ ನಿರಾಕರಣೆ, ಈ ದಂಗೆಗೆ ತಕ್ಷಣದ ಕಾರಣವೆಂದರೆ ವಾಸ ಎನ್ಫೀಲ್ಡ್ ಬಂದೂಕುಗಳ ತೋಪುಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದು ಈ ಬಂದೂಕಿನ ಮುಟ್ಟಲು ಹಿಂದೂಗಳು ಮತ್ತು ಮುಸ್ಲಿಮರು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಮಂಗಲ್ ಪಾಂಡೆ ಎಂಬ ಸೈನಿಕನು ಬ್ರಿಟಿಷ್ ಅಧಿಕಾರಿಯನ್ನು ಕೊಂದನು. ಆದ್ದರಿಂದ ಸಿಪಾಯಿಗಳನ್ನು ಬ್ರಿಟಿಷರು ಕಾರಾಗೃಹಕ್ಕೆ ತಳ್ಳಿದರು. ಸಿಪಾಯಿಗಳು ಕಾರಾಗೃಹ ಒಡೆದು ದೆಹಲಿಯತ್ತ ಸಾಗಿ ಕೆಂಪುಕೋಟೆಯಲ್ಲಿ ಎರಡನೇ ಬಹದ್ದೂರ್ ಷಾ ನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು.

ಸಂಗ್ರಾಮದ ಹಾದಿ[ಬದಲಾಯಿಸಿ]

ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿ ಉದ್ರೇಕಗೊಳಿಸಿತು ಮಾರ್ಚ್ 29 18 57 ರಲ್ಲಿ ಬ್ರಾಹ್ಮಣ ಸೈನಿಕ ಮಂಗಲಪಾಂಡೆ ಸೈನಿಕನು ಬಹಿರಂಗವಾಗಿ ದಂಗೆಯೆದ್ದು ,ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿದನು. ಜೊತೆಗಾರ ಸೈನಿಕರನ್ನೆಲ್ಲಾ ಸೇರಿಸಿ ನನ್ನ ಜೊತೆಗೂಡಿ, ನಮ್ಮ ಧರ್ಮ ಮತ್ತು ಜಾತಿ ರಕ್ಷಣೆಗೆ ಹೋರಾಡಲು ಕರೆ ನೀಡಿದರು. ಈ ಕ್ರಾಂತಿಯ ಮೊದಲು ಉಗಮವಾಗಿದ್ದು ಮೀರತ್ ನಲ್ಲಿ, ಮೀರತ್ ತಿನ ಒಂದು ತುಕಡಿ ಯು ಬಂದೂಕು ಮುಟ್ಟಲು ನಿರಾಕರಿಸಿದರು. ಇದರಿಂದ ಕೆರಳಿದ ಬ್ರಿಟಿಷರು 10 ವರ್ಷ ಕಠಿಣ ಶಿಕ್ಷೆ ವಿಧಿಸಿತು. ಸಾರ್ವಜನಿಕವಾಗಿ ಚಿತ್ರ ಹಿಂಸೆ ನೀಡಿ ಅವರಿಂದ ಸಮವಸ್ತ್ರ ಕಸಿದುಕೊಳ್ಳಲಾಯಿತು ಇದನ್ನು ನೋಡಿದ ಇತರ ಸೈನಿಕರು ಉದ್ರೇಕಗೊಂಡು ಸೈನಿಕರನ್ನು ಬಂಧಿಸಿಟ್ಟಿದ್ದ ಜೈಲಿಗೆ ನುಗ್ಗಿ ಅಲ್ಲಿದ್ದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿ ತಮ್ಮ ಸೈನಿಕರನ್ನು ಬಂಧಮುಕ್ತಗೊಳಿಸಿದರು. ನಂತರ ಈ ಸೈನಿಕರು ದೆಹಲಿಯತ್ತ ತೆರಳಿ ಮೊಘಲ್ ದೊರೆ ಬಹುಶಃ ನಾನು ರಾಜನಾಗಿ ಮಾಡಿದರು. ಇದನ್ನು ತಿಳಿದ ಬ್ರಿಟಿಷರ ಕೆಂಪು ಕೋಟೆಯ ಮೇಲೆ ಬಾರಿ ದಾಳಿ ಮಾಡಿ ಬಹುದೂರ್ ಷಾ ಮೊಗಲ್ ದೊರೆಯ ಇಬ್ಬರು ಮಕ್ಕಳನ್ನು ಲೆಫ್ಟಿನೆಂಟ್ ಹಸ್ಸನ್ ಕೊಂದು ಹಾಕಿದ ಬಹುದುರ್ ಶಾನು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದ ಇದೇ ರೀತಿ ಕಾನ್ ಪುರ್ ಲಕ್ನೋ ಜಾನ್ಸಿ ಗ್ವಾಲಿಯರ್ ಇತರೆ ಸ್ಥಳಗಳಲ್ಲಿ ಬಿಟಿಷರ ವಿರುದ್ಧ ಹೋರಾಟಗಳು ಸ್ಪೋಟಗೊಂಡ ಭಾರತದ ಬಹುತೇಕ ಸ್ಥಳಗಳಲ್ಲಿ ಆರಂಭವಾಯಿತು

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ[ಬದಲಾಯಿಸಿ]

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತದ ಉಪಖಂಡದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ನಡೆದ ಶಸ್ತ್ರಸಜ್ಜಿತ ಬಂಡಾಯ. ಇದನ್ನು ವಿವಿಧ ರೀತಿಯಾಗಿ ಸಿಪಾಯಿ ದಂಗೆ ಮತ್ತು '1857 ರ ಭಾರತೀಯ ದಂಗೆ ಎಂದು ಬ್ರಿಟೀಷರು ಕರೆಯುತ್ತಾರೆ. ಈ ಸಂಗ್ರಾಮ ದ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಆರಂಭವಾಯಿತು.

ಕಾರಣಗಳು[ಬದಲಾಯಿಸಿ]

ಈ ಬಂಡಾಯ ಆರಂಭವಾಗಲು ಹಲವಾರು ಕಾರಣಗಳನ್ನು ಹುಡುಕಬಹುದು.

 • ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ವದಂತಿ
 • ಲಾರ್ಡ್ ಡಾಲ್‌ಹೌಸಿಯ "ದತ್ತು ಮಕ್ಕಳಿಗೆ ಹಕ್ಕಿಲ್ಲ ಸಿದ್ದಾಂತ " (ಡಾಕ್ಟ್ರಿನ್ ಆಫ್ ಲ್ಯಾಪ್ಸ್) ದ ಪ್ರಕಾರ ಉತ್ತರಾಧಿಕಾರಿಗಳಿಲ್ಲದ ಕಾರಣ ಝಾನ್ಸಿ, ಅವಧ, ಸತಾರಾ, ನಾಗ್ಪುರ, ಮತ್ತು ಸಂಭಲ್ಪುರ ರಾಜ್ಯಗಳನ್ನು ಬ್ರಿಟಿಷ್ ಆಳ್ವಿಕೆಗೆ ವಶಪಡಿಸಿಕೊಳ್ಳಲಾಯಿತು. ನಾಗ್ಪುರ ರಾಜಮನೆತನದ ಒಡವೆಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಯಿತು.
 • ಹಿಂದೂ ಮತ್ತು ಮುಸ್ಲಿಂ ಧರ್ಮದ ಅನೇಕ ನಂಬಿಕೆ-ಆಚಾರಗಳನ್ನು (ಸತಿ, ಬಾಲ್ಯ ವಿವಾಹ) ಬ್ರಿಟಿಷರು ’ಅನಾಗರಿಕ’ ಎಂಬ ಕಾರಣವೊಡ್ಡಿ ನಿಷೇಧಿಸಿದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಯಿತು.
 • ಬ್ರಿಟಿಷರ ನ್ಯಾಯಪದ್ಧತಿ ಮೂಲಭೂತವಾಗಿ ಭಾರತೀಯರ ವಿರುದ್ಧವಾಗಿಯೇ ಇತ್ತು.
 • ಭಾರತೀಯರ ಮೇಲೆ ವಿಧಿಸಲಾಗಿದ್ದ ಕಟ್ಟಲಾಗದ ತೆರಿಗೆ. ಇದರ ಕಾರಣವಾಗಿ ರೈತರು ಆಹಾರ ಧಾನ್ಯಗಳನ್ನು ಬಿಟ್ಟು ವಾಣಿಜ್ಯ ಬೆಳೆಗಳನ್ನು ಬೆಳೆಯುವಂತಾಗಿ, ಆಹಾರ ಧಾನ್ಯಗಳ ಬೆಲೆಯೇರಿಕೆ ಉಂಟಾಯಿತು.
 • ಈಸ್ಟ್ ಇಂಡಿಯಾ ಕಂಪನಿಯು ಲೆಕ್ಕವಿಲ್ಲದಷ್ಟು ಚಿನ್ನ, ಬೆಳ್ಳಿ, ಒಡವೆಗಳು, ರೇಷ್ಮೆ, ಮತ್ತು ಹತ್ತಿಯನ್ನು ಬ್ರಿಟನ್ನಿಗೆ ಪ್ರತಿ ವರ್ಷವೂ ರಫ್ತು ಮಾಡುತ್ತಿತ್ತು. ಇದರ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯಿಂದ ದುಡಿದ ಐಶ್ವರ್ಯವೇ ಕೈಗಾರಿಕಾ ಕ್ರಾಂತಿಯಲ್ಲಿ ಬ್ರಿಟನ್ ಮುಂಚೂಣಿಯಲ್ಲಿರಲು ಕಾರಣವಾಗಿದ್ದಿತು.
 • ಬ್ರಿಟಿಷರ ಉತ್ಪನ್ನಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಮಾರಾಟ ಮಾಡಿ ಪ್ರಾದೇಶಿಕ ಕುಶಲಕರ್ಮಿಗಳು ನಿರುದ್ಯೋಗಿಗಳಾಗಬೇಕಾಯಿತು.
 • ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸಿಪಾಯಿಗಳಿಗೆ ಹೊಸ "ಎನ್‌ಫೀಲ್ಡ್" ಬಂದೂಕುಗಳನ್ನು ಉಪಯೋಗಿಸುವಂತೆ ಸೂಚಿಸಲಾಯಿತು. ಇದರಲ್ಲಿ ಬಳಸಲಾಗುತ್ತಿದ್ದ ಕಾಡತೂಸುಗಳನ್ನು (ಹಿಂದೂಗಳಿಗೆ ಪವಿತ್ರವಾದ) ಹಸು ಮತ್ತು (ಮುಸ್ಲಿಮರಿಗೆ ನಿಷಿದ್ಧವಾದ) ಹಂದಿಯ ಕೊಬ್ಬಿನಿಂದ ತಯಾರು ಮಾಡಲಾಗಿದೆಯೆಂಬ ವದಂತಿ ಹರಡಿತು.

ಸಂಗ್ರಾಮದ ಆರಂಭ[ಬದಲಾಯಿಸಿ]

೨೬ ಫೆಬ್ರವರಿ ೧೮೫೭ರಂದು ೧೯ನೇ ಬಂಗಾಳ ಸ್ಥಳೀಯ ಕಾಲಾಳು ಸೈನಿಕರು ಹೊಸ ಕಾಡತೂಸುಗಳ ಬಗ್ಗೆ ತಿಳಿದು ಅವುಗಳನ್ನು ಉಪಯೋಗಿಸಲು ನಿರಾಕರಿಸಿದರು. ಸೈನ್ಯದ ಕರ್ನಲ್ ಇದನ್ನು ತಿಳಿದು ಆವೇಶಗೊಂಡರೂ, ಕೊನೆಗೆ ಸೈನಿಕರ ಒತ್ತಾಯಕ್ಕೆ ಮಣಿದು ಮರು ದಿನದ ತಾಲೀಮನ್ನು ರದ್ದು ಮಾಡಬೇಕಾಯಿತು.

ಮಂಗಲ ಪಾಂಡೆ[ಬದಲಾಯಿಸಿ]

 • ಕಲ್ಕತ್ತದ ಸಮೀಪ ಬಾರಕ್‌ಪುರದಲ್ಲಿ ೨೯ ಮಾರ್ಚ್ ೧೮೫೭ರಂದು ೩೪ನೇ ಬಂಗಾಳ ಸ್ಥಳೀಯ ಕಾಲಾಳು ಸೈನ್ಯದ ಮಂಗಲ ಪಾಂಡೆ ಎಂಬ ಸಿಪಾಯಿಯು ದಳದ ನಾಯಕ ಲೆ. ಬಾಗ್ ನನ್ನು ಗುಂಡಿಕ್ಕಿದ ನಂತರ ಖಡ್ಗದಿಂದ ಇರಿದನು. ಇದನ್ನರಿತ ಜನರಲ್, ಜಮಾದಾರ ಈಶ್ವರೀ ಪ್ರಸಾದರಿಗೆ ಮಂಗಲ ಪಾಂಡೆಯನ್ನು ಬಂಧಿಸಲು ಸೂಚಿಸಿದನು.
 • ಆದರೆ ಜಮಾದಾರನು ನಿರಾಕರಿಸಿದನು. ಇದರ ಬಳಿಕ ಸೈನ್ಯದ ಎಲ್ಲ ಸಿಪಾಯಿಗಳೂ ಜನರಲ್ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು (ಶೇಖ್ ಪಲ್ಟು ಎಂಬ ಸಿಪಾಯಿಯನ್ನು ಹೊರತುಪಡಿಸಿ.). ತನ್ನ ಪದಾತಿಗಳನ್ನು ದಂಗೆಯೇಳಲು ಹುರಿದುಂಬಿಸಲು ವಿಫಲನಾದ ಕಾರಣ ಮಂಗಲ ಪಾಂಡೆ ಬಂದೂಕನ್ನು ತನ್ನ ಕುತ್ತಿಗೆಗೆ ತೋರಿಸಿ ಕಾಲಿನಿಂದ ಅದರ ಕುದುರೆಯನ್ನು ಎಳೆದನು.
 • ಆದರೆ ಇದರ ನಂತರ ಬದುಕಿದ ಅವನನ್ನು ಕೋರ್ಟ್ ಮಾರ್ಷಲ್ ಮಾಡಿ ಏಪ್ರಿಲ್ ೭ರಂದು ಗಲ್ಲಿಗೇರಿಸಲಾಯಿತು. ನಂತರ ಜಮಾದಾರ ಈಶ್ವರೀ ಪ್ರಸಾದನನ್ನೂ ಗಲ್ಲಿಗೇರಿಸಲಾಯಿತು. ಇಡೀ ಕಾಲಾಳು ಸೈನ್ಯವನ್ನು ಬರಖಾಸ್ತುಗೊಳಿಸಿ, ಅವರ ಸಮವಸ್ತ್ರವನ್ನು ಕಿತ್ತು ಹಾಕಲಾಯಿ ತು. ಶೇಖ್ ಪಲ್ಟುನನ್ನು ಜಮಾದಾರನನ್ನಾಗಿ ಬಡ್ತಿ ನೀಡಲಾಯಿತು. ಇದರಿಂದ ಅವಮಾನಿತರಾದ ಮಾಜಿ ಸಿಪಾಯಿಗಳು ಸೂಕ್ತ ರೀತಿಯಾಗಿ ಈ ಸೇಡನ್ನು ತೀರಿಸಲು ಕಾಯುತ್ತಿದ್ದರು.

ಮೀರಟ್‌ನಲ್ಲಿ ೩ನೇ ಲಘು ಅಶ್ವದಳ[ಬದಲಾಯಿಸಿ]

 • ಮೇ ೯ರಂದು ೩ನೇ ಬಂಗಾಳ ಲಘು ಅಶ್ವ ದಳದ ೮೫ ಸೈನಿಕರು ಹೊಸ ಕಾಡತೂಸುಗಳನ್ನು ಬಳಸಕು ನಿರಾಕರಿಸಿದ ಕಾರಣ ಅವರನ್ನು ಬಂಧಿಸಿ, ಸಾರ್ವಜನಿಕವಾಗಿ ಸಮವಸ್ತ್ರವನ್ನು ಕಿತ್ತು ಹಾಕಿ, ೧೦ ವರ್ಷ ಕಾರಾಗೃಹ ವಾಸ ಮತ್ತು ಕಠಿಣ ಸಜೆಯನ್ನು ವಿಧಿಸಲಾಯಿತು. ಬಂಧಿತ ಸೈನಿಕರನ್ನು ಕಾರಾಗೃಹಕ್ಕೆ ಕೊಂಡೊಯ್ಯುತ್ತಿರುವಾಗ ಅವರನ್ನು ವಿವಿಧ ರೀತಿಯಾಗಿ ಅವಮಾನಿಸಿ ಹೀಯಾಳಿಸಲಾಯಿತು. ಸೈನಿಕರನ್ನು ಹೀಗೆ ನಡೆಸಿಕೊಂಡ ರೀತಿಯೇ ಇತರ ಸಿಪಾಯಿಗಳು ದಂಗೆಯೇಳಲು ಕಾರಣವಾಯಿತು.
 • ಮೀರಟ್‌ನಲ್ಲಿ ತಾಲೀಮು ನಡೆಸಿದ ೧೧ನೇ ಮತ್ತು ೨೦ನೇ ಕಾಲಾಳುಗಳು ಆಜ್ಞೆಯನ್ನು ಉಲ್ಲಂಘಿಸಿ ಐರೋಪ್ಯ ದಂಡು ಪ್ರದೇಶದ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕ ಎಲ್ಲ ಐರೋಪ್ಯರನ್ನು ಕೊಂದು ಹಾಕಿ ಅವರ ಮನೆಗಳನ್ನು ಸುಟ್ಟರು. ಆದರೆ ಕೆಲವು ಮೂಲಗಳ ಪ್ರಕಾರ ಸಿಪಾಯಿಗಳು ತಮ್ಮ ಹಿರಿಯ ಸೈನ್ಯಾಧಿಕಾರಿಗಳನ್ನು ಸುರಕ್ಷಿತ ತಾಣಗಳಿಗೆ ಸೇರಿಸಿ ದಂಗೆಯನ್ನು ಮುಂದುವರೆಸಿದರು.

ಪರ ಮತ್ತು ವಿರೋಧ[ಬದಲಾಯಿಸಿ]

 • ಬಂಡಾಯವು ಸೇನೆಯಿಂದ ಹೊರಗೆ ಚೆಲ್ಲಿತಾದರೂ, ಭಾರತದ ನಾಯಕರು ಅಪೇಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಭಾರತದ ಪರ ಒಗ್ಗಟ್ಟಿನ ಕೊರತೆಯಿತ್ತು. ಮುಖ್ಯವಾಗಿ ಸಂಗ್ರಾಮವು ಉತ್ತರ ಮತ್ತು ಕೇಂದ್ರ ಪ್ರದೇಶಗಳಾದ ದೆಹಲಿ, ಲಖನೌ, ಕಾನ್ಪುರ, ಝಾನ್ಸಿ , ಬರೇಲಿಗಳಲ್ಲಿ ಕೇಂದ್ರೀಕೃತವಾಗಿತ್ತು.
 • ಬಹಳಷ್ಟು ಭಾರತೀಯರು ಬ್ರಿಟಿಷರ ಪರವಾಗಿ ನಿಂತರು. ಇದರ ಕಾರಣ ಮುಘಲರ ಮೇಲಿನ ಅಪನಂಬಿಕೆ ಮತ್ತು ಭಾರತೀಯತೆಯ ಭಾವನೆಯ ಕೊರತೆ. ಪಂಜಾಬಿನ ಮತ್ತು ವಾಯವ್ಯ ಗಡಿನಾಡಿನ ಸಿಖ್ಖರು ಮತ್ತು ಪಠಾಣರು ಬ್ರಿಟಿಷರು ದೆಹಲಿಯನ್ನು ಮರು ಕಬಳಿಸಲು ಸಹಾಯ ಮಾಡಿದರು. ನೇಪಾಳವು ಸ್ವತಂತ್ರ ರಾಜ್ಯವಾಗಿದ್ದರೂ ಕೂಡ ನೇಪಾಳಿ ಗೂರ್ಖಾಗಳು ಬ್ರಿಟಿಷರಿಗೆ ಸಹಾಯ ಮಾಡಿದರು.
 • ಸಣ್ಣ-ಪುಟ್ಟ ಗಲಭೆಗಳನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ ಬಹಳಷ್ಟು ಪ್ರಾಂತ್ಯಗಳು ಸಂಗ್ರಾಮದಲ್ಲಿ ಪಾತ್ರ ವಹಿಸಲಿಲ್ಲ. ಇದಕ್ಕೆ ಕಾರಣ ಈ ಪ್ರಾಂತ್ಯಗಳು ನಿಜಾಮರ ಅಥವಾ ಮೈಸೂರು ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದರು. ಇದರಿಂದ ಈ ಭಾಗದ ಜನರು ನೇರವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿರಲಿಲ್ಲ.

ಆರಂಭಿಕ ಹಂತಗಳು[ಬದಲಾಯಿಸಿ]

 • ಆರಂಭದಲ್ಲಿ ಭಾರತದ ಸಿಪಾಯಿಗಳು ಕಂಪನಿಯ ಸೈನ್ಯವನ್ನು ಸೋಲಿಸಿ ಹರಿಯಾಣ, ಬಿಹಾರ, ಮತ್ತು ಕೇಂದ್ರೀಯ ಪ್ರಾಂತ್ಯಗಳ ಹಲವು ಪ್ರಮುಖ ಸ್ಥಳಗಳನ್ನು ವಶಪಡಿಸಿಕೊಂಡರು.
 • ಆದರೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಬ್ರಿಟಿಷರು ದೀರ್ಘ ಹೋರಾಟ ನಡೆಸಿದರು. ದಂಗೆಯೆದ್ದ ಸಿಪಾಯಿಗಳಿಗೆ ಕೇಂದ್ರೀಕೃತ ನಾಯಕತ್ವದ ಕೊರತೆಯಿತ್ತು.

ದೆಹಲಿ[ಬದಲಾಯಿಸಿ]

 • ಬ್ರಿಟಿಷರು ಹಂತ-ಹಂತವಾಗಿ ಪ್ರದೇಶಗಳನ್ನು ಮರು ವಶಪಡಿಸಿಕೊಂಡರು. ಯುರೋಪಿನಿಂದ ಚೀನಕ್ಕೆ ಹೋಗುತ್ತಿದ್ದ ಹಲವು ತುಕಡಿಗಳನ್ನು ಭಾರತಕ್ಕೆ ಕಳುಹಿಸಲಾಯಿತು.
 • ದಂಗೆಯೆದ್ದ ಸಿಪಾಯಿಗಳನ್ನು ಎರಡು ತಿಂಗಳು ಸತತವಾಗಿ ದೆಹಲಿಯನ್ನು ದಾಳಿ ಮಾಡಲಾಯಿತು. ಆಗ ಸಿಖ್ಖರ ಮತ್ತು ಪಠಾಣರ ಬೆಂಬಲದಿಂದ ಅಂತಿಮವಾಗಿ ದೆಹಲಿಯನ್ನು ಮರು ವಶಪಡಿಸಿಕೊಳ್ಳಲಾಯಿತು.
 • ನಂತರ ಮುಂದುವರೆದು ದಂಗೆಯು ಕಾನ್ಪುರ, ಬಿಹಾರ,ಝಾನ್ಸಿ,ಅವದ್, ಹೀಗೆ ವಿಶಾಲವಾಗಿ ವ್ಯಾಪಿಸಿತು. ಇದರ ನಂತರ ನಿಧಾನವಾಗಿ ಸತತ ದಾಳಿಗಳ ಪರಿಣಾಮವಾಗಿ ಕಾನ್ಪುರ ಮತ್ತು ಲಖನೌ ಪ್ರಾಂತ್ಯಗಳನ್ನು ಮರುವಶಪಡಿಸಿಕೊಳ್ಳಲಾಯಿತು.

ಪ್ರಾದೇಶಿಕ ಸ್ವಾತಂತ್ರ್ಯ ಹೋರಾಟಗಳು[ಬದಲಾಯಿಸಿ]

ಬ್ರಿಟಿಷರ ದತ್ತುಸ್ವೀಕಾರ ಕಾಯಿದೆ, ಸಹಾಯಕ ಸೈನ್ಯಪದ್ಧತಿ ಮತ್ತು ಅವರ ಒಡೆದು ಆಳುವ ಕುಟಿಲನೀತಿಯಿಂದ ಭಾರತದ ಎಲ್ಲ ರಾಜ್ಯಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದು. ಅದರಲ್ಲಿ ಕೆಲವೊಂದು ರಾಜ್ಯಗಳು ಅವರ ಹಿಡಿತಕ್ಕೆ ಸಿಕ್ಕಿರಲಿಲ್ಲ. ಬ್ರಿಟಿಷರ ರಾಜ್ಯದಾಹ ಮತ್ತು ಆಕ್ರಮಣನೀತಿಯೇ ಈ ಹೋರಾಟಗಳಿಗೆ ಮೂಲ. ದೇಶೀಯ ರಾಜರು ತಮ್ಮ ರಾಜ್ಯ ಮತ್ತು ಹಕ್ಕುಗಳನ್ನು ಕಾಯ್ದುಕೊಳ್ಳಬೇಕಾಗಿ ಬಂದಾಗ ಬ್ರಿಟಿಷರ ವಿರುದ್ಧ ಹೋರಾಡಬೇಕಾಯಿತು. ಅವರಲ್ಲಿ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರನ್ನು ಪ್ರಥಮವಾಗಿ ಗಮನಿಸಬೇಕು. ದಿನ ದಿನಕ್ಕೆ ಬೆಳೆಯುತ್ತಿದ್ದ ಬ್ರಿಟಿಷರ ಬಲವನ್ನು ಗಮನಿಸಿದ ಹೈದರ್ ಮರಾಠರ ಮತ್ತು ಹೈದರಾಬಾದಿನ ನಿಜಾಮನ ಸಹಕಾರದೊಂದಿಗೆ ಕೆಲವು ಸಾರಿ ಹೋರಾಡಿದ. ಆದರೆ ಮರಾಠರೂ ನಿಜಾಮನೂ ಬ್ರಿಟಿಷರ ಕಡೆಯೇ ಸೇರಿಹೋದದ್ದು ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಿಸಿತೆನ್ನಬಹುದು. ಹೈದರನ ಅಕಾಲಮರಣ ಬ್ರಿಟಿಷರಿಗೆ ಅನುಕೂಲ ಪರಿಸ್ಥಿತಿಯಾಯಿತು. ಟಿಪ್ಪುಸುಲ್ತಾನ್ ತಂದೆಯಂತೆಯೇ ಹೋರಾಟವನ್ನು ಮುಂದುವರಿಸಿದ. ಆದರೆ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಆತ ಮರಣವನ್ನಪ್ಪಿದ (1799). ಅವನ ಸಾವಿನೊಂದಿಗೆ ಅಂದಿನ ಮೈಸೂರು ರಾಜ್ಯ ಹರಿದು ಹಂಚಿಹೋಯಿತು.

ಕರ್ನಾಟಕದಲ್ಲಿ ಸಶಸ್ತ್ರ ಬಂಡಾಯದ ಹೋರಾಟವನ್ನು ಕಾಣುತ್ತೇವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಗೆ ಸೇರಿದ ಶೂರ ಧೋಂಡಿಯ ವಾಘ 1780ರಲ್ಲಿ ಹೈದರನ ಸೈನ್ಯ ಸೇರಿ ತರಬೇತಿ ಪಡೆದು ಓಡಿಹೋಗಿದ್ದವನು ಟಿಪ್ಪುವಿನ ಆಹ್ವಾನಕ್ಕೆ ಕಿವಿಗೊಟ್ಟು ಮತ್ತೆ ಶ್ರೀರಂಗಪಟ್ಟಣಕ್ಕೆ ಬಂದಾಗ ಬಲಾತ್ಕಾರದಿಂದ ಮುಸಲ್ಮಾನನಾದ. 1799ರಲ್ಲಿ ಶ್ರೀರಂಗಪಟ್ಟಣದ ಪತನದ ಕಾಲದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಬಿದನೂರು, ಶಿಕಾರಿಪುರ ಪ್ರದೇಶಗಳ ಜನರನ್ನು ಸಂಘಟಿಸಿದ. ಐಗೂರಿನ ಕೃಷ್ಣಪ್ಪನಾಯಕ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಹೆಗ್ಗಡೆ, ಬಳ್ಳಾರಿಯ ರಾಯದುರ್ಗದ ಪಾಳೆಯಗಾರ ಮತ್ತು ಆನೆಗೊಂದಿಯ ಪಾಳೆಯಗಾರರ ನೆರವಿನಿಂದ ಬ್ರಿಟಿಷರ ಎದುರಾಗಿ ಬಂಡಾಯ ಹೂಡಿದ. ಲೋಂಡಾದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಲು ಬಂದ ಮರಾಠ ಸೇನಾನಿ ಗೋಖಲೆಯನ್ನು ಕೊಂದ. ಬ್ರಿಟಿಷ್ ವಿರೋಧಿಗಳನ್ನೆಲ್ಲ ಸಂಘಟಿಸಲು ಪ್ರಯತ್ನಿಸಿದ. ಇವನ ಚಟುವಟಿಕೆಯನ್ನು ಬ್ರಿಟಿಷರು ಸಹಿಸಲಾರದೆ ಹೋದರು. ಆರ್ಥರ್ ವೆಲ್ಲೆಸ್ಲಿ ಧೋಂಡಿಯನನ್ನು ಹಿಡಿಯಲು ಟೋರಿನ್, ಸ್ಟೀವನ್‍ಸನ್ ಮತ್ತು ಪೇಟ್ಕರ್ ಎಂಬ ಮೂರು ಮಂದಿ ಸೇನಾಪತಿಗಳನ್ನು ಕಳುಹಿಸಿದ. ಧೋಂಡಿಯ ತಂಗಿದ್ದನೆಂಬ ಕೋಟೆ, ಸ್ಥಳಗಳನ್ನೆಲ್ಲ ಶೋಧಿಸುತ್ತ ಅವನ ಕಡೆಯವರನ್ನೆಲ್ಲ ಕೊಲ್ಲುತ್ತ ಬ್ರಿಟಿಷ್ ಸೇನೆ ದಾಂದಲೆ ನಡೆಸಿತು. ಕೊನೆಗೆ ಒಬ್ಬ ಸೈನಿಕ ಮತ್ತು ಧೋಂಡಿಯನ ಕೈಲಿ ಅನ್ನ ತಿಂದ ಸಲಬತ್ ಎಂಬ ದ್ರೋಹಿಗಳು ಕೊಟ್ಟ ಸುಳುವಿನ ಮೇಲೆ ಬ್ರಿಟಿಷ್ ಸೇನೆ ಧೋಂಡಿಯನ ಬೆನ್ನುಹತ್ತಿತು. 1800 ಸೆಪ್ಟೆಂಬರ್‍ನಲ್ಲಿ ರಾಯಚೂರು ಜಿಲ್ಲೆಯ ಕೋಣಗಲ್ಲಿನಲ್ಲಿ ಧೋಂಡಿಯ ವಾಘ ಮರಾಠರ, ನಿಜಾಮನ ಮತ್ತು ಆಂಗ್ಲರ ಮೂರು ಸೇನೆಗಳನ್ನು ಎದುರಿಸಿ ಹೋರಾಡುತ್ತ ಮಡಿದ. ಐಗೂರು ಕೃಷ್ಣಪ್ಪನಾಯಕ 1802 ಫೆಬ್ರವರಿಯವರೆಗೂ ಹೋರಾಡುತ್ತ ಕೊನೆಗೆ ಸುಬ್ರಹ್ಮಣ್ಯ ಘಟ್ಟದಲ್ಲಿ ಮಡಿದ. ಕೊಪ್ಪಳದ ಕೋಟೆಯನ್ನು ಗೆದ್ದುಕೊಂಡು ಬಂಡಾಯ ಹೂಡಿದ (1819) ವೀರಪ್ಪನನ್ನೂ ಬ್ರಿಟಿಷ್ ಸೇನೆ ಕೊಂದಿತು. 1820-21ರಲ್ಲಿ ಬಿದರೆ ಜಿಲ್ಲೆಯ ಸುಳಿಯಳ್ಳಿ ದೇಶಮುಖ್, ತಿರುಮಲರಾವ್ ಮತ್ತು ಮೇಘಶ್ಯಾಮ್ ದೇಶಮುಖರು ಬಂಡಾಯದ ಮುಂದಾಳಾಗಿದ್ದರು. 1824ರಲ್ಲಿ ಬಿಜಾಪುರ ಜಿಲ್ಲೆಯ ಸಿಂದಗಿಯ ಬಂಡಾಯವನ್ನು ಇಂಗ್ಲಿಷ್ ಸೇನೆ ಕ್ರೌರ್ಯದಿಂದ ಹತ್ತಿಕ್ಕಿತು. ಸಿಂದಗಿಯ ಬಂಡಾಯಗಾರರಾಗಿದ್ದ ದಿವಾಕರ ದೀಕ್ಷಿತ, ರಾವ್‍ಜಿ ರಾಸ್ತಿಯ, ಬಾಳಪ್ಪ ದೇಶಪಾಂಡೆ, ಅಲೂಪ ಪಿಂಡಾರಿ, ಶೆಟ್ಟಿಯಪ್ಪ ಮತ್ತು ಶೀನಪ್ಪ ಇವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಬ್ರಿಟಿಷ್ ಸರ್ಕಾರ ಘೋಷಿಸಿತ್ತು. ದೇಶದ್ರೋಹಿ ಅಣ್ಣಪ್ಪ ಪಟಕಿ ಎಂಬಾತ ಮೋಸ ಬಗೆದ. ಸಿಂದಗಿ ಬ್ರಿಟಿಷರ ವಶವಾಯಿತು, ಬಂಡಾಯಗಾರರೆಲ್ಲ ಸೆರೆಯಾದರು.


ಹೆಚ್ಚಿನ ವಿವರಕ್ಕೆ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. https://www.britannica.com/event/Indian-Mutiny
 2. https://leverageedu.com/blog/revolt-of-1857/