ಕರ್ನಾಟಕ ಸಶಸ್ತ್ರ ಬಂಡಾಯ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
}
ಕರ್ನಾಟಕ ಸಶಸ್ತ್ರ ಬಂಡಾಯ ಭಾರತದ ರಾಜಕೀಯ ಸ್ವಾತಂತ್ರ್ಯದ ಸಂಘರ್ಷ ಹಲವು ದೃಷ್ಟಿಕೋನಗಳಿಂದ ವೈಶಿಷ್ಟ್ಯಮಯವಾದುದು. ಜಗತ್ತಿನಾದ್ಯಂತ ಶತಮಾನಗಳುದ್ದಕ್ಕೂ ಬಹಳಷ್ಟು ಸ್ವಾತಂತ್ರ್ಯ ಆಂದೋಳನಗಳು ನಡೆದಿವೆ. ಇದರಲ್ಲಿಯೂ ಹಲವಷ್ಟು ಸಂಗ್ರಾಮಗಳು ಬೇರೆ ಬೇರೆ ಕಾರಣಗಳಿಗಾಗಿ, ಅಂದರೆ ಸ್ವಾತಂತ್ರ್ಯ, ಸಮಾನತೆಗಳಂತಹ ಮಾನವಹಕ್ಕುಗಳ ಈಡೇರಿಕೆಗೆ ಹೊರತಾಗಿಯೂ ನಡೆದುದ್ದನ್ನು ಚರಿತ್ರೆ ದಾಖಲಿಸುತ್ತದೆ. ಅಂತವು ಯಾವು ಜನಮಾನಸದಲ್ಲಿ ಹಸಿರಾಗಿ ಉಳಿದಿಲ್ಲ. ಈ ರೀತಿಯ ಸ್ವಾತಂತ್ರ್ಯಾಂದೋಳನಗಳಂತೆ ಹತ್ತರಲ್ಲಿ ಹನ್ನೊಂದ ರಂತಲ್ಲ ಭಾರತದ ರಾಜಕೀಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಚಾರಿತ್ರಿಕ ಹೋರಾಟ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ನಾವು ನಡೆಸಿದ ಚಳುವಳಿ ಕೆಲವು ಮಹತ್ವದ ಕಾರಣಗಳಿಂದ ಅನನ್ಯವಾದುದಾಗಿದೆ. ಹತ್ತೊಂಭತ್ತು ಮತ್ತು ಇಪ್ಪತ್ತನೆಯ ಶತಮಾನಗಳ ನಡುವೆ ಹರಡಿಕೊಂಡಿರುವ ಒಂದು ನೂರು ವರ್ಷಗಳವರೆಗಿನ (ಇದರ ವಿವರ ಲೇಖನದ ಮುಂದಿನ ಭಾಗದಲ್ಲಿದೆ) ಸ್ವಾತಂತ್ರ್ಯ ಹೋರಾಟ ವಿಶ್ವದ ಚರಿತ್ರೆಯಲ್ಲಿ ಅಪೂರ್ವವಾದದ್ದು.
ಗಾಂಧೀಜಿಯವರ ಮುಂದಾಳತ್ವದಲ್ಲಿ
[ಬದಲಾಯಿಸಿ]- ಭಾರತದ ಸ್ವಾತಂತ್ರ್ಯ ಶಿಲ್ಪಿ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ಮುಂದಾಳತ್ವದಲ್ಲಿ ನಡೆದ ರಾಜಕೀಯ ಸ್ವಾತಂತ್ರ್ಯದ ಹೋರಾಟ ಹಲವು ಆಯಾಮಗಳನ್ನು ಹೊಂದಿದೆ. ಈ ಹೋರಾಟ ಹುಂಬುತನದ ಹೋರಾಟವಾಗಿರಲಿಲ್ಲ. ರಕ್ತಪಾತದ ಹೋರಾಟವಾಗಿರಲಿಲ್ಲ. ಅದೊಂದು ಅನನ್ಯ ಸಾಂಸ್ಕೃತಿಕ ಹಿನ್ನೆಲೆಯ ಅಡಿಪಾಯದ ಆಧಾರದ ಮೇಲೆ ಹರಳುಗಟ್ಟಿದ ಹೋರಾಟವಾಗಿತ್ತು. ಗಾಂಧೀಜಿಯವರು ಎಷ್ಟು ಅಪ್ರತಿಮ ರಾಷ್ಟ್ರಪ್ರೇಮಿಗಳಾಗಿದ್ದರೋ ಅಷ್ಟೇ ಚಾರಿತ್ರಿಕ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡ ತತ್ವವೇತ್ತರೂ ಆಗಿದ್ದರು.
- ಇದರರ್ಥ ಕೇವಲ ಗಾಂಧೀಜಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದಲ್ಲ. ಅವರು ಸ್ವಾತಂತ್ರ್ಯಾಂದೋಳನದಲ್ಲಿ ದೇಶಪ್ರೇಮದೀಪ್ತಿಯಿಂದ ಪಾಲ್ಗೊಂಡಿದ್ದರು. ಈ ಹತ್ತು ಹಲವು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬೇರೆ ಬೇರೆ ದೃಷ್ಟಿಕೋನದ ರಾಷ್ಟ್ರಪ್ರೇಮಿ ಗಳಿದ್ದಾರೆ.
ಒಂದು ಕಡೆ ಬಿಸಿರಕ್ತದ ಯುವಕಪಡೆ ಇನ್ನೊಂದೆಡೆ ಇಂಗ್ಲೀಷರ ಸಾಮ್ರಾಜ್ಯಶಾಹಿ ಪ್ರಭುತ್ವಕ್ಕೆ ನೇರ ಸವಾಲೆಸೆದ ಸಶಸ್ತ್ರ ಹೋರಾಟ ಮತ್ತೆ ಒಂದು ಕಡೆ ನೇಣುಗಂಬವನ್ನು ಸಂತೋಷವಾಗಿಯೇ ಏರಲು ಸಿದ್ದರಿರುವ ಕ್ರಾಂತಿಕಾರಿಗಳ ಬಲಿದಾನದ ಕಥೆ, ಮತ್ತೊಂದು ಕಡೆ ಸತ್ಯಾಗ್ರಹ. *ಅಸಹಕಾರ ತತ್ವಗಳ ಮೂಲಕವೇ ವಿರೋಧಿಗಳ ಮನಗೆಲ್ಲುವ ಶಾಂತಿಪ್ರಿಯರ ಹೋರಾಟ, ಹೋರಾಟದ ಅಂತಿಮಘಟ್ಟದಲ್ಲಿ ದೊಡ್ಡಸೇನೆಯನ್ನೇ ಸಂಘಟಿಸಿ ಇಂಗ್ಲೀಷರ ಸೇನಾಬಲದ ಜಂಘಾಬಲವನ್ನೇ ಅಲುಗಾಡಿಸುವ ಪ್ರಯತ್ನ ಮಗದೊಂದು ಕಡೆ. ರಾಜೀ ಸೂತ್ರದ ಮೂಲಕ ಸ್ವಾತಂತ್ರ್ಯ ಗಳಿಸುವವರ ಯತ್ನ ಹೀಗೆ ವಿಭಿನ್ನ ಆಯಾಮಗಳನ್ನು ಹೊಂದಿದ್ದ ಭಾರತದ ರಾಜಕೀಯ ಸ್ವಾತಂತ್ರ್ಯದ ಸಂಘರ್ಷ ಜಾಗತೀಕ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತನ್ನದೇ ಆದ ಅನನ್ಯತೆಯನ್ನು ಹೊಂದಿದೆ.
- ಮೇಲೆ ವಿವರಿಸಿದ ಹೋರಾಟಗಾರ ವರ್ಗಗಳನ್ನು ಕ್ರೋಢೀಕರಿಸಿ ಮಂದಗಾಮಿಗಳು ಹಾಗೂ ತೀವ್ರ ಗಾಮಿಗಳು ಎಂಬ ಎರಡು ವರ್ಗಗಳಲ್ಲಿ ಸಮೀಕರಿಸಿದೆ. ಮಹಾತ್ಮಗಾಂಧೀಜಿ, ಗೋಪಾಲಕೃಷ್ಣ ಗೋಖಲೆ, ಜವಾಹರಲಾಲ ನೆಹರು, ರಾಜೇಂದ್ರಪ್ರಸಾದ್, ಸರ್ದಾರವಲ್ಲಭ ಭಾಯಿ ಪಾಟೀಲ, ಮೌಲಾನ ಅಬ್ದುಲ್ ಕಲಾಮ್ ಆಜಾದ್‌ರಂತಹವರು ುಂದಗಾಮಿಗಳ ಗುಂಪಿನಲ್ಲಿದ್ದರೆ, ಸುಭಾಷಚಂದ್ರಬೋಸ್, ಚಿತ್ತರಂಜನದಾಸ್, ಲಾಲಾ ಲಜಪತ್‌ರಾಯ್, ಅರವಿಂದೋರಂತಹವರ ನೇತೃತ್ವದ ತೀವ್ರವಾದಿಗಳ ತಂಡ ಇನ್ನೊಂದು ಕಡೆ.
- ಎರಡೂ ತಂಡಗಳ ಗುರಿ ರಾಜಕೀಯ ಸ್ವಾತಂತ್ರ್ಯವನ್ನು ಭಾರತಕ್ಕೆ ತಂದುಕೊಡುವುದೇ ಆಗಿತ್ತು. ಆದರೆ ಮಾರ್ಗ ಮಾತ್ರ ಬೇರೆಯಾಗಿತ್ತು. ೧೯೨೦ರವರೆಗೆ ಸ್ವಾತಂತ್ರ್ಯಹೋರಾಟದ ಕರ್ಣ ಧಾರತ್ವವನ್ನು ವಹಿಸಿಕೊಂಡಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರು, ಭೌತಿಕ ದೇಹ ದಿಂದ *ನೇಪಥ್ಯಕ್ಕೆ ಸರಿದ ನಂತರ ಗಾಂಧೀಜಿಯವರೇ ಸ್ವಾತಂತ್ರ್ಯ ಹೋರಾಟದ ಚಕ್ಕಡಿಯ ನೊಗಕ್ಕೆ ಹೆಗಲುಕೊಟ್ಟರು.
ನೂರು ವರ್ಷಗಳಿಗಿಂತಲೂ ಹೆಚ್ಚಿನ ಭಾರತದ ರಾಜಕೀಯ ಸ್ವಾತಂತ್ರ್ಯದ ಚಳುವಳಿಗೆ ಒಂದು ಖಚಿತ ಸೈದ್ಧಾಂತಿಕ ಆಯಾಮ ದೊರತದ್ದು ಈ ಕಾಲಘಟ್ಟದಿಂದಲೇ. ಈ ತತ್ವಸಿದ್ಧಾಂತದ ನೆಲೆಗಟ್ಟು ದೊರೆತದ್ದು ಗಾಂಧೀಜಿಯವರಿಂದಲೇ. ಇದನ್ನು ಸ್ವತಃ ಅವರೇ, “…. ಸ್ವಾತಂತ್ರ್ಯಕ್ಕೆ ರಾಜಕೀಯ, ಆರ್ಥಿಕ ಮತ್ತು ನೈತಿಕ ಆಯಾಮಗಳು ಇವೆ” ಎಂದು ಹೇಳಿದರು. ಇದರ ಜೊತೆ ಜೊತೆಗೆ ಭಾರತವನ್ನು ದಾಸ್ಯಮುಕ್ತ ಮಾಡುವ ಪ್ರಯಾಣದಲ್ಲಿ ಸಶಸ್ತ್ರ ಸಂಗ್ರಾಮವನ್ನು ನಡೆಸುವ, ಕ್ಷಾತ್ರತೇಜಸ್ಸಿಲ್ಲದೇ ಧರ್ಮ ಊರ್ಜಿತವಾಗುವುದಿಲ್ಲ.
- ಧರ್ಮರಕ್ಷಣೆಗೆ ಹಿಂಸಾಚರಣೆ ನಿಷಿದ್ಧವಲ್ಲ ಎಂಬ ತೀವ್ರವಾದಿಗಳ ವಾದವೂ ಬೆಳೆದು ಬಂತು. ಇದನ್ನು ಮುಂದುಮಾಡಿ ತಿಲಕರು ಸ್ವಾತಂತ್ರ್ಯದ ಆತುರವನ್ನು ಮತ್ತು ತುಡಿತವನ್ನು ಜನಸಾಮಾನ್ಯರ ಮಾನಸದಲ್ಲಿ ಪ್ರಜ್ವಲಿಸಿದರು. ಇಟಲಿಯ ಮ್ಯಾಝಿನಿ ಎಂಬ ರಾಷ್ಟ್ರಪ್ರೇಮಿ ಹೇಳಿದ “ಹುತಾತ್ಮರ ರಕ್ತಬಲಿದಾನದಿಂದ ಪೋಷಿತವಾದ ರಾಷ್ಟ್ರಪರ ಭಾವನೆಗಳು ಬೇಗಫಲಕೊಡುತ್ತವೆ” ಎಂಬ ಕ್ಷಾತ್ರ ತೇಜಸ್ಸನ್ನು ಉದ್ದೀಪಿಸುವ ಮಾತಿನಿಂದ ಪ್ರೇರೇಪಿತರಾದ ಭಗತ್‌ಸಿಂಗ್, ರಾಜಗುರು, ಸುಖದೇವರಂತ ಯುವಕರು ಕ್ರಾಂತಿಮಾರ್ಗದಿಂದಲೇ ಸ್ವಾತಂತ್ರ್ಯಕ್ಕೆ ಸಮೀಪ ವಾಗುತ್ತೇವೆಂದು ಹೋರಾಟದ ಹಾದಿಯನ್ನೇ ಹಿಡಿದರು.
ಕ್ರಾಂತಿಯ ಹೋರಾಟ
[ಬದಲಾಯಿಸಿ]- ೧೯ನೇಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟೀಷ್ ಅಧಿಪತ್ಯಕ್ಕೆ ಒಳಗಾದನಂತರ ಸಶಸ್ತ್ರ ಕ್ರಾಂತಿಯಿಂದ ಕೂಡಿದ ರಕ್ತರಂಜಿತ ಹೋರಾಟ ನಿರಂತರವಾಗಿ ನಡೆದು, ಬ್ರಿಟೀಷ್ ಆಳರಸರಿಗೆ ನಿರಾತಂಕವಾಗಿ ಆಳಲು ಎಂದೂ ಅವಕಾಶವಾಗಲಿಲ್ಲ. ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಅಲ್ಲ. ನಮ್ಮ ದೇಶದ ಸಂಸ್ಕೃತಿಯ ಮೇಲಿನ ಅವರ ಆಕ್ರಮಣಶೀಲತೆಯನ್ನು ತಡೆಗಟ್ಟಲು ಈ ರಕ್ತರಂಜಿತ ಹೋರಾಟ ನಡೆದೇಯಿತ್ತು. ಆದರೆ ಅಹಿಂಸೆಯ ಹರಿಕಾರ ಗಾಂಧೀಜಿಯವರಿಗೆ ಹಿಂಸೆ, ಕೊಲೆ, ರಕ್ತಪಾತದ ಮೂಲಕ ದೊರೆಯುವ ಸ್ವರಾಜ್ಯ ಬೇಕಾಗಿರಲಿಲ್ಲ.
- ‘ಹಿಂಸೆಯಿಂದ ಸ್ವಾತಂತ್ರ್ಯ ದೊರೆಯುತ್ತದೆಂದಾದರೆ ಅಂತಹ ಸ್ವಾತಂತ್ರ್ಯ ಬೇಡವೇಬೇಡ’, ಎಂದು ಖಂಡತುಂಡವಾಗಿ ಹೇಳಿದರು. ‘ನಾವೆಲ್ಲ ಸ್ವಾತಂತ್ರ್ಯ ಹೋರಾಟ ಗಾರರು ಇಂಗ್ಲೀಷರನ್ನು ಹೊಡೆದು, ಬಡಿದು, ಕೊಂದು, ಸುಟ್ಟು, ಹೊರಹಾಕಿದ ಮೇಲೆ ಭಾರತದಲ್ಲಿ ಉಳಿಯವವರು ಯಾರು?’ (ಕೇವಲ ಕೊಲ್ಲುವವರೆ) ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಅವರ ಆ ನಿಲುವೇ ಭಾರತದ ರಾಜಕೀಯ ಸ್ವಾತಂತ್ರ್ಯದ ಹೋರಾಟಕ್ಕೆ ಅಹಿಂಸಾತ್ಮಕ ಭೂಮಿಕೆಯನ್ನು ನಿರ್ಮಿಸಿತು.
- ಮುಖ್ಯವಾಗಿ ನಮ್ಮ ರಾಜಕೀಯ ಹೋರಾಟ ದಲ್ಲಿ ಅಹಿಂಸೆಗೆ ಅಧಿಕೃತ ಮನ್ನಣೆ ದೊರೆತದ್ದು ೧೯೨೦ರ ನಂತರದ ದಿನಗಳಲ್ಲಿ. ಯಾಕೆಂದರೆ ಅಲ್ಲಿಂದ ಮುಂದೆ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯವರೇ ಚಾಲಕಶಕ್ತಿಯಾದರು. ಅಂತೆಯೇ ೧೯೨೦-೧೯೪೮ರ ಅವಧಿಯನ್ನು ಗಾಂಧೀಯುಗವೆಂದು ಕರೆಯುಲಾಗುತ್ತದೆ. ಅವರು ಭಾರತದ ರಾಜಕೀಯ ಹೋರಾಟದ ಸೂತ್ರವನ್ನು ತೆಗೆದುಕೊಳ್ಳುವ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಅಮಾನುಷವಾದ ವರ್ಣಬೇಧ ನೀತಿಯ ವಿರುದ್ಧ ಅಹಿಂಸಾತ್ಮಕ ಸತ್ಯಾಗ್ರಹ ಹೋರಾಟವನ್ನು ಸಂಘಟಿಸಿದರು.
- ಇಂದಿಗೆ ಅಂದರೆ ೨೦೦೭ರ ಅಕ್ಟೋಬರ್ ಗಾಂಧೀಜಿಯವರ ಸತ್ಯಾಗ್ರಹದ ಶತಮಾನೋತ್ಸವದ ಸರ್ವಕಾಲವೂ ಆಗಿದೆ. ಅಲ್ಲಿ ಪಡೆದ ಯಶಸ್ಸಿನಿಂದ ಪ್ರೇರಣೆ ಪಡೆದು ಇಲ್ಲಿಯೂ ಅದೇ ಅಹಿಂಸಾತ್ಮಕ ಅಸ್ತ್ರ ಯಶಸ್ವಿಯಾದೀತು ಎಂದು ಭಾವಿಸಿದರು. ಹೀಗೆ ತಿಲಕರ ನಿಧನದಿಂದ ಉಂಟಾಗಿದ್ದ ರಾಜಕೀಯ ಶೂನ್ಯವನ್ನು ಗಾಂಧೀಜಿಯವರು ತುಂಬಿದರು.
- ಆದರೆ ಗಾಂಧೀಜಿಯವರ ನೇತೃತ್ವದ ಅಹಿಂಸಾತ್ಮಕ ಸತ್ಯಾಗ್ರಹದ ದಿವ್ಯಾಸ್ತ್ರಕ್ಕೆ ಮಣಿದು ಬ್ರಿಟೀಷರು ಭಾರತದಿಂದ ನಿರ್ಗಮಿಸಿದರು ಎಂಬ ಸತ್ಯಸ್ಯಸತ್ಯ ಸಂಗತಿಯನ್ನು ಒಪ್ಪಿಕೊಳ್ಳದ ಒಂದು ಜನವರ್ಗವೂ ನಮ್ಮಲ್ಲಿದೆ. ಕೆಲವರಿಗೆ ಗಾಂಧೀಜಿ ಎಂದರೆ ಅಲರ್ಜಿ. ಸೂರ್ಯ ಮುಳುಗದ ಸಾಮ್ರಾಜ್ಯವಾಗಿದ್ದ ಬ್ರಿಟೀಷರು ಕೇವಲ ಗಾಂಧೀಜಿಯವರ ನಿರಾಯುಧ ಅಸ್ತ್ರವಾದ ಸತ್ಯಾಗ್ರಹಕ್ಕೆ ಹೆದರಿ ಸ್ವಾತಂತ್ರ್ಯ ಕೊಟ್ಟರೆಂಬುದು ಹಾಸ್ಯಸ್ಪದ ಎಂಬುದು.
- ಈಗ್ಗೆ ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದ ರಾಷ್ಟ್ರ ನಾಯಕರೊಬ್ಬರು ಭಗತ್‌ಸಿಂಗ್‌ರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಮಾತನಾಡುತ್ತ “ಭಗತ್‌ಸಿಂಗ್ ಅವರಂತಹ ಕ್ರಾಂತಿಕಾರಿಗಳಿಂದ ಬ್ರಿಟೀಷ್‌ರಲ್ಲಿ ನಿಜವಾದ ನಡುಕ ಉಂಟಾಯಿತು. ಇದರ ಹೊರತು ಅಹಿಂಸಾವಾದಿಗಳು ಮೂಗು ಹಿಡಿದು ಉಪವಾಸ ಕುಳಿತು ಕೊಂಡೇ ಇದ್ದಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ”, ಎಂದು ಅಪ್ಪಣೆ ಕೊಡಿಸಿದರು. ನಮ್ಮಲ್ಲಿ ಕೆಲವರಿದ್ದಾರೆ- ‘ನಾನು ಗಂಧೀಜಿಯವರ ವಿರುದ್ಧ ಮಾತನಾಡಿದೆ, ನಾನು ಅವರನ್ನು ಟೀಕಿಸಿದೆ’ ಎಂಬ ಆತ್ಮರತಿಯುಳ್ಳ ವಿಕಲ ಮನಸಿಜರು. *ಇಂತಹವರಿಗೆ ಒಂದು ಸತ್ಯ ಸಂಗತಿ ಗೊತ್ತಿಲ್ಲ. ಬ್ರಿಟೀಷರು ಗಾಂಧೀಜಿಯವರ ಬಡಕಲು ಶರೀರದ ಒಳಗಿದ್ದ ಪ್ರಚಂಡ ನೈತಿಕಶಕ್ತಿಗೆ ಅವರ ಆಧ್ಯಾತ್ಮಶಕ್ತಿಗೆ ಎಷ್ಟೊಂದು ಗೌರವ ಕೊಡುತ್ತಿದ್ದರೆಂದು ಪಂಜಾಬದ ಕೇಸರಿ ಎನಿಸಿ ಕೊಂಡಿದ್ದ ಲಾಲಾಲಜಪತ್‌ರಾಯರ ಎದೆಗೆ ಲಾಠಿ ಬೀಸಿ ಅವರು ರಕ್ತ ಕಾರುವಂತೆ ಮಾಡಿದ, ಅಸಂಖ್ಯಾತ ಕ್ರಾಂತಿಕಾರಿಗಳನ್ನು ನಿರ್ದಯವಾಗಿ ಗಲ್ಲುಗಂಬಕ್ಕೇರಿಸಿದ ಬ್ರಿಟೀಷರು ಗಾಂಧೀಜಿಯವರಿಗೆ ಒಂದು ಏಟು ಕೊಡಲಿಲ್ಲ. ಸಾಕಲ್ಲವೆ ಇದೊಂದೇ ನಿದರ್ಶನ.
- ಗಾಂಧೀಜಿಯವರ ದೈತ್ಯಶಕ್ತಿಗೆ ಆಂಗ್ಲರಿಂದ ಸಂದ ದೊಡ್ಡ ಗೌರವ ಅಹಿಂಸಾವಾದಿಗಳು ಮೂಗು ಹಿಡಿದುಕೊಂಡು ಕುಳಿತಿದ್ದರೆ ನಮಗೆ ಇಂದೂ ಸ್ವಾತಂತ್ರ್ಯಲಭಿಸುತ್ತಿರಲಿಲ್ಲ ಎಂದು ಬಾಲಿಷತನದಿಂದ ಹೇಳುವ ಮೂಲಕ ಪರೋಕ್ಷವಾಗಿ ಗಾಂಧೀಜಿಯವರನ್ನು ಮತ್ತು ಅವರ ತತ್ವಗಳನ್ನು ಅವಹೇಳನ ಮಾಡುವ ಇಂತಹ ಡೊಂಕುಬಾಲದ ನಾಯಕರ ಸಾಲಿಗೆ ಸೇರಿದ ಕೆಲವರು ಇತ್ತೀಚೆಗೆ ಹೆಚ್ಚಿಕೊಂಡಿದ್ದಾರೆ.
- ಸ್ವಾತಂತ್ರ್ಯದೊರೆತ ಆರು ತಿಂಗಳಲ್ಲಿ ಒಬ್ಬ ಹಂತಕನಿಂದ ರಾಷ್ಟ್ರಪಿತನ ಹತ್ಯೆಯಾದಾಗ ಇನ್ನು ಜೀವಿತದಲ್ಲಿದ್ದ ಇಂಗ್ಲೆಂಡದ ಹಿಂದಿನ ಪ್ರಧಾನಿ ಗ್ಲೆವಿನ್ಸ್ಟನ್ ಚರ್ಚಿಲ್ ಹೀಗೆ ಉದ್ಗಾರ ತೆಗೆದರು. “ಇಡೀ ಜಗತ್ತೇ ಗೌರವಿಸುವ ಗಾಂಧೀಜಿಯವರನ್ನು ನಾವು ಇಷ್ಟು ವರ್ಷ ಗೌರವಿಸಿ ರಕ್ಷಿಸಿದೆವು. ಅಂತಹ ಒಬ್ಬ ಮಹಾನ್‌ವ್ಯಕ್ತಿಯನ್ನು ಆರು ತಿಂಗಳಲ್ಲಿ ಕೊಂದು ಹಾಕಿದಿರಿ” ಇದಕ್ಕೆ ನಮ್ಮಲ್ಲಿ ಉತ್ತರವಿದೆಯೇ? ನಾವು ಜಗತ್ತಿನ ಮುಂದೆ ಎಷ್ಟೊಂದು ಕುಬ್ಜರಾಗಿ ಹೋದೆವಲ್ಲ.
- ಅಪಾರ ಸೇನಾಬಲ ಹೊಂದಿದ್ದ ಬ್ರಿಟೀಷರೊಡನೆ ನಾವು ನಿರಂತರ ಶಸ್ತ್ರಾಸ್ತ್ರ ಹೋರಾಟಕ್ಕಿಳಿದಿದ್ದರೆ ಇಂದಿನ ತನಕ ನಾವು ಅವರ ಜೊತೆಗೆ ಹೆಣಗಬೇಕಾಗಿ ಬರುತ್ತಿತ್ತೇನೋ! ನಾವು ಹಿಂಸೆಯನ್ನು ವಿರೋಧಿಸಬಹುದು. ಕೆಟ್ಟದ್ದನ್ನು ಎದುರಿಸಬಹುದು. ಅನೀತಿಯನ್ನು ಹತ್ತಿಕ್ಕ ಬಹುದು. ಆದರೆ ಒಳ್ಳೆಯದನ್ನು, ಅಹಿಂಸೆಯನ್ನು ನೈತಿಕತೆಯನ್ನು ಹೇಗೆ ಎದುರಿಸುವುದು? ಇಂತಹ ಒಂದು ಸಣ್ಣ ಸತ್ಯ ನಿಮ್ಮ ಕೆಲವು ಸ್ವಘೋಷಿತ ದೇಶಭಕ್ತರಿಗೆ ಹೊಳೆಯದಿರುವುದು ದುರಂತವಲ್ಲವೇ? ಭಗತ್‌ಸಿಂಗ್‌ರಂತಹ ತ್ಯಾಗ ಬಲಿದಾನ ಸಾಮಾನ್ಯವಲ್ಲ.
- ಸುಭಾಸ್‌ಚಂದ್ರ ಬೋಸ್, ಭಗತ್‌ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಎಲ್ಲ ಭಾರತೀಯರು ತುಂಬು ಹೃದಯದಿಂದ ಗೌರವಿಸುತ್ತಾರೆ. ಆದರೆ ಗಾಂಧೀಜಿಯವ ರಂತಹ ಅಹಿಂಸಾವಾದಿಗಳು ನಡೆಸಿದ ಸ್ವಾತಂತ್ರ್ಯ ಹೋರಾಟವನ್ನು ರಾಷ್ಟ್ರವಾದಿ ಹೋರಾಟವೇ ಅಲ್ಲವೆಂದು ಹಗುರವಾಗಿ ಮಾತನಾಡುವುದು ಮೂಢಮತಿೆಯಾಗುವುದಿಲ್ಲವೆ?
ಅಹಿಂಸಾ ತತ್ವ್ತ
[ಬದಲಾಯಿಸಿ]- ಹಿಂಸೆ ಹಿಂಸೆಯನ್ನೇ ಹುಟ್ಟಿಸುತ್ತದೆ. ಅಸತ್ಯ ಅಸತ್ಯವನ್ನೇ ಹುಟ್ಟು ಹಾಕುತ್ತದೆ. ದ್ವೇಷ ದ್ವೇಷವನ್ನೇ ಹುಟ್ಟಿಸುತ್ತದೆ. ಅಶಾಂತಿಯಿಂದ, ಸತ್ಯಗಳಿಂದ ಮಾತ್ರ ಗೆಲ್ಲಲು ಸಾಧ್ಯ. ಇದನ್ನು ಸಾಧ್ಯಮಾಡಿಕೊಟ್ಟವರು ಗಾಂಧೀಜಿ. ಗಾಂಧೀವಾದವನ್ನು ಗಾಂಧೀಜಿಯವರ ವ್ಯಕ್ತಿತ್ವವನ್ನು ಅವರು ಚಿಂತನೆ ಮಾಡಿ ನಂಬಿ ಬದುಕಿನ ತತ್ವಾದರ್ಶಗಳನ್ನು ಇಷ್ಟು ದೀರ್ಘ ವಾಗಿ ವಿಶ್ಲೇಷಣೆ ಮಾಡುವುದು ಅಗತ್ಯವಾಗಿದೆ. ಯಾಕೆಂದರೆ ಅವರ ಇಡೀ ಬದುಕು ಭಾರತದ ರಾಜಕೀಯ ಸ್ವಾತಂತ್ರ್ಯದೊಡನೆ ತಳುಕುಹಾಕಿಕೊಂಡಿದೆ.
- ಭಾರತದ ಸಂದರ್ಭದಲ್ಲಿ ಮಾತ್ರವಲ್ಲ ಜಗತ್ತಿನ ದೃಷ್ಟಿಯಲ್ಲಿ ಗಾಂಧೀಜಿಯವರು ಕೇವಲ ಒಬ್ಬ ವ್ಯಕ್ತಿ ಮಾತ್ರವಲ್ಲ. ಅವರು ಒಂದು ನೈತಿಕ ಮೌಲ್ಯದ ಪ್ರತೀಕ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿ ಯವರು ಕೊಟ್ಟ ಅಹಿಂಸಾತ್ಮಾಕ ಆಯಾಮ ಸತ್ಯಾಗ್ರಹದಿಂದಲೇ ಸ್ವಾತಂತ್ರ್ಯಲಭ್ಯವಾಗಬೇಕು ಎಂಬ ಅವರ ಧ್ಯೇಯಗಳು ಸರಳವಾಗಿ ಮರೆಯುವಂತಹುಗಳಲ್ಲ.
- ಸಾವಿರ ಮೈಲುಗಳ ಪ್ರಯಾಣ ಪ್ರಾರಂಭವಾಗುವುದು ಪ್ರಥಮ ಹೆಜ್ಜೆಯಿಂದಲೇ ಎಂಬಂತೆ ಭಾರತದ ರಾಜಕೀಯ ಸ್ವಾತಂತ್ರ್ಯದ ಸಂಗ್ರಾಮವೂ ಕೂಡ ಒಂದು ಸಣ್ಣ ಸಂಗತಿಯಿಂದಲೇ ಪ್ರಾರಂಭವಾಗಿದೆ. ಈ ಕ್ರಾಂತಿ ಮೊಟ್ಟಮೊದಲು ಕಿಡಿಯಾಗಿ ಸಿಡಿದದ್ದು ಸೈನಿಕರ ಚಾವಡಿಯಲ್ಲಿ. ಅದು ೧೮೫೭ನೆಯ ಇಸವಿ ಅದನ್ನು ಯಾರು ಯಾವುದೇ ಹೆಸರಿನಿಂದ ಕರೆಯಲಿ ಅದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಬರಾಕ್‌ಪುರದ ಸೇನಾಛಾವಣಿಯಲ್ಲಿ ಮಾರ್ಚ್ ೨೯, ೧೮೫೭ರಂದು ಮಂಗಲ ಪಾಂಡೆಯ ನೇತೃತ್ವದಲ್ಲಿ.
- ಕ್ರಾಂತಿಯ ಕಿಡಿ ಮುಂದೆ ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆಯಾಗಿ ಪರಿಣಮಿಸಿತು. ಸೈನಿಕರಿಗೆ ಪೂರೈಸಲಾದ ಹೊಸ ಕಾಡತೂಸುಗಳನ್ನು ಬಳಸುವ ವಿಚಾರದಲ್ಲಿ ಈ ಕ್ರಾಂತಿಯ ಕಿಡಿ ಸಿಡಿಮದ್ದಿನ ಉಗ್ರಾಣಕ್ಕೆ ಬಡಿದಂತಾಗಿದೆ. ಈ ಕ್ರಾಂತಿ ಕೇವಲ ಸಿಪಾಯಿಗಳಿಗೆ ಮಾತ್ರ ಸೀವಿತವಾಗಿರಲಿಲ್ಲ. ಅದರಲ್ಲಿ ಜನಸಾಮಾನ್ಯರೂ ಪಾಲ್ಗೊಂಡಿದ್ದರು ಎಂದು ಸಮಕಾಲೀನ ಬ್ರಿಟೀಷ್ ಲೇಖಕ ಜಸ್ಟಿಸ್ ಮೆಕಾರ್ದಿ ಹೇಳಿದ್ದಾನೆ “…. ಬ್ರಿಟೀಷ್ ಆಡಳಿತದ ವಿರುದ್ಧ ದೇಶೀಯ ಜನಾಂಗಗಳು ದಂಗೆಯೆದ್ದಿರುವುದು ಸತ್ಯ.
- ದಂಗೆಯೆದ್ದಿರುವವರು ಕೇವಲ ಸಿಪಾಯಿಗಳಷ್ಟೇ ಅಲ್ಲ. ಅದು ಸೈನಿಕಬಂಡಾಯವಂತೂ ಖಂಡಿತವಲ್ಲ. ಇದೊಂದು ಬ್ರಿಟೀಷ್ ಆಡಳಿತದ ವಿರುದ್ಧ ಪುಟಿದೆದ್ದ ದ್ವೇಷ, ಧಾರ್ಮಿಕ ಮತಾಂಧತೆ ಮತ್ತು ಸೈನಿಕರಲ್ಲಿನ ಅತೃಪ್ತಿ ಇವೆಲ್ಲದರ ಒಟ್ಟು ಪರಿಣಾಮ ವಾಗಿತ್ತು. ದೇಶೀಯ ರಾಜರುಗಳು ಮತ್ತು ದೇಶೀಯ ಸೈನಿಕರೂ ಇದರಲ್ಲಿ ಭಾಗವಹಿಸಿ ದ್ದರು…” ಎಂದು ಮೆಕಾರ್ಥಿ ದಾಖಲಿಸಿದ್ದಾನೆ.
ಬಂಡಾಯದ ಉದಾತ್ತ ಧ್ಯೇಯ
[ಬದಲಾಯಿಸಿ]- ಈ ಸ್ವಾತಂತ್ರ್ಯ ಚಳವಳಿಗೆ ವ್ಯಾಪಕವಾದ ಜನಬೆಂಬಲವೂ ಇತ್ತು. ಜನಸಾಮಾನ್ಯರಿಗೂ ಕೂಡಾ ಇದೊಂದು ಉದಾತ್ತ ಧ್ಯೇಯವಾಗಿತ್ತು. “ಮಾರೋ ಫಿರಂಗಿ ಕೋ” ಎಂಬ ಜನರ ಉದ್ಘೋಷದಲ್ಲಿ ಬ್ರಿಟೀಷರ ವಿರುದ್ಧ ತೀವ್ರ ಕೋಪದ, ದ್ವೇಷದ, ಆಕ್ರೋಶದ ಭಾವನೆ ತುಂಬಿತ್ತು. ನೇಪಾಳದಲ್ಲಿ ತಲೆಮರೆಸಿಕೊಂಡಿದ್ದ ಕ್ರಾಂತಿಯ ಅಧ್ವರ್ಯ ನಾನಾಸಾಹೇಬ ಪೇಶ್ವೆ ಸ್ವದೇಶ ರಕ್ಷಣೆಯ ಸಲುವಾಗಿಯೇ ಯುದ್ಧ ಆರಂಭವಾಯಿತು ಎಂದಿದ್ದಾನೆ.
- ಮೊಗಲ ವಂಶದ ಕೊನೆಯ ಬಾದಶಹ “ಬಹಾದ್ದೂರ ಶಾಹ” ನಾವೆಲ್ಲ ದೇಶೀಯ ಸಂಸ್ಥಾನಿಕರು ಒಂದುಗೂಡಿ ಓರ್ವ ವಿದೇಶೀ ವೈರಿಯ ಜತೆ ಖಡ್ಗಹಿಡಿದು ಯುದ್ಧ ಮಾಡಬೇಕು. ಒಮ್ಮೆ ವೈರಿಯು ನಮ್ಮ ಗಡಿಯಾಚೆ ಹೋದಮೇಲೆ ನಾವೆಲ್ಲ ರಾಜರು ಸೇರಿ ಒಂದು ಗೂಡಿ ಒಂದು ಕೂಟ ರಚಿಸಿ ಆಯ್ಕೆ ಮಾಡಿರುವವರ ಕೈಗಳಿಗೆ ದೇಶದ ಆಧಿಪತ್ಯದ ಎಲ್ಲ ಹಕ್ಕುಗಳನ್ನು ನಾನು ಒಪ್ಪಿಸಲು ಸಿದ್ಧನಿರುವುದನ್ನು ನೀವೇ ನೋಡವಿರಂತೆ ಎಂದು ಇನ್ನುಳಿದ ಸಂಸ್ಥಾನಿಕರಿಗೆ ಪತ್ರ ಬರೆದಿದ್ದ.
- ಈ ಪತ್ರದ ಧಾಟಿನೋಡಿದರೆ ಈ ಕ್ರಾಂತಿಯ ಹಿಂದೆ ಎಲ್ಲರೂ ಸಂಘಟಿತರಾಗಿ ಬ್ರಿಟೀಷರನ್ನು ಹೊರಹಾಕಿ ಸ್ವತಂತ್ರರಾಗೋಣ ಎಂಬ ಸ್ಪಷ್ಟ ಉದ್ದೇಶವಿತ್ತು ಎಂಬುದು ಸ್ಪಷ್ಟವಾಗುತ್ತದೆ. ಹೀಗೆ ಪ್ರಾರಂಭದ ಯೋಜನೆಯಂತೆ ಈ ಸಮರ ೧೮೫೭ ಮೇ ೩೧ರಂದು ಏಕಕಾಲಕ್ಕೆ ಆರಂಭ ವಾಗಬೇಕಿದ್ದರೂ ಮಂಗಲ ಪಾಂಡೆ ಮಾರ್ಚ್ ೨೯ರಂದೇ ಸಿಡಿಸಿದ ಮೊದಲ ಕಿಡಿಯಿಂದ ಮೊದಲ್ಗೊಂಡು ನಿರಂತರ ಪ್ರವಾಹವಾಗಿ ಪ್ರವಹಿಸಿ ೧೯೪೭ರವರೆಗಿನ ಸುದೀರ್ಘ ಸ್ವಾತಂತ್ರ್ಯ ಸಮರ ಅನೇಕ ಮೈಲುಗಳನ್ನು ಒಳಗೊಂಡಿದೆ.
- ಈ ಕ್ರಾಂತಿಕಾರಿಗಳ ಸೇನಾಪತಿ ಯಾಗಿದ್ದ ತಾತ್ಯಾಟೋಪಿ, ನಾನಾಸಾಹೇಬ ಪೇಶ್ವೆ, ಬ್ರಿಟೀಷರ ಪ್ರತಿಷ್ಠೆಗೆ ಸವಾಲೆಸೆದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಇವರೆಲ್ಲ ಕ್ರಾಂತಿಯಧ್ವಜ ಹಾರಿಸಿದರು. ಇಂತಹ ಹೊತ್ತಿನಲ್ಲಿ ಇದೇ ಸ್ವಾತಂತ್ರ್ಯಪ್ರಾಪ್ತಿಗಾಗಿ ದಕ್ಷಿಣದ ಕರ್ನಾಟಕದಲ್ಲಿ ವೀರಮಹಿಳೆ ಕಿತ್ತೂರ ಚೆನ್ನಮ್ಮ, ಯತ್ತವಳ್ ದಳವಾಯಿ, ವೀರಸಂಗೊಳ್ಳಿರಾಯಣ್ಣ, ೧೮೨೪ರಲ್ಲಿಯೇ ಬ್ರಿಟೀಷರ ವಿರುದ್ಧ ಝಳಪಿಸಿದ ಕತ್ತಿಯ ಕಥೆ ಇತಿಹಾಸದ ಪುಟಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ದಾಖಲಾಗಲೇ ಇಲ್ಲ. ಇದು ವಿಚಿತ್ರವಾದರೂ ಸತ್ಯ.
- ೧೮೨೪ರಷ್ಟು ಹಿಂದೆಯೇ ಲಾರ್ಡ್‌ಡಾಲ್‌ಹೌಸಿ ತಂದ ದತ್ತಕ ರದ್ದತಿ ಕಾಯ್ದೆಯ ಸಿಂಧುತ್ವವನ್ನೇ ಪ್ರಶ್ನಿಸಿ ಸ್ವಧರ್ಮ ರಕ್ಷಣೆಯ ಸ್ವಾಭಿಮಾನ ಪ್ರದರ್ಶಿಸಿದ್ದು ಚರಿತ್ರೆಯಲ್ಲಿ ನಗಣ್ಯವೆನಿಸಬಾರದಿತ್ತು. ಪ್ರಾಯಶಃ ಒಬ್ಬಳೇ ಬಂಡೆದ್ದಳೆಂದೋ ಏನೋ ಇತಿಹಾಸಕಾರರು ಕಿತ್ತೂರಿನ ಚೆನ್ನಮ್ಮನ, ಅಲ್ಲ ಚೆನ್ನಮ್ಮನ ಕಿತ್ತೂರಿನಲ್ಲಿ ನಡೆದ ಈ ಸ್ವಾತಂತ್ರ್ಯ ಸಂಗ್ರಾಮವನ್ನು ಅಷ್ಟಾಗಿ ಗಮನಿಸಲಿಲ್ಲ.
- ಹಾಗೆ ನೋಡಿದರೆ ೧೮೨೪ರ ಈ ಪ್ರಥಮ ಹೋರಾಟ ಭಾರತದ ರಾಜಕೀಯ ಸ್ವಾತಂತ್ರ್ಯದ ಇತಿಹಾಸದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ದಾಖಲಾಗುವ ಎಲ್ಲ ಅರ್ಹತೆಗಳನ್ನು ಹೊಂದಿತ್ತು. ಆದರೆ ಉತ್ತರದವರ ಕಣ್ಣಿಗೆ ಇದು ಕಾಣಲಿಲ್ಲ. ಸ್ವಾತಂತ್ರ್ಯ ಚಳವಳಿಯ ಹೆಜ್ಜೆಯ ಗುರುತುಗಳಲ್ಲಿ ಕಿತ್ತೂರು ಗುರುತಿಸಿಕೊಳ್ಳಲಿಲ್ಲವೆಂಬುದು ಒಂದು ವಿಷಾದಯೋಗವಾಗಿ ಉಳಿದೇ ಬಿಡುತ್ತದೆ.
- ಮತ್ತೆ ಸ್ವಾತಂತ್ರ್ಯ ಹೋರಾಟದ ಉದ್ಘೋಷ, ಝಾನ್ಸಿರಾಣಿ, ತಾತ್ಯಾಟೋಪಿ, ನಾನಾ ಸಾಹೇಬರ ಹಿನ್ನಡೆಯ ನಂತರದ ಸ್ವಲ್ಪಕಾಲ ಶಾಂತವಾಗಿದ್ದ ಹೋರಾಟ ಬಾಲಗಂಗಾಧರ ತಿಲಕರ ಆಗಮನದಿಂದ ಮತ್ತೆ ಪ್ರಖರತೆ ಪಡೆದಿದೆ. ‘ಕೇಸರಿ ಕಿಡಿ’ ‘ಮರಾಠಾ’ದಂತಹ ಪತ್ರಿಕೆಗಳ ಮೂಲಕ ಕ್ರಾಂತಿಯ ಕಿಡಿ ಆರದಂತೆ ನೋಡಿಕೊಂಡರು. ‘ಸ್ವಾತಂತ್ರ್ಯವನ್ನು ಜನ್ಮಸಿದ್ಧ ಹಕ್ಕು’ ಎಂದು ಪಾಂಚಜನ್ಯ ಮೊಳಗಿಸಿ ಯುದ್ಧ ನಿಶ್ಚಯವೆಂಬ ವಾತಾವರಣ ಮೂಡಿಸಿದರು.
ಜೇನುಗೂಡಿಗೆ ಕಲ್ಲು ಹೊಡೆಯುವ ಪ್ರಸಂಗ
[ಬದಲಾಯಿಸಿ]- ೨೦ನೆಯ ಶತಮಾನದ ಆರಂಭದಲ್ಲಿ ಅವಿಭಕ್ತ ಬಂಗಾಲ ಕ್ರಾಂತಿಕಾರಿಗಳ ಜೇನುಗೂಡಾಗಿತ್ತು. ಈ ಜೇನುಗೂಡಿಗೆ ಕಲ್ಲು ಹೊಡೆಯುವಂತೆ ಆಗಿನ ವೈಸರಾಯ್ ಆಗಿದ್ದ ಲಾರ್ಡ್ ಕರ್ಜನ್ ೧೯೦೫ ಜುಲೈ ೨೦ರಂದು ಬಂಗಾಲ ವಿಭಜನೆ ಮಾಡಿದ. ಪ್ರತಿಭಟನೆಯು ಉಗ್ರವಾಗಿ ಬಂಕಿಮ ಚಂದ್ರ ಚಟರ್ಜಿಯವರ ಆನಂದಮಠ ಕಾದಂಬರಿಯ ‘ವಂದೇ ಮಾತರಂ’ ಗೀತೆ ರಣಗೀತೆಯಾಯಿತು. ಪರಿಣಾಮವಾಗಿ ಅಕ್ಟೋಬರ ೧೬, ೧೯೦೫ರಂದು ಮತ್ತೆ ಬಂಗಾಲ ಒಂದಾಯಿತು. ಅಲ್ಲಿಂದ ಪ್ರಾರಂಭವಾಗುವುದು ಅರವಿಂದರ ಅಭಿಯಾನ.
- ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣಪಡೆದು ಪ್ರತಿಭಾವಂತ ವಿದ್ಯಾರ್ಥಿಯಾಗಿ ಐ.ಸಿ.ಎಸ್. ಪದವಿಪಡೆದು ಭಾರತಕ್ಕೆ ಮರಳಿದರು. ಬರೋಡ ಮಹಾರಾಜ ಸಯ್ಯಜಿರಾವ್ ಗಾಯಕವಾಡ್ ಅರವಿಂದರನ್ನು ತಮ್ಮ ದಿವಾನರನ್ನಾಗಿ ನೇಮಿಸಿಕೊಂಡರು. ಆದರೆ ತಿಲಕರ ಹಾಗೂ ಸೋದರಿ ನಿವೇದಿತಾರವರ ಪ್ರೇರಣೆಯಿಂದ ಉದ್ಯೋಗ ತ್ಯಜಿಸಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ‘ವಂದೇ ಮಾತರಂ’ ಪತ್ರಿಕೆ ಪ್ರಾರಂಭಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದರು. ತೀವ್ರಗಾಮಿ ಪಂಥದ ಅರವಿಂದ ಘೋಷರು ಸಶಸ್ತ್ರ ಕ್ರಾಂತಿಯ ಹರಿಕಾರರೇ ಆಗಿದ್ದರು.
- ನಂತರದ ಕ್ರಾಂತಿಕಾರಿ ಹೋರಾಟ ವೀರ ಸಾವರಕರ ಅವರದ್ದು. ಸಶಸ್ತ್ರ ಕ್ರಾಂತಿಯಿಂದಲೇ ಸ್ವಾತಂತ್ರ್ಯ ಪ್ರಾಪ್ತಿ ಬೇಗ ಲಭಿಸುತ್ತದೆ ಎನ್ನುವ ನಂಬಿಕೆ ಸಾವರಕರ ಅವರದಾಗಿತ್ತು. ಬ್ರಿಟೀಷ್ ಚಕ್ರವರ್ತಿ ಏಳನೆಯ ಎಡ್ವರ್ಡ್‌ನ ಪಟ್ಟಾಭಿಷೇಕದ ಸಮಯದಲ್ಲಿ ಒಂದು ಕಡೆ ಸಂಭ್ರಮದ ಸಮಾರಂಭಗಳು ನಡೆಯುತ್ತಿದ್ದಾಗ, ವಿನಾಯಕ ಸಾವರಕರ ಗುಲಾಮಿ ಪ್ರವೃತ್ತಿಯಲ್ಲಿ ಆನಂದಪಡುವಂತಹ ನಿರ್ಲಜ್ಜತನದ ಮನೋಭಾವ ತ್ಯಜಿಸುವಂತೆ ನಾಸಿಕದ ತುಂಬ ಭಿತ್ತಿ ಪತ್ರಗಳ ಮೂಲಕ ಜನಜಾಗೃತಿ ಮಾಡುತ್ತಿದ್ದರು.
- ಇಲ್ಲಿಂದ ಇನ್ನೊಂದೇ ರಕ್ತರಂಜಿತ ಅಧ್ಯಾಯ. ಪಂಜಾಬದ ಕೇಸರಿ ಎನಿಸಿದ್ದ ವಯೋ ವೃದ್ಧ ಲಾಲಾಲಜಪತ್‌ರಾಯರ ಧಾರುಣ ಸಾವಿಗೆ ಕಾರಣನಾಗಿದ್ದ ಸ್ಟ್ಯಾಂಡರ್ಸ್‌ಎಂಬ ಪೋಲಿಸ್ ಅಧಿಕಾರಿಯನ್ನು ಗುಂಡಿಟ್ಟು ಕೊಂದ ಕೃತ್ಯದಲ್ಲಿ ಭಾಗಿಯಾಗಿದ್ದು ಭಗತ್‌ಸಿಂಗ್, ರಾಜಗುರು, ಸುಖದೇವ, ಆಜಾದ್ ಜಯಗೋಪಾಲರವರನ್ನು ಸರಕಾರ ಬಂಧಿಸಿತು. ವಿಚಾರಣೆಯೆಂಬ ಪ್ರಹಸನ. ೧೯೩೦ ಅಕ್ಟೋಬರ ೭ರಂದು ತೀರ್ಪುಹೊರಬಂದಿತು. ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವರಿಗೆ ಗಲ್ಲುಶಿಕ್ಷೆ.
- ೧೯೩೧ ಮಾರ್ಚ್ ೨೩ರಂದು ಮೂರೂ ಕ್ರಾಂತಿಕಾರಿಗೆಳೆಯರು ಸ್ವಾತಂತ್ರ್ಯಕ್ಕಾಗಿ ಮೃತ್ಯು ದೇವತೆಯನ್ನು ವೀರೋಚಿತ ವಾಗಿಯೆ ಸ್ವೀಕರಿಸಿ ಅಮರರಾದರು. ಇಷ್ಟೆಲ್ಲ ಹೋರಾಟ, ಕ್ರಾಂತಿ, ರಕ್ತತರ್ಪಣ, ಗಲ್ಲು, ಬಂಡಾಯ ಎಲ್ಲ ಒಮ್ಮೆಲೇ ನಿಂತಂತೆ ತಣ್ಣನೆಯ ಗಾಂಧೀಯುಗದ ಶಾಂತಿ ಪರ್ವ ಮೊದಲಾಗುವುದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಮಹತ್ವದ ತಿರುವು. ಸಶಸ್ತ್ರ ಹೋರಾಟದ ಬೋರ್ಗರೆತ ಥಟ್ಟನೆ ನಿಂತು ತಂಪಾದ ಮಂದಮಾರುತ ಬೀಸಿದ ಅನುಭವ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಸಾರಥ್ಯ ವಹಿಸಿಕೊಂಡಾಗ.
- ಇಲ್ಲಿಂದ ಮುಂದಿನ ಸ್ವಾತಂತ್ರ್ಯ ಹೋರಾಟ ಒಂದು ಸುಂದರ ಭಾವಗೀತೆಯಿದ್ದಂತೆ. ಬಾಲಗಂಗಾಧರನಾಥ ತಿಲಕರ ನಿಧನಾನಂತರ ಕೇವಲ ಕಾಂಗ್ರೆಸ್ಸಿನ ನಾಯಕತ್ವಮಾತ್ರವಲ್ಲ ಸ್ವಾತಂತ್ರ್ಯ ಚಳುವಳಿಯ ಧುರೀಣತ್ವ ಗಾಂಧೀಜಿಯವರ ಹೆಗಲೇರಿತು. ೧೯೨೦ರಲ್ಲಿ ಖಿಲಾಫತ್ ಚಳುವಳಿ ಯನ್ನು ಬೆಂಬಲಿಸುವ ನಿಲುವನ್ನು ಕೈಕೊಂಡರು. ಹೀಗೆ ಸುಮಾರು ಎರಡೂವರೆ ದಶಕಗಳ ಕಾಲ ಅವರ ನಾಯಕತ್ವ ಅನೂಚಾನವಾಗಿ ನಡೆಯಿತು.
ಚಳುವಳಿಗಳ ಬೆಂಬಲ
[ಬದಲಾಯಿಸಿ]- ಈ ಅವಧಿಯ ಪ್ರಮುಖ ಘಟನೆಗಳೆಂದರೆ ೧೯೨೦ರ ಅಸಹಕಾರ ಚಳುವಳಿ, ೧೯೨೨ರ ಚೌರಾಚೌರಿ ಹಿಂಸಾಕಾಂಡ, ಉಪ್ಪಿನ ಸರಣೀ ಉಪವಾಸ ಸತ್ಯಾಗ್ರಹಗಳು. ಈ ಅವಧಿಯ ಇನ್ನೊಂದು ಅತ್ಯಂತ ಪ್ರಮುಖ ಮೈಲಿಗಲ್ಲು ಎಂದರೆ ಭಾರತಬಿಟ್ಟು ತೊಲಗಿ ಚಳುವಳಿ. ೧೯೪೨ರ ಆಗಸ್ಟ್ ಕ್ರಾಂತಿ ಮುಂಬಯಿಯ ಕ್ರಾಂತಿ ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರು “ಬ್ರಿಟೀಷರ ದಬ್ಬಾಳಿಕೆಯನ್ನು ಭಾರತದ ಜನತೆ ಇನ್ನು ಸಹಿಸದು” ಎಂದು ಗುಡುಗಿದರು.
- ಆಗಸ್ಟ್‌ನ ಸಭೆಯಲ್ಲಿ ಗಾಂಧೀಜಿಯವರು ತಮ್ಮ ಭಾಷಣದಲ್ಲಿ, “ಬ್ರಿಟೀಷರೇ, ಭಾರತ ಬಿಟ್ಟು ತೊಲಗಿ” ಎಂದು ಎಚ್ಚರಿಕೆ ಕೊಡುವುದರ ಜೊತೆಗೆ, ಭಾರತೀಯರಿಗೆ ‘ಮಾಡು ಇಲ್ಲವೇ ಮಡಿ’ ಎಂಬ ಕರೆನೀಡಿ ಹೋರಾಟವನ್ನು ಇನ್ನಷ್ಟು ಹುರಿಗೊಳಿಸಿದರು. ಆಗಸ್ಟ್ ೯ರ ಕ್ರಾಂತಿಯ ಕಹಳೆ ಕೇವಲ ಮುಂಬಯಿಯಲ್ಲಿ ಮಾತ್ರವಲ್ಲ, ಭಾರತ ದುದ್ದಕ್ಕೂ ಮೊಳಗಿತು. ಹರತಾಳ, ಪ್ರತಿಭಟನೆ, ಮೆರವಣಿಗೆ, ಘೋಷಣೆಗಳು, ಶಾಲಾ ಕಾಲೇಜುಗಳ ಬಹಿಷ್ಕಾರ, ವಿದೇಶೀ ವಸ್ತು ದಹನ ಹೀಗೆ ಅಬಾಲವೃದ್ಧರಾಗಿ ದೇಶಾದ್ಯಂತ ಹೋರಾಟ ಹರಳುಗಟ್ಟಿತು.
- ಸತ್ಯಾಗ್ರಹಿಗಳ ಮೇಲೆ ಪೋಲೀಸರು ಲಾಠಿ ಬೀಸಿದರೂ, ಅಶ್ರುವಾಯು ಪ್ರಯೋಗನಡೆಸಿದರೂ ಗಾಂಧೀಜಿಯವರ ಆಶಯದಂತೆ ಹೋರಾಟ ಮಾತ್ರ ಅಹಿಂಸಾತ್ಮಕವಾಗಿಯೇ ನಡೆಯಿತು. ಆದರೂ ಅಲ್ಲಲ್ಲಿ ಹೋರಾಟಗಾರರು ಆಕ್ರೋಶ, ಆರ್ಭಟ, ಆವೇಶ, ಪ್ರತೀಕಾರದ ಪ್ರತೀಕವಾಗಿ ಹಿಂಸಾತ್ಮಕ ಘಟನೆಗಳು ನಡೆದವು.
- ಈ ಅವಧಿಯಲ್ಲಿ ಜಯಪ್ರಕಾಶ ನಾರಾಯಣ, ರಾಮಮನೋಹರ ಲೋಹಿಯಾ, ಅಚ್ಯುತ ಪಟವರ್ಧನ, ಅರುಣಾ ಅಸಫ ಅಲಿ, ಸಾನೆ ಗುರೂಜಿ ಮುಂತಾದ ವಿಚಾರವಾದಿ ಚಿಂತಕರು ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾದ ಮಾರ್ಗದರ್ಶನ ನೀಡುತ್ತಿದ್ದರು. ಈ ನಡುವೆ ನಾಡಿನಾದ್ಯಂತ ಪತ್ರಿಕೆಗಳು ಚಲೇಜಾವ್ ಚಳುವಳಿಗೆ ಬೆಂಬಲವಾಗಿ ನಿಂತದ್ದು ಒಂದು ಮಹತ್ವದ ಅಂಶ. ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ, ವಿಶ್ವಕರ್ನಾಟಕ, ತಾಯಿನಾಡು ದಂತಹ ಪತ್ರಿಕೆಗಳು ಮಹತ್ವದ ಪಾತ್ರವಹಿಸಿದವು.
- ಜೊತೆಗೆ ನಡೆದ ಸವಿನಯ ಕಾನೂನುಭಂಗ ಚಳುವಳಿ, ಕರನಿರಾಕರಣೆ, ಮುಂತಾದ ಸತ್ಯಾಗ್ರಹ ಸಂಬಂಧಿ ಚಳುವಳಿಗಳು ಬ್ರಿಟೀಷರಿಗೆ ಅಸಹನೀಯ ವಾತಾವರಣ ಸೃಷ್ಟಿಸಿ ್ವಾತಂತ್ರ್ಯನಮಗೆ ಸಮೀಪವಾಗುವಂತೆ ಮಾಡಿದವು. ಇಂತಹ ಸಂಭ್ರಮದ ಸನ್ನಿವೇಶದಲ್ಲಿಯೇ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆ ಗಾಂಧೀಜಿಯಂತಹವರಿಗೆ ಇರಿಸು ಮುರುಸಾಯಿತು.
- ಜಿನ್ನಾರವರ ಪ್ರತ್ಯೇಕ ಪಾಕಿಸ್ತಾನ ಬೇಡಿಕೆ ನುಂಗ ಲಾರದ ತುತ್ತಾದಾಗ, ಭಾರತ ಅಖಂಡವಾಗಿ ಉಳಿಯಬೇಕು ಎಂಬುದು ಹೋರಾಟಗಾರರ ಬೇಡಿಕೆಯಾಗಿದ್ದರೂ ಅನಿವಾರ್ಯವಾಗಿ ಗಾಂಧೀಜಿಯವರು ೧೯೪೭ರ ಜೂನ್ ೪ರ ಸಭೆಯಲ್ಲಿ ಭಾರತದ ವಿಭಜನೆಗೆ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಡಬೇಕಾಯಿತು. ಗಾಂಧೀಜಿಯವರ ಈ ನಿಲುವನ್ನೇ ಕೆಲವು ವಿಘ್ನ ವಿನೋದಿಗಳು ಗಾಂಧೀಜಿಯವರಿಂದಲೇ ಭಾರತ ವಿಭಜನೆಯಾಯಿತು ಎಂದು ಈಗಲೂ ತಮ್ಮ ಬಾಯಿತೀಟೆ ತೀರಿಸಿಕೊಳ್ಳುತ್ತಿದ್ದಾರೆ.
- ಕೆಲವರು ಸತ್ಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅಥವಾ ಎಲ್ಲವನ್ನು ಅಪಾರ್ಥ ಮಾಡಿ ಕೊಳ್ಳುತ್ತಾರೆ. ಈ ಸಾಲಿಗೆ ಸೇರಿದವರ ಸಂಖ್ಯೆ ಭಾರತದಲ್ಲಿ ಕಡಿಮೆಯೇನಿಲ್ಲ. ಆದ್ದರಿಂದ ಅಂತವರು ಇನ್ನು ಮುಂದಾದರೂ ‘ಗಾಂಧೀಜಿಯವರಿಂದ ಭಾರತ ಇಬ್ಭಾಗವಾಗಲಿಲ್ಲ, ಗಾಂಧೀಜಿಯವರಿದ್ದರೂ ಭಾರತ ಇಬ್ಭಾಗವಾಯಿತು’ ಎಂಬ ಕಟುಸತ್ಯವನ್ನು ಗ್ರಹಿಸಲಿ ಎಂದು ಹಾರೈಸೋಣ.
ಸ್ವಾತಂತ್ರ್ಯದ ಶುಭರಾತ್ರಿ
[ಬದಲಾಯಿಸಿ]- ಅಂತು ಅಂದು ಒಂದು . ೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿಯಂದು ಜಗತ್ತು ಗಾಢನಿದ್ದೆಯಲ್ಲಿದ್ದಾಗ ಇಡೀ ಭಾರತ ಮೈಗಣ್ಣಾಗಿ ತುಂಬು ಹೃದಯದಿಂದ ಸ್ವಾತಂತ್ರ್ಯ ಸೂರ್ಯನನ್ನು ಸ್ವಾಗತಿಸಿದರು. ನನ್ನ ದೃಷ್ಟಿಯಲ್ಲಿ ಇಂತಹ ಒಂದು ವಿಶಿಷ್ಟ ಕ್ರಾಂತಿ ನಡೆದದ್ದು ಭಾರತದಲ್ಲಿ ಮಾತ್ರ. ಇದಕ್ಕೆ ಕೆಲವು ಸಮರ್ಥನೆಗಳಿವೆ. ಈ ಕ್ರಾಂತಿಯ ನೇತಾರರಾಗಿ ಗಾಂಧೀಜಿಯವರು ಭಾರತದ ರಾಷ್ಟ್ರೀಯ ಹೋರಾಟವನ್ನು ಬರೀ ಬುದ್ದಿಜೀವಿ ಮಧ್ಯಮವರ್ಗದ ಜನಕ್ಕೆ ಮಾತ್ರ ಸೀಮಿತ ವಾಗಿದ್ದ ಚಳುವಳಿಯನ್ನು ಒಂದು ಜನಸಾಮಾನ್ಯರ ಸಾಮೂಹಿಕ ಕ್ರಾಂತಿಕಾರಿ ಸಂಗ್ರಾಮವನ್ನಾಗಿ ಪರಿವರ್ತಿಸಿದರು. ಈ ಹೋರಾಟಕ್ಕೆ ಬೇಕಾದ ಶಿಸ್ತುಬದ್ಧ ವ್ಯವಸ್ಥೆಯನ್ನು ರೂಪಿಸಿ ಪರಿಣಾಮಕಾರಿ ಕ್ರಿಯಾವಿಧಾನವನ್ನು ಒದಗಿಸಿದರು. ಬ್ರಿಟೀಷರ ವಸಾಹತುಶಾಹಿಯನ್ನು ಮತ್ತು ವಸಾಹತುಗಳನ್ನು ಏಕಕಾಲದಲ್ಲಿ ಹೊಸಕಿ ಹಾಕುವ ಕ್ರಾಂತಿನಡೆದದ್ದು ಭಾರತದಲ್ಲಿ ಮಾತ್ರ.
- ನಮ್ಮ ಈ ಅನುಪಮ ಸ್ವಾತಂತ್ರ್ಯ ಸಾಧನೆಯ ಹಿಂದೆ ಗಾಂಧೀಜಿಯವರ ವ್ಯಕ್ತಿತ್ವ ಚಿಂತನೆ, ಸತ್ಯಾಗ್ರಹದ ಪರಿಕಲ್ಪನೆ, ಅಹಿಂಸೆಯ ಅಡಿಪಾಯ, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಾಮಾನ್ಯರನ್ನು, ದುರ್ಬಲರನ್ನು, ದಲಿತರನ್ನು ಸ್ವಾಭಿಮಾನದಿಂದ ಸಂಘಟಸಿ ಎಲ್ಲರನ್ನು ಆತ್ಮಗೌರವದ ಹೋರಾಟದಲ್ಲಿ ತೊಡಗಿಸಿದ ದೈತ್ಯಶಕ್ತಿಯಿದೆ. ಒಂದು ಪ್ರಬಲ ಪ್ರಭುತ್ವವನ್ನು ಮತ್ತು ಅದರ ದೈತ್ಯಸೇನಾಬಲವನ್ನು ಮಣಿಸಬಲ್ಲ ನೈತಿಕ ಶಕ್ತಿ ಗಾಂಧೀಜಿಯವರಿಗೆ ಮಾತ್ರ ಇತ್ತು.
- ಈ ನಿಟ್ಟಿನಲ್ಲಿ ಅಮೆರಿಕಾ, ಚೀನಾ, ರಷ್ಯಾದಂತಹ ದೇಶಗಳ ಕ್ರಾಂತಿಗಳಿಗೆ ಹೋಲಿಸಿದರೆ ನಮ್ಮ ಕ್ರಾಂತಿಯ ಅನಾದೃಶ ಶಕ್ತಿ ವೇದ್ಯವಾಗುತ್ತದೆ. ಈ ರಾಷ್ಟ್ರಗಳಲ್ಲಿ ಆದದ್ದು ಕೇವಲ ಮೇಲುಮೇಲಿನ ಸಾಮಾಜಿಕ ಪರಿವರ್ತನೆ ಮಾತ್ರ. ಆದರೆ ನಮ್ಮ ಸ್ವಾತಂತ್ರ್ಯ ಹೋರಾಟದ ಸ್ವರೂಪ ಮತ್ತು ಉದ್ದೇಶಗಳು ಆಮೂಲಾಗ್ರ ಬದಲಾವಣೆ ಬಯಸುವಂತಹವುಗಳು. ಇಲ್ಲಿ ಮುಖ್ಯವಾಗಿ ಉಲ್ಲೇಖಿತವಾಗಬೇಕಾಗಿರುವುದು ಹತ್ತಿರ ಹತ್ತಿರ ಮೂರುನೂರು ವರ್ಷಗಳ ದಾಸ್ಯಪರಂಪರೆಯನ್ನು ಮೂಲೋತ್ಪಾಟನೆ ಮಾಡಲು ಅಗತ್ಯ ವಾಗಿದ್ದ ಸ್ವಾಭಿಮಾನ ಅಂಕುರಿಸುವಂತೆ ಮಾಡಿ ಭಾರತೀಯರಲ್ಲಿ ಇಂಗಿಹೋಗಿದ್ದ ನೈತಿಕಶಕ್ತಿ ಯನ್ನು ಪುನರುತ್ಥಾನ ಮಾಡಿದ ಗಾಂಧೀಜಿಯವರ ಅಂತಃ ಶಕ್ತಿಯನ್ನು. ಈ ಅಂಶವನ್ನು ಯಾರೂ ಹಗುರವಾಗಿ ಕಾಣುವಂತಿಲ್ಲ.
- ವಿರೋಧಿಗಳ ಮನಪರಿವರ್ತನೆ ಮಾಡಿ, ದ್ವೇಷ, ರಕ್ತಪಾತ, ಹಿಂಸೆಯಿಲ್ಲದೆ ಒಂದು ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ನೇತೃತ್ವದ ಜನಾಂದೋಲನೆ ಇಡೀ ವಿಶ್ವಕ್ಕೇ ಮಾದರಿಯಾದುದು. ಇಂದು ಜಗತ್ತಿನಾದ್ಯಂತ ರುದ್ರ ನರ್ತನಗೈಯುತ್ತಿರುವ ಹಿಂಸೆ, ಭಯೋತ್ಪಾದನೆ, ನರಮೇಧದಂತಹ ಜಾಗತಿಕ ಸಮಸ್ಯೆಗಳಿಗೆ ಗಾಂಧೀ ಪ್ರಣೀತ ತತ್ವಗಳೇ ಪರಿಹಾರಕೊಡಬಲ್ಲವು. ಈ ಅರ್ಥದಲ್ಲಿ ಮತ್ತೆಗಾಂಧಿ ನೆನಪಿಗಾಗಿ ಹೆಚ್ಚು ಪ್ರಸ್ತುತರಾಗುತ್ತಾರೆ. ಇಂತಹ ದೇವತಾ ಸ್ವರೂಪ ವ್ಯಕ್ತಿಯನ್ನು ರಾಷ್ಟ್ರಕವಿ ಕುವೆಂಪು ಅವರು ಸಭ್ಯತಾ ದೇವತೆ ಎಂದು ಕರೆದಿದ್ದಾರೆ.
ಹಲಗಲಿ ಬಂಡಾಯ
[ಬದಲಾಯಿಸಿ]- ನಿಜವಾದ ಅರ್ಥದಲ್ಲಿ ೧೮೨೪ರಂದೇ ಪ್ರಾರಂಭವಾದ ಬ್ರಿಟೀಷ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕದ ಪಾಲು ಗಮನಾರ್ಹವೇ ಆಗಿದೆ. ಇಂತಹ ಬಂಡಾಯ ಗಳಲ್ಲಿ ಕಿತ್ತೂರು ದಂಗೆ, ಕೊಡಗಿನ ಬಂಡಾಯ, ಸುರಪುರದ ಬಂಡಾಯ ಮತ್ತು ಹಲಗಲಿ ಬಂಡಾಯಗಳು ಪ್ರಮುಖವಾದವುಗಳು. ಇವುಗಳಲ್ಲಿ ಎಲ್ಲರ ಗಮನ ಸೆಳೆಯುವ ಬಂಡಾಯ ವೆಂದರೆ ಹಲಗಲಿ ಎಂಬ ಸಣ್ಣ ಊರಿನ ದೊಡ್ಡಬಂಡಾಯ. ಈ ಬಂಡಾಯ ಕಥನ ರೋಮಾಂಚನಕಾರಿಯಾದುದು ಮತ್ತು ವೀರೋಚಿತವಾದುದು.
- ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ೧೫೦ ವರ್ಷ ಹೇಗೋ ಹಾಗೆಯೇ ಹಲಗಲಿ ಬಂಡಾಯಕ್ಕೆ ಸರಿಯಾಗಿ ೧೫೦ ವರ್ಷಗಳು ತುಂಬುತ್ತದೆ. ೧೮೫೭ರ ಸರಣಿ ಬಂಡಾಯಗಳಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಸಂಭವಿಸಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಎಂಬ ಗ್ರಾಮದಲ್ಲಿ. ಇದು ಹಲಗಲಿಯ ಬೇಡರ ಬಂಡಾಯವೆಂದೇ ಪ್ರತೀತಿ. ಹಲಗಲಿ ಗುಡ್ಡದ ಓರೆಯಲ್ಲಿರುವ ಸಣ್ಣ ಗ್ರಾಮ. ಇಲ್ಲಿನ ನಾಯಕ ಸಮುದಾಯ ದವರು ಜೀವನೋಪಾಯಕ್ಕಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು.
- ಅಪರಾಧಿ ಪ್ರವೃತ್ತಿ ಯಿಂದಲ್ಲ. ಬ್ರಿಟೀಷ್ ಸರಕಾರ ಜಾರಿಗೊಳಿಸಿದ ಶಸ್ತ್ರಾಸ್ತ್ರ ಅಧಿಸೂಚನೆಯನ್ನು ಪಾಲಿಸಲು ನಿರಾಕರಿಸಿ, ತಮ್ಮ ಆಯುಧಗಳನ್ನು ಸರಕಾರಕ್ಕೆ ಒಪ್ಪಿಸದೇ ೧೮೫೭ರ ನವೆಂಬರ್‌ನಲ್ಲಿ ಅಲ್ಲಿನ ಬೇಡರು ಪ್ರತಿಭಟಿಸಿದ್ದೇ ಹಲಗಲಿ ಬಂಡಾಯ. ಬ್ರಿಟೀಷ್ ಸರಕಾರದ ದಬ್ಬಾಳಿಕೆ ದಮನಕಾರಿ ಪ್ರವೃತ್ತಿಗೆ ತೀರ ಮುಗ್ಧರಾಗಿದ್ದ ವೀರನಾಯಕ ಸಮುದಾಯದ ನಾಯಕರು ತಮಗರಿವಿಲ್ಲದೇ ಬಲಾಢ್ಯ ಬ್ರಿಟೀಷ್ ಸಾಮ್ರಾಜ್ಯದ ಜೈನುಗೂಡಿಗೆ ಕಲ್ಲೆಸೆದು ಕೆಣಕಿದ್ದರು.
- ಅದರ ಪರಿಣಾಮ ಮಾತ್ರ ಘೋರ. ನಾವು ಭಾರತದ ಸ್ವಾತಂತ್ರ್ಯ ಚಳುವಳಿಯ ಅವಿಭಾಜ್ಯ ಅಂಗವಾಗುತ್ತಿದ್ದೇವೆ ಎಂಬ ಪರಿಕಲ್ಪನೆಯೇ ಇಲ್ಲದ ಕೆಚ್ಚೆದೆಯ ಕಲಿಗಳ ಈ ಬಂಡಾಯ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ. ಊರು ಚಿಕ್ಕದಿದ್ದರೂ, ಜನ ಸ್ವಲ್ಪೇ ಇದ್ದರೂ ಬ್ರಿಟೀಷ್ ಸರಕಾರದ ಶಾಸ್ತ್ರಾಸ್ತ್ರ ನಿಯಂತ್ರಣ ಕಾಯ್ದೆಯ ವಿರುದ್ಧ ಮಲೆನಿಂತ ಈ ವೀರರ ಚರಿತ್ರೆ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿಯೇ ಉಳಿಯುತ್ತದೆ.
- ಬೇಟೆಯೇ ಜೀವನಾಂಶಕ್ಕೆ ಪೂರಕವಾಗಿದ್ದ ಈ ನಾಯಕ (ವಾಲ್ಮೀಕಿ) ಸಮುದಾಯಕ್ಕೆ ಶಸ್ತ್ರಾಸ್ತಗಳು ಅಗತ್ಯವಾದದ್ದು ಬೇಟೆಗೆ ಹೊರತು ಹೊಡೆದಾಟಕ್ಕಲ್ಲ. ಆದರೆ ಶಸ್ತ್ರಾಸ್ತ್ರಗಳನ್ನು ಮರಳಿ ಪ್ರಭುತ್ವಕ್ಕೆ ಒಪ್ಪಿಸಬೇಕೆಂಬ ಕಂಪನಿ ಸರಕಾರದ ಆದೇಶ ಬೇಡ ಸಮುದಾಯದ ಜೀವನೋಪಾಯ ಕ್ಕೇ ಸಂಚಕಾರ ತಂದಿತ್ತು. ಈ ದಬ್ಬಾಳಿಕೆಯನ್ನು ಸಹಜವಾಗಿ ಅವರು ವಿರೋಧಿಸಿದರು. ಅವರಿಗೆ ಮರಾಠಾ ಸೈನಿಕ ಬಾಬಾಜಿ ನಿಂಬಾಳಕರ ಎಂಬುವನು ಬ್ರಿಟೀಷರ ವಿರುದ್ಧ ಬಂಡೇಳುವಂತೆ ಪ್ರೋತ್ಸಾಹ ಕೊಡುತ್ತಿದ್ದ.
- ಈ ನಡುವೆ ಕಂಪನಿಸರಕಾರ ಹಾಗೂ ಹಲಗಲಿಯ ಹೋರಾಟಗಾರರ ನಡುವೆ ಮಧ್ಯಸ್ಥಿಕೆಗಾರನಾಗಿ ಕಣದರಗಿಯ ಕೃಷ್ಣ ರಾವ್ ಎಂಬ ಕಾರ್ಯಭಾರಿ ಸಂಧಾನಕ್ಕೆ ಪ್ರಯತ್ನಿಸಿದರೂ ಅವನ ಸಂಧಾನ ಫಲಕಾರಿಯಾಗಲಿಲ್ಲ. ಜೀವನಾಧಾರಕ್ಕೆ ಬೇಟೆ. ಆ ಬೇಟೆಗೆ ಬೇಕಾದ ಆಯುಧಗಳನ್ನು ಬ್ರಿಟೀಷರಿಗೆ ಒಪ್ಪಿಸಿದರೆ ಜೀವಕ್ಕೆ ಸಂಚಕಾರ ಬಂದೀತು ಎಂಬ ಭಾವನೆಯಿಂದ ಅವರು ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಒಪ್ಪಿಸಲು ನಿರಾಕರಿಸಿದರು. ಜೀವ ಹೋದರೂ ಸರಿ ಹತ್ಯಾರಗಳನ್ನು ಕೊಡುವುದಿಲ್ಲ ಎಂದು ತಿಳಿಸಿದರು.
- ಮುಂದಿನದು ಮಾತ್ರ ರಕ್ತರಂಜಿತ ಅಧ್ಯಾಯವೇ. ಹಾಗೆ ನೋಡಿದರೆ ಬ್ರಿಟೀಷರ ವಿರುದ್ಧ ಹೋರಾಡುವುದಕ್ಕೆಂದೇ ಈ ವೀರಬೇಡರು ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ. ಆದರೆ ಬ್ರಿಟೀಷರು ಮೊದಲೇ ಅಧಿಕಾರದ ಅಮಲಿನ ಅಲೆಯಮೇಲೆ ತೇಲುತ್ತಿದ್ದರು. ಅವರು ಹಲಗಲಿಯ ಬೇಡರ ಸಹಜ ವಾದ ಆಸೆ ಮತ್ತು ಅಭಿಮಾನವನ್ನು ಅಪಾರ್ಥ ಮಾಡಿಕೊಂಡರು. ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಮರಳಿಸದಿರಲು ಇರುವ ಸಕಾರಣಗಳನ್ನು ಬ್ರಿಟೀಷ್ ಸರಕಾರ ಅರ್ಥಮಾಡಿಕೊಡುವಲ್ಲಿ ವಿಫಲರಾದರು.
- ಬೇಡರ ಈ ನಿರಾಕರಣೆಗೆ ಕಂಪನಿ ಸರಕಾರ ೧೮೫೭ರ ನವೆಂಬರ ೨೬ರ ಮಧ್ಯರಾತ್ರಿ ೬೦೦ ಅಶ್ವಾರೂಢ ಸೈನಿಕರೊಂದಿಗೆ ಹಲಗಲಿಯನ್ನು ಮುತ್ತಿದರು. ದಾಳಿಗೆ ಹೆದರದ ಬೇಡರು ಪ್ರತಿಯಾಗಿ ಅದನ್ನು ಎದುರಿಸಿತು. ರಾತ್ರಿಯ ಹೊತ್ತು ನಿಕರದ ಹೋರಾಟವೇ ನಡೆಯಿತು. ಫಸ್ಟ್ ಅಸಿಸ್ಟೆಂಟ್ ಮ್ಯಾಜಿಸ್ಟ್ರೇಟ್ ವಿಲಿಯಂ ಹೆನ್ರಿ ಹೆವಲಾಕ್ ಎಂಬ ಅಧಿಕಾರಿ ಬೇಡರ ಈ ದಾಳಿಯಲ್ಲಿ ಹತನಾದ. ಇದರಿಂದ ಹೆದರಿದ ಕರ್ನಲ್ ನೆಟನ್‌ಕರ್ ಹೆಚ್ಚಿನ ಸೈನ್ಯಕಳಿಸುವಂತೆ ಕೇಳಿಕೊಂಡ.
- ಮರುದಿನ ಇನ್ನಷ್ಟು ನಿಕರದ ಹೋರಾಟನಡೆದು ಎರಡೂ ಕಡೆ ಅಪಾರ ಸಾವು ನೋವು ಸಂಭವಿಸಿದವು. ನಾಯಕ ಸಮುದಾಯದ ಈ ಕೆಚ್ಚೆದೆಯ ಕಲಿತನಕ್ಕೆ ಹೆದರಿ, ಬ್ರಿಟೀಷ್ ಸೇನೆ ಮಧ್ಯರಾತ್ರಿ ಊರಿಗೆ ಬೆಂಕಿಹಚ್ಚಿತು. ಬೆಂಕಿಯ ದಳ್ಳುರಿಗೆ ಸಿಕ್ಕು ಆರ್ತನಾದ ಗೈದ ಮಕ್ಕಳ ಮತ್ತು ದನಕರುಗಳ ಕ್ಷಣೆಗೆ ಮುಂದಾದ ಬೇಡರ ಪಡೆಯ ವೀರರನ್ನು ಸೇನೆ ಗುಂಡಿಟ್ಟು ಕೊಂದಿತು. ಜಡಗಾ-ಬಾಲಾ ಎಂಬ ಗ್ರಾಮದ ಬೇಡರ ಮುಖಂಡರು ದಿಟ್ಟ ಹೋರಾಟ ನಡೆಸಿದರೂ ಬ್ರಿಟೀಷ್ ಸೇನೆಯ ವಿರುದ್ಧ ನಿಲ್ಲಲಾಗಲಿಲ್ಲ.
- ದಾಳಿಯಿಂದ ತಪ್ಪಿಸಿಕೊಳ್ಳಲು ಹತ್ತಿಕಟ್ಟಿಗೆಯಲ್ಲಿ ಅವಿತು ಕೊಂಡಿದ್ದ ೨೩ ಜನರನ್ನು ಸೇನೆ ಸುಟ್ಟುಹಾಕಿತು. ಹೀಗೆ ಒಂದು ರಕ್ತರಂಜಿತ ಅಧ್ಯಾಯ ಕೊನೆಗೊಂಡಿತು. ನಂತರ ಬ್ರಿಟೀಷ್ ಸೇನೆ ಸುಮಾರು ೨೯೦ ಜನರನ್ನು ಸೆರೆ ಹಿಡಿಯಿತು. ಇವರಲ್ಲಿ ಜಡಗಾ-ಬಾಲಾರನ್ನು ಒಳಗೊಂಡಂತೆ ಮುಧೋಳ ಮತ್ತು ಹಲಗಲಿಯಲ್ಲಿ ಗಲ್ಲಿಗೇರಿಸಿತು. ಹೀಗೆ ಹಲಗಲಿ ಬೇಡರ ಬಂಡಾಯವನ್ನು ಸೇನೆ ಹತ್ತಿಕ್ಕಿತು.
- ಅಂತು ತಮ್ಮ ಆತ್ಮರಕ್ಷಣೆಗೆ, ಹಾಗೆಯೇ ಸೂರ್ಯ ಮುಳುಗದ ಸಾಮ್ರಾಜ್ಯದ ದಬ್ಬಾಳಿಕೆಗೆ ಮಣಿಯಬಾರದು ಎಂಬ ಬೇಡರ ಕೆಚ್ಚೆದೆಯ ಹೋರಾಟ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸಂವಾದಿಯಾಗಿ ನಿಲ್ಲಬಲ್ಲ ತಾಕತ್ತು ಹೊಂದಿದೆ. ದಿಟ್ಟ ಹೋರಾಟ ನಡೆಸುವ ಮೂಲಕ ಬ್ರಿಟೀಷರಿಗೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಸ್ವಾಭಿಮಾನದ ಪರಿಚಯ ಮಾಡಿಸಿದ ಹಲಗಲಿಯ ಬೇಡರ ಈ ಬಲಿದಾನ ಚಿರಸ್ಥಾಯಿಯಾಗಿ ಉಳಿಯುತ್ತದೆ.
- ಈ ಕಡೆ ಯಾರಾದರೂ ಜಿಗುಟುತನದಿಂದ ಛಲದಿಂದ ವಾದಿಸಿದಾಗ ಜನ ಅರ್ಧ ವಿನೋದಿಂದ ಇನ್ನರ್ಧ ಹೆಮ್ಮೆಯಿಂದ, ‘ಏ ಅವ್ರನ್ನ ತಡಿಬ್ಯಾಡ್ರೆಪೋ ಅವರ ಹಲಗಲಿ ಬ್ಯಾಡ್ರಿದ್ದಂಗ’ ಎಂದು ಹೇಳುವುದನ್ನು ಕೇಳಬಹುದು. ಅಂತಹ ಕಲಿಗಳು ನಮ್ಮ ಊರ ಸಮೀಪದವರೇ ಎಂಬುದು ಹೆಮ್ಮೆಯ ವಿಚಾರ. ಈ ಶೂರ ಕಲಿಗಳು ಸ್ವಾತಂತ್ರ್ಯ ತಂದು ಕೊಡಲು ಸಾಧ್ಯವಾಗದಿದ್ದರೂ, ಬ್ರಿಟೀಷರ ಗುಲಾಮಗಿರಿಯಲ್ಲಿ ಬದುಕುವುದಕ್ಕಿಂತ ವೀರಮರಣವೇ ಲೇಸೆಂದು ಸಾರಿ ದೇಶದ ಸ್ವಾತಂತ್ರ್ಯ ಪ್ರಾಪ್ತಿಯಲ್ಲಿ ಖಂಡಿತಕ್ಕೂ ತಮ್ಮ ಹೆಜ್ಜೆಯ ಗುರುತು ಉಳಿಸಿದವರು.