ಪಾಡ್ಡನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಡ್ಡನ - ತುಳುನಾಡಿನ ಜನಪದ ಸಾಹಿತ್ಯದ ಒಂದು ಮುಖ್ಯ ಭಾಗ.

ಪದ ರಚನೆ[ಬದಲಾಯಿಸಿ]

ತುಳು ಭಾಷೆ ಮಾತನಾಡುವ ಪ್ರದೇಶಗಳಲ್ಲಿ ಪಾರ್ತನೊ/ಪಾರ್ದನೊ, ಪಾಡ್ತನ, ಪಾಡ್ಡನೊ ಮೊದಲಾದ ರೂಪಭೇದಗಳೂ ಇವೆ. ಈ ಶಬ್ದದ ವ್ಯುತ್ಪತ್ತಿಯ ಬಗ್ಗೆ ಇನ್ನೂ ಏನೂ ಇತ್ಯರ್ಥವಾಗಿಲ್ಲ.

  • ಪ್ರಾರ್ಥನೆ ಎಂಬುದರ ತದ್ಭವವಿದು ಎಂದು ಕೆಲವರೆಂದರೆ, ಪಾಡು ಎಂಬ ಧಾತುವಿನಿಂದ ರೂಪುಗೊಂಡ ಪದವಿದು ಎಂದು ಮತ್ತೆ ಕೆಲವರ ಅಭಿಪ್ರಾಯ.
  • ಪಾಡ್ ಅಂದರೆ ಕನ್ನಡದ ಹಾಡು. ಹಾಡುವ+ಕಥನ, ಹಾಡು ಮತ್ತು ಕಥೆ ಇರುವ ಕಥನ ಕಾವ್ಯವೆಂದು ಕನ್ನಡದಲ್ಲಿ ಒಂದು ಕಾವ್ಯ ಪ್ರಯೋಗವಿದೆ. ಕಾರ ಕಾರ ಪ್ರಯೋಗವನ್ನು ಇಲ್ಲಿ ಗಮನಿಸಬಹುದು.
  • ಪಾಟ್. ಮಲೆಯಾಳಿ ಮತ್ತು ತಮಿಳು ಭಾಷೆಯಲ್ಲಿ ಪಾಟ್ ಪದ ಬಳಕೆಯಲ್ಲಿದೆ.[೧]

ಸಂದರ್ಭ[ಬದಲಾಯಿಸಿ]

ತುಳುನಾಡಿನ ಭೂತಾರಾಧನೆಯ ಸಂದರ್ಭದಲ್ಲಿ ಭೂತಗಳನ್ನು ಆವೇಶ ಬರಿಸುವ ಅಂಗವಾಗಿ ಆಯಾ ದೈವದ ಹುಟ್ಟುಕಟ್ಟು, ಆಯಬೀರ, ಕಲೆಕಾರಣಿಕಗಳನ್ನು ವಿಶಿಷ್ಟವಾದ ಧಾಟಿಯಲ್ಲಿ ನಿರೂಪಿಸುವ ಕಥನಕಾವ್ಯಗಳೇ ಪಾಡ್ದನಗಳು. ಭೂತಕ್ಕೆ ನೇರವಾಗಿ ಸಂಬಂಧಪಡದೇ ಇರುವ ಪಾಡ್ದನಗಳೂ ಇವೆ. ಸಾಮಾನ್ಯವಾಗಿ ಒಂದಲ್ಲೊಂದು ಛಂದಸ್ಸಿಗೆ ಕೂಡುವ ಅವನ್ನು ಕಬಿತ ಎನ್ನುತ್ತಾರೆ. ದೀರ್ಘವಾದ ಪಾಡ್ದನಗಳನ್ನು ಸಂಧಿ ಎಂದೂ ಕರೆಯುತ್ತಾರೆ. ಹೆಚ್ಚಿನ ಪಾಡ್ದನಗಳು ತುಳುನಾಡಿನ ಪುರಾಣಗಳೆನ್ನಬಹುದಾದ ಪದ್ಯಗಂಧಿ ವಚನಕಾವ್ಯಗಳು, ಇವನ್ನು ಸಂದರ್ಭಕ್ಕುಚಿತವಾದ ಬೇರೆಬೇರೆ ಲಯ ಧಾಟಿ ತಾಳಗಳಲ್ಲಿ ತೆಂಬರೆ ಅಥವಾ ಡೋಲಿನ ವಾದನದೊಂದಿಗೆ ಭೂತೋತ್ಸವ ಸಂದರ್ಭದಲ್ಲಿ ಭೂತಕ್ಕೆ ಕಟ್ಟುವವನಾಗಲೀ ಅವನ ಬಳಗದವರಾಗಲೀ (ಒಬ್ಬನೋ ಇಬ್ಬರೋ) ಹಾಡುತ್ತಾರೆ. ಹೊಲದಲ್ಲಿ ಗೇಯುವಾಗಲೂ ವಿರಾಮ ಸಮಯದಲ್ಲೂ ಹಾಡುವುದಿದೆ. ಇವುಗಳಲ್ಲಿ ಹೆಚ್ಚಿನ ಪಾಡ್ದನಗಳಿಗೆ ನಿಶ್ಚಿತ ಪಲ್ಲವಿಗಳಿವೆ. ಡೆನ್ನಡೆನ್ನ ಡೆನ್ನನಾಯೇ. . . .ಎಂಬುದು ಅವುಗಳಲ್ಲೊಂದು.[೨]

ಇತರ ಭಾಷೆಗಳಲ್ಲಿನ ಜನಪದ ಹಾಡುಗಳಂತೆಯೇ ಪಾಡ್ದನಗಳೂ ನೆನಪಿನ ಬಲದಿಂದ ತಲೆಮಾರಿನಿಂದ ತಲೆಮಾರಿಗೆ ಬಾಯಿ ಪಾಠವಾಗಿ ಉಳಿದು ಬಂದವು. ಆದ್ದರಿಂದ ಸಹಜವಾಗಿಯೆ ಒಂದು ಕೃತಿ ಹಲವು ಪಾಠಭೇದಗಳನ್ನು ಪಡೆದು ಗಾತ್ರದಲ್ಲಿ ಕಿರಿದಾಗಿಯೋ ಹಿರಿದಾಗಿಯೋ ಇರುತ್ತದೆ.

ಪಾಡ್ದನಗಳ ಕಥಾ ಹಂದರ[ಬದಲಾಯಿಸಿ]

ಪಾಡ್ದನಗಳಲ್ಲಿ ಹೆಚ್ಚಿನವು ವೀರಗಾಥೆಗಳು ; ಜೊತೆಗೆ, ಹೃದಯದ್ರಾವಕವಾದ ದುರಂತ ಕಥಾನಕಗಳು. ಭುತತ್ವವನ್ನು ಹೊಂದಿದವರಲ್ಲಿ ಅನೇಕರು ಅಕಾಲ ಮರಣಕ್ಕೆ ಒಳಪಟ್ಟವರಾದುದರಿಂದ ಸಹಜವಾಗಿಯೆ ಅಂಥವರ ಕಥೆಗೊಂದು ವಿಲಕ್ಷಣ ರೋಚಕತೆ, ದುರಂತ ಸೌಂದರ್ಯ ಬಂದುಬಿಡುತ್ತದೆ. ವಿವಿಧ ಕಾರಣಗಳಿಂದ ಮೃತಹೊಂದಿದ ಬಳಿಕ ಭೂತಗಳಾಗಿ ಮಾರ್ಪಟ್ಟು ಆರಾಧನೆಯನ್ನು ಸ್ವೀಕರಿಸುವ ಅನೇಕ ವ್ಯಕ್ತಿಗಳನ್ನು ಹೆಸರಿಸಬಹುದು. ಒಬ್ಬರ್ಯ, ಕಲ್ಕುಡ, ಕಲ್ಲುರ್ಟಿ, ಕೋಟಿಚೆನ್ನಯ, ಕುಜುಂಬ, ಕಾಂಜ, ಕಾಂತಾಬಾರೆ-ಬೂದಾಬಾರೆ, ಕೋಡದಬ್ಬು, ತನ್ನಿಮಾನಿಗ, ಅಕ್ಕರಸು ಪೂಂಜೆದಿ, ಸೊನ್ನೆ-ಗಿಂಡೆ, ಅಬ್ಬಗೆ-ದಾರಗೆ, ಕೋಟಿ ಪೂಂಜ, ಬಕ್ಕುಬಲ್ಲಾಳ ನಾಡು, ಜೋಗಿಪುರುಷ, ಕೊರಗತನಿಯ, ಅಣ್ಣಪ್ಪ, ತೋಮಜ್ಜ, ಗುರ್ಕಾರ ಭೂತ, ಚಿತ್ರಮೇಲಾಂಟ, ಮಾಯಂದಾಳ್, ಕಂಬೆರ್ಲು-ಮುಂತಾದವರು. ಇಂಥವರಲ್ಲಿ ಕೆಲವರು ಕಾಳಗದಲ್ಲಿ ಕಾಯವಿಟ್ಟವರು. ಕೆಲವರು ಆತ್ಮಹತ್ಯೆ ಮಾಡಿಕೊಂಡವರು, ಕೆಲವರು ಕೊಲೆಗೀಡಾದವರು. ಕೆಲವರು ಇತರ ಭೂತಗಳ ಉಪದ್ರವದಿಂದ ಅಸುನೀಗಿದವರು. ಇವರಲ್ಲಿ ವೀರರಿದ್ದಾರೆ. ಜನೋಪಕಾರಿಗಳಿದ್ದಾರೆ, ಭಕ್ತರಿದ್ದಾರೆ, ಸಾಧ್ವೀಸ್ತ್ರೀಯರಿದ್ದಾರೆ. ಅನ್ಯಾಯಗಾರರೆನಿಸಿದ ಕೆಲವರೂ ಇಲ್ಲದಿಲ್ಲ.

ತುಳುವಿನಲ್ಲಿ ಪಾಡ್ದನ[ಬದಲಾಯಿಸಿ]

ಪ್ರಯೋಗ[ಬದಲಾಯಿಸಿ]

ಇನ್ನು ಪುರಾಣಯುಗದಿಂದ ಇಳಿದು ಬಂದವುಗಳೆಂದೋ ಬೇರೆಬೇರೆ ದೇವತೆಗಳ ಅವತಾರವೆಂದೋ ಊಳಿಗದವುಗಳೆಂದೋ ಕರೆಯಿಸಿಕೊಳ್ಳುವ ಅನೇಕ ದೈವಗಳಿವೆ : ಚಾಮುಂಡಿ, ರಕ್ತೇಶ್ವರಿ(ಲೆಕ್ಕೇಸಿರಿ) ಧೂಮಾವತಿ (ಜುಮಾದಿ), ಗುಳಿಗ, ಭೈರವ, ಪಂಜುರ್ಳಿ ಮೊದಲಾದವು-ಹೀಗೆ.

ಭೂತದ ಪಾಡ್ದನಗಳಲ್ಲಿ ಆಯಾ ಭೂತದ ಮಹಿಮೆಗಳಷ್ಟೇ ತುಂಬಿರುವುದಿಲ್ಲ. ಪ್ರಾಚೀನ ತುಳುನಾಡಿನ ಜನಜೀವನದ ಸುಳುಹುಹೊಳಹು, ನಂಬಿಕೆ ನಡವಳಿಕೆ, ಆಹಾರವಿಹಾರ, ಕಲೆಧರ್ಮಗಳು, ರಾಜ್ಯದ ಆಡಳಿತೆಯ ಕ್ರಮ, ಕೃಷಿ ಕೈಗಾರಿಕೆಗಳು, ವ್ಯಾಪಾರ ಸಾಪಾರ, ಉಡುಪು ತೊಡುಪು, ಕಾಳಗ ವಿಧಾನ, ವಿದ್ಯೆ ವಿನೋದ- ಮುಂತಾದ ವಿವರಗಳೂ ಇತರ ನಿತ್ಯಜೀವನದ ತರತರದ ಕ್ರಿಯೆಗಳೂ ಹಾಸುಹೊಕ್ಕಾಗಿರುತ್ತವೆ. ಚಾರಿತ್ರಿಕ ಘಟನೆಗಳ ನಿರೂಪಣೆಯೂ ಕೆಲವೊಮ್ಮೆ ಒದಗುವುದುಂಟು.

ವ್ಯಕ್ತಿಗೂ ಅಂದಿನ ಸಮಾಜಕ್ಕೂ ಇದ್ದ ಸಂಬಂಧವನ್ನು ಅನೇಕ ಪಾಡ್ದನಗಳು ಜೀವಂತವಾಗಿ ಚಿತ್ರಿಸಿವೆ. ವ್ಯಕ್ತಿಯ ಮನಸ್ಸಿನ ತುಡಿತಮಿಡಿತ, ಆಸೆ ಆಕಾಂಕ್ಷೆ, ಸೋಲು, ನಿಟ್ಟುಸಿರು, ದರ್ಪ, ದಬ್ಬಾಳಿಕೆ, ಉದ್ರೇಕ, ಉರುಬು, ಕಾಮ ಪ್ರೇಮ, ಅಭಿಮಾನ, ಅಂಧಶ್ರದ್ಧೆ-ಮುಂತಾದ ಅನೇಕ ರಾಗಭಾವಗಳನ್ನು ಎಳೆಎಳೆಯಾಗಿ ನಿರೂಪಿಸಿದ್ದು ಕಂಡುಬರುತ್ತದೆ. ಸಾಮಾಜಿಕ ವಿಕೃತಿ ಎನ್ನಬಹುದಾದ ಅಂಶಗಳನ್ನೂ ಮುಚ್ಚುಮರೆ ಇಲ್ಲದೆ ಬಣ್ಣಿಸಿದ್ದೂ ಉಂಟು.

ತುಳುನಾಡಿನ ಹೊಲಗಳಲ್ಲಿ ಹಾಡುವ ಪಾಡ್ದನಗಳು ಬಲುಚೆನ್ನಾಗಿ ವಿಕಾಸಗೊಂಡಿವೆ. ಇಂಥ ಮೇಳಗೀತೆಗಳಲ್ಲಿ ನೂರಾರು ವಿಧದವುಗಳಿವೆ. ಹರ್ಷವನ್ನು ದುಃಖವನ್ನು, ಭಕ್ತಿಯನ್ನು, ಆಕಾಂಕ್ಷೆಯನ್ನು, ವಿನೋದವನ್ನು, ವಿಡಂಬನೆಯನ್ನು ವ್ಯಕ್ತಗೊಳಿಸುವ ಹಾಡುಗಳು ವೈವಿಧ್ಯಪೂರ್ಣವಾಗಿ ಬೆಳೆದುಬಂದಿದೆ. ಹೀಗೆ ಮೂಡಿದ ಹಾಡು, ಅರಸುಮಗಳೊಬ್ಬಳ ಮದುವೆಯ ಕುರಿತಾಗಿರಬಹುದು. ಹಳ್ಳಿಯ ಹೆಣ್ಣಿನ ಚೆಲುವನ್ನು ಬಣ್ಣಿಸಬಹುದು. ಪಾಳೆಯಗಾರನ ಕ್ರೌರ್ಯವನ್ನು ಚಿತ್ರಿಸಬಹುದು. ವೀರನ ಅಭಿಮಾನಪಟುತ್ವವನ್ನು ಬಿಂಬಿಸಬಹುದು. ಪ್ರಣಯ ದುರಂತವನ್ನು ಮಿಡಿಯಬಹುದು. ಮದ, ಮತ್ಸರ, ಮೋಹ, ಲೋಭಗಸ ಅತಿರೇಕತೆಯ ಪರಿಣಾಮವನ್ನು ವಿವರಿಸಬಹುದು. ರಾಮಾಯಣ ಭಾರತಗಳ ಜನಪದ ಆಖ್ಯಾಯಿಕೆಗಳೂ ಆಗಿರಬಹುದು. ದೇವದೇವತೆಗಳ ಅದ್ಭುತರಮ್ಯ ಕಥೆಯಾಗಿರಬಹುದು. ಮೃಗಪಕ್ಷಿ ಉರಗಗಳ ವಿಚಿತ್ರ ವೃತ್ತಾಂತವಾಗಿರಬಹುದು.

ಪುನರುಕ್ತಿ, ಸಾವಯವ ಸಂಬಂಧರಾಹಿತ್ಯ, ಏಕತಾನತೆ, ಗಟ್ಟಿಯಾದ ತಿರುಳು ಕಾಣಿಸದಿರುವಿಕೆ ಮೊದಲಾದ ದೋಷಗಳು ಕೆಲವೊಂದು ಪಾಡ್ದನಗಳಲ್ಲಿ ಕೆಲವೊಮ್ಮೆ ಕಾಣಿಸಿಕೊಂಡರೂ ಅನೇಕ ಕಡೆ ಅವು ಗಳಿಸಿರುವ ರಸಸ್ಥಾನಗಳನ್ನೂ ಏರಿದ ಎತ್ತರವನ್ನೂ ಕಂಡಾಗ ಆಶ್ಚರ್ಯವಾಗುತ್ತದೆ. ಕಳಪೆಗಳನ್ನು ಪ್ರತ್ಯೇಕಿಸಿದರೂ ಅವುಗಳಲ್ಲಿ ಸಾಕಷ್ಟು ಗಟ್ಟಿತೆನೆ ಉಳಿಯುವುದರಲ್ಲಿ ಸಂಶಯವಿಲ್ಲ.

ಬಾಹ್ಯ ಕೊಂಡಿ[ಬದಲಾಯಿಸಿ]

ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಡ್ಡನ[ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖ[ಬದಲಾಯಿಸಿ]

  1. chrome-extension://oemmndcbldboiebfnladdacbdfmadadm/http://shodhganga.inflibnet.ac.in/bitstream/10603/110134/15/15_conclusions.pdf
  2. https://www.daijiworld247.com/newsDisplay.aspx?newsID=1179[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಪಾಡ್ಡನ&oldid=1215216" ಇಂದ ಪಡೆಯಲ್ಪಟ್ಟಿದೆ