ಪರ್ಡೈಸಲ್ಫ್ಯೂರಿಕ್ ಆಮ್ಲ
ಪರ್ಡೈಸಲ್ಫ್ಯೂರಿಕ್ ಆಮ್ಲವು (H2S2O8) ಒಂದು ಅಕಾರ್ಬನಿಕ ಸಂಯುಕ್ತ. ಪರ್‌ಡೈಸಲ್ಫ್ಯೂರಿಕ್ ಆಮ್ಲವನ್ನು ಪರ್‌ಸಲ್ಫ್ಯೂರಿಕ್ ಆಮ್ಲ ಎಂದೇ ಕರೆಯುವುದು ರೂಢಿ. ಈ ಆಮ್ಲವನ್ನು ಪತ್ತೆಹಚ್ಚಿದವನ ಗೌರವಾರ್ಥ ಇದಕ್ಕೆ ಮಾರ್ಷಲ್ಲರ (1891) ಆಮ್ಲವೆಂದು ಹೆಸರಿಸಿದ್ದಾರೆ.[೧]
ತಯಾರಿಕೆ
[ಬದಲಾಯಿಸಿ]ಬರ್ಫದ ಶೈತ್ಯದಲ್ಲಿರುವ 50%-60% ಸಾರತೆಯ ಸಲ್ಫ್ಯೂರಿಕ್ ಆಮ್ಲವನ್ನು ವಿದ್ಯುದ್ವಿಭಜನೆಗೆ ಗುರಿಪಡಿಸಿದಾಗ ಪರ್‌ಸಲ್ಫ್ಯೂರಿಕ್ ಆಮ್ಲ ಉಂಟಾಗುತ್ತವೆ. ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವನ್ನು ವಿದ್ಯುದ್ವಿಭಜಿಸಿದಾಗ ಅದರೊಡನಿರುವ ನೀರು ವಿಭಜಿತವಾಗಿ ಕ್ಯಾಥೋಡಿನಲ್ಲಿ ಹೈಡ್ರೊಜನ್ನು ಆನೋಡಿನಲ್ಲಿ ಆಕ್ಸಿಜನ್ನೂ 2:1 ಗಾತ್ರ ಪ್ರಮಾಣದಲ್ಲಿ ಬಿಡುಗಡೆಯಾಗುವುವಷ್ಟೆ. ಆದರೆ ದ್ರಾವಣದಲ್ಲಿ ಸಲ್ಫ್ಯೂರಿಕ್ ಆಮ್ಲದ ಅಂಶ ಹೆಚ್ಚಿಸಿದಂತೆ ಆನೋಡಿನಲ್ಲಿ ಹೊರಬೀಳುವ ಆಕ್ಸಿಜನ್ನಿನ ಪರಿಮಾಣ ಕಡಿಮೆಯಾಗುತ್ತ ಹೋಗಿ 50% ಸಲ್ಫ್ಯೂರಿಕ್ ಆಮ್ಲವನ್ನು ಬಳಸಿದಾಗ ಆಕ್ಸಿಜನ್ ಬಿಡುಗಡೆಯಾಗುವಂತೆ ತೋರುವುದೇ ಇಲ್ಲ. ಇದು ನಮ್ಮ ಅನುಭವ. ಹೀಗಾಗಲು ಈ ಸಾರತೆಯ ಸಲ್ಫ್ಯೂರಿಕ್ ಆಮ್ಲ ದ್ರಾವಣದಲ್ಲಿ ಈ ಕೆಳಗಿನಂತೆ ಅಯಾನೀಭವಿಸಿರುವುದೇ ಕಾರಣ:
- H2SO4 → H+ + HSO4-
ನಯವಾದ ಪ್ಲ್ಯಾಟಿನಂ ಆನೋಡನ್ನು ಬಳಸಿ ಉನ್ನತ ವಿದ್ಯುತ್‌ಸಾಂದ್ರತೆಯನ್ನು ಪ್ರಯೋಗಿಸಿದರೆ ದ್ರಾವಣದಲ್ಲಿರುವ ಬೈಸಲ್ಫೇಟಿನ ಅಯಾನುಗಳು ಜೊತೆಗೂಡಿ ಪರ್‌ಸಲ್ಫ್ಯೂರಿಕ್ ಆಮ್ಲವನ್ನು ಕೊಡುತ್ತದೆ.
- 2HSO4- → H2S2O8 + 2e-
ಕ್ಯಾಥೋಡಿನಲ್ಲಿ ಬಿಡುಗಡೆಯಾಗುವ ಹೈಡ್ರೊಜನ್ ಪರ್‌ಸಲ್ಫ್ಯೂರಿಕ್ ಆಮ್ಲವನ್ನು ಅಪಕರ್ಷಿಸಿ ಬಿಡುವ ಸಾಧ್ಯತೆ ಉಂಟು. ಆದ್ದರಿಂದ ಆನೋಡ್ ಮತ್ತು ಕ್ಯಾಥೋಡ್ ಅಂಕಣಗಳನ್ನು ಒಂದು ಗಾಜಿನ ಸಿಲಿಂಡರಿನಿಂದ ಬೇರ್ಪಡಿಸುತ್ತಾರೆ. ಸಿಲಿಂಡರಿಗೆ ಸುತ್ತಿರುವ ತಾಮ್ರದ ಸುರುಳಿಯೇ ಕ್ಯಾಥೋಡಿನಂತೆ ವರ್ತಿಸುವುದು.
ಗುಣಗಳು
[ಬದಲಾಯಿಸಿ]ಪರ್‌ಸಲ್ಫ್ಯೂರಿಕ್ ಆಮ್ಲ ಸ್ಥಿರವೆನ್ನಬಹುದಾದ ಹರಳು ರೂಪದ ವಸ್ತು. ದ್ರವನ ಬಿಂದು 600 ಸೆಂ. ಬಿಸಿಮಾಡಿದಾಗ ಆಕ್ಸಿಜನ್ನನ್ನು ಕಳೆದುಕೊಳ್ಳುವುದರಿಂದ ಇದು ಉತ್ಕರ್ಷಣಕಾರಿ. ಅಯೊಡೈಡುಗಳಿಂದ ಅಯೊಡೀನನ್ನು ಬಿಡುಗಡೆ ಮಾಡುವುದು. ಇಂಡಿಗೋ ಬಣ್ಣವನ್ನು ಚಲುವೆ ಮಾಡಬಲ್ಲದು. ಅನಿಲೀನನ್ನು ಅನಿಲಿನ್ ಕಪ್ಪಾಗಿ (aniline black) ಉತ್ಕರ್ಷಿಸುತ್ತದೆ. ಆದರೆ ಈ ಕ್ರಿಯೆಗಳು ಜರುಗುವುದು ನಿಧಾನ. ಇದರ ದ್ರಾವಣ ಕ್ರಮೇಣವಾಗಿ ಸಲ್ಫ್ಯೂರಿಕ್ ಮತ್ತು ಪರ್‌ಮಾನೋಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣವಾಗಿ ಬಿಡುವುದು. ಇದು ಜಲವಿಭಜನೆಯ ಪರಿಣಾಮ.
- H2S2O8 + H2O → H2SO4 + H2SO5
ಉಪಯೋಗಗಳು
[ಬದಲಾಯಿಸಿ]50% ಸಾರತೆಯ ಸಲ್ಫ್ಯೂರಿಕ್ ಆಮ್ಲದಲ್ಲಿ ಪೊಟ್ಯಾಸಿಯಂ ಸಲ್ಫೇಟ್ ಅಥವಾ ಅಮೋನಿಯಂ ಲವಣಗಳು ಸ್ಫಟಿಕೀಕರಿಸುತ್ತವೆ.[೨][೩] ಮೂಲ ಆಮ್ಲದಂತೆ ಇವು ಕೂಡ ಪ್ರಬಲ ಉತ್ಕರ್ಷಣಕಾರಿಗಳು.[೪] ರಾಸಾಯನಿಕ ವಿಶ್ಲೇಷಣೆಯಲ್ಲಿ ಇವುಗಳಿಗೆ ಪ್ರಾಶಸ್ತ್ಯ ಉಂಟು. ಹೈಡ್ರೊಜನ್ ಪೆರಾಕ್ಸೈಡಿನ ಉತ್ಪಾದನೆಯಲ್ಲಿ ಅಮೋನಿಯಂ ಪರ್‌ಸಲ್ಫೇಟಿನ ಪಾತ್ರವಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Senning, Alexander (2006-10-30). Elsevier's Dictionary of Chemoetymology: The Whys and Whences of Chemical Nomenclature and Terminology. ISBN 9780080488813.
- ↑ Shafiee, Saiful Arifin; Aarons, Jolyon; Hamzah, Hairul Hisham (2018). "Electroreduction of Peroxodisulfate: A Review of a Complicated Reaction". Journal of the Electrochemical Society. 165 (13): H785–H798. doi:10.1149/2.1161811jes. S2CID 106396614.
- ↑ F. Feher, "Potassium Peroxydisulfate" in Handbook of Preparative Inorganic Chemistry, 2nd Ed. Edited by G. Brauer, Academic Press, 1963, NY. Vol. 1. p. 390.
- ↑ Encyclopedia of Reagents for Organic Synthesis, vol. 1, pp. 193–197(1995)