ನೆಲ್ಲಿಕಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಕರಾವಳಿ ತೀರದ ಪ್ರಮುಖ ಜಿನ ಕ್ಷೇತ್ರಗಳಲ್ಲಿ ನೆಲ್ಲಿಕಾರು ಕೂಡ ಒಂದು.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಈ ಪುಟ್ಟ ಗ್ರಾಮಕ್ಕೆ ಕಾರ್ಕಳ-ಮೂಡಬಿದ್ರೆ ಹತ್ತಿರದ ಪಟ್ಟಣಗಳು. ಕಾರ್ಕಳ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಈ ಪ್ರದೇಶ ಮೂಡಬಿದಿರೆ-ಮೂಲ್ಕಿ ವಿಧಾನಸಭೆ ಕ್ಷೇತ್ರಕ್ಕೊಳಪಡುತ್ತದೆ.ಲೋಕಸಭಾ ಚುಣಾವಣೆಗೆ ಮಂಗಳೂರು ಕ್ಷೇತ್ರಕ್ಕೆ ಒಳಪಡುತ್ತದೆ. ಗ್ರಾಮದ ಪಿನ್ ಕೋಡ್ ೫೭೪೧೦೭. ಮಂಗಳೂರು ತಾಲೂಕಿನ ನೆಲ್ಲಿಕಾರು ಕುದುರೆಮುಖ ಪರ್ವತ ಶ್ರೇಣಿಯ ಹತ್ತಿರದ ಹಳ್ಳಿ.ಅದರ ಹೆಸರು ಜಿಲ್ಲೆಯ ಒಳಗೂ ಹೊರಗೂ ಹರಡಿದೆ.ಇದಕ್ಕೆ ಮುಖ್ಯಕಾರಣ ಸಮೀಪದ ಗುಡ್ಡಗಳಲ್ಲಿ ದೊರೆಯುವ ಒಂದು ವಿಶಿಷ್ಠ ರೀತಿಯ ಕಪ್ಪುಶಿಲೆ.ಇದು ನೆಲ್ಲಿಕಾರು ಶಿಲೆಯೆಂದೆ ಪ್ರಸಿದ್ಧಿ.ಮಲೆನಾಡ ಸೆರಗಲ್ಲಿದ್ದು ಗೌಜು ಗದ್ದಲಗಳಿಗೆ ಹೋಗದೆ ಪ್ರಶಾಂತವಾಗಿರುವ ಊರು, ಆದ್ದರಿಂದಲೇ ಇದು ಮುನಿಗಳಿಗೆ ವಾಸಸ್ಥಾನವಾಗಿತ್ತು.

ಕಲ್ಯಾಣಕೀರ್ತಿ[ಬದಲಾಯಿಸಿ]

ಕಲ್ಯಾಣಕೀರ್ತಿ ಎಂಬ ಯತಿವರ್ಯರು ಇಲ್ಲಿ ಕೈಂಕರ್ಯ ನಡೆಸಿದ್ದರು.ಎಲೆಮರೆಯ ಕಾಯಿಯಂತೆ ಇದ್ದು ಕಾವ್ಯಗಂಗೆಯನ್ನು ಹರಿಸಿದ ಕವಿ ಕಲ್ಯಾಣಕೀರ್ತಿ ನೆಲ್ಲಿಕಾರಿನವರು. ನೆಲ್ಲಿಕಾರಿನ ಬಸದಿ ಇವರ ಕೊಡುಗೆ. ಕಲ್ಪನಾ ಲೋಕದ ವಿಶೇಷವೆಂದು ಭಾಸವಾಗುವ ಈ ಸಂಗತಿ ಐತಿಹಾಸಿಕ ಸತ್ಯ.ಇದಕ್ಕೆ ಶಾಸನಾಧಾರಗಳು ಇವೆ. ತಾಲೂಕಿಗೆ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಪ್ರಥಮ ಕನ್ನಡ ಕವಿ ಕಲ್ಯಾಣಕೀರ್ತಿ.ಈತನ ಮೊದಲ ಕಾವ್ಯ ಜಿನಯಜ್ಞ ಫಲೋದಯ.ಈ ಕಾವ್ಯ ಕ್ರಿ.ಶ ೧೪೨೮ರಲ್ಲಿ ಪೂರ್ಣವಾಗಿತ್ತು ಹಾಗೆಂದು ಕವಿಯೇ ತನ್ನ ಕಾವ್ಯದ ಕೊನೆಯಲ್ಲಿ ತಿಳಿಸಿದ್ದಾರೆ.

ನೆಲ್ಲಿಕಾರಿನ ಇತಿಹಾಸ[ಬದಲಾಯಿಸಿ]

ನೆಲ್ಲಿಕಾರಿನ ಹಿಂದಿನ ಹೆಸರು ಅಮಲಕಪುರ.ಊರ ಮಧ್ಯ ವಿಶಾಲ ಪ್ರಾಂಗಣದಲ್ಲಿ ಭಗವಾನ್ ಅನಂತನಾಥ ಸ್ವಾಮಿಯ ದಿವ್ಯ ಬಸದಿಯಿದೆ.ಇದು ಕ್ರಿ.ಶ ೧೪೨೫ರ ವೇಳೆಗೆ ಸ್ಥಾಪಿತವಾದ ಬಸದಿಯೆಂದು ಇತಿಹಾಸಕಾರರು ಹೇಳುತ್ತಾರೆ.ಮುಖ್ಯವಾಗಿ ವಿಜಯನಗರ ವಾಸ್ತು ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ.ಈ ಶಿಲಾ ಬಸದಿಯು ಎರಡು ಅಂತಸ್ತಿನ ಸುಂದರವಾದ ಕಟ್ಟಡ . ಗರ್ಭಗೃಹದಲ್ಲಿ ವಿರಾಜಮಾನರಾದ ಭಗವಾನ್ ಸ್ವಾಮಿಯ ಮೂಲವಿಗ್ರಹವು ಹೊಯ್ಸಳ ಶೈಲಿಯ ಗಂಭೀರ ರಚನೆ ಹಾಗೂ ಮೇಗಿನ ನೆಲೆಯಲ್ಲಿ ಅತಿಸುಂದರ ಭಗವಾನ್ ಸ್ವಾಮಿಯ ವಿಗ್ರಹವೂ ಇದೆ.

ರಥೋತ್ಸವ[ಬದಲಾಯಿಸಿ]

ನೆಲ್ಲಿಕಾರು ರಥೋತ್ಸವವು ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿದೆ.ಹಾಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.ನಾಡಿನ ಜೈನ ಮತ್ತು ಜೈನೇತರರೂ ಇದರಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಪ್ರತೀ ಸಂವತ್ಸರದ ಆದಿಯ ಪಾಡ್ಯದ ದಿನ ಧ್ವಜಾರೋಹಣವಾಗಿ ಷಷ್ಠಿಯ ತನಕ ವಿದ್ಯುಕ್ತವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.ರಥೋತ್ಸವದ ಮೊದಲ ದಿನ ಅಂದರೆ ಪಂಚಮಿಯಂದು ಭಗವಾನ್ ಚಂದ್ರಪ್ರಭ ಸ್ವಾಮಿಗೆ ಅಟ್ಟಳಿಗೆಯ ಮೇಲೆ ಅಭಿಷೇಕದ ಹಾಗೂ ನಿರ್ದಿಷ್ಟವಾದ ಕೆಲವು ಕಟ್ಟೆಗಳಲ್ಲಿ ಕಟ್ಟೆಪೂಜೆ ಉತ್ಸವವು ನಡೆಯುತ್ತದೆ. ಬಸದಿಯ ಒಳಾಂಗಣದಲ್ಲಿ ಕ್ಷೇತ್ರಪಾಲರ ಸ್ಥಂಭವಿದೆ. ಹೊರಗಿನ ವಿಶಾಲ ಪ್ರಾಂಗಣದ ನಾಲ್ಕೂ ಕಡೆಯೂ ಬಸದಿಗೆ ರಕ್ಷಣೆಯ ಕೋಟೆಯಂತೆ ಶ್ರಾವಕರ ಮನೆಗಳಿವೆ.

ನೆಲ್ಲಿಕಾರಿನ ಪ್ರಮುಖರು[ಬದಲಾಯಿಸಿ]

ಶಾಸ್ತ್ರಸಾರ ಸಮುಚ್ಚಯ ಕನ್ನಡಟೀಕು ಬರೆದ ಮುನಿ ಮಾಘನಂದ್ಯಾಚಾರ್ಯರು ಇಲ್ಲಿಯ ಚೈತ್ಯವಾಸಿಗಳು. ಈ ಗ್ರಂಥದಲ್ಲಿ ತಮ್ಮ ಪೂರ್ವವಿಚಾರವನ್ನು ತಿಳಿಸಿರುವುದಿಲ್ಲ. ಆದರೆ ಗ್ರಂಥವನ್ನು ನೆಲ್ಲಿಕಾರಿನ ಬಸದಿಯಲ್ಲಿ ಬರೆದಿದ್ದಾಗಿ ತಿಳಿಸುತ್ತಾರೆ. ಹೊಂಬುಜ ಕ್ಷೇತ್ರದ ಹಿಂದಿನ ಗುರುಗಳಾದ ದೇವೇಂದ್ರಕೀರ್ತಿ ಸ್ವಾಮಿಗಳು, ಶ್ರೀ ಕ್ಷೇತ್ರ ಶ್ರವಣಬೆಳ್ಗೊಳದ ಗುರು ಶ್ರೀ ಚಾರುಕೀರ್ತಿ ಸ್ವಾಮಿಗಳವರು ನೆಲ್ಲಿಕಾರಿನವರು. ನೆಲ್ಲಿಕಾರಿನ ಗಣ್ಯರಲ್ಲಿ ದಿವಂಗತ ಎನ್.ಎಸ್‌.ಜೈನಿ ಒಬ್ಬರು ಶಾಲೆಯ ಶಿಕ್ಷಕ ವೃತ್ತಿಯನ್ನು ನಡೆಸುತ್ತಿದ್ದ ಇವರು ಹಿಂದಿ, ಮರಾಠಿ, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದವರು. ದಿ.ರಾಧಮ್ಮನವರು ದಿ. ಎನ್‌ ಎಸ್‌ ಜೈನಿಯವರ ಧರ್ಮಪತ್ನಿ ಜೈನ ಮಹಿಳೆ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ರಾಧಮ್ಮನವರು ಹಲವಾರು ಭಜನೆ ಕೀರ್ತನೆಗಳನ್ನು ಬರೆದವರು. ವರ್ಧಮಾನಚರಿತ್ರೆಯನ್ನು ಸಾಂಗತ್ಯದಲ್ಲಿ ಬರೆದಿದ್ದಾರೆ. ಚಂದಯ್ಯ ಶಾಸ್ತ್ರಿಯವರು ನೆಲ್ಲಿಕಾರಿನ ಬಸ್ತಿಯಲ್ಲಿ ಪ್ರತಿನಿತ್ಯ ಶಾಸ್ತ್ರ ಪಠಣವನ್ನು ಮಾಡಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿದವರು ಭಜನೆ ಕೀರ್ತನೆಗಳನ್ನು ರಚಿಸಿದವರು. ಇನ್ನು ಯಾದವರು ಪ್ರಖಾಂಡ ಪಂಡಿತರಾಗಿದ್ದು ಧವಳ ಗ್ರಂಥದ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡವರು. ಹಲವಾರು ಭಕ್ತಿಗೀತೆಗಳನ್ನು ರಚಿಸಿ ಹಾಡುವುದು ಮಾತ್ರವಲ್ಲ ಮಕ್ಕಳಿಗೆ ಸಂಗೀತ ಪಾಠವನ್ನು ಕೂಡ ಹೇಳಿಕೊಟ್ಟು ಮಕ್ಕಳಲ್ಲಿ ಜಿನ ಭಕ್ತಿ ಉಂಟು ಮಾಡಿದವರು. ಹೀಗೆ ಒಟ್ಟಿನಲ್ಲಿ ನೆಲ್ಲಿಕಾರು ಒಂದು ಸುಸಂಸ್ಕ್ರತ ಸ್ಥಳವಾಗಿದ್ದು ಧರ್ಮ ಮತ್ತು ಜ್ಞಾನ ಪ್ರಸಾರಕಾರ್ಯ ಇಲ್ಲಿ ಅವಿಚ್ಛಿನ್ನವಾಗಿ ನಡೆದಿತ್ತು. ಅದು ಈಗಲೂ ನಡೆಯುತ್ತಿದೆ. ನೆಲ್ಲಿಕಾರು ಶಿಲೆಗಷ್ಟೆ ಅಲ್ಲದೆ ಜೈನ ಸಂಸ್ಕೃತಿ ಹಾಗೂ ಸಾಹಿತ್ಯ ಬೆಳವಣಿಗೆಗೂ ಸುಂದರ ಪ್ರಶಾಂತ ತಾಣವಾಗಿ ಬೆಳೆದು ನಿಂತಿದೆ.

ಉಲ್ಲೇಖಗಳು[ಬದಲಾಯಿಸಿ]

  1. ಎಸ್.ಡಿ ಶೆಟ್ಟಿ ಮತ್ತು ಡಾ.ಪಿ.ಎನ್ ನರಸಿಂಹಮೂರ್ತಿರವರ ಲೇಖನಗಳು ಮತ್ತು ಅಜಿತ್‌ಜೈನ್ ನಾರಾವಿ