ವಿಷಯಕ್ಕೆ ಹೋಗು

ನಿಂತಿಕಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಸ್ಥಳ ಪ್ರಾಚೀನ ಬೆಳ್ಳಾರೆ ಮಾಗಣೆಯ ಮುರುಳ್ಯ ಗ್ರಾಮದಲ್ಲಿದೆ.

ಸಂಪರ್ಕ

[ಬದಲಾಯಿಸಿ]

ಸುಬ್ರಹ್ಮಣ್ಯದಿಂದ ಏನೆಕಲ್ಲು ಮೂಲಕ ಪುತ್ತೂರಿಗೆ ಹೋಗುವ ಮಾರ್ಗ ಬೆಳ್ಳಾರೆಗೆ ಕವಲಾಗುವಲ್ಲಿ ಈ ಸ್ಥಳವಿದೆ.ಬೆಳ್ಳಾರೆಯ ದಾರಿಯ ಪಕ್ಕದಲ್ಲಿ ಈ ಸ್ಥಳ ಗೋಚರಿಸುತ್ತದೆ.ಇಂದು ಈ ಸ್ಥಳ ಶೈಕ್ಷಣಿಕ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.

ಶಿಕ್ಷಣ ಸಂಸ್ಥೆ

[ಬದಲಾಯಿಸಿ]

ಕೆ.ಎಸ್‌ ಗೌಡ ಶಿಕ್ಷಣ ಸಂಸ್ಥೆಗಳು ಇಲ್ಲಿವೆ.

ಇತಿಹಾಸ

[ಬದಲಾಯಿಸಿ]

ಚಾಕಟೆ ಮತ್ತು ಕಾಯರ ಮರಗಳು ಜೋಡಿಯಾಗಿರುವಲ್ಲಿ ನಿಂತ ಭಂಗಿಯಲ್ಲಿ ಕಲ್ಲೊಂದು ಕಾಣುತ್ತದೆ.ಇದೇ ನಿಂತಿಕಲ್ಲು. ಈ ಕಲ್ಲಿನ ಕುರಿತಂತೆ ಪುರಾಣವಿದ್ದು ತುಳುವ ದೈವಾರಾಧನಾ ಜಗತ್ತಿನ ಉಲ್ಲಾಕುಳು/ಪೂಮಾಣಿ-ಕಿನ್ನಿಮಾಣಿ ದೈವಗಳನ್ನು ಹೊಂದಿಕೊಂಡಿದೆ. ಈ ಉಲ್ಲಾಕುಳು ದೈವಗಳು ಕಂಚಿ ದೇಶದಿಂದ ಕನ್ಯಾರ್ಧನಕ್ಕಾಗಿ ಕುಮಾರ ಪರ್ವತಕ್ಕ್ಕೆ ಬರುತ್ತಾರೆ.ಅಲ್ಲಿಂದ ಅವರಿಗೆ ಕುಕ್ಕೆಯ ಏರಿದ ಕೊಡಿಮರ ಕಾಣುತ್ತದೆ. ಕಂಡ ಕೊಡಿಮರವನ್ನು ತಮ್ಮ ದೈವ ಕಿನ್ನಿಮಾಣಿ ಬಾಣದಿಂದ ಕತ್ತರಿಸಿ ಹಾಕುತ್ತಾನೆ.ಪರ್ವತ ಇಳಿದು ಕುಕ್ಕೆಯ ಸುಬ್ರಾಯ ದೇವರ ಅಂಗಣಕ್ಕೆ ಉಲ್ಲಾಕುಳು ಬರುತ್ತಾರೆ. ಅಲ್ಲಿನ ದೈವಗಳು ಉಲ್ಲಾಕುಳುಗಳೊಂದಿಗೆ ಕಾಳಗ ನಡೆಸುತ್ತಾರೆ.ಸಹಿಸಲಾರದೆ ಕುಕ್ಕೆಯ ದೈವಗಳು ಗುಡ್ಡ ಹತ್ತುತ್ತವೆ.ಸಿಟ್ಟುಗೊಂಡ ಸುಬ್ರಾಯ ದೇವರಿಗೂ ಉಳ್ಳಾಕುಳುಗಳಿಗೂ ಏಳು ಹಗಲು ಕಾಳಗ ನಡೆಯುತ್ತದೆ.ಉಲ್ಲಾಕುಳುಗಳ ಪರೀಕ್ಷೆಗಾಗಿ ರಾಮಾಯಣಕತೆಯನ್ನೋದುವಂತೆ ಸುಬ್ರಾಯ ದೇವರು ತಿಳಿಸುತ್ತಾರೆ.ಪಾರಾಯಣದ ಮುಕ್ತಾಯಕ್ಕೆ ಕೊಟ್ಟಾರದ ಪಣವು ಮುಗಿಯುತ್ತದೆ. ದೈವಗಳು ಸತ್ಯ ಸಂದರೆಂದು ತಿಳಿಯುತ್ತದೆ.ರಾಜಿ ಏರ್ಪಡುತ್ತದೆ.ನಿಮಗೆ ಇನ್ನು ಮುಂದೆ ನೈವೇದ್ಯ ಸಿಗದಂತಾಗಲಿ ಎಂದು ಸುಬ್ರಾಯರು ಶಾಪವಿತ್ತರು. ಹದಿನಾರು ಕೈಯ ಕೊಪ್ಪರಿಗೆಯನ್ನು ಚಿನ್ನದ ಸಟ್ಟುಗ ಸಹಿತ ದಾನ ಮಾಡಿ ಇನ್ನು ಮುಂದೆ ಅನ್ನದಾನಿ ಸುಬ್ರಾಯನೆಂದು ಹೆಸರು ಪಡೆದುಕೋ ಎಂದು ಹೇಳಿ ಉಲ್ಲಾಕುಳು ಕಡಿದ ಕೊಡಿಮರ ಸಹಿತ ಹೊರಟು ಬರುತ್ತಾರೆ. ಉಲ್ಲಾಕುಳು ಕುಕ್ಕೆಯಿಂದ ಹೊರಟು ಬರುವಾಗ ತಮ್ಮ ದೈವ ಕಿನ್ನಿಮಾಣಿ ಸುಬ್ರಾಯನಿಗೆ ಹೊಡೆಯಲು ಎತ್ತಿದ ಕಲ್ಲನ್ನು ಹಾಗೆ ಕಂಕುಳಡಿಯಲ್ಲಿ ಇರಿಸಿಕೊಂಡಿದ್ದ.ಕುಕ್ಕೆಯಿಂದ ಹೊರಟು ಬಂದ ಉಲ್ಲಾಕುಳು ಪಂಜ ಮತ್ತು ಬೆಳ್ಳಾರೆ ಮಾಗಣೆಗಳ ಗಡಿಭಾಗಕ್ಕೆ ಬಂದು ಗೋಳಿಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅದರ ಕುರುಹು ಆಗಿ ಆ ಕಲ್ಲನ್ನು ಊರುತ್ತಾರೆ.ಹೀಗೆ ಉಲ್ಲಾಕುಳು ವಿಶ್ರಾಂತಿ ಪಡೆದ ನೆನಪಿಗಾಗಿ ನಿಲ್ಲಿಸಿದ ಕಲ್ಲೇ ನಿಂತ ಕಲ್ಲೆಂದು ಹೆಸರು ಪಡೆದುಕೊಂಡಿದೆ.[]

ಉಲ್ಲೇಖ

[ಬದಲಾಯಿಸಿ]

[]

  1. ಸ್ಥಳನಾಮಗಳು ಮತ್ತು ಐತಿಹ್ಯಗಳು-೨೦೧೬ ಪುಟ ಸಂಖ್ಯೆ ೯-೧೦ ಸಂಪಾದಕರು: ಪೂವಪ್ಪ ಗೌಡ ಕಣಿಯೂರು ಪ್ರಕಾಶಕರು:ಕನ್ನಡ ಸಂಘ ನೆಹರು ಮೆಮೊರಿಯಲ್ ಕಾಲೇಜು ಸುಳ್ಯ
  2. ಉಲ್ಲಾಕುಳು-ಐತಿಹಾಸಿಕತೆ,ಭೌಗೋಳಿಕತೆ ಮತ್ತು ಆರಾಧನಾ ಸ್ವರೂಪ ಅಪ್ರಕಟಿತ ಮಹಾಪ್ರಬಂದ;ಡಾ ಪೂವಪ್ಪ ಕಣಿಯೂರು;ಕನ್ನಡ ವಿಭಾಗ,ಮಂಗಳೂರು ವಿಶ್ವವಿದ್ಯಾನಿಲಯ ಮಂಗಳೂರು.