ದೇವುಲಪಲ್ಲಿ ಕೃಷ್ಣಶಾಸ್ತ್ರಿ
ದೇವುಲಪಲ್ಲಿ ಕೃಷ್ಣಶಾಸ್ತ್ರಿ | |
---|---|
ಜನನ | ೧ ನವೆಂಬರ್ ೧೮೯೭ ಆರ್.ಚಂದ್ರಮ್‍ಪಲೆಮ್, ಪೀತಾಪುರಮ್, ಪೂರ್ವ ಗೋದಾವರಿ, ಆಂಧ್ರಪ್ರದೇಶ. |
ಮರಣ | February 24, 1980 ಭಾರತ | (aged 82)
ಕಾವ್ಯನಾಮ | ದೇವುಲಪಲ್ಲಿ ಕೃಷ್ಣಶಾಸ್ತ್ರಿ |
ರಾಷ್ಟ್ರೀಯತೆ | ಭಾರತೀಯ |
ಜನಾಂಗೀಯತೆ | ಹಿಂಧೂ |
ಪೌರತ್ವ | ಭಾರತ |
ಪ್ರಕಾರ/ಶೈಲಿ | ಕವಿ |
ಪ್ರಮುಖ ಕೆಲಸ(ಗಳು) | ಕೃಷ್ಣ ಪಕ್ಷಮ್ |
ದೇವುಲಪಲ್ಲಿ ಕೃಷ್ಣಶಾಸ್ತ್ರಿ (೧೮೯೭-೧೯೮೦) (తెలుగు:దేవులపల్లి కృష్ణశాస్త్రి) ತೆಲುಗು ಸಾಹಿತ್ಯದಲ್ಲಿ ಮೆರೆದ ಒಬ್ಬ ಹೆಸರಾಂತ ಕವಿ. ತೆಲುಗು ಸಾಹಿತ್ಯದಲ್ಲಿ ಈತ ಒಂದು ಅಧ್ಯಾಯವೇ ಎಂದು ಹೇಳುವುದರಲ್ಲಿ ಅತಿಶಯವಿಲ್ಲ. ಇವರು ರೇಡಿಯೋದಲ್ಲಿ ಲಲಿತಗೀತೆಗಳು, ಮತ್ತು ಚಲನಚಿತ್ರಗಳಲ್ಲಿ ಹಾಡುಗಳನ್ನು ಬರೆಯುವ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡರು. ದೇವುಲಪಲ್ಲಿ ವೆಂಕಟ ಕೃಷ್ಣಶಾಸ್ತ್ರಿ ಆಂಧ್ರ ಪ್ರದೇಶದ ತೂರ್ಪು ಗೋದಾವರಿ ಜಿಲ್ಲೆಯ ರಾಮಚಂದ್ರಪಾಲೆಂ ಎಂಬ ಗ್ರಾಮದಲ್ಲಿ ಒಂದು ಪಂಡಿತ ಕುಟುಂಬದಲ್ಲಿ, ೧೮೯೭ ನವೆಂಬರ್ ೧ ರಂದು ಜನಿಸಿದರು. ಅವರ ತಂದೆ ಪೆದತಂಡ್ರಿ ಒಬ್ಬ ಒಳ್ಳೆ ಪಂಡಿತನಾಗಿ ಎಲ್ಲರಿಗೂ ಸುಪರಿಚಿತರಾಗಿದ್ದರು. ಅವರ ಮನೆಯ ಅಂಗಳದಲ್ಲಿ ಪ್ರತಿನಿತ್ಯವೂ ಸಾಹಿತ್ಯ ಗೋಷ್ಠಿ ಎಂಬ ಕಾರ್ಯಕ್ರಮವು ನಡೆಯುತ್ತಿತ್ತು. ಕೃಷ್ಣಶಾಸ್ತ್ರಿಯವರು ಚಿಕ್ಕಂದಿನಿಂದಲೇ ಸಾಹಿತ್ಯವನ್ನು ರಚಿಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪೀಠಾಪುರಂ ಎಂಬ ಊರಿನಲ್ಲಿ ಅವರ ವಿದ್ಯಾಭ್ಯಾಸ ಸಾಗಿತ್ತು. ಪಾಠಶಾಲೆಯಲ್ಲಿ ಗುರುಗಳಾಗಿದ್ದ ಕೂಚಿ ನರಸಿಂಹಂ ಮತ್ತು ರಘುಪತಿ ವೇಂಕಟರತ್ನಂ ಅವರು ಆಂಗ್ಲ ಸಾಹಿತ್ಯದಲ್ಲಿ ಕೃಷ್ಣಶಾಸ್ತ್ರಿಯವರ ಅಭಿರುಚಿಯನ್ನು ಹೆಚ್ಚಿಸಿದವರು ಎಂದು ಶಾಸ್ತ್ರಿಯವರೇ ಹೇಳಿಕೊಳ್ಳುತ್ತಿದ್ದರು. ೧೯೧೮ ರಲ್ಲಿ ವಿಜಯನಗರಂ ಜಿಲ್ಲೆಗೆ ತೆರಳಿ, ಅಲ್ಲಿ ಡಿಗ್ರಿ ಪದವಿಯನ್ನು ಪಡೆದು, ಮತ್ತೆ ಕಾಕಿನಾಡ ಪಟ್ಟಣದಲ್ಲಿ ಪೆದ್ದಾಪುರಂ ಮಿಶನ್ ಹೈಸ್ಕೂಲ್‍ನಲ್ಲಿ ಉಪಾಧ್ಯಾಯರಾಗಿ ಕೆಲಸ ನಿರ್ವಹಿಸಿದರು. ಆ ಕಾಲದಲ್ಲಿ ವ್ಯಾವಹಾರಿಕ ಭಾಷಾವಾದ, ಬ್ರಹ್ಮಸಮಾಜದಂಥಹ ಸಂಸ್ಥೆಗಳು ಪ್ರಬಲವಾಗಿದ್ದವು. ಶಾಸ್ತ್ರಿಯವರು ತಮ್ಮ ವೃತ್ತಿಯನ್ನು ತ್ಯಜಿಸಿ, ಬ್ರಹ್ಮಸಮಾಜದಲ್ಲಿ ಕ್ರಿಯಾಶೀಲ ಪಾತ್ರವನ್ನು ನಿರ್ವಹಿಸಿದರು. ಆ ಸಮಯದಲ್ಲೇ ಸಾಹಿತ್ಯ ವ್ಯಾಸಂಗವನ್ನು ಮುಂದುವರೆಸಿದರು. ೧೯೨೦ರಲ್ಲಿ ರೈಲಿನಲ್ಲಿ ಬಳ್ಳಾರಿಗೆ ಪ್ರಯಾಣಿಸುತ್ತಿರುವಾಗ, ದಾರಿಯಲ್ಲಿ ಕಂಡ ಪ್ರಕೃತಿ ಸೌಂದರ್ಯದ ಮೋಡಿಗೆ ಒಳಗಾಗಿ "ಕೃಷ್ಣಪಕ್ಷಂ ಕಾವ್ಯಂ" ಎಂಬ ಪದ್ಯವನ್ನು ರಚಿಸಿದರು. ೧೯೨೨ ರಲ್ಲಿ ಅವರ ಧರ್ಮಪತ್ನಿಯ ದೇಹಾಂತದ ಬಳಿಕ, ಅವರ ಕಾವ್ಯಗಳಲ್ಲಿ ವಿರಹವು, ವಿಷಾದವು ಹೆಚ್ಚಾಗಿ ಕಾಣಿಸತೊಡಗಿತು. ನಂತರ ಮತ್ತೆ ವಿವಾಹ ಬಂಧನಕ್ಕೆ ಕಾಲಿಟ್ಟು, ಪೀಠಾಪುರಂ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಕೆಲವು ಕಾರಣಗಳಿಂದಾಗಿ ಆ ಉದ್ಯೋಗವನ್ನೂ ತ್ಯಜಿಸಿ ಮತ್ತೆ ಬ್ರಹ್ಮಸಮಾಜದಲ್ಲಿ, ನವ್ಯ ಸಾಹಿತಿ ಸಮಿತಿಯಲ್ಲಿ ಸದಸ್ಯರಾಗಿ, ಭಾವಗೀತೆಗಳ ಪ್ರಚಾರಕರಾಗಿ ದೇಶವೆಲ್ಲಾ ತಿರುಗಿದರು. ಈ ಸಮಯದಲ್ಲಿ, ಅನೇಕ ಕವಿಗಳೊಡನೆ, ಪಂಡಿತರೊಡನೆ ಸಂಪರ್ಕ ಬೆಳೆಯಿತು. ಪಾಶ್ಚಾತ್ಯ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಪೀಠಾಪುರದಲ್ಲಿ ಹರಿಜನ ವಸತಿಗೃಹದಲ್ಲಿ ಹರಿಜನೋದ್ಧಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕಾಗಿ, ಅವರ ಕುಟುಂಬದವರು ಅವರಿಂದ ದೂರ ಸರಿದರು. ಆದರೂ ಧೈರ್ಯಗೆಡದೆ ಕೃಷ್ಣಶಾಸ್ತ್ರಿ ವೇಶ್ಯಾವಿವಾಹ ಸಂಸ್ಥೆಯನ್ನು ಏರ್ಪಡಿಸಿ ಅನೇಕರಿಗೆ ಮದುವೆಮಾಡಿಸಿದರು.
ರಚನೆಗಳು
[ಬದಲಾಯಿಸಿ]ಸಂಘ ಸಂಸ್ಕರಣ ಕಾರ್ಯಕ್ರಮಗಳಲ್ಲಿ ಚುರುಕ್ಕಾಗಿ ಪಾಲ್ಗೊಳ್ಳುತ್ತಲೇ "ಊರ್ವಶಿ" ಎಂಬ ಕಾವ್ಯವನ್ನು ರಚಿಸಿದರು. ೧೯೨೯ ರಲ್ಲಿ ವಿಶ್ವಕವಿ ರವೀಂದ್ರನಾಥ್ ಟಾಗೋರ್[೧] ಅವರು ಪರಿಚಯವಾಗಿ, ಅವರೊಡನೆ ಸಾಹಿತ್ಯಬಂಧವು ಪ್ರಾರಂಭವಾಯಿತು. ೧೯೩೩-೪೧ ಕಾಲದಲ್ಲಿ ಕಾಕಿನಾಡ ಕಾಲೇಜಿನಲ್ಲಿ ಮತ್ತೆ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ೧೯೪೨ ರಲ್ಲಿ ಬಿ.ಎನ್.ರೆಡ್ಡಿಯವರ ಪ್ರೋತ್ಸಾಹದೊಡನೆ "ಮಲ್ಲೀಶ್ವರಿ" ಚಲನಚಿತ್ರಕ್ಕೆ ಹಾಡುಗಳನ್ನು ಬರೆದರು. ತದನಂತರ ಹಲವಾರು ಚಲನಚಿತ್ರಗಳಿಗೆ ಸಾಹಿತ್ಯ ರಚಿಸುವ ಕೆಲಸವನ್ನು ಮಾಡಿದರು. ೧೯೫೭(೧೯೪೭) ರಲ್ಲಿ ಆಕಾಶವಾನಿಯಲ್ಲಿ ಸೇರಿ ತೆಲುಗು ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಪ್ರಸಂಗಗಳನ್ನೂ, ಗೀತೆಗಳನ್ನೂ ನೀಡಿದರು. ದೇವುಲಪಲ್ಲಿ ಕೃಷ್ಣಶಾಸ್ತ್ರಿಯವರು ಭಾವ ಕವಿಯಾಗಿ, 'ಆಂಧ್ರ ಪ್ರದೇಶದ ಷೆಲ್ಲಿ' ಆಗಿ ಪ್ರಸಿದ್ಧರಾದರು. ಚಲನ ಚಿತ್ರರಂಗಕ್ಕೆ ಕಾಲಿಟ್ಟು, ಸಿನೆಮಾ ಹಾಡುಗಳಿಗೆ ಕಾವ್ಯ ಗೌರವವನ್ನು ನೀಡಿದರು. ಅಪಾರ ಮಾಧುರ್ಯವನ್ನು ಹೊಂದಿರುವ ಕೃಷ್ಣಶಾಸ್ತ್ರಿ ಅವರ ಸಾಹಿತ್ಯವನ್ನು ದೊಡ್ಡ ಹೆಸರಾಂತ ಕವಿಗಳಾದ ಶ್ರೀ ಶ್ರೀಯವರು ಕೊಂಡಾಡಿದ್ದಾರೆ, ಶ್ಲಾಘನೀಯವೆಂದು ಹೊಗಳಿದ್ದಾರೆ. ಲಾಲಿತ್ಯ, ಪ್ರಾಕೃತಿಕ ಸೌಂದರ್ಯ ಮತ್ತು ಸರಳತೆ ದೇವುಲಪಲ್ಲಿ ಕೃಷ್ಣಶಾಸ್ತ್ರಿಯವರು ತೆಲುಗು ಸಾಹಿತ್ಯಕ್ಕೆ ನೀಡಿದ ಕಾಣಿಕೆ. ಅವರ ಕವಿತೆಗಳಲ್ಲಿ ಭಾವೋದ್ವೇಗಗಳಿಗೆ ಹೆಚ್ಚು ಒತ್ತನ್ನು ನೀಡಿ, ಓದುಗರ ಮನಸ್ಸನ್ನು ತಮ್ಮತ್ತ ಸೆಳೆಯುವ ಪ್ರಯತ್ನವು ಮಾಡಿದ್ದಾರೆ. ಪ್ರೀತಿ, ಪ್ರಣಯ, ವಿರಹ, ವಿಷಾದ, ಆತ್ಮ ನಿವೇದನೆ, ಆರಾಧನೆ, ಮನುಷ್ಯನ ದೈನಂದಿನ ಬದುಕು, ಸುಖ-ದುಃಖಗಳನ್ನು ಬಹಳ ಸ್ಪಷ್ಟವಾಗಿ, ಸರಳವಾಗಿ ವ್ಯಕ್ತಪಡಿಸಲಾಗಿದೆ. ಇವರು, ಭಕ್ತಿಗೀತೆಗಳನ್ನೂ ರಚಿಸಿದ್ದಾರೆ. ರಾಜಮಕುಟಂ, ಸುಖದುಃಖಾಲು, ಕಲಿಸಿನ ಮನಸುಲು, ಅಮೇರಿಕ ಅಮ್ಮಾಯಿ, ಗೋರಿಂಟಾಕು ಮೊದಲಾದ ಚಲನ ಚಿತ್ರಗಳಿಗೆ ಸಾಹಿತ್ಯವನ್ನು ನೀಡಿದ್ದಾರೆ. ಸುಮಾರು ೧೭೦ ಹಾಡುಗಳನ್ನು ರಚಿಸಿರುವ ಹೆಗ್ಗಳಿಕೆ ಇವರದು. ಒಬ್ಬ ಒಳ್ಳೆಯ ಮನಸುವುಳ್ಳಂತಹ ಕವಿಯಾಗಿ, ರಚನಕಾರರಾಗಿ, ಭಾವಗೀತೆಗಳ ಪ್ರತಿನಿಧಿಯಾಗಿ ಪ್ರಖ್ಯಾತಿಯನ್ನು ಪಡೆದು, ತೆಲುಗು ಸಾಹಿತ್ಯಕ್ಕೆ ಅಪಾರವಾದ, ಅಮೂಲ್ಯವಾದ, ಮರೆಯಲಾಗದ ಕೊಡುಗೆ, ಕಾಣಿಕೆಗಳನ್ನು ನೀಡಿದ ಕವಿ ದೇವುಲಪಲ್ಲಿ ಕೃಷ್ಣಶಾಸ್ತ್ರಿಯವರು ೧೯೮೦ ಫೆಬ್ರವರಿ ೨೪ ರಂದು ಇಹಲೋಕವನ್ನು ತ್ಯಜಿಸಿದರು.
- ೧೯೭೫- ಆಂಧ್ರ ವಿಶ್ವವಿದ್ಯಾಲಯವು, ಇವರಿಗೆ 'ಕಲಾಪ್ರಪೂರ್ಣ' ಎಂಬ ಬಿರುದನ್ನು ನೀಡಿ ಗೌರವಿಸಿದೆ.
- ೧೯೭೮- ಕೃಷ್ಣಶಾಸ್ತ್ರಿಯವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
- ೧೯೭೬- ಭಾರತದ ಮುಖ್ಯ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಗೆ ಇವರು ಪಾತ್ರರಾಗಿದ್ದಾರೆ.
ಮಲ್ಲೀಶ್ವರಿ ಚಲನಚಿತ್ರದಿಂದ ಒಂದು ಪ್ರಸಿದ್ಧವಾದ ಗೀತೆ
[ಬದಲಾಯಿಸಿ]ಮನಸುನ ಮಲ್ಲೆಲ ಮಾಲಲೂಗೆನೆ
ಕನುಲ ವೆನ್ನೆಲ ಡೊಲಲೂಗೆನೆ
ಎಂತ ಹಾಯಿ ಈರೇಯಿ ನಿಂಡೆನೋ
ಎನ್ನಿ ನಾಳ್ಳಕೀ ಬ್ರತುಕು ಪಂಡೆನೋ
ಕೊಮ್ಮಲ ಗುವ್ವಲ ಸವ್ವಡಿ ವಿನಿನಾ
ರೆಮ್ಮಲ ಗಾಲುಲ ಸವ್ವಡಿ ವಿನಿನಾ
ಆಲಲು ಕೊಲನುಲೊ ಗಲ ಮನಿನಾ
ಡವುಲ ವೇಣುವು ಸವ್ವಡಿ ವಿನಿನಾ
ನೀವು ವಚ್ಚೇವನಿ ನೀಪಿಲುಪೇ ವಿನಿ
ಕನ್ನುಲ ನೀರೆಡಿ ಕಲಯ ಚೂಚಿತಿನಿ
ಗಡಿಯೇ ಯುಕ ವಿಡಿಚಿ ಪೋಕುಮ
ಎಗಸಿನ ಹೃದಯಮು ಪಗುಲ ನೀಕುಮ
ಎನ್ನಿನಾಳ್ಳಕೀ ಬ್ರತುಕು ಪಂಡುನೋ
ಎಂತ ಹಾಯಿ ಈ ರೇಯಿ ನಿಂಡೆನೋ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- JayaJayaPriyaBharatha(pdf file)
- Chukkalu(from KrishnaPaksham)
- ಚುಕ್ಕಲು Archived 2011-08-08 ವೇಬ್ಯಾಕ್ ಮೆಷಿನ್ ನಲ್ಲಿ.
- ನೇನು Archived 2012-09-07 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ವೇಛ್ಛಾಗಾನಂ Archived 2012-09-07 ವೇಬ್ಯಾಕ್ ಮೆಷಿನ್ ನಲ್ಲಿ.
- "ಅಪ್ಪಜ್ಯೋಸುಲ-ವಿಷ್ಣುಭೋಟ್ಲ-ಕಂದಾಳಂ ಫೌಂಡೇಷನ್" ಅವರ ವೆಬ್ಸೈಟ್ - ತೆಲುಗು ಪುಸ್ತಕಾಲ ಉದ್ಯಾನವನಂ-ಲೊ ಕೃಷ್ಣಶಾಸ್ತ್ರಿ ರಚನಲು
ಉಲ್ಲೇಖಗಳು
[ಬದಲಾಯಿಸಿ]