ದಶಲಕ್ಷಣ ಪರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ದಶಲಕ್ಷಣ ಪರ್ವ ಜೈನ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲಪಕ್ಷದ ಪಂಚಮಿ(ಗಣೇಶ ಚತುರ್ಥಿಯ ಮರುದಿನ)ಯಿಂದ ಹುಣ್ಣಿಮೆವರೆಗೆ ಹತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ದಿಗಂಬರ ಪಂಥದ ಅನುಯಾಯಿಗಳು ಈ ಪರ್ವಕ್ಕೆ ದಶಲಕ್ಷಣ ಎಂದು ಕರೆದರೆ, ಶ್ವೇತಾಂಬರ ಪಂಥೀಯರು ಈ ಪರ್ವಕ್ಕೆ ಪರ್ಯೂಷಣ ಎಂದು ಕರೆಯುತ್ತಾರೆ. ಈ ದಶಧರ್ಮಾರಾಧನೆಯ ಕೊನೆಯ ದಿನ ಕ್ಷಮಾವಾಣಿ ದಿನವನ್ನಾಗಿ ಆಚರಿಸುವ ಸಂಪ್ರದಾಯವಿದೆ. ಶ್ವೇತಾಂಬರ ಪಂಥೀಯರಲ್ಲಿ ಈ ದಿನಕ್ಕೆ ಸಂವತ್ಸರೀ ಎಂಬ ಹೆಸರು ಇದೆ. ಪರಸ್ಪರ ಕ್ಷಮೆಯಾಚಿಸುವುದರ ಮೂಲಕ ತಮ್ಮಿಂದ ಆಗಿರುವ ತಪ್ಪು - ಕೋಪಗಳನ್ನು ಮರೆತು ಕ್ಷಮಿಸಬೇಕೆಂದು ಕೇಳುತ್ತಾರೆ.

ಉದ್ದೇಶ[ಬದಲಾಯಿಸಿ]

ಪರ್ವ ಅಂದರೆ ಹಬ್ಬ. ಹಬ್ಬವೆಂದರೆ ಸಂಭ್ರಮ, ಸಡಗರ, ಸಂತೋಷ, ಸುಖ-ಭೋಗದ ಕನಸು ಕಾಣುತ್ತೇವೆ. ಆದರೆ ದಶಲಕ್ಷಣ ಪರ್ವ ಭೋಗದ ಪರ್ವವಲ್ಲ, ತ್ಯಾಗದ ಪರ್ವ, ವೈರಾಗ್ಯದ ಪರ್ವ. ವೈರಾಗ್ಯದ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಪರ್ವವಾಗಿದೆ. ಇದು ಅಧ್ಯಾತ್ಮಿಕ ಪರ್ವವಾಗಿದ್ದು, ನಮ್ಮ ಭಾವನೆಗಳನ್ನು ಪರಿಷ್ಕರಿಸಿ ಪರಿಶುದ್ದಗೊಳಿಸುವ ಹಬ್ಬವಾಗಿದೆ. ವರ್ತನೆಯಲ್ಲಿ ಪರಿವರ್ತನೆ ಮಾಡುವ ಪರ್ವವಾಗಿದೆ. ವಿಕಾರ ಭಾವನೆಗಳನ್ನು ತ್ಯಜಿಸಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಉದಾತ್ತ ಭಾವನೆಗಳನ್ನು ಸ್ವೀಕರಿಸುವುದೇ ಈ ಪರ್ವದ ಮೂಲ ಉದ್ದೇಶವಾಗಿದೆ. ಈ ಪರ್ವದಲ್ಲಿ ಶ್ರಾವಕ - ಶ್ರಾವಕಿಯರು ಸಂಯಮಿಗಳಾಗುತ್ತಾರೆ. ಜಪ-ತಪ, ಪೂಜೆ, ಧ್ಯಾನ, ಪ್ರಾರ್ಥನೆಯಲ್ಲಿ ತಲ್ಲೀನರಾಗುತ್ತಾರೆ. ತಮ್ಮ ಪ್ರಾಯ, ಶಕ್ತಿ - ಸಾಮರ್ಥಕ್ಕೆ ಅನುಗುಣವಾಗಿ ಉಪವಾಸ ಮಾಡುತ್ತಾರೆ.

ಜೈನ ಧರ್ಮೀಯರು ತಮ್ಮ ನಿತ್ಯಜೀವನದಲ್ಲಿ ಆಚರಿಸಬೇಕಾದ ದಶಧರ್ಮಗಳೆಂದರೆ-

 • ಕ್ಷಮೆ
 • ಮಾರ್ದವತೆ
 • ಆರ್ಜವ
 • ಶೌಚ
 • ಸತ್ಯ
 • ಸಂಯಮ
 • ತಪ
 • ತ್ಯಾಗ
 • ಆಕಿಂಚನ್ಯ ಮತ್ತು
 • ಬ್ರಹ್ಮಚರ್ಯ

ಈ ದಶಲಕ್ಷಣ ಪರ್ವದಂದು ಆಯಾ ದಿನ ಆ ಧರ್ಮದ ಬಗ್ಗೆ ಚಿಂತನ-ಮಂಥನ ನಡೆಸಿ ಆತ್ಮ ಧರ್ಮವನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತದೆ. ಎಲ್ಲಾ ಬಸದಿ(ಜೈನ ಮಂದಿರ)ಗಳಲ್ಲಿ ಸಂಗೀತ ಸಹಿತ ಅಷ್ಟವಿಧಾರ್ಚನೆ ಪೂಜೆ, ಆಯಾ ದಿನದ ವಿಷಯಕ್ಕೆ ಸಂಬಂಧಿಸಿದಂತೆ ವಿದ್ವಾಂಸರಿಂದ ಪ್ರವಚನ, ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಹತ್ತು ಧರ್ಮಗಳ ವಿವರಣೆ ಮತ್ತು ಮಹತ್ವ[ಬದಲಾಯಿಸಿ]

ಉತ್ತಮ ಕ್ಷಮಾ[ಬದಲಾಯಿಸಿ]

ಕ್ರೋಧವೆಂಬ ಕಷಾಯವನ್ನು, ಕೋಪ ತಾಪವನ್ನು, ಒರಟು ತನವನ್ನು ಬಿಟ್ಟು ಸರಳ, ಸಭ್ಯ, ಸಾತ್ವಿಕನಾಗಿ ಬಾಳುವುದೇ ಕ್ಷಮಾ ಧರ್ಮ. ಕ್ಷಮೆಯು ಅಂತರಂಗದ ಸ್ವಭಾವ. ಅಹಿಂಸೆಯ ಹೆಗ್ಗುರುತು. ಇಂತಹ ಸೌಮ್ಯ ಗುಣವನ್ನು ಬೆಳೆಸಿಕೊಡು ಬಾಳುವುದೇ ಉತ್ತಮ ಕ್ಷಮಾ ಧರ್ಮವಾಗಿದೆ.

ಉತ್ತಮ ಮಾರ್ದವ[ಬದಲಾಯಿಸಿ]

ಮನ, ವಚನ, ಕಾಯದಲ್ಲಿ ಮೃದು ಸ್ವಭಾವದಿಂದ, ಶಾಂತಿಯಿಂದ ಬಾಳುವುದೇ ಮಾರ್ದವ ಧರ್ಮ. ಅಹಂಕಾರ ತೊರೆದು, ಮಮಕಾರ ಬಿಟ್ಟು ಸರಳ ಜೀವನ ನಡೆಸುವುದೇ ಮಾರ್ದವವಾಗಿದೆ.

ಉತ್ತಮ ಆರ್ಜವ[ಬದಲಾಯಿಸಿ]

ಕುಟಿಲತೆಯನ್ನು ತ್ಯಜಿಸಿ ಧರ್ಮ, ನ್ಯಾಯ ಮಾರ್ಗದಲ್ಲಿ ಸಾತ್ವಿಕ ಜೀವನ ನಡೆಸುವುದೇ ಆರ್ಜವ ಧರ್ಮವಾಗಿದೆ.

ಉತ್ತಮ ಶೌಚ[ಬದಲಾಯಿಸಿ]

ಆಂತರಿಕ ಪವಿತ್ರತೆಯೆ ಶೌಚ ಧರ್ಮ, ಅತಿಯಾಸೆ, ಜಿಪುಣತನ ತೊರೆದು ಉದಾರ ಗುಣಗಳಿಂದ ದಾನ, ಧರ್ಮ ಪರೋಪಕಾರದೊಂದಿಗೆ ಉತ್ತಮ ಜೀವನ ನಡೆಸುವುದೇ ಶೌಚ ಧರ್ಮವಾಗಿದೆ.

ಉತ್ತಮ ಸತ್ಯ[ಬದಲಾಯಿಸಿ]

ಸುಳ್ಳು, ಮೋಸ ವಂಚನೆಯನ್ನು ತೊರೆದು ಪ್ರಾಮಾಣಿಕವಾಗಿ ಬಾಳುವುದೇ ಸತ್ಯ ಧರ್ಮ, ತನ್ನ ನಡೆ - ನುಡಿಯನ್ನುಉತ್ತಮವಾಗಿಟ್ಟುಕೊಂಡು ಸತ್ಯವಾದ ಧರ್ಮ, ದೇವರು, ಗುರು, ಶಾಸ್ತ್ರವನ್ನು ನಂಬಿ ತಿಳಿದು ಪಾಲಿಸುವುದೇ ಉತ್ತಮ ಸತ್ಯವಾಗಿರುತ್ತದೆ.

ಉತ್ತಮ ಸಂಯಮ[ಬದಲಾಯಿಸಿ]

ಇಂದ್ರಿಯ ಮತ್ತು ಮನಸ್ಸನ್ನು ನಿಗ್ರಹಿಸಿ, ಶೀಲವಂತರಾಗಿ, ವ್ರತ - ನಿಯಮಗಳೊಂದಿಗೆ ಧ್ಯಾನ, ಸ್ವಾಧ್ಯಾಯ ಮಾಡುವುದೇ ಸಂಯಮ ಧರ್ಮವಾಗಿದೆ.

ಉತ್ತಮ ತಪ[ಬದಲಾಯಿಸಿ]

ಆಸೆ - ಆಕಾಂಕ್ಷೆಗಳನ್ನು ನಿರೋದಿಸಿ ತನು - ಮನವನ್ನು ನಿಯಂತ್ರಿಸಿ ಉಪವಾಸಾದಿ ನಿಯಮಗಳ ಪಾಲನೆ ಉತ್ತಮ ತಪವಾಗಿದೆ.

ಉತ್ತಮ ತ್ಯಾಗ[ಬದಲಾಯಿಸಿ]

ಅಹಂಕಾರ, ಮಮಕಾರ ತ್ಯಜಿಸಿ, ದಾನ - ಧರ್ಮ, ಪರೋಪಕಾರ ಮಾಡುತ್ತಾ, ಆತ್ಮ ಧರ್ಮವನ್ನು ನಂಬಿ, ತಿಳಿದು ಪಾಲಿಸುವುದೇ ಉತ್ತಮ ತ್ಯಾಗ ಧರ್ಮವಾಗಿದೆ.

ಉತ್ತಮ ಆಕಿಂಚನ್ಯ[ಬದಲಾಯಿಸಿ]

ಎಲ್ಲಾ ಬಾಹ್ಯ ಪರಿಗ್ರಹಗಳನ್ನು ತೊರೆದು ವೀತರಾಗ ಭಾವದಿಂದ ಬಾಳುವುದೇ ಆಕಿಂಚನ್ಯ ಧರ್ಮ. ಧಾರ್ಮಿಕ ಕ್ರಿಯೆಯಲ್ಲಿ ತೊಡಗಿ, ಸಾತ್ವಿಕ ವೃತ್ತಿಯಿಂದ ಬಾಳುವುದೇ ಆಕಿಂಚನ್ಯ ಧರ್ಮವಾಗಿದೆ.

ಉತ್ತಮ ಬ್ರಹ್ಮಚರ್ಯ[ಬದಲಾಯಿಸಿ]

ಆತ್ಮಜ್ಞಾನವನ್ನು ಹೊಂದಿ ಆತ್ಮಾರಾಧನೆಯಲ್ಲಿ ನಿರತವಾಗಿ, ಸರಳ, ಸಾತ್ವಿಕ ಆಹಾರ ಸೇವನೆಯೊಂದಿಗೆ ಬಾಳುವುದೇ ಉತ್ತಮ ಬ್ರಹ್ಮಚರ್ಯ ಧರ್ಮವಾಗಿದೆ.

ಉಲ್ಲೇಖ[ಬದಲಾಯಿಸಿ]

 1. http://epaper.prajavani.net/Home/index?Edition=151&Date=MjAvMDkvMjAxNg==&Page=196441