ಪ್ರಾರ್ಥನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

super.


ಪ್ರಾರ್ಥನೆ ಎಂದರೆ ಮನುಷ್ಯನು ಪರಮಾತ್ಮನಲ್ಲಿ ತನ್ನ ಕಷ್ಟ ಸುಖಗಳನ್ನು ತೋಡಿಕೊಂಡು ಅವನ ಅನುಗ್ರಹವನ್ನು ಬೇಡಿಕೊಳ್ಳುವ ಕ್ರಿಯೆ (ಪ್ರೇಯರ್). ಪ್ರಕೃತಿಯ ಅದ್ಭುತಶಕ್ತಿಗಳಾದ ಗಾಳಿ, ನೀರು, ಸೂರ್ಯ, ಚಂದ್ರ, ಸಿಡಿಲು, ಬೆಂಕಿ ಮೊದಲಾದುವನ್ನು ಆದಿಮಾನವ ಪೂಜಿಸುತ್ತಿದ್ದನಲ್ಲದೆ, ಅವುಗಳಿಂದ ತನಗಾಗುವ ಅಪಾರ ಹಾನಿಯನ್ನು ನಿವಾರಿಸಿಕೊಳ್ಳಲು, ಅವುಗಳ ಅಭಯಹಸ್ತವನ್ನು ಕೋರಲು ಅವನ್ನು ಪ್ರಾರ್ಥಿಸುತ್ತಿದ್ದುದುಂಟು. ಪ್ರಪಂಚದ ಎಲ್ಲ ಧರ್ಮಗಳಲ್ಲೂ ಪ್ರಾರ್ಥನೆಗೆ ಒಂದು ವಿಶಿಷ್ಟ ಸ್ಥಾನವಿದೆ. ಹಿಂದೂ ಪಾರಸಿ ಯಹೊದ್ಯ ಕ್ರೈಸ್ತ ಇಸ್ಲಾಂ ಇಂಥ ಎಲ್ಲ ಧರ್ಮಗಳೂ ಪ್ರಾರ್ಥನೆಗೆ ಕೇಂದ್ರಸ್ಥಾನವೆನ್ನಿತ್ತಿವೆ. ಅತ್ಯಂತ ಪ್ರಾಚೀನ ಗ್ರಂಥವಾದ ವೇದದಲ್ಲಿ ದೇವತೆಗಳನ್ನು ಕುರಿತ ಪ್ರಾರ್ಥನೆಗಳಿಗೇ ಒಂದು ಪ್ರತ್ಯೇಕ ವಿಭಾಗವಿದೆ. ಸಂಕಲನರೂಪವಾದ ಈ ಪ್ರಾರ್ಥನಾ ಅಥವಾ ಮಂತ್ರಭಾಗವನ್ನು ಸಂಹಿತೆ ಎಂದು ಕರೆಯುತ್ತಾರೆ. ಸಂಹಿತೆಯಲ್ಲಿ ಇಂದ್ರ, ವರುಣ ಇತ್ಯಾದಿ ದೇವತೆಗಳನ್ನು ಕುರಿತ ಪ್ರಾರ್ಥನಾ ಮಂತ್ರಗಳಿವೆ. ಅಲ್ಲದೆ ಅದರಲ್ಲಿ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿರುವ ಗಾಯತ್ರೀ ಮಂತ್ರವಿದೆ. ಭಕ್ತ ತನ್ನ ಬುದ್ಧಿಯ ಪ್ರಚೋದನೆಗಾಗಿ ಜ್ಯೋತಿರ್ಮಯವಾದ ಪರದೇವತೆಯನ್ನು ಕುರಿತು ಈ ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ. ವೇದದ ಅಂತಿಮ ಭಾಗವಾದ ಉಪನಿಷತ್ತುಗಳಲ್ಲೂ, ಆ ಕಾಲದಲ್ಲಿ ವೈಚಾರಿಕ ಮನೋಭಾವ ವಿಶೇಷವಾಗಿ ಬೆಳೆದಿದ್ದರೂ ಅಲ್ಲಲ್ಲಿ ಉತ್ಕøಷ್ಟ ಪ್ರಾರ್ಥನೆಗಳು ಕಂಡುಬರುತ್ತವೆ. ಪ್ರಸಿದ್ಧವಾಗಿರುವ ಅಸತ್ಯದಿಂದ ಸತ್ಯದ ಕಡೆಗೆ, ತಮಸ್ಸಿನಿಂದ ಜ್ಯೋತಿಯ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ನನ್ನನ್ನು ತಲುಪಿಸು ಎಂಬುದು ಬೃಹದಾರಣ್ಯಕೋಪನಿಷತ್ತಿನಲ್ಲಿ ಬರುವ ಪ್ರಾರ್ಥನೆ. ಅಲ್ಲದೆ ಪ್ರತಿ ಉಪನಿಷತ್ತಿನ ಆದ್ಯಂತಗಳಲ್ಲೂ ಪ್ರಾರ್ಥನಾ ಮಂತ್ರಗಳಿವೆ. ಇಷ್ಟೆ ಅಲ್ಲದೆ ಮುಂದಿನ ವೈದಿಕ ಸಂಪ್ರದಾಯದ ಇತಿಹಾಸ, ಪುರಾಣ, ಆಗಮಗಳಲ್ಲೂ ಪ್ರಾರ್ಥನೆಗಳು ಹೇರಳವಾಗಿವೆ. ಬೌದ್ಧ ಮತ್ತು ಜೈನಧರ್ಮಗಳಲ್ಲೂ ಬುದ್ಧ ಮತ್ತು ತೀರ್ಥಂಕರರನ್ನು ಕುರಿತ ಪ್ರಾರ್ಥನೆಗಳು ವಿಶೇಷ ಸ್ಥಾನ ಪಡೆದಿವೆ. ಬುದ್ದಂ ಶರಣಂ ಗಚ್ಛಾಮಿ ಎಂದು ಹೇಳಿಕೊಂಡು ಬೌದ್ಧ ಬುದ್ಧನಲ್ಲಿ ತನ್ನ ಆತ್ಮಸಮರ್ಪಣೆಯನ್ನು ಮಾಡಿಕೊಳ್ಳುತ್ತಾನೆ. ಕ್ರೈಸ್ತಮತ ಸ್ಥಾಪಕನಾದ ಏಸುಕ್ರಿಸ್ತ ತನ್ನ ಅನುಯಾಯಿಗಳು ಮಾಡಬೇಕಾದ ಪ್ರಾರ್ಥನೆ ಹೇಗಿರಬೇಕೆಂದು ಈ ರೀತಿ ರೂಪಿಸುತ್ತಾನೆ: `ಹೇ ದೇವ, ನಿನ್ನ ನಾಮ ಪವಿತ್ರವಾದುದು. ನಿನ್ನ ರಾಜ್ಯ ನಮ್ಮ ಜೀವನದಲ್ಲಿ ಸ್ಥಾಪಿತವಾಗಲಿ, ನಮ್ಮ ಅಪರಾಧವನ್ನು ಕ್ಷಮಿಸು. ನಮ್ಮನ್ನು ಪ್ರಲೋಭನಗಳಿಂದ ದೂರ ಮಾಡು. ನಿನ್ನ ಸಂಕಲ್ಪ ನಡೆಯಲಿ. ಕುರಾನಿನ ಮೊದಲ ಪದ್ಯವೇ ಉತ್ಕøಷ್ಟ ಪ್ರಾರ್ಥನೆಯಾಗಿದೆ. `ದಯಾಮಯನಾದ ದೇವನೇ ನೀನು ಜಗತ್ತಿನ ಸೃಷಿಕರ್ತ. ನೀನು ಜೀವಿಗಳ ಪುಣ್ಯಪಾಪಗಳನ್ನು ತೀರ್ಮಾನಿಸುವವನು. ನಮ್ಮನ್ನು ಸನ್ಮಾರ್ಗದಲ್ಲಿ ನಡೆಸು ಎಂಬುದು ಆ ಪದ್ಯದ ಸಾರಾಂಶ. ಹೀಗೆ ಮಾನವನ ಅಂತಿಮ ಆಶೋತ್ತರಗಳನ್ನು ಅತ್ಯಂತ ಉತ್ಕøಷ್ಟ ರೂಪದಲ್ಲಿ ಭಗವಂತನ ಮುಂದೆ ಇಡುವ ಪ್ರಾರ್ಥನೆಗಳು ಎಲ್ಲ ಧರ್ಮಗಳಲ್ಲೂ ಕಂಡುಬರುತ್ತವೆ.

ಪ್ರಾರ್ಥನೆ ವೈಯುಕ್ತಿಕವಾಗಿಯೂ ಆಗಿರಬಹುದು ಸಾಮೂಹಿಕವಾಗಿಯೂ ಇರಬಹುದು. ಪ್ರತಿಯೊಂದು ಧರ್ಮಕ್ಕೆ ಸೇರಿದವರೂ ಸಾಮೂಹಿಕವಾಗಿ ಪ್ರಾರ್ಥನೆಯನ್ನು ನಡೆಸುತ್ತಾರೆ. ಇಂಥ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸಲು ಅವರದೇ ಆದ ನಿರ್ದಿಷ್ಟ ಕ್ಷೇತ್ರಗಳಿರುತ್ತವೆ. ಈ ಕ್ಷೇತ್ರಗಳನ್ನು ದೇವಸ್ಥಾನ, ಮಸೀದಿ, ಚರ್ಚ್ ಎಂದು ಆಯಾ ಧರ್ಮಕ್ಕನುಗುಣವಾಗಿ ಕರೆಯಲಾಗಿದೆ.

ಪ್ರಾರ್ಥನೆಯ ಮುಖ್ಯ ಅಂಗಗಳು ಇವು: 1. ಭಗವಂತನ ಸಾನ್ನಿಧ್ಯದ ಯಾಚನೆ, 2. ಭಕ್ತ ತನ್ನ ಅಸಹಾಯ ಕತೆಯನ್ನು ತೋಡಿಕೊಳ್ಳುವಿಕೆ, 3. ಭಗವಂತನೇ ತನ್ನ ಜವಾಬ್ದಾರಿಯನ್ನು ವಹಿಸಿಕೊಂಡು ತನ್ನನ್ನು ಶ್ರೇಯೋಮಾರ್ಗದಲ್ಲಿ ನಡೆಸಲೆಂದು ಶರಣು ಹೋಗುವುದು. 4. ಇಷ್ಟಾರ್ಥವನ್ನು ಕೋರುವಿಕೆ.

ಭಕ್ತರು ಪ್ರಾರ್ಥನೆಯ ಮೂಲಕ ಕೋರುವ ಇಷ್ಟಾರ್ಥ ಅನೇಕ ವಿಧವಾಗಿರುತ್ತವೆ. ಈ ನಾಲ್ಕನೆಯ ಅಂಗದ ನಿಮಿತ್ತವಾಗಿ ಪ್ರಾರ್ಥನೆಗಳಲ್ಲಿ ವೈವಿಧ್ಯ ಕಂಡುಬರುತ್ತದೆ. ಭಕ್ತ ಪ್ರಾರ್ಥನೆಯ ಮೂಲಕ ಐಶ್ವರ್ಯ ಆರೋಗ್ಯ, ದೀರ್ಘಾಯಸ್ಸು ಕಲತ್ರ, ಪುತ್ರ-ಇವನ್ನು ಇಹಲೋಕದಲ್ಲೂ ಸ್ವರ್ಗವನ್ನು ಪರದಲ್ಲೂ ಕೇಳಿಕೊಳ್ಳಬಹುದು. ಅತ್ಯಂತ ವಿಪತ್ತಿನಲ್ಲಿರುವ ಭಕ್ತ ಭಗವಂತನನ್ನು ವಿಪತ್ನಿವಾರಣೆಗಾಗಿ ಪ್ರಾರ್ಥಿಸಬಹುದು. ಇವೆರಡನ್ನೂ ಗೀತೆಯಲ್ಲಿ ಅರ್ಥಾರ್ಥ ಮತ್ತು ಆತ್ಮಭಕ್ತಿಯೆಂದು ಸೂಚಿಸಲಾಗಿದೆ. ಈ ರೀತಿಯ ಸ್ವಾರ್ಥತೆಯನ್ನು ತೊರೆದು ಉದಾರ ಭಾವದಿಂದ ಮಾನವಕುಲವೇ ತನ್ನ ಕುಟುಂಬವೆಂದು ಭಾವಿಸಿ ಸರ್ವೇ ಜನಾಃ ಸುಖಿನೋಭವಂತು, ಸಮಸ್ತ ಸನ್ಮಂಗಳಾನಿ ಭವಂತು ಎಂದು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಬಹುದು. ತಮ್ಮಲ್ಲಿ ಅಪರಾಧ ಮಾಡಿದವನನ್ನು ಕ್ಷಮಿಸಬೇಕೆಂದು ಭಕ್ತನು ಭಗವಂತನನ್ನು ಪ್ರಾರ್ಥಿಸಬಹುದು. ಅವರೇನು ಮಾಡುತ್ತಿರುವರೆಂದು ಅವರಿಗೇ ತಿಳಿದಿಲ್ಲ. ದೇವ ಅವರನ್ನು ನೀನು ಕ್ಷಮಿಸು ಎಂಬ ಏಸುವಿನ ಪ್ರಾರ್ಥನೆ ಇದಕ್ಕೆ ಉದಾಹರಣೆ. ತನ್ನ ನೈತಿಕ ಶುದ್ಧತೆಗಾಗಿಯೂ ಭಕ್ತ ಭಗವಂತನನ್ನು ಪ್ರಾರ್ಥಿಸಬಹುದು. ಇದಕ್ಕೆ ಈಗಾಗಲೇ ಕುರಾನಿನ ಪದ್ಯದ ಉದಾಹರಣೆಯನ್ನು ನೀಡಲಾಗಿದೆ. ಲೌಕಿಕ ಆಶಾಪಾಶಕ್ಕೆ ಸಿಲುಕಿರುವ ತನಗೆ ವೈರಾಗ್ಯವನ್ನು ಕೊಡು ಎಂಬುದಾಗಿ ಭಗವಂತನನ್ನು ಪ್ರಾರ್ಥಿಸಬಹುದು. ಈ ಪ್ರಾರ್ಥನೆಗೆ ಉತ್ಕøಷ್ಟವಾದ ನಿದರ್ಶನ ಪ್ರಹ್ಲಾದ. ಆತ ಭಗವಂತನನ್ನು ಕಾಮಗಳು ನನ್ನ ಹೃದಯದಲ್ಲಿ ಹುಟ್ಟದಿರುವಂತೆ ವರನನ್ನು ದಯಪಾಲಿಸು ಎಂದು ಭಗವಂತನನ್ನು ಪ್ರಾರ್ಥಿಸುತ್ತಾನೆ. ಹೀಗಿಯೇ ಭಕ್ತಜ್ಞಾನೋದಯಕ್ಕಾಗಿಯೂ ಪ್ರಾರ್ಥಿಸಬಹುದು. ಇಂಥ ಪ್ರಾರ್ಥನೆಗಳೂ ಉಪನಿಷತ್ತುಗಳಲ್ಲಿ ಕಂಡುಬರುತ್ತವೆ. ಗಾಯತ್ರೀ ಮಂತ್ರವೂ ಅಂಥ ಒಂದು ಪ್ರಾರ್ಥನೆ. ಈಶೋಪನಿಷತ್ತಿನಲ್ಲಿ ನನ್ನ ಕುಟಿಲತೆಯನ್ನು ಹೋಗಲಾಡಿಸಿ ನಿನ್ನ ಕಲ್ಯಾಣತಮ ರೂಪವನ್ನು ನೋಡುವಂತೆ ಅನುಗ್ರಹಿಸು ಎಂಬ ಪ್ರಾರ್ಥನೆ ಬರುತ್ತದೆ. ಭಕ್ತ ಭಗವಂತನ ಸಾನ್ನಿಧ್ಯವನ್ನು ಯಾಚಿಸುವಾಗ ತಾನು ಭಗವಂತನ ಮಹಿಮೆಗಳನ್ನು ಸರಿಯಾಗಿ ತಿಳಿದಿಲ್ಲವಲ್ಲ ಎಂದು ಶೋಧಿಸಬಹುದು. ಧ್ರುವ ತಾನು ಸರಿಯಾಗಿ ಸ್ತೋತ್ರ ಮಾಡಲಾರೆನಲ್ಲಾ ಎಂದು ವಿಷಣ್ಣನಾಗಿ ಹೇ ಭಗವಾನ್ ನನ್ನಿಂದ ನಿನ್ನ ಮಹಾತ್ಮೆಗೆ ಅನುಗುಣವಾದ ಸ್ತೋತ್ರ ಹೊರಬೀಳುವಂತೆ ಮಾಡು ಎಂದು ಪ್ರಾರ್ಥಿಸುತ್ತಾನೆ. ಹೀಗೆಯೇ ಇನ್ನು ಕೆಲವು ಭಕ್ತರು- ಉದಾಹರಣೆಗೆ ತುಲಸೀದಾಸ್- ಭಗವಂತನಲ್ಲಿ ತಮಗಿರುವ ಭಕ್ತಿ ಪೂರ್ಣ ಹಾಗೂ ನಿಷ್ಕಲ್ಮಶವಾಗಲೆಂದು ಪ್ರಾರ್ಥಿಸಿಕೊಳ್ಳುತ್ತಾರೆ. ಕಾಮಾದಿ ದೋಷರಹಿತವಾದ ನಿರ್ಭರವಾದ ಭಕ್ತಿಯೊಂದನ್ನೇ ನನಗೆ ಅನುಗ್ರಹಿಸು ಎಂದು ತುಲಸೀದಾಸರು ಪ್ರಾರ್ಥಿಸುತ್ತಾರೆ. ಶರಣಾಗತಿ ಪ್ರಾರ್ಥನೆಯ ಒಂದು ಮುಖ್ಯ ಅಂಗವೆಂದು ಈ ಹಿಂದೆ ಹೇಳಿದೆ. ಈ ಭಾವವು ತಮ್ಮಲ್ಲಿ ಸ್ಥಿರವಾಗಿ ಪ್ರತಿಷ್ಠಿತವಾಗಲೆಂದು ಶಂಕರಾಚಾರ್ಯರು ನಾರಾಯಣ ಕರುಣಾಮಯ ಶರಣಂ ಕರವಾಣಿ ತಾವಕಾ ಚರಣಾ 1 ಇತಿಷಟ್ಪದಿ ಮದೀಯೇ ವದನ ಸರೋಜೇ ಸದಾ ವಸತು -ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ.

ಒಟ್ಟಿನಲ್ಲಿ ಭಕ್ತ ಪ್ರಾರ್ಥನೆಯಲ್ಲಿ ತನ್ನ ಸರ್ವಿಭಾವಗಳನ್ನೂ ಕ್ರೋಢಿಕರಿಸುತ್ತಾನೆ. ಭಗವಂತನ ಮಹಾತ್ಮ್ಯ ವಿಷಯದಲ್ಲಿ ತನಗಿರುವ ನಂಬಿಕೆಯನ್ನು ಸ್ತೋತ್ರರೂಪದಲ್ಲಿ ಪ್ರಕಟಿಸುತ್ತಾನೆ. ಹಾಗೆಯೇ ತನ್ನ ಅಸಹಾಯಕತೆಯನ್ನೂ ತೋಡಿಕೊಳ್ಳುತ್ತಾನೆ ಅವನು ಭಗವಂತನೊಬ್ಬನಿಂದಲೇ ತನ್ನ ಜೀವನಯಾತ್ರೆ ಮಂಗಳದಲ್ಲಿ ಪರ್ಯವಸಾನವಾಗಬೇಕೆಂದು ಹೇಳಿಕೊಂಡು ಶರಣಾಗತನಾಗುತ್ತಾನೆ. ಹಾಗೆಯೇ ಕರುಣಾಳುವಾದ ಭಗವಂತ ತನ್ನನ್ನು ಸ್ವೀಕರಿಸಿ ಸರ್ವವಿಧಮಂಗಳವನ್ನು ಉಂಟುಮಾಡಲೆಂದು ಮೊರೆಯಿಡುತ್ತಾನೆ. ಅವನು ಬಯಸುವ ಮಂಗಳದಲ್ಲಿ ಸ್ವಾರ್ಥ, ಸಾಮಾಜಿಕ ಮತ್ತು ಮಾನವಕಲ್ಯಾಣ, ಕ್ಷಮೆ, ಆತ್ಮಶುದ್ಧೀಕರಣ, ಜ್ಞಾನೋದಯ, ಪರಾಭಕ್ತಿ-ಎಲ್ಲವೂ ಸೇರಿರುತ್ತವೆ. ಇಂಥ ಪ್ರಾರ್ಥನೆಯನ್ನು ನಡೆಸುವ ಭಕ್ತರು ಕೇವಲ ಪ್ರಾಚೀನ ಧಾರ್ಮಿಕ ಸಂಪ್ರದಾಯವೊಂದರಲ್ಲೇ ಅಲ್ಲದೆ ಆಧುನಿಕ ಯುಗದಲ್ಲೂ ಇರುತ್ತಾರೆ. ನಮ್ಮ ರಾಷ್ಟ್ರದ ಮಹಾಪುರುಷರಾದ ಮಹಾತ್ಮಗಾಂಧಿಯವರು ತಮ್ಮ ಅಮೂಲ್ಯ ಭಾವನೆಯನ್ನು `ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ತಮ್ಮ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಚಾರಪಡಿಸಿದರು. ರವೀಂದ್ರನಾಥ ಠಾಕೂರರು `ಆ ಸ್ವಾತಂತ್ರ್ಯದ ಸ್ವರ್ಗವನ್ನು ನನ್ನ ನಾಡು ಕಂಡುಕೊಳ್ಳಲಿ ಎಂಬ ಒಂದು ಕವನದಲ್ಲಿ ಅತ್ಯುತ್ಕøಷ್ಟವಾದುದನ್ನೆಲ್ಲ ಭಗವಂತನಲ್ಲಿ ಬೇಡಿಕೊಂಡಿದ್ದಾರೆ.

ಎಲ್ಲ ಧರ್ಮಗಳಲ್ಲೂ ಪ್ರಾರ್ಥನೆಯನ್ನು ಒಳಗೊಂಡ ಸಾಹಿತ್ಯ ಬೃಹತ್ತಾಗಿದೆ. ಭಾರತದ ಭಕ್ತಿಸಾಹಿತ್ಯ ಬೇರೆ ಬೇರೆ ಭಾಷೆಗಳಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಹಾಗೆಯೇ ಕ್ರೈಸ್ತ, ಇಸ್ಲಾಂ, ಬೌದ್ಧ, ಜೈನ ಧರ್ಮಗಳಲ್ಲೂ ಅತ್ಯಂತ ಉvತ್ಕøಷ್ಟವೂ ವಿಶಾಲವೂ ಆದ ಪ್ರಾರ್ಥನಾ ಸಾಹಿತ್ಯ ಬೆಳೆದು ಬಂದಿದೆ. ಅಲ್ಲದೇ ಪ್ರಾರ್ಥನೆ ಗೀತರೂಪದಲ್ಲೂ ಬಂದು ಸಂಗೀತಕಲೆಗೆ ಸ್ಫೂರ್ತಿ ನೀಡಿದೆ. ಪ್ರಾಚೀನ ಧರ್ಮ ಗ್ರಂಥಗಳ ಪ್ರಾರ್ಥನೆಗಳಲ್ಲಿ ಗಾನ ಸಂಮಿಶ್ರಣವಿದ್ದೇ ಇತ್ತು. ಈ ಸಂಪ್ರದಾಯ ಮುಂದೆಯೂ ವಿಶೇಷವಾಗಿ ಬೆಳೆದು ಬಂದಿದೆ. ಪ್ರಾರ್ಥನೆ ಮನುಷ್ಯನ ಹೃದಯದ ಅಂತರಾಳದಿಂದ ಹೊರಹೊಮ್ಮುವುದರಿಂದ ಅದು ಸ್ವಾಭಾವಿಕವಾಗಿಯೇ ರಾಗಯುಕ್ತವಾಗಿರುತ್ತದೆ.

ಪ್ರಾರ್ಥನೆ ಅವೈಜ್ಞಾನಿಕವೆಂದು ಹೇಳುವುದೂ ಸರಿಯಾಗದು. ಅದಕ್ಕೆ ಮನಃಶಾಸ್ತ್ರದಲ್ಲಿ ಪುರಸ್ಕಾರವಿದೆ.