ವಿಷಯಕ್ಕೆ ಹೋಗು

ಶಿವಕುಮಾರ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಶಿವಕುಮಾರ ಮಹಾಸ್ವಾಮಿಗಳು ಇಂದ ಪುನರ್ನಿರ್ದೇಶಿತ)


ಶ್ರೀ ಶಿವಕುಮಾರ ಸ್ವಾಮಿಜಿಗಳು

ಜನನ: ೧ ಏಪ್ರಿಲ್ ೧೯೦೭
ಜನನ ಸ್ಥಳ: ವೀರಾಪುರ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.
ನಿಧನ:೨೧ ಜನವರಿ ೨೦೧೯[]
ಗುರು: ಶ್ರೀ ಉದ್ಧಾನ ಸ್ವಾಮೀಜಿಗಳು
ಶಿಷ್ಯರು: ಸಿದ್ದಗಂಗಾ ಶಿಕ್ಷಣ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ದೇಶದ ಅಸಂಖ್ಯಾತ ಭಕ್ತವರ್ಗ
ತತ್ವಜ್ಞ್ಯಾನ:ಕಾಯಕವೇ ಕೈಲಾಸ
ಪ್ರಶಸ್ತಿಗಳು/ಬಿರುದುಗಳು:ಕರ್ನಾಟಕ ರತ್ನ
ಪದ್ಮಭೂಷಣ,(ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಆದುನಿಕ ಬಸವಣ್ಣ,)
ನುಡಿ:ಕಾಯಕವೇ ಕೈಲಾಸ

ಶಿವಕುಮಾರ ಸ್ವಾಮಿ (ಜನನ- ಶಿವಣ್ಣ, ೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯)  ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ.ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ  ಮಠಾಧಿಪತಿಗಳಾಗಿದ್ದರು.[] ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.[]ಹಿಂದೂಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು.[] ಅವರನ್ನು ರಾಜ್ಯದಲ್ಲಿ ನಡೆದಾಡುವ  ದೇವರು ಎಂದು ಕೂಡ ಉಲ್ಲೇಖಿಸಲಾಗಿದೆ.ಭಾರತದಲ್ಲಿ ವಾಸಿಸುತ್ತಿದ್ದ ಅತಿ ಪುರಾತನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ಭಾರತ ಸರ್ಕಾರವು ೨೦೧೫ ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದೆ.[]

ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಗಳು. ಮಾರ್ಚ್ ೩, ೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು.[]

'ಹಳೆ ಮಠದ ಬಳಿ ಸ್ವಾಮೀಜಿಯವರು'.
'ಸಿದ್ದಗಂಗಾ ಸಂಸ್ಕೃತ ಪಾಠ ಶಾಲೆ'
'ಸ್ವಾಮೀಜಿ ತಮ್ಮ ಆಸನದಲ್ಲಿ'

ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿಯವರು ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟಿದ್ದರು. ಇವರು ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದರು..

ಶ್ರೀಗಳ ಪೂರ್ವಾಶ್ರಮ

ಮಾಗಡಿ ತಾಲೂಕಿನ ವೀರಾಪುರದ ಶ್ರೀಯುತ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ ೧, ೧೯೦೮ರಲ್ಲಿ ೧೩ನೇ ಮಗನಾಗಿ ಶಿವಣ್ಣ ಜನಿಸಿದರು.ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದ ಊರಾದ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡ ಶಿವಣ್ಣ ಅನಂತರ ಅಕ್ಕನ ಆಸರೆಯಲ್ಲಿ ಬೆಳೆದರು . ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣದ ನಂತರ ೧೯೨೨ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ೧೯೨೬ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು. ೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು.ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟದಲ್ಲಿದ್ದರು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗು ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತ ಮಠಕ್ಕೆ ಭೇಟಿಕೊಡುತಿದ್ದರು.ತುಮಕೂರು ಜಿಲ್ಲೆಯಲ್ಲಿ ಭೀಕರ ಪ್ಲೇಗ್ ರೋಗ ಇದ್ದರು ಶಿವಣ್ಣನವರ ಹಾಗು ಮಠದ ಒಡನಾಟ ಎಂದಿನತೆಯೇ ಇತ್ತು.

ಮಠಾಧಿಪತಿಯಾಗಿ

ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ ೧೯೩೦ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದರು. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನರನ್ನು ಉದ್ಧಾನ ಸ್ವಾಮಿಜಿಗಳು ಎಲ್ಲರ ಸಮ್ಮುಖದಲ್ಲಿ ಮಠದ ಉತ್ತರಾಧಿಕಾರಿ ಎಂದು ಘೋಷಿಸಿದರು.ನಂತರ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ,ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜು ಪಾಲಿಸುತ್ತಾ ವಿದ್ಯಾಭ್ಯಾಸ ಮುಗಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿದರು, ನಂತರ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಾರೆ. ನಂತರ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತ , ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ.

ಮಠಾಧಿಕಾರದ ಆರಂಭದ ದಿನಗಳು

ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂಧರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿಧ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತೂ ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಭಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ಧವಸ ಧಾನ್ಯಗಳನ್ನು ತಂದಿದ್ದೂ ಉಂಟು. ಬರಿಯ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ದಿನ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗು ಗಣ್ಯರ ಭೇಟಿ, ಮಠದ ಅರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ 'ಶ್ರೀಗಳು ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ' ಎಂಬ ಆಡು ನುಡಿಗಳೂ ಕೇಳಿಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು ಪೂಜ್ಯ ಲಿ. ಶ್ರೀ ಅಟವೀ ಸ್ವಾಮಿಗಳ ಹಾಗು ಲಿ. ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ.

ಶ್ರೀಗಳ ದಿನಚರಿ

ಪ್ರತಿದಿನವೂ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು. ನಂತರ ಆಹಾರ ಸೇವನೆ, ಮುಂಜಾನೆ ಆರೂವರೆಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, 'ಸಿಹಿ' ಹಾಗೂ 'ಖಾರ ಚಟ್ನಿ' ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, 'ಬೇವಿನ-ಚಕ್ಕೆ ಕಷಾಯ' ಸೇವನೆ ಮಾಡುತ್ತಿದ್ದರು.

ಪ್ರಾರ್ಥನೆ

ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರ ವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಕಣ್ಣುಗಳು ಪುಣ್ಯ ಮಾಡಿರಬೇಕು. ಮಠದ ಆವರಣದಲ್ಲಿರುವ ವಿಧ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ. ಪ್ರಾರ್ಥನೆಯ ನಂತರ ಕಛೇರಿಗೆ ಧಾವಿಸುವ ಶ್ರೀಗಳು ದಿನ ಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಮಳೆ-ಬೆಳೆ, ಕುಶಲೋಪರಿ ವಿಚಾರ,ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ,ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರಲ್ಲದೆ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ "ಕಾಯಕವೇ ಕೈಲಾಸ" ಎಂದು ನುಡಿಯಲ್ಲಿ ಮಾತ್ರ ಹೇಳದೆ ಹಾಗೆಯೇ ನಡೆಯಲ್ಲೂ ತೋರಿಸಿಕೊಟ್ಟಿದ್ದಾರೆ.

ದಿನಚರಿಯಲ್ಲಿ ಭಕ್ತರ ಭೇಟಿಗೆ ಆದ್ಯತೆ
ಪೂಜ್ಯ ಶ್ರೀಗಳವರೊಂದಿಗೆ ಮಾಜಿ ರಾಷ್ಟ್ರಪತಿ ದಿ. ಎ ಪಿ ಜೆ ಅಬ್ದುಲ್ ಕಲಾಮ್ ಅವರು

ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಿದ್ದರು. ಭಕ್ತರ ಕಷ್ಟ-ಸುಖಕ್ಕೆ ಸ್ಪಂದನ, ಮಧ್ಯಾನ್ಹ ಮೂರು ಗಂಟೆಯ ವರೆವಿಗೆ ನಿರಂತರವಾಗಿ ಸಾಗುತ್ತಿತ್ತು. ಮಠಕ್ಕೆ ಭೇಟಿ ಕೊಡುವ ಬಹುತೇಕ ಭಕ್ತರು ರೈತಾಪಿ ವರ್ಗದವರಾದ್ದರಿಂದ ಶ್ರೀಗಳು ಬೇರೆ ಬೇರೆ ಪ್ರದೇಶದಿಂದ ಬಂದ ರೈತರಲ್ಲಿ ಮಳೆ ಬೆಳೆಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಇದರ ಬಳಿಕ ಶ್ರೀಗಳು,ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಇದರ ಬಳಿಕ, ಒಂದು ಎಳ್ಳಿಕಾಯಿ ಗಾತ್ರದಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ ಊಟಮಾಡುತ್ತಿದ್ದರು. ಸಂಜೆ ೪ ಗಂಟೆಯ ನಂತರ ಪುನಃ ಭಕ್ತಗಣದ ಬೇಟಿ. ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಸುಮಾರು ರಾತ್ರಿ ೯ ಗಂಟೆಯವರೆವಿಗೂ ನಡೆಯುತ್ತಿತ್ತು.

ವಿಶ್ರಾಂತಿ

ರಾತ್ರಿ ಹತ್ತೂವರೆಗೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತಿತ್ತು. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಿದ್ದರು. ದೂರದ ಊರುಗಳಿಗೂ ಓಡಾಡುತ್ತಿದ್ದರು. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದರು. ಬಾಕಿ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ ೮ ದಶಕಗಳ ಜೀವನ ಇದೇರೀತಿ ಸಾಗಿತು. ಶ್ರೀಗಳ ಆರೋಗ್ಯವೂ ಚೆನ್ನಾಗಿಯೇ ಇತ್ತು. ಶ್ರೀಗಳವರ ಮೇಲೆ ಒಂದು ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. []

ಸಾಮಾಜಿಕ ಕಾರ್ಯಗಳು

ಅವರು ಶಿಕ್ಷಣ ಮತ್ತು ತರಬೇತಿಗಾಗಿ ಒಟ್ಟು 132 ಸಂಸ್ಥೆಗಳನ್ನು ಸ್ಥಾಪಿಸಿದರು,[]ನರ್ಸರಿಯಿಂದ ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಜೊತೆಗೆ ವೃತ್ತಿಪರ ತರಬೇತಿಯೂ ಸಹ ಇದೆ.ಅವರು ಸಂಸ್ಕೃತದ ಸಾಂಪ್ರದಾಯಿಕ ಕಲಿಕೆಯಲ್ಲಿ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು.ಅವರ ಪರೋಪಕಾರಿ ಕೆಲಸಕ್ಕಾಗಿ ಅವರು ಎಲ್ಲಾ ಸಮುದಾಯಗಳಿಂದ ವ್ಯಾಪಕವಾಗಿ ಗೌರವಿಸಲ್ಪಟ್ಟರು.[] ಸ್ವಾಮಿ ಅವರ ಮಠದಲ್ಲಿ ೧೦೦೦೦ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದೆ. ೫ ವಯಸ್ಸಿನಿಂದ ೧೬ ವರ್ಷ ವಯಸ್ಸಿನ ಯಾವುದೇ ಹಂತದಲ್ಲಿ ಮತ್ತು ಉಚಿತ ಆಹಾರ, ಶಿಕ್ಷಣ ಮತ್ತು ಆಶ್ರಯ (ತ್ರಿವಿಧ ದಾಸೋಹ)[೧೦] ಅನ್ನು ಒದಗಿಸುವ ಎಲ್ಲ ಧರ್ಮ, ಜಾತಿ ನೋಡದೆ ಎಲ್ಲಾ ಮಕ್ಕಳಿಗೆ ತೆರೆದಿರುತ್ತದೆ. ಮಠದ ಯಾತ್ರಾರ್ಥಿಗಳು ಮತ್ತು ಸಂದರ್ಶಕರು ಕೂಡಾ ಉಚಿತ ಊಟದ ವ್ಯವಸ್ಥೆ ಇದೆ. ಮಠಾಧೀಶ ಮಾರ್ಗದರ್ಶನದಲ್ಲಿ, ವಾರ್ಷಿಕ ಕೃಷಿ ಜಾತ್ರೆಯನ್ನು ಸ್ಥಳೀಯ ಜನಸಂಖ್ಯೆಯ ಅನುಕೂಲಕ್ಕಾಗಿ ನಡೆಸಲಾಗುತ್ತದೆ.ಕರ್ನಾಟಕ ಸರಕಾರವು 2007 ರಿಂದ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಸ್ವಾಮೀಜಿಯ ಶತಮಾನೋತ್ಸವದ ವಾರ್ಷಿಕೋತ್ಸವವನ್ನು ಘೋಷಿಸಿತು. ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತುಮಕೂರಿಗೆ ಭೇಟಿ ನೀಡಿದರು ಮತ್ತು ಶಿಕ್ಷಣ ಮತ್ತು ಮಾನವೀಯ ಕೆಲಸದಲ್ಲಿ ಸ್ವಾಮಿಯ ಉಪಕ್ರಮಗಳನ್ನು ಶ್ಲಾಘಿಸಿದರು.

ಪ್ರಶಸ್ತಿಗಳು

  • ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ೧೯೬೫ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.[೧೧]
  • ಪೂಜ್ಯ ಸ್ವಾಮೀಜಿಯವರ ೧೦೦ ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ.[೧೨]
  • 2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.[೧೩]
  • 2017 ರಲ್ಲಿ, ಕರ್ನಾಟಕ ಸರಕಾರ ಮತ್ತು ಅವರ ಭಕ್ತರು ಸ್ವಾಮೀಜಿಯವರ  ಸಾಮಾಜಿಕ ಸೇವೆಗಾಗಿ ಅವರಿಗೆ ಭಾರತ ರತ್ನ ನೀಡಲು ಮನವಿ .[೧೪] ಕರ್ನಾಟಕದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸ್ವಾಮಿಜಿಯವರ ಮಾನವೀಯ ಕೆಲಸದ ಗುರುತಿಸುವಿಕೆಗಾಗಿ  ಭಾರತ ರತ್ನವನ್ನು ನೀಡಲು ಕೇಂದ್ರ ಸರಕಾರವನ್ನು   ಒತ್ತಾಯಿಸಿದರು.[೧೫]

ಸ್ವಾಮೀಜಿಯವರ ಬಗ್ಗೆ ಜಿ.ಎಸ್.ಶಿವರುದ್ರಪ್ಪ

ಸದ್ದು ಗದ್ದಲವಿರದ ಸಾಧನೆಯಿಲ್ಲಿ ಗದ್ದುಗೆಯೇರಿದೆ
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ.

ನಿಧನ

ವಯೋಸಂಬಂಧಿ ಅನಾರೋಗ್ಯದಿಂದ ಬಳಲಿದ ಸ್ವಾಮೀಜಿಯವರನ್ನು ಹೃದಯಕ್ಕೆ ಸ್ಟಂಟ್ ಅಳವಡಿಸುವುದಕ್ಕೋಸ್ಕರ ೨೦೧೮ರ ಡಿಸೆಂಬರ್ ನಲ್ಲಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸ್ವಾಮೀಜಿ ಮಠಕ್ಕೆ ಹಿಂದಿರುಗಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಶ್ವಾಸಕೋಶ ಸೋಂಕಿನಿಂದ ಬಳಲಿದ ಶ್ರೀಗಳನ್ನು ಮತ್ತೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅರೋಗ್ಯ ಸುಧಾರಿಸಿದ ಕಾರಣ ಸ್ವಾಮೀಜಿಯವರನ್ನು ಮಠಕ್ಕೆ ಹಿಂದಿರುಗಿ ಕರೆತರಲಾಗಿತ್ತು. ೨೦೧೯ ಜನವರಿ ೨೧ ರಂದು ಬೆಳಗ್ಗೆ ರಕ್ತದೊತ್ತಡ ಏರುಪೇರಾಗಿ ಶ್ರೀಗಳು ಸಿದ್ಧಗಂಗಾದ ಹಳೆಯ ಮಠದಲ್ಲಿ ಕೊನೆಯುಸಿರೆಳೆದರು. [೧೬]. ಅವರಿಗೆ ೧೧೧ ವರ್ಷ ವಯಸ್ಸಾಗಿತ್ತು.[೧೭]

ಹೆಚ್ಚಿನ ಓದಿಗೆ

ಉಲ್ಲೇಖಗಳು

  1. ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದ 'ನಡೆದಾಡುವ ದೇವರು',ಕನ್ನಡ ಒನ್ ಇಂಡಿಯಾ ವರದಿ
  2. "ಶ್ರೀ ಸಿದ್ದಗಂಗಾ ಮಠ".
  3. "ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ". Archived from the original on 2018-12-27. Retrieved 2019-01-21.
  4. "ಶಿವಕುಮಾರ ಸ್ವಾಮೀಜಿ ಹಾಗು ಬಸವ ತತ್ವದ ಕುರಿತಾದ 'ದಿ ಎಕನಾಮಿಸ್ಟ್' ತಾಣದ ಆಂಗ್ಲ ವರದಿ".,೨೧ ಸೆಪ್ಟೆಂಬರ್ ೨೦೧೭
  5. "ಸಿದ್ಧಗಂಗಾ ಮಠದ ಪೀಠಾಧಿಕಾರಿ ಶಿವಕುಮಾರ ಸ್ವಾಮೀಜಿ ನಿಧನ"., 'ದಿ ಹಿಂದೂ' ಆಂಗ್ಲ ವರದಿ, ೨೧ ಜನವರಿ ೨೦೧೮
  6. "ಲಿಂಗಾಯತ ಮಠಾಧಿಕಾರಿ ಶಿವಕುಮಾರ ಸ್ವಾಮೀಜಿ ೧೧೧ನೇ ವರ್ಷದಲ್ಲಿ ನಿಧನ, ಮೂರು ದಿನ ಶೋಕಾಚರಣೆ ಕರ್ನಾಟಕದಲ್ಲಿ ಶೋಕಾಚರಣೆ"., 'ಇಂಡಿಯಾ ಟುಡೇ'ಆಂಗ್ಲ ವರದಿ, ೨೧ ಜನವರಿ 2019
  7. 'ಸಾಕ್ಷ್ಯಚಿತ್ರ'
  8. "೧೦೮ನೇ ಜನ್ಮ ದಿನವನ್ನು ಆಚರಿಸಿಕೊಂಡ ಸಿದ್ಧಗಂಗಾ ಮಠದ ಶ್ರೀಗಳು"., 'ದಿ ಹಿಂದೂ' ಪತ್ರಿಕೆಯ ಆಂಗ್ಲ ವರದಿ, ೧ ಏಪ್ರಿಲ್ ೨೦೧೫
  9. "ಸಿದ್ದಗಂಗಾ ಶ್ರೀಗಳ ಸಾಮಾಜಿಕ ಕೊಡುಗೆಗಳನ್ನು ಶ್ಲಾಘಿಸಿದ ಕಲಾಂ". Archived from the original on 2012-11-07. Retrieved 2019-01-21., 'ದಿ ಹಿಂದೂ' ಪತ್ರಿಕೆಯ ಆಂಗ್ಲ ವರದಿ, ೮ ಏಪ್ರಿಲ್ ೨೦೦೬
  10. "ಶಿವಕುಮಾರ ಸ್ವಾಮೀಜಿಯವರ ೧೧೧ವರ್ಷಗಳನ್ನು ಅವರು ಮೀಸಲಿರಿಸಿದ ಸರಳತೆ, ಜ್ಞಾನ ಹಾಗು ಸಾಮಾಜಿಕ ಸೇವೆಗಳಿಗೆ ನೆನೆಯಬೇಕು"., 'ಫಸ್ಟ್ ಪೋಸ್ಟ್' ತಾಣದ ವರದಿ, ೨೧ ಜನವರಿ ೨೦೧೯
  11. "ಶಿವಕುಮಾರ ಸ್ವಾಮೀಜಿ, 'ನಡೆದಾಡುವ ದೇವರು' ತಮ್ಮ ೧೧೧ ವಯಸ್ಸಿನಲ್ಲಿ ನಿಧನ. ಶೋಕದಲ್ಲಿ ಒಂದಾದ ರಾಜಕೀಯ ನಾಯಕರು"., 'ಎನ್.ಡಿ.ಟಿ.ವಿ' ವರದಿ, ಜನವರಿ ೨೧, ೨೦೧೯
  12. "ಶ್ರೀಗಳಿಗೆ ೧೧೦ ವರ್ಷ, ಭಕ್ತರಿಂದ ಭಾರತ ರತ್ನಕ್ಕೆ ಆಗ್ರಹ"., 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಆಂಗ್ಲ ಪತ್ರಿಕೆಯ ವರದಿ, ೧ ಏಪ್ರಿಲ್ ೨೦೧೭
  13. "ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಶಿವಕುಮಾರ ಸ್ವಾಮೀಜಿ ನಿಧನ"., 'ದಿ ಹಿಂದೂ' ಪತ್ರಿಕೆಯ ಆಂಗ್ಲ ವರದಿ, ೨೧ ಜನವರಿ ೨೦೧೯.
  14. "ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನಕ್ಕಾಗಿ ಆಗ್ರಹ". Archived from the original on 2008-10-18. Retrieved 2019-01-21., 'ದಿ ಹಿಂದೂ' ಆಂಗ್ಲ ವರದಿ, ೧೫ ಅಕ್ಟೋಬರ್ ೨೦೦೮
  15. "೧೧೧ವರ್ಷದ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನಕ್ಕಾಗಿ ಆಗ್ರಹಿಸಿದ ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ"., 'ದಿ ನ್ಯೂಸ್ ಮಿನಿಟ್' ಆಂಗ್ಲ ಪತ್ರಿಕೆಯ ವರದಿ, ೨೧ ಜನವರಿ ೨೦೧೯.
  16. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯ ಪ್ರಜಾವಾಣಿ ವಾರ್ತೆ, ೨೧ ಜನವರಿ ೨೦೧೯
  17. ಸಿದ್ಧಗಂಗಾ ಶ್ರೀಗಳಿಗೆ ಮತ್ತೆರಡು ಸ್ಟೆಂಟ್‌ ಅಳವಡಿಕೆ, ಪ್ರಜಾವಾಣಿ, ೦೨ ಡಿಸೆಂಬರ್ ೨೦೧೮

ಬಾಹ್ಯಸಂಪರ್ಕಗಳು