ಟ್ಸುಂಗ್ ದೇವೋ ಲೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟ್ಸುಂಗ್ ದೇವೋ ಲೀ

ಟ್ಸುಂಗ್ ದೇವೋ ಲೀ (1926 - ) ಒಬ್ಬ ಚೀನಸಂಜಾತ ಅಮೆರಿಕನ್ ಭೌತವಿಜ್ಞಾನಿ.

ಬಾಲ್ಯ, ವಿದ್ಯಾಭ್ಯಾಸ[ಬದಲಾಯಿಸಿ]

ಶಾಂಘಾಯಿಯಲ್ಲಿ 1926ರಲ್ಲಿ ಜನಿಸಿದ. ಅಲ್ಲಿಯ ನ್ಯಾಶನಲ್ ಷಿಕಿಯಾಂಗ್ ವಿಶ್ವವಿದ್ಯಾಲಯ ಮತ್ತು ಕುಮಿಂಗ್‌ನ ಸೌತ್‌ವೆಸ್ಟ್ ಅಸೋಸಿಯೇಟೆಡ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕಪೂರ್ವ ಅಧ್ಯಯನ. ಮುಂದೆ ಶಿಷ್ಯವೇತನ ಪಡೆದು ಅಮೆರಿಕಕ್ಕೆ ತೆರಳಿ, ಅಲ್ಲಿ ಷಿಕಾಗೊ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಗಳಿಸಿದ (1950). ಕೆಲಕಾಲ ಅಲ್ಲಿಯೇ ಖಗೋಳ ವಿಜ್ಞಾನದಲ್ಲಿ ಸಂಶೋಧನೆ, ತರುವಾಯ ಕ್ಯಾಲಿಫೊರ್ನಿಯದ ಭೌತವಿಜ್ಞಾನ ವಿಭಾಗದಲ್ಲಿ ಕೆಲಸಮಾಡಿ ನ್ಯೂಜೆರ್ಸಿಯ ಪ್ರಿನ್‌ಸ್ಟನ್ ಶಿಕ್ಷಣ ಕೇಂದ್ರಕ್ಕೆ ದಾಖಲಾದ (1951).

ಇವನ ಪೂರ್ವಪರಿಚಯಸ್ಥ ಚೆನ್ ನಿಂಗ್ ಯಾಂಗ್ ಸಹ ಇಲ್ಲಿಯೇ ಇದ್ದುದರಿಂದ, ಉಭಯರೂ ಜೊತೆಯಾಗಿ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಸಂಶೋಧನೆ ಮುಂದುವರಿಸಿದರು. 1953ರಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ತೆರಳಿದರೂ ಯಾಂಗ್‌ನೊಡನೆ ಸದಾಕಾಲ ಸಂಪರ್ಕವಿಟ್ಟುಕೊಂಡಿದ್ದ.

ವೃತ್ತಿಜೀವನ, ಸಾಧನೆಗಳು[ಬದಲಾಯಿಸಿ]

ಉಭಯರಿಗೂ ಸಂಯುಕ್ತವಾಗಿ ನೊಬೆಲ್ ಪಾರಿತೋಷಿಕ (1957) ತಂದುಕೊಟ್ಟ[೧] ಸಾಮ್ಯತತ್ತ್ವದ (ಪ್ಯಾರಿಟಿ ಪ್ರಿನ್ಸಿಪಲ್) ಮೇಲೆ ಅವರು ನಡೆಸಿದ ಸಂಶೋಧನೆ ಈ ರೀತಿಯಾಗಿದೆ: ಈ ತತ್ತ್ವದ ಮೇರೆಗೆ ನಿಸರ್ಗದಲ್ಲಿ ನಡೆಯುವ ಯಾವುದೇ ವಿದ್ಯಮಾನ, ಅದನ್ನು ದರ್ಪಣದಲ್ಲಿ ನೋಡಿದಾಗ ಕಾಣುವಂತೆಯೇ ನಡೆಯಬೇಕು. ಯಾವುದೇ ವಸ್ತುವಿನ ದರ್ಪಣಬಿಂಬದಂತಿರುವ ವಸ್ತುವೂ ನಿಸರ್ಗದಲ್ಲಿರಬೇಕು. ಇದನ್ನೇ, ನಿಸರ್ಗನಿಯಮಗಳು ಪ್ರತಿಫಲನದಲ್ಲಿ ಅಚರವಾಗಿರುತ್ತವೆಂದೂ ಹೇಳಬಹುದು. ನ್ಯೂಕ್ಲಿಯಸ್ಸೊಂದು ಎಲೆಕ್ಟ್ರಾನುಗಳನ್ನು ಉತ್ಸರ್ಜಿಸುತ್ತದೆಂದು ಭಾವಿಸೋಣ. ಈ ವಿದ್ಯಮಾನದ ದರ್ಪಣಬಿಂಬ ಕೂಡ ಮೂಲ ವಿದ್ಯಮಾನದ ತದ್ರೂಪವಾಗಿದ್ದರೆ ಎಲೆಕ್ಟ್ರಾನುಗಳ ವಿತರಣೆ ಎಲ್ಲ ದಿಕ್ಕುಗಳಲ್ಲಿಯೂ ಸಮವಾಗಿರುತ್ತದೆ. ಆದರೆ ಎಲೆಕ್ಟ್ರಾನುಗಳು ಒಂದೇ ದಿಕ್ಕಿನಲ್ಲಿ ಕೇಂದ್ರೀಕೃತವಾಗಿದ್ದರೆ, ದರ್ಪಣದಲ್ಲಿ ಅದರ ಬಿಂಬವೂ ಇನ್ನೊಂದು ದಿಕ್ಕಿನಲ್ಲಿ ಕೇಂದ್ರೀಕೃತವಾಗಿರುತ್ತದೆ.

ಈ ತತ್ತ್ವವನ್ನು ಪಾಲಿಸದ ಯಾವ ವಿದ್ಯಮಾನವೂ 20ನೆಯ ಶತಮಾನದ ಮಧ್ಯಭಾಗದವರೆಗೆ ಪತ್ತೆ ಆಗಿರಲಿಲ್ಲ. ಪರಮಾಣವಿಕ ಭೌತವಿಜ್ಞಾನ, ವಿದ್ಯುತ್ಕಾಂತೀಯ ಅಂತರಕ್ರಿಯೆ ಹಾಗೂ ಬೈಜಿಕ ಭೌತವಿಜ್ಞಾನದ ಪ್ರಬಲ ಅಂತರಕ್ರಿಯೆಗಳಲ್ಲಿ ಸಾಮ್ಯ ನಿತ್ಯತ್ವ ಕಂಡುಬಂತು. ವಿಶ್ವಕಿರಣಗಳಲ್ಲಿ ಉತ್ಪನ್ನವಾದ τ ಮತ್ತು θ ಮೆಸಾನುಗಳ ಗುಣಧರ್ಮಗಳನ್ನು ಲೀ ಮತ್ತು ಯಾಂಗ್ ಅಭ್ಯಸಿಸುತ್ತಿದ್ದಾಗ (1950) ಎರಡೂ ಬಗೆಯ ಕ್ಷಯಗಳಲ್ಲಿ ಜನಕ ಕಣದ ಎಲ್ಲ ಭೌತ ಗುಣಧರ್ಮಗಳೂ ಒಂದೇ ತೆರನಾಗಿದ್ದು, ಸಾಮ್ಯದಲ್ಲಿ ಮಾತ್ರ ಭಿನ್ನತೆ ಇರುವುದೆಂಬುದು ವಿವರ ವಿಶ್ಲೇಷಣೆಯಿಂದ ತಿಳಿದುಬಂತು. ಇದು ಕ್ಷೀಣ ಅಂತರಕ್ರಿಯೆಯ ವಿದ್ಯಮಾನ. ಈ ವಿದ್ಯಮಾನಗಳು ಪ್ರತಿಫಲನದಲ್ಲಿ ಅಚರವಾಗಿರುವುದಿಲ್ಲವೆಂದು ತಿಳಿದುಕೊಂಡರೆ ಮಾತ್ರ ಮೇಲಿನ ಫಲಿತಾಂಶಗಳನ್ನು ಸಮರ್ಪಕವಾಗಿ ವಿವರಿಸುವುದು ಸಾಧ್ಯವೆಂದು ಇವರು ವಾದಿಸಿದರು.

ಮುಂದಿನ ಕೇವಲ 6 ತಿಂಗಳಲ್ಲೇ ಮ್ಯಾಡಮ್ ವು ಮತ್ತು ಆಕೆಯ ಸಹಾಯಕರು ಬೀಟಾ ವಿಘಟನೆಯಲ್ಲಿ ಸಾಮ್ಯನಿತ್ಯತ್ವ ಗುಣಪಾಲನೆ ಆಗುವುದಿಲ್ಲವೆಂಬುದನ್ನು ಪ್ರಾಯೋಗಿಕವಾಗಿ ಸಿದ್ಧಮಾಡಿ ತೋರಿಸಿದರು. ಅವರು ತಮ್ಮ ಪ್ರಯೋಗಕ್ಕೆ ಬೀಟಾಕಣಗಳನ್ನು ಉತ್ಸರ್ಜಿಸುವ ಕೋಬಾಲ್ಟ್ -60ನ್ನು ಆಯ್ದುಕೊಂಡಿದ್ದರು. ಸಾಮಾನ್ಯ ಸ್ಥಿತಿಯಲ್ಲಿ, ಕೊಬಾಲ್ಟ್-60ರ ತುಂಡಿನಲ್ಲಿಯ ನ್ಯೂಕ್ಲಿಯಸ್ಸುಗಳು ಔಷ್ಣಿಕ ಚಲನೆಯ ಕಾರಣದಿಂದ ಎಲ್ಲ ದಿಕ್ಕುಗಳಿಗೂ ನಿರ್ದೇಶಿತವಾಗಿರುತ್ತವೆ, ಬೀಟಾಕಣಗಳು ಸಹ ಎಲ್ಲ ದಿಕ್ಕುಗಳಲ್ಲಿ ಉತ್ಸರ್ಜಿತವಾಗುತ್ತವೆ. ಕೆಲ ವಿಶಿಷ್ಟ ಪರಿಸ್ಥಿತಿಯಲ್ಲಿ ಅಂದರೆ 0.1 Kಗಿಂತಲೂ ಕಡಿಮೆ ಉಷ್ಣತೆಯಲ್ಲಿ ಬಾಹ್ಯ ಕಾಂತಕ್ಷೇತ್ರ ನ್ಯೂಕ್ಲಿಯಸ್ಸುಗಳನ್ನು ಧ್ರುವೀಕರಿಸುತ್ತದೆ. ಇಂಥ ಸಂದರ್ಭದಲ್ಲಿ ಒಂದು ದಿಕ್ಕಿನಲ್ಲಿ  ಅಧಿಕ ಸಂಖ್ಯೆಯಲ್ಲಿಯೂ ಇನ್ನೊಂದು ದಿಕ್ಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿಯೂ ಬೀಟಾಕಣಗಳು ಉತ್ಸರ್ಜಿತವಾಗುವುದನ್ನು ಶೋಧಿಸಿದರು. ಅಂದರೆ ಬೀಟಾಕಣಗಳು ಸಾಮ್ಯ ತತ್ತ್ವವನ್ನು ಪಾಲಿಸುವುದಿಲ್ಲ ಎಂದಾಯಿತು.

ಸಾಮ್ಯ ವಿಷಯವಾಗಿ ಅಷ್ಟೇ ಅಲ್ಲದೆ, ಮೂಲಕಣಗಳು, ಸಂಖ್ಯಾ ಕಲನಾತ್ಮಕ ಗತಿವಿಜ್ಞಾನ, ದ್ರವಬಲವಿಜ್ಞಾನ, ಕ್ಷೇತ್ರಸಿದ್ಧಾಂತ ಹಾಗೂ ಖಭೌತವಿಜ್ಞಾನಗಳಲ್ಲಿ ಕೂಡ ಈತ ಮಹತ್ತ್ವದ ಸಂಶೋಧನೆಗಳನ್ನು ಮಾಡಿದ್ದಾನೆ.

ಉಲ್ಲೇಖಗಳು[ಬದಲಾಯಿಸಿ]

  1. "The Nobel Prize in Physics 1957". The Nobel Foundation. Retrieved November 1, 2014.

ಹೊರಗಿನ ಕೊಂಡಿಗಳು[ಬದಲಾಯಿಸಿ]

Related archival collections[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: