ಜ್ಯೋತಿಷ ಮತ್ತು ವಿಜ್ಞಾನ
ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ. ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಬಲ್ಲಿದನಾಗುವನು ; ಬಲ್ಲಿದ ದರಿದ್ರನಾಗುವನು. ಈ ವಿಚಿತ್ರವನ್ನು ತಿಳಿಯಲು ಮಾನವನ ಪ್ರಯತ್ನ ಅಗಾಧ. ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು. ಕೊನೆಗೆ ಹೋರಾಶಾಸ್ತ್ರ ಬಂದಿತು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಕ್ಕಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ ಹೋರಾಶಾಸ್ತ್ರ. ಅಥವಾ ಫಲಜೋತಿಷ. ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ ಶಾಸ್ತ್ರದ ಕೆಲಸ. ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ. ಇದು ಖಗೋಳ ಗಣಿತಜ್ಞರಾದ ಭಾಸ್ಕರಾಚಾರ್ಯ ಮತ್ತು ವರಾಹ ಮಿಹಿರ ಮೊದಲಾದವರ ಕಾಲದಿಂದಲೂ ರೂಢಿಗೆ ಬಂದಿದೆ . ಆದರೆ ಈಗ ಹೋರಾಶಾಸ್ತ್ರವನ್ನೇ ಅಥವಾ ಫಲಜ್ಯೋತಿಷ ಶಾಸ್ತ್ರವನ್ನೇ ಜ್ಯೋತಿಷ ಶಾಸ್ತ್ರವೆಂದು ಕರೆಯುವ ರೂಢಿ ಬಂದಿದೆ. ಆಕಾಶ ಕಾಯಗಳ ಚಲನ ಇತ್ಯಾದಿ ವಿವರವನ್ನು ತಿಳಿಸುವ ಶಾಸ್ತ್ರವನ್ನು ಖಗೋಳ ಶಾಸ್ತ್ರವೆಂದು ಕರೆಯಲಾಗಿದೆ.
ಭಾರತೀಯ ಜ್ಯೋತಿಷ್ಯ ಶಾಸ್ತ್ರ ಇತಿಹಾಸ
[ಬದಲಾಯಿಸಿ]ಜ್ಯೋತಿಷ್ಯ ಶಾಸ್ತ್ರವನ್ನು ಇತ್ತೀಚೆಗೆ ವೇದ ಜ್ಯೋತಿಷ್ಯ, ವೇದಾಂಗ ಜ್ಯೋತಿಷ್ಯ ಶಾಸ್ತ್ರ ವೆಂದು ಕರೆಯುವ ರೂಢಿ ಬಂದಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಖ್ಯವಾಗಿ ಮೂರು ಭಾಗಗಳಿವೆ; :
- ಸಿದ್ಧಾಂತ
- ಸಂಹಿತ
- ಹೋರಾ.
- ಸಿದ್ಧಾಂತವು ಭಾರತ ಪದ್ಧತಿಯ ಖಗೋಳ ಶಾಸ್ತ್ರಕ್ಕೆ ಸೀಮಿತವಾಗಿದೆ.
- ಸಂಹಿತೆಯು ಮುಂದಿನ - ಪ್ರಾಕೃತಿಕ ಘಟನೆಗಳ -ಭೂಕಂಪ, ಯುದ್ಧ, ರಾಜಕೀಯ ಭವಿಷ್ಯ, ಮಳೆ, ಬೆಳೆ, ವಾಸ್ತು ಮೊದಲಾದವುಗಳನ್ನುತಿಳಿಸುವ ಶಾಸ್ತ್ರ.
- ಹೋರಾಶಾಸ್ತ್ರವು ಕುಂಡಲಿಯ ಆಧಾರದಿಂದ ಮಾನವರ ಭವಿಷ್ಯವನ್ನು ವಿವರವಾಗಿ ಹೇಳುವ ಶಾಸ್ತ್ರ.
'ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ'
[ಬದಲಾಯಿಸಿ]- ವೇದಾಂಗ ಜ್ಯೋತಿಷ್ಯವು ವೈದಿಕ - ಪಂಚಾಂಗವನ್ನು ರಚಿಸಿ, ದಿನಗಳನ್ನು ಎಣಿಸುವುದಕ್ಕೆ ಹಾಗೂ ಧಾರ್ಮಿಕ ಕ್ರಿಯೆಗಳಿಗೆ ಸೂಕ್ತ ದಿನ, ಸಮಯವನ್ನು ನಿರ್ಧರಿಸುವುದಕ್ಕಾಗಿ ಉಪಯೋಗಿಸಲ್ಪಡುತ್ತಿತ್ತು. ಭಾರತೀಯ ಪಂಚಾಂಗ ಪದ್ಧತಿಯು ನಿರಯನ ಪದ್ಧತಿಯನ್ನು ಅನುಸರಿಸಿ ರಚಿಸಲಾಗುತ್ತಿತ್ತು. ಇದರಲ್ಲಿ ನಕ್ಷತ್ರ ಗಳನ್ನು ಆಧರಿಸಿದ ಚಂದ್ರಮಾನ ಮತ್ತು ಸೌರಮಾನ ಪದ್ಧತಿಗಳನ್ನು ಆಧರಿಸಿ ವರ್ಷವನ್ನು ನಿಗದಿಗೊಳಿಸುತ್ತಿದ್ದರು.
- ಕ್ರಿ. ಪೂ. ಮೂರನೇ ಶತಮಾನದ ನಂತರ ಅಲೆಗ್ಜಾಂಡರನು ಭಾರತಕ್ಕೆ ಬಂದ ನಂತರ ರವಿ(ಸೂರ್ಯ), ಚಂದ್ರ (ಸೋಮ), ಮಂಗಳ (ಕುಜ), ಬುಧ, ಗುರು (ಬೃಹಸ್ಪತಿ), ಶುಕ್ರ, ಶನಿ ಹೀಗೆ ಏಳು ಗ್ರಹಗಳನ್ನು ಸೇರಿಸಿಕೊಂಡು ಅದಕ್ಕೆ ಕುಂಡಲಿ ರಚಿಸಿ ಭವಿಷ್ಯ ಹೇಳುವ ಫಲಜ್ಯೋತಿಷ್ಯ ಶಾಸ್ತ್ರ ಆರಂಭವಾಯಿತು. ಫಲಜ್ಯೋತಿಷ್ಯ ಶಾಸ್ತ್ರದ ಮೊದಲ ಪ್ರವರ್ತಕ ಯವನಾಚಾರ್ಯನೆಂದು ಹೇಳಿದೆ. ಆಗ ರಾಹು ಕೇತುಗಳನ್ನು ಗ್ರಹಗಳೆಂದು ಪರಿಗಣಿಸಿರಲಿಲ್ಲ. ರಾಹು ಕೇತುಗಳನ್ನು ಪುರಾಣ/ (ವೇದ, ಉಪನಿಷತ್?)ಗಳಲ್ಲಿ ರಾಕ್ಷಸರೆಂದು ಹೇಳಲಾಗಿದೆ.
- ಫಲ ಜ್ಯೋತಿಷ್ಯ ಶಾಸ್ತ್ರವು ಕ್ರಿ. ಪೂ. ೨-೩ನೇ ಶತಮಾನ ಕಾಲದಲ್ಲಿ ಗ್ರೀಕರಿಂದ ಬಂದ ಯವನೇಶ್ವರನ ಯವನಜಾತಕದಿಂದ ಭಾರತದಲ್ಲಿ ಆರಂಭವಾಗಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅವನು ಪಶ್ಚಿಮದ ಶಕ ಸತ್ರಪ ರಾಜ ಒಂದನೇ ರುದ್ರದಮನನ ಆಸ್ಥಾನದಲ್ಲಿದ್ದನು. ಕ್ರಿ.ಶ. ೨೭೦ ರಲ್ಲಿದ್ದ ಸ್ಪುಜಿಧ್ವಜನ ಗ್ರಂಥದಿಂದ ಆರ್ಯಭಟನ (ಕ್ರಿ. ಶ.೪೭೬) ಆರ್ಯಭಟೀಯದ ಕಾಲದವರೆಗಿನ ೩೦೦ವರ್ಷಗಳಲ್ಲಿ ಭಾರತೀಯ ಪಂಚಾಂಗದ ರೂಪುರೇಷೆಗಳು ಪೂರ್ಣಗೊಂಡಿರಬೇಕೆಂದು. ವಿದ್ವಾಂಸರು ಊಹಿಸಿದ್ದಾರೆ. ಆ ಕಾಲದಿಂದ ಏಳು ಗ್ರಹಗಳ ಹೆಸರಿನ ಏಳು ವಾರಗಳು ಭಾರತದಲ್ಲಿ ರೂಢಿಗೆ ಬಂದಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಆದರೂ ಭಾರತೀಯ ಪಂಚಾಂಗದಲ್ಲಿ ಗ್ರೀಕರ ಟಾಲಮಿಯ ಕಾಲಕ್ಕಿಂತ ಹಿಂದಿನ ಕೆಲವು ಜ್ಯೋತಿಷದ ಅಂಶಗಳಿರುವುದನ್ನೂ ಗುರುತಿಸಿದ್ದಾರೆ. ಆದರೆ ಈ ಹಿಂದಿನ ಗ್ರಂಥಗಳು ಪೂರ್ಣ ನಷ್ಟವಾಗಿವೆ ಲಭ್ಯವಾಗಿಲ್ಲ.
- ಕಲ್ಯಾಣವರ್ಮನಿಂದ ರಚಿತವಾದ ಬೃಹತ್ ಪರಾಶರ ಹೋರಾಶಾಸ್ತ್ರ ಮತ್ತು ಸಾರಾವಳಿ ಗ್ರಂಥಗಳು , ೭೧ ಅಧ್ಯಯಗಳನ್ನು ಹೊಂದಿದೆ. ಇವು ಕ್ರಿ.ಶ.೭-೮ನೇ ಶತಮಾನಕ್ಕೆ ಸೇರಿದವುಗಳಾಗಿವೆ. ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದನೆಂದು ಹೇಳಲಾದ ವರಾಹಮಿಹಿರನ (ಕ್ರಿ.ಶ. ೫೦೫-೫೮೭) ಪಂಚ ಸಿದ್ಧಾಂತಿಕ ಗ್ರಂಥ ಪ್ರಸಿದ್ಧವಾದುದು. ಇದಲ್ಲದೆ ಅವನ ಬೃಹತ್ ಸಂಹಿತೆ ಖಗೋಳ ಶಾಸ್ತ್ರ ಫಲಜ್ಯೋತಿಷ್ಯ ಕುಂಡಲಿರಚನೆ ಇತ್ಯಾದಿ ತಿಳಿಸುವುದು. ಅವನ ಬೃಹತ್ ಜಾತಕ ಗ್ರಂಥ ಫಲಜ್ಯೋತಿಷ್ಯವನ್ನು ವಿಸ್ತಾರವಾಗಿ ತಿಳಿಸುವುದು
ಫಲ ಜ್ಯೋತಿಷ ಪ್ರಾಚೀನ ಗ್ರಂಥಗಳು
[ಬದಲಾಯಿಸಿ]- ಬೃಹತ್ ಜಾತಕ
- ದೈವಜ್ಞ ವಲ್ಲಭ
- ಲಘು ಜಾತಕ
- ಯೋಗ ಯಾತ್ರ
- ವಿವಾಹ ಪಟಲ.
- ಹೋರ ಸಾರ (ವರಾಹ ಮಿಹಿರನ ಮಗ ಪೃಥುಯಶಸ್ ನಿಂದ ರಚಿತ)
ಜಾತಕ ಮತ್ತು ಕುಂಡಲಿ ರಚನೆ
[ಬದಲಾಯಿಸಿ]- ಭವಿಷ್ಯ ಇತ್ಯಾದಿ ಗುಣ, ದೋಷ ತಿಳಿಯಲು ವ್ಯಕ್ತಿಯ ಕುಂಡಲಿಯನ್ನು ರಚಿಸಲಾಗುವುದು. ಜನನ ಕಾಲದಲ್ಲಿ ಯಾವ ಯಾವ ಗ್ರಹಗಳು ಆಕಾಶದಲ್ಲಿ ಯಾವ ಯಾವ ಸ್ಥಾನದಲ್ಲಿ ಇದ್ದವೆಂದು ತಿಳಿಸುವ ವಿವರ ಮತ್ತು ನಕ್ಷೆಯೇ ಆ ವ್ಯಕ್ತಿಯ ಜಾತಕ ಮತ್ತು ಕುಂಡಲಿ. ಭೂಮಿಯು ಒಂದು ದಿನದಲ್ಲಿ ತನ್ನನ್ನೇ ತಾನು (ತನ್ನ ಅಕ್ಷದ ಮೇಲೆ) ಒಂದು ಸುತ್ತು ಸುತ್ತುವುದು. ಈ ಅಕ್ಷಕ್ಕೆ ಲಂಬವಾಗಿರುವ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ ಆಕಾಶದಲ್ಲಿ ಒಂದು ಖಗೋಲ ವೃತ್ತವಾಗುವುದು. ಅದನ್ನು ವಿಷುವದ್ ವೃತ್ತವೆಂದು ಕರೆಯುತ್ತಾರೆ. ಹೀಗೆ ಸ್ವಯಂ ಬ್ರಮಣದೊಂದಿಗೆ ಸೂರ್ಯನನ್ನು ಸುತ್ತುವಾಗ , ಭೂಮಿಯ ಅಕ್ಷವು ೨೩.೫ (೨೩.೪೪) ಡಿಗ್ರಿ ಓರೆಯಾಗಿ ಇರುವುದರಿಂದ, ವಿಷುವದ್ ರೇಖೆಗೆ ಅಥವಾ ಭೂಮಿಯ ಅಕ್ಷಕ್ಕೆ ೨೩.೫ ಡಿಗ್ರಿ ಓರೆಯಾಗಿ ಭೂಮಿಯ ಮೇಲಿನ ಊಹಾ ವೃತ್ತಗಳಾದ, ಮಕರ ಸಂಕ್ರಾತಿ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತ ಗಳ ಮಧ್ಯೆ ಒಂದು ಊಹಾವೃತ್ತವು ಉಂಟಾಗುವುದು. ಅದನ್ನು ಆಕಾಶಕ್ಕೆ ವಿಸ್ತರಿಸಿದಲ್ಲಿ , ಅದನ್ನು ಕ್ರಾಂತಿ ವೃತ್ತ ವೆಂದು ಕರೆಯುತ್ತಾರೆ. ಆ ಕ್ರಾಂತಿ ವೃತ್ತದ ಮೇಲೆ ರಾಶಿ, ನಕ್ಷತ್ರ ಗಳನ್ನು ಗುರುತಿಸಲಾಗಿದೆ.. (ನೋಡಿ ಚಿತ್ರ ಕ್ಲಿಕ್ ಮಾಡಿ- ವಿಷುವತ್ ಸಂಕ್ರಾಂತಿ ಕೆಂಪು ಗೆರೆ ವಿಷುವದ್ ವೃತ್ತ ; ತಿಳಿ ನೀಲಿ ಗೆರೆ ಕ್ರಾಂತಿ ವೃತ್ತ.) ಅದು (ಕ್ರಾಂತಿ ವೃತ್ತ) ಪಂಚಾಂಗ ರೀತಿ ಸೂರ್ಯನು ೧ ವರ್ಷದಲ್ಲಿ ಭೂಮಿಯನ್ನು ಸುತ್ತುವ ಆಕಾಶದ ಪಥ (ದಾರಿ). ಇದರಲ್ಲಿ ಸೂರ್ಯನು ದಕ್ಷಿಣದ ಕಡೆ ಚಲಿಸುತ್ತಾ ಮಕರ ಸಂಕ್ರಾಂತಿ ವೃತ್ತ ದ ಮೇಲೆ ನೇರವಾಗಿ ಬಂದು ಉತ್ತರದ ಕಡೆ ಚಲಿಸಲು ಪ್ರಾರಂಬಿಸಿದ ದಿನ ಮಕರ ಸಂಕ್ರಾಂತಿ. ಅದು ಸಾಮಾನ್ಯ ವಾಗಿ ಜನವರಿ ೧೪ ರಂದು ಆಗುತ್ತದೆ. ಆದರೆ ವೈಜ್ಞಾನಿಕವಗಿ ಸೂರ್ಯನು ಡಿಸೆಂಬರ್ ೨೧/೨೨ ರಂದೇ ಉತ್ತರಾಭಿಮುಖವಾಗಿ ಹೊರಡುತ್ತಾನೆ. ಸಂಕ್ರಮಣ ಲೆಕ್ಕದಲ್ಲಿ ೨೪ ದಿನ ವ್ಯತ್ಯಾಸವಾಗಿದೆ.
ರಾಶಿ
[ಬದಲಾಯಿಸಿ]- ಸೂರ್ಯ ಚಲಿಸುವ ಕ್ರಾಂತಿ ವೃತ್ತದ ಮೇಲೆ ಆಕಾಶದಲ್ಲಿ ೩೦ ಡಿಗ್ರಿಗಳಷ್ಟು ಪ್ರದೇಶವೇ ಒಂದು ರಾಶಿ. ಅದೇ ಒಂದು ಸೌರಮಾನ ತಿಂಗಳು. ಸೂರ್ಯ ೩೦/೩೧ ದಿನಗಳಲ್ಲಿ ಕ್ರಮಿಸುವ ಕಾಲ/ಪಥ ಪ್ರದೇಶ.
- ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ, ಹನ್ನೆರಡು ಭಾಗ ಮಾಡಿ ಅದರಲ್ಲಿ ವ್ಯಕ್ತಿ ಹುಟ್ಟಿದಾಗ ಇರುವ ಗ್ರಹಗಳ ಸ್ಥಾನ ಗುರುತಿಸಿದರೆ, ಅದು ರಾಶಿ ಕುಂಡಲಿ. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. ಆದರೆ ಅಯನಾಂಶ ವ್ಯತ್ಯಾಸದಿಂದ ೧೬೦೦ವರ್ಷದ ಹಿಂದೆ ಇದ್ದ ರಾಶಿಗಳ ಪ್ರಾರಂಭದ ಬಿಂದು ಈಗ ಇಲ್ಲ. ಸುಮಾರು ೨೪ ಡಿಗ್ರಿ (ಅಂಶ) ಗಳಷ್ಟು ಹಿಂದೆ ಸರಿದಿದೆ. ಸಾಯನ ಅಥವಾ ವಿಜ್ಞಾನಕ್ಕೆ ಹೊಂದುವ ಕುಂಡಲಿ ತಯಾರಿಸಲು ಈಗ ಪಂಚಾಂಗಗಳಲ್ಲಿರುವ ಗ್ರಹ ಸ್ಥಾನಗಳಿಗೆ ೨೪ ಡಿಗ್ರಿ ಸೇರಿಸಿಕೊಳ್ಳಬೇಕು. ಎಂದರೆ ಈಗ ಸುಮಾರು ೧೬೦೦ ವರ್ಷಗಳ ಹಿಂದೆ ಯಾವ ನಕ್ಷತ್ರ ಗಳಿಗೆ ಫಲ ಹೇಳಿತ್ತೋ ಅದರಿಂದ ೨೪ ಡಿಗ್ರಿ ಮುಂದಿನ ನಕ್ಷತ್ರಗಳಿಗೆ ಈಗ ಅದೇ ಫಲಗಳನ್ನು ಹೇಳಲಾಗುವುದು.
ಲಗ್ನ ಸಾಧನೆ
[ಬದಲಾಯಿಸಿ]ಜಾತಕದಲ್ಲಿ , ಜನನ ಕಾಲದಲ್ಲಿ ಪೂರ್ವ ದಿಗಂತದಲ್ಲಿ ಮೇಷಾದಿ ರಾಶಿಗಳಲ್ಲಿ ಉದಯವಾಗುತ್ತಿರುವ ರಾಶಿಯ ಅಂಶವನ್ನು ಗುರತಿಸುವುದೇ ಲಗ್ನ ಸಾಧನೆ. ಅದಕ್ಕೆ ತನು ಸ್ಥಾನ ವೆನ್ನುತ್ತಾರೆ. ಒಂಭತ್ತು ಗ್ರಹಗಳ ಜೊತೆಗೆ ಲಗ್ನವಿರುವ ರಾಶಿಯ ಪ್ರಭಾವವೂ ಗಣಿಸಲ್ಪಡುತ್ತದೆ. ಆ ಲಗ್ನವಿರುವ ರಾಶಿಯು ಹೊಂದಿರುವ ಗುಣ ಲಕ್ಷಣಗಳು ಜಾತಕನ ದೇಹ ಆರೋಗ್ಯಾದಿ ವಿಷಯಗಳನ್ನು ನಿರ್ಧರಿಸುತ್ತದೆ. ಅದರ ಜೊತೆಗೆ ಆ ಲಗ್ನದ ನಕ್ಷತ್ರ, ಅದರ ಪಾದದ ಅಂಶ, ಅದರಲ್ಲಿರುವ ಗ್ರಹ, ಅದರ ಮೇಲೆ ಬೇರೆ ಬೇರೆ ಗ್ರಹಗಳ ದೃಷ್ಟಿ ಇವು ಜಾತಕನ ದೇಹ ಲಕ್ಷಣ ಭವಿಷ್ಯದ ಆರೋಗ್ಯಾದಿ ವಿಷಯಗಳನ್ನು ನಿರ್ಧರಿಸುತ್ತದೆ. ಲಗ್ನದಿಂದ ಒಂದು ಎಂದು ಆರಂಭಿಸಿ ಮುಂದಿನ ೧೧ ಸ್ಥಾನಗಳನ್ನು ಗುರುತಿಸಲಾಗುವುದು. ಲಗ್ನವಿರುವ ೧ ನೇ ಸ್ಥಾನ ತನು, ೨ ನೇಯದು ಧನ, ಹೀಗೆ ೧೨ ರಾಶಿಗಳಿಗೂ ಲಕ್ಷಣ ಗಳಿವೆ.
ನಕ್ಷತ್ರ :
[ಬದಲಾಯಿಸಿ]- ಜ್ಯೋತಿಷ್ಯಶಾಸ್ತ್ರದ ನಕ್ಷತ್ರಗಳು
- ಆಕಾಶದ ಕ್ರಾಂತಿವೃತ್ತದ ೩೬೦ ಡಿಗ್ರಿಗಳನ್ನು ೨೭ ಭಾಗ ಮಾಡಿದರೆ ೨೭ ನಕ್ಷತ್ರದ ಸ್ಥಾನಗಳಾಗುತ್ತವೆ. ಅವೇ ಅಶ್ವಿನಿ, ಭರಣಿ, ವೊದಲಾದ ೨೭ ನಕ್ಷತ್ರ ಸ್ಥಾನಗಳು. ಒಂದು ನಕ್ಷತ್ರಕ್ಕೆ ಆಕಾಶದಲ್ಲಿ ೧೩.೧/೩ ಡಿಗ್ರಿ ಯಷ್ಟು ಸ್ಥಾನ (ಸ್ಥಳ). ಆಕಾಶದಲ್ಲಿ ಈ ಹೆಸರಿನ ನಕ್ಷತ್ರಗಳು ಅಳತೆಗೆ ಸರಿಯಾಗಿ ಇಲ್ಲ; ೧೩.೧/೩ ಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ಬರುವುದು. ಈ ೧೩.೧/೩ ಡಿಗ್ರಿಗಳನ್ನು ಪುನಃ ೪ ಭಾಗ (೪ ಪಾದ) ಮಾಡಿದರೆ ಪ್ರತಿ ಭಾಗಕ್ಕೆ ೩.೧/೩ ಡಿಗ್ರಿಯಷ್ಟು(೩ಅಂಶ ೨೦ಕಲೆ) ಸ್ಥಳ ಬರುವುದು. ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಜನನ ಕಾಲದಲ್ಲಿದ್ದ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ೬ ರಿಂದ ೬.೧/೪ ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಒಂದೇ ರೇಖಾಂಶದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ. ಉಳಿದ ಗ್ರಹಗಳ ಚಲನೆ ಚಂದ್ರನಿಗಿಂತ ನಿಧಾನವಾದ್ದರಿಂದ ಕಾಲು ಅರ್ಧ ಗಂಟೆಗಳ ವ್ಯತ್ಯಾದಲ್ಲಿ ಮಗುವಿನ ರಾಶಿ ನವಾಂಶ ಕುಂಡಲಿಗಳಲ್ಲಿ ಬಹಳ ಬದಲಾವಣೆ ಆಗುವುದಿಲ್ಲ. ಹೆಚ್ಚಾಗಿ ಒಂದೇ ಬಗೆಯ ಕುಂಡಲಿ ಬರುತ್ತದೆ.
- ವಿಜ್ಞಾನಿಗಳ ಪ್ರಶ್ನೆ
- ಒಂದೇ ಕಾಲದಲ್ಲಿ (ಸಮಯದಲ್ಲಿ) ಒಂದೇ ಸ್ಥಳದಲ್ಲಿ ಜನಿಸಿದ- ಅವರ ಭವಿಷ್ಯಗಳೂ ಒಂದೇ ಇರಬೇಕಲ್ಲ? ಆದರೆ ಹಾಗಿರುವುದು ಕಂಡಿಲ್ಲ.
- ಒಂದೇ ಆಸ್ಪತ್ರೆ ಆಥವಾ ಊರಿನಲ್ಲಿ ಏಕ ಕಾಲದಲ್ಲಿ ಜನಿಸಿದವರ ಜಾತಕ-ಕುಂಡಲಿ ಒಂದೇ ರೀತಿ ಇರುತ್ತದೆ. ಇವರ (ಏಕ ಕಾಲದಲ್ಲಿ ಜನಿಸಿದವರ) ಜೀವನ ಕ್ರಮದಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ. ಒಬ್ಬ ಅನಕ್ಷರಸ್ಥ , ಇನ್ನೊಬ್ಬ ವಿದ್ವಾಂಸ. ಎಂಥ ವಿಚಿತ್ರ. ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರು ಜನನವಾಗಿದ್ದು ; ಅವರು ಡಾಕ್ಟರು , ಶ್ರೀಮಂತರು; ತಾವು ಬಡ ಜ್ಯೋತಿಷಿ. ಇದರ ರಹಸ್ಯ ತಮಗೂ ತಿಳಿಯದೆಂದರು. (ಆಧಾರ: ವನಕೃಪ ವಿಶೇಷಾಂಕ-೧೯೯೮, ಲೇಖನ; ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ: ಲೇ. ಬಿ.ಎಸ್. ಚಂದ್ರಶೇಖರ: ಕಾಪಿರೈಟ್ ಇಲ್ಲ)
- ಆಕಾಶದಲ್ಲಿ ಕೋಟಿ ಕೋಟಿ ನಕ್ಷತ್ರಗಳು ಇದ್ದು , ಈ ಜ್ಯೋತಿಷ್ಯದ ೨೭ ನಕ್ಷತ್ರಗಳು ಮಾತ್ರ ಮಾನವನ ಜೀವಿತದ ಮೇಲೆ ಪರಿಣಾಮ ಬೀರುವವು ಉಳಿದವು ಈ ೨೭ ನಕ್ಷತ್ರ ಗಳಿಗಿಂತ ಪ್ರಬಲವಾಗಿದ್ದರೂ ಅವು ಪ್ರಭಾವ ಬೀರುವುದಿಲ್ಲ ಎನ್ನುವುದು ಹೇಗೆ ಸರಿ ? ಈ ನಕ್ಷತ್ರಗಳೆಲ್ಲಾ ಅತಿ ದೂರದಲ್ಲಿದ್ದು ಅವುಗಳಿಂದ ಹೊರಟ ಬೆಳಕು ನಮಗೆ ತಲುಪಲು ಅನೇಕ ಕೋಟಿ ವರ್ಷ ಬೇಕು. ಅವುಗಳ ಪ್ರಭಾವ ಮಾನವನ ಮೇಲೆ ಹೇಗೆ ಆಗುವುದು ? ಈ ೨೭ ನಕ್ಷತ್ರಗಳಿಗೆ ಜಾತಿ -ವರ್ಣ,ಲಿಂಗ ,ಪ್ರಾಣಿಗಳ ಗುಣ, ಗಣ (ರಾಕ್ಷಸ,ದೇವ, ಮನುಷ್ಯ ) , ಅದಕ್ಕೆ ಅಧಿಪತಿಗಳಾಗಿ ಋಷಿಗಳು, ದೇವತೆಗಳು ಯಾವ ಆಧಾರದ ಮೇಲೆ ಬಂದವು? ನಿರ್ಜೀವವಾದ ಈ ಆಕಾಶ ಕಾಯಗಳು ಮರಗಿಡಗಳ ಗುಣಗಳನ್ನೂ ಹೊಂದಿವೆ -ಅವುಗಳಿಗೆ ಮೇಲೆ ಕೆಳಗೆ ನೋಡುವ ದೃಷ್ಟಿಯೂ ಇದೆ. ಇವೆಲ್ಲವೂ ಕೇವಲ ಕಲ್ಪನೆಗಳೆಂದು ತೋರುವವು. ಇಲ್ಲದಿದ್ದರೆ ಆಧಾರವೇನು? ಹಿಂದೆ ನಕ್ಷತ್ರಗಳನ್ನೆಲ್ಲಾ ದೇವತೆಗಳೆಂದು ಭಾವಿಸಿ ಈ ಬಗೆಯ ಕಲ್ಪನೆ ಮಾಡಿದ್ದಾರೆ. ಈಗ ವಿಜ್ಞಾನ ಬೆಳೆದ ಮೇಲೆ , ಸತ್ಯ ತಿಳಿದ ಮೇಲೆ , ಕಲ್ಪನೆಗೆ ಬೆಲೆ ಇದೆಯೇ?
ಪಂಚಾಂಗ ರಚನೆ
[ಬದಲಾಯಿಸಿ]- ಪಂಚಾಂಗ ರಚನೆಯಲ್ಲಿ ಅನೇಕ ಸಿದ್ಧಾಂತಗಳಿದ್ದೂ, ಅವುಗಳಲ್ಲಿ ಪರಸ್ಪರ ಚಂದ್ರ ಮತ್ತು ನಕ್ಷತ್ರದ ಚಲನೆಯ ಕಾಲಮಾನಗಳಲ್ಲಿ ವ್ಯತ್ಯಾಸವಿರುತ್ತದೆ. ಎಲ್ಲರೂ ತಮ್ಮ ಕ್ರಮವೇ ಸರಿ ಎನ್ನುತ್ತಾರೆ. ಇದು ಹೇಗಾದರೂ ಇರಲಿ. ಭಾರತದ ಬಹಳ ಜನ, ಪಂಚಾಂಗ ಕರ್ತರು ಸ್ಥಿರಬಿಂದುವಿನಿಂದ ಪ್ರಾರಂಭವಾಗುವ ನಿರಯನ ಪದ್ದತಿಯನ್ನೇ ಅನುಸರಿಸುತ್ತಾರೆ. ಆದರೆ ಖಗೋಳ ಶಾಸ್ತ್ರದ ಪ್ರಕಾರ ಸುಮಾರು ೭೨ ವರ್ಷಕ್ಕೆ ಒಂದು ಅಂಶದಷ್ಟು (ಡಿಗ್ರಿ) ನಕ್ಷತ್ರ ಉದಯದಲ್ಲಿ ಮುಂದೆ ಸರಿಯುತ್ತದೆ. ಭಾಸ್ಕರಾಚಾರ್ಯರು ಹಿಂದೆ ಪಂಚಾಂಗ ರಚನೆ ಮಾಡುವಾಗ ಈ ವ್ಯತ್ಯಾಸವನ್ನು ಅಯನಾಂಶ ಎಂದು ಲೆಕ್ಕ ಹಾಕಿ ಪಂಚಾಂಗ ರಚಿಸಿದ್ದರು. ಇದಕ್ಕೆ ಸಾಯನ ಪದ್ದತಿ ಎಂದು ಹೆಸರು. ಅವರು ನಂತರ ಕಾಲ ಕಾಲಕ್ಕೆ ಪಂಚಾಂಗ ಪರಿಷ್ಕರಣವನ್ನು ಸೂಚಿಸಿದ್ದರು. ಆದರೆ ಅದು ಆಗಿಲ್ಲ. ೧೯೯೮ನೇ ಸಾಲಿಗೆ ಭಾಸ್ಕಾರಾಚಾರ್ಯರು ರಚಿಸಿದ ನಕ್ಷತ್ರ, ಗ್ರಹ, ರಾಶಿಗಳ ಲೆಕ್ಕಕ್ಕೂ ಖಗೋಲ ಶಾಸ್ತ್ರದ ಪ್ರಕಾರ ಸುಮಾರು ೨೩ಅಂಶ(ಡಿಗ್ರಿ), ೪೯ ಕಲೆಗಳಷ್ಟು ವ್ಯತ್ಯಾಸವಾಗಿದೆ. ಎಂದರೆ ಈಗಿನ ನಿರಯನ ಪದ್ದತಿಯಲ್ಲಿ ಅಶ್ವಿನಿ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವನ ನಕ್ಷತ್ರ , ಸಾಯನ ಪದ್ದತಿಯಲ್ಲಿ ಎಂದರೆ ಖಗೋಳ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರದ ಮೂರನೇ ಪಾದವಾಗಬೇಕು. ಕುಂಡಲಿಯಲ್ಲಿ ಎಲ್ಲಾ ಗ್ರಹಗಳನ್ನೂ ೨೩ ಅಂಶ ೪೯ ಕಲೆಗಳಷ್ಟು ಮುಂದೆ ಗುರುತಿಸಬೇಕಾಗುವುದು. ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜ್ಯೇಷ್ಠ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಸಾಯನ ರೀತಿಯಲ್ಲಿ ಪೂರ್ವಾಷಾಢ ೨ನೇ ಪಾದವಾಗುತ್ತದೆ.
ಒಂದು ವ್ಯಕ್ತಿಯ ಕುಂಡಲಿ
[ಬದಲಾಯಿಸಿ]- ಇನ್ನೊಂದು ಉದಾಹರಣೆ :- 2-3-2000 ದಲ್ಲಿ ಬೆಳಿಗ್ಗೆ 8.4೦
ಕ್ಕೆ ಜನಿಸಿದ ಮಗುವಿನ ಜಾತಕದಲ್ಲಿ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಿರುವ ಅಂಶ -(ಲಗ್ನ)
- ಸಾಯನ ಪದ್ದತಿಯಲ್ಲಿ (ಬಿ ವಿ ರಾಮನ್ ಅಯನಾಂಶ ೨೨.೨೫.೦೭):
- ಲಗ್ನ ಮೇಷ ೧೫-೨೮-೩೯ಡಿಗ್ರಿ ; ಭರಣಿ ೧ ನೇಪಾದ;
- ರವಿಗ್ರಹ ಮೀನ ೧೧-೫೧-೧೯ಡಿಗ್ರಿ ಉತ್ತರಾಭದ್ರ ೩ನೇಪಾದ,
- ಚಂದ್ರ ಮಕರದಲ್ಲಿ ೨೪-೫೬-೩೩ಡಿಗ್ರಿ ಧನಿಷ್ಟಾ ೧ನೇಪಾದ;
- ಅದೇ ನಿರಯನ ಪದ್ದತಿಯಲ್ಲಿ
- ಲಗ್ನ ಮೀನ ೨೩-೦೩-೩೨ ಡಿಗ್ರಿ, ರೇವತಿ ೨ನೇ ಪಾದ ,
- ರವಿ ಕುಂಭರಾಶಿ ೧೯-೨೬-೧೨ಡಿಗ್ರಿ ೪ನೇಪಾದ ಶತಭಿಶ;
- ಚಂದ್ರ ನಕ್ಷತ್ರ ಮಕರ ೨-೩೧-೩೬ ಉತ್ತರಾಷಾಢ ಪಾದ ೨.
ಇನ್ನೊಂದು ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜೇಷ್ಠಾ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಪೂರ್ವಾಷಾಢ ೨ನೇ ಪಾದವಾಗುತ್ತದೆ. ಆವ್ಯಕ್ತಿಯ ಕುಂಡಲಿ ಈ ರೀತಿ ಇರುತ್ತದೆ
ರಾಶಿ | ಗ್ರಹಗಳು | ನವಾಂಶ | ಸಾಯನ |
---|---|---|---|
ಮೀನ/ ಕೇತು ೫ /ಗುರು ೧೧ | ಮೇಷ/ಶನಿ ೧೦ | ವೃಷಭ/ ಶು ೧, | ಮಿಥುನ/ಕು ೧೦ ;ಲಗ್ನ ೧೨ ;ರವಿ ೧೨ ;ಬು ೧೨ |
ಕುಂಭ/ಕೇತು೫ | ಸಾಯನ | ದಿ. ೧೦-೬-೯೮ ದಲ್ಲಿ ಬೆಳಿಗ್ಗೆ ೬ಗಂ. ೬ನಿ. ಕ್ಕೆ ಜನನ | ಕಟಕ |
ಮಕರ | ಸ್ಥಳ ಸಾಗರ | ಹೆಸರು XYZ | ಸಿಂಹ/ |
ಧನು / ಚಂದ್ರ ೬ | ವೃಶ್ಚಿಕ/ | ತುಲಾ | ಕನ್ಯಾ /ರಾ ೧೧ |
ರಾಶಿ | ಗ್ರಹಗಳು | ನವಾಂಶ | ನಿರಯನ |
---|---|---|---|
ಮೀನ/ ಗುರು ೪ | ಮೇಷ/ಶನಿ ೨ ಶು ೬ | ವೃಷಭ/ ಕು ೩ ಲಗ್ನ ೫ ರವಿ ೫ ಬು ೫ | ಮಿಥುನ |
ಕುಂಭ/ಕೇತು೧೦ | ನಿರಯನ | ದಿ. ೧೦-೬-೯೮ ದಲ್ಲಿ ಬೆಳಿಗ್ಗೆ ೬ಗಂ. ೬ನಿ. ಕ್ಕೆ ಜನನ | ಕಟಕ |
ಮಕರ | ಸ್ಥಳ ಸಾಗರ | ಹೆಸರು XYZ | ಸಿಂಹ/ ರಾ. ೪/ರ ೫ |
ಧನು | ವೃಶ್ಚಿಕ/ ಚಂದ್ರ ೧೧ | ತುಲಾ | ಕನ್ಯಾ |
- ಹೀಗೆ, ಸಾಯನ ನಿರಯನದಲ್ಲಿ ಒಬ್ಬನೇ ಜಾತಕನಿಗೆ, ಬೇರೆ ಬೇರೆ ರಾಶಿ ನಕ್ಷತ್ರಗಳೇ ಆಗುತ್ತವೆ, ಫಲಗಳು ಒಂದೇ ಆಗಬೇಕು,ಆದರೆ ಫಲಗಳು ಬೇರೆ ಬೇರೆ ಆಗುತ್ತವೆ. ಕೆಲವರಿಗೆ ಸಾಯನ ಸರಿ, ಕೆಲವರಿಗೆ ನಿರಯನ ಸರಿ. ಈ ಅಯನಾಂಶ ಲೆಕ್ಕದಲ್ಲೂ ಒಮ್ಮತವಿಲ್ಲ. ಬಿ.ವಿ ರಾಮನ್ ೨೨.೨೫.೦೭ ಡಿಗ್ರಿ ಅಯನಾಂಶ ಹಿಡಿದರೆ, ವಿಜ್ಞಾನಿಗಳು ೨೪ ಡಿಗ್ರಿಯನ್ನೂ ಎನ್ ಸಿ, ಲಾಹಿರಿಯವರು ೨೪.೮೬ ಡಿಗ್ರಿಯನ್ನೂ ಲೆಕ್ಕ ಹಿಡಿಯುತ್ತಾರೆ. ಹಾಗಾಗಿ ನಿಖರತೆ ಇಲ್ಲ.
- ಒಬ್ಬನೇ ವ್ಯಕ್ತಿಯ ಈ ಎರಡೂ ಕುಂಡಲಿಗಳ ಭವಿಷ್ಯ ಫಲ ಒಂದೇ ಆಗಿರುತ್ತದೆ; ಆದರೆ ಗ್ರಹ ನಕ್ಷತ್ರಗಳು ಬೇರೆ ಬೇರೆ ರಾಶಿಗಳಲ್ಲಿವೆ.
ಇದು ಯಾವುದೇ ತರ್ಕಕ್ಕೆ ವಿರುದ್ಧ ವಾಗಿದೆ.
ಸಾಯನ ಮತ್ತು ನಿರಯನ
[ಬದಲಾಯಿಸಿ]- ೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ೨೩.೫ ಡಿಗ್ರಿ ಯಷ್ಟು (೧೯೯೮) ವ್ಯತ್ಯಾಸವಿರುವ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ. ಜ್ಯೋತಿಷ್ಯ ವಿದ್ವಾಂಸ ಎನ್.ಸಿ. ಲಾಹಿರಿ ಅವರ ಪ್ರಕಾರ ೨೦೦೦ ನೇ ಇಸವಿಗೆ ಅಯನಾಂಶ ೨೩.೮೫ ಡಿಗ್ರಿ. ಅಂದಾಜು ಕ್ರಿ. ಶ. ೨೯೩ರ ಸ್ಥಿರಾಂಕ ವನ್ನು ನಿರಯನದವರು ಹಿಡಿಯುತ್ತಾರೆ. ಆರ್ಯಭಟೀಯವು ಕ್ರಿ.ಶ.೪೯೯ನ್ನು '೦'ಆರಂಭವಾಗಿ ಹಿಡಿಯುತ್ತಾರೆ. ಸಾಂಪ್ರದಾಯಿಕ ಅಯನಾಂಶ ೨೨.೬೪ ಡಿಗ್ರಿ. ಆಧುನಿಕ ವಿಜ್ಙಾನ +೨೪ ಡಿಗ್ರಿ ಯ ವ್ಯತ್ಯಾಸ ಹೇಳುತ್ತದೆ. ಆದರೆ ವೈಜ್ಞಾನಿಕವಗಿ ಅಥವಾ ಭಾಸ್ಕರಾಚಾರ್ಯರ ಅಭಿಪ್ರಾಯದಂತೆ ಸಾಯನ ಕುಂಡಲಿ-ಜಾತಕಗಳು ಸರಿಯಾದ ಕ್ರಮ. ಬೆಂಗಳೂರಿನ ಬಿ.ವಿ.ರಾಮನ್ ಜ್ಯೋತಿಷ್ಯ ಸಂಸ್ಥೆಯವರು ಮತ್ತು ಪಾಶ್ಚಿಮಾತ್ಯರು ಸಾಯನ ಕುಂಡಲಿ -ಜಾತಕಗಳಮೇಲೆ ಭವಿಷ್ಯ ಹೇಳುತ್ತಾರೆ. ಉಳಿದವರು ನಿರಯನ ಕುಂಡಲಿ ಉಪಯೋಗಿಸುತ್ತಾರೆ. ಆಗ ಒಬ್ಬನೇ ವ್ಯಕ್ತಿಗೆ ಎರಡು ಬಗೆಯ ಜಾತಕ-ಕುಂಡಲಿ ಉಂಟಾಗುತ್ತದೆ. ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇ ಫಲ ಹೇಳುವುದು ಸಾಧ್ಯವಿಲ್ಲ.
- ಆದರೆ ಈಗ ಆ ಎರಡೂ ಕುಂಡಲಿಗೆ ಬೇರೆ ಬೇರೆ ಫಲ ಹೇಳಿದಲ್ಲಿ ಜಾತಕನು ಯಾವುದನ್ನು ನಂಬಬೇಕು. ಅವನು ತನಗೆ ಯಾವ ಜ್ಯೋತಿಷ್ಯದಲ್ಲಿ ನಂಬಿಕೆ ಇದೆಯೋ ಅದನ್ನು ನಂಬುತ್ತಾನೆ. ಆದರೆ ಅದರ ಸತ್ಯತೆ ಪ್ರಶ್ನಾರ್ಹವಾಗುತ್ತದೆ. ತರ್ಕಕ್ಕೆ ಹೊಂದದ ಮೂಢನಂಬಿಕೆ ಆಗುತ್ತದೆ.
ರಾಹು ಮತ್ತು ಕೇತು :
[ಬದಲಾಯಿಸಿ]- ರಾಹು ಕೇತುಗಳ ವಿಚಾರ. ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿಗೆ ಅಗೋಚರ ಗ್ರಹಗಳೆಂದು ಹೇಳಲಾಗುತ್ತದೆ. ಆದರೆ ಇವು ಗ್ರಹಗಳೇ ಅಲ್ಲ. ಇವು ಆಕಾಶ ಕಾಯಗಳೇ ಅಲ್ಲ. ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು. ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಅದು ಖಗೋಳ-ವಿಷುವದ್ ವೃತ್ತ ಮತ್ತು ಸೂರ್ಯನು ಭೂಮಿಯನ್ನು ವರ್ಷದಲ್ಲಿ ಒಂದು ಬಾರಿ ಸುತ್ತುತ್ತಾನೆ ಎಂದು ಇಟ್ಟುಕೊಂಡರೆ, ಸೂರ್ಯನ ಪಥ ಖಗೋಲದಲ್ಲಿ ಒಂದು ವೃತ್ತವಾಗುವುದು. ಅದು ಕ್ರಾಂತಿ ವೃತ್ತ. ಅದರಲ್ಲಿ ಈ ಮೇಷಾದಿ ನಕ್ಷತ್ರ ಪುಂಜ(ರಾಶಿ)ಗಳನ್ನೂ, ಅಶ್ವಿನಿ ಆದಿಯಾಗಿ ನಕ್ಷತ್ರಗಳನ್ನೂ ಗುರುತಿಸಲಾಗುವುದು. (ಭೂಮಿಯು ಸೂರ್ಯನನ್ನು ಸುತ್ತುವ ಪಥವೇ ಕ್ರಾಂತಿವೃತ್ತ - ಸೂರ್ಯ ಭೂಮಿಯನ್ನು ಸುತ್ತುವನೆಂದು ಭಾವಿಸಿದರೂ ಅದೇ ಪಥ ಬರುವುದು)
- ಭೂಮಿಯ ಅಕ್ಷವು ಸೂರ್ಯನಿಗೆ ೨೩.೫ಡಿಗ್ರಿ ಓರೆಯಾಗಿರುವುದರಿಂದ, ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದರೆ ಬರುವ ವಿಷುವದ್ ವೃತ್ತಕ್ಕೆ ೨೩.೫ ಡಿಗ್ರಿಯಷ್ಟು ಓರೆಯಾಗಿ ಒಂದು ಊಹಾ ಕ್ರಾಂತಿ ವೃತ್ತ ವಾಗುವುದು. ಭೂಮಿಯನ್ನು ಚಂದ್ರನು ಸುಮಾರು ೨೯ ದಿನಗಳಲ್ಲಿ ಒಂದು ಸುತ್ತು ಸುತ್ತುತ್ತಾನೆ. ಚಂದ್ರನ ಪಥ ಸೂರ್ಯನ ಕ್ರಾಂತಿ ವೃತ್ತ ಪಥಗಳು ಸಮತಲದಲ್ಲಿ ಇಲ್ಲ; ಸ್ವಲ್ಪ ಓರೆಯಾಗಿವೆ. ಅದರಿಂದ ಸೂರ್ಯ ಚಂದ್ರರ ಪಥದ ದಾರಿ ಎರಡು ಬಳೆಗಳು ಒಂದರೊಳಗೊಂದು ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಕಡೆ ಒಂದನ್ನೊಂದು ಎರಡು ಬಿಂದುಗಳಲ್ಲಿ ಕತ್ತರಿಸುತ್ತವೆ. (ಚಿತ್ರಕ್ಕೆ -ವಿಕಿ- ಇಂಗ್ಲಿಷ್ 'ನೋಡ್ಸ್ ' ಫೈಲ್ ನೋಡಿ)
( [[ಚಿತ್ರ:Planet orbit nodes 2 animation.gif|thumb|right|]]
- ಈ ಬಿಂದುಗಳೇ ರಾಹು ಮತ್ತು ಕೇತುಗಳು. (N1; N 2;)ಈ ಬಿಂದುಗಳನ್ನು ಇಂಗ್ಲೀಷ್ ನಲ್ಲಿ'ನೋಡ್'ಗಳೆಂದು ಕರೆಯುತ್ತಾರೆ. ಈ ಊಹಾ ಬಿಂದುಗಳಲ್ಲಿ ಉತ್ತರ ದಿಕ್ಕಿನದು ರಾಹು. ದಕ್ಷಿಣ ದಿಕ್ಕಿನದು ಕೇತು. ಈ ಬಿಂದುಗಳಲ್ಲಿ ಚಂದ್ರನು ಬಂದಾಗ ಅಮವಾಸ್ಯೆಯಲ್ಲಿ ಸೂರ್ಯ ಗ್ರಹಣವು ಹುಣ್ಣಿಮೆಯಲ್ಲಿ ಚಂದ್ರ ಗ್ರಹಣವು ಆಗುವುದು. ರಾಹು ಬಿಂದುವಿನಲ್ಲಿದ್ದರೆ ಅದು ರಾಹು ಗ್ರಸ್ತ ; ಕೇತು ಬಿಂದುವಿನಲ್ಲಿದ್ದರೆ ಅದು ಕೇತುಗ್ರಸ್ತ. ಆಗ ಸೂರ್ಯ, ಭೂಮಿ, ಚಂದ್ರ ಒಂದೇ ರೇಖೆಯಲ್ಲಿ ಬರುವುದು. ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ, ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ ಆ ನೆರಳಿರುವ ಪ್ರದೇಶಕ್ಕಷ್ಟೇ ಸೂರ್ಯಗ್ರಹಣ. ದಟ್ಟ ಕಪ್ಪು ಮೋಡದ ಹಿಂದೆ ಚಂದ್ರ ಅಥವಾ ಸೂರ್ಯನಿದ್ದಾಗ ಏನು ಪರಿಣಾಮ ಆಗುವುದೋ ಅದೇ ಪರಿಣಾಮ ಸ್ವಲ್ಪಕಾಲ ಭೂಮಿಯ ಮೇಲೆ ಆಗುವುದು.
- ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ.
- ಹೋರಾಶಾಸ್ತ್ರದ ಮೂಲ ಗ್ರಂಥವಾದ ವರಾಮಿಹಿರನ ಬೃಹತ್ ಜಾತಕ ಗ್ರಂಥದಲ್ಲಿ ರಾಹು ಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ. ಆದರೆ ನಂತರ ಯಾರೋ ಅವನ್ನು ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ. ಖಗೋಳ ಶಾಸ್ತ್ರ ಅರಿಯದವರು ಅದಕ್ಕೆ ಫಲಗಳನ್ನೂ ಬರೆದರು. ಈಗ ಅವನ್ನು ಗ್ರಹಗಳೆಂದು ತಿಳಿದು ಒಟ್ಟು ೯ ಗ್ರಹಗಳೆಂದು ಫಲಗಳನ್ನೂ ಹೇಳುವರು ; ಸ್ತೋತ್ರ ಮಾಡಿ ಪೂಜೆಯನ್ನೂ ಮಾಡುವರು (ಇಲ್ಲದ ಗ್ರಹಕ್ಕೆ ಪೂಜೆ -ಫಲ.) ಇದು ಹೇಗೆ ಸರಿ? ಇಡೀ ಸಮಾಜ ಸಮೂಹ ಸನ್ನಿಗೆ ಒಳಗಾಗಿದೆ ; ಇದು ವಿಜ್ಞಾನದ ಅಭಿಪ್ರಾಯ.
ದಶಾ ಪದ್ಧತಿ :
[ಬದಲಾಯಿಸಿ]- ದಶಾ ಪದ್ದತಿಯ ವಿಷಯವನ್ನು ತೆಗೆದುಕೊಂಡರೆ ಎಲ್ಲಾ ಕುಂಡಲಿಗಳಿಗೂ ವಿಂಶೋತ್ತರಿ ದಶಾ ಪದ್ದತಿಯನ್ನು ಅನುಸರಿಸಿ ಫಲ ಹೇಳುತ್ತಾರೆ. ಆದರೆ ವರಾಹ ಮಿಹಿರ ಭಟ್ಟರು ಬೃಹಜ್ಜಾತಕದಲ್ಲಿ ಗ್ರಹಗಳ ಬಲಾಬಲಗಳನ್ನು ತಿಳಿದು ಪ್ರತಿ ಜಾತಕಕ್ಕೂ ಪ್ರತ್ಯೇಕ ದಶಾ ವಿಂಗಡಣೆಯನ್ನು ಹೇಳುತ್ತಾರೆ. ಅದು ತುಂಬಾ ಕಷ್ಟದ ಲೆಕ್ಕಾಚಾರ. ವಿಂಶೋತ್ತರಿ ದಶಾ ಪದ್ದತಿಯನ್ನು ಚಂದ್ರ ನಕ್ಷತ್ರದ ನೇಲೆ ಅವಲಂಬಿಸಿ ಹೇಳಲಾಗುವುದು. ಅಯನಾಂಶವನ್ನು ಗಣನೆಗೆ ತೆಗೆದುಕೊಳ್ಳದೆ ಇರುವ ಚಂದ್ರ ನಕ್ಷತ್ರವೇ ವೈಜ್ಞಾನಿಕವಾಗಿ ತಪ್ಪಾದ ಮೇಲೆ, ಅದರ ಆಧಾರದಿಂದ ಹೇಳುವ ದಶಾ ಪದ್ದತಿ ಹೇಗೆ ಸರಿ ಹೋಗಬಹುದು?
- ಇದು ವಿಜ್ಞಾನಿಗಳ ಮತ್ತು ವಿಚಾರವಾದಿಗಳ ಪ್ರಶ್ನೆ. ಅಲ್ಲದೆ ಅನೇಕ ಬಗೆಯ ದಶಾಪದ್ದತಿಗಳಿವೆ. ಜ್ಯೋತಿರ್ಗನ್ನಡಿ ಯನ್ನು ಬರೆದ ರಮಾಕಾಂತರವರು, ಸೂರ್ಯ ನಕ್ಷತ್ರದ ಮೇಲೆ ಕುಂಡಲಿಯ ಲಕ್ಷಣಕ್ಕೆ ಹೊಂದುವ ಬೇರೆಬೇರೆ ದಶಾಪದ್ದತಿಯನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ.
ದಶಾ ಪದ್ಧತಿಯ ವಿವರ :
[ಬದಲಾಯಿಸಿ]- ಹೆಚ್ಚಾಗಿ ಎಲ್ಲರೂ ವಿಂಶೋತ್ತರಿ ದಶಾಪದ್ಧತಿಯನ್ನು ಉಪಯೋಗಿಸುತ್ತಾರೆ. ಅದರಲ್ಲಿ ವ್ಯಕ್ತಿಯ ಜನನ ಕಾಲದಲ್ಲಿ ಚಂದ್ರನು ಇರುವ ನಕ್ಷತ್ರಕ್ಕೆ ಅನುಗುಣವಾಗಿ, ಆ ನಕ್ಷತ್ರದ ಗತಿಸಿದ ಭಾಗವನ್ನು ಬಿಟ್ಟು ಉಳಿದ ಭಾಗಕ್ಕೆ ಗ್ರಹದ ದಶಾಕಾಲದ ಪ್ರಮಾಣಕ್ಕೆ ಸರಿಯಾಗಿ ದಶೆಯನ್ನು ಗಣಿಸಲಾಗುವುದು.
- ೧.ರವಿದಶೆ -೬ವರ್ಷ, ಕೃ,ಉ,ಉಷಾ, ;
- ೨.ಚಂದ್ರ -೧೦ವ, ರೋ, ಹಸ್ತ, ಶ್ರ, ;
- ೩.ಕುಜ ೭ ವ, ಮೃ, ಚಿ, ಧ, ;
- ೪.ರಾಹು ೧೮ ವ, ಆರಿ, ಸ್ವಾ, ಶತ, ;
- ೫.ಗುರು,೧೬ವ, ಪುನ, ವಿ, ಪೂಭಾ,;
- ೬.ಶನಿ, ಪುಷ್ಯ, ಅನೂ, ಉಭಾ, ;
- ೭.ಬುಧ೧೭ ವರ್ಷ, ಆಶ್ಲೇ, ಜ್ಯೇ, ರೇ, ;
- ೮.ಕೇತು ೭ ವರ್ಷ, ಅಶ್ವಿ, ಮಖ, ಮೂ, ;
- ೯.ಶುಕ್ರ ೨೦, ಭ, ಹು, ಪೂಷಾ.
- ಆಯಾ ದಶೆಗೆ ಸಂಬಂಧಪಟ್ಟ ನಕ್ಷತ್ರಗಳ ವೊದಲ ೧ ಅಥವಾ ೨ ಅಕ್ಷರಗಳನ್ನು ಕೊಟ್ಟಿದೆ. ಉದಾಹರಣೆಗೆ , ಚಂದ್ರನು ಕೃತ್ತಿಕಾ ನಕ್ಷತ್ರದಲ್ಲಿ ಇದ್ದಾಗ ಹುಟ್ಟಿದ ವ್ಯಕ್ತಿಗೆ -ರವಿದೆಸೆ, ಆ ನಕ್ಷತ್ರದಲ್ಲಿ ೨ ಅಂಶ(ಡಿಗ್ರಿ)ಯಷ್ಟು ಗತಿಸಿದ್ದರೆ ೧೩,೧/೩ ಅಂಶಕ್ಕೆ ೬ ವರ್ಷವಾದರೆ ೨ಅಂಶಕಳೆದು ೧೧,೧/೩ಅಂಶಕ್ಕೆ ಪ್ರಮಾಣ ಅನುಪಾತದಲ್ಲಿ ಬರುವ ದೆಸೆ(ರವಿ ಗ್ರಹದ ಪ್ರಭಾವ) ಹುಟ್ಟಿದಾರಭ್ಯ ನಡೆಯುತ್ತದೆ. ನಂತರ ಉಳಿದ ಗ್ರಹಗಳ ದೆಸೆ ನಡೆಯುತ್ತದೆ. ಈ ಎಲ್ಲಾ ಗ್ರಹಗಳ ಪ್ರಮಾಣ -ಅನಪಾತ ಕ್ಕೆ ಅನುಗುಣವಾಗಿ ಉಪದೆಸೆಗಳು ನಡೆಯುತ್ತವೆ. ಇದರ ಪಟ್ಟಿ ಎಲ್ಲಾ ಪಂಚಾಂಗಗಳಲ್ಲಿ ಕೊಟ್ಟರುತ್ತದೆ.
ವಿಜ್ಞಾನ ಮತ್ತು ಫಲ ಜ್ಯೋತಿಷ ಶಾಸ್ತ್ರ:
[ಬದಲಾಯಿಸಿ]- ಈಗ ಅನುಸರಿಸುತ್ತಿರುವ ದಶಾ ಪದ್ಧತಿಗೂ ಗ್ರಹಗಳೇ ಅಲ್ಲದ ಊಹೆಯ ಬಿಂದು ಮಾತ್ರವಾದ ಅಸ್ಥಿತ್ವವಿಲ್ಲದ ರಾಹು ಕೇತುಗಳಿಗೆ ಮಾನವನ ಜೀವನದ ಆಗುಹೋಗುಗಳಿಗೆ ಹೊಂದಿಸಿ ಭವಿಷ್ಯ ಹೇಳುವ ಕ್ರಮವನ್ನು ವಿಜ್ಞಾನ ಮತ್ತು ವಿಚಾರವಾದ ಪ್ರಶ್ನಿಸುತ್ತದೆ.
ಭವಿಷ್ಯ ಹೇಳುವ ದಶಾ ಪದ್ಧತಿ ಸಕಾರಣವಲ್ಲ :
[ಬದಲಾಯಿಸಿ]- ಇದರಲ್ಲಿ ಅತ್ಯಂತ ಪ್ರಭಾವ ಬೀರುವ ಸೂರ್ಯನಿಗೆ ೬ ವರ್ಷ ದೆಸೆ ಇದ್ದರೆ, ಅತ್ಯಂತ ಚಿಕ್ಕದಾದ ಭೂಮಿಯ ಮೇಲೆ ಅತ್ಯಂತ ಕಡಿಮೆ ಪ್ರಭಾವ ಬೀರುವ ಬುಧನ ದೆಸೆ ೧೭ವರ್ಷ. ದೂರದ ಶನಿ ಅನಿಲ ಗ್ರಹಕ್ಕೆ ೧೭ವರ್ಷ. ಹತ್ತಿರದ ಚಂದ್ರನ ದೆಸೆ ೧೦ ವರ್ಷ.
- ಅಸ್ತಿತ್ವವೇ ಇಲ್ಲದ ಭೂಮಿಯ ಮೇಲೆ ಏನೂ ಪ್ರಭಾವ ಬೀರದ ರಾಹುವಿನ ದೆಸೆ ೧೮ ವರ್ಷ; ಅದೇ ಬಗೆಯ ಕೇತುವಿನ ದೆಸೆ ೭ವರ್ಷ.
- ಒಟ್ಟು ಮಾನವನ ಜೀವಿತ (ಆಯುಷ್ಯ) ೧೨೦ ವರ್ಷ ಹಿಡಿದು ಅದರ ಪ್ರಭಾವವನ್ನು ಈ ಮೇಲಿನಂತೆ ಹಂಚಲಾಗಿದೆ. ಕುಂಡಲಿಯ ಪ್ರಕಾರ ಭವಿಷ್ಯ ಹೇಳಲು ಈ ದಶಾ ಮತ್ತು ಭುಕ್ತಿ ಬಹಳ ಮುಖ್ಯ ಉಪಯೋಗ.
- ಆದರೆ ವೈಜ್ಞಾನಿಕವಾಗಿ ಇವುಗಳಿಗೆ ಕಾರಣ ಸಿಗದು. ಹಾಗಾಗಿ ವಿಜ್ಞಾನವೂ, ವಿಚಾರವಾದಿಗಳೂ ಕಾರಣವಿಲ್ಲದ ನಿಯಮಗಳನ್ನು ಒಪ್ಪುವುದಿಲ್ಲ. ಹಾಗಾಗಿ ಜ್ಯೋತಿಷ ಶಾಸ್ತ್ರವು ಕೇವಲ ನಂಬುಗೆಯ ಮೇಲೆ ನಿಂತಿದೆ. ಎನ್ನುವುದು ವಿಚಾರವಾದಿಗಳ ಅಭಿಪ್ರಾಯ.
ಸಾಯನ-ನಿರಯನ ಪದ್ದತಿ ಸಂದಿಗ್ಧತೆ
[ಬದಲಾಯಿಸಿ]ಈಗ ಅನುಸರಿಸುತ್ತಿರುವ ನಿರಯನ ಪದ್ದತಿಯಲ್ಲಿ ಜನ್ಮ ನಕ್ಷತ್ರ, ಸೂರ್ಯ ನಕ್ಷತ್ರ, ಲಗ್ನಗಳೇ ಕೆಟ್ಟು ಹೋದ ಮೇಲೆ, ಅದನ್ನು ಅನುಸರಿಸಿ ಹೇಳಿದ ಭವಿಷ್ಯ ಸರಿಹೋಗುವುದು ಹೇಗೆ? ಎಂಬುದು ಜ್ಯೋತಿಷಿಗಳಿಗೂ ಬಗೆಹರಿಯದ ಪ್ರಶ್ನೆಯಾಗಿದೆ. ಅದು ವಿಜ್ಞಾನದ ಮುಖ್ಯ ಪ್ರಶ್ನೆಯಾಗಿದೆ. ಸಾಯನ ಪದ್ದತಿಯಲ್ಲಿ ಕುಂಡಲಿಯನ್ನು ರಚಿಸುವುದು ಸ್ವಲ್ಪ ಕಷ್ಟ. ಅಲ್ಲದೆ ಕೆಲವು ಜ್ಯೋತಿಷಿಗಳು ತಮ್ಮ ಅನುಭವದ ಪ್ರಕಾರ ವ್ಯಕ್ತಿಯ ಜೀವನಕ್ಕೆ ಅದು ಹೊಂದುವುದಿಲ್ಲವೆಂದೂ ಹೇಳುತ್ತಾರೆ. ಆದರೆ ಜ್ಯೋತಿಷ್ಯ ವಿದ್ವಾಂಸರಾದ ಬಿ.ವಿ. ರಾಮನ್ ಅವರು ಸಾಯನ ಪದ್ದತಿಯೇ ಸರಿ ಎನ್ನುತ್ತಾರೆ. ವಿಜ್ಞಾನ ಎರಡನ್ನೂ ಒಪ್ಪದು. ಅದು ದೂರದ ನಿರ್ಜೀವ ಗ್ರಹಗಳು ಸ್ವತಃ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನುಹೊಂದಿದ್ದು ಮಾನವನ ಜೀವನವನ್ನು ನಿಯಂತ್ರಿಸುತ್ತದೆ ಎಂಬುದಕ್ಕೆ ಆಧಾರವನ್ನು ಕೇಳುತ್ತದೆ.
ನಕ್ಷತ್ರಗಳು ಮತ್ತು ಅದರ ಪ್ರಭಾವ :
[ಬದಲಾಯಿಸಿ]- ಪ್ರತಿ ನಕ್ಷತ್ರಗಳಿಗೂ ಗುಣ, ಲಕ್ಷಣ, ಗ್ರಹಗಳ ಅಧಿಪತ್ಯ ವಿದ್ದು ಅವುಗಳು ಕೂಡ ಗ್ರಹಗಳಂತೆ ಪ್ರಭಾವ ಬೀರುತ್ತವೆ. ಅವುಗಳಲ್ಲೂ ಒಳ್ಳೆಯ ಕೆಟ್ಟ ನಕ್ಷತ್ರಗಳಿವೆ ಎಂದು ಭಾವಿಸಲಾಗಿವೆ. ವಾಸ್ತವವಾಗಿ ಈ ಹಿಂದೆ ಶಾಸ್ತ್ರ ಬರೆಯುವಾಗ ಇದ್ದ ಆಕಾಶದಲ್ಲಿ ಇರುವ ಜಾಗದಲ್ಲಿ ಆ ನಕ್ಷತ್ರ ಈಗ ಇಲ್ಲ. ಅಯನಾಂಶ ಕಾರಣ ಸುಮಾರು ೨೪ ಡಿಗ್ರಿಗಳಷ್ಟು ಮುಂದೆ ಇದೆ. ಆ ಸ್ಥಳದಲ್ಲಿ ಬೇರೆ ನಕ್ಷತ್ರ ಇರುತ್ತದೆ. ಆದರೆ ಜ್ಯೋತಿಷಿಗಳು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
- ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇಲ್ಲ. ಅಥವಾ ಪ್ರಭಾವ ಬೀರುವಷ್ಟು ಹತಿರದಲ್ಲೂ ಇಲ್ಲ. ಅನೇಕ ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅನೇಕ ಕೋಟಿ ವರ್ಷಗಳೇ ಬೇಕು. ಅವು ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ಅವು (ನಕ್ಷತ್ರಗಳು) ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು. ಈಗ ನೂರೈವತ್ತು ವರ್ಷಗಳ ಹಿಂದೆ ಈ ನಕ್ಷತ್ರಗಳ ವಿವರ, ದೂರ, ಪರಿಣಾಮಗಳನ್ನು ತಿಳಿಯುವ ಸಾಧನಗಳಿರಲಿಲ್ಲ. ಅವನ್ನೆಲ್ಲಾ ದೇವತೆಗಳು ಅಥವಾ ದೇವಕನ್ಯೆಯರೆಂದು ಹಿಂದಿನ ಶಾಸ್ತ್ರಕಾರರು ಭಾವಿಸಿದ್ದರು.
- ಉದಾಹರಣೆಗೆ ಈ ಜ್ಯೋತಿಷ್ಯಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರ ಗಳು ಬ್ರಹ್ಮನ ಮಗ ದಕ್ಷನ ಹೆಣ್ಣು ಮಕ್ಕಳು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ.) ಆದರೆ ಅವರಲ್ಲಿ ಕೆಲವು ನಕ್ಷತ್ರಗಳನ್ನು ಪುಲ್ಲಿಂಗದಲ್ಲಿ ಕರೆಯುವ ರೂಢಿ ಇದೆ!
- ಆಕಾಶದಲ್ಲಿ ಈ ನಕ್ಷತ್ರಗಳ ಜೊತೆ ಸಾವಿರಾರು ಇತರೆ ಹೆಚ್ಚಿನ ಶಕ್ತಿ ಹೊಂದಿದ ನಕ್ಷತ್ರಗಳೂ ಇವೆ. ಆದರೆ ಅವುಗಳನ್ನು ಭವಿಷ್ಯ ಹೇಳುವಾಗ ಗಣನೆಗೆ ತೆಗೆದುಕೊಳ್ಳುವ ಶಾಸ್ತ್ರವಿಲ್ಲ. ಮಾನವನ ಜೀವಿತದ ಮೇಲೆ ಏನೂ ಪರಿಣಾಮ ಬೀರದ ಈ ಅತಿ ದೂರದ ನಕ್ಷತ್ರಗಳಲ್ಲಿ ಕೆಲವನ್ನು ಅತಿಕ್ರೂರ ನಕ್ಷತ್ರವೆಂದು ಕರೆದು ಆ ನಕ್ಷತ್ರದಲ್ಲಿ ಹುಟ್ಟಿದವರು ಅಶುಭರೆಂದು ಹೆಸರಿಟ್ಟು ಅವರ ಜೀವಿತವನ್ನು ನರಕವನ್ನಾಗಿ ಮಾಡುವ ಶಾಸ್ತ್ರ ನಂಬುಗೆ ಇದೆ. (ಚಂದ್ರನ ಜೊತೆ ಇರುವ ನಕ್ಷತ್ರ, ಅದು ನಿಜವಾಗಿ ಚಂದ್ರನಿಂದ ಕೋಟಿ ಕೋಟಿ ಮೈಲಿ ದೂರದಲ್ಲಿದೆ. ಆಕಾಶದಲ್ಲಿ ಚಂದ್ರನ ಜೊತೆ ಇದ್ದಂತೆ ಭ್ರಮೆಯಾಗುವುದು- ಇದು ಅನೇಕ ಜ್ಯೋತಿಷಿಗಳಿಗೆ ತಿಳಿದಿಲ್ಲ. ಹಿಂದಿನ ಶಾಸ್ತ್ರಕಾರರಿಗೆ ನಕ್ಷತ್ರಗಳು ಬಹಳ ದೂರವಿರುವ ವಿಷಯ ತಿಳಿದಿರುವ ಸಂಭವವಿಲ್ಲ. ) ಚಂದ್ರನಿಗೂ ಈ ನಕ್ಷತ್ರಗಳಿಗೂ ಯಾವ ಸಂಬಂಧವೂ ಇಲ್ಲ. ಚಂದ್ರನು ಭೂಮಿಗೆ ಹತ್ತಿರವಿರುವ ಉಪಗ್ರಹ. ಆದರೆ ನಕ್ಷ ತ್ರಗಳು ನಮ್ಮ ಬ್ರಹ್ಮಾಂಡದ ಅಥವಾ ಅದರ ಹೊರಗಿರುವ ಸೂರ್ಯರು
- ಇದನ್ನು- ಈ ನಕ್ಷತ್ರಗಳು ಚಂದ್ರನ ಜೊತೆ ಇದ್ದಂತೆ ಕಾಣುವುದರಿಂದ, ನಕ್ಷತ್ರಗಳು ವ್ಯಕ್ತಿಗಳನ್ನು ಒಳ್ಳೆಯವರನ್ನಾಗಿ ಅಥವಾ ಕೆಟ್ಟವರನ್ನಾಗಿ ಮಾಡುತ್ತವೆಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ. ನಕ್ಷತ್ರಗಳು ವ್ಯಕ್ತಿಗಳನ್ನು ಒಳ್ಳೆಯವರನ್ನಾಗಿ ಅಥವಾ ಕೆಟ್ಟವರನ್ನಾಗಿ ಮಾಡುವ ವಿಚಾರವನ್ನು, ವಿಜ್ಞಾನ ಸಕಾರಣವಾಗಿ ಪ್ರಶ್ನೆ ಮಾಡುತ್ತದೆ.
ಜ್ಯೋತಿಷ ಶಾಸ್ತ್ರದ ಮೇಲೆ ಪ್ರಯೋಗ :
[ಬದಲಾಯಿಸಿ]ವಿಜ್ಞಾನಿಗಳೂ , ವಿಚಾರವಾದಿಗಳೂ ಕೆಲವು ಜ್ಯೋತಿಷ್ಯ ವಿದ್ವಾಂಸರ ಸಭೆ ಸೇರಿಸಿ ಒಂದೇ ವ್ಯಕ್ತಿಯ ಹುಟ್ಟಿದ ದಿನಾಂಕ- ಕುಂಡಲಿಗಳನ್ನು ಅವರಿಗೆ ಕೊಟ್ಟು ಅವರ ಜೀವನದ ಮುಖ್ಯ ಘಟನೆಗಳನ್ನು ಗುರುತಿಸಲು ಸೂಚಿಸಿದಾಗ ಬಂದ ಫಲಿತಾಂಶ ನಿರಾಶಾದಾಯಕವಾಗಿತ್ತು ; ಒಬ್ಬೊಬ್ಬರದು ಒಂದೊಂದು ರೀತಿಯದಾಗಿತ್ತು.
- ಖಗೋಳ ವಿಜ್ಞಾನಿ ಜಯಂತ ನಾರಲೇಕರ್ ಅವರು ಪ್ರಸಿದ್ಧ ಜೋತಿಷಿಗಳನ್ನು ಒಂದೆಡೆ ಸೇರಿಸಿ ,ಅವರಿಗೆ ಕೆಲವು ಪ್ರತಿಭಾವಂತ ಹಾಗೂ ಮಾನಸಿಕ ವಿಕಲ ಮಕ್ಕಳ ಜಾತಗಳನ್ನು ಒಟ್ಟಾಗಿ ಕೊಟ್ಟು ಅವನ್ನು ಪ್ರತ್ಯೇಕ ಗುರತಿಸಲು ಹೇಳಿದಾಗ ಅವರು ಸಂಪೂರ್ಣ ವಿಫಲರಾದರು.
...The fact that renowned astronomers and scientists have called astrology complete nonsense. One of India’s greatest astronomers Jayant V Narlikar had once pointed out at the results of an experiment where well-known astrologers were given the horoscopes of brilliant students and those with serious mental handicaps. And nobody had been able to differentiate between the two. (ಅಧಾರ: Astrologer predicts Smriti Irani will be India's president in 5 yrs: When fortune favours the foolish. ...:[[೧]]) |
ವೈಜ್ಞಾನಿಕ ವಿಚಾರ :
[ಬದಲಾಯಿಸಿ]- ವಿಚಾರವಾದಿಗಳೂ, ವಿಜ್ಞಾನಿಗಳೂ ಸೂರ್ಯ ಚಂದ್ರರನ್ನು ಬಿಟ್ಟು ಉಳಿದ ಗ್ರಹಗಳ ಗುರುತ್ವಾ ಕರ್ಷಣ ಶಕ್ತಿಯು ಭೂಮಿಯ ಮೇಲೂ ಅದರಲ್ಲಿರುವ ಜೀವಿಗಳ ಮೇಲೂ ಮಾಡುವ ಪರಿಣಾಮ ಲೆಕ್ಕಕ್ಕೆ ಬಾರದಷ್ಟು ಅಲ್ಪ ಪ್ರಮಾಣದ್ದು ; ಆದ್ದರಿಂದ ಆ ಗ್ರಹಗಳು ಮಾನವರ (ಪ್ರಾಣಿಗಳ) ಮೇಲೆ ಪರಿಣಾಮ ಬೀರಲಾರದೆಂದು ಅಭಿಪ್ರಾಯ ಪಡುತ್ತಾರೆ.
- ಅಲ್ಲದೆ ಪ್ರತಿ ರಾಶಿ (ಮೇಷ ಇತರೆ) ಎಂದರೆ ಪ್ರತಿ ೩೦ಡಿಗ್ರಿ ಆಕಾಶ ಪ್ರದೇಶಕ್ಕೆ ಮಾನವ ಜೀವನದ ಮೇಲೆ ಬೇರೆ ಬೇರೆ ರೀತಿ ಪ್ರಭಾವ ಬೀರುವ ಗುಣವನ್ನು ಹೇಳಿರುವುದಕ್ಕೆ ಕಾರಣವನ್ನು ವಿಜ್ಞಾನ ಕೇಳುತ್ತದೆ. ಹಾಗೆಯೇ ಪ್ರತಿ ನಿರ್ಜೀವ ಗ್ರಹಗಳಿಗೆ ಮಾನವನಿಗೆ ಒಳಿತು ಮಾಡುವ ಅಥವಾ ಕೆಡುಕು ಮಾಡುವ ಗುಣಗಳನ್ನೂ, ಮತ್ತು ಆ ಗ್ರಹಗಳಿಗೆ ಮತ್ತೊಂದು ಗ್ರಹ ಅಥವಾ ರಾಶಿ ಸ್ಥಾನದ ಮೇಲೆ ಬೇರೆ ಬೇರೆ ಕೋನಗಳಲ್ಲಿ ಅಂತರ ದೃಷ್ಟಿ ಬೀರುವುದರಿಂದ ಅದೇ ಫಲ ಮಾನವನ ಮೇಲೆ ಆಗಲು ಕಾರಣವನ್ನು ಹುಡುಕುತ್ತದೆ.
- ಆದರೆ ಜ್ಯೋತಿಷ್ಯ ಒಂದು ರೀತಿಯ ವಿಧಿಶಾಸ್ತ್ರ. ಅಲ್ಲಿ ಎಲ್ಲ ನಿಯಮಗಳಿಗೂ ಕಾರಣ ಕೊಡುವ ಅಗತ್ಯವಿಲ್ಲ. ಹಿಂದಿನ ಋಷಿಗಳೂ ವಿದ್ವಾಂಸರೂ ಬರೆದಿಟ್ಟಿರುವ ನಿಯಮಗಳನ್ನು ಪ್ರಶ್ನಿಸುವಂತಿಲ್ಲ. ಶಾಸ್ತ್ರದಲ್ಲಿ ಹೇಳಿದ ಅದರ ಪರಿಣಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮಾತ್ರ ವಿದ್ವಾಂಸನ ಕೆಲಸ.
- ಹಾಗಾಗಿ ಪ್ರಶ್ನಿಸದೆ ಒಪ್ಪಿಕೊಳ್ಳ ಬೇಕೆಂಬ ಫಲಜ್ಯೋತಿಷ ವನ್ನು, ವಿಜ್ಞಾನ ವೈಜ್ಞಾನಿಕವೆಂದು ಒಪ್ಪಲಾರದು.
ಫಲ ಜ್ಯೋತಿಷದಲ್ಲಿ ಕೆಲವು ಸಂದಿಗ್ಧತೆ
[ಬದಲಾಯಿಸಿ]ಫಲ ಜ್ಯೋತಿಷ ದ ಶಾಸ್ತ್ರವನ್ನು ಅಥವಾ ಹೋರಾಶಾಸ್ತ್ರವನ್ನು ರಚಿಸಿದ ಹಿಂದಿನ ಋಷಿಗಳು, ವರಾಹ ಮಿಹಿರ ಭಟ್ಟರು, ಗ್ರಹ, ನಕ್ಷತ್ರ, ರಾಶಿಗಳ ಗುಣ, ಬಲಾಬಲ, ಗ್ರಹಗಳ ಸ್ಥಾನ, ದೃಷ್ಟಿ -ಬಲ, ಯೋಗ, ವೊದಲಾದವುಗಳನ್ನು ಅಸಾಧಾರಣ ಜಾಣ್ಮೆಯಿಂದ ರಚಿಸಿದ್ದಾರೆ. ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಕಷ್ಟ, ಸಾಧ್ಯ, ವಿಶೇಷ ಮೇಧಾವಿಗಳು ತಿಳಿದುಕೊಂಡರೂ ನಿಖರವಾಗಿ ಫಲಗಳನ್ನು ನಿರ್ಧರಿಸಲು ಆಗದಷ್ಟು ಜಟಿಲತೆ ಸಂದಿಗ್ಧತೆ ಇದೆ. ಕೆಲವು ಗ್ರಹಗಳಿಗೆ ಎರಡೆರಡು ರಾಶಿಗಳ ಅಧಿಪತ್ಯಗಳನ್ನೂ, ಹಲವು ಬಗೆಯ ದೃಷ್ಟಿಗಳನ್ನೂ ,ವಿಶೇಷ ಜಾಣ್ಮೆಯಿಂದ ಕೊಡಲಾಗಿದೆ, ಅದರಿಂದ ಏಕಕಾಲದಲ್ಲಿ ಒಂದು ಗ್ರಹವು ಶುಭಕಾರಕವೂ, ಅಶುಭಕಾರಕವೂ ಆಗಿರುತ್ತದೆ. ಬೇರೆ ಬೇರೆ ಜ್ಯೋತಿಷಿಗಳು ಅವರವರ ದೃಷ್ಟಿ ಕೋನಕ್ಕೆ ತಕ್ಕಂತೆ ಫಲಗಳನ್ನು ಹೇಳಬಹುದು. ನಿಖರತೆ ಅಸಾಧ್ಯ. ಈ ಶಾಸ್ತ್ರ ರಚನೆಯ ಕೌಶಲ್ಯವೇ ಹಾಗಿದೆ. ಆದ್ದರಿಂದ ಫಲಜ್ಯೋತಿಷ್ಯದ ಬಗ್ಗೆ ಪಂಚಂ ಭವತಿ, ಪಂಚಂ ನ ಭವತಿ ಎಂದು ಹೇಳಿದ್ದಾರೆ. ವಿಧಾತನನ್ನು ಕುರಿತು, ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ. ಎಂದರೆ ಬ್ರಹ್ಮ ದೇವನಿಗೆ,ನಿನ್ನ ವಿನಾ ಫಲ ತಾರತಮ್ಯವನ್ನು ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ, ಎಂದು ಅರ್ಥ. ಯೋಗ, ಸಿದ್ಧಿ, ಜ್ಞಾನ ಸಾಧನೆಗಳಿಂದ ಭವಿಷ್ಯ ಹೇಳಬಹುದೆಂದರೆ, ಅವರಿಗೆ ಗ್ರಹ ಕುಂಡಲಿಯ ಅಗತ್ಯವೂ ಇಲ್ಲ. ಆದ್ದರಿಂದ ಫಲಜ್ಯೋತಿಷವನ್ನು ನಂಬುವುದಕ್ಕಿಂತ ದಾಸವರೇಣ್ಯರಾದ ಪುರಂದರದಾಸರು 'ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ', ಎಂದು ಪರಮಾತ್ಮನ ಶರಣು ಹೋಗುವುದೇ ಕ್ಷೇಮವೆಂದು ಹೇಳಿದ್ದಾರೆ. ಆದರೆ ಜನರಿಗೆ ಭವಿಷ್ಯದ ಬಗ್ಗೆ ಕುತೂಹಲ, ಭಯ ಇರುವವರೆಗೂ ಕಷ್ಟಗಳಿಗೆ ಸುಲಭ ಪರಿಹಾರ ಸಿಗುವುದೆಂಬ ಭಾವನೆ, ಮನಸ್ಸಿಗೆ ಹೇಗೋ ನೆಮ್ಮದಿ ಪಡೆವ ಮನೋಭಾವ ಇರುವವರೆಗೂ ಫಲಜ್ಯೋತಿಷ್ಯಕ್ಕೆ, ಜ್ಯೋತಿಷಿಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ.[೧][೨]
- (ಟಿಪ್ಪಣಿ : ಒಂದು ರೀತಿಯಲ್ಲಿ ಫಲಜ್ಯೋತಿಷ ಶಾಸ್ತ್ರವು ಜೀವನದಲ್ಲಿ ಪೂರ್ಣ ಹತಾಶೆ ಹೊಂದಿದ ವ್ಯಕ್ತಿಗೆ, ಮುಂದೆ ಒಳ್ಳೆ ಭವಿಷ್ಯ ಕಾದಿದೆ, ಎಂದು ಸ್ವಾಂತನ ಹೇಳಿ ಪ್ರಚ್ಛನ್ನ (ಸೂಡೋ) ಮಾನಸಿಕ ಚಿಕಿತ್ಸೆಗೆ ಸಹಕಾರಿ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಅದು ಜನರ ಅಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಹಣಗಳಿಸುವ, ಶೋಷಣೆ ಮಾಡುವ ದಂಧೆಯಾಗುವುದನ್ನು ವಿಚಾರವಾದಿಗಳು ವಿರೋಧಿಸುತ್ತಾರೆ.)
ಕೊನೆಯ ಪ್ರಶ್ನೆ
[ಬದಲಾಯಿಸಿ]- ಭವಿಷತ್ತನ್ನು ಮಾನವ ಇಣುಕಿ ನೋಡಲು ಸಾಧ್ಯವೇ ? ಮುಂದೆ ಆಗುವ ಘಟನೆಗಳು ಮೊದಲೇ ನಿರ್ಧರಿತವಾಗಿರುತ್ತವೆಯೇ?
ಆಧಾರ
[ಬದಲಾಯಿಸಿ]- ೧.ವಿಕಿಪೀಡಿಯಾ ಹಿಂದು ಅಸ್ಟ್ರಾ ಲಜಿ (ಇಂಗ್ಲಿಷ್ ಫೈಲ್.ಗಳು)
- ೨. ಬೃಹಜ್ಜಾತಕ : ವರಾಹಮಿಹಿರ
- ೩.ಜ್ಯೋತಿರ್ಗನ್ನಡಿ : ರಮಾಕಾಂತ c (ಕಾಪಿ ರೈಟಿನಿಂದ ಮುಕ್ತವಾಗಿವೆ)ಚರ್ಚೆಪುಟ: ಜ್ಯೋತಿಷ ಮತ್ತು ವಿಜ್ಞಾನ