ವಿಷಯಕ್ಕೆ ಹೋಗು

ಜೋಸೆಫ್ ಲೂಯಿ ಲಗ್ರಾಂಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೋಸೆಫ್ ಲೂಯಿ ಲಗ್ರಾಂಜ್ (1736-1813) ಒಬ್ಬ ಫ್ರೆಂಚ್ ಗಣಿತವಿದ. ಗಣಿತದ ಒಂದು ಪ್ರಮುಖ ವಿಷಯ ಕ್ಯಾಲ್ಕ್ಯುಲಸ್ ಆಫ್ ವೇರಿಯೇಷನ್ಸ್‌ನ ನಿರ್ಮಾಪಕರಲ್ಲೊಬ್ಬ. ಸಮಕಾಲೀನ ಗಣಿತ ಪ್ರಭೃತಿ ಲೆನಾರ್ಡ್ ಆಯ್ಲರ್ (1707-83) ಇನ್ನೊಬ್ಬ ನಿರ್ಮಾಪಕ.

ಈತ ತನ್ನ ಇಪ್ಪತ್ತನೆಯ ವಯಸ್ಸಿಗೆ ಮೊದಲೇ ಇಟಲಿಯ ಟ್ಯೂರಿನ್ ನಗರದ ಆರ್ಟಿಲರಿ ಸ್ಕೂಲ್‌ನಲ್ಲಿ ಗಣಿತ ಪ್ರಾಧ್ಯಾಪಕನಾದ. ಮುಂದೆ ಬರ್ಲಿನ್ ಅಕೆಡಮಿಯಲ್ಲಿ ಆಯ್ಲರನ ಉತ್ತರಾಧಿಕಾರಿಯಾಗಿ ನೇಮಕಗೊಂಡ. 1786 ರಿಂದ ಪ್ಯಾರಿಸ್ ನಗರದಲ್ಲಿದ್ದು ಫ್ರೆಂಚ್ ಕ್ರಾಂತಿಯ ಅನಂತರದ ದಿನಗಳಲ್ಲಿ ಆಗ ತಾನೇ ಸ್ಥಾಪಿತವಾಗಿದ್ದ ಎಕೋಲೇ ನಾರ್ಮಾಲೆ ಮತ್ತು ಎಕೋಲೇ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಬೋಧಿಸಿದ. ಗಣಿತದ ಅತಿ ಮುಖ್ಯ ಅಂಗ ವಿಶ್ಲೇಷಣ ಗಣಿತದ (ಮ್ಯಾಥಮ್ಯಾಟಿಕಲ್ ಅನ್ಯಾಲಿಸಿಸ್) ಬೆಳೆವಣಿಗೆ 19ನೆಯ ಶತಮಾನದ ಪೂರ್ವಾರ್ಧದಲ್ಲಾಯಿತು. ಭದ್ರ ಬುನಾದಿ ಒದಗಿಸಿದ್ದು ಲಗ್ರಾಂಜ್‌ನ ಸಾಧನೆಗಳೇ. ಹೀಗೆ ಈತ ವಿಶ್ಲೇಷಣ ಗಣಿತದ ಪ್ರಮುಖ ಕರ್ತೃಗಳಲ್ಲಿ ಒಬ್ಬ. ಅನ್ವಿತ ಗಣಿತದ ಅಂಗ ವಿಶ್ಲೇಷಣ ಗತಿವಿಜ್ಞಾನ (ಅನಲಿಟಿಕಲ್ ಡೈನಮಿಕ್ಸ್) ಎಂಬ ವಿಷಯದಲ್ಲಿ ಬೇಸಿಕ್ ಇಕ್ವೇಷನ್ಸ್ ಆಫ್ ಮೋಷನ್ಸ್ ಎಂಬವು ಬಲು ಮುಖ್ಯವಾದವು. ಚಲಿಸುವ ವಸ್ತುಗಳ (ಉದಾ. ಗ್ರಹಗಳ) ಸ್ಥಿತಿಗಳನ್ನು ಗುರುತಿಸುವುದಕ್ಕೆ ಬೇಕಾದ ಸಮೀಕರಣಗಳಿವು. ಇವನ್ನು ಚಲನೆಯ ಲಗ್ರಾಂಜಿಯನ್ ಸಮೀಕರಣಗಳು (ಲಗ್ರಾಂಜಿಯನ್ ಇಕ್ವೇಷನ್ಸ್ ಆಫ್ ಮೋಷನ್) ಎಂದು ಕರೆಯುತ್ತಾರೆ.[][][] ‘ಲಗ್ರಾಂಜಿಯನ್ ಗತಿವಿಜ್ಞಾನ’ (Lagrangian dynamics) ಹೆಸರಿನ ಒಂದು ವಿಭಾಗವಿದೆ. ಈತ ಬರೆದ ಗ್ರಂಥಗಳಲ್ಲಿ ಅನಲಿಟಿಕಲ್ ಮೆಕ್ಯಾನಿಕ್ಸ್ ಎಂಬುದು ಪ್ರಮುಖವಾದುದು. ಈ ಗ್ರಂಥದಲ್ಲಿ ಕಲನಶಾಸ್ತ್ರವನ್ನು ಅನ್ವಯಿಸಿ ಯಂತ್ರವಿಜ್ಞಾನವನ್ನು ವ್ಯವಸ್ಥಿತ ರೀತಿಯಲ್ಲಿ ಬೆಳೆಸುತ್ತ ಹೋಗಿದೆ. ಇದರಲ್ಲಿ ಚಿತ್ರಗಳೇ ಇಲ್ಲ. ಈ ಪುಸ್ತಕದಲ್ಲಿ ಎಲ್ಲ ವಿಷಯಗಳನ್ನೂ ಸಮೀಕರಣಗಳ ಮೂಲಕವೇ ವಿಶ್ಲೇಷಿಸಲಾಗಿದೆ.

ಈತ 1813ರಲ್ಲಿ ನಿಧನನಾದ.

ಉಲ್ಲೇಖಗಳು

[ಬದಲಾಯಿಸಿ]
  1. Hand & Finch 1998, p. 60–61
  2. Hand & Finch 1998, p. 19
  3. Penrose 2007


ಹೊರಗಿನ ಕೊಂಡಿಗಳು

[ಬದಲಾಯಿಸಿ]
"Œuvres De Lagrange," volume III (1869)
"Œuvres De Lagrange," volume III (1869)