ವಿಷಯಕ್ಕೆ ಹೋಗು

ಜಸ್ಟಿನಿಯನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಸ್ಟಿನಿಯನ್ I: 483-565. ಜಸ್ಟಿನಿಯನ್ ಮಹಾಶಯನೆಂದು ಈತ ಪ್ರಸಿದ್ಧ.[೧] 527-565ರಲ್ಲಿ ಬೈಜಾಂಟೈನ್ ಸಾಮ್ರಜ್ಯದ ಚಕ್ರವರ್ತಿಯಾಗಿದ್ದನು. 483 ರಲ್ಲಿ ಇಂದಿನ ಸೋಫಿಯ ನಗರದ ಬಳಿಯಲ್ಲಿ ಇಲೀರಿಯನ್ ಬಡರೈತಕುಟುಂಬದಲ್ಲಿ ಜನಿಸಿದ. ಬಾಲ್ಯದಲ್ಲಿ ಕಾನ್‍ಸ್ಟಾಂಟಿನೋಪಲ್ ನಗರ ಸೇರಿ ಒಳ್ಳೆಯ ಶಿಕ್ಷಣ ಪಡೆದ. ಅಲ್ಲಿ ಅವನ ಚಿಕ್ಕಪ್ಪ ಒಂದನೇಯ ಜಸ್ಟಿನ್ ಉನ್ನತ ದಂಡಾಧಿಕಾರಿಯಾಗಿದ್ದ. 518ರಲ್ಲಿ ಜಸ್ಟಿನನಿಗೆ ಸಾಮ್ರಾಟ ಪದವಿ ದೊರೆಯಿತು. ಅವನಿಗೆ ಮಕ್ಕಳಿರಲಿಲ್ಲವಾದ್ದರಿಂದ ಜಸ್ಟಿನಿಯನನ್ನು ದತ್ತುವಾಗಿ ಸ್ವೀಕರಿಸಿದ. ಜಸ್ಟಿನನ ಎಂಟು ವರ್ಷಗಳ ಆಳ್ವಿಕೆಯಲ್ಲಿ ಜಸ್ಟಿನಿಯನ್ ಹೆಚ್ಚು ಮಹತ್ವ ಮತ್ತು ಜವಾಬ್ದಾರವಹಿಸಿ ಪ್ರಸಿದ್ಧಿಗೆ ಬಂದ. ಜಸ್ಟಿನಿಯನ್ ತೀಯೊಡೋರಳನ್ನು ವಿವಾಹವಾದ. ಜಸ್ಟಿನ್ ಅವನಿಗೆ ೫೨೫ರಲ್ಲಿ ಸೀಸರ್ ಪದವಿ ಕೊಟ್ಟನಲ್ಲದೆ ತನ್ನ ಕೊನೆಗಾಲದಲ್ಲಿ ಸಹಸಾರ್ವಭೌಮನನ್ನಾಗಿ ನೇಮಿಸಿಕೊಂಡ. ತೀಯೊಡೋರಳಿಗೆ ಆಗಸ್ಟ ಪದವಿ ನೀಡಲಾಯಿತು. 527ರ ಆಗಸ್ಟ್ 1ರಂದು ವೃದ್ಧ ಜಸ್ಟಿನ್ ಮರಣಹೊಂದಿದಾಗ ಜಸ್ಟಿನಿಯನ್ ಕಾನ್‍ಸ್ಟಾಂಟಿನೋಪಲ್‍ನಲ್ಲಿ ಸಿಂಹಾಸನವನ್ನೇರಿದ.[೨]

ಆಳ್ವಿಕೆ[ಬದಲಾಯಿಸಿ]

ರೋಮನ್ ಸಾಮ್ರಾಜ್ಯದ ಗತವೈಭವವನ್ನು ಮತ್ತೆ ಸ್ಥಾಪಿಸುವುದೂ ಕ್ಯಾತೊಲಿಕ್ ಮತದ ಪ್ರಭಾವವನ್ನು ವಿಸ್ತರಿಸುವುದೂ ಚರ್ಚಿನ ಆಡಳಿತವರ್ಗವನ್ನು ಸುಧಾರಿಸಿ ಒಗ್ಗಟ್ಟನ್ನು ಮೂಡಿಸುವುದೂ ಅವನ ಮುಖ್ಯ ಧ್ಯೇಯಗಳಾಗಿದ್ದವು. ಈ ಧ್ಯೇಯಗಳ ಸಾಧನೆಗಾಗಿ ತನ್ನ ಜೀವಮಾನವಿಡೀ ಕಾರ್ಯೋನ್ಮುಖನಾಗಿದ್ದ. ಸಾಮ್ರಾಜ್ಯದ ಕೀರ್ತಿಯನ್ನು ಎತ್ತಿ ಹಿಡಿಯಲೋಸುಗ ಅವನು ಅನೇಕ ಯುದ್ಧಗಳಲ್ಲಿ ತೊಡಗಬೇಕಾಯಿತು. ಅಂತೆಯೇ ಸಾಮ್ರಾಜ್ಯದ ಮೇಲ್ಮೆಗಾಗಿ ಅನೇಕ ಸುಧಾರಣೆಗಳನ್ನು ಆಚರಣೆಗೆ ತಂದ. ಬೈಜಾಂಟೈನ್ ಸಾಮ್ರಾಜ್ಯದ ಗಡಿಗಳು ಪರ್ಷಿಯ ಸಾಮ್ರಾಜ್ಯದವರೆಗೆ ವಿಸ್ತರಿಸಿದ್ದರಿಂದಲೂ ತನ್ನ ಸಾಮ್ರಾಜ್ಯದ ಗಡಿಗಳನ್ನು ಪರ್ಷಿಯ ಆಕ್ರಮಣದಿಂದ ರಕ್ಷಿಸಲೂ ಅವನು ನಿರಂತರವಾಗಿ ಯುದ್ಧ ಮಾಡುತ್ತಿರಬೇಕಾಯಿತು. ಜಸ್ಟಿನಿಯನ್ I ಸಿಂಹಾಸನಕ್ಕೆ ಬರುವ ವೇಳೆಗಾಗಲೇ ಪರ್ಷಿಯದೊಡನೆ ಯುದ್ಧ ನಡೆಯುತ್ತಿತ್ತು.[೩] ಯುದ್ಧದಲ್ಲಿ ಜಸ್ಟಿನಿಯನನ ಪ್ರಸಿದ್ಧ ಸೇನಾನಿ ಬೆಲಿಸಾರಿಯಸ್ ವಿಶೇಷ ಪರಾಕ್ರಮದಿಂದ ಹೋರಾಡಿ 531ರಲ್ಲಿ ವಿಜಯ ಗಳಿಸಿದ. ಆ ವೇಳೆಯಲ್ಲಿ ಪರ್ಷಿಯದ ದೊರೆ ಒಂದನೇಯ ಕ್ಯಾವಾಡ್ ಮರಣ ಹೊಂದಿದ. ಅವನ ಅನಂತರ ಪಟ್ಟಕ್ಕೆ ಬಂದ ಒಂದನೇಯ ಖುಸ್ರುವು ಜಸ್ಟಿನಿಯನನೊಡನೆ ಶಾಂತಿ ಒಪ್ಪಂದ ಮಾಡಿಕೊಂಡ. ಖುಸ್ರು ಪುನಃ 540ರಲ್ಲಿ ಯುದ್ಧ ಘೋಷಿಸಿದ. ಜಸ್ಟಿನಿಯನ ಸೈನ್ಯಗಳು ಇಟಲಿಯಲ್ಲಿ ಕಾರ್ಯಾಚರಣೆಯಲ್ಲಿದ್ದುದರಿಂದ ಖುಸ್ರು ಸಿರಿಯವನ್ನು ಆಕ್ರಮಿಸಿ ಆಂಟಿಯೋಕ್ ನಗರವನ್ನು ಪಾಳುಗೆಡವಿ ಆರ್ಮೀನೀಯವನ್ನು ಮುತ್ತಿದ. ಪರ್ಷಿಯನರ ಆಕ್ರಮಣವನ್ನು ತಡೆಗಟ್ಟಲು ಜಸ್ಟಿನಿಯನ್ ಪುನಃ ತನ್ನ ನುರಿತ ಸೇನಾನಿಯಾದ ಬೆಲಿಸಾರಿಯಸನನ್ನು ಕಳುಹಿಸಿದ. 542ರ ವೇಳೆಗೆ ಜಸ್ಟಿನಿಯನನ ಸೈನ್ಯಗಳು ಖುಸ್ರುವನ್ನು ಸೋಲಿಸಿದವು. ಅನಂತರ ಐದು ವರ್ಷಗಳ ಶಾಂತಿ ಒಪ್ಪಂದವಾಯಿತು. 551 ಮತ್ತು 555ರಲ್ಲಿ ಈ ಒಪ್ಪಂದವನ್ನು ಮುಂದುವರಿಸಲಾಯಿತು. ಪುನಃ ಮತ್ತು ಪರ್ಷಿಯ ಸಾಮ್ರಾಜ್ಯಗಳಿಗೆ ಯುದ್ಧ ನಡೆಯಿತು. 560ರ ಸುಮಾರಿನಲ್ಲಿ 50 ವರ್ಷಗಳ ಶಾಂತಿ ಒಪ್ಪಂದವಾಯಿತು. ಪರ್ಷಿಯದ ಗಡಿಗಳಲ್ಲಿ ಕ್ರೈಸ್ತರು ವಾಸವಾಗಿದ್ದ ಸಣ್ಣಪುಟ್ಟ ಪ್ರದೇಶಗಳ ಮೇಲಿನ ಅಧಿಕಾರವನ್ನು ಪರ್ಷಿಯ ತ್ಯಜಿಸಬೇಕಾಯಿತು. ಸಾಮ್ರಾಜ್ಯದ ಪಶ್ಚಿಮ ಭಾಗದಲ್ಲಿ ತನ್ನ ಹಿಂದಿನ ಸಾಮ್ರಾಟರ ಕಾಲದಲ್ಲಿ ಕೈಬಿಟ್ಟು ಹೋಗಿದ್ದ ಪ್ರದೇಶಗಳ ಮೇಲೆ ಪುನಃ ಅಧಿಕಾರ ಸ್ಥಾಪಿಸಲು ಜಸ್ಟಿನಿಯನ್ ನಿರ್ಧರಿಸಿದ. ಆ ಪ್ರದೇಶಗಳಲ್ಲಿ ಪ್ರಬಲರಾಗಿದ್ದ ಬರ್ಬರರಿಂದ ಅಲ್ಲಿಯ ಕ್ರೈಸ್ತರಿಗೆ ಆತಂಕವಾಗಿತ್ತು. ಆದ್ದರಿಂದ 533ರಲ್ಲಿ ಬೆಲಿಸಾರಿಯಸನ ನಾಯಕತ್ವದಲ್ಲಿ ಆಫ್ರಿಕದ ಉತ್ತರ ಭಾಗವನ್ನು ಆಕ್ರಮಿಸಲು ಜಸ್ಟಿನಿಯನ್ ಸೈನ್ಯ ಕಳುಹಿಸಿದ. ಅಲ್ಲಿಯ ದೊರೆ ಗೆಲಿಮರ್ 534ರಲ್ಲಿ ಜಸ್ಟಿನಿಯನನ ಸೇವೆಗೆ ಶರಣಾಗತನಾದ. ಉತ್ತರ ಆಫ್ರಿಕ ಪುನಃ ಬೈಜಾಂಟೈನ್ ಸಾಮ್ರಾಜ್ಯದ ಭಾಗವಾಯಿತು. ಆಡಳಿತ ದೃಷ್ಟಿಯಿಂದ ಸಾರ್ಡೀನಿಯ, ಕಾರ್ಸಿಕ ಮೊದಲಾದ ದ್ವೀಪಗಳನ್ನು ಹೊಸದಾಗಿ ಗೆದ್ದ ಪ್ರದೇಶಗಳೊಡನೆ ವಿಲೀನಗೊಳಿಸಲಾಯಿತು. ಅನಂತರ ಬರ್ಬರ ತಂಡದ ಜನರು ಉತ್ತರ ಆಫ್ರಿಕದಲ್ಲಿ ಅನೇಕ ವೇಳೆ ದಂಗೆಯೆದ್ದರು. ಜಸ್ಟಿನಿಯನ್ ಅವುಗಳನ್ನಡಗಿಸಿ ಅಲ್ಲಿ ವ್ಯವಸ್ಥಿತ ಆಡಳಿತ ಸ್ಥಾಪಿಸಿದ.[೪]

ಇಟಲಿ ಮೇಲೆ ಆಕ್ರಮಣ[ಬದಲಾಯಿಸಿ]

ಕಾನ್‍ಸ್ಟಾಂಟಿನೋಪಲ್ ಸರ್ಕಾರದ ಪ್ರತಿನಿಧಿಯಾಗಿ, ಆದರೆ ಬಹುತೇಕ ಸ್ವತಂತ್ರನಂತೆ, ಇಟಲಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಆಸ್ಟ್ರೊಗಾತ್ ತೀಯೊಡೀರ್ 526ರಲ್ಲಿ ಮರಣ ಹೊಂದಿದ. ಅವನಿಗೆ ಗಂಡು ಸಂತಾನ ಇರಲಿಲ್ಲ. ಅನಂತರ ಅಲ್ಲಿ ಬೈಜಾಂಟೈನ್ ವಿರುದ್ಧ ಚಟುವಟಿಕೆಗಳು ಹೆಚ್ಚಿದುವು. ಈ ಕಾರಣವನ್ನು ಮುಂದುಮಾಡಿಕೊಂಡು ಜಸ್ಟಿನಿಯನ್ ಇಟಲಿಯ ಸಾಮ್ರಾಜ್ಯದ ಮೇಲೆ ನೇರ ಅಧಿಕಾರವನ್ನು ಸ್ಥಾಪಿಸಲು ಹವಣಿಕೆ ನಡೆಸಿದ. 535ರ ಸುಮಾರಿನಲ್ಲಿ ಜಸ್ಟಿನಿಯನ ಸೈನ್ಯ ಬೆಲಿಸಾರಿಯಸನ ನೇತೃತ್ವದಲ್ಲಿ ಇಟಲಿಯನ್ನು ಆಕ್ರಮಿಸಿದುವು. ಅಲ್ಲಿಯ ಬಣಗಳ ವಿರೋಧವನ್ನು ಅಡಗಿಸಿ 540ರ ವೇಳೆಗೆ ಅಲ್ಲಿ ಸಾಮ್ರಾಜ್ಯದ ಅಧಿಕಾರವನ್ನು ಸ್ಥಾಪಿಸಲಾಯಿತು. ಆರ್ಥಿಕ ಕ್ಷೋಭೆ ಮತ್ತು ಸಾಮ್ರಾಜ್ಯದ ಅಧಿಕಾರಿಗಳ ದಮನ ನೀತಿಯಿಂದ ಇಟಲಿಯಲ್ಲಿ ಅನೇಕ ಪ್ರತಿರೋಧಗಳು ತಲೆದೋರಿ ಜಸ್ಟಿನಿಯನನ ಅಧಿಕಾರವನ್ನು ಸ್ವಲ್ಪ ಕಾಲ ಕಿತ್ತೊಗೆಯಲಾಗಿತ್ತು. ಆದರೆ 562ರ ವೇಳೆಗೆ ಸಾಮ್ರಾಜ್ಯದ ಸೈನ್ಯಗಳು ಇಟಲಿಯನ್ನು ಪ್ರವೇಶಿಸಿ ಅಲ್ಲಿಯ ನಾಯಕರನ್ನು ಉಗ್ರವಾಗಿ ಶಿಕ್ಷಿಸಿ ಪುನಃ ಸಾಮ್ರಾಜ್ಯದ ಅಧಿಕಾರವನ್ನು ಸ್ಥಾಪಿಸಿದುವು. ಜಸ್ಟಿನಿಯನನ ದಳಪತಿಗಳಲ್ಲೊಬ್ಬನಾದ ನಾರ್ಸೀಸ್ ಇಟಲಿಯ ಆಡಳಿತ ಮುಖ್ಯನಾಗಿ ನೇಮಕಗೊಂಡ.[೫] ನಿರಂತರವಾದ ಯುದ್ಧಗಳಿಂದ ಇಟಲಿ ಹಾಳಾಯಿತು. ಜಸ್ಟಿನಿಯನ್ ಇಟಲಿಯ ಆರ್ಥಿಕ ಕ್ಷೋಭೆಯನ್ನು ಕೊನೆಗೊಳಿಸಿ ಜನಜೀವನವನ್ನು ಉತ್ತಮಪಡಿಸಲು ಮಾಡಿದ ಪ್ರಯತ್ನಗಳು ಅಷ್ಟು ಸಫಲವಾಗಲಿಲ್ಲ. ಉತ್ತರ ಗಡಿಯ ಬಳಿಯ ಸ್ಲಾವ್ ಮತ್ತು ಬಲ್ಗಾರ್‍ಗಳಿಂದ ಆಗಿಂದಾಗ್ಗೆ ತೊಂದರೆಯಾಗುತ್ತಿತ್ತು. ಇವರು ಡ್ಯಾನ್ಯೂಬ್ ನದಿಯನ್ನು ದಾಟಿ ಪೆಲೋಪೊನೀಸ್ ವರೆಗೂ ಬಂದರಲ್ಲದೆ ರಾಜಧಾನಿಯವರೆಗೂ ಮುಂದುವರೆಯುವ ಭೀತಿಯುಂಟಾಗಿತ್ತು. ಇವರಿಂದ ಮುಖ್ಯ ಸ್ಥಳಗಳನ್ನು ರಕ್ಷಿಸಲು ಜಸ್ಟಿನಿಯನ್ ಅನೇಕ ಕೋಟೆಗಳನ್ನು ನಿರ್ಮಿಸಿದ. ಡ್ಯಾನ್ಯೂಬ್ ಪ್ರದೇಶದಲ್ಲಿ ಬಲವಾದ ರಕ್ಷಣಾ ವ್ಯವಸ್ಥೆ ಏರ್ಪಡಿಸಿದ. ಅವನ ದೃಢ ನಿಲುವಿನಿಂದ ಸಾಮ್ರಾಜ್ಯ ಕೊನೆಯ ಪಕ್ಷ ಅರ್ಧ ಶತಮಾನ ಕಾಲ ಸ್ಲಾವ್ ಬಣಗಳ ಆಕ್ರಮಣದಿಂದ ಮುಕ್ತವಾಗಿತ್ತು.[೬]

ಮತೀಯ ನೀತಿ[ಬದಲಾಯಿಸಿ]

ಜಸ್ಟಿನಿಯನ್ ವಿಶೇಷ ಧಾರ್ಮಿಕ ಶ್ರದ್ಧೆಯುಳ್ಳವನಾಗಿದ್ದ. ಚರ್ಚಿನ ಆಡಳಿತ ಸಾಮ್ರಾಟನ ಅಧಿಕಾರದ ಹೊಣೆಗೆ ಒಳಪಟ್ಟಿದ್ದೆಂದು ನಂಬಿದ್ದ. ಚರ್ಚಿನ ಆಡಳಿತವರ್ಗವನ್ನು ತಾನೇ ನೇಮಿಸುತ್ತಿದ್ದ. ತಾತ್ತ್ವಿಕ ಚರ್ಚೆಗೂ ಹೆಚ್ಚು ಗಮನ ನೀಡುತ್ತಿದ್ದ. ಸಾಮ್ರಾಜ್ಯದ ಏಳಿಗೆಗೆ ಆಂತರಿಕ ಶಾಂತಿಯೂ ಮತೀಯ ಒಗ್ಗಟ್ಟೂ ಬಹು ಮುಖ್ಯವೆಂಬುದು ಅವನ ನಂಬಿಕೆಯಾಗಿತ್ತು. ಸಿರಿಯ, ಪ್ಯಾಲಸ್ಟೀನ್, ಈಜಿಪ್ಟ್ ಮೊದಲಾದ ಪ್ರದೇಶಗಳಲ್ಲಿದ್ದ ಕ್ರೈಸ್ತೇತರರ ವಿಚಾರದಲ್ಲೂ ಪ್ರಾರಂಭದಲ್ಲಿ ಜಸ್ಟಿನಿಯನ್ ಉಗ್ರನೀತಿ ತಳೆದಿದ್ದ. ಅವನ ರಾಣಿಯಾದ ತೀಯೊಡೋರಳ ಪ್ರಯತ್ನಗಳಿಂದ ಜಸ್ಟಿನಿಯನ್ ಕ್ರೈಸ್ತೇತರರಿಗೂ ಮಾನ್ಯತೆ ನೀಡಲು ಮುಂದಾದರೂ ಪೋಪ್ ಅದನ್ನು ವಿರೋಧಿಸಿದ. ಕ್ರೈಸ್ತೇತರರನ್ನು ವಿರೋಧಿಸುವುದರಿಂದ ತನ್ನ ಸಾಮ್ರಾಜ್ಯದ ಪ್ರಾಚ್ಯಭಾಗಗಳು ಬೇರ್ಪಡೆಯಾಗಲು ಅವಕಾಶ ನೀಡಿದಂತಾಗುವುದೆಂದು ಬಗೆದು ಅವರಲ್ಲಿ ಒಂದು ಒಡಂಬಡಿಕೆ ಮೂಡಿಸಲು ಪೋಪ್ ವಿಜಿಲಸನನ್ನು ರೋಮಿನಿಂದ ಕಾನ್‍ಸ್ಟಾಂಟಿನೋಪಲ್‍ಗೆ ಆಹ್ವಾನಿಸಿದ. ಆದರೂ ಜಸ್ಟಿನಿಯನನ ಒಪ್ಪಂದ ಪ್ರಯತ್ನ ಫಲಿಸಲಿಲ್ಲ. ಎರಡು ಪಕ್ಷಗಳಲ್ಲೂ ಒಡಂಬಡಿಕೆಯಾಗಲಿಲ್ಲ. ಅನೇಕ ವರ್ಷಗಳ ಕಾಲ ಪೋಪ್ ಮತ್ತು ಜಸ್ಟಿನಿಯನರ ಮಧ್ಯೆ ಮನಸ್ತಾಪ ಇತ್ತು. ಅವನ ಆಳ್ವಿಕೆಯ ಕೊನೆಗಾಲದಲ್ಲಿ ಅವನು ಮತೀಯ ಗೊಂದಲದಿಂದ ಪಾರಾಗಲು ಯತ್ನಿಸಿದ. ಅದು ಸಾಧ್ಯವಾಗಲಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. "Saint Justinian the Emperor". www.oca.org. Retrieved 11 January 2020.
  2. Maas, Michael (18 April 2005). "The Cambridge Companion to the Age of Justinian". Cambridge University Press. Retrieved 11 January 2020. {{cite news}}: Cite has empty unknown parameter: |1= (help)
  3. "Emperor Justinian I". CatholicSaints.Info. 21 June 2009. Retrieved 11 January 2020.
  4. Barker, John W.; Barker, John Wesley (1966). "Justinian and the Later Roman Empire". Univ of Wisconsin Press. Retrieved 11 January 2020. {{cite news}}: Cite has empty unknown parameter: |1= (help)
  5. Moorhead, John (1983). "ITALIAN LOYALTIES DURING JUSTINIAN'S GOTHIC WAR". Byzantion. pp. 575–596. Retrieved 11 January 2020.
  6. "Justinian I". Ancient History Encyclopedia. Retrieved 11 January 2020.