ಒಂದನೇಯ ಜಸ್ಟಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದನೇಯ ಜಸ್ಟಿನ್ ( 450/452-527) . ಹಿರಿಯ ಜಸ್ಟಿನ್ ಎಂದು ಇವನನ್ನು ಕರೆಯಲಾಗಿದೆ. ಇವನು 518-527ರಲ್ಲಿ ಪೂರ್ವ ರೋಮನ್ ಚಕ್ರಾಧಿಪತ್ಯದ ಚಕ್ರವರ್ತಿಯಾಗಿದ್ದ.

ಪಶ್ಚಿಮ ಬಾಲ್ಕನ್ ಪ್ರದೇಶದಲ್ಲಿ ಬೆಡೆರಿಯಾನ ಎಂಬಲ್ಲಿ ಇಲಿರಿಯನ್ ರೈತ ಕುಟುಂಬವೊಂದರಲ್ಲಿ ಜನಿಸಿದ. ಜಸ್ಟಿನ್ ಯುವಕನಾಗಿದ್ದಾಗ ತನ್ನ ಇಬ್ಬರು ಸ್ನೇಹಿತರೊಡನೆ ರಾಜಧಾನಿಯಾದ ಕಾನ್‍ಸ್ಟಾಂಟಿನೋಪಲ್ ನಗರವನ್ನು ತಲುಪಿ ಸಾಮ್ರಾಟ ಲಿಯೋನ ಸೈನ್ಯ ಸೇರಿದ. ಲಿಯೋ ಮತ್ತು ಅನಾಸ್ಟಸಿಯಸರ ಆಳ್ವಿಕೆಯಲ್ಲಿ ಜಸ್ಟಿನ್ ಐಶ್ವರ್ಯವನ್ನೂ ಹಿರಿಯ ಹುದ್ದೆಯನ್ನೂ ಗಳಿಸಿದ. ಆ ಚಕ್ರವರ್ತಿಗಳ ಕಾಲದಲ್ಲಿ ನಡೆದ ಇಸಾರಿಯನ್ ಮತ್ತು ಪರ್ಷಿಯನ್ ಯುದ್ಧಗಳಲ್ಲಿ ಜಸ್ಟಿನ್ ಪರಾಕ್ರಮದಿಂದ ಹೋರಾಡಿ ಕೀರ್ತಿ ಗಳಿಸಿದ. ಐವತ್ತು ವರ್ಷಗಳ ಸುದೀರ್ಘ ಸೈನಿಕ ವೃತ್ತಿಯಲ್ಲಿ ಅವನು ಕ್ರಮೇಣ ಟ್ರಿಬ್ಯೂನ್, ಕೌಂಟ್, ಸೈನ್ಯಾಧಿಕಾರಿ ಮತ್ತು ಸೆನೆಟರ್ ಪದವಿಗಳನ್ನು ಗಳಿಸಿದ. ಜಸ್ಟಿನನ ಕೈಕೆಳಗಿನ ಪಡೆಗಳು ಅವನಿಗೆ ವಿಶೇಷ ಗೌರವ ಮತ್ತು ವಿಧೇಯತೆ ತೋರಿಸುತ್ತಿದ್ದುವು. ಅನಾಸ್ಟಸಿಯಸ್ 518ರಲ್ಲಿ ಮರಣ ಹೊಂದಿದ. ಉತ್ತರಾಧಿಕಾರಿಯ ಬಗ್ಗೆ ಗೊಂದಲವುಂಟಾಯಿತು. ಜಸ್ಟಿನನ ಸೈನಿಕರು ಅವನಿಗೆ ಒತ್ತಾಸೆಯಾಗಿ ನಿಂತರು. ಚರ್ಚಿನ ಅಧಿಕಾರ ವರ್ಗ ಮತ್ತು ಸಾರ್ವಜನಿಕರೂ ಜಸ್ಟಿನನನ್ನು ಬೆಂಬಲಿಸಿದರು. ಪ್ರಾಂತ್ಯಾಧಿಕಾರಿಗಳು ಜಸ್ಟಿನನಿಗೆ ವಿರೋಧವಾಗಿರಲಿಲ್ಲ. ಅನಾಸ್ಟಸಿಯಸನ ಸಂಬಂಧಿಗಳಿಂದ ವಿರೋಧ ಬಾರದಂತೆ ಜಸ್ಟಿನ್ ಎಚ್ಚರಿಕೆ ವಹಿಸಿದ. ಅವನೇ ಸಿಂಹಾಸನವನ್ನೇರಿದ. ಆಗ ಅವನಿಗೆ 65ರ ಮೇಲೆ ವಯಸ್ಸಾಗಿತ್ತು

ಒಂದನೆಯ ಜಸ್ಟಿನನಿಗೆ ಓದು ಬರಹ ಗೊತ್ತಿರಲಿಲ್ಲ. ಅವನು ಒಳ್ಳೆಯ ಯೋಧನಾಗಿದ್ದರೂ ಆಡಳಿತದಲ್ಲಿ ಹೆಚ್ಚು ಪರಿಶ್ರಮವಾಗಲಿ ಚಾತುರ್ಯವಾಗಲಿ ಅವನಿಗೆ ಇರಲಿಲ್ಲ. ಆಡಳಿತದ ಹೆಚ್ಚು ಜವಾಬ್ದಾರಿಯನ್ನು ಇತರರಿಗೆ ವಹಿಸಿದ್ದ. 519ರಲ್ಲಿ ಜಸ್ಟಿನ್ ಪೂರ್ವ ಮತ್ತು ಪಶ್ಚಿಮ ಕ್ರೈಸ್ತ ಚರ್ಚುಗಳ ಮಧ್ಯೆ ಸುಮಾರು 35 ವರ್ಷಗಳ ಹಿಂದಿನಿಂದ ತಲೆದೋರಿದ್ದ ಒಡಕನ್ನು ಹೋಗಲಾಡಿಸಿ ಒಪ್ಪಂದವೊಂದನ್ನೇರ್ಪಡಿಸಿ ಚರ್ಚಿನ ವರ್ಗದವರ ಮತ್ತು ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರನಾದ. ಅವನು ತನ್ನ ಸೋದರಸಂಬಂಧಿಯಾದ ಜಸ್ಟಿನಿಯನನನ್ನು ಕ್ರಮೇಣ ಉನ್ನತ ದರ್ಜೆಯ ಹುದ್ದೆಗೆ ಏರಿಸಿದನಲ್ಲದೆ ಆಳ್ವಿಕೆಯ ಕೊನೆಗಾಲದಲ್ಲಿ ತನ್ನ ತೊಡೆಯಲ್ಲಿ ವ್ರಣವೊಂದು ಎದ್ದಿತಾಗಿ ತನ್ನ ಸೋದರ ಸಂಬಂಧಿಯನ್ನೇ ಸಿಂಹಾಸನಕ್ಕೆ ಹಕ್ಕುದಾರನಾಗಿ 527ರಲ್ಲಿ ನೇಮಿಸಿ ಅಧಿಕಾರದಿಂದ ನಿವೃತ್ತನಾದ. ಅನಂತರ ನಾಲ್ಕು ತಿಂಗಳುಗಳ ಕಾಲ ನರಳಿ ಮರಣ ಹೊಂದಿದ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: