ಘಜ಼್ನವೀಡ್
ಘಜ಼್ನವೀಡ್ ಎಂಬುದು ಆಫ್ಘಾನಿಸ್ಥಾನದಲ್ಲಿರುವ ಘಜ಼್ನಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸುಮಾರು ಎರಡು ಶತಮಾನಗಳ ಕಾಲ (977-1186) ರಾಜ್ಯವಾಳಿದ ವಂಶ. ಇದು ಹಿಂದೂಸ್ತಾನ ಮತ್ತು ಇಸ್ಲಾಂ ಪ್ರಪಂಚದ ಸರಹದ್ದಿನ ಬಹುಭಾಗವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು ಆಳಿ ಮಧ್ಯಯುಗದ ಇತಿಹಾಸದಲ್ಲಿ ಪರಿಣಾಮಕಾರಿ ಪಾತ್ರ ವಹಿಸಿತು. ಮುಸ್ಲಿಮರು ಹಿಂದೂಸ್ತಾನವನ್ನು ಯಶಸ್ವಿಯಾಗಿ ಪ್ರವೇಶಿಸಿ ಅಲ್ಲಿ ರಾಜಕೀಯವಾಗಿ ನೆಲೆಗೊಳ್ಳಲು ಈ ರಾಜವಂಶ ವಿಶೇಷ ಪಾತ್ರ ವಹಿಸಿತು. ಈ ವಂಶದ ಪ್ರಸಿದ್ಧ ದೊರೆ ಮಹಮೂದನ ಕಾಲದಲ್ಲಿ (998-1030) ಘಜ಼್ನಿ ಸಾಮ್ರಾಜ್ಯ ಅತ್ಯಂತ ವಿಸ್ತಾರವೂ ಪ್ರಭಾವಶಾಲಿಯೂ ಆಗಿ ಮಹೋನ್ನತಿ ಗಳಿಸಿತು. ಆ ಕಾಲದಲ್ಲಿ ವಾಸ್ತುಶಿಲ್ಪ ಹಾಗೂ ಕಲೆಯಲ್ಲೂ ಹಲವು ಸಾಧನೆಗಳಾದವು. ಮಧ್ಯಯುಗದ ಇತಿಹಾಸದಲ್ಲಿ ಘಜ಼್ನವೀಡ್ ವಂಶದ ಸ್ಥಾನ ಹಿರಿದಾದ್ದು.
ವಂಶದ ಸ್ಥಾಪನೆ
[ಬದಲಾಯಿಸಿ]ಸಮಾನಿದ್ ಅಮೀರರ ದಂಡನಾಯಕನಾಗಿದ್ದ ಬುಖಾರದ ಅಲಪ್ ತಿಗಿನ್ ಘಜ಼್ನಿಗೆ ದಂಡೆತ್ತಿ ಬಂದು ಸ್ಥಳೀಯ ರಾಜ ಅಬೂ ಅಲೀ ಲವೀಕ್ ಅಥವಾ ಅನೂಕನನ್ನು 962ರಲ್ಲಿ ಸೋಲಿಸಿದ.[೧] ಇವನೇ ಘಜ಼್ನವೀಡ್ ವಂಶದ ಸ್ಥಾಪಕನೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯ. ಆದರೆ ಅದೇ ವಂಶಕ್ಕೆ ಸೇರಿದ, 977-8ರಲ್ಲಿ ಘಜ಼್ನಿಯಲ್ಲಿ ಅಧಿಕಾರ ಸ್ಥಾಪಿಸಿದ ಅಮೀರರ ದಂಡನಾಯಕ ಸಬಕ್ತಿಗೀನ್ ಈ ರಾಜ್ಯದ ಸ್ಥಾಪಕನೆಂದು ಹಲವು ಚರಿತ್ರಕಾರರು ಭಾವಿಸಿದ್ದಾರೆ.
ಪ್ರಮುಖ ಅರಸರು
[ಬದಲಾಯಿಸಿ]ಸಬಕ್ತಿಗೀನ್: ಸಬಕ್ತಿಗೀನ್ ತನ್ನ ಸ್ಥಾನವನ್ನು ಬಲಪಡಿಸಿಕೊಂಡ ಕೂಡಲೇ ರಾಜ್ಯ ವಿಸ್ತರಣೆಯ ಕಾರ್ಯ ಕೈಗೊಂಡ. ಭಾರತದ ಪಂಜಾಬ್ ಪ್ರಾಂತ್ಯಕ್ಕೆ ದಾಳಿಯಿಟ್ಟು ರಾಜ ಜಯಪಾಲನನ್ನು 979 ಮತ್ತು 988ರಲ್ಲಿ ಸೋಲಿಸಿದ.[೨][೩] ಇವನ ಕಾಲದಲ್ಲೇ ಉತ್ತರದ ಬಲೂಚಿಸ್ತಾನ, ಘೋರ್, ಜ಼ಾಬುಲಿಸ್ತಾನ ಮತ್ತು ಬ್ಯಾಕ್ಟ್ರಿಯಗಳು ಘಜ಼್ನವೀಡರ ಸಾಮ್ರಾಜ್ಯಕ್ಕೆ ಸೇರಿದುವು. ಹೀಗೆ ಇವನು ಘಜ಼್ನವೀಡರ ಸಾಮ್ರಾಜ್ಯಕ್ಕೆ ಭದ್ರ ಬುನಾದಿ ಹಾಕಿದ.
ಮಹಮೂದ: ಇವನ ತರುವಾಯ ಪಟ್ಟಕ್ಕೆ ಬಂದ ಮಹಮೂದ (998-1030) ಘಜ಼್ನವೀಡ್ ಸಾಮ್ರಾಜ್ಯವನ್ನು ಎಲ್ಲ ದಿಕ್ಕುಗಳಲ್ಲೂ ವಿಸ್ತರಿಸಿದನಲ್ಲದೆ ರಾಜಧಾನಿಯನ್ನು ಭವ್ಯವಾಗಿ ನಿರ್ಮಿಸಿ ಈ ವಂಶದ ಅದ್ವಿತೀಯ ಚಕ್ರವರ್ತಿ ಎನಿಸಿಕೊಂಡ. ಹಿಂದೂಸ್ತಾನದ ಮೇಲೆ ಈತ 17 ಬಾರಿ ದಂಡೆಯಾತ್ರೆ ಮಾಡಿದ.[೪][೫] ಇವನ ಮರಣಕಾಲಕ್ಕೆ ಘಜ಼್ನವೀಡ್ ಸಾಮ್ರಾಜ್ಯ ಆಫ್ಘಾನಿಸ್ತಾನ ಮತ್ತು ಪರ್ಷಿಯದ ಭಾಗಗಳೂ ಸೇರಿ ಆಕ್ಸಸ್‍ನಿಂದ ಪಂಜಾಬ್‍ವರೆಗೂ ವಿಸ್ತರಿಸಿತು. ಪ್ರಪಂಚದ ಮಹಾ ಸಮರ ಚತುರನಿವನೆಂದು ಪರಿಗಣಿತನಾಗಿದ್ದಾನೆ. ಇವನ ಸ್ಥೈರ್ಯ, ಸಮಚಿತ್ತ, ಸಮಯಚಾತುರ್ಯಗಳಿಂದಾಗಿ ಏಷ್ಯದ ಇತಿಹಾಸದಲ್ಲೇ ಇವನ ವ್ಯಕ್ತಿತ್ವ ಅತ್ಯಂತ ಕುತೂಹಲಕರವಾದ್ದು.
ಮಸೂದ್: ಮಹಮೂದನ ತರುವಾಯ ಅಧಿಕಾರಕ್ಕೆ ಬಂದ 1ನೆಯ ಮಸೂದ್ 1030-1040 ದಕ್ಷ ಆಡಳಿತಗಾರನಾಗಿರಲಿಲ್ಲ. ಅವನು ಹಿಂದೂಸ್ತಾನದ ಮಾರ್ಗದಲ್ಲಿ ಕೊಲೆಗೀಡಾದ.
ನಂತರದ ವರ್ಷಗಳು, ಪತನ
[ಬದಲಾಯಿಸಿ]ಅನಂತರ ಘಜ಼್ನವೀಡರು ಸಮರ್ಥ ರಾಜರಿಲ್ಲದೆ ದುರ್ಬಲರಾದರು. ತಮ್ಮ ಸಾಮ್ರಾಜ್ಯದ ಪೂರ್ವ ಮತ್ತು ಪಶ್ಚಿಮ ಗಡಿಗಳೆರಡರಲ್ಲೂ ಸ್ವಲ್ಪಸ್ವಲ್ಪ ಭಾಗಗಳು ಕಳೆದು ಹೋಗುತ್ತ ಬಂದವು. 1040ರಲ್ಲಿ ಸೆಲ್ಜೂಕರು ಪರ್ಷಿಯವನ್ನು ಮುತ್ತಿ ಘಜ಼್ನವೀಡರನ್ನು ತೀವ್ರವಾಗಿ ದುರ್ಬಲಗೊಳಿಸಿದರು.[೬][೭][೮] ಘಜ಼್ನವೀಡರು ಸೆಲ್ಜೂಕರ ಆಧಿಪತ್ಯವನ್ನು ಮಾನ್ಯ ಮಾಡಿ ಅವರಿಗೆ ಕಪ್ಪ ಒಪ್ಪಿಸಬೇಕಾಯಿತು. ಘಜ಼್ನವೀಡರ ಆಶ್ರಿತರಾಗಿದ್ದು, ಕ್ರಮೇಣ ಪ್ರಾಬಲ್ಯಗಳಿಸಿ ಅವರೊಂದಿಗೆ ಸ್ಪರ್ಧೆ ಆರಂಭಿಸಿದ್ದ ಘೋರಿ ಕುತ್ಬು-ಉದ್-ದೀನ್ ಮಹಮ್ಮದನನ್ನೂ ಅವನ ತಮ್ಮ ಸೈಫ್-ಉದ್-ದೀನನನ್ನೂ ಬಹ್ರಾಮ್ ಷಹ ಕ್ರೂರವಾಗಿ ಕೊಲ್ಲಿಸಿದ. ಅವರ ತಮ್ಮ ಅಲ್ಲಾ-ಉದ್-ದೀನ್ ಇದಕ್ಕಾಗಿ ಸೇಡು ತೀರಿಸಿಕೊಳ್ಳಲು ಘಜ್ನಿ಼ಯನ್ನು ಮುತ್ತಿ ಅದನ್ನು ಬೆಂಕಿಗೆ ಆಹುತಿ ಮಾಡಿದ (1151). ಆ ನಗರ ಏಳು ದಿನಗಳ ಕಾಲ ಸತತವಾಗಿ ಉರಿಯಿತು. ಈ ಕೃತ್ಯದಿಂದಾಗಿ ಅಲ್ಲಾ-ಉದ್-ದೀನನಿಗೆ ಜಹಾನ್ಸೂಜ಼್ (ಪ್ರಪಂಚದಹಕ) ಎಂಬ ಬಿರುದು ಬಂತು.[೯][೧೦] ಮುಂದೆ ಘಜ಼್ನವೀಡರು ವಿದೇಶೀ ದಾಳಿಗಳಿಂದಲೂ, ಆಂತರಿಕ ಕಲಹದಿಂದಲೂ ಇನ್ನೂ ಕ್ಷೀಣಿಸತೊಡಗಿದರು. ಸ್ವಲ್ಪಕಾಲದಲ್ಲಿ ಅವರು ಘಜ್ನಿ಼ಯನ್ನು ತೊರೆದು ಪಂಜಾಬಿನಲ್ಲಿದ್ದ ಲಾಹೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.[೧೧] 1163ರ ಹೊತ್ತಿಗೆ ಘಜ್ನಿ಼ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳು ಘಜ಼್ನವೀಡರ ಪಾಲಿಗೆ ಇಲ್ಲವಾದವು. 1186ರಲ್ಲಿ ಷಿಹಾಬುದ್ದೀನ್ ಮಹಮ್ಮದ್ ಘೋರಿ ಪಂಜಾಬಿಗೆ ಮುತ್ತಿಗೆ ಹಾಕಿ ಲಾಹೋರನ್ನು ಆಕ್ರಮಿಸಿಕೊಂಡ. ಆಗ ಅಲ್ಲಿ ಆಳುತ್ತಿದ್ದ ಖುಸ್ರು ಮಲ್ಲಿಕ್ ಶರಣಾಗತನಾದ. ಅಲ್ಲಿಗೆ ಘಜ಼್ನವೀಡರ ಆಳ್ವಿಕೆ ಮುಗಿಯಿತು.
ಕೊಡುಗೆಗಳು
[ಬದಲಾಯಿಸಿ]ಭಾರತ ಮತ್ತು ಪಶ್ಚಿಮ ಏಷ್ಯಗಳ ನಡುವೆ ನೇರ ರಾಜಕೀಯ ಸಂಪರ್ಕ ಏರ್ಪಡಲು, ಇಸ್ಲಾಂ ಸಂಸ್ಕೃತಿ ಭಾರತಕ್ಕೆ ಪ್ರವೇಶಿಸಲು ಮತ್ತು ಭಾರತೀಯ ಸಂಸ್ಕೃತಿಯ ಪ್ರಭಾವ ಪಶ್ಚಿಮ ಏಷ್ಯದ ಮೂಲಕ ಯುರೋಪನ್ನು ತಲುಪಲು ಈ ರಾಜವಂಶ ವಿಶೇಷವಾಗಿ ಕಾರಣವಾಯಿತು. ಪರ್ಷಿಯ, ಭಾರತಗಳಿಂದ ಕರೆಸಿಕೊಳ್ಳಲಾದ ಕಲಾವಿದರು ಘಜ್ನಿ಼ಯಲ್ಲಿ ಹಲವಾರು ಭವನಗಳನ್ನು ನಿರ್ಮಿಸಿದರು. ವಾಸ್ತುಶಿಲ್ಪವೇ ಮುಂತಾದ ಕಲೆಗಳು ಅಲ್ಲಿ ಬೆಳೆದುವು.
ಉಲ್ಲೇಖಗಳು
[ಬದಲಾಯಿಸಿ]- ↑ Bosworth 1963, p. 37.
- ↑ C. E. Bosworth. The Early Ghaznavids. p. 168.
- ↑ Seth, Krishna Narain (1978). The Growth of the Paramara Power in Malwa (in ಇಂಗ್ಲಿಷ್). Progress Publishers. pp. 156–157.
- ↑ Heathcote 1995, p. 6.
- ↑ Anjum 2007, p. 234.
- ↑ Bosworth 2006.
- ↑ Amirsoleimani 1999, p. 243.
- ↑ Spuler 1991, p. 1051.
- ↑ C.E. Bosworth, The Later Ghaznavids, 116-117.
- ↑ Bosworth, C. Edmund (31 August 2007). Historic Cities of the Islamic World (in ಇಂಗ್ಲಿಷ್). BRILL. p. 299. ISBN 978-90-474-2383-6.
ಗ್ರಂಥಸೂಚಿ
[ಬದಲಾಯಿಸಿ]- Bosworth, C.E. (1963). The Ghaznavids:994–1040. Edinburgh University Press.
- Heathcote, T.A. (1995). The Military in British India: The Development of British Forces in South Asia:1600-1947. Manchester University Press.
- Anjum, Tanvir (Summer 2007). "The Emergence of Muslim Rule in India: Some Historical Disconnects and Missing Links". Islamic Studies. 46 (2).
- Bosworth, C.E. (2006). "Ghaznavids". Encyclopaedia Iranica.
- Amirsoleimani, Soheila (1999). "Truths and Lies: Irony and Intrigue in the Tārīkh-i Bayhaqī: The Uses of Guile: Literary and Historical Moments". Iranian Studies. 32 (2, Spring). Taylor & Francis, Ltd. doi:10.1080/00210869908701955.
- Spuler, B. (1991). "Ghaznawids". In Lewis, B.; Pellat, C.; Schacht, J. (eds.). The Encyclopedia of Islam. Vol. II. Brill.