ಗುತ್ತರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುತ್ತರು ಕರ್ನಾಟಕದಲ್ಲಿ ಆಳಿದ ಮಹಾಮಂಡಲೇಶ್ವರ ಮನೆತನಗಳಲ್ಲಿ ಪ್ರಮುಖವಾದ ಒಂದರ ದೊರೆಗಳು. ಪ್ರ.ಶ.ಸು. 12ನೆಯ ಶತಮಾನದ ಪ್ರಾರಂಭದಿಂದ 13ನೆಯ ಶತಮಾನದ ಕೊನೆಯವರೆಗೆ ಇವರು ಸಾಮಂತರಾಗಿ ಕರ್ನಾಟಕದ ರಾಜಕೀಯದಲ್ಲಿ ಪಾಲ್ಗೊಂಡಿದ್ದರು.

ಗುತ್ತರು ಯಾರು?[ಬದಲಾಯಿಸಿ]

ಗುತ್ತು ಎನ್ನುವ ಪದ ಗುಪ್ತ ಎಂಬ ಸಂಸ್ಕೃತ ಪದದಿಂದ ಬಂದಿರಬೇಕೆಂದು ಅನೇಕ ಚರಿತ್ರಾಕಾರರು ಅಭಿಪ್ರಾಯಪಟ್ಟಿದ್ದಾರೆ. ಗುತ್ತರ ಶಾಸನಗಳಲ್ಲಿ ಇವರಿಗೆ ಚಂದ್ರಗುಪ್ತ ವಂಶೋದ್ಭವ. ವಿಕ್ರಮಾದಿತ್ಯವಂಶೋದ್ಭವ, ಗುಪ್ತವಂಶತ್ರಿನೇತ್ರ, ಉಜ್ಜಯಿನೀಪುರವಾಧೀಶ್ವರ, ಪಾಟಿಲೀಪುರವರಾಧೀಶ್ವರ ಎಂಬ ಬಿರುದುಗಳು ಇರುವುದು ಕಾಣಬರುತ್ತದೆ. ಆದ್ದರಿಂದ ಗುತ್ತರು ಗುಪ್ತವಂಶದ ಎರಡನೇ ಚಂದ್ರಗುಪ್ತನ ವಂಶದವರೆಂದು ಇವರು ಮೊದಲು ಉಜ್ಜಯಿನಿಯಲ್ಲಿ ಆಳುತ್ತಿದ್ದರೆಂದು ಕೆಲವರ ಮತ. ವಿಕ್ರಮಶಕೆಯನ್ನು ಸ್ಥಾಪಿಸಿದ ವಿಕ್ರಮಾದಿತ್ಯನೇ ಗುತ್ತರ ಮೂಲ ಪುರುಷ ಎಂದು ಮತ್ತೆ ಕೆಲವರ ವಾದ. ಇವರು ಪಾಟಲೀಪುತ್ರದಲ್ಲಿ ಆಳಿದ ಮೌರ್ಯದೊರೆ ಚಂದ್ರಗುಪ್ತನ ವಂಶಜ ರಾಗಿದ್ದಿರುವುದು ಸಾಧ್ಯವೆಂದು ಮತ್ತೆ ಕೆಲವರ ಅಭಿಪ್ರಾಯ.

ಈ ವಾದಗಳೆಲ್ಲ ನಿಜವಲ್ಲವೆಂದು ಗುತ್ತರದು ಕರ್ನಾಟಕದಲ್ಲಿಯೇ ಬೆಳಕಿಗೆ ಬಂದ ಸಾಮಂತ ರಾಜಮನೆತನವೆಂದು ಇವರ ಮೂಲನಿವಾಸ ಸ್ಥಾನ ಉಜ್ಜಯಿನೀ ಅಥವಾ ಪಾಟಲೀ ಪುತ್ರವಲ್ಲವೆಂದೂ ಇವರು ಕರ್ನಾಟಕದವರೆಂದೂ ಕೆಲವರ ಅಭಿಪ್ರಾಯ ಪಡುತ್ತಾರೆ. ಈ ವಾದದಲ್ಲಿಯೇ ಹೆಚ್ಚು ತಿರುಳಿರುವಂತೆ ತೋರುತ್ತದೆ.

ಗುತ್ತವೊಳಲು ಇವರ ಸ್ಥಳ. ಈಗಿನ ರಾಣೆಬೆನ್ನೂರು, ಕರಜಗಿ ಮುಂತಾದ ಪ್ರದೇಶಗಳನ್ನೊಳಗೊಂಡ ಗುತ್ತವೊಳಲು ಪ್ರಾಂತ್ಯಕ್ಕೆ ಗುತ್ತವೊಳಲು ನಗರ ರಾಜಧಾನಿಯಾಗಿತ್ತು. ಈ ನಗರ ಕರಜಗಿಗೆ ಪೂರ್ವದಲ್ಲಿ 10 ಕಿಮೀ ದೂರದಲ್ಲಿದೆ.

ವಂಶ ವೃಕ್ಷ

ಇತಿಹಾಸ[ಬದಲಾಯಿಸಿ]

ಮಹಾಗುತ್ತ ಅಥವಾ ಮಾಗುತ್ತನೇ ಗುತ್ತವಂಶದ ಮೊದಲನೆಯ ದೊರೆ. ಇವನು ಬಹುಶಃ ಪ್ರ.ಶ. 11ನೆಯ ಶತಮಾನದಲ್ಲಿ ಚಾಳುಕ್ಯರ ಸಾಮಂತನಾಗಿದ್ದಿರಬೇಕೆಂದು ಊಹೆ.

ಇವನ ಅನಂತರ ಇವನ ಮಗನಾದ 1ನೆಯ ಗುತ್ತ ರಾಜನಾದ. ಇವನು ಹಾನುಗಲ್ಕದಂಬರ ಮೇಲೆ ಯುದ್ಧ ಮಾಡಿ ಅವರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದ.

ಇವನಾದ ಅನಂತರ ಇವನ ಮಗನಾದ ಮಲ್ಲಿದೇವ ರಾಜನಾದ. ಇವನೊಬ್ಬ ಪ್ರಸಿದ್ಧರಾಜ. ಇವನು ಬನವಾಸಿಯ ರಾಜ್ಯಪಾಲ ಗೋವಿಂದರಸನ ಆಶ್ರಯದಲ್ಲಿ ಗುತ್ತವೊಳಲಿನಲ್ಲಿ ಆಳುತ್ತಿದ್ದ. ಮಲ್ಲಿದೇವ ಸಾಮಂತನಾಗಿಯೇ ಇದ್ದ. ಇವನ ಸಮಕಾಲೀನ ಹೊಯ್ಸಳ ದೊರೆ ವಿಷ್ಣುವರ್ಧನ ಇವನನ್ನು ಜಯಿಸಿದಂತೆ ಕಾಣಬರುವುದಿಲ್ಲ. 1139ರಲ್ಲಿ ಇವನು ಮರಣಹೊಂದಲು ಇವನ ಮಗನಾದ ಮೊದಲನೆಯ ವಿಕ್ರಮಾದಿತ್ಯ ರಾಜನಾದ.

ಈ ವೇಳೆಗೆ ಕರ್ಣಾಟಕದಲ್ಲಿ ಅನೇಕ ರಾಜಕೀಯ ಬದಲಾವಣೆಗಳುಂಟಾಗಿದ್ದುವು. ಚಾಳುಕ್ಯರ ಪ್ರಾಬಲ್ಯ ಕಡಿಮೆಯಾಗಿ, ಕಲ್ಯಾಣದ ಕಳಚೂರ್ಯರು ತಲೆ ಎತ್ತುತ್ತಿದ್ದರು. ಬಹುಶಃ ವಿಕ್ರಮಾದಿತ್ಯ, ಇತರ ಸಾಮಂತ ರಾಜರಂತೆ ಚಾಳುಕ್ಯರನ್ನು ಕಡೆಗಣಿಸಿ ಕಳಚೂರ್ಯರ ಸಾಮಂತನಾಗಿರಬೇಕು. ಇವನು ಸು. 1170ರಲ್ಲಿ ಮರಣಹೊಂದಿದ. ಇವನ ಮಗನಾದ 1ನೆಯ ಜೋಯಿದೇವ ರಾಜನಾದ. 1179 ಮತ್ತು 1181ರಲ್ಲಿ ಇವನು ಬರೆಯಿಸಿದ ಎರಡು ಶಾಸನಗಳಲ್ಲಿ ಇವನು ಕಳಚೂರ್ಯ ದೊರೆಗಳಾದ ಸಂಕಮದೇವ ಮತ್ತು ಆಹವಮಲ್ಲರ ಅಧೀನದಲ್ಲಿ ಮಹಾ ಮಂಡಲೇಶ್ವರನಾಗಿದ್ದನೆಂದು ಹೇಳಿದೆ. ಇಷ್ಟರಲ್ಲಿ ಕಳಚೂರ್ಯರ ಪ್ರಾಬಲ್ಯ ಕಡಿಮೆಯಾಗಿ ಚಾಳುಕ್ಯರು ಮತ್ತೆ ತಲೆ ಎತ್ತಿದ್ದರು. ಇದನ್ನು ಗಮನಿಸಿದ ಜೋಯಿದೇವ ಕಳಚೂರ್ಯರನ್ನು ಕಡೆಗಣಿಸಿ, ಚಾಳುಕ್ಯರ ಸಾಮಂತನಾದ. ಇವನ ರಾಜ್ಯಕ್ಕೆ ನಾಗರಖಂಡ ಪ್ರಾಂತ್ಯದ ಕೆಲವು ಭಾಗಗಳು ಸೇರಿದ್ದುವು.

ಜೋಯಿದೇವನ ಮರಣಾನಂತರ ಅವನ ಸಹೋದರನ ಮಗನಾದ 2ನೆಯ ವಿಕ್ರಮಾದಿತ್ಯ 1185ರಲ್ಲಿ ರಾಜನಾದ. ಇವನು ಗುತ್ತರಲ್ಲೆಲ್ಲ ಅತ್ಯಂತ ಶ್ರೇಷ್ಠನಾದ ಮಹಾಮಂಡಲೇಶ್ವರ. ಇವನು ರಾಜನಾದಾಗ ಕರ್ಣಾಟಕದ ರಾಜಕೀಯದಲ್ಲಿ ಹೊಯ್ಸಳ ಇಮ್ಮಡಿ ಬಲ್ಲಾಳನೂ ಸೇವುಣ 5ನೆಯ ಭಿಲ್ಲಮನೂ ತಮ್ಮ ತಮ್ಮಲ್ಲೇ ಯುದ್ಧಗಳನ್ನು ಮಾಡುತ್ತಿದ್ದರು. ಇದರಿಂದ ಇವರಿಬ್ಬರಿಗೂ ಗುತ್ತರನ್ನು ಸೋಲಿಸುವಷ್ಟು ವ್ಯವಧಾನವಿರಲಿಲ್ಲ. ಇದನ್ನು ಗಮನಿಸಿದ ವಿಕ್ರಮಾದಿತ್ಯ ಸ್ವತಂತ್ರನಾಗಿ ರಾಜ್ಯಭಾರ ಮಾಡಲು ಪ್ರಾರಂಭಿಸಿದ. ಇವನ ಈ ಕಾಲದ ಶಾಸನಗಳಲ್ಲಿ ಹೊಯ್ಸಳರ ಅಥವಾ ಸೇವುಣರಾಜರ ಉಲ್ಲೇಖವೇ ಕಾಣುವುದಿಲ್ಲ. 1233ರಲ್ಲಿ ಬರೆಸಲಾದ ಕನಕವಳ್ಳಿಯ ಶಾಸನದಲ್ಲಿ ಮಹಾಮಂಡಳೇಶ್ವರ ವಿಕ್ರಮಾದಿತ್ಯ ತನ್ನ ಪ್ರಧಾನಿಯೊಂದಿಗೆ ಬನವಾಸಿ ನಾಡನ್ನು ಆಳುತ್ತಿದ್ದನೆಂದು ಹೇಳಿದೆ. ಬಹುಶಃ ಇವನು ತನ್ನ ಮರಣದವರೆಗೂ ಸ್ವತಂತ್ರನಾಗಿಯೇ ಇದ್ದನೆಂದು ತೋರುತ್ತದೆ. ಇವನಿಗೆ ಪಟ್ಟಮಹಾದೇವಿ ಎಂಬ ರಾಣಿಯಿಂದ ಜೋಯಿದೇವ, ವಿಕ್ರಮಾದಿತ್ಯ ಮತ್ತು ತುಳುವಲಾದೇವಿ ಎಂಬ ಮಕ್ಕಳಿದ್ದರು. ವಿಕ್ರಮಾದಿತ್ಯನ ಮರಣಾನಂತರ 2ನೆಯ ಜೋಯಿದೇವ 1233ರಲ್ಲಿ ದೊರೆಯಾದ. ಈ ಸಮಯದಲ್ಲಿ ಸೇವುಣ ಸಿಂಘಣ ಅತ್ಯಂತ ಬಲಿಷ್ಠನಾಗಿ ಕರ್ಣಾಟಕದ ಬಹು ಭಾಗವನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದ. ಗುತ್ತ ಎರಡನೆಯ ಜೋಯಿದೇವನನ್ನು ಸಿಂಘಣನ ಮಂತ್ರಿಯಾದ ಬೀಚ ತನ್ನ ಅಧೀನಕ್ಕೆ ತಂದ. 1238ರಲ್ಲಿ ಬರೆಸಲಾದ ಶಾಸನವೊಂದರಲ್ಲಿ 2ನೆಯ ಜೋಯಿದೇವ ಸಿಂಘಣನ ಪಾದಪದ್ಮೋಪ ಜೀವಿ ಎಂದು ಹೇಳಿಕೊಂಡಿದ್ದಾನೆ. ಸೇವುಣರ ಪರವಾಗಿ ಸಿಂಘಣ ತನ್ನ ದಂಡ ನಾಯಕ ಚಿಕ್ಕದೇವನನ್ನು ಗುತ್ತವೊಳಲಿನಲ್ಲಿ ಇರಿಸಿದ.

ಜೋಯಿದೇವ 1248ರಲ್ಲಿ ಮರಣಹೊಂದಿದಾಗ ಅವನ ತಮ್ಮನಾದ 3ನೆಯ ವಿಕ್ರಮಾದಿತ್ಯ ಮಹಾಮಂಡಲೇಶ್ವರನಾದ. ಈತ ಸೇವುಣ ದೊರೆ ಕೃಷ್ಣನ ಆಶ್ರಯದಲ್ಲಿದ್ದ. 3ನೆಯ ಗುತ್ತದೇವ, ಹಿರಿಯದೇವ ಮತ್ತು 3ನೆಯ ಜೋಯಿದೇವ ಇವರು ವಿಕ್ರಮಾದಿತ್ಯನಿಗೆ ರಾಣಿ ಮೈಲಾಳದೇವಿಯಿಂದ ಜನಿಸಿದ ಮಕ್ಕಳು. ವಿಕ್ರಮಾದಿತ್ಯನ ಮರಣಾನಂತರ ಇವನ ಜ್ಯೇಷ್ಠಪುತ್ರ 3ನೆಯ ಗುತ್ತ 1259ರಲ್ಲಿ ಮಹಾಮಂಡಲೇಶ್ವರನಾದ. ಇವನು ಸ್ವಲ್ಪಕಾಲದಲ್ಲಿಯೇ ಸೇವುಣ ಕೃಷ್ಣನ ಆಧಿಪತ್ಯದಿಂದ ಸ್ವತಂತ್ರನಾಗಲು ಹವಣಿಸಿದ. ಆದರೆ ಕೃಷ್ಣ ತನ್ನ ಸೇನಾಧಿಪತಿಗಳನ್ನು ಕಳುಹಿಸಿ ಈ ಪ್ರಯತ್ನವನ್ನು ಅಡಗಿಸಿದ. ಇಷ್ಟರಲ್ಲಿ ಸೇವುಣ ಕೃಷ್ಣ ಮರಣ ಹೊಂದಿ ಮಹಾದೇವ ಸೇವುಣ ರಾಜನಾಗಿದ್ದ. ಮಹಾದೇವ ಸಾಳುವ ತಿಕ್ಕಮನೆಂಬ ದಳಪತಿಯ ನೇತೃತ್ವದಲ್ಲಿ ಹೊಯ್ಸಳರ ಮೇಲೆ ಒಂದು ಸೈನ್ಯವನ್ನು ಕಳುಹಿಸಿದ. ಈ ಸೈನ್ಯ ಗುತ್ತವೊಳಲಿಗೆ ಬಂದು ಅಲ್ಲಿ ತಂಗಿತು. ಇಷ್ಟರಲ್ಲಿ ಸೇವುಣ ರಾಮಚಂದ್ರ ದೊರೆಯಾಗಿದ್ದ. ರಾಮಚಂದ್ರನ ಆದೇಶದಂತೆ ಗುತ್ತರಾಜ ಸಾಳುವ ತಿಕ್ಕಮನಿಗೆ ಸೈನ್ಯ ಸಹಾಯವನ್ನು ಒದಗಿಸಿದ. ಈ ಯುದ್ಧದಲ್ಲಿ ಸಹಾಯ ನೀಡುವುದರಲ್ಲಿಯೇ ಗುತ್ತನ ಕಾಲವೆಲ್ಲ ಕಳೆಯಿತು. ಸು. 1280ರಲ್ಲಿ ಇವನು ಮರಣಹೊಂದಿದ.

ಇವನ ಅನಂತರ ಇವನ ಸಹೋದರರು ಮಹಾಮಂಡಲೇಶ್ವರ ರಾಜರಾಗಿದ್ದರೇ ಎಂಬುದು ಖಚಿತವಾಗಿ ಗೊತ್ತಿಲ್ಲ. ಆದರೆ ಇವನ ತಮ್ಮ 3ನೆಯ ಜೋಯಿದೇವನ ಮಗ 4ನೆಯ ವಿಕ್ರಮಾದಿತ್ಯ 1283ರಲ್ಲಿ ಸೇವುಣ ರಾಮಚಂದ್ರನ ಆಶ್ರಯದಲ್ಲಿದ್ದನೆಂದು ಹಿರೇಬಿದ್ರಿ ಎಂಬಲ್ಲಿ ದೊರಕಿರುವ ಶಾಸನದಿಂದ ಗೊತ್ತಾಗುತ್ತದೆ. ಇವನು ತನ್ನ ರಾಣಿ ಪದ್ಮಲಾದೇವಿಯ ಸಮೇತ ಕಲ್ಲಿನಾಥ ದೇವಾಲಯಕ್ಕೆ ಕೆಲವು ದತ್ತಿಗಳನ್ನು ಬಿಟ್ಟ ವಿಚಾರವನ್ನು ಈ ಶಾಸನ ತಿಳಿಸುತ್ತದೆ. ಈ ವಿಕ್ರಮಾದಿತ್ಯ ಎಲ್ಲಿಯವರೆಗೆ ಆಳಿದನೆಂಬುದು ತಿಳಿದಿಲ್ಲ. ಬಹುಶಃ ರಾಮಚಂದ್ರ ಮಹಮ್ಮದೀಯರಿಗೆ ಸೋತ ಅನಂತರ ಗುತ್ತರ ವಂಶವೂ ನಾಶವಾಗಿರಬೇಕೆಂದು ಊಹಿಸಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಗುತ್ತರು&oldid=894423" ಇಂದ ಪಡೆಯಲ್ಪಟ್ಟಿದೆ