ವಿಷಯಕ್ಕೆ ಹೋಗು

ಗಂತಿ (ಭೂವಿಜ್ಞಾನ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೆವೋನಿಯನ್ ಗಂತಿಯಂಥ ಸುಣ್ಣದಕಲ್ಲು

ಭೂವಿಜ್ಞಾನದಲ್ಲಿ, ಗಂತಿ ಎಂದರೆ ಅನೇಕ ಪ್ರಸ್ತರ ಶಿಲೆಗಳಲ್ಲಿ ಅವುಗಳ ಮೂಲವಸ್ತು ಶೇಖರವಾದ ಬಳಿಕ ಅಂತರ್ಜಲದ ಚಟುವಟಿಕೆಯಿಂದ ಉತ್ಪನ್ನವಾಗುವ ವಸ್ತುಗಳಲ್ಲಿ ಮುಖ್ಯವಾದ ಮೂರು ವಸ್ತುಗಳಲ್ಲಿ ಒಂದು (ನೋಡ್ಯೂಲ್). ಉಳಿದ ಎರಡು ವಸ್ತುಗಳು ಕಲ್ಲುಂಡೆಗಳು ಮತ್ತು ಜಿಯೋಟ್.

ಗಂತಿಗಳು ಮತ್ತು ಕಲ್ಲುಂಡೆಗಳ ನಡುವಿನ ವ್ಯತ್ಯಾಸ, ಲಕ್ಷಣಗಳು

[ಬದಲಾಯಿಸಿ]

ಗಂತಿಗಳು ಸಾಮಾನ್ಯವಾಗಿ ಅತಿ ಕಠಿನವಾಗಿ, ಕಪ್ಪಾಗಿ, ಮೇಲುಗಡೆ ಮಿನುಗುವ, ನಿಯತ ರೂಪವಿಲ್ಲದೆ ಗಂಟು ಗಂಟಾಗಿರುವ ಖನಿಜ ವಸ್ತುಗಳ ಗೆಡ್ಡೆಗಳು. ಕಲ್ಲುಂಡೆಗಳ ರಚನೆ ಕ್ರಮಬದ್ಧವಾಗಿರುತ್ತದೆ; ಆದರೆ ಗಂತಿಗಳದು ಹಾಗಿರುವುದಿಲ್ಲ. ಸಮಕಾಲೀನ ಗಂತಿಗಳು ವಿಶಾಲವಾದ ಪ್ರದೇಶಗಳಲ್ಲಿ ಸಿಕ್ಕುತ್ತವೆ. ಅವುಗಳಿಂದ ಆ ಶಿಲೆಯನ್ನು ಗುರ್ತಿಸಿ ಅದರ ಕಾಲವನ್ನೂ ನಿರ್ಧರಿಸಬಹುದು. ಕೆಲವು ಸಂದರ್ಭಗಳಲ್ಲಿ ಅಧಿಕ ಮೊತ್ತದಲ್ಲಿ ಅತಿ ಸಮೀಪದಲ್ಲಿ ಶೇಖರವಾಗಿ ಗಂತಿಗಳು ಪದರಗಳನ್ನೇ ನಿರ್ಮಿಸಬಹುದು. ಆಕಾರದಲ್ಲಿ ಇವು ವೃತ್ತ ಅಂಡಬಿಲ್ಲೆಯಂತೆಯೋ ಚಿತ್ರವಿಚಿತ್ರವಾಗಿಯೋ ಇರಬಹುದು. ಗಾತ್ರದಲ್ಲಿ ಕೆಲವು ಅಂಗುಲಗಳಿಂದ ಅನೇಕ ಅಡಿ ಅಥವಾ ಗಜಗಳವರೆಗೂ ಇರಬಹುದು.

ರಾಸಾಯನಿಕ ರಚನೆ, ಕಂಡುಬರುವ ಪ್ರದೇಶಗಳು

[ಬದಲಾಯಿಸಿ]

ರಾಸಾಯನಿಕ ವಸ್ತು ರಚನೆಯಲ್ಲಿ ಗಂತಿಗಳು ತಾವಿರುವ ಶಿಲೆಯಿಂದ ಬೇರೆಯಾಗುತ್ತವೆ. ಸಾಮಾನ್ಯವಾಗಿ ಕೂಡುಗಲ್ಲುಗಳನ್ನು ಬಂಧಿಸುವ ದ್ರವ್ಯಗಳೇ ಗಂತಿಗಳಲ್ಲಿರುತ್ತವೆ. ಉದಾಹರಣೆಗೆ ಸಿಲಿಕ (ಚರ್ಟ್ ಮತ್ತು ಚಕಮಕಿ ಕಲ್ಲು), ಸುಣ್ಣಕಲ್ಲು, ಡಾಲೋಮೈಟ್, ರಂಜಕದ ಅದುರುಗಳು, ಕಬ್ಬಿಣ ಮತ್ತು ಮ್ಯಾಂಗನೀಸ್ ಅದುರುಗಳು ಇತ್ಯಾದಿ. ಚರ್ಟ್ ಗಂತಿಗಳು ಅಪ್ಪಲೇಶಿಯನ್ ಪರ್ವತದ ಕೆಲವು ಸುಣ್ಣಕಲ್ಲುಗಳಲ್ಲಿ ಹೇರಳವಾಗಿವೆ. ಇಂಗ್ಲೆಂಡಿನಲ್ಲಿ ಡೋಮ್ ಬಳಿ ಕ್ರಿಟೇಷಿಸ್ ಯುಗದ ಸೀಮೆಸುಣ್ಣದಲ್ಲಿ ಚಕ್ಕಮಕ್ಕಿ ಕಲ್ಲಿನ ಗಂತಿಗಳಿವೆ ದಕ್ಷಿಣ ಭಾರತದಲ್ಲಿ ತಿರುಚ್ಚರಪಳ್ಳಿ ಜಿಲ್ಲೆಯ ಕ್ರಿಟೇಷಸ್ ಯುಗದ ಮಣ್ಣಿನ ಪದರಗಳಲ್ಲಿ ಗೊಬ್ಬರವನ್ನು ತಯಾರಿಸಲು ಬೇಕಾದ ರಂಜಕದ ಗಂತಿಗಳು (80 ಲಕ್ಷ ಟನ್ ಮೊತ್ತದಲ್ಲಿ) ಸಿಕ್ಕುತ್ತವೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ರಂಜಕದ ಶಿಲೆಗಳೇ ಇವೆ; ಗಂತಿಗಳೂ ಇವೆ. ಚರ್ಟ್ ಗಂತಿಗಳು ಜೀವಿಗಳ ಚಟುವಟಿಕೆಯಿಂದಾದವು. ನಾಲ್ಕು ಕೋಟಿ ಚದರ ಮೈಲಿ ವಿಸ್ತಾರವಾಗಿರುವ ಆಳವಾದ ಸಾಗರದ ತಳದ ಮೇಲೆ ಕೆಂಪುಮಣ್ಣಿನ ಜತೆಗೆ ಮ್ಯಾಂಗನೀಸ್ ಗಂತಿಗಳು ಹೇರಳವಾಗಿ ದೊರೆಯುತ್ತವೆ. ಕ್ರಮೇಣ ಇವು ಅಮೂಲ್ಯವಾದ ಲೋಹದ ಅದರುಗಳೆಂದು ಪರಿಗಣಿತವಾಗಬಹುದು. ಈ ಗಂತಿಗಳು ಎಲೆಯಂತೆ, ಚಿಪ್ಪಿನಂತೆ ಇಲ್ಲವೇ ಮತ್ತಾವ ಜೀವಿಯ ಅಂಗದಂತೆ ಮತ್ತು ಅಪರೂಪವಾಗಿ ಮರಳಿನ ಕಣದ ಸುತ್ತ ಈರುಳ್ಳಿಯಂತೆ ಪದರ ಪದರವಾಗಿ ಬೆಳೆದಿರುತ್ತವೆ. ಮೆದುವಾದ ಶಿಲೆ ನೀರಿನಿಂದ ಕರಗಿ ನಾಶವಾದ ಮೇಲೆ ಗಟ್ಟಿಯಾಗಿರುವ ಗಂತಿಗಳು ಗೋಚರವಾಗುತ್ತವೆ. ಇವನ್ನು ಗಾಲ್ಫ್ ಚಂಡುಗಳೆಂದು ಕರೆಯುವುದುಂಟು.

ಸಾಗರದ ತಳದ ಮೇಲೆ ಮ್ಯಾಂಗನೀಸ್ ಮತ್ತು ಫಾಸ್ಫರೈಟ್ ಗಂತಿಗಳು ರೂಪಗೊಳ್ಳುತ್ತವೆ ಮತ್ತು ಮೂಲದಲ್ಲಿ ಇವು ನಿಕ್ಷೇಪವಾಗುವ ಸಮಯದಲ್ಲೇ ಆಗುತ್ತವೆ. ಹಾಗಾಗಿ, ತಾಂತ್ರಿಕವಾಗಿ ಹೇಳುವುದಾದರೆ, ಅವು ಗಂತಿಗಳ ಬದಲಾಗಿ ಕಲ್ಲುಂಡೆಗಳಾಗಿವೆ.[][]

ಉಲ್ಲೇಖಗಳು

[ಬದಲಾಯಿಸಿ]
  1. Neuendorf, KKE, JP Mehl, Jr., and JA Jackson, eds. (2005) Glossary of Geology (5th ed.). Alexandria, Virginia, American Geological Institute. 779 pp. ISBN 0-922152-76-4
  2. Boggs S, Jr. (2009) Petrology of Sedimentary Rocks. Cambridge University Press, Cambridge, United Kingdom. 600 pp. ISBN 978-0-521-89716-7
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: