ವಿಷಯಕ್ಕೆ ಹೋಗು

ಖ್ಮೆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖ್ಮೆರ್ ಕಾಂಬೋಡಿಯದಲ್ಲಿ (ಕಂಬುಜ ದೇಶ) ವಾಸಿಸುತ್ತಿದ್ದ ಒಂದು ಪ್ರಾಚೀನ ಜನಾಂಗದ ಹೆಸರು. ಸುಮಾರು ಹತ್ತು ಶತಮಾನಗಳ ಹಿಂದೆ ಅಲ್ಲಿಯ ನಿವಾಸಿಗಳು ಆಡುತ್ತಿದ್ದ ಭಾಷೆ ಸಹ ಖ್ಮೆರ್ ಆಗಿದ್ದು ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಪ್ರಚಾರದಲ್ಲಿತ್ತು. ಸ್ಟೇಂಗ್, ಮಾಂಗ್ ಮತ್ತು ಬಹ್ನಾರ್‌ಗಳು ಈ ಭಾಷೆಯ ಪ್ರಭೇದಗಳಾಗಿದ್ದವು. ಖ್ಮೆರ್ ಭಾಷೆಯನ್ನು ವಿಯೆಟ್ನಾಂ ಮತ್ತು ಮುಂಡಭಾಷೆಗಳೊಡನೆ ಸೇರಿಸಿ ಆಸ್ಟ್ರೋ-ಏಷ್ಯಾಟಿಕ್ ಭಾಷೆ ಎಂದು ಈಗಿನ ಭಾಷಾಶಾಸ್ತ್ರಜ್ಞರು ಕರೆದಿದ್ದಾರೆ.

ಕಾಂಬೋಡಿಯದಲ್ಲಿ 9-12ನೆಯ ಶತಮಾನಗಳಲ್ಲಿ ಖ್ಮೆರ್ ಸಂಸ್ಕೃತಿ ಪ್ರಚಾರದಲ್ಲಿತ್ತು. ಸುಖೋದಯ ನಗರದಲ್ಲಿಯ ವಾಟ್‌ಲುವಾಂಗ್‌ನಲ್ಲಿ ಕಂಡುಬಂದ ಮೂರು ಶಿಖರಗಳ ಅವಶೇಷಗಳು 12ನೆಯ ಶತಮಾನದಲ್ಲಿ ಖ್ಮೆರ್ ಶೈಲಿಯಲ್ಲಿ ಕಟ್ಟಲಾದವು. ಈ ದೇಶದಲ್ಲಿ ಫ್ಯೂನಾನ್‌ನ ತುರುವಾಯ ತಲೆ ಎತ್ತಿದ ಸಾಮ್ರಾಜ್ಯವನ್ನು ಖ್ಮೆರ್ ಸಾಮ್ರಾಜ್ಯವೆಂದೂ ಕರೆಯಲಾಗಿದೆ.

ಖ್ಮೆರ್ ಸಾಮ್ರಾಜ್ಯ

[ಬದಲಾಯಿಸಿ]

ಕಂಬುಜ ಅರಸರ ಮೂಲಪುರುಷ ಕಂಬು ಎಂಬ ಒಬ್ಬ ಜ್ಞಾನಿಗೂ, ಮೇರ ಎಂಬ ಒಬ್ಬ ಅಪ್ಸರೆಗೂ ಜನಿಸಿದವನೆಂದು ಹೇಳಿದೆ. ಖ್ಮೆರ್ ಎಂಬ ಹೆಸರು ಮೇರದಿಂದ ಬಂದಿರಬಹುದು.[] ಫ್ಯೂನಾನ್ ಸಂಸ್ಕೃತಿಯ ಅನೇಕ ಅಂಶಗಳನ್ನು ಖ್ಮೆರ್ ಸಂಸ್ಕೃತಿಯಲ್ಲಿ ಕಾಣಬಹುದು.

ರಾಜಧಾನಿ ಯಶೋಧರಪುರವನ್ನು ಕಟ್ಟಿಸಿದವನು ಕಾಂಬೋಡಿಯದಲ್ಲಿ 889 ರಿಂದ 900ರ ವರೆಗೆ ಆಳಿದ ಯಶೋವರ್ಮ.[]: 103 []: 64  11ನೆಯ ಶತಮಾನದ ಪೂರ್ವಾರ್ಧದಲ್ಲಿ ಆಳಿದ ಅರಸನಾದ ಸೂರ್ಯವರ್ಮನ ಕಾಲದಲ್ಲಿ ಖ್ಮೆರ್ ಸಂಸ್ಕೃತಿ ಮತ್ತು ಪ್ರಭಾವಗಳು ಮೇನಾಮ್ ಕಣಿವೆಯಾದ್ಯಂತ ಹಬ್ಬಿದುವು. 12ನೆಯ ಶತಮಾನದ ಮೊದಲರ್ಧದಲ್ಲಿ ಆಳುತ್ತಿದ್ದ ಇಮ್ಮಡಿ ಸೂರ್ಯವರ್ಮ ಅನೇಕ ದಂಡಯಾತ್ರೆಗಳನ್ನು ಕೈಗೊಂಡ. ಇವನ ಬಳಿಕ ಖ್ಮೆರ್ ಅರಸರ ಪ್ರಾಬಲ್ಯ ಇಳಿಮುಖವಾಗಿ ಕೊನೆಗೆ ನಶಿಸಿತು.

ಖ್ಮೆರ್ ಸಂಸ್ಕೃತಿ

[ಬದಲಾಯಿಸಿ]

ಖ್ಮೆರ್ ಶಾಸನಗಳಿಂದಸಂಸ್ಕೃತಿಗೆ ಸಂಬಂಧಿಸಿದ ಕೆಲವು ವಿಶಿಷ್ಟ ಅಂಶಗಳು ವ್ಯಕ್ತವಾಗುತ್ತವೆ. ಅವರ ಅರಸನನ್ನು ಪೃಥ್ವಿಗೆ ಬಂದು ನೆಲಸಿದ ಒಬ್ಬ ದೇವತೆ ಎಂದು ಗಣಿಸಲಾಗುತ್ತಿತ್ತು. ಅವನ ರಾಜಧಾನಿ ಒಂದು ಸಣ್ಣ ಜಗತ್ತೆಂಬಂತೆ ಕಂಗೊಳಿಸುತ್ತಿತ್ತು. ಅದೊಂದು ದೇವಗಿರಿ, ಮೇರು ಪರ್ವತದಂತೆ. ಪ್ರತಿಯೊಬ್ಬ ರಾಜನೂ ಅಲ್ಲಿ ತನ್ನದೇ ಆದ ಅರಮನೆಯನ್ನು ಕಟ್ಟಿಸುತ್ತಿದ್ದ. ಅವನ ಮರಣಾನಂತರ ಅದೊಂದು ಸಮಾಧಿಭವನವಾಗುತ್ತಿತ್ತು. ರಾಜ್ಯದ ರಾಜಕೀಯ ಆಡಳಿತ ವ್ಯವಸ್ಥೆಗಳೆಲ್ಲ ರಾಜನನ್ನು ಅವಲಂಬಿಸಿದ್ದುವು. ಆತನೇ ದುಷ್ಟಶಿಕ್ಷಕ, ಶಿಷ್ಟರಕ್ಷಕ. ಸಮಾಜದಲ್ಲಿ ಪ್ರಜೆಗಳನ್ನು ಅವರ ಅನುವಂಶಿಕ ವೃತ್ತಿಗನುಗುಣವಾಗಿ ವಿಂಗಡಿಸಲಾಗಿತ್ತು. ಪ್ರತಿಯೊಬ್ಬನೂ ಈ ವ್ಯವಸ್ಥೆಯನ್ನು ಚಾಚೂ ತಪ್ಪದೆ ಗೌರವಿಸಬೇಕಾಗಿತ್ತು. ರಾಜ್ಯದಲ್ಲಿ ವ್ಯವಸಾಯಕ್ಕೆ ಅನುಕೂಲವಾಗುವಂತೆ ಅನೇಕ ಕಾಲುವೆಗಳನ್ನೂ ಕೆರೆಗಳನ್ನೂ ತೋಡಿಸಿದ್ದು ಖ್ಮೆರ್ ಅರಸರ ಕೊಡುಗೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ನೆಮ್ಮದಿ ನೆಲೆಸಿತ್ತು. ಅಂಗ್ಕೋರ್ ವಾಟ್ ಮುಂತಾದ ಅನೇಕ ವಾಸ್ತುಶಿಲ್ಪ ಕೃತಿಗಳಿಗೆ ಪ್ರೋತ್ಸಾಹ ದೊರಕಿತು.

ಉಲ್ಲೇಖಗಳು

[ಬದಲಾಯಿಸಿ]
  1. D'après l'épigraphie cambodgienne du X° siècle, les rois des "Kambuja" prétendaient descendre d'un ancêtre mythique éponyme, le sage ermite Kambu, et de la nymphe céleste Mera, dont le nom a pu être forgé d'après l'appellation ethnique "khmèr" (George Coedes). [2][permanent dead link]; See also: Indianised States of Southeast Asia, 1968, p 66, George Coedes.
  2. Coedès, George (1968). Walter F. Vella (ed.). The Indianized States of Southeast Asia. trans.Susan Brown Cowing. University of Hawaii Press. ISBN 978-0-8248-0368-1.
  3. Higham, C., 2001, The Civilization of Angkor, London: Weidenfeld & Nicolson, ISBN 9781842125847
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖ್ಮೆರ್&oldid=1258276" ಇಂದ ಪಡೆಯಲ್ಪಟ್ಟಿದೆ