ವಿಷಯಕ್ಕೆ ಹೋಗು

ಖಗೋಳ ವಿಷುವದ್ವೃತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಗೋಳ ವಿಷುವದ್ವೃತ್ತವು ಸದ್ಯದಲ್ಲಿ ಕ್ರಾಂತಿವೃತ್ತ ಸಮತಲಕ್ಕೆ ಸುಮಾರು 23.44° ನಷ್ಟು ಓರೆಯಾಗಿದೆ. ಈ ಚಿತ್ರವು ಭೂಮಿಯ ಅಕ್ಷೀಯ ಓರೆ (ಅಥವಾ ವಾಲಿಕೆ), ಪರಿಭ್ರಮಣದ ಅಕ್ಷ, ಮತ್ತು ಕಕ್ಷೀಯ ಸಮತಲಗಳ ನಡುವಿನ ಸಂಬಂಧಗಳನ್ನು ತೋರಿಸುತ್ತದೆ.

ಖಗೋಳ ವಿಷುವದ್ವೃತ್ತವು ಖಗೋಳವನ್ನು ಸಮದ್ವಿಭಾಗಿಸುವ ಕಾಲ್ಪನಿಕ ವೃತ್ತ, ವೀಕ್ಷಕನ ನೆಲೆಯೇ ಇದರ ಕೇಂದ್ರ (ಸೆಲೆಸ್ಟಿಯಲ್ ಇಕ್ವೇಟರ್). ವೀಕ್ಷಕನನ್ನು (ವಾಸ್ತವವಾಗಿ ಸಾಕ್ಷಾತ್ ಭೂಮಿಯನ್ನೇ) ಧ್ರುವನಕ್ಷತ್ರಕ್ಕೆ ಸೇರಿಸುವ ರೇಖೆಗೆ ಖಗೋಳದ ಅಕ್ಷವೆಂದು (celestial axis) ಹೆಸರು. ಖಗೋಳ ಇದರ ಸುತ್ತ ಏಕವೇಗದಿಂದ ಪೂರ್ವ-ಪಶ್ಚಿಮ ದಿಶೆಯಲ್ಲಿ ಆವರ್ತಿಸುತ್ತಿರುವಂತೆ ನಮಗೆ ಭಾಸವಾಗುತ್ತದೆ. ಅಕ್ಷಕ್ಕೆ ವೀಕ್ಷಕನ (ಭೂಮಿಯ) ಮೂಲಕ ಲಂಬವಾಗಿ ರಚಿಸಿದ ಕಾಲ್ಪನಿಕ ಸಮತಲ ಖಗೋಳವನ್ನು ವಿಷುವದ್ವೃತ್ತದ ನೇರ ಛೇದಿಸುತ್ತದೆ. ಇದು ಖಗೋಳವನ್ನು ಎರಡು ಸಮಭಾಗಗಳಾಗಿ ವಿಭಾಗಿಸುವುದು: ಧ್ರುವನಕ್ಷತ್ರವಿರುವ ಭಾಗ ಉತ್ತರ ಗೋಳಾರ್ಧ, ಇರದ ಭಾಗ ದಕ್ಷಿಣ ಗೋಳಾರ್ಧ.

ಪ್ರತಿ ವರ್ಷ ಮಾರ್ಚ್ 21/22 ಮತ್ತು ಸೆಪ್ಟೆಂಬರ್ 22/23 ದಿನಾಂಕಗಳಂದು ಸೂರ್ಯನ ದೈನಂದಿನ ಪಥ ಖಗೋಳ ವಿಷುವದ್ವೃತ್ತ. ಇದು ಆಕಾಶಕಾಯಗಳ ಸ್ಥಾನ ಮತ್ತು ಚಲನೆಗಳನ್ನು ಗಣಿತೀಯವಾಗಿ ಸೂಚಿಸಲು ಪ್ರಮುಖ ಆಧಾರತಲ. ಇದರ ಮೇಲೆ ಮತ್ತು ಆಸುಪಾಸಿನಲ್ಲಿ ಗೋಚರಿಸುವ ನಕ್ಷತ್ರಗಳ ನೆರವಿನಿಂದ ವಿಷುವದ್ವೃತ್ತದ ಸ್ಥೂಲನೆಲೆಯನ್ನು ಅರಿಯಬಹುದು.

ಭೂಮಿಯ ಅಕ್ಷೀಯ ಓರೆಯ ಕಾರಣದಿಂದ, ಖಗೋಳ ವಿಷುವದ್ವೃತ್ತವು ಸದ್ಯದಲ್ಲಿ ಕ್ರಾಂತಿವೃತ್ತಕ್ಕೆ (ಭೂಮಿಯ ಕಕ್ಷೆಯ ಸಮತಲ) ಸುಮಾರು 23.44° ನಷ್ಟು ಓರೆಯಾಗಿದೆ. ಆದರೆ ಕಳೆದ ೫ ದಶಲಕ್ಷ ವರ್ಷಗಳಲ್ಲಿ ಸುಮಾರು 22.0° ರಿಂದ 24.5° ಗೆ ಬದಲಾಗಿದೆ, ಇತರ ಗ್ರಹಗಳಿಂದ ಅಲ್ಪ ವಿಪಥನದ ಕಾರಣ.[]

ಉಲ್ಲೇಖಗಳು

[ಬದಲಾಯಿಸಿ]
  1. Berger, A.L. (1976). "Obliquity and Precession for the Last 5000000 Years". Astronomy and Astrophysics. 51 (1): 127–135. Bibcode:1976A&A....51..127B.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: