ಕೋಯಿ... ಮಿಲ್ ಗಯಾ (ಚಲನಚಿತ್ರ)
ಕೋಯಿ... ಮಿಲ್ ಗಯಾ | |
---|---|
ನಿರ್ದೇಶನ | ರಾಕೇಶ್ ರೋಶನ್ |
ನಿರ್ಮಾಪಕ | ರಾಕೇಶ್ ರೋಶನ್ |
ಚಿತ್ರಕಥೆ | ಶಾ ಆರಿಫ಼್ (ಸಂಭಾಷಣೆ) ಸಚಿನ್ ಭೌಮಿಕ್ ರಾಕೇಶ್ ರೋಶನ್ ಹನಿ ಇರಾನಿ ರಾಬಿನ್ ಭಟ್ |
ಕಥೆ | ರಾಕೇಶ್ ರೋಶನ್ |
ಪಾತ್ರವರ್ಗ | ಹೃತಿಕ್ ರೋಶನ್ ಪ್ರೀತಿ ಜ಼ಿಂಟಾ ರೇಖಾ ರಜತ್ ಬೇದಿ ಜಾನಿ ಲೀವರ್ ಪ್ರೇಮ್ ಚೋಪ್ರಾ |
ಸಂಗೀತ | ರಾಜೇಶ್ ರೋಶನ್ |
ಛಾಯಾಗ್ರಹಣ | ಸಮೀರ್ ಆರ್ಯ ರವಿ ಕೆ. ಚಂದ್ರನ್ |
ಸಂಕಲನ | ಸಂಜಯ್ ವರ್ಮಾ |
ಸ್ಟುಡಿಯೋ | ಫ಼ಿಲ್ಮ್ಕ್ರಾಫ಼್ಟ್ ಪ್ರೊಡಕ್ಷನ್ಸ್ ಪ್ರೈ. ಲಿ |
ವಿತರಕರು | ಫ಼ಿಲ್ಮ್ಕ್ರಾಫ಼್ಟ್ ಪ್ರೊಡಕ್ಷನ್ಸ್ ಪ್ರೈ. ಲಿ (ಭಾರತ) ಯಶ್ ರಾಜ್ ಫ಼ಿಲ್ಮ್ಸ್ (ವಿಶ್ವವ್ಯಾಪಿ) |
ಬಿಡುಗಡೆಯಾಗಿದ್ದು |
|
ಅವಧಿ | 166 ನಿಮಿಷಗಳು |
ದೇಶ | ಭಾರತ |
ಭಾಷೆ | ಹಿಂದಿ |
ಬಂಡವಾಳ | ₹30 ಕೋಟಿ[೧] |
ಬಾಕ್ಸ್ ಆಫೀಸ್ | ಅಂದಾಜು ₹82.33 ಕೋಟಿ[೨] |
ಕೋಯಿ... ಮಿಲ್ ಗಯಾ (ಅನುವಾದ: ಯಾರೋ... ಸಿಕ್ಕರು) ೨೦೦೩ರ ಒಂದು ಹಿಂದಿ ವೈಜ್ಞಾನಿಕ ಕಲ್ಪನಾಪ್ರಧಾನ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ನಿರ್ದೇಶಿಸಿದ್ದಾರೆ. ಇದು ಕ್ರಿಶ್ ಸರಣಿಯಯಲ್ಲಿನ ಮೊದಲ ಕಂತಾಗಿದೆ. ಈ ಚಿತ್ರವು ೮ ಆಗಸ್ಟ್ ೨೦೦೩ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ ಪ್ರೀತಿ ಜಿಂಟಾ ಮತ್ತು ರೇಖಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕೋಯಿ... ಮಿಲ್ ಗಯಾ ಇತರ ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು ಮತ್ತು ಇದು ಜೆರೂಸೆಲಮ್ ಚಲನಚಿತ್ರೋತ್ಸವ ಹಾಗೂ ಡೆನ್ಮಾರ್ಕ್‌ನ ನ್ಯಾಟ್‍ಫ಼ಿಲ್ಮ್ ಉತ್ಸವದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಗಳು, ಐಫ಼ಾ ಪ್ರಶಸ್ತಿಗಳು ಮತ್ತು ಸ್ಕ್ರೀನ್ ಪ್ರಶಸ್ತಿಗಳು ಸೇರಿದಂತೆ ವಿವಿಧ ಮುಖ್ಯ ಬಾಲಿವುಡ್ ಪ್ರಶಸ್ತಿ ಸಮಾರಂಭಗಳಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ (ರಾಕೇಶ್ ರೋಶನ್) ಮತ್ತು ಅತ್ಯುತ್ತಮ ನಟ (ಹೃತಿಕ ರೋಶನ್) ಪ್ರಶಸ್ತಿಗಳನ್ನು ಗೆದ್ದಿತು. ಈ ಚಿತ್ರದ ಉತ್ತರಭಾಗಗಳೆಂದರೆ ಕ್ರಿಶ್ ಹಾಗೂ ಕ್ರಿಶ್ ೩. ಹಾಗಾಗಿ ಇದು ಕ್ರಿಶ್ ಚಿತ್ರತ್ರಯದಲ್ಲಿ ಮೊದಲನೆಯದಾಗಿತ್ತು. ಚಿತ್ರದ ವಿಷಯವು ೧೯೮೨ರ ಹಾಲಿವುಡ್ ಹಿಟ್ ಚಿತ್ರ ಇ. ಟಿ. ಎಕ್ಸ್‌ಟ್ರಾ-ಟೆರೆಸ್ಟ್ರಿಯಲ್‍ಗೆ[೩] ಮತ್ತು ಸತ್ಯಜಿತ್ ರೇರ ದಿ ಏಲಿಯನ್ ಚಿತ್ರಗಳೊಂದಿಗೆ ಹೋಲಿಕೆ ಹೊಂದಿದೆ.[೪]
ಕಥಾವಸ್ತು
[ಬದಲಾಯಿಸಿ]ವಿಜ್ಞಾನಿ ಸಂಜಯ್ ಮೆಹ್ರಾ (ರಾಕೇಶ್ ರೋಶನ್) ಒಂದು ಕಂಪ್ಯೂಟರ್‌ನ್ನು ಸೃಷ್ಟಿಸಿ ಭೂಮ್ಯತೀತ ಜೀವಿಗಳನ್ನು ಆಕರ್ಷಿಸುವ ವಿಶ್ವಾಸದಿಂದ ಅದರಿಂದ ಓಂ ಉಚ್ಛಾರಾಂಶದ ಮಾರ್ಪಾಡುಗಳನ್ನು ಬಾಹ್ಯಾಕಾಶದಲ್ಲಿ ಕಳಿಸುತ್ತಾನೆ. ಅಂತಿಮವಾಗಿ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇನೆಂದು ಅವನು ನಂಬಿದಾಗ, ವಿಜ್ಞಾನ ಸಮುದಾಯವು ಅವನನ್ನು ಅಪಹಾಸ್ಯ ಮಾಡುತ್ತದೆ. ಮನೆಗೆ ಹೋಗುತ್ತಿರುವಾಗ, ಅನ್ಯಜೀವಿಗಳ ಬಾಹ್ಯಾಕಾಶ ನೌಕೆಯೊಂದು ಆಕಾಶದಲ್ಲಿ ಕಾಣಿಸಿಕೊಳ್ಳುತ್ತದೆ. ಚಿತ್ತವಿಕ್ಷೇಪಗೊಂಡು, ಸಂಜಯ್ ರಸ್ತೆಯ ಆಚೆಗೆ ವಾಹನವನ್ನು ಚಲಿಸಿದಾಗ ಕಾರು ಸ್ಫೋಟಗೊಂಡು ಅವನು ಸಾಯುತ್ತಾನೆ. ಅವನ ಗರ್ಭಿಣಿ ಹೆಂಡತಿ ಸೋನಿಯ ಉಳಿದುಕೊಂಡು ಭಾರತಕ್ಕೆ ವಾಪಸಾಗುತ್ತಾಳೆ. ಅವರ ಮಗ ರೋಹಿತ್ ಮೆಹ್ರಾ (ಹೃತಿಕ್ ರೋಶನ್) ಹುಟ್ಟಿದಾಗ, ಅವನು ಭ್ರೂಣವಾಗಿದ್ದಾಗ ಆದ ಅಪಘಾತದಲ್ಲಿ ಉಂಟಾದ ಗಾಯದ ಕಾರಣ ಮಾನಸಿಕವಾಗಿ ಅಂಗವಿಕಲನಾಗಿರುತ್ತಾನೆ. ರೋಹಿತ್‍ನ ಅಂಗವಿಕಲತೆಗೆ ಶಸ್ತ್ರಚಿಕಿತ್ಸೆಯು ಏಕೈಕ ಪರಿಹಾರವೆಂದು ಸೋನಿಯಾಗೆ ತಿಳಿಯುತ್ತದೆ, ಆದರೆ ಅದರಿಂದ ಪಾರ್ಶ್ವವಾಯು ಅಥವಾ ಸಾವು ಉಂಟಾಗಬಹುದಾಗಿರುತ್ತದೆ. ತನ್ನ ಉಳಿದಿರುವ ಏಕೈಕ ಸಂಬಂಧಿಕನನ್ನು ಕಳೆದುಕೊಳ್ಳಲು ಬಯಸದ ಅವಳು ಅವನನ್ನು ಕಸೌಲಿ ಪಟ್ಟಣದಲ್ಲಿ ಬೆಳೆಸುತ್ತಾಳೆ. ಅವನು ಸೀಮಿತ ಬುದ್ಧಿಶಕ್ತಿಯ ವ್ಯಕ್ತಿಯಾಗಿ ಬೆಳೆಯುತ್ತಾನೆ.
ಒಬ್ಬ ಯುವತಿ ನಿಶಾ ಮಲ್ಹೋತ್ರಾ (ಪ್ರೀತಿ ಜ಼ಿಂಟಾ) ಕಸೌಲಿಗೆ ಬರುತ್ತಾಳೆ. ಆರಂಭದಲ್ಲಿ, ರೋಹಿತ್‍ನ ಬಾಲಿಶ ಚೇಷ್ಟೆಗಳ ಕಾರಣ ಅವನ ವಿರುದ್ಧವಾಗಿರುತ್ತಾಳೆ. ಇದರಿಂದ ಅವಳ ಗೆಳೆಯ ರಾಜ್ (ರಜತ್ ಬೇದಿ) ಮತ್ತು ಅವನ ಸ್ನೇಹಿತರು ರೋಹಿತ್ ಮೇಲೆ ಆಕ್ರಮಣ ಮಾಡಿ ಅವನ ಸ್ಕೂಟರ್‌ನ್ನು ಮುರಿದು ಹಾಕುತ್ತಾರೆ. ರೋಹಿತ್ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅವನ ತಾಯಿ ನಿಶಾ ಮತ್ತು ರಾಜ್‍ರನ್ನು ಶಿಕ್ಷಿಸುತ್ತಾಳೆ. ತನ್ನ ತಪ್ಪಿನ ಅರಿವಾಗಿ, ನಿಶಾ ರೋಹಿತ್‍ಗೆ ಹೊಸ ಸೈಕಲ್‍ನ್ನು ಉಡುಗೊರೆಯಾಗಿ ನೀಡಿ ಅವನನ್ನು ತನ್ನ ತಂದೆತಾಯಿಯರಿಗೆ ಪರಿಚಯಿಸುತ್ತಾಳೆ. ಅವರು ಕೂಡ ಸಹಾನುಭೂತಿ ತೋರಿಸುತ್ತಾರೆ.
ಈಗ ಒಳ್ಳೆ ಸ್ನೇಹಿತರಾಗಿರುವ ರೋಹಿತ್ ಮತ್ತು ನಿಶಾಗೆ ಸಂಜಯ್‍ನ ಹಳೆಯ 'ಓಂ' ಕಂಪ್ಯೂಟರ್ ಸಿಗುತ್ತದೆ. ರೋಹಿತ್ ಅನುದ್ದಿಷ್ಟವಾಗಿ ಅನ್ಯಗ್ರಹ ಜೀವಿಗಳನ್ನು ಕರೆಯುತ್ತಾನೆ. ಭೇಟಿಕೊಡುವ ಅನ್ಯಗ್ರಹಜೀವಿಗಳು ಅವಸರದಲ್ಲಿ ಹೊರಡುತ್ತಾರೆ, ಆದರೆ ಒಬ್ಬನನ್ನು ಹಿಂದೆ ಬಿಡುತ್ತಾರೆ. ರೋಹಿತ್, ನಿಶಾ ಮತ್ತು ರೋಹಿತ್‍ನ ಯುವ ಸ್ನೇಹಿತರು ಆ ಅನ್ಯಗ್ರಹ ಜೀವಿಯನ್ನು ಪತ್ತೆಹಚ್ಚಿ ಅದರ ಸ್ನೇಹಬೆಳೆಸಿ ಅದಕ್ಕೆ ಜಾದೂ ಎಂದು ಹೆಸರಿಟ್ಟು ಅದರ ಮನಶ್ಚಾಲನಾ ಸಾಮರ್ಥ್ಯಗಳನ್ನು ಅರಿಯುತ್ತಾರೆ. ರಾಜ್‍ನಿಗೆ ನಿಶಾ ಮತ್ತು ರೋಹಿತ್‍ನ ಗೆಳೆತನ ಇಷ್ಟವಾಗುವುದಿಲ್ಲ. ಹಾಗಾಗಿ ಅವನನ್ನು ಅಣಕಿಸಿ ಅವನು ಮತ್ತು ನಿಶಾ ಮದುವೆಯಾಗಲಿದ್ದಾರೆ ಎಂದು ಸುಳ್ಳು ವದಂತಿಯನ್ನು ಹರಡುತ್ತಾನೆ. ಇದರಿಂದ ನಿಶಾ ಮತ್ತು ರೋಹಿತ್‍ರನ್ನು ಅಸಂತೋಷಗೊಳಿಸುತ್ತದೆ, ವಿಶೇಷವಾಗಿ ರೋಹಿತ್‍ಗೆ ನೋವಾಗುತ್ತದೆ ಏಕೆಂದರೆ ಅವನು ನಿಶಾ ತನ್ನ ಗೆಳತಿಯಾಗಿದ್ದಾಳೆ ಎಂದು ಎಣಿಸಿರುತ್ತಾನೆ.
ರೋಹಿತ್ ಮಾನಸಿಕವಾಗಿ ವಿಕೃತನೆಂದು ಜಾದೂಗೆ ಗೊತ್ತಾಗಿ ಸೂರ್ಯನ ಬೆಳಕಿನಿಂದ ಪಡೆದ ತನ್ನ ಶಕ್ತಿಗಳನ್ನು ಬಳಸಿ ರೋಹಿತ್‍ನ ಮನಸ್ಸನ್ನು ವರ್ಧಿಸುತ್ತದೆ. ಮರುದಿನ ಮುಂಜಾನೆ, ತನಗೆ ಸ್ಪಷ್ಟ ದೃಷ್ಟಿ ಬಂದಿದೆ ಎಂದು ರೋಹಿತ್‍ಗೆ ಗೊತ್ತಾಗುತ್ತದೆ; ನಂತರ ಅವನು ೧೦ನೇ ತರಗತಿಯ ಗಣಿತದ ಸಮಸ್ಯೆಯನ್ನು ಬಿಡಿಸಿ ತನ್ನ ಗಣಿತದ ಶಿಕ್ಷಕ ಮತ್ತು ಪ್ರಾಂಶುಪಾಲರನ್ನು ಆಶ್ಚರ್ಯಗೊಳಿಸುತ್ತಾನೆ. ನಂತರ ತನ್ನನ್ನು ಅಪಮಾನಿಸಿದ್ದಕ್ಕಾಗಿ ಮತ್ತು ಶಿಕ್ಷಕನಾಗಿರುವ ಜವಾಬ್ದಾರಿಗಳನ್ನು ತಿಳಿಸಿಕೊಡಲು ತನ್ನ ಕಂಪ್ಯೂಟರ್ ಶಿಕ್ಷಕನಿಗೆ ಬುದ್ಧಿಹೇಳುತ್ತಾನೆ. ಪರಿಣಾಮವಾಗಿ, ಶಾಲೆಯಲ್ಲಿ ಬಹುತೇಕ ಜನ ಅವನನ್ನು ಸ್ವೀಕರಿಸುತ್ತಾರೆ.
ರೋಹಿತ್‍ನ ದೈಹಿಕ ಸಾಮರ್ಥ್ಯಗಳೂ ಅತಿಮಾನುಷ ಮಟ್ಟಕ್ಕೆ ಹೆಚ್ಚಾಗುತ್ತವೆ. ನಂತರ, ರಾಜ್ ರೋಹಿತ್ ಮತ್ತು ಅವನ ಗೆಳೆಯರಿಗೆ ಬಾಸ್ಕೆಟ್‍ಬಾಲ್ ಪಂದ್ಯವನ್ನು ಆಡುವಂತೆ ಸವಾಲು ಹಾಕುತ್ತಾನೆ. ಪಂದ್ಯದಲ್ಲಿ ರೋಹಿತ್ ತನ್ನ ಹೊಸ ಮೈಕಟ್ಟನ್ನು ಬಳಸಿ ಹಲವಾರು ಅಂಕಗಳನ್ನು ಗಳಿಸುತ್ತಾನೆ. ಹಾಗಾಗಿ ರಾಜ್ ಮತ್ತು ಅವನ ತಂಡ ಪಂದ್ಯವನ್ನು ಗೆಲ್ಲಲು ಮೋಸಮಾಡಲು ಆರಂಭಿಸುತ್ತಾರೆ. ಸೂರ್ಯನು ಹೊರಗೆ ಬಂದ ಮೇಲೆ, ಜಾದೂ ರೋಹಿತ್ ಮತ್ತು ಅವನ ಗೆಳೆಯರು ಪಂದ್ಯವನ್ನು ಗೆಲ್ಲುವುದಕ್ಕೆ ನೆರವಾಗುತ್ತಾನೆ. ಈಗ ಬದಲಾಗಿರುವ ರೋಹಿತ್ ನಿಶಾ ಮತ್ತು ಅವಳ ತಂದೆತಾಯಿಯನ್ನು ಭೇಟಿಯಾಗಿ ಅವಳನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಾನೆ. ಅದನ್ನು ನಿಶಾ ಈಗ ಒಪ್ಪಿಕೊಳ್ಳುತ್ತಾಳೆ.
ನಂತರ, ಬಾಸ್ಕೆಟ್‍ಬಾಲ್ ಪಂದ್ಯದಲ್ಲಿ ಅವರ ಅತಿಮಾನುಷ ಪ್ರದರ್ಶನದ ವಿಷಯವಾಗಿ ರಾಜ್ ಮತ್ತು ಅವನ ಸ್ನೇಹಿತರು ರೋಹಿತ್‍ನ ಗೆಳೆಯರನ್ನು ಸಂಕಟಕ್ಕೆ ಸಿಕ್ಕಿಸುತ್ತಾರೆ. ರೋಹಿತ್‍ನ ಗೆಳೆಯರು ಪಲಾಯನ ಮಾಡಬೇಕಾಗುತ್ತದೆ ಮತ್ತು ಜಾದೂ ಆಕಸ್ಮಿಕವಾಗಿ ಅವರ ಹಿಡಿತದಿಂದ ಕೈತಪ್ಪುತ್ತಾನೆ. ಇನ್‍ಸ್ಪೆಕ್ಟರ್ ಸುಖ್ವಾನಿ (ಜಾನಿ ಲೀವರ್) ಚೀಲದಲ್ಲಿ ಜಾದೂವನ್ನು ನೋಡಿ ಅಧಿಕಾರಿಗಳಿಗೆ ತಿಳಿಸುತ್ತಾನೆ. ಪೋಲೀಸರು ಚೀಲವನ್ನು ವಶಪಡಿಸಿಕೊಳ್ಳುತ್ತಾರೆ, ಆದರೆ ಜಾದೂವನ್ನು ರಕ್ಷಿಸಲು ಸಮಯಕ್ಕೆ ಸರಿಯಾಗಿ ರೋಹಿತ್ ಬರುತ್ತಾನೆ. ನಂತರ ಅವನ ಎದುರಿಗೆ ರಾಜ್ ಮತ್ತು ಅವನ ಗೆಳೆಯರು ಬರುತ್ತಾರೆ. ಈಗ ಸಿಟ್ಟಾಗಿರುವ ರೋಹಿತ್ ರಾಜ್ ಮತ್ತು ಅವನ ಗೆಳೆಯರನ್ನು ಸುಲಭವಾಗಿ ಮಣಿಸುತ್ತಾನೆ ಆದರೆ ಅಷ್ಟರಲ್ಲಿ ಪೋಲೀಸರು ಅವನನ್ನು ತಲುಪುತ್ತಾರೆ. ಜಾದೂ ಚೀಲದಲ್ಲಿರಲಿಲ್ಲ ಮತ್ತು ಸುಖ್ವಾನಿ ಪೋಲೀಸರಿಗೆ ಕರೆಮಾಡುವಲ್ಲಿ ಮಗ್ನನಾಗಿದ್ದಾಗ ತಪ್ಪಿಸಿಕೊಂಡಿತ್ತು ಎಂದು ನಂತರ ತಿಳಿಯುತ್ತದೆ.
ಆದರೆ, ಪೋಲೀಸರು ರೋಹಿತ್ ಬಗ್ಗೆ ಸಂಶಯ ಹೊಂದಿ ಅವನನ್ನು ಅವನ ಮನೆಯಲ್ಲಿ ಸಂಧಿಸುತ್ತಾರೆ. ಅವರು ರೋಹಿತ್‍ನಿಗೆ ಹೊಡೆದು ಜಾದೂವನ್ನು ತೆಗೆದುಕೊಂಡು ಹೋಗುತ್ತಾರೆ. ಅವನಿಗೆ ಮರಳಿ ಪ್ರಜ್ಞೆ ಬಂದಾಗ, ರೋಹಿತ್ ತನ್ನ ಅತಿ ವೇಗವನ್ನು ಬಳಸಿ ಪೋಲಿಸ್ ಕಾರುಗಳನ್ನು ಮುಟ್ಟಿ ಮತ್ತು ಸಮಯಕ್ಕೆ ಸರಿಯಾಗಿ ಬಂದು ಜಾದೂವನ್ನು ಅಮೇರಿಕಕ್ಕೆ ಕಳಿಸುವುದನ್ನು ತಡೆಯುತ್ತಾನೆ. ಹಿಂದೆ ತನ್ನ ತಂದೆಯ ಕಂಪ್ಯೂಟರ್‌ನ್ನು ಬಳಸಿ ಕರೆಸಿದ್ದ ಬಾಹ್ಯಾಕಾಶ ನೌಕೆಯು ಮತ್ತೆ ಆಗಮಿಸುತ್ತದೆ. ರೋಹಿತ್ ಜಾದೂಗೆ ದುಃಖದಿಂದ ವಿದಾಯ ಹೇಳುತ್ತಾನೆ. ಜಾದೂ ಹೊರಡುತ್ತಿರುವಂತೆ, ರೋಹಿತ್ ತನ್ನ ಶಕ್ತಿಗಳನ್ನು ಕಳೆದುಕೊಂಡು ತನ್ನ ಅಂಗವಿಕಲ ಸ್ಥಿತಿಗೆ ಮರಳುತ್ತಾನೆ. ಇದು ಭಾರತ ಸರ್ಕಾರವು ಅವನ ಮೇಲೆ ಕಾನೂನುಕ್ರಮ ಕೈಗೊಳ್ಳದಂತೆ ಮಾಡುತ್ತದೆ. ಸರ್ಕಾರವು ಅವನ ಕಾರ್ಯಗಳಿಗೆ ಅವನನ್ನು ಸನ್ಮಾನಿಸುತ್ತದೆ.
ಎಲ್ಲವೂ ಶಾಂತವಾದ ಮೇಲೆ, ರೋಹಿತ್‍ಗೆ ಕಿರುಕುಳ ನೀಡಲು ರಾಜ್ ಮತ್ತು ಅವನ ಸ್ನೇಹಿತರು ಬಂದು ಒಂದು ಚೆಂಡನ್ನು ತಮ್ಮತ್ತ ಒದೆಯುವಂತೆ ಸವಾಲು ಹಾಕುತ್ತಾರೆ. ಜಾದೂ ರೋಹಿತ್‍ನ ಶಕ್ತಿಗಳನ್ನು ಶಾಶ್ವತವಾಗಿ ಮರಳಿಸುತ್ತಿದ್ದಂತೆ, ಕೋಪಗೊಂಡ ರೋಹಿತ್ ಚೆಂಡನ್ನು ಪೀಡಕನ ಮುಖಕ್ಕೆ ಒದೆಯುತ್ತಾನೆ. ರೋಹಿತ್ ಮತ್ತು ನಿಶಾ ಜಾದೂಗೆ ವಂದನೆ ಹೇಳಿ ಮದುವೆಯಾಗುತ್ತಾರೆ. ನಿಶಾ ರೋಹಿತ್‍ನ ಮಗನಾದ ಕೃಷ್ಣ ಮೆಹ್ರಾಗೆ ಜನ್ಮನೀಡುತ್ತಾಳೆ ಮತ್ತು ಮುಂದೆ ಶಾಂತಿಯುತ ಜೀವನವನ್ನು ಕಳೆಯುತ್ತಾರೆ.
ಪಾತ್ರವರ್ಗ
[ಬದಲಾಯಿಸಿ]- ರೋಹಿತ್ ಮೆಹ್ರಾ ಪಾತ್ರದಲ್ಲಿ ಹೃತಿಕ್ ರೋಶನ್
- ನಿಶಾ ಮಲ್ಹೋತ್ರಾ ಪಾತ್ರದಲ್ಲಿ ಪ್ರೀತಿ ಜ಼ಿಂಟಾ
- ಸೋನಿಯಾ ಮೆಹ್ರಾ ಪಾತ್ರದಲ್ಲಿ ರೇಖಾ
- ಹರ್ಬನ್ಸ್ ಸಕ್ಸೇನಾ ಪಾತ್ರದಲ್ಲಿ ಪ್ರೇಮ್ ಚೋಪ್ರಾ
- ರಾಜ್ ಸಕ್ಸೇನಾ ಪಾತ್ರದಲ್ಲಿ ರಜತ್ ಬೇದಿ
- ಮಿ. ಮಲ್ಹೋತ್ರಾ ಪಾತ್ರದಲ್ಲಿ ರಾಜೀವ್ ವರ್ಮಾ
- ಚೇಲಾರಾಮ್ ಸುಖ್ವಾನಿ ಪಾತ್ರದಲ್ಲಿ ಜಾನಿ ಲಿವರ್
- ಇನ್‍ಸ್ಪೆಕ್ಟರ್ ಖುರ್ಷೀದ್ ಖಾನ್ ಪಾತ್ರದಲ್ಲಿ ಮುಕೇಶ್ ರಿಶಿ
- ಮಿ. ಮಾಥುರ್ ಪಾತ್ರದಲ್ಲಿ ಮಿಥಿಲೇಶ್ ಚತುರ್ವೇದಿ
- ಸಂಜಯ್ ಮೆಹ್ರಾ ಪಾತ್ರದಲ್ಲಿ ರಾಕೇಶ್ ರೋಶನ್
- ಶಾಲಾ ಪ್ರಾಂಶುಪಾಲನ ಪಾತ್ರದಲ್ಲಿ ಆಕಾಶ್ ಖುರಾನಾ
- ಇಂದು ಪಾತ್ರದಲ್ಲಿ ಬೀನಾ ಬ್ಯಾನರ್ಜಿ
- ಬಿಟ್ಟು ಪಾತ್ರದಲ್ಲಿ ಅನುಜ್ ಪಂಡಿತ್ ಶರ್ಮಾ[೫]
- ಪ್ರಿಯಾ ಪಾತ್ರದಲ್ಲಿ ಹನ್ಸಿಕಾ ಮೋಟ್ವಾನಿ
- ರೋಹಿತ್ ಗೆಳತಿಯ ಪಾತ್ರದಲ್ಲಿ ಪ್ರಣಿತಾ ಬಿಷ್ಣೋಯಿ
- ಜಾದೂ ಪಾತ್ರದಲ್ಲಿ ಇಂದ್ರ ವರ್ಧನ್ ಪುರೋಹಿತ್
ತಯಾರಿಕೆ
[ಬದಲಾಯಿಸಿ]ತಮ್ಮ ಪಾತ್ರಕ್ಕಾಗಿ ಹೃತಿಕ್ ತೂಕ ಇಳಿಸಿಕೊಂಡರು. ಕೋಯಿ ಮಿಲ್ ಗಯಾ ಚಿತ್ರವನ್ನು ಕಸೌಲಿನ್ ನೈನಿತಾಲ್, ಭೀಮ್‍ತಾಲ್ ಮತ್ತು ಕ್ಯಾನಡಾದಲ್ಲಿ ಚಿತ್ರೀಕರಿಸಲಾಯಿತು.[೬] ಚಿತ್ರದ ಜನಪ್ರಿಯ ಅನ್ಯಲೋಕ ಜೀವಿ ಜಾದೂವನ್ನು ಒಬ್ಬ ಕುಳ್ಳ ನಟನು ಧರಿಸಿದ್ದ ಆ್ಯನಮಟ್ರಾನಿಕ್ ಶಿರದ ಮೂಲಕ ಸೃಷ್ಟಿಸಲಾಯಿತು. ಚಿತ್ರೀಕರಣದ ವೇಳೆ ಆ್ಯನಮಟ್ರಾನಿಕ್ ಶಿರದ ಕಾರಣ ನಟನು ನೋಡಲು ಸಾಧ್ಯವಾಗದಿದ್ದರಿಂದ ಚಲಿಸಲು ನಿರ್ದೇಶಕನು ನೀಡಿದ ಸೂಚನೆಗಳನ್ನು ಅವಲಂಬಿಸಬೇಕಾಯಿತು.[೭] ಆಸ್ಟ್ರೇಲಿಯನ್ ಕಲಾವಿದ ಜೇಮ್ಸ್ ಕಾಲ್ನರ್ ಆ್ಯನಮಟ್ರಾನಿಕ್ ಶಿರ ಮತ್ತು ಅನ್ಯಲೋಕ ಜೀವಿಯ ಉಡುಪನ್ನು ಸೃಷ್ಟಿಸಿದರು.[೮][೯] ಕೋಯಿ ಮಿಲ್ ಗಯಾ ಆ್ಯನಮಟ್ರಾನಿಕ್ಸ್‌ನ್ನು ಬಳಸಿದ ಮೊದಲ ಬಾಲಿವುಡ್ ಚಿತ್ರವಾಗಿತ್ತು. ಇದು ಹಿಂದಿ ಚಿತ್ರರಂಗದ ಮೊದಲ ವೈಜ್ಞಾನಿಕ ಕಲ್ಪನಾಪ್ರಧಾನ ಚಿತ್ರವಾಗಿತ್ತು.[೧೦][೧೧] ಆರಂಭದಲ್ಲಿ ಐಶ್ವರ್ಯಾ ರೈರಿಗೆ ನಿಶಾ ಪಾತ್ರವನ್ನು ನೀಡಲಾಗಿತ್ತು. ಅವರು ತಿರಸ್ಕರಿಸಿದ ನಂತರ, ಜ಼ಿಂಟಾಗೆ ಈ ಪಾತ್ರ ಹೋಯಿತು.[೧೨]
ಧ್ವನಿವಾಹಿನಿ
[ಬದಲಾಯಿಸಿ]ಚಿತ್ರದ ಧ್ವನಿವಾಹಿನಿಯನ್ನು ಮೊದಲು ಸಾರೆಗಾಮಾ ಜೂನ್ ೨೦೦೩ರಲ್ಲಿ ಬಿಡುಗಡೆಮಾಡಿತು.[೧೩] ಸಂಗೀತವನ್ನು ರಾಜೇಶ್ ರೋಶನ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ದೇವ್ ಕೋಹ್ಲಿ ಬರೆದಿದ್ದಾರೆ.
ಕೋಯಿ... ಮಿಲ್ ಗಯಾ: ಚಲನಚಿತ್ರದ ಅಧಿಕೃತ ಧ್ವನಿವಾಹಿನಿ | |||
---|---|---|---|
ಸಂ. | ಹಾಡು | ಗಾಯಕರು | ಸಮಯ |
1. | "ಕೋಯಿ ಮಿಲ್ ಗಯಾ" | ಕೆ. ಎಸ್. ಚಿತ್ರಾ, ಉದಿತ್ ನಾರಾಯಣ್ | 7:14 |
2. | "ಇಧರ್ ಚಲಾ ಮೇ ಉಧರ್ ಚಲಾ" | ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್ | 6:07 |
3. | "ಜಾದೂ ಜಾದೂ" | ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್ | 5:55 |
4. | "ಇಟ್ಸ್ ಮ್ಯಾಜಿಕ್" | ತಾಜ಼್ | 5:50 |
5. | "ಇನ್ ಪಂಛಿಯ್ಞೋ" | ಕವಿತಾ ಕೃಷ್ಣಮೂರ್ತಿ, ಶಾನ್, ಬೇಬಿ ಸ್ನೇಹಾ | 6:34 |
6. | "ಜಾದೂ ಜಾದೂ 2" | ಅಲ್ಕಾ ಯಾಗ್ನಿಕ್, ಅದ್ನಾನ್ ಸಾಮಿ | 5:55 |
7. | "ಹಾಯಿಲಾ ಹಾಯಿಲಾ" | ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್ | 5:48 |
8. | "ವಾದ್ಯ ಧ್ಯೇಯ ಗೀತೆ" | ಪ್ರೀತಿ ಉತ್ತಮ್ (ಆಲಾಪ್ ಧ್ವನಿ) | 4:32 |
ಒಟ್ಟು ಸಮಯ: | 46.58 |
ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ಕೋಯಿ... ಮಿಲ್ ಗಯಾ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಭಾರತದ ಬಾಕ್ಸ್ ಆಫ಼ಿಸ್ ಈ ಚಿತ್ರವನ್ನು "ಬ್ಲಾಕ್‍ಬಸ್ಟರ್" ಎಂದು ಘೋಷಿಸಿತು.
ಪ್ರಶಸ್ತಿಗಳು
[ಬದಲಾಯಿಸಿ]೪೯ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು
- ಅತ್ಯುತ್ತಮ ಚಲನಚಿತ್ರ - ವಿಜೇತ
- ಅತ್ಯುತ್ತಮ ನಿರ್ದೇಶಕ - ರಾಕೇಶ್ ರೋಶನ್ (ವಿಜೇತ)
- ಅತ್ಯುತ್ತಮ ನಟ - ಹೃತಿಕ್ ರೋಶನ್ (ವಿಜೇತ)
- ವಿಮರ್ಶಕರ ಅತ್ಯುತ್ತಮ ನಟ - ಹೃತಿಕ್ ರೋಶನ್ (ವಿಜೇತ)
- ಅತ್ಯುತ್ತಮ ನೃತ್ಯ ನಿರ್ದೇಶನ- ಫ಼ಾರಾ ಖಾನ್ (ವಿಜೇತೆ)
ಉಲ್ಲೇಖಗಳು
[ಬದಲಾಯಿಸಿ]- ↑ "Koi...Mil Gaya to recover cost in first week". ದಿ ಟೈಮ್ಸ್ ಆಫ್ ಇಂಡಿಯಾ. 6 August 2003. Archived from the original on 8 July 2013.
- ↑ "Koi Mil Gaya - Movie - Box Office India". boxofficeindia.com. Retrieved 2 May 2020.
- ↑ "Boyhood and the alien: E.T. and Koi Mil Gaya". Archived from the original on 22 July 2012. Retrieved 2 May 2020.
- ↑ John Newman (17 September 2001). "Satyajit Ray Collection receives Packard grant and lecture endowment". University of California, Santa Cruz. Archived from the original on 4 November 2005.
- ↑ Team, DNA Web (2016-07-08). "Remember Hrithik Roshan's Sardar friend from 'Koi...Mil Gaya'? You won't believe how handsome he has grown up to be!". DNA India (in ಇಂಗ್ಲಿಷ್). Retrieved 2019-11-23.
- ↑ "Bollywood Movie Koi Mil Gaya Shooting Location". www.bollylocations.com (in ಬ್ರಿಟಿಷ್ ಇಂಗ್ಲಿಷ್). Archived from the original on 2017-05-19. Retrieved 2017-05-24.
- ↑ Suri, Rishabh (8 August 2017). "years of Koi Mil Gaya , was Rishi Kapoor offered the role of Hritik's father". Hindustan Times. Retrieved 16 April 2020.
- ↑ "Remember 'JADOO' From Koi Mil Gaya. This Is how He Looks Now. WOW!" (in English). Archived from the original on 2020-09-27. Retrieved 2020-05-02.
{{cite web}}
: CS1 maint: unrecognized language (link) - ↑ "ये शख्स बना था ऋतिक की फिल्म में 'जादू', इस वजह से मिला था रोल". Dainik Bhaskar (in ಹಿಂದಿ). 2018-03-25. Retrieved 2020-05-02.
- ↑ Gates, Anita (8 August 2003). "FILM IN REVIEW; 'Koi . . . Mil Gaya'". NY Times. Retrieved 16 April 2020.
- ↑ suri, Rishabh (8 August 2017). "Years of Koi Mil Gaya, was Rishi Kapoor offered the role of Hritik's father". Hindustan Times. Retrieved 16 April 2020.
- ↑ "You refused that film? | Latest News & Updates at Daily News & Analysis". dna (in ಅಮೆರಿಕನ್ ಇಂಗ್ಲಿಷ್). 2013-05-18. Retrieved 2016-10-29.
- ↑ "Koi...Mil Gaya (Saregama)". Allmusic. Retrieved 9 June 2010.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಕೋಯಿ... ಮಿಲ್ ಗಯಾ @ ಐ ಎಮ್ ಡಿ ಬಿ
- ಕೋಯಿ... ಮಿಲ್ ಗಯಾ at Rotten Tomatoes
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಕೋಯಿ... ಮಿಲ್ ಗಯಾ (ಚಲನಚಿತ್ರ)
- CS1 ಇಂಗ್ಲಿಷ್-language sources (en)
- CS1 ಬ್ರಿಟಿಷ್ ಇಂಗ್ಲಿಷ್-language sources (en-gb)
- CS1 maint: unrecognized language
- CS1 ಹಿಂದಿ-language sources (hi)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- Template film date with 1 release date
- ಇನ್ಪುಟ್ ದೋಷಗಳನ್ನು ಹೊಂದಿರುವ ಟ್ರ್ಯಾಕ್ ಪಟ್ಟಿ
- Articles containing explicitly cited English-language text
- ಹಿಂದಿ-ಭಾಷೆಯ ಚಿತ್ರಗಳು