ಕೊಕ್ಕೆ ಹುಳು ರೋಗ
ನಮ್ಮ ದೇಶದ ಬಹುಪಾಲು ಜನರಿಗೆ ರಕ್ತಹೀನತೆ ಕಂಡುಬರುತ್ತದೆ. ಇವರ ರಕ್ತ ಹೀನತೆಗೆ ಮುಖ್ಯ ಕಾರಣ ಅವರ ಕರುಳಿನಲ್ಲಿ ನೆಲೆಸಿರುವ ಪುಟ್ಟ ಹುಳುವಾಗಿರುತ್ತದೆ.
ಇತಿಹಾಸ
[ಬದಲಾಯಿಸಿ]ಮಾನವನಿಗೆ ಕೊಕ್ಕೆ ಹುಳುಗಳ ಹಿಂಸೆ ಹೊಸತೇನಲ್ಲ. ಕ್ರಿ.ಪೂ. ೧೬೦೦ ರಲ್ಲಿಯೇ ಇವುಗಳ ಉಪಟಳವಿತ್ತೆಂದು ಇತಿಹಾಸ ಹೇಳುತ್ತದೆ. ಮುಂದುವರಿದ ದೇಶಗಳಲ್ಲಿ ಈಗ ಕೊಕ್ಕೆ ಹುಳುವಿನ ಭಾದ್ಯತೆಯನ್ನು ಹಿಡಿತದಲ್ಲಿರಿಸಲಾಗಿದೆ. ಆದಾಗ್ಯೂ ಇಂದಿಗೂ ಜಗತ್ತಿನ ೯೦೦ ಮಿಲಿಯನ್ ಜನರು ಹುಳುವಿನ ಹಾವಳಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಪ್ರತಿವರ್ಷ ಕನಿಷ್ಟ ಅರ್ಧ ಲಕ್ಷದಷ್ಟು ಜನರಾದರೂ ಹುಳುವಿನಿಂದ ಉಂಟಾದ ರಕ್ತಹೀನತೆಯಿಂದ ಅಸುನೀಗುತ್ತಿದ್ದಾರೆ.[೧]
ಕೊಕ್ಕೆ ಹುಳುವಿನ ಹುಟ್ಟು
[ಬದಲಾಯಿಸಿ]ಇಟಲಿ ದೇಶದಲ್ಲಿ ಏನ್ಹಿಲೋ ಡಬಿನ್ ಎಂಬುವವರು ೧೮೩೮ ರಲ್ಲಿ ಈ ಹುಳುವನ್ನು ಮೊದಲಬಾರಿಗೆ ಕಂಡರಾದರೂ ಈಜಿಪ್ಟ್ ನ ಲಾಸ್ ೧೮೯೮ ರಲ್ಲಿ ಹುಳುಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದಾರೆ. ಈ ಹುಳುವು ಅಂಕುಡೊಂಕಾಗಿದ್ದು ಆಕಾರದಲ್ಲಿ ಕೊಂಡಿಯನ್ನು ಹೋಲುತ್ತದೆ. ಆದುದರಿಂದ ಈ ಹುಳುವಿಗೆ ಅನ್ ಕಿಲೋಸ್ಟೋಮ (ಅನ್‍ಕಿಲೋ=ಕೊಕ್ಕೆ; ಸ್ಟೋಮ=ಬಾಯಿ) ಎಂದು ನಾಮಕರಣವಾಗಿದೆ. ಸ್ಟಿಲ್ಸ ಎಂಬುವವರು ೧೯೦೨ ರಲ್ಲಿ ಕೊಕ್ಕೆ ಹುಳುವಿನ ಮತ್ತೊಂದು ಉಪಜಾತಿಯನ್ನು ಅಮೇರಿಕದಲ್ಲಿ ಪತ್ತೆ ಹಚ್ಚಿ ಇವಕ್ಕೆ ಅಮೇರಿಕದ ಕೊಲೆಪಾತಕ (ನೆಕ್ಟರ್ ಅಮೇರಿಕಾನ್) ಎಂದು ಕರೆದಿದ್ದಾರೆ, ಬಹಶಃ ಈ ಹುಳುಗಳ ಉಗಮಸ್ಥಾನ ಆಫ್ರಿಕಾವಾಗಿದ್ದು, ಅಲ್ಲಿನ ಜೀತದಾಳುಗಳೊಂದಿಗೆ ಇವು ಅಮೇರಿಕಾವನ್ನು ಪ್ರವೇಶಿಸಿವೆ ಎಂದು ಭಾವಿಸಲಾಗಿದೆ. ಈಗ ಕೊಕ್ಕೆ ಹುಳುಗಳು ವಿಶ್ವವ್ಯಾಪಿಯಾಗಿಬಿಟ್ಟಿವೆ.[೨]
ಸಂಶೋಧನೆ
[ಬದಲಾಯಿಸಿ]ಭಾರತದ ೨೦೦ ಮಿಲಿಯನ್ ಪ್ರಜೆಗಳಿಗೆ ಕೊಕ್ಕೆಹುಳುಗಳ ಬಾಧೆ ಇದೆ ಎಂದು ಸಮೀಕ್ಷೆಗಳು ತಿಳಿಸಿವೆ. ಅಸ್ಸಾಂ, ಬಂಗಾಲ, ಉತ್ತರ ಪ್ರದೇಶ, ಬಿಹಾರ ,ಒರಿಸ್ಸಾ, ಪಂಜಾಬ್, ತಮಿಳುನಾಡು ಆಂದ್ರ -ಪ್ರದೇಶಗಳಲ್ಲಿ ಶೇಕಡಾ 80 ರಷ್ಟು ಜನರಿಗೆ ಕೊಕ್ಕೆ ಹುಳುಗಳು ತಗುಲಿವೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿಯೂ ಈ ವ್ಯಾಧಿ ವ್ಯಾಪಕವಾಗಿಯೇ ಇದೆ. ಉತ್ತರ ಭಾರತೀಯರನ್ನು ಅನ್ ಕಿಲೋಸ್ಟೋಮ ಜಾತಿಯ ಹುಳು ಕಾಡುತ್ತಿದೆ. ದಕ್ಷಿಣದವರನ್ನು ಹೆಚ್ಚಾಗಿ ಕಾಡುತ್ತಿರುವುದು ನೆಕ್ಟರ್ ಅಮೇರಿಕಾನ್ ಜಾತಿಯ ಕೊಕ್ಕೆ ಹುಳುಗಳು. ಅಲ್ಪ ಸ್ವಲ್ಪ ವ್ಯತ್ಯಾಸಗಳನ್ನು ಹೊರತುಪಡಿಸಿದಲ್ಲಿ ಎರಡು ಜಾತಿ ಕೊಕ್ಕೆ ಹುಳುಗಳ ಆಕಾರ ಮತ್ತು ಜೀವನಕ್ರಮದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಕೊಕ್ಕೆ ಹುಳುಗಳನ್ನು, ಚಿಲುಮೆ ಹುಳು ಚಿಕ್ಕ ಜಂತು ಎಂದೂ ಕರೆಯುವುದಿದೆ. ಇವುಗಳ ಬಾಧೆ ನಮ್ಮ ಜೀವನದ ಅವಿಭಾಜ್ಯ ಸಂಗತಿಯಾಗಿಬಿಟ್ಟಿದೆ. ಕೆಲವರಂತೂ ಈ ಹುಳುಗಳೇ ಆಹಾರವನ್ನು ಜೀರ್ಣ ಮಾಡುವ ಉಪಯುಕ್ತ ಜೀವಿಗಳೆಂದು ತಿಳಿದುಕೊಂಡುಬಿಟ್ಟಿದ್ದಾರೆ.[೩][೪]
ಹುಳುವಿನ ಗುಣ ಲಕ್ಷಣಗಳು
[ಬದಲಾಯಿಸಿ]ಚಿಲುಮೆ ಹುಳುಗಳಿಗೆ ಹಾಲು ಬಿಳುಪಿನ ಬಣ್ಣವಿದೆ. ಇವು ಕೇವಲ ಎಂಟು ಹತ್ತು ಮಿ.ಮೀ. ಉದ್ದ ಮತ್ತು ಅರ್ದ ಮಿ.ಮೀ ದಪ್ಪ ಇರುತ್ತದೆ. ಇಡಿ ದೇಹ ಅಂಕು ಡೊಂಕಾಗಿದೆ. ಬಾಯಿಯ ಭಾಗ ಕೊಕ್ಕೆಯಂತೆ ಬಾಗಿದೆ. ಇವುಗಳ ಬಾಯಿಯಲ್ಲಿ ರಕ್ತ ಹೀರಲು ಅನುಕೂಲವಾಗಿರುವ ಗಟ್ಟಿಯಾದ ಆರು ಹಲ್ಲುಗಳಿವೆ. ಇವುಗಳಲ್ಲೂ ಲಿಂಗಬೇದವಿದ್ದು ಗಂಡಿಗಿಂತ ಹೆಣ್ಣು ಸ್ವಲ್ಪ ದೊಡ್ಡದಾಗಿದೆ ಇವುಗಳ ಜೊಲ್ಲಿನಲ್ಲಿರುವ ರಸಾಯನಿಕಕ್ಕೆ ರಕ್ತವನ್ನು ಹೆಪ್ಪುಗಟ್ಟದಂತೆ ಇರಿಸುವ ಗುಣವಿದೆ. ಹೀಗಾಗಿ ಬಾಯಿಯ ಹಲ್ಲುಗಳಿಂದ ಆಶ್ರಯದಾತನ ಕರುಳನ್ನು ಚುಚ್ಚಿ ರಕ್ತ ಹೀರುತ್ತಾ ಬದುಕುತ್ತವೆ.[೫]
ಕೊಕ್ಕೆ ಹುಳುವಿನ ವಾಸ ಸ್ಥಾನ
[ಬದಲಾಯಿಸಿ]ಚಿಲುಮೆ ಹುಳುಗಳು ಚಿಕ್ಕ ಕರುಳಿನ ಪ್ರಥಮ ಭಾಗವಾದ “ಡಿಯೋಡಿನಂ”ನಲ್ಲಿ ವಾಸಿಸುತ್ತವೆ. ಮಾನವ ರಕ್ತವೇ ಇವುಗಳ ಆಹಾರ. ದಕ್ಷಿಣ ಭಾರತದಲ್ಲಿನ ನೆಕ್ಟರ್ ಅಮೇರಿಕಾನ್ ಜಾತಿಯ ಹುಳುಗಳು ದಿನಕ್ಕೆ ೦.೦೪ಮಿ.ಲೀ.ರಕ್ತ ಹೀರುತ್ತದೆ. ಕೇವಲ ೨೫ಹುಳುಗಳು ದೇಹದಲ್ಲಿದ್ದರೂ ದಿನಪ್ರತಿ ಒಂದು ಮಿ. ಲೀ.ರಕ್ತ ನಾಶವಾದಂತೆ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಸಿಗುವ ಅನ್ ಕಿಲೋಸ್ಟೋಮ ಜಾತಿಯ ಕೊಕ್ಕೆ ಹುಳು ಹೆಚ್ಚುಭಯಂಕರವಾಗಿದ್ದು ಪ್ರತಿಹುಳು ೦.೨ ಮಿ.ಲೀ ನಂತೆ ಕೇವಲ ಐದು ಹುಳುಗಳು ಒಂದು ದಿನದಲ್ಲಿ ಒಂದು ಮಿಲಿಲೀಟರ್ ರಕ್ತವನ್ನು ಕುಡಿದುಬಿಡುತ್ತವೆ. ಹರೆಯದ ಹೆಣ್ಣುಹುಳು ಪ್ರತಿದಿನ ೧೫ ರಿಂದ ೨೦ ಸಾವಿರದಂತೆ ತನ್ನ ಜೀವಿತಾವಧಿಯಲ್ಲಿ ೫೦ ರಿಂದ ೬೦ ಮಿಲಿಯನ್ ಗಳಷ್ಟು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆ ಅಂಡಾಕರವಾಗಿದ್ದು ೬೦ ಮೈಕ್ರಾನ್ ಉದ್ದ ೪೦ ಮೈಕ್ರಾನ್ ದಪ್ಪವಿರುತ್ತದೆ. ಮೊಟ್ಟೆಗೆ ಬಿಳಿಯ ಬಣ್ಣದ ಪಾರದರ್ಶಕ ಕವಚವಿದೆ, ಒಳಗಡೆಯ ತಿರುಳು ನಾಲ್ಕು ಬಾಗವಾಗಿ ವಿಂಗಡನೆಯಾಗಿರುತ್ತದೆ. ಕೊಕ್ಕೆ ಹುಳುವಿನ ವ್ಯಾಧಿಗೆ ಒಳಗಾದವರ ಮಲದೊಂದಿಗೆ ಅಸಂಖ್ಯಾತ ಸಂಖ್ಯೆಯ ಮೊಟ್ಟೆಗಳು ವಿಸರ್ಜನೆಯಾಗುತ್ತಿರುತ್ತವೆ. ನಮ್ಮ ದೇಶದ ಬಹುಪಾಲು ಜನರು ಮಲ ವಿಸರ್ಜಿಸುವುದು ಬಯಲಿನಲ್ಲಿ. ಹೀಗಾಗಿ ಮೊಟ್ಟೆಗಳು ಮಲದೊಂದಿಗೆ ಭೂಮಿಯನ್ನು ಸೇರುತ್ತವೆ.[೬] ನಮ್ಮ ದೇಶದ ಜಿಗುಟು/ಮರಳು ಮಣ್ಣು ಹಾಗೂ ಹವಾಮಾನ ಮೊಟ್ಟೆಗಳ ಬೆಳವಣಿಗೆಗ ಸೂಕ್ತವಾಗಿದೆ.ಒಂದೆರಡು ದಿನಗಳಲ್ಲಿ ಬೂಮಿಯ ಉಷ್ಣತೆಗೆ ಮೊಟ್ಟೆಗಳು ಒಡೆದು ಪುಟ್ಟ ಪುಟ್ಟ ಮರಿಗಳು ಹೊರಬರುತ್ತವೆ. ಇವು ಮತ್ತೆ ಬೆಳವಣಿಗೆ ಹೊಂದಿ ಒಂದೆರಡು ಸಾರಿ ಪೊರೆ ಕಳಚಿಕೊಂಡು ಮಾನವನ ಚರ್ಮವನ್ನು ಚುಚ್ಚಿಕೊಂಡು ಹೋಗಬಲ್ಲ “ರ್ಯಾಬ್‍ಡಿಟಿಪಾರಂ” ಎಂಬ ಲಾರ್ವವಾಗುತ್ತದೆ. ಇವು ಭೂಮಿಯಲ್ಲಿ ಹರಿದಾಡಿಕೊಂಡಿದ್ದು, ಹುಲ್ಲಿನ ಎಲೆಯನ್ನು ಏರಿಕೊಂಡು ಅತಿಥೇಯರಿಗಾಗಿ ಕಾಯುತ್ತಾ ತಿಂಗಳು ತನಕ ಬದುಕುತ್ತವೆ.[೭]
ಕೊಕ್ಕೆ ಹುಳು ದೇಹವನ್ನು ಪ್ರವೇಶಿಸುವ ವಿಧಾನ
[ಬದಲಾಯಿಸಿ]ಇತರೆ ಜಂತುಗಳಂತೆ ಕೊಕ್ಕೆ ಹುಳುಗಳು ಆಹಾರದ ಮೂಲಕ ದೇಹ ಸೇರದೆ ಲಾರ್ವಾಗಳು ತಮ್ಮ ಸೂಜಿಯಂತಹ ದೇಹವನ್ನು ಚರ್ಮದಲ್ಲಿ ತೂರಿಸಿಕೊಂಡು ದೇಹದೊಳಗೆ ಪ್ರವೇಶಿಸುತ್ತದೆ. ಬರಿಗಾಲಿನಲ್ಲಿ ಓಡಾಡುವವರನ್ನು ಕಂಡರೆ ಅವುಗಳಿಗೆ ಸಂಭ್ರಮ. ಮಾನವ ದೇಹದ ಉಷ್ಣದಿಂದ ಆಕರ್ಷಿತವಾದ ಲಾರ್ವಾಗಳು ಚರ್ಮ ತೂರಿಕೊಂಡು ಒಳ ಪ್ರವೇಶಿಸಿ ರಕ್ತವನ್ನು ಸೇರಿಕೊಳ್ಳುತ್ತದೆ. ಹೊಸ ಆಶ್ರಯ ಸ್ಥಾನದಲ್ಲಿ ಚೂಟಿಯಾಗಿ ಚಲಿಸುತ್ತ ಯಕೃತ್, ಹೃದಯ, ಶ್ವಾಸಕೋಶ, ಶ್ವಾಸನಾಳಗಳಲ್ಲೆಲ್ಲಾ ಸಂಚರಿಸಿ ಕೊನೆಗೆ ಅನ್ನ ನಾಳದ ಮೂಲಕ ಕರುಳನ್ನು ಸೇರಿ ಚಿಕ್ಕ ಕರುಳಿನ ಆದಿ ಭಾಗದಲ್ಲಿ ನೆಲಸುತ್ತವೆ. ಕರುಳಿನ ಗೋಡೆಗೆ ಬಾಯಿಹಚ್ಚಿ ರಕ್ತವನ್ನು ಹೀರುತ್ತಾ ಬೆಳೆಯುತ್ತವೆ. ಬಲಿತ ಹೆಣ್ಣು ಮೊಟ್ಟೆಗಳನ್ನಿಡಲಾರಂಭಿಸುತ್ತ¸ದೆ. ಲಾರ್ವ ಚರ್ಮದ ಮೂಲಕ ದೇಹ ಸೇರಿದ ಆರು ವಾರಗಳ ಅನಂತರ ಬೆಳೆದು ದೊಡ್ಡದಾಗಿ ಮೊಟ್ಟೆ ಇಡುವ ಹಂತವನ್ನು ತಲುಪುತ್ತದೆ. ಹುಳುಗಳ ಆಯುಷ್ಯ ೩ ರಿಂದ ೪ವರ್ಷಗಳು.
ಕೊಕ್ಕೆ ಹುಳುವಿನಿಂದಾಗುವ ತೊಂದರೆ
[ಬದಲಾಯಿಸಿ]ಯಾವುದೇ ವಯಸ್ಸಿನವರಿಗೆ ಕೊಕ್ಕೆಹುಳುವಿನ ಬಾಧೆ ತಗುಲಬಹುದಾದರೂ ೧೫ ರಿಂದ ೨೫ ವರ್ಷದ ಗ್ರಾಮೀಣ ಕೃಷಿರಿಗೆ ಹುಳುಗಳ ಉಪಟಳ ಅಧಿಕ. ಹುಳುವಿನ ಬಾಧೆಗೊಳಗಾದವರಿಗೆ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆಯಿಂದ ಅಶಕ್ತತೆ, ಆಯಸ ಮುಖಬಿಳಿಚಿಕೊಳ್ಳುವಿಕೆ, ದೇಹದಲ್ಲಿ ಬಾವು ಹೃದಯ ದೌರ್ಬಲ್ಯ ಮುಂತಾದ ತೊಂದರೆಗಳು ಉದ್ಬವಿಸುತ್ತವೆ. ದುಡಿವ ಸಾಮಥ್ರ್ಯ ಕಡಿಮೆಯಾಗುತ್ತದೆ. ಆರ್ಥಿಕ ಪರಿಸ್ತಿಥಿಯೂ ಹದಗೆಡುತ್ತದೆ. ರಕ್ತ ಹೀನತೆಯಿಂದ ಬಳಲುವವರಿಗೆ ರೋಗಗಳನ್ನೆದುರಿಸುವ ಸಾಮಥ್ರ್ಯ ಕುಗ್ಗುತ್ತದೆ. ಹೀಗಾಗಿ ಇವರು ಪದೇ ಪದೇ ಕಾಯಿಲೆ ಬೀಳುತ್ತಾರೆ. ರಕ್ತಹೀನತೆಗೊಳಗಾದ ಗರ್ಬಿಣಿಯರು ಅಪೌಷ್ಟಿಕ ಮಗುವನ್ನು ಹೆರುತ್ತಾರೆ. ಮಕ್ಕಳು ಆಟ ಪಾಠದಲ್ಲಿ ಹಿಂದೆ ಬೀಳುತ್ತಾರೆ. ಇವರ ಬೆಳವಣಿಗೆಯೂ ಸಮರ್ಪಕವಾಗಿರಲಾರದು.[೮]
ಕೊಕ್ಕೆಹುಳುವಿನ ಮರಿಗಳು ಚರ್ಮವನ್ನು ತೂರಿಕೊಂಡು ದೇಹವನ್ನು ಪ್ರವೇಶಿಸುವುದರಿಂದ ಅವು ಹೊಕ್ಕ ಜಾಗದಲ್ಲಿ ನವೆ, ಉರಿ, ಕೀವಿನ ಗುಳ್ಳೆ ಉಂಟಾಗುವುದಿದೆ. ಕಾಲ್ಬೆರಳುಗಳ ಸಂದಿಯಲ್ಲಿ ಹೀಗಾಗುವುದು ಹೆಚ್ಚು. ಹುಳುಗಳು ಶ್ವಾಸಕೋಶದಲ್ಲೂ ಕೆಲಕಾಲ ಕಳೆದು ಆಶ್ರಯದಾತನÀನ್ನು ಕೆಮ್ಮಿಸುತ್ತವೆ. ಕೆಲವರಿಗೆ ಹುಳುವಿನಿಂದ ಅಲರ್ಜಿಯಾಗಿ ಮೈ ಕಡಿತ, ದದ್ದು ಉಂಟಾಗುತ್ತದೆ.
ಪರಿಹಾರ
[ಬದಲಾಯಿಸಿ]ಕೊಕ್ಕೆ ಹುಳುಗಳನ್ನು ಸಂಹರಿಸಲು ಪರಿಣಾಮಕಾರಿಯಾದ ಔಷಧಿ ಇದೆ. ನಮ್ಮ ದೇಶದಲ್ಲಿ ಹುಳುಗಳ ಹಾವಳಿ ವ್ಯಾಪಕವಾಗಿರುವುದರಿಂದ ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ಔಷಧಿ ತೆಗೆದುಕೊಂಡು, ಹುಳುವಿನ ಭಾದೆಯಿಂದ ಪಾರಾಗಬೇಕಾದ ಅನಿವಾರ್ಯತೆ ಇದೆ. ಕೊಕ್ಕೆ ಹುಳುಗಳು ದೇಹಕ್ಕೆ ಸೇರದಂತೆ ಮಾಡಲು ಎಲ್ಲರೂ ಕಾಲಿಗೆ ಚಪ್ಪಲಿ ಧರಿಸಿಕೊಳ್ಳುವುದನ್ನು ರೂಡಿಮಾಡಿಕೊಳ್ಳಬೇಕಾಗಿದೆ. “ಚಪ್ಪಲಿ ಧರಿಸಿದಲ್ಲಿ ಚಿಲುಮೆ ಹುಳುವಿನ ಬಾಧೆಯಿಲ್ಲ” ಎಂಬ ಹೊಸ ಗಾದೆಯನ್ನು ಮಾನವರು ಮನದಟ್ಟು ಮಾಡಿಕೊಳ್ಳಬೇಕು. ರೈತರು ಮಣ್ಣು ಮತ್ತು ಗೊಬ್ಬರವನ್ನು ಮುಟ್ಟುವಾಗ ಕೈ ಮತ್ತು ಕಾಲಿಗೆ ರಕ್ಷಕ ಕವಚ ಹಾಕಿಕೊಂಡರೆ ಚಿಲುಮೆ ಹುಳುಗಳಿಂದ ರಕ್ಷಣೆ ದೊರೆಯುತ್ತದೆ. ಹುಳುಗಳನ್ನು ಶಾಶ್ವತವಾಗಿ ಹೊರಗಟ್ಟಬೇಕಾದರೆ ಸರ್ವರಿಗೂ ಶೌಚಾಲಯದ ಸೌಲಭ್ಯ ಸಿಗಬೇಕು. ನೆಲದಲ್ಲಿ ಮಲ ವಿಸರ್ಜಿಸುವ ಪದ್ದತಿ ನಿಲ್ಲುವವರೆಗೆ ನಮಗೆ ಕೊಕ್ಕೆ ಹುಳುಗಳ ಬಾಧೆ ತಪ್ಪುವುದೇ ಅಸಾಧ್ಯ. ಶೌಚಾಲಯದ ಕ್ರಾಂತಿಯಿಂದ ಕೊಕ್ಕೆ ಹುಳುವಿಗೆ ವಿದಾಯ ಕೋರಲೆಂದೇ “ರಾಕ್ ಫಿಲರ್ ಫೌಂಡೇಶನ್” ಎಂಬ ಸಂಸ್ಥೆ ೧೯೧೩ ರಲ್ಲಿ ಸ್ಥಾಪಿತಗೊಂಡಿದೆ. ಈ ಸಂಸ್ಥೆ ವಿಶ್ವದಾದ್ಯಂತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Markell, Edward K.; John, David C.; Petri, William H. (2006). Markell and Voge's medical parasitology (9th ed.). St. Louis, Mo: Elsevier Saunders. ISBN 978-0-7216-4793-7.
- ↑ "CDC Factsheet: Hookworm" Archived 2010-09-04 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Ancylostoma duodenale". Animal Diversity Web (in ಇಂಗ್ಲಿಷ್).
- ↑ https://www.kannadigaworld.com/news/health/317882.html
- ↑ http://padmangri.blogspot.com/2015/03/blog-post_28.html
- ↑ https://www.english-kannada.com/english-to-kannada-meaning-hookworm
- ↑ https://www.wordhippo.com/what-is/the-meaning-of/kannada-word-331c2009d6bf18baeadc70c98414b2b6a240dc84.html
- ↑ http://www.varthabharati.in/article/aarogya-bhaagya/6574