ಕೈಗಾರಿಕೆಗಳ ಸ್ಥಾನೀಕರಣ
ಆಯಾ ಪ್ರದೇಶಗಳು ಹೊಂದಿರುವ ಪ್ರಾಕೃತಿಕ ಹಾಗೂ ಇತರ ಸೌಲಭ್ಯಗಳಿಗೆ ಅನುಗುಣವಾಗಿ ಕೈಗಾರಿಕೆಗಳು ನಿರ್ದಿಷ್ಟ ಪ್ರದೇಶಗಳಲ್ಲಿ ನೆಲೆಸಿ ಈ ಕೈಗಾರಿಕೆಗಳ ಬಗ್ಗೆ ಈ ಪ್ರದೇಶಗಳು ವಿಶಿಷ್ಟಕೇಂದ್ರಗಳಾಗಿ ಪರಿಣಮಿಸುವ ಆಧುನಿಕ ಆರ್ಥಿಕಯುಗದ ಪ್ರವೃತ್ತಿ (ಲೋಕಲೈಸೇಷನ್ ಆಫ್ ಇಂಡಸ್ಟ್ರೀಸ್). ಇದು ಶ್ರಮವಿಭಜನೆಯ ತತ್ತ್ವದ ಭೌಗೋಳಿಕ ಅಥವಾ ಪ್ರಾದೇಶಿಕ ಅನ್ವಯ. ಕೃಷಿ, ಗಣಿ, ಕೈಗಾರಿಕೆ ಇವುಗಳ ವಿವಿಧ ಶಾಖೆಗಳು ಪ್ರಪಂಚದ ವಿಶಿಷ್ಟ ದೇಶಗಳಲ್ಲಿ ಹಾಗೂ ದೇಶದ ವಿಶಿಷ್ಟ ಭಾಗಗಳಲ್ಲಿ ನಿರ್ದಿಷ್ಟ ರೀತಿಯಲ್ಲಿ ಹಂಚಿಕೆಯಾಗಿರುತ್ತವೆ. ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ದೇಶಗಳು ಚಿನ್ನದ ಗಣಿ ಕೈಗಾರಿಕೆ; ಇರಾಕ್ ತೈಲೋದ್ಯಮ; ಭಾರತ ಮತ್ತು ಬಾಂಗ್ಲಾದೇಶಗಳ ಸೆಣಬು ಕೈಗಾರಿಕೆ; ಜಪಾನ್, ಚೀನ ಮತ್ತು ಭಾರತಗಳ ರೇಷ್ಮೆ ಕೈಗಾರಿಕೆ-ಹೀಗೆಯೇ ರಾಷ್ಟ್ರದಲ್ಲಿ ಅದರದರದೇ ಆದ ಒಂದೊಂದು ವಿಶಿಷ್ಟ ಕೈಗಾರಿಕೆ ಇರುತ್ತದೆ. ಕೈಗಾರಿಕಾ ಸ್ಥಾನೀಕರಣದ ಅಂತರರಾಷ್ಟ್ರೀಯ ಶ್ರಮವಿಭಜನೆಗೆ ಮತ್ತು ಹೋಲಿಕೆ ವೆಚ್ಚನಿಯಮಗಳಿಗೆ ಅನುಸಾರವಾಗಿ ಒಂದೊಂದು ರಾಷ್ಟ್ರವೂ ಯಾವ ಸರಕನ್ನು ಉತ್ಪಾದಿಸಲು ಸಾಪೇಕ್ಷವಾಗಿ ಹೆಚ್ಚು ಅನುಕೂಲ ಪಡೆದಿರುವುದೋ ಆ ಸರಕಿನ ಉತ್ಪಾದನೆಯಲ್ಲಿ ಅದು ವಿಶೇಷವಾಗಿ ತೊಡಗುತ್ತದೆ. ಇದರಿಂದ ಆ ಸರಕನ್ನು ಉತ್ಪಾದಿಸುವ ಉದ್ಯಮಗಳು ಹೆಚ್ಚಾಗಿ ಅಲ್ಲಿ ನೆಲೆಸುತ್ತವೆ. ಆಯಾ ದೇಶದ ನೈಸರ್ಗಿಕ ಮೂಲಸಾಧನಗಳು ಹಾಗೂ ಅದು ಬೆಳೆಸಿಕೊಂಡ ಉತ್ಪಾದನ ಸಾಮಥ್ರ್ಯ ಇವೆರಡಕ್ಕೂ ಅನುಗುಣವಾಗಿ ನಿರ್ದಿಷ್ಟ ಕೈಗಾರಿಕೆಗಳು ಅಲ್ಲಿ ಸ್ಥಾನೀಕರಣಗೊಳ್ಳುತ್ತವೆ. ಇದರಿಂದ ಕೆಲವು ಕೈಗಾರಿಕೆಗಳಿಗೆ ಕೆಲವು ರಾಷ್ಟ್ರಗಳು ಪ್ರಸಿದ್ಧವಾಗಿವೆ.[೧]
ಕೈಗಾರಿಕೆಗಳು
[ಬದಲಾಯಿಸಿ]ಹೀಗೆ ಪ್ರತಿಯೊಂದು ದೇಶವೂ ಸ್ಥಾಪಿಸಬಲ್ಲ ಕೈಗಾರಿಕೆಗಳು ದೇಶದೊಳಗೆ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ನೆಲೆಸಿರುತ್ತವೆ. ಭಾರತದಲ್ಲಿ ಹತ್ತಿ ಕೈಗಾರಿಕೆ ಬಹುಮಟ್ಟಿಗೆ ಮುಂಬಯಿ, ಅಹಮದಾಬಾದ್‍ಗಳಲ್ಲೂ ಸೆಣಬು ಕೈಗಾರಿಕೆ ಕಲ್ಕತ್ತದಲ್ಲೂ ಸಕ್ಕರೆ ಕೈಗಾರಿಕೆ ಉತ್ತರಪ್ರದೇಶದ ನಗರಗಳಲ್ಲೂ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಜಂಷೆಡ್‍ಪುರ, ದುರ್ಗಾಪುರ, ಭಿಲಾಯಿ, ರೂರ್‍ಕೆಲ, ಬೊಕಾರೊ, ಭದ್ರಾವತಿಗಳಲ್ಲೂ ಒಂದೊಂದು ಬೃಹತ್ ಕೈಗಾರಿಕೆಯೂ ಒಂದು ಅಥವಾ ಕೆಲವೇ ಸ್ಥಳಗಳಲ್ಲೂ ನೆಲೆಸಿವೆ. ಅಮೆರಿಕದಲ್ಲಿ ಮೋಟಾರ್ ತಯಾರಿಕೋದ್ಯಮ ಬಹುಮಟ್ಟಿಗೆ ಡೆಟ್ರಾಯಿಟ್‍ನಲ್ಲಿ ನೆಲೆಸಿದೆ. ಇಂಗ್ಲೆಂಡಿನಲ್ಲಿ ಹತ್ತಿ ಜವಳಿ ಕೈಗಾರಿಕೆ ಲ್ಯಾಂಕಷೈರಿನಲ್ಲಿ ಇದೆ. ಹೀಗೆ ನೈಸರ್ಗಿಕ ಸಂಪತ್ಸಾಧನಗಳು ಹಾಗೂ ಮಾನವ ಸಂಪಾದಿತ ಅನುಕೂಲಗಳಿಗೆ ಅನುಗುಣವಾಗಿ ಒಂದು ದೇಶ ಸ್ಥಾಪಿಸಬಹುದಾದ ಕೈಗಾರಿಕೆಗಳು ಯಾವ ಸ್ಥಳಗಳಲ್ಲಿ ನೆಲೆಸುವುವು, ಈ ಸ್ಥಳವನ್ನು ನಿರ್ಣಯಿಸುವ ಅಂಶಗಳೇನು, ಹೀಗೆ ಅವು ಕೆಲವು ಕೇಂದ್ರಗಳಲ್ಲಿ ನೆಲೆಸುವುದರ ಸಾಧಕಬಾಧಕಗಳೇನು, ಬಾಧಕಗಳಿಗೆ ಪರಿಹಾರವೇನು ಎಂಬವು ಕೈಗಾರಿಕಾ ಸ್ಥಾನೀಕರಣ ಸಮಸ್ಯೆಯನ್ನು ಕುರಿತ ಮುಖ್ಯ ಪ್ರಶ್ನೆಗಳಾಗಿವೆ.
ವಾನ್ ಥೂನನನ ಕೃಷಿ ಸ್ಥಾನೀಕರಣ ಸಿದ್ಧಾಂತ ಆಲ್‍ಫ್ರೆಡ್ ವಿಬರನ ಕೈಗಾರಿಕಾ ಸ್ಥಾನೀಕರಣ ಸಿದ್ಧಾಂತ
[ಬದಲಾಯಿಸಿ]ಸ್ಥಾನೀಕರಣದ ಸೈದ್ಧಾಂತಿಕ ಅಧ್ಯಯನದಲ್ಲಿ ವಾನ್ ಥೂನನನ ಕೃಷಿ ಸ್ಥಾನೀಕರಣ ಸಿದ್ಧಾಂತವೂ ಆಲ್‍ಫ್ರೆಡ್ ವಿಬರನ ಕೈಗಾರಿಕಾ ಸ್ಥಾನೀಕರಣ ಸಿದ್ಧಾಂತವೂ ಮೊದಲು ಪ್ರತಿಪಾದಿತವಾದ ಮುಖ್ಯ ಸಿದ್ಧಾಂತಗಳಾಗಿವೆ. ಕೈಗಾರಿಕಾಸ್ಥಾನೀಕರಣ ಸಿದ್ಧಾಂತವನ್ನು ನಿರೂಪಿಸುವುದರಲ್ಲಿ ನಿಗಮನ (ಡಿಡಕ್ಟಿವ್) ಮತ್ತು ಅನುಗಮನ (ಇಂಡಕ್ಟಿವ್) ಮಾರ್ಗಗಳೆರಡನ್ನೂ ಅರ್ಥಶಾಸ್ತ್ರಜ್ಞರು ಅನುಸರಿಸಿರುತ್ತಾರೆ. ಸ್ಥಾನೀಕರಣಕ್ಕೆ ಅತ್ಯಂತ ಕಡಿಮೆ ವೆಚ್ಚದ ಸ್ಥಳ ನಿರ್ಣಯಿಸುವ ವಿವಿಧ ಅಂಶಗಳನ್ನು ತರ್ಕಬದ್ಧ ರೀತಿಯಲ್ಲಿ ವಿವರಿಸುವುದೇ ನಿಗಮನಮಾರ್ಗ. ಕೈಗಾರಿಕೆಗಳು ವಸ್ತುತಃ ಸ್ಥಾನೀಕರಣವಾಗಿರುವುದರ ಕಾರಣಗಳನ್ನು ವಿವರಿಸಿ, ಈ ವಿಷಯಗಳ ಆಧಾರದ ಮೇಲೆ ಸ್ಥಾನೀಕರಣವನ್ನು ನಿರ್ಣಯಿಸುವ ವಿವಿಧ ಅಂಶಗಳ ವಿಶ್ಲೇಷಣೆಯೇ ಅನುಗಮನ ಅಧ್ಯಯನ ಮಾರ್ಗ. ವಿಬರ್ ನೀಡಿದ ನಿಗಮನ ಸಿದ್ಧಾಂತವನ್ನು ಆಂಡ್ರಿಯಾಸ್ ಪ್ರೀಡ್ಹಾಲ್, ಪಾಲಾಂಡರ್, ಆಗಸ್ಟ್ ಲಾಚ್, ಫ್ಲಾರೆನ್ಸ್ ಇತ್ಯಾದಿ ಅರ್ಥಶಾಸ್ತ್ರಜ್ಞರು ಬೆಳೆಸಿದ್ದಾರೆ. ಎಡ್ಗರ್ ಹೂವರ್, ಗ್ಲೆನ್ ಮೆಕ್ಲಾಹಿನ್, ಫ್ಲಾರೆನ್ಸ್ ಇತ್ಯಾದಿ ಅರ್ಥಶಾಸ್ತ್ರಜ್ಞರು ಹೆಚ್ಚಾಗಿ ಅನುಗಮನ ಮಾರ್ಗಾನುಸಾರವಾಗಿ ಸ್ಥಾನೀಕರಣ ಕುರಿತ ಅಧ್ಯಯನ ನಡೆಸಿದ್ದಾರೆ. ಹೀಗೆ ಅನೇಕ ಅರ್ಥಶಾಸ್ತ್ರಜ್ಞರು ನಡೆಸಿರುವ ಅಧ್ಯಯನಗಳನ್ನು ಒಳಗೊಂಡಿರುವ ಸೈದ್ಧಾಂತಿಕ ವಿಶ್ಲೇಷಣೆಗಳೂ ಸ್ಥಾನೀಕರಣದ ಐತಿಹಾಸಿಕ ಸಂದರ್ಭಗಳ ವಿವರಣೆಗಳೂ ಸ್ಥಾನೀಕರಣದ ಮೇಲೆ ಸಾಮಾನ್ಯವಾಗಿ ಪ್ರಭಾವ ಬೀರುವ ವಿವಿಧ ಅಂಶಗಳನ್ನು ಸ್ಪಷ್ಟಪಡಿಸಿವೆ.
ಸ್ಥಾನೀಕರಣದ ನಿರ್ಣಾಯಕಾಂಶಗಳು
[ಬದಲಾಯಿಸಿ]ಗಣಿ, ನಾಟ, ಮೀನುಗಾರಿಕೆ, ನೌಕಾ ನಿರ್ಮಾಣ ಇಂಥ ಕೈಗಾರಿಕೆಗಳ ಸ್ಥಾನೀಕರಣದ ವಿವರಣೆ ಸಾಮಾನ್ಯವಾಗಿ ಸುಲಭ. ಏಕೆಂದರೆ, ಅದುರುಗಳು ಇರುವ ಕಡೆ ಗಣಿಗಳೂ ಅರಣ್ಯ ಸಮೀಪದಲ್ಲಿ ನಾಟ ಉದ್ಯಮವೂ ಮೀನು ಸಿಗುವ ಜಲಾಶಯಗಳಲ್ಲಿ ಮೀನುಗಾರಿಕೆಯೂ ಉತ್ತಮ ಬಂದರುಗಳಲ್ಲಿ ನೌಕಾನಿರ್ಮಾಣ ಉದ್ಯಮವೂ ಸ್ಥಾಪನೆಯಾಗುವುದು ಸ್ವಾಭಾವಿಕ. ಸೇವಾ ಕೈಗಾರಿಕೆಗಳು ಸಾಮಾನ್ಯವಾಗಿ ಹೆಚ್ಚು ಕೇಂದ್ರೀಕೃತವಾಗಲಾರವು. ಆದಷ್ಟು ಮಟ್ಟಿಗೆ ಅನುಭೋಗಿಗಳ ಸಮೀಪದಲ್ಲಿ ಇವು ಇರಬೇಕಾಗಿರುವುದರಿಂದ ಚಿಲ್ಲರೆ ವ್ಯಾಪಾರ ಸಂಸ್ಥೆಗಳು, ಹೋಟೆಲುಗಳು, ಥಿಯೇಟರುಗಳು, ಸಾರಿಗೆ ಸೇವೆ, ಬ್ಯಾಂಕಿಂಗ್ ಇತ್ಯಾದಿ ವಿವಿಧ ಸೇವಾ ಉದ್ಯಮಗಳು ಒಂದೊಂದು ದೇಶದಲ್ಲಿಯೂ ಅನೇಕ ಸ್ಥಳಗಳಲ್ಲಿ ಸ್ಥಾಪನೆಯಾಗಬೇಕಾಗುತ್ತದೆ. ಆದರೆ, ಆಧುನಿಕ ಕೈಗಾರಿಕಾ ಪ್ರಪಂಚದಲ್ಲಿ ಅನೇಕ ಕೈಗಾರಿಕೆಗಳು ಕೆಲವೇ ಸ್ಥಳಗಳಲ್ಲಿ ಬಹುಮಟ್ಟಿಗೆ ಕೇಂದ್ರೀಕೃತವಾಗುವ ಪ್ರವೃತ್ತಿ ಇದೆ. ಇಂಥ ಕೈಗಾರಿಕಾಸ್ಥಾನೀಕರಣದ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುತ್ತವೆ. ತಾನು ಸ್ಥಾಪಿಸಬೇಕೆಂದಿರುವ ಕೈಗಾರಿಕೆಗೆ ಅತ್ಯುತ್ತಮ ಸ್ಥಳ ಯಾವುದು ಎಂಬುದು ಉದ್ಯಮಿಗಳು ಕೈಗೊಳ್ಳಬೇಕಾದ ಪ್ರಥಮ ನಿರ್ಣಯಗಳಲ್ಲಿ ಒಂದು. ಇದು ಮುಖ್ಯವಾದ್ದು. ಕೆಲವು ವೇಳೆ ಈ ನಿರ್ಣಯಕ್ಕೆ ಉದ್ಯಮಿಗಳ ಕೇವಲ ವೈಯಕ್ತಿಕ ಕಾರಣಗಳಿರಬಹುದು. ಉದಾಹರಣೆಗೆ, ತನ್ನ ಮೋಟಾರು ಕಾರ್ಖಾನೆಗೆ ಅಮೆರಿಕದ ಹೆನ್ರಿ ಫೋರ್ಡ್ ಡೆಟ್ರಾಯಿಟನ್ನು ಆರಿಸಿಕೊಂಡಿದ್ದಕ್ಕೆ ತನ್ನ ಆ ಸ್ವಂತ ಸ್ಥಳದ ಮೇಲೆ ಆತನಿಗೆ ಇದ್ದ ಮಮತೆಯೇ ಕಾರಣವೆಂದು ಹೇಳಲಾಗಿದೆ. ತನ್ನ ತಂದೆ ವಿದ್ಯಾಭ್ಯಾಸ ಮಾಡಿದ ಶಾಲಾಕಟ್ಟಡ ಸಕಾಲದಲ್ಲಿ ಮಾರಾಟಕ್ಕೆ ಸಿಕ್ಕಿದ್ದೇ ಕೌಲಿ ಎಂಬ ಸ್ಥಳದಲ್ಲಿ ಲಾರ್ಡ್ ನಫೀಲ್ಡ್ ಮೋಟಾರ್ ಕಾರು ಕೈಗಾರಿಕೆ ಸ್ಥಾಪಿಸಿದ್ದಕ್ಕೆ ಕಾರಣವಾಯಿತೆಂದು ಹೇಳಲಾಗಿದೆ. ಪ್ರತಿಯೊಂದು ಕೈಗಾರಿಕೆಯ ಉಗಮದ ಇತಿಹಾಸದಲ್ಲೂ ಆಯಾ ಕೈಗಾರಿಕಾ ಪ್ರಮುಖರು ಪರಿಗಣಿಸಿದ ಇಂಥ ಕೆಲವು ವೈಯಕ್ತಿಕ ಕಾರಣಗಳನ್ನು ಬಹುಶಃ ಕಾಣಬಹುದು. ಕೈಗಾರಿಕೆಗಳು ನಿರ್ದಿಷ್ಟ ಸ್ಥಳಗಳಲ್ಲಿ ಸ್ಥಾಪನೆಯಾದ್ದನ್ನು ಈ ದೃಷ್ಟಿಯಿಂದ ಕೇವಲ ಐತಿಹಾಸಿಕ ಆಕಸ್ಮಿಕಗಳಾಗಿ ಭಾವಿಸಬಹುದು. ಇಂಗ್ಲೆಂಡಿನ ಪ್ರಖ್ಯಾತ ಲ್ಯಾಂಕಷೈರ್ ಹತ್ತಿ ಕೈಗಾರಿಕೆ ಮತ್ತು ಸ್ಟಾಫರ್ಡ್‍ಷೈರಿನ ಕುಂಭೋದ್ಯಮಗಳು ಅಲ್ಲಿ ಸ್ಥಾಪನೆಯಾದ್ದು ಕೂಡ ಕೇವಲ ಆಕಸ್ಮಿಕ ಎಂದು ಹೇಳಲಾಗಿದೆ. ಪ್ರಥಮತಃ ಹೀಗೆ ಯಾವುದೇ ವಿಶೇಷ ಕಾರಣಗಳಿಂದ ಕೈಗಾರಿಕೆಗಳು ನಿರ್ದಿಷ್ಟ ಸ್ಥಳದಲ್ಲಿ ಸ್ಥಾಪನೆಯಾದರೂ ಅವು ಬಹುಕಾಲ ಅಲ್ಲಿ ನೆಲೆಸಿ, ವಿಸ್ತರಿಸಿ ಅಭಿವೃದ್ಧಿಯಾಗಲು ವಾಸ್ತವವಾದ ಆರ್ಥಿಕ ಅಥವಾ ಇತರ ಪ್ರಬಲಕಾರಣಗಳು ಇರಲೇಬೇಕು.ಯಾವ ಸ್ಥಳದಲ್ಲಿ ಕೈಗಾರಿಕೆ ಸ್ಥಾಪನೆಯಾದರೆ ಉತ್ಪಾದನ ವೆಚ್ಚ ಕನಿಷ್ಠವಾಗುವುದೋ ಅದು ಆರ್ಥಿಕ ದೃಷ್ಟಿಯಿಂದ ಆ ಕೈಗಾರಿಕೆಗೆ ಅತ್ಯಂತ ಯೋಗ್ಯವಾದ ಸ್ಥಳವೆಂದು ಹೇಳಬಹುದು. ಉತ್ಪಾದನ ವೆಚ್ಚವನ್ನು ನಿರ್ಣಯಿಸುವ ಅಂಶಗಳನ್ನು ಸಾರಿಗೆವೆಚ್ಚ ಮತ್ತು ಇತರ ವೆಚ್ಚಗಳು ಎಂದು ಸ್ಥೂಲವಾಗಿ ವಿಂಗಡಿಸುವುದು ಸ್ಥಾನೀಕರಣ ನಿರ್ಣಯಾಂಶಗಳ ವಿಶ್ಲೇಷಣೆಯ ದೃಷ್ಟಿಯಿಂದ ಉಪಯುಕ್ತವಾಗುತ್ತದೆ.
ಕೈಗಾರಿಕಾಕೇಂದ್ರ
[ಬದಲಾಯಿಸಿ]ಇತರ ವೆಚ್ಚಗಳಲ್ಲಿ ವಿವಿಧ ಸ್ಥಳಗಳೊಳಗೆ ವ್ಯತ್ಯಾಸವಿಲ್ಲದ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳನ್ನು ಕೈಗಾರಿಕಾಕೇಂದ್ರಕ್ಕೆ ಸಾಗಿಸುವ ವೆಚ್ಚ ಮತ್ತು ಸಿದ್ಧವಸ್ತುಗಳನ್ನು ಮಾರುಕಟ್ಟೆಗೆ ತಲಪಿಸುವ ವೆಚ್ಚ ಇವೆರಡೂ ಸೇರಿದ ಸಾರಿಗೆವೆಚ್ಚವನ್ನು ಕನಿಷ್ಠಗೊಳಿಸುವ ದೃಷ್ಟಿಯಿಂದ ಕೈಗಾರಿಕೆಗಳ ಸ್ಥಾನೀಕರಣ ನಿರ್ಣಯವಾಗಬೇಕಾಗುತ್ತದೆ. ಅನೇಕ ಕೈಗಾರಿಕೆಗಳಿಗೆ ಬೇಕಾಗುವ ಆಯಾ ಕಚ್ಚಾಸರಕುಗಳು ನಿರ್ದಿಷ್ಟಸ್ಥಳಗಳಲ್ಲಿ ಮಾತ್ರವೇ ದೊರೆಯುತ್ತವೆ. ಆದ್ದರಿಂದ ಈ ಕಚ್ಚಾಸರಕುಗಳ ಸರಬರಾಯಿಯ ಪ್ರದೇಶದ ಸಾಮೀಪ್ಯ ಕೈಗಾರಿಕಾಸ್ಥಾನೀಕರಣದ ಒಂದು ಮುಖ್ಯ ಕಾರಣ. ಭಾರತದ ಕಬ್ಬಿಣ ಮತ್ತು ಉಕ್ಕು ಕೈಗಾರಿಕಾಕೇಂದ್ರಗಳು ಕಬ್ಬಿಣದ ಅದುರು ಸಿಗುವ ಪ್ರದೇಶಕ್ಕೆ ಹತ್ತಿರದಲ್ಲಿರುವುದೂ ಹತ್ತಿ ಜವಳಿ ಕೈಗಾರಿಕಾಕೇಂದ್ರಗಳಾದ ಮುಂಬಯಿ ಮತ್ತು ಅಹಮದಾಬಾದ್ ನಗರಗಳ ಹಿನ್ನಾಡುಗಳು ಹತ್ತಿ ಬೆಳೆಯುವ ಪ್ರದೇಶಗಳಾಗಿರುವುದೂ ಸಣಬುಕಾರ್ಖಾನೆಗಳು ಬಂಗಾಳದ ಸಣಬು ಬೆಳೆಯುವ ಪ್ರದೇಶಗಳ ಹತ್ತಿರವಿರುವುದೂ ಕಚ್ಚಾ ಸಾಮಗ್ರಿಯ ಆಕರ್ಷಣೆಯನ್ನು ನಿದರ್ಶಿಸುತ್ತವೆ. ಸಾಮಾನ್ಯವಾಗಿ ಹೇಳುವುದಾದರೆ, ಯಾವುದೇ ಒಂದು ಸರಕಿನ ಒಂದು ಟನ್ ತೂಕದಷ್ಟು ಪರಿಮಾಣದ ಉತ್ಪಾದನೆಗೆ ಇದಕ್ಕೂ ಹೆಚ್ಚು ತೂಕದ ಕಚ್ಚಾ ಸಾಮಗ್ರಿ ಬೇಕಾಗುವ ಸಿದ್ಧಪಡಿಸಿದ ಉತ್ಪನ್ನಗಳನ್ನು ಮಾರುಕಟ್ಟೆಕೇಂದ್ರಗಳಿಗೆ ಕಳಿಸಲು ಸಾರಿಗೆ ಸೌಕರ್ಯ ಉತ್ತಮವಾಗಿರುವ ಸಂದರ್ಭಗಳಲ್ಲಿ ಕಚ್ಚಾಸಾಮಗ್ರಿಗಳ ಮೂಲಸ್ಥಾನಕ್ಕೆ ಆದಷ್ಟು ಹತ್ತಿರದ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಯಾಗುವ ಪ್ರವೃತ್ತಿ ಇರುತ್ತದೆ. ಅಂದರೆ, ಸಿದ್ಧಸರಕುಗಳು ಒಳಗೊಂಡಿರುವ ಕಚ್ಚಾ ಸಾಮಗ್ರಿ ಮೊದಲು ಹೊಂದಿದ್ದ ತೂಕವನ್ನು ಕಳೆದುಕೊಳ್ಳುವುದೆ, ಹೀಗೆ ಕಳೆದುಕೊಳ್ಳುವುದಾದರೆ ಎಷ್ಟರಮಟ್ಟಿಗೆ ತನ್ನ ತೂಕವನ್ನು ಕಳೆದುಕೊಳ್ಳುತ್ತದೆ-ಎಂಬ ವಿಷಯ ಕೈಗಾರಿಕಾ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಒಂದು ಮುಖ್ಯ ಅಂಶ. ಉದಾಹರಣೆಗೆ, ಒಂದು ಟನ್ ಬೀಡುಕಬ್ಬಿಣ ತಯಾರಿಸಲು ಎರಡು ಟನ್ ಕಬ್ಬಿಣದ ಅದುರು ಮತ್ತು ಒಂದು ಟನ್ ಕಲ್ಲಿದ್ದಲು ಬೇಕಾಗುವುದಾದರೆ ಊದುಕುಲುಮೆಗಳು ಅದುರು ಮತ್ತು ಕಲ್ಲಿದ್ದಲುಗಳೆರಡೂ ಇರುವ ಪ್ರದೇಶಕ್ಕೆ ಆದಷ್ಟು ಸಮೀಪದಲ್ಲಿ ಸ್ಥಾಪನೆಯಾಗುತ್ತವೆ. ಕಬ್ಬಿಣದ ಅದುರು ಮತ್ತು ಕಲ್ಲಿದ್ದಲುಗಳೆರಡೂ ಇದರ ಸಮೀಪಪ್ರದೇಶಗಳಲ್ಲಿ ದೊರಕದಿದ್ದರೆ ಇವೆರಡರಲ್ಲಿ ಯಾವುದರ ಸಾಗಣೆ ವೆಚ್ಚ ಹೆಚ್ಚಾಗಿರುವುದೊ ಅದು ಸಿಗುವ ಸ್ಥಳಕ್ಕೆ ಹೆಚ್ಚು ಸಮೀಪದಲ್ಲಿ ಕಬ್ಬಿಣದ ಕೈಗಾರಿಕೆ ಸ್ಥಾಪನೆಯಾಗುವುದೆಂದು ಹೇಳಬಹುದು.
ಕನಿಷ್ಠ ಸಾಗಣೆವೆಚ್ಚದ ಅಂಶ
[ಬದಲಾಯಿಸಿ]ಕನಿಷ್ಠ ಸಾಗಣೆವೆಚ್ಚದ ಸ್ಥಳ ನಿರ್ಣಯ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಕೆಲವು ನಿದರ್ಶನಗಳಿಂದ ಇದು ಸ್ಪಷ್ಟವಾಗುತ್ತದೆ. ಇಂಗ್ಲೆಂಡಿನಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪನೆಯಾದ ಪ್ರಥಮದಲ್ಲಿ ಅದುರಿನ ಗುಣಮಟ್ಟ ಅತ್ಯುತ್ತಮವಾಗಿದ್ದು ಒಂದು ಟನ್ ಬೀಡುಕಬ್ಬಿಣ ತಯಾರಿಕೆಗೆ ಅನೇಕ ಟನ್‍ಗಳ ಕಲ್ಲಿದ್ದಲು ಬೇಕಾಗಿದ್ದುದರಿಂದ ಕಬ್ಬಿಣ ಕೈಗಾರಿಕೆಗಳೂ ಕಲ್ಲಿದ್ದಲು ಗಣಿಪ್ರದೇಶಗಳ ಸಮೀಪದಲ್ಲಿ ಸ್ಥಾಪನೆಯಾದುವು. ತರುವಾಯ ತಾಂತ್ರಿಕಪ್ರಗತಿಯಿಂದ ಉತ್ಪಾದನೆಗೆ ಅವಶ್ಯಕವಾದ ಕಲ್ಲಿದ್ದಲಿನ ಪ್ರಮಾಣ ಗಣನೀಯವಾಗಿ ಕಡಿಮೆಯಾದ್ದರಿಂದ ಕಬ್ಬಿಣದ ಕೈಗಾರಿಕೆ ಹೆಚ್ಚಾಗಿ ಕಬ್ಬಿಣದ ಅದುರು ಗಣಿಗಳ ಸಮೀಪದಲ್ಲಿ ಸ್ಥಾಪಿಸುವುದು ಹೆಚ್ಚು ಲಾಭದಾಯಕವಾಯಿತು. ಕಬ್ಬಿಣ ಹಾಗೂ ಉಕ್ಕು ತಯಾರಿಕೆಯಲ್ಲಿ ವಿದ್ಯುಚ್ಛಕ್ತಿಯ ಪ್ರಾಮುಖ್ಯ ಹೆಚ್ಚಿರುವ ಕಡೆಗಳಲ್ಲಿ ಕಲ್ಲಿದ್ದಲಿನ ಸಾಮೀಪ್ಯದ ಪ್ರಶ್ನೆ ಮುಖ್ಯವಲ್ಲ. ಅದುರು ಸಾಗಣೆ ವೆಚ್ಚ ಮುಖ್ಯವಾಗುತ್ತದೆ. ಆದರೆ, ಆಧುನಿಕ ಸಾರಿಗೆ ವ್ಯವಸ್ಥೆಯ ಬೆಳೆವಣಿಗೆಗಳಿಂದ ಕೈಗಾರಿಕೆಯ ಸ್ಥಾನೀಕರಣಕ್ಕೆ ಕಚ್ಚಾ ಸಾಮಗ್ರಿಯ ಸಾಮೀಪ್ಯವೊಂದೇ ಮುಖ್ಯವಾಗುವುದಿಲ್ಲ. ಜಪಾನ್ ತನ್ನ ಕಬ್ಬಿಣ ಉಕ್ಕು ಕೈಗಾರಿಕೆಗೆ ಬೇಕಾದ ಅದುರನ್ನು ಆಮದು ಮಾಡಿಕೊಳ್ಳುತ್ತಲೂ ಇದೆ. ಬಹುಕಾಲದಿಂದಲೂ ಲ್ಯಾಂಕಷೈರಿನ ಹತ್ತಿ ಕೈಗಾರಿಕೆ ಆಮದಾದ ಹತ್ತಿಯನ್ನು ಅವಲಂಬಿಸಿದೆ.ಸಾರಿಗೆವೆಚ್ಚ ಸಾರಿಗೆಶುಲ್ಕನೀತಿಯನ್ನು ಅವಲಂಬಿಸಿರುವುದಕ್ಕೆ ಭಾರತದ ಅನುಭವ ನಿದರ್ಶನ. ಕೈಗಾರಿಕೆಗಳು ಮೊದಲು ಮುಂಬಯಿ ಮತ್ತು ಕಲ್ಕತ್ತಗಳಲ್ಲಿ ಬಹಳ ಮಟ್ಟಿಗೆ ಸ್ಥಾನೀಕರಣವಾಗುವುದಕ್ಕೆ ಆಗಿನ ರೈಲ್ವೆದರ ನೀತಿ ಒಂದು ಕಾರಣವೆಂದೇ ಹೇಳಲಾಗಿದೆ. ತರುವಾಯ ಸಂಭವಿಸಿರುವ ಸಾರಿಗೆ ಅಭಿವೃದ್ಧಿ ಮತ್ತು ಸಾರಿಗೆ ಶುಲ್ಕನೀತಿಯ ಬದಲಾವಣೆಗಳಿಂದ ಈ ಸ್ಥಳಗಳು ಮೊದಲು ಹೊಂದಿದ್ದ ವಿಶೇಷ ಅನುಕೂಲಗಳನ್ನು ಕಳೆದುಕೊಂಡಿವೆ.
ಸಿದ್ಧವಸ್ತುಗಳನ್ನು ಮಾರುಕಟ್ಟೆಗೆ ತಲುಪಿಸುವ ವೆಚ್ಚ ಹಾಗೂ ಸೌಕರ್ಯಗಳು
[ಬದಲಾಯಿಸಿ]ಸಿದ್ಧವಸ್ತುಗಳನ್ನು ಮಾರುಕಟ್ಟೆಗೆ ತಲುಪಿಸುವ ವೆಚ್ಚ ಹಾಗೂ ಸೌಕರ್ಯಗಳು ಕೈಗಾರಿಕೆಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಸ್ಥಾಪಿಸಲು ಆಕರ್ಷಕವಾಗುವ ಇನ್ನೊಂದು ಅಂಶ. ಕಚ್ಚಾಸಾಮಗ್ರಿಗಳ ಸರಬರಾಯಿ ಮೂಲಗಳ ಆಕರ್ಷಣೆ ಒಂದು ಕಡೆ, ಅನುಭೋಗಿ ಬೇಡಿಕೆಯ ಸ್ಥಳಗಳ ಆಕರ್ಷಣೆ ಇನ್ನೊಂದು ಕಡೆ-ಇವೆರಡನ್ನು ಸಮನ್ವಯಗೊಳಿಸುವ ಕನಿಷ್ಠ ಸಾರಿಗೆ ವೆಚ್ಚದ ಪ್ರದೇಶದಲ್ಲಿ ಕೈಗಾರಿಕೆ ಸ್ಥಾನೀಕರಣವಾಗುವ ಪ್ರವೃತ್ತಿ ಹೊಂದಿರುವುದೆಂದು ಹೇಳಬಹುದು. ಈ ಸ್ಥಳನಿರ್ಣಯ ಕುರಿತ ಸೈದ್ಧಾಂತಿಕ ಮಾದರಿಯೊಂದನ್ನು ಆಲ್‍ಫ್ರೆಡ್ ವಿಬರ್ ತನ್ನ ಗ್ರಂಥದಲ್ಲಿ ರಚಿಸಿದ್ದಾನೆ. ಆದರೆ, ವಾಸ್ತವವಾಗಿ ಹೀಗೆ ನಿರ್ಣಯವಾಗುವ ಸ್ಥಳವೇ ಒಂದು ಕೈಗಾರಿಕೆಯ ಸ್ಥಾನೀಕರಣಕ್ಕೆ ಅತ್ಯುತ್ತಮ ಪ್ರದೇಶವೆಂದು ಭಾವಿಸಲಾಗುವುದಿಲ್ಲ. ಏಕೆಂದರೆ ಕೈಗಾರಿಕಾವೆಚ್ಚದಲ್ಲಿ ಸೇರುವ ಇತರ ಅನೇಕ ಅಂಶಗಳನ್ನೂ ಕೆಲವು ಆರ್ಥಿಕೇತರ ಕಾರಣಗಳನ್ನೂ ಸ್ಥಾನೀಕರಣದಲ್ಲಿ ಪರಿಗಣಿಸಬೇಕಾಗುತ್ತದೆ. ಒಂದು ಕೈಗಾರಿಕೆಗೆ ಬೇಕಾಗುವ ಉತ್ಪಾದನಂಗಗಳು ಯಾವ ಸ್ಥಳದಲ್ಲಿ ಅತ್ಯಂತ ಸುಲಭ ಬೆಲೆಗೆ ದೊರಕುವುವೋ ಅದು ಆರ್ಥಿಕದೃಷ್ಟಿಯಿಂದ ಆ ಕೈಗಾರಿಕೆಯ ಸ್ಥಾನೀಕರಣಕ್ಕೆ ಅತ್ಯುತ್ತಮ ಸ್ಥಳವಾಗುತ್ತದೆ. ವಾಯುಗುಣ, ಭೂಮಿ, ಲೋಕೋಪಯೋಗಿ ಸೇವೆಗಳು, ವಿದ್ಯುಚ್ಛಕ್ತಿ, ಬಂಡವಾಳ ಮತ್ತು ಬ್ಯಾಂಕಿಂಗ್ ಸೌಲಭ್ಯಗಳು, ಕಾರ್ಮಿಕ ಬಲ-ಇವೆಲ್ಲವುಗಳ ಬಗ್ಗೆಯೂ ಇರುವ ಅನುಕೂಲ ಹಾಗೂ ಪ್ರತಿಕೂಲಗಳು ಸ್ಥಾನೀಕರಣದ ಮೇಲೆ ಪ್ರಭಾವಹೊಂದಿರುತ್ತವೆ. ಏಕಪ್ರಕಾರವಾಗಿ ಹರಿಯುವ ನೀರಿನ ಆವಶ್ಯಕತೆ ಅಥವಾ ನಿರ್ದಿಷ್ಟ ಹವಾಗುಣ ಅಥವಾ ಇಂಥವೇ ಇತರ ನೈಸರ್ಗಿಕ ಗುಣವಿಶೇಷಗಳು ಕೆಲವು ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಪ್ರಾಮುಖ್ಯವುಳ್ಳ ಅಂಶಗಳಾಗಿರಬಹುದು. ವಸತಿ, ವಿದ್ಯಾಭ್ಯಾಸ, ಆರೋಗ್ಯ, ವೈದ್ಯ ಇತ್ಯಾದಿ ಸೌಕರ್ಯಗಳು ಹೆಚ್ಚು ಉತ್ತಮವಾಗಿರುವ ಪರಿಸ್ಥಿತಿ ಕೈಗಾರಿಕಾ ಸ್ಥಾಪಕರಿಗೆ ಆಕರ್ಷಕವಾಗಬಲ್ಲುದು. ಆಧುನಿಕ ಕೈಗಾರಿಕೆಗಳಿಗೆ ಶಕ್ತಿ ಅತ್ಯಾವಶ್ಯಕ. ಶಕ್ತಿಯ ಉತ್ಪಾದನೆಗೆ ಕಲ್ಲಿದ್ದಲು ಮುಖ್ಯ ಮೂಲಸಾಮಗ್ರಿಯಾಗಿದ್ದ ಕಾಲದಲ್ಲಿ ಕೈಗಾರಿಕಾಸ್ಥಾಪನೆಗೆ ಈ ಸಾಮಗ್ರಿ ದೊರಕುವ ಸ್ಥಳದ ಆಕರ್ಷಣೆ ಹೆಚ್ಚಾಗಿತ್ತು. ತಾಂತ್ರಿಕಪ್ರಗತಿಯಿಂದ ಬಾಯಿಲರ್‍ಗಳ ಹಾಗೂ ಶಕ್ತಿಯ ಉತ್ಪಾದನೆಗೆ ಸಂಬಂಧಪಟ್ಟ ಯಂತ್ರೋಪಕರಣಗಳು ಉತ್ತಮವಾದಂತೆಯೂ ತೈಲ ಹಾಗೂ ಜಲ ವಿದ್ಯುಚ್ಛಕ್ತಿಯ ಪ್ರಾಮುಖ್ಯ ಹೆಚ್ಚಿದಂತೆಯೂ ಕೈಗಾರಿಕಾಸ್ಥಾನೀಕರಣಕ್ಕೆ ಕಲ್ಲಿದ್ದಲಿನ ಆಕರ್ಷಣೆ ಕಡಿಮೆಯಾಗಿದೆ. ವಿದ್ಯುಚ್ಛಕ್ತಿ ಸಾಮಾನ್ಯವಾಗಿ ಎಲ್ಲ ಸ್ಥಳಗಳಿಗೂ ಹಬ್ಬಿರುವ ಆಧುನಿಕ ಆರ್ಥಿಕತೆಯಲ್ಲಿ ಅನೇಕ ಕೈಗಾರಿಕೆಗಳು-ಮುಖ್ಯವಾಗಿ ಲಘು ಕೈಗಾರಿಕೆಗಳು-ಹೆಚ್ಚು ಕೇಂದ್ರೀಕೃತವಾಗುವುದರ ಬದಲಾಗಿ ವಿಕೇಂದ್ರೀಕೃತವಾಗುವ ಪ್ರವೃತ್ತಿ ಇದೆ. ಇದು ಎಲ್ಲ ದೇಶಗಳ ಅನುಭವ. ದಕ್ಷಿಣ ಭಾರತದಲ್ಲಿ ಪೈಕಾರ ಜಲವಿದ್ಯುಚ್ಛಕ್ತಿಯೋಜನೆಯ ಕಾರ್ಯ ಮುಗಿದ ಅನಂತರ ಕೊಯಮತ್ತೂರು, ಮಧುರೆ, ತಿನ್ನವೆಲ್ಲಿ-ಇಂಥ ದಕ್ಷಿಣ ಭಾರತ ಕೇಂದ್ರಗಳಲ್ಲಿ ಹತ್ತಿನೂಲುಗಿರಣಿಗಳು ಸ್ಥಾಪನೆಯಾದುದು ಇದಕ್ಕೆ ಒಂದು ನಿದರ್ಶನ. ವಿದ್ಯುಚ್ಛಕ್ತಿಯ ಬೆಳೆವಣಿಗೆ ಕೈಗಾರಿಕಾ ಸ್ಥಾನೀಕರಣದ ಪ್ರವೃತ್ತಿಯನ್ನು ಸ್ವಲ್ಪಮಟ್ಟಿಗೆ ತಡೆದಿರುವುದಾದರೂ ಇತರ ಮುಖ್ಯ ಕಾರಣಗಳಿಂದ ಕೆಲವು ಕೈಗಾರಿಕೆಗಳು ಬಹುಮಟ್ಟಿಗೆ ಕೇಂದ್ರೀಕೃತವಾಗಿಯೇ ಉಳಿಯುವುವು. ಬೃಹದ್ಗಾತ್ರ ವ್ಯವಸ್ಥೆಯಿಂದ ಕೈಗಾರಿಕೆಗೆ ಲಭಿಸುವ ಪ್ರಯೋಜನಗಳು ಈ ಕಾರಣಗಳಲ್ಲಿ ಅತಿಮುಖ್ಯವಾದವು.
ಉತ್ಪಾದನಕಾರ್ಯ
[ಬದಲಾಯಿಸಿ]ಉತ್ಪಾದನಕಾರ್ಯ ಸಾಧ್ಯವಾದಷ್ಟು ಮಿತವ್ಯಯದಿಂದ ನಡೆಯಬೇಕಾದರೆ ಅದು ಬೃಹದ್ಗಾತ್ರ ತಳೆಯಲೇಬೇಕಾದ ಕೈಗಾರಿಕೆಗಳು ಆಧುನಿಕ ಕಾಲದಲ್ಲಿವೆ. ಇಂಥವು ಸಾಮಾನ್ಯವಾಗಿ ಕೆಲವೇ ಸ್ಥಳಗಳಲ್ಲಿ ಸ್ಥಾನೀಕರಣವಾಗುವುದು ಸ್ವಾಭಾವಿಕ. ಸ್ಥಾನೀಕರಣಕ್ಕೂ ಅನುಕೂಲತಮಗಾತ್ರಕ್ಕೂ (ಆಪ್ಟಿಮಂ ಸೈeóï) ಸಂಬಂಧವಿದೆ.ಕೈಗಾರಿಕೆಗೆ ಬೇಕಾಗುವ ನುರಿತ ಹಾಗೂ ಇತರ ಕಾರ್ಮಿಕ ಬಲದ ಸರಬರಾಯಿ ಪರಿಸ್ಥಿತಿ ಒಂದೊಂದು ಸ್ಥಳದಲ್ಲಿ ಒಂದೊಂದು ರೀತಿ ಇರುವ ಸಂದರ್ಭಗಳಲ್ಲಿ-ಇಂಥ ಸಂದರ್ಭಗಳು ಎಲ್ಲ ದೇಶಗಳಲ್ಲಿಯೂ ಸಾಮಾನ್ಯವಾಗಿ ಇವೆ-ಇದು ಕೈಗಾರಿಕಾ ಸ್ಥಾನೀಕರಣದ ಮೇಲೆ ಪ್ರಭಾವ ಹೊಂದಿರುವ ಮತ್ತೊಂದು ಮುಖ್ಯ ಅಂಶವಾಗಿದೆ. ಮುಂದುವರಿದಿರುವ ಕೈಗಾರಿಕಾಕೇಂದ್ರಗಳಲ್ಲಿ ನುರಿತ ಕಾರ್ಮಿಕಬಲ ಸಾಮಾನ್ಯವಾಗಿ ಸುಲಭವಾಗಿ ದೊರಕುವುದರಿಂದ ಹೊಸ ಕೈಗಾರಿಕೆಗಳು ಈ ಕಾರಣದಿಂದ ಅಲ್ಲಿ ಸ್ಥಾಪನೆಯಾಗುವ ಒಲವು ಇರುತ್ತದೆ. ಬಂಡವಾಳ ಮತ್ತು ಬ್ಯಾಂಕಿಂಗ್ ಸೌಕರ್ಯಗಳೂ ಇಂಥ ಕೇಂದ್ರಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿರುವುದು ಕೂಡ ಈ ಒಲವನ್ನು ಬಲಪಡಿಸುತ್ತದೆ. ಸ್ಥಾಪಿಸಲಾಗುವ ಒಂದು ಪ್ರಮುಖ ಕೈಗಾರಿಕೆಗೆ ಆವಶ್ಯಕವಾದ ಅಂಗಗಳನ್ನು ಒದಗಿಸಬಲ್ಲ ಪೂರಕ ಉದ್ಯಮಗಳು ಸ್ಥಾಪನೆಯಾಗಬಲ್ಲವೇ ಎಂಬುದೂ ಸ್ಥಾನೀಕರಣವನ್ನು ನಿರ್ಣಯಿಸುವ ಇನ್ನೊಂದು ಅಂಶ. ಒಟ್ಟಿನಲ್ಲಿ ಉತ್ಪಾದನಂಗಗಳು ಅತ್ಯಂತ ಸುಲಭಬೆಲೆಗೆ ದೊರಕುವ ಮತ್ತು ಕನಿಷ್ಠ ಸಾರಿಗೆ ವೆಚ್ಚವನ್ನು ಒಳಗೊಳ್ಳುವ ಸ್ಥಳ ಕೈಗಾರಿಕೆಯ ಸ್ಥಾಪನೆಗೆ ಆರ್ಥಿಕ ದೃಷ್ಟಿಯಿಂದ ಅತ್ಯಂತ ಅಪೇಕ್ಷಣೀಯ ಸ್ಥಳವಾಗುತ್ತದೆ.
ಸ್ಥಾನೀಕರಣ
[ಬದಲಾಯಿಸಿ]ಸ್ಥಾನೀಕರಣ ಕೆಲವು ಸಂದರ್ಭಗಳಲ್ಲಿ ಆರ್ಥಿಕೇತರ ಕಾರಣಗಳಿಂದ ಪ್ರಭಾವಿತವಾಗಬಲ್ಲುದು ಎಂಬುದನ್ನು ಗಮನಿಸಬೇಕು. ಸೈನಿಕ ಅಥವಾ ರಕ್ಷಣ ಆಯಕಟ್ಟಿನ ದೃಷ್ಟಿಯಿಂದ ಎಷ್ಟೇ ವೆಚ್ಚವಾಗಲಿ ಕೆಲವು ಕೈಗಾರಿಕೆಗಳನ್ನು ಸ್ಥಾಪಿಸಲು ಒಂದು ದೇಶ ತೀರ್ಮಾನಿಸಬಹುದು. ಇಂಥ ಕೈಗಾರಿಕೆಗಳು ಸಾಮಾನ್ಯವಾಗಿ ಶತ್ರುವಿನ ವೀಕ್ಷಣೆಗೆ ಮತ್ತು ವಿಮಾನಬಲದ ಹೊಡೆತಕ್ಕೆ ಸುಲಭವಾಗಿ ನಿಲುಕದ ಪ್ರದೇಶಗಳಲ್ಲಿ ಸ್ಥಾಪನೆಯಾಗಬೇಕಾಗಬಹುದು. ಇಂಥ ಸಂದರ್ಭಗಳಲ್ಲಿ ಸಾರಿಗೆ ವೆಚ್ಚ ಅಥವಾ ಇತರ ವೆಚ್ಚಗಳನ್ನು ಕನಿಷ್ಠಗೊಳಿಸುವುದು ಸ್ಥಾನೀಕರಣಕ್ಕೆ ಪ್ರಧಾನ ನಿರ್ಣಯಾಂಶವಾಗಲಾರದು
ಕೈಗಾರಿಕಾ ಸ್ಥಾನೀಕರಣಾಂಶದ ಅಳತೆ
[ಬದಲಾಯಿಸಿ]ಕೈಗಾರಿಕಾ ಸ್ಥಾನೀಕರಣದ ಮೇಲೆ ಅನೇಕ ಅಂಶಗಳ ಪ್ರಭಾವವಿರುವುದು ಮೇಲಿನ ವಿವರಣೆಯಿಂದ ವ್ಯಕ್ತವಾಗುತ್ತದೆ. ವಿವಿಧ ಅಂಶಗಳಿಂದ ಹೀಗೆ ನಿರ್ಣಯವಾಗುವ ಸ್ಥಾನೀಕರಣದ ತೀವ್ರತೆ ಎಲ್ಲ ಕೈಗಾರಿಕೆಗಳಲ್ಲೂ ಒಂದೇ ಸಮನಾಗಿರುವುದಿಲ್ಲ. ವಜ್ರ, ಚಿನ್ನ, ಪೆಟ್ರೋಲಿಯಂ, ಖನಿಜಗಳು ಇತ್ಯಾದಿ ಕೆಲವು ಕೈಗಾರಿಕೆಗಳಲ್ಲಿ ಸ್ಥಾನೀಕರಣ ಹೆಚ್ಚು ಪ್ರಮಾಣದಲ್ಲಿರುತ್ತದೆ. ಇತರ ಅನೇಕ ತಯಾರಿಕೋದ್ಯಮಿಗಳ ಸ್ಥಾನೀಕರಣಾಂಶಗಳಲ್ಲಿ ವ್ಯತ್ಯಾಸವಿರುತ್ತದೆ. ಕೈಗಾರಿಕಾಸ್ಥಾನೀಕರಣ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಗ್ರಹಿಸಲು ಫ್ಲೊರೆನ್ಸ್ ತನ್ನ ಸೈದ್ಧಾಂತಿಕ ವಿವರಣೆಯಲ್ಲಿ ಕೆಲವು ಸಂಖ್ಯಾಶಾಸ್ತ್ರೀಯ ಭಾವನೆಗಳನ್ನು ಕೊಟ್ಟಿದ್ದಾನೆ. ಸ್ಥಾನೀಕರಣಾಂಶ (ಲೊಕೇಷನ್ ಫ್ಯಾಕ್ಟರ್) ಮತ್ತು ಸ್ಥಾನೀಕರಣದ ಸಹಕಾರಕ (ಕೋ-ಎಫಿಷೆಂಟ್ ಆಫ್ ಲೊಕೇಷನ್) ಎಂಬುವು ಎರಡು ಮುಖ್ಯ ಭಾವನೆಗಳು.ಯಾವುದೇ ಕೈಗಾರಿಕೆಯ ಒಟ್ಟು ಕಾರ್ಮಿಕಬಲದಲ್ಲಿ ಎಷ್ಟು ಸೇಕಡ ಪ್ರಮಾಣ ಒಂದು ಪ್ರದೇಶದಲ್ಲಿ ಇರುವುದೋ ಅದನ್ನು ಆ ಪ್ರದೇಶದ ಒಟ್ಟು ಕೈಗಾರಿಕಾ ಕಾರ್ಮಿಕಬಲದ ಸೇಕಡದಿಂದ ಭಾಗಿಸಿದರೆ ಬರುವ ಸಂಖ್ಯೆಯನ್ನು ಸ್ಥಾನೀಕರಣಾಂಶದ ಸೂಚ್ಯಂಕವೆಂದು ಪರಿಗಣಿಸಲಾಗಿದೆ. ಒಂದು ಕೈಗಾರಿಕೆಯಲ್ಲಿರುವ ಒಟ್ಟು ಕಾರ್ಮಿಕಬಲದ ಪ್ರಾದೇಶಿಕ ಸೇಕಡಗಳು ಮತ್ತು ಎಲ್ಲ ಕೈಗಾರಿಕೆಗಳಲ್ಲಿರುವ ಒಟ್ಟು ಕಾರ್ಮಿಕಬಲದ ಪ್ರಾದೇಶಿಕ ಸೇಕಡಗಳು-ಇವೆರಡರ ಅನುಕ್ರಮವಾದ ದಿಕ್‍ಚ್ಯುತಿಗಳ (ಡೀವಿಯೇಷನ್ಸ್) ಒಟ್ಟು ಮೊತ್ತವನ್ನು 100 ರಿಂದ ಭಾಗಿಸಿದರೆ ಬರುವ ಸಂಖ್ಯೆ ಸ್ಥಾನೀಕರಣದ ಸಹಕಾರಕ ಆಗುತ್ತದೆ. ಒಂದು ಕೈಗಾರಿಕೆ ದೇಶದ ವಿವಿಧ ಪ್ರದೇಶಗಳಲ್ಲಿ ಹಂಚಿಕೆಯಾಗಿರುವಾಗ ಹಂಚಿಕೆಯಲ್ಲಿ ಎಷ್ಟು ಅಂಶದ ಅಸಮಾನತೆ ಇದೆ ಎಂಬುದರ-ಅದು ಎಷ್ಟರಮಟ್ಟಿಗೆ ಕೇಂದ್ರೀಕೃತವಾಗಿದೆ ಅಥವಾ ವಿಕೇಂದ್ರೀಕೃತವಾಗಿದೆ ಎಂಬುದರ-ವಿಶ್ಲೇಷಣೆಯಲ್ಲಿ ಇಂಥ ಸಂಖ್ಯಾಶಾಸ್ತ್ರೀಯ ವಿಧಾನಗಳು ಸಹಾಯಕವಾಗಿವೆ. ಕಾರ್ಮಿಕಬಲ ವಿತರಣೆಯ ಆಧಾರದ ಮೇಲೆ ಹಿಂದೆ ಹೇಳಿದಂತೆ ಫ್ಲೋರೆನ್ಸ್ ರಚಿಸಿರುವ ಸೂಚ್ಯಂಕಗಳಿಗಿಂತ ಉತ್ಪಾದನೆಯ ಪ್ರಮಾಣದ ಆಧಾರದ ಮೇಲೆ ಕೈಗಾರಿಕಾ ಸ್ಥಾನೀಕರಣಾಂಶವನ್ನು ಅಳೆಯುವುದು ಹೆಚ್ಚು ಉಪಯುಕ್ತವಾಗುವುದೆಂಬ ಅಭಿಪ್ರಾಯವೂ ಇದೆ. ಸ್ಥಾನೀಕರಣ ಎಷ್ಟುಮಟ್ಟಿಗೆ ಕೇಂದ್ರೀಕರಣಕ್ಕೆ ಎಡೆಮಾಡಿದೆ ಎಂಬುದರ ಇಂಥ ವಿಶ್ಲೇಷಣೆಗೆ ಪ್ರಾದೇಶಿಕ ಆರ್ಥಿಕ ಸಮತೋಲ ಕುರಿತ ಇತ್ತೀಚಿನ ಅಧ್ಯಯನಗಳು ಸಹಾಯಕವಾಗಿವೆ. ಕೈಗಾರಿಕಾಸ್ಥಾನೀಕರಣಾಂಶವನ್ನು ಅಳೆಯಲು ಮತ್ತು ಈ ಬಗ್ಗೆ ಸ್ಥೂಲ ಚಿತ್ರವೊಂದನ್ನು ರಚಿಸಲು ಸಾಧ್ಯ. ಸ್ಥಾನೀಕರಣದ ಸಾಧಕಬಾಧಕಗಳ ಸೂಕ್ಷ್ಮಪರಿಶೀಲನೆಗೆ ಸ್ಥಾನೀಕರಣದ ಇಂಥ ಅಳತೆ ಆವಶ್ಯಕವಾಗುತ್ತದೆ.
ಅನುಕೂಲಗಳು
[ಬದಲಾಯಿಸಿ]ಕೈಗಾರಿಕಾಸ್ಥಾನೀಕರಣ ಆಧುನಿಕ ಆರ್ಥಿಕಾಭಿವೃದ್ಧಿಯ ಒಂದು ಗುಣವಿಶೇಷ. ಅಂದಮೇಲೆ ಆರ್ಥಿಕಾಭಿವೃದ್ಧಿಯ ಅಂಗವಾದ ಕೈಗಾರಿಕಾಭಿವೃದ್ಧಿಗೆ ಸ್ಥಾನೀಕರಣ ಒಂದು ಕಾರಣವಾಗುವುದೆಂದು ತಿಳಿಯಬಹುದು. ಕೈಗಾರಿಕಾಭಿವೃದ್ಧಿಗೆ ಪೋಷಕವಾಗುವುದರಿಂದ ಸ್ಥಾನೀಕರಣ ಪ್ರವೃತ್ತಿಯನ್ನು ಒಂದು ಅಪೇಕ್ಷಣೀಯ ಬೆಳೆವಣಿಗೆ ಎಂದು ಹೇಳಬಹುದಾಗಿದೆ. ಉತ್ಪಾದನೆಯಲ್ಲಿ ವಿಶೇಷೀಕರಣದಿಂದ ಲಭಿಸುವ ಪ್ರಯೋಜನಗಳೆಲ್ಲವನ್ನೂ ಸ್ಥಾನೀಕರಣ ದೊರಕಿಸುತ್ತದೆ. ಒಂದೊಂದು ಉದ್ಯಮಸಂಸ್ಥೆಗೂ ಆಂತರಿಕ ಹಾಗೂ ಬಾಹ್ಯ ಮಿತವ್ಯಯಗಳನ್ನು ಪರಮಾವಧಿಗೊಳಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಒಂದೊಂದು ಕಾರ್ಖಾನೆಯೂ ಬೃಹದ್ಗಾತ್ರದ ಉತ್ಪಾದನ ಕೇಂದ್ರವಾಗುವುದರಿಂದ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿ ಶ್ರಮ ವಿಭಜನೆಯ ತತ್ತ್ವವನ್ನು ಹೆಚ್ಚಾಗಿ ಆಚರಣೆಗೆ ತರಬಹುದು. ಕಾರ್ಮಿಕರಿಗೆ ಉಪಯುಕ್ತವಾದ ತಾಂತ್ರಿಕಶಿಕ್ಷಣ ಕೊಡಲು ಏರ್ಪಾಡು ಮಾಡಲು ಸಾಧ್ಯವಾಗುತ್ತದೆ. ಒಂದು ಸ್ಥಳದಲ್ಲಿ ನೆಲೆಸುವ ಕೈಗಾರಿಕೆಗೆ ಸಂಬಂಧಪಟ್ಟ ವಿವಿಧ ಉದ್ಯಮ ಸಂಸ್ಥೆಗಳು ಸಂಘಟಿತವಾಗಿ ಕೈಗಾರಿಕಾಮುನ್ನಡೆಗೆ ಆವಶ್ಯಕವಾದ ಸಂಶೋಧನೆಗಳನ್ನು ಕೈಗೊಳ್ಳಲೂ ಹೊಸ ತಂತ್ರಗಳನ್ನು ಅನುಸರಿಸಲೂ ಸಾಧ್ಯವಾಗುತ್ತದೆ.ಕೈಗಾರಿಕಾಸ್ಥಾನೀಕರಣ ಕೈಗಾರಿಕಾವಿಸ್ತರಣೆಗೆ ಅನೇಕ ರೀತಿಯಲ್ಲಿ ಮಾರ್ಗ ಮಾಡಿಕೊಡುತ್ತದೆ. ಏಕೆಂದರೆ, ಒಂದು ಪ್ರಮುಖ ಕೈಗಾರಿಕೆಗೆ ಸಂಬಂಧಪಟ್ಟ ಅನೇಕ ಉಪಉದ್ಯಮಗಳು ಅದೇ ಪ್ರದೇಶದಲ್ಲಿ ಸ್ಥಾಪನೆಯಾಗುವುದು ಸ್ವಾಭಾವಿಕ. ಕೈಗಾರಿಕಾಕೇಂದ್ರ ವ್ಯಾಪಾರಸಂಸ್ಥೆಗಳ ಮತ್ತು ಹಣಸಂಸ್ಥೆಗಳ ಬೆಳೆವಣಿಗೆಗೂ ಉತ್ತೇಜಕ ವಾತಾವರಣವಿರುವ ಪ್ರದೇಶವಾಗುತ್ತದೆ. ಔದ್ಯೋಗಿಕ ಬೆಳೆವಣಿಗೆ, ವ್ಯಾಪಾರಾಭಿವೃದ್ಧಿ, ಹಣದ ಪೇಟೆಯ ವಿಸ್ತರಣೆ, ಸಾರಿಗೆ ಮತ್ತು ಸಂಪರ್ಕ ಸೌಲಭ್ಯಗಳು ಇತ್ಯಾದಿ ಆರ್ಥಿಕಾಂಗಗಳು ಪರಸ್ಪರ ಪೋಷಕವೆಂದೇ ಹೇಳಬಹುದು. ಹೀಗೆ, ಯಾವುದೇ ಕೈಗಾರಿಕೆ ಒಂದು ಸ್ಥಳದಲ್ಲಿ ನೆಲೆಸಿ ಅದು ಅಲ್ಲಿಯ ವೈಶಿಷ್ಟ್ಯವಾಗುವುದರಿಂದ ಒಂದು ರೀತಿಯ ವಿಸ್ತರಣ ಪರಿಣಾಮದ (ಸ್ಪ್ರೆಡ್ ಎಫೆಕ್ಟ್) ಮೂಲಕ ಆ ಸ್ಥಳದಲ್ಲಿ ಆರ್ಥಿಕ ಚಟುವಟಿಕೆಗಳೆಲ್ಲವೂ ವಿಸ್ತರಿಸುವ ಸಂಭವ ಹೆಚ್ಚು. ಹೀಗೆ ಸ್ಥಾನೀಕರಣಕ್ಕೂ ಪ್ರಾದೇಶಿಕ ಅಭಿವೃದ್ಧಿಗೂ ಸಂಬಂಧ ಕಲ್ಪಿಸಬಹುದು. ಪ್ರಾದೇಶಿಕ ಅಭಿವೃದ್ಧಿಯಿಂದ ಆ ಸ್ಥಳದ ಜನರ ಆರ್ಥಿಕಮಟ್ಟ ಏರುವುದೆಂದೂ ಹೇಳಬಹುದು.
ಪ್ರತಿಕೂಲಗಳು
[ಬದಲಾಯಿಸಿ]ಕೈಗಾರಿಕಾಸ್ಥಾನೀಕರಣ ಮೇಲೆ ಹೇಳಿರುವಂತೆ ಕೆಲವು ಪ್ರದೇಶಗಳ ವಿಶೇಷ ಆರ್ಥಿಕಾಭಿವೃದ್ಧಿಗೆ ಸಹಾಯಕವಾಗುವುದಾದರೂ ಪ್ರಾದೇಶಿಕ ಅಸಮತೆಯ ಸಮಸ್ಯೆಗೆ ಅದು ಮುಖ್ಯಕಾರಣವಾಗಿದೆ ಎಂಬ ಅತಿಮುಖ್ಯ ಅಪವಾದಕ್ಕೆ ಅದು ಗುರಿಯಾಗಿದೆ. ಕೈಗಾರಿಕೆಯಲ್ಲಿ ಮುಂದುವರಿದಿರುವ ಪ್ರತಿಯೊಂದು ದೇಶದಲ್ಲೂ ಹಿಂದುಳಿದ ಪ್ರದೇಶಗಳಿರುವುದು ಇತ್ತೀಚೆಗೆ ಸಾರ್ವತ್ರಿಕಗಮನ ಸೆಳೆದಿರುವ ಮುಖ್ಯ ಸಮಸ್ಯೆ. ಆರ್ಥಿಕಯೋಜನೆಯನ್ನು ಅನುಸರಿಸುತ್ತಿರುವ ರಾಷ್ಟ್ರಗಳು ಸ್ಥಾನೀಕರಣದಿಂದ ಉಂಟಾಗಬಹುದಾದ ಪ್ರಾದೇಶಿಕ ಅಸಮತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಅನೇಕ ವಿಶೇಷಕ್ರಮಗಳನ್ನು ಸಾಮಾನ್ಯವಾಗಿ ಕೈಗೊಳ್ಳುತ್ತಿವೆ.ಕೈಗಾರಿಕಾ ಸ್ಥಾನೀಕರಣದಿಂದ ಜನರ ಆರ್ಥಿಕ ಪರಿಸ್ಥಿತಿಗಳು ಆಯಾ ಸ್ಥಳಗಳ ನಿರ್ದಿಷ್ಟ ಕೈಗಾರಿಕೆಗಳನ್ನು ಬಹುಮಟ್ಟಿಗೆ ಅವಲಂಬಿಸಿರುತ್ತವೆ. ಕಾರಣಾಂತರದಿಂದ ಈ ಕೈಗಾರಿಕೆಗಳು ವಿಪತ್ತಿಗೆ ಗುರಿಯಾದರೆ ಜನ ತುಂಬ ಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆದರೆ, ಆಧುನಿಕ ಕೈಗಾರಿಕಾವ್ಯವಸ್ಥೆಯಲ್ಲಿ ವಿಶೇಷೀಕರಣಕ್ಕೆ ಸಂಬಂಧಿಸಿದ ಲಾಭಗಳನ್ನು ಪಡೆಯಬೇಕಾದರೆ ಇಂಥ ತಾತ್ಕಾಲಿಕ ಕಷ್ಟಸಂಭವಗಳನ್ನು ಎದುರಿಸಲು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಕೈಗಾರಿಕಾ ಸ್ಥಾನೀಕರಣದಿಂದ ಬೆಳೆಯುವ ನಗರಗಳಲ್ಲಿ ಜನಸಾಂದ್ರತೆ ಹೆಚ್ಚುವುದರಿಂದ ನಗರದ ಸ್ವಚ್ಛತೆ, ಒಳ್ಳೆಯ ನೀರಿನ ಸರಬರಾಯಿ, ಮನೆಗಳ ಮತ್ತು ಇತರ ಜೀವನ ಸೌಕರ್ಯಗಳ ಲಭ್ಯತೆ ಇವೆಲ್ಲವೂ ತೀವ್ರ ಸಮಸ್ಯೆಗಳಾಗುತ್ತವೆ. ಆದರೆ, ಕೈಗಾರಿಕಾಭಿವೃದ್ಧಿ ಮತ್ತು ಜನಸಂಖ್ಯಾ ಬೆಳೆವಣಿಗೆಗಳ ಜೊತೆಗೆ ಇಂಥ ಸಮಸ್ಯೆಗಳು ಅನಿವಾರ್ಯವಾಗಿ ಉದ್ಭವಿಸುತ್ತವೆ. ಆಧುನಿಕ ನಗರಯೋಜನೆಗಳು ಇವನ್ನು ನಿವಾರಿಸಲು ಉಪಾಯಗಳನ್ನು ಹಾಕಿಕೊಂಡಿವೆ. ಸ್ಥಾನೀಕರಣದ ಅನಪೇಕ್ಷಣೀಯ ಪರಿಣಾಮಗಳನ್ನು ತಡೆಗಟ್ಟಿ ಅದರ ಲಾಭಗಳನ್ನು ಪರಮಾವಧಿಗೊಳಿಸುವುದೇ ಸ್ಥಾನೀಕರಣ ನೀತಿಯ ಮುಖ್ಯ ಉದ್ದೇಶ ಎಂದು ಹೇಳಬಹುದು.
ಕೈಗಾರಿಕೆಗಳ ಪುನಃಸ್ಥಾನೀಕರಣ
[ಬದಲಾಯಿಸಿ]ಯಾವುದೇ ಒಂದು ಕಾಲದಲ್ಲಿ ಸಂಭವಿಸುವ ಕೈಗಾರಿಕಾಸ್ಥಾನೀಕರಣ ಶಾಶ್ವತವೇನೂ ಅಲ್ಲ. ಅದು ಎಂದೆಂದೂ ಬದಲಾಯಿಸದ ಸ್ಥಾನೀಕರಣಸಮತೋಲಸ್ಥಿತಿ ಎಂದು ಪರಿಗಣಿಸಲಾಗದು. ವ್ಯತ್ಯಸ್ತ ಸಂದರ್ಭ ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಸ್ಥಾನೀಕರಣದ ಸ್ವರೂಪವೂ ಬದಲಾಯಿಸುವುದೆಂಬುದನ್ನು ಗಮನಿಸಬೇಕು. ಪುನಃಸ್ಥಾನೀಕರಣದ ಮೂಲಕಾರಣಗಳನ್ನು ಋತುವಿನ, ಆವರ್ತದ, ದೀರ್ಘಕಾಲದ ಮತ್ತು ರಚನಾಸಂಬಂಧವಾದ ಬದಲಾವಣೆಗಳೂ ಎಂದು ಹೂವರ್ ವಿಂಗಡಿಸಿದ್ದಾನೆ. ಮೊದಲ ಎರಡೂ ಸ್ಥಾನೀಕರಣದ ಅಲ್ಪಕಾಲಿಕ ಬದಲಾವಣೆಗಳಿಗೆ ಕಾರಣವಾಗುವುದಾದರೆ, ಉಳಿದೆರಡೂ ಹೆಚ್ಚು ಶಾಶ್ವತವಾದ ಸ್ಥಾನೀಕರಣ ಬದಲಾವಣೆಗಳನ್ನು ಉಂಟುಮಾಡುವುವೆಂದು ಹೇಳಬಹುದು. ದೀರ್ಘಕಾಲೀನ ಹಾಗೂ ರಚನಾಸಂಬಂಧಿ ಬೆಳೆವಣಿಗೆಗಳಿಂದ ಸ್ಥಾನೀಕರಣದ ವಿವಿಧ ನಿರ್ಣಾಯಕಾಂಶಗಳ ಸಾಪೇಕ್ಷ ಪ್ರಾಮುಖ್ಯ ಗಮನಾರ್ಹವಾಗಿ ಬದಲಾಯಿಸುತ್ತದೆ. ಉದಾಹರಣೆಗೆ, ಸಾರಿಗೆ ಸಂಪರ್ಕ ವಿಸ್ತರಣೆ, ವಿದ್ಯುಚ್ಛಕ್ತಿ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಇತ್ಯಾದಿ ಅಂಶಗಳಿಂದ ಒಂದು ಕೈಗಾರಿಕೆಗೆ ಹೊಸ ಹೊಸ ಸ್ಥಳಗಳು ಅತ್ಯುತ್ತಮ ಸ್ಥಳಗಳಾಗಿ ಆಕರ್ಷಕವಾಗಬಲ್ಲವು. ಭಾರತದಲ್ಲಿ ಉತ್ತರ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದ ಸಕ್ಕರೆ ಕೈಗಾರಿಕೆ ದಕ್ಷಿಣ ಭಾರತದ ಕೇಂದ್ರಗಳಿಗೆ ಹರಡಿರುವುದೂ ಮುಂಬಯಿ ಮತ್ತು ಅಹಮದಾಬಾದ್‍ಗಳಲ್ಲಿ ಸ್ಥಾನೀಕರಣವಾಗಿದ್ದ ಹತ್ತಿ ಕೈಗಾರಿಕೆ ದೇಶದ ಆದ್ಯಂತವೂ ಅನೇಕ ಕಡೆಗಳಿಗೆ ಹರಡಿರುವುದೂ ಇತರ ಅನೇಕ ಲಘುಕೈಗಾರಿಕೆಗಳು ಕೂಡ ಹೀಗೆ ಪುನಃಸ್ಥಾನೀಕರಣವಾಗುತ್ತಿರುವುದೂ ಸ್ಥಾನೀಕರಣದ ಚಲನಾತ್ಮಕ ಗುಣವಿಶೇಷವನ್ನು ನಿರ್ಧರಿಸುತ್ತವೆ.ಕೈಗಾರಿಕಾ ಪುನಃಸ್ಥಾನೀಕರಣದ ಇಂಥ ದೀರ್ಘಕಾಲೀನ ಒಲವುಗಳ ಜೊತೆಗೆ ಸ್ಥಾನೀಕರಣದ ಬಗ್ಗೆ ಆಧುನಿಕ ಸರ್ಕಾರಗಳು ಅನುಸರಿಸುತ್ತಿರುವ ನೀತಿ ಹೆಚ್ಚು ನಿರ್ದಿಷ್ಟವಾಗತೊಡಗಿದೆ. ಹಿಂದೆಯೇ ಹೇಳಿದಂತೆ, ಕೈಗಾರಿಕಾ ಸ್ಥಾನೀಕರಣದಿಂದ ಉದ್ಭವಿಸುವ ಸಾಮಾಜಿಕ ಹಾಗೂ ಆರ್ಥಿಕ ದೋಷಗಳನ್ನು-ಮುಖ್ಯವಾಗಿ ಪ್ರಾದೇಶಿಕ ಆರ್ಥಿಕ ಅಸಮತೆಯನ್ನು-ಹೋಗಲಾಡಿಸುವುದು ಇತ್ತೀಚೆಗೆ ಎಲ್ಲ ದೇಶಗಳಲ್ಲಿಯೂ ಪ್ರಾಮುಖ್ಯ ಪಡೆದ ಉದ್ದೇಶವಾಗಿದೆ. ಕೈಗಾರಿಕಾ ಸ್ಥಾನೀಕರಣ ನಿಯಂತ್ರಣ ಅನೇಕ ರಾಷ್ಟ್ರಗಳು ಅನುಸರಿಸುತ್ತಿರುವ ಆರ್ಥಿಕ ಯೋಜನಾಪದ್ಧತಿಯ ಅಂಗವಾಗಿದೆ. ಸಮಗ್ರ ರಾಷ್ಟ್ರೀಯ ಯೋಜನೆ ಅನುಸರಿಸದೆ ಮುಂದುವರಿದ ರಾಷ್ಟ್ರಗಳಲ್ಲಿ ಕೂಡ ಅಲ್ಲಿಯ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ವಿಶೇಷ ಪ್ರಾದೇಶಿಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಕೈಗಾರಿಕಾಸ್ಥಾನೀಕರಣ ಸಮಸ್ಯೆ ಹಿಂದೆ ಇದ್ದುದಕ್ಕಿಂತಲೂ ಇಂದು ಹೆಚ್ಚು ನಿಯಂತ್ರಣಕ್ಕೆ ಒಳಪಟ್ಟಿದೆ.
ಉಲ್ಲೇಖಗಳು
[ಬದಲಾಯಿಸಿ]