ಒಳನಾಡಿನ ಜಲಸಾರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳನಾಡಿನ ಜಲಸಾರಿಗೆ: ಸ್ವಾಭಾವಿಕವಾದ ನದಿಗಳು, ಸರೋವರಗಳು ಅಥವಾ ಕೃತಕವಾದ ಕಾಲುವೆಗಳ ಮೂಲಕ ಆಂತರಿಕವಾಗಿ ಹಡಗು ಅಥವಾ ದೋಣಿಗಳಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವ್ಯವಸ್ಥೆಯನ್ನು ಒಳನಾಡಿನ ಜಲಸಾರಿಗೆ ಎಂದು ಕರೆಯುತ್ತಾರೆ. ಜಲಸಾರಿಗೆಯು ಪುರಾತನ ಕಾಲದಿಂದಲೂ ರೂಢಿಯಲ್ಲಿದೆ. 18ನೆಯ ಶತಮಾನದಲ್ಲಿ ಜಲಸಾರಿಗೆಯಿಂದ ಪ್ರಯಾಣಿಕರನ್ನು ಮತ್ತು ಸರಕನ್ನು ಒಳನಾಡಿನಲ್ಲಿ ಸಾಗಿಸಲಾಗುತ್ತಿತ್ತು. ಅಂದಿನ ದಿನಗಳಲ್ಲಿ ಆಮದು ಮತ್ತು ರಫ್ತಿನ ಪ್ರಮಾಣ, ಗಾತ್ರ ಮತ್ತು ವೇಗದ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆಗಳಿರಲಿಲ್ಲ. ಕ್ರಮೇಣ ಹಡಗಿನ ಗಾತ್ರ, ಸರಕಿನ ಪ್ರಮಾಣ ಮತ್ತು ವೇಗವಾಗಿ ಚಲಿಸುವ ಹಡಗುಗಳು ರೂಪುಗೊಂಡವು. ಇದರಿಂದಾಗಿ ಬೃಹತ್ಗಾತ್ರದ ಸರಕು ಸಕಾಲದಲ್ಲಿ ತಲಪುವ ವ್ಯವಸ್ಥೆ ಅಭಿವೃದ್ಧಿ ಹೊಂದಿತು. 19ನೆಯ ಶತಮಾನದಲ್ಲಿ ಭೂಸಾರಿಗೆ ಪ್ರಾಮುಖ್ಯತೆಯನ್ನು ಪಡೆಯಿತು, ಪರಿಣಾಮವಾಗಿ ರಸ್ತೆಗಳು, ರಹದಾರಿಗಳು ಸಂಪರ್ಕ ಜಾಲಗಳು ವೇಗವಾಗಿ ವಿಸ್ತರಿಸಿದವು. ಪ್ರಮುಖ ನಗರಗಳಿಗೆ, ಬಂದರುಗಳಿಗೆ ಬಂದರು ನಗರಗಳಿಗೆ, ಕೈಗಾರಿಕಾ ಪ್ರದೇಶಗಳಿಗೆ ರಸ್ತೆಗಳ ಜಾಲ ಸಂಪರ್ಕಗಳು ವಿಸ್ತರಿಸಲ್ಪಟ್ಟಿತು. ರೈಲು ಸಾರಿಗೆ ವ್ಯವಸ್ಥೆಯು ಹಲವು ರಾಷ್ಟ್ರಗಳಲ್ಲಿ ಬೆಳಕಿಗೆ ಬಂದಿತು. ಇದರಿಂದ ಒಳನಾಡಿನ ಜಲ ಸಾರಿಗೆಯು ರಸ್ತೆ, ರೈಲು ಸಾರಿಗೆಗಳ ಜೊತೆ ಪೈಪೋಟಿಯಿಂದ ನಡೆಯಬೇಕಾಯಿತು. ಸರಕು ಮತ್ತು ಪ್ರಯಾಣಿಕರ ರವಾನೆಯಲ್ಲಿ ಒಳಸಾರಿಗೆಯ ಅನುಕೂಲಗಳ ಅರಿವು ಹೆಚ್ಚಾಯಿತು. 20ನೆಯ ಶತಮಾನದ ವೇಳೆಗೆ ಪ್ರಪಂಚದ ಹಲವಾರು ರಾಷ್ಟ್ರಗಳಲ್ಲಿ ಒಳನಾಡಿನ ಜಲಸಾರಿಗೆ ವೇಗವಾಗಿ ಅಭಿವೃದ್ಧಿಯತ್ತ ಸಾಗಿತ್ತು. ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಹಾಗೂ ಕೈಗಾರಿಕೆಗಳನ್ನು ಆಧಾರವಾಗಿ ಹೊಂದಿರುವ ರಾಷ್ಟ್ರಗಳಲ್ಲಿ ಕಚ್ಚಾವಸ್ತುಗಳನ್ನು ಹಾಗೂ ಸಿದ್ಧಪಡಿಸಿದ ಪದಾರ್ಥಗಳನ್ನು ರವಾನಿಸಲು ಜಲಸಾರಿಗೆ ಬಹುವಾಗಿ ಬಳಕೆಗೆ ಬಂದಿತು.

ಪ್ರಸ್ತುತ ಒಳನಾಡಿನ ಜಲಸಾರಿಗೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ಈ ಕೆಳಗಿನ ಕಾರಣಗಳಿಂದಾಗಿ. ಈ ವಿಧಾನವು ದೊಡ್ಡ ಪ್ರಮಾಣದ ಸರಕನ್ನು ಕಡಿಮೆ ಖರ್ಚಿನಲ್ಲಿ ರವಾನಿಸಲು ಅನುಕೂಲವಾಗಿದೆ. ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು, ಅತಿ ಭಾರವಾದ ಪದಾರ್ಥಗಳನ್ನು, ಖನಿಜ, ದ್ರವರೂಪದ ತೈಲ, ಕಲ್ಲಿದ್ದಲು, ಕೆಡದಂತಹ ಆಹಾರ ಪದಾರ್ಥಗಳು, ರಬ್ಬರ್, ಚರ್ಮ, ಕಾಫಿ, ಚಹ, ತಂಬಾಕು, ಕೃಷಿ ಉಪಕರಣಗಳು ಮೊದಲಾದವನ್ನು ಸಾಗಿಸಲು ಜಲಮಾರ್ಗವು ಅತ್ಯಂತ ಸೂಕ್ತ ಹಾಗೂ ಸುರಕ್ಷಿತ. ಜಲಸಾರಿಗೆಯ ಸಾಗಾಣಿಕೆಯಲ್ಲಿ ಪುರ್ವಬಾವಿಯಾಗಿ ಯಾವುದೇ ಖರ್ಚು ವೆಚ್ಚ ತಗಲುವುದಿಲ್ಲ. ರೈಲು ಮತ್ತು ರಸ್ತೆ ಸಾರಿಗೆ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಜಲಸಾರಿಗೆಯ ಪ್ರಾಮುಖ್ಯತೆ ಹೆಚ್ಚಾಗಿದೆ. ಈ ಸಾರಿಗೆಯು ಕೆಲವು ಅನುಕೂಲ - ಅನಾನುಕೂಲ, ಇತಿಮಿತಿಗಳನ್ನು ಒಳಗೊಂಡಿದೆ. ಜಲಸಾರಿಗೆಯು ಮಂದಗತಿಯಿಂದ ಕೂಡಿದ್ದು, ಜಲಮಾರ್ಗಗಳು ಆಳವಾಗಿ ಮತ್ತು ಸಾರ್ವಕಾಲಿಕವಾಗಿರಬೇಕು. ಜಲವು ಸಮೃದ್ಧಿಯಾಗಿರಬೇಕು, ಜಲಮಾರ್ಗವು ಮಳೆಗಾಲದಲ್ಲಿ ಪ್ರವಾಹರಹಿತವಾಗಿ ಮತ್ತು ಬೇಸಗೆಯಲ್ಲಿ ನೀರಿನ ಮಟ್ಟ ಇಳಿಮುಖವಾಗದಂತಿರಬೇಕು. ಧ್ರುವ ಪ್ರದೇಶದಲ್ಲಿ ಚಳಿಗಾಲದಲ್ಲಿ ನದಿಗಳು ಮತ್ತು ಸರೋವರಗಳು ಹೆಪ್ಪುಗಟ್ಟುವುದರಿಂದ ಜಲಮಾರ್ಗಗಳು ಮುಚ್ಚಿಹೋಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಉಬ್ಬರ-ವಿಳಿತ, ನೀರಿನ ಸೆಳೆತಗಳು ಜಲಸಾರಿಗೆಗೆ ಮಾರಕಗಳು. ಕಟ್ಟೆಗಳ ನಿರ್ಮಾಣ, ನದಿ-ಕಾಲುವೆಗಳ ಉಸ್ತುವಾರಿ ಮತ್ತು ದುರಸ್ಥಿಕಾರ್ಯಗಳಿಗೆ ಹೆಚ್ಚಿನ ಹಣ ವ್ಯಯವಾಗುತ್ತದೆ. ಒಳನಾಡಿನ ಜಲಸಾರಿಗೆಯು ನದಿ, ಸರೋವರ ಮತ್ತು ಕಾಲುವೆಗಳ ದಂಡೆಯಲ್ಲಿರುವ ಪ್ರದೇಶಗಳಿಗೆ ಮಾತ್ರ ಸೀಮಿತ. ಇಕ್ಕಟ್ಟಾದ ನದಿ ಪಾತ್ರ, ಕಡಿಮೆ ಆಳ, ತೀವ್ರಗತಿಯಲ್ಲಿ ಹರಿಯುವ ನೀರು ಮತ್ತು ಜಲಪಾತವುಳ್ಳ ನದಿಗಳು ಜಲಸಂಚಾರಕ್ಕೆ ಯೋಗ್ಯವಾಗಿರುವುದಿಲ್ಲ. ಒಳನಾಡಿನ ಜಲಸಾರಿಗೆ ಹಂಚಿಕೆ ಪ್ರಪಂಚದ ಕೆಲವು ಭಾಗಗಳಲ್ಲಿ ಮಾತ್ರ ಒಳನಾಡಿನ ಜಲಸಾರಿಗೆ ಹಂಚಿಕೆಯಾಗಿದೆ. ಹೆಚ್ಚಾಗಿ ಯುರೋಪ್, ರಷ್ಯ ಮತ್ತು ಉತ್ತರ ಅಮೆರಿಕದಲ್ಲಿ ಕಂಡುಬರುತ್ತದೆ.

ಒಳನಾಡಿನ ಜಲಸಂಚಾರ ಮಾರ್ಗಗಳನ್ನು ಹೊಂದಿರುವ ಪ್ರಪಂಚದ ಪ್ರಮುಖ ರಾಷ್ಟ್ರಗಳೆಂದರೆ ಚೀನ (110,300 ಕಿಮೀ), ರಷ್ಯ (89,089 ಕಿಮೀ), ಬ್ರೆಜಿಲ್ (50,000 ಕಿಮೀ), ಅಮೆರಿಕ ಸ.ಸ. (41,485 ಕಿಮೀ), ಇಂಡೋನೇಷ್ಯ (21,579 ಕಿಮೀ), ಕೊಲಂಬಿಯ (18,140 ಕಿಮೀ), ವಿಯಟ್ನಾಂ (17,702 ಕಿಮೀ), ಭಾರತ (16,180 ಕಿಮೀ), ಕಾಂಗೊ : (15000 ಕಿಮೀ), ಮಯನ್ಮಾರ್ (12,800 ಕಿಮೀ), ಅರ್ಜೆಂಟಿನ (10.950 ಕಿಮೀ), ಬೊಲಿವಿಯಾ (10,000 ಕಿಮೀ), ಪೆರು (8,600 ಕಿಮೀ), ನೈಜೀರಿಯ (8575 ಕಿಮೀ), ಆಸ್ಟ್ರೇಲಿಯ (8,368 ಕಿಮೀ), ಬಾಂಗ್ಲಾದೇಶ (8,046 ಕಿಮೀ), ಮಲೇಷ್ಯ (7,296 ಕಿಮೀ), ಜರ್ಮನಿ (6,740 ಕಿಮೀ), ಫಿನ್ಲೆಂಡ್ (6,245 ಕಿಮೀ) ಮತ್ತು ಫ್ರಾನ್ಸ್‌ (5,625 ಕಿಮೀ).

ಯುರೋಪ್[ಬದಲಾಯಿಸಿ]

ಈ ಖಂಡದಲ್ಲಿ ಪ್ರಮುಖ ನದಿಗಳು ಮತ್ತು ಕಾಲುವೆಗಳು ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ, ಜನಭರಿತ ನಗರಗಳ ಮೂಲಕ ಹಾದು ಹೋಗುವುದು ಒಂದು ವಿಶೇಷವಾದ ಅಂಶ. ಸರಕು ರವಾನೆ, ಆಮದು ಮತ್ತು ರಫ್ತಿಗೆ ಜಲಮಾರ್ಗಗಳು ಪುರಕವಾಗಿವೆ. ಪಶ್ಚಿಮ ಯುರೋಪಿನ ರಾಷ್ಟ್ರಗಳಾದ ಜರ್ಮನಿ, ಬೆಲ್ಜಿಯಂ, ನೆದೆರ್ಲೆಂಡ್ಸ್‌ ಮತ್ತು ರುಮೇನಿಯಗಳು ಒಳನಾಡಿನ ಜಲಸಾರಿಗೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿವೆ. ಈ ರಾಷ್ಟ್ರಗಳಲ್ಲಿ ರಸ್ತೆ, ರೈಲು ಮತ್ತು ಜಲಸಾರಿಗೆಯ ನಡುವೆ ಪೈಪೋಟಿಗಳಿವೆ.

ಯುರೋಪಿನ ಮಧ್ಯ, ಉತ್ತರ ಮತ್ತು ಪಶ್ಚಿಮ ಭಾಗಗಳು ಅನೇಕ ನದಿಗಳನ್ನೊಳಗೊಂಡಿದೆ. ಫ್ರಾನ್ಸ್‌ ಮತ್ತು ಜರ್ಮನಿಗಳಲ್ಲಿ ನೌಕಾಯಾನಕ್ಕೆ ಯೋಗ್ಯವಾದ ರ್ಹೈನ್, ಎಂಸ್ಸ್‌, ಓಡರ್ ಹರಿಯುತ್ತವೆ (ಜರ್ಮನಿ). ಸೀನ್ ಮತ್ತು ಲೋರಿ ನದಿಗಳು ಫ್ರಾನ್ಸ್‌ ದೇಶದಲ್ಲಿ ಹರಿಯುತ್ತವೆ. ರ್ಹೈನ್, ರ್ಹೋನ್ ಮತ್ತು ಡ್ಯಾನ್ಯೂಬ್ ವರ್ಷವೆಲ್ಲ ಹರಿಯುವ ನದಿಗಳು. ಇಲ್ಲಿನ ನದಿ ಬಂiÀÄಲುಗಳಲ್ಲಿ ಅಧಿಕ ಜನಸಾಂದ್ರತೆ, ಕೈಗಾರಿಕೀಕರಣ, ನಗರೀಕರಣ, ಹಿತವಾದ ವಾಯುಗುಣದಿಂದಾಗಿ ಜಲಸಾರಿಗೆಯು ಪುರಕವಾಗಿ ಅಭಿವೃದ್ಧಿಯಾಗಿದೆ. ರ್ಹೈನ್ ಪ್ರಮುಖವಾದ ನದಿ, ಈ ನದಿಯು ಮಧ್ಯ ಯುರೋಪಿನ ಸ್ವಿಟ್ಜರ್ಲೆಂಡ್, ಜರ್ಮನಿ, ನೆದರ್ಲೆಂಡ್ ಮತ್ತು ಫ್ರಾನ್ಸ್‌ ಭಾಗಗಳಿಗೆ ಜಲಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಿದೆ. ರ್ಹೋನ್ ಮತ್ತು ರ್ಹೈನ್ ನದಿಗಳಿಂದ ಸು. 800 ಕಿಮೀ ಉದ್ದವಾದ ಜಲಮಾರ್ಗವನ್ನು ಕಲ್ಪಿಸಿದೆ. ಇದು ಮೆಡಿಟರೇನಿಯನ್ ಸಮುದ್ರದ ರಾಟರ್ಡ್ಯಾಂ ಬಂದರಿನಿಂದ ಸ್ವಿಟ್ಜರ್ಲೆಂಡಿನ ಬಾಸ್ಲೆವರಿಗೂ ಕಾಲುವೆ ಮಾರ್ಗವನ್ನು ಹೊಂದಿದೆ. ರ್ಹೈನ್ ಪ್ರವಾಹ ರಹಿತ ನದಿ, ಇದು ರ್ಹೂರ್ ಕೈಗಾರಿಕಾ ಪ್ರದೇಶದ ಪ್ರಮುಖ ಜಲಮಾರ್ಗ, ಶೇ. 1/2ದಷ್ಟು ಕೈಗಾರಿಕಾ ವಸ್ತುಗಳು ರ್ಹೈನ್ ಮಾರ್ಗದಲ್ಲಿ ಸಾಗಿಸಲ್ಪಡುತ್ತದೆ. ಪೆಟ್ರೋಲ್ ಮತ್ತು ಅದರ ಉತ್ಪನ್ನಗಳು, ಆಹಾರ ಪದಾರ್ಥಗಳು, ಮರದ ದಿಮ್ಮಿ, ನ್ಯೂಸ್ ಪ್ರಿಂಟ್, ರಾಸಾಯನಿಕ, ಗಡಿಯಾರಗಳು, ಮರದ ತಿರುಳು ಮತ್ತು ಸಿದ್ಧ ವಸ್ತುಗಳು ಹೊರರಾಷ್ಟ್ರಗಳಿಗೆ ರಫ್ತಾಗುತ್ತವೆ. ಆಮದಾಗುವ ಪದಾರ್ಥಗಳೆಂದರೆ ಕಬ್ಬಿಣದ ಅದಿರು, ಕಲ್ಲಿದ್ದಲು, ರಾಸಾಯನಿಕಗಳು, ಗೊಬ್ಬರ, ಉಕ್ಕಿನ ಪದಾರ್ಥಗಳು ಮತ್ತು ಯಂತ್ರಗಳು.

ಡ್ಯಾನ್ಯೂಬ್, ಮಧ್ಯ ಯುರೋಪಿನ ಪ್ರಮುಖ ನದಿ, ಇದು ಎಂಟು ರಾಷ್ಟ್ರಗಳಿಗೆ ಸಂಪರ್ಕವನ್ನು ಕಲ್ಪಿಸಿದೆ. ಜರ್ಮನಿ, ಆಸ್ಟ್ರಿಯ, ಹಂಗರಿ, ಜೆಕ್, ಸ್ಲಾವಾಕೀಯ, ಯುಗೊಸ್ಲಾವಿಯ, ಬಲ್ಗೇರಿಯ, ರೊಮೇನಿಯ ಮತ್ತು ರಷ್ಯ, ಈ ನದಿಯು 2400 ಕಿಮೀ ಉದ್ದವಿದೆ. ಆದರೆ ಕೇವಲ ಶೇ. 15 ರಷ್ಟು ಸರಕನ್ನು ಮಾತ್ರ ಸಾಗಿಸಲು ಶಕ್ತವಾಗಿದೆ. ಹೆಚ್ಚಿನ ಆಮದು ರಫ್ತುಗಳು ರೊಮೋನಿಯ ಮತ್ತು ಜರ್ಮನಿಗಳ ನಡುವೆ.

ಇತರೆ ಜಲಮಾರ್ಗಗಳೆಂದರೆ, ಮ್ಯಾಂಚೆಸ್ಟರ್ ಹಡಗು ಕಾಲುವೆ. ಇದು ಮ್ಯಾಂಚೆಸ್ಟರ್ ನಿಂದ ಲಿವರ್ಪುಲ್ಗೆ, ಅಮ್ಸ್ಟರ್ ಡ್ಯಾಂ-ರ್ಹೈನ್ ಕಾಲುವೆ ಮತ್ತು ಗೋಟ ಕಾಲುವೆ, ಲಂಕಾಷೈರ್ ಹತ್ತಿಗಿರಣಿಗಳ ಅಭಿವೃದ್ಧಿಯಲ್ಲಿ ಮ್ಯಾಂಚೆಸ್ಟರ್ ಜಲಮಾರ್ಗವು ಪ್ರಮುಖ ಪಾತ್ರವಹಿಸಿದೆ. ಗೋಟ ಕಾಲುವೆ ಸ್ಟಾಕ್ಹೂಂ ಮತ್ತು ಗೊಟನ್ಬರ್ಗ್ ನಡುವೆ ಜಲಸಾರಿಗೆಯನ್ನು ಕಲ್ಪಿಸಿದೆ.

ಉತ್ತರ ಅಮೆರಿಕ[ಬದಲಾಯಿಸಿ]

ಈ ಖಂಡದಲ್ಲಿ ಎರಡು ಪ್ರಮುಖ ಒಳನಾಡ ಜಲಸಾರಿಗೆ ವ್ಯವಸ್ಥೆಗಳಿವೆ. 1. ಪಂಚಮಹಾ ಸರೋವರಗಳು (ಸುಪೀರಿಯರ್, ಮಿಷಿಗನ್, ಹುರಾನ್, ಆಂಟೇರಿಯ ಮತ್ತು ಈರ್ರಿ). ಇದನ್ನು ಸೈಂಟ್ ಲಾರೆನ್ಸ್‌ ಮಾರ್ಗ ಎಂದು ಕರೆಯುತ್ತಾರೆ. 2. ಮಿಸಿಸಿಪಿ ಜಲಮಾರ್ಗ. ಪಂಚಮಹಾ ಸರೋವರ - ಸೇಂಟ್ ಲಾರೆನ್ಸ್‌ ಮಾರ್ಗ : ಈ ಜಲಮಾರ್ಗ ಪ್ರಪಂಚದ ಪ್ರಸಿದ್ಧ ಜಲಮಾರ್ಗ. ಪಂಚಮಹಾ ಸರೋವರಗಳು 2,46,490 ಚ.ಕಿಮೀ ಜಲಭಾಗವನ್ನು ಹೊಂದಿದೆ. ಸು. 1,57,886 ಚ.ಕಿಮೀ ಜಲ ಸರೋವರ ಭಾಗವು ಅ.ಸಂ.ಸಂಸ್ಥಾನಕ್ಕೆ ಸೇರಿದೆ. ಉಳಿದ 88,604 ಚ.ಕಿಮೀ ಕೆನಡಕ್ಕೆ ಸೇರಿದೆ. ಜಲಮಾರ್ಗವನ್ನು ಎರಡೂ ದೇಶಗಳ ಸಮನ್ವಯ ಒಪ್ಪಂದವೊಂದರ ಪ್ರಕಾರ ವಿವಿಧೋದ್ದೇಶ ಯೋಜನೆಯ ಪ್ರಕಾರ ಅತ್ಯಾಧುನಿಕವಾಗಿ ಸುಧಾರಿಸಲಾಗಿದೆ. ಪಂಚಮಹಾ ಸರೋವರಗಳು, ಸೇಂಟ್ ಲಾರೆನ್ಸ್‌ ಕಾಲುವೆ ಮಾರ್ಗವನ್ನು ಅಭಿವೃದ್ಧಿಪಡಿಸಿದ ಅನಂತರ ಈ ಮಾರ್ಗದ ಪ್ರಾಮುಖ್ಯತೆ ಹೆಚ್ಚಾಯಿತು.

ಈ ಮಾರ್ಗ ದೊಡ್ಡ ಪ್ರಮಾಣದ ಹಡಗು ಸಂಚಾರಕ್ಕೆ ಅನುಕೂಲವಾಗಿದೆ. ಅಧಿಕ ಪ್ರಮಾಣದ ಸರಕನ್ನು ಕಡಿಮೆ ದರದಲ್ಲಿ ಸಾಗಿಸಲು ಪ್ರಯೋಜನವಾಗಿದೆ. ಕಬ್ಬಿಣ ಗಣಿಗಾರಿಕೆ ಪ್ರದೇಶಗಳಾದ ವಿಸ್ಕಾಂಸಿನ್, ಮಿಷಿಗನ್ ಮೇಲ್ದಂಡೆ, ಕ್ಯೂಬೆಕ್ ಮತ್ತು ಲ್ಯಾಬ್ರಡಾರ್ಗಳಿಂದ, ಸರಕು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳನ್ನು ಅಲ್ಲಿಂದ ಮುಂದೆ ಡೆಟ್ರಾಯಿಟ್ಗೆ ರವಾನಿಸುತ್ತದೆ. ಕಲ್ಲಿದ್ದಲು ಅಪಲೇಷಿಯನ್ನಿಂದ ಈರಿ ಸರೋವರದ ಮೂಲಕ ಸಾಗಿಸಲ್ಪಡುತ್ತದೆ. ಗೋದಿ, ಸಂಸ್ಕರಿಸಿದ ಆಹಾರ ಪದಾರ್ಥಗಳು ಅ.ಸಂ.ಸಂಸ್ಥಾನ ಮತ್ತು ಕೆನಡದಿಂದ ಸರೋವರ ಮಾರ್ಗವಾಗಿ ಪಶ್ಚಿಮ ಕರಾವಳಿಗೆ ರವಾನೆಯಾಗಿ ಅಲ್ಲಿಂದ ಹೊರರಾಷ್ಟ್ರಗಳಿಗೆ ರಫ್ತಾಗುತ್ತದೆ, ಸುಣ್ಣದ ಕಲ್ಲು, ಕಟ್ಟಡದ ಕಲ್ಲು, ಪೆಟ್ರೋಲ್ ಮತ್ತು ಖನಿಜಗಳು ಕೈಗಾರಿಕಾ ನಗರಗಳಿಗೆ ಸಾಗಿಸಲ್ಪಡುತ್ತವೆ.

ಮಿಸಿಸಿಪಿಯ ಉಪನದಿಗಳಾದ ಒಹಾಯೊ, ಇಲ್ಲಿನಾಯ್ಸ್‌, ಮಿಸ್ಸೋರಿ ಮತ್ತು ರೆಡ್ನದಿಗಳು ಅ.ಸಂ.ಸಂಸ್ಥಾನದ ಪ್ರಮುಖ ಒಳನಾಡಿನ ಜಲಸಾರಿಗೆಯನ್ನು ರೂಪಿಸಿವೆ. ಮಿಸಿಸಿಪಿ ಮತ್ತು ಒಹಾಯೊ ಪಂಚಮಹಾ ಸರೋವರಗಳ ಜೊತೆ ಸಂಪರ್ಕವನ್ನು ಕಲ್ಪಿಸಿವೆ. ಇದು ಸು. 4000 ಕಿಮೀ ಉದ್ದದ ಜಲಮಾರ್ಗದ ಸೌಲಭ್ಯವನ್ನು ಹೊಂದಿದೆ. ಈ ಮಾರ್ಗದಲ್ಲಿ ಸಂಸ್ಕರಿಸಿದ ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು, ಕೈಗಾರಿಕಾ ಸಿದ್ಧವಸ್ತುಗಳು ರವಾನೆಯಾಗುತ್ತವೆ.

ದಕ್ಷಿಣ ಅಮೆರಿಕ[ಬದಲಾಯಿಸಿ]

ಒಳನಾಡಿನ ಜಲಸಾರಿಗೆಯು ಈ ಖಂಡದಲ್ಲಿ ಭೂಸಾರಿಗೆ ರಹಿತ ಭಾಗಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ಪರ್ವತ ಪ್ರದೇಶ ಹಾಗೂ ದಟ್ಟ ಅರಣ್ಯಗಳನ್ನು ಹೊರತುಪಡಿಸಿ ಒಳನಾಡಿನಲ್ಲಿ ನದಿ ವ್ಯವಸ್ಥೆಯನ್ನು ಹೊಂದಿದೆ. ವಿರಳ ಜನಸಾಂದ್ರತೆ ಹಾಗೂ ಕನಿಷ್ಠ ಸರಕು ಉತ್ಪಾದನೆಗಳಿಂದ ಈ ಖಂಡದಲ್ಲಿ ಒಳನಾಡಿನ ಜಲಸಾರಿಗೆ ಹೆಚ್ಚು ಅಭಿವೃದ್ಧಿ ಹೊಂದಿಲ್ಲ. ಕೆಲವು ಪ್ರಮುಖ ನದಿ ಜಾಲಗಳೆಂದರೆ ಅಮೇeóÁನ್ ಪ್ಲಾಟ-ಪರಾನ-ಪರಗ್ವೆ, ಓರಿನೋಕೋ, ಮ್ಯಾಗ್ಡಲೀನಾ. ಅಮೆeóÁನ್ ಪ್ರಪಂಚದ ಅತಿ ಉದ್ದವಾದ ನದಿ ಹಾಗು ಅದರ ಮಾರ್ಗದ 6,400 ಕಿಮೀ ಅಮೆeóÁನ್ ಮತ್ತು ಪ್ಲಾಟಾ - ಪರಾನಾ - ಪರಗ್ವೆ ಜಲಮಾರ್ಗ 1,600 ಕಿಮೀ ನೌಕಾಯಾನಕ್ಕೆ ಯೋಗ್ಯವಾಗಿದೆ. ಬ್ರೆಜಿಲ್, ಬೊಲಿವಿಯ, ಪೆರು ಮತ್ತು ಕೊಲಂಬಿಯ ದೇಶಗಳು ಒಳನಾಡಿನ ಜಲಸಾರಿಗೆಗೆ ಅಮೆಜಾನ್ ನದಿಯನ್ನು ಆಶ್ರಯಿಸಿವೆ. ದಕ್ಷಿಣ ಅಮೆರಿಕ ಖಂಡದಲ್ಲಿ ಪ್ಲಾಟಾ-ಪರಾನ-ಪರಗ್ವೆ ಜಲಮಾರ್ಗ ಸದಾ ಕಾರ್ಯ ನಿರತವಾಗಿರುವಂತಹದು. ಲಾಪ್ಲಾಟ ನದಿವ್ಯವಸ್ಥೆಯು ಬ್ಯೂನಸ್ ಐರೀಸ್ ನಿಂದ ಕೊರುಂಬ-ಬ್ರೆಜಿಲ್ವರಿಗೆ ಜಲಮಾರ್ಗವನ್ನು ಹೊಂದಿದೆ. ಪರಗ್ವೆ ನದಿಯು ಪಶ್ಚಿಮ ಬ್ರೆಜಿಲ್ ಮತ್ತು ಪರಗ್ವೆಗಳಿಗೆ ಪ್ರಮುಖ ಜಲಸಾರಿಗೆ ಮಾರ್ಗವಾಗಿದೆ. ಈ ಮಾರ್ಗದ ಮೂಲಕ ರಬ್ಬರ್, ಆಹಾರ ಪದಾರ್ಥಗಳು, ಮರದದಿಮ್ಮಿ, ಮಾಂಸ, ಚರ್ಮ, ಕಾಫಿ, ಪೆಟ್ರೋಲ್, ಸಕ್ಕರೆ ಮತ್ತು ಸಿದ್ಧಪದಾರ್ಥಗಳು ರವಾನೆಯಾಗುತ್ತವೆ.

ಏಷ್ಯ ಖಂಡದ ಒಳನಾಡ ಜಲಸಾರಿಗೆ[ಬದಲಾಯಿಸಿ]

ಈ ಖಂಡದಲ್ಲಿ ಜಲಸಾರಿಗೆಯ ಸೌಲಭ್ಯ ಅತ್ಯಲ್ಪ. ಚೀನದ ಯಾಂಗ್-ಟ್ಜೆ-ಸಿಕಿಯಾಂಗ್, ಪಾಕಿಸ್ತಾನದ ಸಿಂಧು ಮತ್ತು ಭಾರತದಲ್ಲಿ ಗಂಗ ಮತ್ತು ಬ್ರಹ್ಮಪುತ್ರ, ಥೈಲೆಂಡ್ ಭಾಗದಲ್ಲಿ ಮಿಕಾಂಗ್ ಮತ್ತು ಮಿನಾಮ್ - ಮಯನ್ಮಾರ್ನಲ್ಲಿ ಇರವಾಡಿ, ಒಳನಾಡಿನ ಜಲ ಸಾರಿಗೆಯ ಮಾರ್ಗಗಳನ್ನು ಹೊಂದಿವೆ.

ಯಾಂಗ್-ಟ್ಜೆ-ಸಿಕಿಯಾಂಗ್ ಮತ್ತು ಅದರ ಉಪನದಿಗಳು ಚೀನದ ಮುಕ್ಕಾಲು ಭಾಗದಷ್ಟು ಒಳನಾಡಿನ ಜಲಸಾರಿಗೆಯನ್ನು ಪುರೈಸುತ್ತಿವೆ. ಯಾಂಗ್-ಟ್ಜೆ-ಸಿಕಿಯಾಂಗ್ನ ಪ್ರಮುಖ ಉಪನದಿಗಳು ಹಾನ್, ಹಸಿಯಾಂಗ್ ಮತ್ತು ಟಾನ್. ಈ ಮಾರ್ಗಗಳಲ್ಲಿ ಆಹಾರ ಧಾನ್ಯಗಳು, ಖನಿಜ, ಅರಣ್ಯ ಕಚ್ಚಾ ವಸ್ತುಗಳು ಮತ್ತು ಸಿದ್ಧ ಪದಾರ್ಥಗಳನ್ನು ರವಾನಿಸಲಾಗುತ್ತದೆ. ಚೀನ ದೇಶ 11,030 ಕಿಮೀ ಉದ್ದವಾದ ಜಲಮಾರ್ಗವನ್ನು ಹೊಂದಿದೆ. ಯಾಂಗ್-ಟ್ಜೆ-ಸಿಕಿಯಾಂಗ್ ಚೀನದ ಅತ್ಯಂತ ಮಹತ್ತ್ವವುಳ್ಳ ನದಿ. ಈ ನದಿಯು ಪಶ್ಚಿಮದಿಂದ ಪುರ್ವಕ್ಕೆ ದೇಶದ ಹೃದಯ ಭಾಗ ಮಾರ್ಗವಾಗಿ ಹರಿಯುತ್ತದೆ. ಈ ನದಿ ಸು. 1,800 ಕಿಮೀ ಉದ್ದವಾದ ಒಳನಾಡಿನ ಜಲಸಾರಿಗೆಯನ್ನು ಒದಗಿಸಿದೆ. ಏಷ್ಯ ವಾಯವ್ಯ ಭಾಗದ ಒಳನಾಡಿನ ಜಲಸಾರಿಗೆಯನ್ನು ಕಲ್ಪಿಸಿರುವ ನದಿಗಳೆಂದರೆ ಮಿಕಾಂಗ್, ಮೀನಾಂ, ಇರಾವಾಡಿ, ಗಂಗ ಮತ್ತು ಬ್ರಹ್ಮಪುತ್ರ. ನದಿ ಕಣಿವೆ ಪ್ರದೇಶಗಳಲ್ಲಿ ಅಧಿಕ ಜನಸಾಂದ್ರತೆ, ಕೈಗಾರಿಕೆಗಳ ಸ್ಥಾನೀಕರಣ, ಇತರೆ ಸಾರಿಗೆಗಳ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಈ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಜಲಸಾರಿಗೆ ಒದಗಿಸುವುದರ ಮೂಲಕ ಸಮುದ್ರ ಮತ್ತು ಒಳನಾಡಿಗೆ ಸಂಪರ್ಕ ಕಲ್ಪಿಸುವುವು. ಪ್ರಮುಖವಾಗಿ ಆಹಾರ ಪದಾರ್ಥಗಳು, ಪೆಟ್ರೋಲಿಯಂ, ಮರದ ದಿಮ್ಮಿ, ಕೈಗಾರಿಕಾ ಸಿದ್ಧ ವಸ್ತುಗಳು ರವಾನೆಯಾಗುತ್ತವೆ.

ಭಾರತ[ಬದಲಾಯಿಸಿ]

ಭಾರತದ ನದಿ ವ್ಯವಸ್ಥೆಯ ಜಾಲ ಹಲವಾರು ಪ್ರಾಕೃತಿಕ ನಿಯಮಗಳಿಗೆ ಒಳಪಟ್ಟಿದೆ. ಮಾನ್ಸೂನ್ ವಾಯುಗುಣ, ಋತು ಕಾಲಿಕ ವ್ಯತ್ಯಾಸ, ಸಂಚಾರಕ್ಕೆ ಅನಾನುಕೂಲವಾದ ನದಿಮಾರ್ಗಗಳು ಇತ್ಯಾದಿ.

ಜಲಸಂಚಾರಕ್ಕೆ ಅನುಕೂಲವಾದ ನದಿಗಳೆಂದರೆ ಗಂಗ, ಬಹ್ಮಪುತ್ರ, ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ತಪತಿ, ನರ್ಮದ, ಪೆನ್ನಾರ್, ಗೋದಾವರಿ, ಕಾವೇರಿ ನದಿ ಕಾಲುವೆಗಳು ಮತ್ತು ಕೇರಳದ ಪಶ್ಚಿಮ ಕರಾವಳಿ ಕಾಲುವೆಗಳು. ದೇಶದ ಒಳನಾಡಿನ ಜಲಸಾರಿಗೆಯ ಮಾರ್ಗದ ಉದ್ದ ಸು. 16,180 ಕಿಮೀ. ಇದರಲ್ಲಿ 1/5 ರಷ್ಟು ಹಡಗು ಮಾರ್ಗಕ್ಕೆ ಯೋಗ್ಯವಾಗಿದೆ (2495 ಕಿಮೀ). ಒಳನಾಡಿನ ಜಲಸಾರಿಗೆಯಲ್ಲಿ ನದಿಕಾಲುವೆಗಳು ಪ್ರಾಮುಖ್ಯತೆಯನ್ನು ಹೊಂದಿವೆ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಬಕ್ಕಿಂಗ್ಹ್ಯಾಮ್ ಕಾಲುವೆ, ಒರಿಸ್ಸದ ಡೆಲ್ಟಾಕಾಲುವೆ, ಗೋವದ ಮಾಂಡವಿ ಮತ್ತು ಜು಼ವಾರಿ ಕಾಲುವೆಗಳು ಈ ಸಾಲಿನಲ್ಲಿ ಸೇರುತ್ತವೆ.

ಭಾರತದಲ್ಲಿ ಜಲಸಾರಿಗೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ವ್ಯಾಪಕವಾದ ರೈಲು ವ್ಯವಸ್ಥೆಯಿಂದ ಜಲಸಾರಿಗೆಯನ್ನು ಕಡೆಗಣಿಸಲಾಗಿದೆ. ಬಕ್ಕಿಂಗ್ಹ್ಯಾಮ್ ಕಾಲುವೆಯನ್ನು ಸರಕು ಸಾಗಣಿಕೆಯ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಯಿತು. ಆದರೆ ರೈಲ್ವೇ ಮಂಡಲಿ ಕಲ್ಲಿದ್ದಲು ಸಂಗ್ರಹಾಗಾರ, ವೇಗವಾಗಿ ಚಲಿಸುವ ರೈಲುಗಳ ಪರಿಚಯ ಹಾಗೂ ದಾಸ್ತಾನು ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಿದ್ದ ಪರಿಣಾಮವಾಗಿ ಈ ವಲಯದಲ್ಲಿ ಜಲಸಾರಿಗೆ ಹಿಂದುಳಿಯಬೇಕಾಯಿತು. ಬಕ್ಕಿಂಗ್ಹ್ಯಾಮ್ ಕಾಲುವೆಯನ್ನು ತಮಿಳುನಾಡಿನ ದಕ್ಷಿಣ ಆರ್ಕಾಟ್ನ ಹಿನ್ನೀರು ಕಲ್ಪಿಸುತ್ತದೆ. ಇದು ಪ್ರಪಂಚದ ಕೆಲವೇ ಉದ್ದವಾದ ಜಲಸಂಚಾರ ಮಾರ್ಗಗಳಲ್ಲಿ ಒಂದು. ಇದನ್ನು 1806 ರಲ್ಲಿ ನಿರ್ಮಿಸಲಾಯಿತು. ಈ ಮೇಲೆ ವಿವರಿಸಿರುವ ಕಾರಣಗಳಿಂದ ಪ್ರಸ್ತುತ ಉಪಯೋಗದಲ್ಲಿಲ್ಲ. ಈ ಕಾಲುವೆಯು 425 ಕಿಮೀ ಉದ್ದವಾಗಿದೆ. 256 ಕಿಮೀಗಳು ಆಂಧ್ರ ಪ್ರದೇಶದಲ್ಲಿಯೂ ಮತ್ತು 164 ಕಿಮೀ ತಮಿಳುನಾಡಿನಲ್ಲಿಯೂ ಹಂಚಿಕೆಯಾಗಿದೆ.

ಕೇರಳದಲ್ಲಿ ಸು. 34 ಸಣ್ಣ ಪ್ರಮಾಣದ ನದಿಗಳು ಹರಿಯುತ್ತವೆ. ಅವು ದೇಶಿಯ ದೋಣಿ ಸಂಚಾರಕ್ಕೆ ಯೋಗ್ಯವಾಗಿವೆ. ಕೃಷಿ, ಕೈಗಾರಿಕೆ ಮತ್ತು ಕಚ್ಚಾ ಪದಾರ್ಥಗಳನ್ನು ಹಾಗೂ ಪ್ರಯಾಣಿಕರನ್ನು ಸಾಗಿಸಲು ಅನುಕೂಲವಾಗಿದೆ.

ಕರ್ನಾಟಕದಲ್ಲಿ ಮಂಗಳೂರು ಮತ್ತು ಕಾರವಾರಗಳ ನಡುವೆ ಕೆಲವು ನದಿಗಳಾದ ಕಾಳಿ, ಗಂಗಾವತಿ, ಅಘನಾಶಿನಿ, ಕೊಲ್ಲೂರು, ಸೀತಾ, ಗುರ್ಪುರ ನೇತ್ರಾವತಿಗಳು ಜಲಸಾರಿಗೆಗೆ ಬಳಕೆಯಾಗುತ್ತಿವೆ.

ಒಳನಾಡಿನ ಜಲಸಾರಿಗೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಗಂಗ, ಬಹ್ಮಪುತ್ರ ಮತ್ತು ಉಪನದಿಗಳ ಸಮಿತಿಯನ್ನು 1952 ರಲ್ಲಿ ಸ್ಥಾಪಿಸಲಾಯಿತು. ಈ ಸಮಿತಿಯು 1965 ರಲ್ಲಿ ಒಳನಾಡ ಜಲಸಾರಿಗೆ ಮಂಡಲಿಯ ಜೊತೆ ವಿಲೀನವಾಯಿತು. 1986ರಲ್ಲಿ ಒಳನಾಡಿನ ಜಲಸಾರಿಗೆ ಸಂಸ್ಥೆ ಎಂದು ಸ್ಥಾಪನೆಯಾಯಿತು. ಈ ಸಂಸ್ಥೆಯು ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟಿರುತ್ತದೆ. ದೇಶದ ಒಳನಾಡಿನ ಜಲಸಾರಿಗೆಯು ಹಲವು ಹತ್ತು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ನದಿಗಳ ನೀರಿನ ಮಟ್ಟವು ಋತುಕಾಲಿಕವಾಗಿ ವ್ಯತ್ಯಾಸಗೊಳ್ಳುವುದು. ಅಂತರ ರಾಜ್ಯ ನದಿನೀರಿನ ಹಂಚಿಕೆಯ ವಿವಾದಗಳು, ನದಿಕಾಲುವೆಗಳ ಬಿರುಕು ಮತ್ತು ಹೂಳಿನ ಸಮಸ್ಯೆಗಳು ಹಾಗೂ ಉಸ್ತುವಾರಿ ಸಮಸ್ಯೆಗಳು ಪ್ರಮುಖವಾಗಿವೆ.

ಆಫ್ರಿಕ ಖಂಡವು ಉತ್ತಮ ನದಿಜಾಲ ವ್ಯವಸ್ಥೆಯನ್ನು ಹೊಂದಿದೆ. ಆದರೆ ಅವುಗಳ ಉಪಯೋಗವು ತೀರ ಕಡಿಮೆ. ಪ್ರಮುಖ ನದಿಗಳು ಕಾಂಗೋ ನೈಲ್, ನೈಜರ್, eóÁಂಬೆಸಿ, ಸೆನೆಗಲ್, ಆರೆಂಜ್ ಹಾಗೂ ಲಿಂಪೋಪೋ ನದಿಗಳು. ಈ ನದಿಗಳು ದಟ್ಟವಾದ ಅರಣ್ಯಗಳು, ದುರ್ಗಮ ಬೆಟ್ಟಗುಡ್ಡ ಕಣಿವೆಗಳು ಮತ್ತು ಜನವಿರಳ ವಲಯಗಳಲ್ಲಿ ಹರಿಯುತ್ತವೆ. ಆದುದರಿಂದ ಜಲ ಸಾರಿಗೆಗೆ ಯೋಗ್ಯವಾಗಿಲ್ಲ. ನೈಲ್ ನದಿ ಒಳನಾಡಿನ ಸಂಚಾರಕ್ಕೆ ಯೋಗ್ಯವಾಗಿದೆ. ಈ ನದಿಯು ಮೆಡಿಟರೇನಿಯನ್ ಸಮುದ್ರಕ್ಕೆ ಸಂಪರ್ಕವನ್ನು ಕಲ್ಪಿಸಿದೆ, ಹೀಗಾಗಿ ಸೂಯಜ್ ಕಾಲುವೆಗೆ ನೈಲ್ ನದಿ ಸಂಪರ್ಕ ಹೆಚ್ಚಾಗಿದೆ ಈ ಮಾರ್ಗದಲ್ಲಿ ಕೈಗಾರಿಕಾ ಸಿದ್ಧ ವಸ್ತುಗಳು, ಪೆಟ್ರೋಲ್, ಪೆಟ್ರೋಲಿಯಂ ಉತ್ಪನ್ನಗಳು, ಹತ್ತಿ, ಚರ್ಮ, ಉಣ್ಣೆ, ಖರ್ಜೂರ ಮುಂತಾದ ಪದಾರ್ಥಗಳು ಸಾಗಿಸಲ್ಪಡುತ್ತದೆ.[೧]

ರಷ್ಯ[ಬದಲಾಯಿಸಿ]

ದೇಶವು ಸು. 4 ಲಕ್ಷ ಕಿಮೀ.ಗಳಷ್ಟು ಒಳನಾಡಿನ ಜಲಸಾರಿಗೆಯನ್ನು ಹೊಂದಿದೆ. ಆದರೆ ಇದರಲ್ಲಿ ನಾಲ್ಕನೆಯ ಒಂದು ಭಾಗವನ್ನು ಮಾತ್ರ ಬಳಸಿಕೊಳ್ಳಲಾಗಿದೆ. ರಷ್ಯದ ಯುರೋಪ್ ಮತ್ತು ಏಷ್ಯಭಾಗದ ನದಿಗಳೆಂದರೆ, ಓಲ್ಗಾ, ಡಾನ್, ನೀಪರ್ ಡ್ವಿನಾ ಮತ್ತು ನಿವಾ ಇವು ಯುರೋಪಿನ ಭಾಗಗಳಾಗಿವೆ. ಏನಿಸಿ ಮತ್ತು ಲಿನಾ ಏಷ್ಯ ಭಾಗದ ನದಿಗಳು. ಈ ನದಿಗಳು ಆರ್ಕ್ಟಿಕ್, ಕ್ಯಾಸ್ಪಿಯನ್, ಕಪ್ಪು ಮತ್ತು ಬಾಲ್ಟಿಕ್ ಸಮುದ್ರಗಳನ್ನು ಸೇರುತ್ತವೆ. ರಷ್ಯದ ಶೇ. 78 ರಷ್ಟು ಸರಕು ಸಾಗಾಣಿಕೆ ಭೂ ಸಾರಿಗೆಯನ್ನು ಅವಲಂಬಿಸಿದೆ. ಒಳನಾಡಿನ ಜಲಸಾರಿಗೆಯು ರಷ್ಯದ ಜಾ಼ರ್ ಕ್ರಾಂತಿಗೆ ಮೊದಲು ಪ್ರಾಮುಖ್ಯತೆಯನ್ನು ಪಡೆದಿತ್ತು. ಆನಂತರ ಇದರ ಪ್ರಾಮುಖ್ಯತೆಯು ಇಳಿಮುಖವಾಯಿತು. 1913 ರಲ್ಲಿ ಜಲಸಾರಿಗೆಯು ಕೇವಲ ಶೇ. 25 ರಷ್ಟು ಸರಕನ್ನು ಸಾಗಿಸುವಲ್ಲಿ ಸಫಲವಾಗಿತ್ತು. 1953 ರಲ್ಲಿ ಓಲ್ಗಾ-ಡಾನ್ ಕಾಲುವೆಯನ್ನು ಪುರ್ಣಗೊಳಿಸಲಾಯಿತು. ಈ ಕಾಲುವೆಯು ಓಲ್ಗಾ ಮತ್ತು ಕಪ್ಪುಸಮುದ್ರಕ್ಕೆ ಸಂಪರ್ಕವನ್ನು ಕಲ್ಪಿಸಿದೆ. ಓಲ್ಗಾ -ಯೋಜನೆಯಿಂದ ಹರಿದು ಬರುವ ಹೆಚ್ಚಿನ ಪ್ರಮಾಣದ ನೀರು ಮಾಸ್ಕೊ ಹತ್ತಿರವಿರುವ ಮಾಸ್ಕೊವಾ -ಓಲ್ಗಾ ಕಾಲುವೆಗೆ ಸರಬರಾಜಾಗುತ್ತದೆ. ಓಲ್ಗಾ ನದಿಯು ಯೂರಲ್ ಪರ್ವತಗಳ ಪುರ್ವಕ್ಕೆ ಹರಿಯುತ್ತದೆ. ಇದರ ಉಪನದಿಗಳೂ ಸೇರಿ ಶೇ. 50 ರಷ್ಟು ಸರಕನ್ನು ಈ ಮಾರ್ಗದಲ್ಲಿ ರವಾನಿಸಲಾಗುತ್ತದೆ. ಈ ರಾಷ್ಟ್ರದಲ್ಲಿ ಒಳನಾಡಿನ ಜಲಸಾರಿಗೆಗೆ ಯೋಗ್ಯವಾದ ಕಾಲುವೆಗಳೆಂದರೆ, ಮಾಸ್ಕೊ-ಓಲ್ಗಾ, ಬಾಲ್ಟಿಕ್-ವೈಟ್ಸೀ, ಬಾಲ್ಟಿಕ್-ಓಲ್ಗಾ ಕಾಲುವೆಗಳು. ಈ ಮಾರ್ಗದಲ್ಲಿ ಮರದ ದಿಮ್ಮಿ, ಮರದ ತಿರುಳು, ಆಹಾರ ಪದಾರ್ಥಗಳು ಮೀನು, ಕಚ್ಚಾ ಹತ್ತಿ, ಕಲ್ಲಿದ್ದಲು, ಕಬ್ಬಿಣದ ಅದಿರು, ಖನಿಜಗಳು, ಕಟ್ಟಡ ಸಾಮಗ್ರಿ, ಉಕ್ಕಿನ ಪದಾರ್ಥಗಳು ಪೆಟ್ರೋಲ್ ಇತ್ಯಾದಿಗಳು ರವಾನೆಯಾಗುತ್ತವೆ.

ಆಸ್ಟ್ರೇಲಿಯ[ಬದಲಾಯಿಸಿ]

ಈ ಖಂಡದಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ಮರ್ರೆ ಮತ್ತು ಡಾರ್ಲಿಂಗ್ ಈ ನದಿಗಳು ಮಳೆಗಾಲದಲ್ಲಿ ತುಂಬಿ ಹರಿಯುವವು, ಬೇಸಗೆಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತದೆ. ಈ ಎರಡು ನದಿಗಳನ್ನು ಹೊರತು ಪಡಿಸಿ ಇನ್ನುಳಿದಂತೆ ಯಾವುದೇ ಜಲಸಂಚಾರಕ್ಕೆ ಯೋಗ್ಯವಾದ ನದಿಗಳು ಈ ಖಂಡದಲ್ಲಿ ಕಂಡುಬರುವುದಿಲ್ಲ. ಆಸ್ಟ್ರೇಲಿಯ ಖಂಡ ಸು. 8368 ಕಿಮೀ ಉದ್ದವಾದ ಜಲಸಂಚಾರ ಮಾರ್ಗಗಳನ್ನು ಹೊಂದಿದೆ. (ವಿ.ಎಸ್.ಎ.)


ಉಲ್ಲೇಖಗಳು[ಬದಲಾಯಿಸಿ]

  1. http://www.prajavani.net/news/article/2015/11/29/369206.html[ಶಾಶ್ವತವಾಗಿ ಮಡಿದ ಕೊಂಡಿ]