ಕೂರ್ಮಾವತಾರ
| ಕೂರ್ಮ (ಆಮೆ) | |
|---|---|
ಕೂರ್ಮದ ರೂಪದಲ್ಲಿ ವಿಷ್ನುವಿನ ಅವತಾರ | |
| ದೇವನಾಗರಿ | कुर्म |
| ಸಂಲಗ್ನತೆ | ವಿಷ್ಣುವಿನ ಅವತಾರ |
| ಆಯುಧ | ಚಕ್ರ |
| ಸಂಗಾತಿ | ಲಕ್ಷ್ಮಿ |
ಹಿಂದೂಧರ್ಮದಲ್ಲಿ, ಕೂರ್ಮಾವತಾರವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ ವಿಷ್ಣುವಿನ ಎರಡನೇ ಅವತಾರ. ಮತ್ಸ್ಯಾವತಾರದಂತೆ ಈ ಅವತಾರವೂ ಸತ್ಯಯುಗದಲ್ಲಿ ಸಂಭವಿಸಿತ್ತು. ಕೂರ್ಮಾವತಾರ ಮಹಾವಿಷ್ಣುವಿನ ದಶಾವತಾರಗಳಲ್ಲಿ ಎರಡನೆಯದು. ಅಷ್ಟದಶಾಪುರಾಣಗಳಲ್ಲಿ 15ನೆಯದಾದ ಕೂರ್ಮಪುರಾಣ ಈ ಅವತಾರವನ್ನು ವರ್ಣಿಸುತ್ತದೆ. ಈಗ ನಡೆಯುತ್ತಿರುವ ಶ್ವೇತವರಾಹ ಕಲ್ಪದ ಚಾಕ್ಷುಷ ಮನ್ವಂತರದಲ್ಲಿ ಇದು ನಡೆಯಿತು.
ಕಾರಣ
[ಬದಲಾಯಿಸಿ]ದೇವಾಸುರರಲ್ಲಿ ದೇವತೆಗಳ ಬಲ ದಿನೇದಿನೇ ಕ್ಷಯಿಸುತ್ತ ಬಂದು ಅಸುರರ ಪ್ರಾಬಲ್ಯ ಹೆಚ್ಚಿದುದರಿಂದ ಮಧಾಂಧರಾದ ರಾಕ್ಷಸರು ದೇವತೆಗಳಿಗೆ ಹೆಚ್ಚಿನ ಕಿರುಕುಳ ಕೊಟ್ಟರು. ಇದನ್ನು ಸಹಿಸಲಾರದ ಇಂದ್ರಾದಿ ದೇವತೆಗಳು ಬ್ರಹ್ಮಪುರಸ್ಸರರಾಗಿ ವಿಷ್ಣುವಿನ ಮೊರೆಹೊಕ್ಕರು. ಅವರ ಮೊರೆಯನ್ನು ಕೇಳಿ ಕನಿಕರಗೊಂಡ ವಿಷ್ಣು ಅವರಿಗೆ ಸಮುದ್ರಮಥನ ಮಾಡಿ ಅಮೃತವನ್ನು ಪಡೆದು ಅಜರರು ಅಮರರೂ ಆಗುವ ಉಪಾಯವನ್ನು ಉಪದೇಶಿಸಿದ.
ಸಮುದ್ರ ಮಥನ
[ಬದಲಾಯಿಸಿ]ವಾಸುಕಿಯನ್ನು ಹಗ್ಗವನ್ನಾಗಿಯೂ ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ ಮಾಡಿಕೊಂಡು ಕ್ಷೀರಸಮುದ್ರವನ್ನು ಕಡೆದರೆ ಅಮೃತ ದೊರೆಯುವುದು, ಅದನ್ನು ಪಾನಮಾಡಿದರೆ ತಾವೆಲ್ಲರೂ ಅಮರರಾಗಿ ಸುಖಸಂತೋಷಗಳಿಂದ ಅನಂತಕಾಲದವರೆಗೂ ಇರಬಹುದು ಎಂದು ದೇವತೆಗಳು ರಾಕ್ಷಸರ ಮನಸ್ಸನ್ನು ಉಪಾಯದಿಂದ ಒಲಿಸಿದರು. ಅನಂತರ ದೇವಾಸುರರೆಲ್ಲರೂ ಕಲೆತು ಕ್ಷೀರಸಮುದ್ರವನ್ನು ಮಥನಮಾಡಲು ಉಪಕ್ರಮಿಸಿದರು. ಆದರೆ ಕಡೆಗೋಲಾಗಿದ್ದ ಆ ಮಹಾಪರ್ವತ ಸಮುದ್ರತಳಕ್ಕಿಳಿದುಬಿಟ್ಟಿತು. ದಿಕ್ಕುತೋಚದ ದೇವತೆಗಳು ಮತ್ತೆ ಮಹಾವಿಷ್ಣುವಿಗೆ ಶರಣುಹೋಗಲು ಆತ ತನ್ನೊಂದು ಅಂಶದಿಂದ ಕೂರ್ಮರೂಪವನ್ನು ತಾಳಿ ತನ್ನ ಬೆನ್ನಿನ ಮೇಲೆ ಪರ್ವತವನ್ನು ಎತ್ತಿ ನಿಲ್ಲಿಸಿಕೊಂಡು ದೇವಾಸುರರು ಸಮುದ್ರಮಥನ ಮಾಡಲು ಅವಕಾಶ ಕಲ್ಪಿಸಿದ. ಕೂರ್ಮಾವತಾರದಲ್ಲಿ ಮಹಾವಿಷ್ಣು ಇಂದ್ರದ್ಯುಮ್ನನ ಪ್ರಸಂಗದ ಮೂಲಕ ಋಷಿಗಳಿಗೆ ಚತುರ್ವಿಧ ಪುರುಷಾರ್ಥಗಳ ಮಹಾತ್ವವನ್ನು ವರ್ಣಿಸಿ ಉಪದೇಶಿಸಿದ್ದಾನೆ.
ಪ್ರಸಕ್ತ ಕಾಲದಲ್ಲಿ
[ಬದಲಾಯಿಸಿ]ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿನ ಕೂರ್ಮಾಯಿ ಮತ್ತು ಶ್ರೀಕೂರ್ಮಂ ನೆಲೆಗೊಂಡಿವೆ.
ಶ್ರೀಕೂರ್ಮಂ
[ಬದಲಾಯಿಸಿ]
ಶ್ರೀಕೂರ್ಮಂ ಆಂಧ್ರ ಪ್ರದೇಶದ ಶ್ರೀಕಾಕುಳಂ (శ్రీకాకుళం)ಜಿಲ್ಲೆಯಲ್ಲಿದೆ. ಶ್ರೀಕಾಕುಳಂ ಪಟ್ಟಣದಿಂದ ೧೬ ಕಿಲೋಮೀಟರುಗಳ ದೂರದಲ್ಲಿದೆ. ರೈಲು ಮಾರ್ಗವಿಲ್ಲ. ಅದರೆ ಬಸ್ಸು ಸೌಕರ್ಯವಿದೆ. ಹಳೆ ಬಸ್ ಸ್ಟಾಂಡಿನಿಂದ ಪ್ರತಿ ೧೫ ನಿಮಿಷಗಳಿಗೆ ಶ್ರೀಕಾಕುಳಂ ಪಟ್ಟಣದಿಂದ ಆಂಧ್ರಪ್ರದೇಶ ರವಾಣೆ ಸಾರಿಗೆ ಸಂಸ್ಥೆ ಬಸ್ಸುಗಳು ತಿರುಗಾಡುತ್ತವೆ. ಉದಯಕಾಲ ೬:೦ಗಂಟೆಯಿಂದ ರಾತ್ರಿ ೮:೦ಗಂಟೆ ವರೇಗೆ ಬಸ್ಸುಗಳಿವೆ. ಈ ಗುಡಿಯಲ್ಲಿದ ವಿಗ್ರಹ ಸ್ವಯಂಭೂವಾಗಿದೆ. ಈ ತರಹ ದೇವಾಲಯ ಭಾರತ ದೇಶದಲ್ಲಿ ಇದೊಂದೆ. ಮಂದಿರ ಅದ್ಬುತವಾದ ಶಿಲ್ಪಕಲಾಶೋಭಿತವಾಗಿದೆ. ಈ ಮಂದಿರದಲ್ಲಿ ಸ್ವಾಮಿ ಪಶ್ಚಿಮಮುಖವಾಗಿ ಇದ್ದಾನೆ. ಈ ದೇವಾಲಯದಲ್ಲಿ ಎರಡು ಧ್ವಜ ಸ್ಥಂಬಗಳಿವೆ. ಮಂದಿರ ಪ್ರಾಂಗಣದಲ್ಲಿ ೧೧ಶತಾಬ್ದಿಯ ಶಾಸನಗಳು ಕಂಡು ಬರುತ್ತವೆ. ದೇವಾಲಯ ಪ್ರಾಂಗಣದಲ್ಲಿ ೧೭ವ ಶತಾಬ್ದಿಯಲ್ಲಿ ಚಿರ್ತಿಸಿದ ಚಿತ್ರಕಲ್ಲುಗಳಿವೆ.
ಗ್ಯಾಲರೀ
[ಬದಲಾಯಿಸಿ]-
ಶ್ರೀಕೂರ್ಮಂ ದೇವಾಲಯ
-
೧೭ ಶತಾಬ್ದಿಯ ಚಿತ್ರಕಲೆ,ಶ್ರೀಕೂರ್ಮಂ
-
ಕೆತ್ತಿದ ಮೇಲ್ಭಾಗ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]