ಕುಮಾರರಾಮ

ವಿಕಿಪೀಡಿಯ ಇಂದ
Jump to navigation Jump to search
ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.)

'ಕುಮಾರರಾಮ ಪರಾಕ್ರಮಿ ರಾಜ. ಇವನು ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯನಾಗಿದ್ದನೆಂಬುದಕ್ಕೆ ಸಾಕಷ್ಟು ಚಾರಿತ್ರಿಕ ಘಟನೆಗಳ ಉಲ್ಲೇಖನಗಳು ಸಿಕ್ಕುತ್ತವೆ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.

ಪ್ರಾಚೀನ ಕಾವ್ಯಗಳಲ್ಲಿ ಕುಮಾರರಾಮ[ಬದಲಾಯಿಸಿ]

ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ ಅಥವಾ ರಾಮನಾಥ ಚರಿತೆ ಕನ್ನಡದ ಮೊಟ್ಟ ಮೊದಲ ಚಾರಿತ್ರಿಕಕಾವ್ಯ, ವೀರಕಾವ್ಯ ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ದೇ.ಜ.ಗೌ ಅವರು -ಕುಮಾರರಾಮ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ತಳಹದಿ ಹಾಕಿ, ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ಮೆರೆದ ಗಂಡುಗಲಿ ಎಂದಿದ್ದಾರೆ. ಚಾರಿತ್ರಿಕ ದಾಖಲೆಗಳ ಪ್ರಕಾರ ವಿಜಯನಗರದ ಸಂಸ್ಥಾಪಕರಾದ ಹಕ್ಕ-ಬುಕ್ಕರು ಕುಮಾರರಾಮನ ಮಾವನ ಮಕ್ಕಳಾಗಿದ್ದರು.

ಪರಿಚಯ[ಬದಲಾಯಿಸಿ]

 • ಈತನ ಬಗ್ಗೆ ಹಾಡಿನ ರೂಪದ ಜನಪದ ಕಥೆಯನ್ನು ಮೂರು ದಿನದ ಪರ್ಯಂತ ಹಾಡುವ ಗಾಯಕ ಪರಂಪರೆಯೇ ಇದೆ. ಇದು ಕುಮಾರರಾಮನ ಕತೆಯನ್ನು ಒಳಗೊಂಡಿದ್ದು, ರಾಮನ ಶುಚಿತ್ವ, ವೀರತ್ವಗಳ ಪ್ರಕಾಶನವೇ ಕಾವ್ಯದ ಮುಖ್ಯ ಉದ್ದೇಶವಾಗಿದೆ. ಪುರಾಣದ ಅಲೌಕಿಕ ದೊಡನೆ ಮಹಾಭಾರತದ ಪ್ರಮುಖ ಘಟನೆಗಳ ಸಂಯೋಜನೆ, ಸಮಕಾಲೀನ ಬದುಕಿನ ಚಿತ್ರಣ, ವಿಷಮ ದಾಂಪತ್ಯದ ದುಷ್ಪರಿಣಾಮ ಮುಂತಾದ ವಿಷಯಗಳು ಇಲ್ಲಿ ಅನಾವರಣ ಗೊಂಡಿವೆ.
 • ಕವಿ ಇಲ್ಲಿ ಹೆಣ್ಣಿನ ಕಾಮಾತುರತೆ, ಹುಚ್ಚು ಹಂಬಲವನ್ನೂ, ಮತ್ತೊಂದೆಡೆ ಗಂಡಿನ ವಜ್ರಕಠೋರ ಮನೋದೃಢತೆಯನ್ನೂ ಸೂಕ್ಷ್ಮವಾಗಿ ಚಿತ್ರಿಸಿದ್ದಾನೆ. ಕುಮಾರರಾಮನ ಜೀವನಾವಧಿಯಲ್ಲಿ ನಡೆಯುವ ಪರಕೀಯರ ಧಾಳಿಯ ಹಲವಾರು ವಿವರಗಳು ಇಲ್ಲಿ ಲಭ್ಯವಾಗುತ್ತವೆ. ತಾಯಿಯಾದವಳು ಮಗನನ್ನು ಕಾಮಿಸಿ, ಅವನ ನಿರಾಕರಣೆಯ ನಂತರದ ಬೆಳವಣಿಗೆಯೆ ಇದರ ಮೂಲ ಕಥಾವಸ್ತು.

ಕುಮಾರರಾಮನ ಇತಿವೃತ್ತ[ಬದಲಾಯಿಸಿ]

 • ಕುಮಾರರಾಮನು ಕಮ್ಮಟದುರ್ಗದ ರಾಜ ಕಂಪಿಲ ಮತ್ತು ಹರಿಯಾಲದೇವಿ/ಹರಿಹರದೇವಿಯರ ಮಗ. ಚಿಕ್ಕಂದಿನಲ್ಲೇ ಸಮಸ್ತ ೬೪ವಿದ್ಯೆಗಳನ್ನು ಕಲಿತು, ಶತ್ರು ರಾಜರನ್ನೇಲ್ಲಾ ಹಿಮ್ಮೆಟ್ಟಿಸಿ ಅಜೇಯನೆನಿಸಿದ್ದನು. ಕುಮಾರರಾಮನ ವೀರತ್ವವನ್ನು ಗಮನಿಸಿದ ದೆಹಲಿಯ ಸುಲ್ತಾನ ತನ್ನ ಧರ್ಮದ ಕಟ್ಟಳೆಗಳನ್ನು ಮುರಿದು ಅವನಿಗೆ ತನ್ನ ಮಗಳನ್ನು ಕೊಟ್ಟು ಬಾಂದವ್ಯ ಬೆಳೆಸಲು ನಿಶ್ಚಯಿಸುವನು. ಆದರೆ ಕುಮಾರರಾಮನು ಹುಲಿ ಹುಲಿಗಳ ಸ್ನೇಹವೇ ಮಾಡಬೇಕು ನಾಯಿ ನರಿಗಳ ಸ್ನೇಹವಲ್ಲ ಎಂದು ಆ ಸಂಬಂಧವನ್ನು ನಿರಾಕರಿಸುವನು.
 • ಈ ನಡುವೆ ಕುಮಾರರಾಮನ ರೂಪಿಗೆ ಮರುಳಾದ ಅವನ ಮಲತಾಯಿ/ಚಿಕ್ಕಮ್ಮ ರತ್ನಾಜಿ ಕುಮಾರರಾಮನ ಮನವನ್ನು ಒಲಿಸಿಕೊಳ್ಳಲು ಪ್ರಯತ್ನಿಸುವಳು. ಅಗಮ್ಯ ಸಂಬಂಧ ನಡೆಸಲು ಮುನ್ನಡೆದಾಗ, ಕುಮಾರರಾಮ ತಾಯಿಯ ಸ್ಥಾನದಲ್ಲಿರುವ ಅವಳನ್ನು ತಿರಸ್ಕರಿಸುವನು. ಇದರಿಂದ ರೊಚ್ಚಿಗೆದ್ದ ರತ್ನಾಜಿ ಕಂಪಿಲರಾಯನಿಗೆ ಇಲ್ಲಸಲ್ಲದ ದೂರನ್ನು ಹೇಳುವಳು. ಕಿರಿ ಪತ್ನೀಯ ಮಾತನ್ನು ನಂಬಿದ ಕಂಪಿಲರಾಯ ಕುಮಾರರಾಮನ ತಲೆ ತೆಗೆಯುವಂತೆ ಮಂತ್ರಿ ಬೈಚಪ್ಪನಿಗೆ ಆಜ್ಞಾಪಿಸುವನು.
 • ಬೈಚಪ್ಪ ಕುಮಾರರಾಮನನ್ನು ಬಚ್ಚಿಟ್ಟು ಅವನ ಬದಲಿಗೆ ಬೇರೊಬ್ಬರ ತಲೆ ಕಡಿದು ತಂದು ರಾಜನಿಗೆ ತೋರಿಸುವನು. ಕುಮಾರರಾಮನು ಇಲ್ಲವೆಂಬ ಸುದ್ದಿ ದೆಹಲಿ ಸುಲ್ತಾನನಿಗೆ ತಿಳಿದು ಅವನು ಕಮ್ಮಟದುರ್ಗದ ಮೇಲೆ ದಂಡೆತ್ತಿ ಬರುತ್ತಾನೆ. ಕಂಪಿಲರಾಯ ದೆಹಲಿಯ ಸುಲ್ತಾನನಿಗೆ ಸೋತು ಇನ್ನೇನು ಶರಣಾಗುವ ಸಂದರ್ಭದಲ್ಲಿ ಮಂತ್ರಿ ಬೈಚಪ್ಪ ಕುಮಾರರಾಮನನ್ನು ಹೊರಬಿಟ್ಟಾಗ ಅವನು ಹಸಿದ ಹುಲಿಯಂತ್ತೆ ವೀರಾವೇಶದಿಂದ ಹೊರಾಡಿ ಶತ್ರು ಸೇನೆಯನ್ನು ಬಡಿದೋಡಿಸಿದನು.

ಅಪಾರ್ಥಕ್ಕೆಡೆಯಾಗುವುದು[ಬದಲಾಯಿಸಿ]

 • ಒಂದು ದಿನ ಕುಮಾರರಾಮ ತಂದೆಯೊಡನೆ ಬೇಟೆಗೆ ಹೊರಡಲು ಸಿದ್ದವಾಗುತ್ತಿದ್ದವನು ದಿಢೀರನೆ ತನ್ನ ಮನಸ್ಸನ್ನು ಬದಲಿಸಿ ಸ್ನೇಹಿತರೊಂದಿಗೆ ಕ್ರೀಡಾ ವಿನೋದದಲ್ಲಿ ಕಳೆಯಲು ಇಷ್ಟಪಟ್ಟು ತಾಯಿ ಹರಿಯಾಲದೇವಿಯಲ್ಲಿ ಮುತ್ತಿನ ಚೆಂಡನ್ನು ಬೇಡುತ್ತಾನೆ. ಆಗ ತಾಯಿ ಆತಂಕಗೊಂಡು ಮುತ್ತಿನ ಚೆಂಡಿನಿಂದ ಈವರೆಗೆ ಆಗಿರುವ ಅವಘಡವನ್ನು ಕುರಿತು ಹೇಳುತ್ತಾಳೆ.
 • ಆದರೆ ಕುಮಾರರಾಮ ಆಟವಾಡಲು ಆ ಚೆಂಡೆ ಬೇಕೆಂದು ಪಟ್ಟು ಹಿಡಿದಾಗ, ಅವಳು ತನ್ನೇದುರಿನಲ್ಲೇ ಚೆಂಡನ್ನು ಆಡುವಂತೆ ತಾಕೀತು ಮಾಡುತ್ತಾಳೆ. ಅದರಂತೆ ಕುಮಾರರಾಮ ಸ್ನೇಹಿತರೊಡಗೂಡಿ ಚೆಂಡಾಟವಾಡುವಾಗ ಅದು ಚಿಕ್ಕಮ್ಮ ರತ್ನೋಜಿ ಮನೆಯೊಳಗೆ ಬೀಳುತ್ತದೆ. ಕುಮಾರ ರಾಮ ಅದನ್ನು ತರ ಹೋದಾಗ ಚಿಕ್ಕಮ್ಮ ರತ್ನೋಜಿ ಅವನನ್ನು ಕಾಮುಕ ದೃಷ್ಟಿಯಿಂದ ಕಾಣುತ್ತಾಳೆ.
 • ತನ್ನ ಇಷ್ಟವನ್ನು ನೆರವೇರಿಸುವಂತೆ ಕುಮಾರರಾಮನನ್ನು ಪರಿ ಪರಿಯಾಗಿ ಬೇಡುತ್ತಾಳೆ. ಪರನಾರಿಸೋದರನೆಂಬ ಬಿರುದನ್ನು ಹೊಂದಿದ್ದ ಕುಮಾರರಾಮ ತಾಯಿಯ ಮಾತನ್ನು ಸಂಪೂರ್ಣವಾಗಿ ತಿರಸ್ಕರಿಸುವನು. ಇದರಿಂದ ರೊಚ್ಚಿಗೆದ್ದ ರತ್ನೋಜಿ ಕುಮಾರರಾಮನ ಮೇಲೆ ಇಲ್ಲ ಸಲ್ಲದ ಅಪವಾದ ಹೊರಿಸುತ್ತಾಳೆ.

ಕುಮಾರರಾಮನ ಅಂತ್ಯ[ಬದಲಾಯಿಸಿ]

 • ದೆಹಲಿ ಸುಲ್ತಾನನು ಮಾತಂಗಿ ಎನ್ನುವವಳ ನೇತೃತ್ವದಲ್ಲಿ ಕಮ್ಮಟದುರ್ಗವನ್ನು ವಶಪಡಿಸಿಕೊಳ್ಳಲು ಅಪಾರ ಸೇನೆ ಕಳುಹಿಸುವನು. ಅದುವರೆವಿಗೂ ಅಪ್ರತಿಮ ವೀರಾವೇಶದಿಂದ ಹೋರಾಡುತ್ತಿದ್ದ ಕುಮಾರರಾಮ ಮಾತಂಗಿ ಎದುರಾದಾಗ ಹೆಂಗಸಿನ ಮೇಲೆ ಕೈಯೆತ್ತುವುದು ತರವಲ್ಲವೆಂದು ತಟಸ್ಥನಾಗುತ್ತಾನೆ. ಆ ಸಮಯದಲ್ಲಿ ಮಾತಂಗಿ ಕುಮಾರರಾಮನನ್ನು ಕೊಲ್ಲುತ್ತಾಳೆ..ಕುಮಾರರಾಮ ಕೊನೆ ಉಸಿರೆಳೆವಾಗ ತನ್ನ ಮಾವನ ಮಕ್ಕಳಾದ ಹಕ್ಕ-ಬುಕ್ಕ ರಲ್ಲಿ ತಾನು ಕಂಡಿದ್ದ ವಿಜಯನಗರ ಸಾಮ್ರಾಜ್ಯದ ಕನಸನ್ನು ನನಸಾಗಿಸಲು ವಚನ ಪಡೆದುಕೊಂಡು ಪ್ರಾಣ ಬಿಡುತ್ತಾನೆ..ಕುಮಾರರಾಮ ಕೇವಲ ತನ್ನ ರಾಜ್ಯದ ಉಳಿವಿಗಾಗಿ ಹೋರಾಡದೆ ಕನ್ನಡ ನಾಡಿಗಾಗಿ ಹಿಂಧೂತ್ವದ ರಕ್ಷಣೆಗಾಗಿ ಹೋರಾಡಿದ್ದನು ಎಂಬುದು ಇತಿಹಾಸದಿಂದ ತಿಳಿಯುತ್ತದೆ..ಅಂದಿನಿಂದ ಜನರು ಕುಮಾರರಾಮನು ದೈವಾಂಶ ಪುರುಷ..ಶ್ರೀ ರಾಮಚಂದ್ರನ ಅವತಾರ ಎಂದು ಭಾವಿಸಿ ಅವನನ್ನು ದೇವರಂತೆ ಪೂಜಿಸ ತೊಡಗಿದರು. ಕೆಲವು ಕಡೆ ಇವನ ವಿಗ್ರಹವನ್ನು ಪೂಜಿಸುವ ಪರಿಪಾಟವಿದೆ.ತಮ್ಮ ಮಕ್ಕಳಿಗೇ ಕುಮಾರರಾಮನ ಹೆಸರಿಡುವ ಮುಖಾಂತರ ಇವನ ತ್ಯಾಗ ಬಲಿದಾನಕ್ಕೆ ಋಣಿಯಾಗಿದ್ದಾರೆ ಹಾಗೂ ಇವನ ಕಥೆಯನ್ನು ಓದಿಸಿ ಕೇಳುವುದು, ಇವನ ಬಗ್ಗೆ ನಾಟಕಗಳನ್ನು ಆಡುವುದು ಉಂಟು...ಇವನ ಆಸೆಯಂತ್ತೆ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ತಾಪಿಸಿ ಇಡಿ ಜಗತ್ತೆ ಬೆರಗಾಗುವಂತ್ತೆ ರಾಜ್ಯಭಾರ ಮಾಡಿ ಗಂಡುಗಲಿ ಕುಮಾರರಾಮನ ವಚನಕ್ಕೆ ಬದ್ದರಾದರು....

ಕುಮಾರರಾಮನ ಗೀತೆ[ಬದಲಾಯಿಸಿ]

ಧಾರ್ಮಿಕ ವೃತ್ತಿಗಾಯಕರಾದ ತಂಬೂರಿದಾಸರು ಕುಮಾರರಾಮನ ಕಥೆಯನ್ನು ಹಾಡಿನ ಮೂಲಕ ನಿರೂಪಿಸುತ್ತಾರೆ. ಅದರಲ್ಲೂ ಕುಮಾರರಾಮನನ್ನು ರತ್ನೋಜಿ ರಮಿಸುವುದಕ್ಕೆ ಆಹ್ವಾನಿಸುವ ಸಂದರ್ಭ ಪ್ರಸಿದ್ದವಾಗಿದೆ.

ಹುರಿಮೀಸೆ ಸೆಟೆದುದಟದಲಿ ಹುರಿಯಾದುದತಿ ರುಧಿರ ಸಿಂಚನಕೆ |
ಧಗಧಗಿಸುವ ಕಣ್ಣಾಲಿಗಳ್ ಕೆಂಪಡರಿ ಕ್ರೋಧಾಧಿಕ್ಯದಿಂದುರಿದುರಿದುದತಿ |
ಕೋಪಾಟೋಪದೊಳ್ ಕೆಂಜಡೆ ಹೊಯ್ದಾಡಿದುದುಘಟಸರ್ಪದೋಲ್ |
ಫೂತ್ಕರಿಸಿದನು ರಣಕಲಿ ಗಂಡುಗಲಿ ಕುಮಾರರಾಮ ತರಿಯುತರಿತಲೆಗಳ ಖಡ್ಗದಿಂ |
ದಿಸೆದಿಸೆಗೆಸೆದನು ರುಂಡಗಳ ಚೆಂಡಾಡುತ ಧಡಧಡ ದಾಂಗುಡಿಯಿಡೆ |
ರಣರಂಗದಲಡಿಗಡಿಗೆ ಗಡಗಡನೆ ನಡುಗುತುಡುಗಿದವಡಿಗಡಿಗೆ |
ಭಟರ ಗುಂಡಿಗೆಗಳ್ ರಣಚೆಂಡಾಟದ ರುದ್ರತಾಂಡವದೊಳುದ್ಧಟ |
ಗಂಡರಗಂಡರೆದೆಯೊಡೆದುದು ತುಂಡರಿಸಲರಿಗಳೊಡಲುಗಳ |
ತರಿಯುತ ಬಾಳುಕದಿ ಸೀಳೆ ತಲೆ ಬುರುಡೆಗಳೊಳಗಿನ ಮೆದುಡೊಡೆದೊಡೆದು |
ಹೊರಹೊಂಟು ಚೆಲ್ಲಾಡೆ ಎಂಟೆದೆ ಬಂಟರ ಬಾಯ್ಗೆ ಬಂದುದು ಜೀವ |
ಬಿಟ್ಟೋಡಿದರರಿಭಟರ್ ಬದುಕುವಾಸೆಯೊಳ್ ಪ್ರಾಣಭಯದಿಂ ಕೊಳುಗುಳವ |
ಕಾಲಭೈರವ ಕಲಿ ಕುಮಾರರಾಮನುಪಟಳವ ತಡೆಯಾದದರ್ ರಣದೊಳ್ |
ಜಯಪ್ರಕಾಶಿತ ಗಂಡುಗಲಿ ಕುಮಾರ ರಾಮ ರಣ ಭೀಷಣ |
ಕದನ ವಿಜೃಂಭಣ ಸರಳಗನ್ನಡ ಗದ್ಯ ರಣ ವರ್ಣನ ||
     *******
ಯವ್ವಾ ಚಂಡ ಕೊಡವ್ವ ತಾಯೇ
ಚೆಂಡ ಕೊಡುದೆ ಹೋದೂರೆ
ಮುಂದೆ ಏನಂತ ಕೇಳುತಾಳೆ
ಯಾರಪ್ಪ ಎಲೆನೆ ದೊರಿಯೆ
ಚೆಂಡ ಕೊಡುತಿನಲ್ಲೋ
ನನ್ನ ಪಟ್ಟೇ ಮಂಚುಕೆ ಬಾರೋ
ನನ್ನ ಆಸೆ ತೀರಿಸು ಬಾರೋ
ಬಾರಪ್ಪ ಎಲೆನೆ ದೊರಿಯೆ
ಆಸೆ ನಿನಗಿಲ್ಲವೆನೋ
ಮಕಕೆ ಮೀಸೆ ನಿನಗಿಲ್ಲವೆನೋ
ಎದಿಮ್ಯಾಲೆ ರೋಮಿಲ್ಲವೇನೋ
ಹಂಗಂತ ಕೇಳುವಾಗ
ಯವ್ವಾ ಪಾಪಿ ಮಾತಾಡುಬ್ಯಾಡ
ಯವ್ವಾ ದೋಷಕೆ ಗುರಿ ಮಾಡಬ್ಯಾಡ
ಅಪ್ಪಗೆ ಬಂದೋಳು ಅವ್ವಾ
ಯವ್ವಾ ತಿಪ್ಪೀಗೆ ಬಂದುದು ಗೊಬ್ಬರ
ಯವ್ವಾ ಹೆತ್ತವ್ವನಂಗಿದ್ದಿಯಲ್ಲೇ
ಅಕ್ಕನೊಟ್ಟೇಲಿ ಆರು ತಿಂಗಳು
ಯವ್ವಾ ತಂಗಿ ಹೊಟ್ಟೇಲಿ ಮೂರು ತಿಂಗಳು
ಪಾಪಿ ಮಾತಾಡುಬ್ಯಾಡ
ನನ್ನ ದೋಷಕೆ ಗುರಿ ಮಾಡಬ್ಯಾಡ
ಕಂದ ಹಂಗಂತ ಕೇಳುತ್ತಾನೆ.

ಆಕರ ಗ್ರಂಥ[ಬದಲಾಯಿಸಿ]

 1. ಕನ್ನಡ ಸಾಹಿತ್ಯ ಕೋಶ -ಸಂ.ರಾಜಪ್ಪ ದಳವಾಯಿ
 2. ಕಾವ್ಯ ಸಂಚಯ ಭಾಗ-೪
 3. ಕನ್ನಡ ಜಾನಪದ ವಿಶ್ವಕೋಶ ಸಂಪುಟ- ೧ deepthi

ಉಲ್ಲೇಖಗಳು[ಬದಲಾಯಿಸಿ]

[೧] [೨] [೩] [೪] [೫]

 1. http://kanaja.in/archives/52376
 2. http://www.janakalotishreekumararama.org/
 3. http://sampada.net/%E0%B2%97%E0%B2%82%E0%B2%A1%E0%B3%81%E0%B2%97%E0%B2%B2%E0%B2%BF-%E0%B2%95%E0%B3%81%E0%B2%AE%E0%B2%BE%E0%B2%B0%E0%B2%B0%E0%B2%BE%E0%B2%AE
 4. http://www.prajavani.net/article/%E0%B2%95%E0%B3%8D%E0%B2%B0%E0%B2%BE%E0%B2%82%E0%B2%A4%E0%B2%BF-%E0%B2%AA%E0%B3%81%E0%B2%B0%E0%B3%81%E0%B2%B7-%E0%B2%95%E0%B3%81%E0%B2%AE%E0%B2%BE%E0%B2%B0%E0%B2%B0%E0%B2%BE%E0%B2%AE
 5. http://www.kannadanet.com/2012/06/blog-post_3626.html