ಕುಛ್ ಕುಛ್ ಹೋತಾ ಹೇ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಛ್ ಕುಛ್ ಹೋತಾ ಹೇ
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಕರನ್ ಜೋಹರ್
ನಿರ್ಮಾಪಕಯಶ್ ಜೋಹರ್
ಲೇಖಕಕರನ್ ಜೋಹರ್
ಪಾತ್ರವರ್ಗಶಾರುಖ್ ಖಾನ್
ಕಾಜೋಲ್
ರಾನಿ ಮುಖರ್ಜಿ
ಸಲ್ಮಾನ್ ಖಾನ್
ಸಂಗೀತಜತಿನ್ ಲಲಿತ್
ಛಾಯಾಗ್ರಹಣಸಂತೋಷ್ ತುಂಡಿಯಿಲ್
ಸಂಕಲನಸಂಜಯ್ ಸಂಕ್ಲಾ
ಸ್ಟುಡಿಯೋಧರ್ಮಾ ಪ್ರೊಡಕ್ಷನ್ಸ್
ವಿತರಕರುಯಶ್ ರಾಜ್ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
  • 16 ಅಕ್ಟೋಬರ್ 1998 (1998-10-16)[೧]
ಅವಧಿ185 ನಿಮಿಷಗಳು[೧]
ದೇಶಭಾರತ
ಭಾಷೆಹಿಂದಿ
ಬಂಡವಾಳ140 ದಶಲಕ್ಷ[೨]
ಬಾಕ್ಸ್ ಆಫೀಸ್ಅಂದಾಜು 1.07 ಶತಕೋಟಿ[೩]

ಕುಛ್ ಕುಛ್ ಹೋತಾ ಹೇ (ಅನುವಾದ: ಏನೇನೊ ಏನೇನೊ ಆಗುತ್ತದೆ) (ಕೆಕೆಎಚ್ಎಚ್ ಎಂದೂ ಕರೆಯಲ್ಪಡುತ್ತದೆ) ೧೯೯೮ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಕರನ್ ಜೋಹರ್ ಬರೆದು ನಿರ್ದೇಶಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಜನಪ್ರಿಯ ಜೋಡಿಯಾದ ಶಾರುಖ್ ಖಾನ್ ಮತ್ತು ಕಾಜೊಲ್ ನಟಿಸಿದ್ದಾರೆ. ರಾಣಿ ಮುಖರ್ಜಿ ಮತ್ತು ಸಲ್ಮಾನ್‌ ಖಾನ್‌ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಸಾನಾ ಸಯೀದ್ ಈ ಚಿತ್ರದ ಮೂಲಕ ತಮ್ಮ ಪಾದಾರ್ಪಣೆ ಮಾಡಿದರು. ಕಥಾವಸ್ತುವು ಹಲವು ವರ್ಷಗಳಷ್ಟು ಬೇರೆಯಾಗಿರುವ ಎರಡು ಪ್ರೇಮ ತ್ರಿಕೋನಗಳನ್ನು ಸಂಯೋಜಿಸುತ್ತದೆ. ಮೊದಲಾರ್ಧವು ಕಾಲೇಜಿನ ಆವರಣದಲ್ಲಿರುವ ಸ್ನೇಹಿತರ ಬಗ್ಗೆ ಆಗಿದೆ. ಎರಡನೆಯದು ತನ್ನ ತಂದೆಯನ್ನು ಅವನ ಹಳೆಯ ಸ್ನೇಹಿತೆಯೊಂದಿಗೆ ಮತ್ತೆ ಸೇರಿಸಲು ಪ್ರಯತ್ನಿಸುವ ಒಬ್ಬ ವಿಧುರನ ಸಣ್ಣ ಮಗಳ ಕಥೆಯನ್ನು ಹೇಳುತ್ತದೆ.

ಭಾರತ, ಮಾರೀಷಿಯಸ್, ಮತ್ತು ಸ್ಕಾಟ್‍ಲಂಡ್‍ನಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ಜೋಹರ್ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಹಿಂದಿ ಸಿನಿಮಾದಲ್ಲಿ ಶೈಲಿಯ ಹೊಸ ಮಟ್ಟವನ್ನು ಸ್ಥಾಪಿಸುವುದು ಈ ಚಿತ್ರದ ಗುರಿಗಳಲ್ಲಿ ಒಂದಾಗಿತ್ತು. ಜತಿನ್-ಲಲಿತ್‍ರಿಂದ ಸಂಯೋಜಿತವಾದ ಈ ಚಿತ್ರದ ಸಂಗೀತವು ಆ ವರ್ಷ ಅತಿ ಹೆಚ್ಚು ಮಾರಾಟವಾಯಿತು. ಕುಛ್ ಕುಛ್ ಹೋತಾ ಹೇ ೧೬ ಅಕ್ಟೋಬರ್ ೧೯೯೮ರಂದು ಬಿಡುಗಡೆಗೊಂಡಿತು ಮತ್ತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಕಾಜೋಲ್‍ರ ಅಭಿನಯವನ್ನು ಪ್ರಶಂಸಿಸಲಾಯಿತು. ಈ ಚಿತ್ರವು ಭಾರತದಲ್ಲಿ ಹಾಗೂ ವಿದೇಶದಲ್ಲಿ ಯಶಸ್ವಿಯಾಯಿತು ಮತ್ತು ಆ ವರ್ಷದ ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಲನಚಿತ್ರವಾಯಿತು.

ಈ ಚಿತ್ರವು ಅಸಂಖ್ಯಾತ ಪ್ರಶಸ್ತಿ ಗೌರವಗಳನ್ನು ಪಡೆಯಿತು. ಇದರಲ್ಲಿ ಹಿತಕರ ಮನೋರಂಜನೆ ಒದಗಿಸುವ ಅತ್ಯಂತ ಜನಪ್ರಿಯ ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ, ಜ಼ೀ ಸಿನೆ ಪ್ರಶಸ್ತಿ, ಸ್ಕ್ರೀನ್ ಪ್ರಶಸ್ತಿ, ಮತ್ತು ಬಾಲಿವುಡ್ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ "ಅತ್ಯುತ್ತಮ ಚಲನಚಿತ್ರ" ವರ್ಗದಲ್ಲಿ ಪ್ರಶಸ್ತಿಗಳು ಸೇರಿವೆ. ಈ ಚಿತ್ರವು ೮ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಎಲ್ಲ ನಾಲ್ಕು ನಟನಾ ಪ್ರಶಸ್ತಿಗಳನ್ನು (ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ) ಗೆದ್ದ ಮೊದಲ ಹಿಂದಿ ಚಲನಚಿತ್ರವಾಗಿತ್ತು.

ಕಥಾವಸ್ತು[ಬದಲಾಯಿಸಿ]

ತಮ್ಮ ಮಗಳು ಅಂಜಲಿ ಖನ್ನಾಗೆ ಜನ್ಮನೀಡಿದ ಬಳಿಕ ರಾಹುಲ್ ಖನ್ನಾ ತನ್ನ ಹೆಂಡತಿ ಟೀನಾ ಖನ್ನಾಳನ್ನು (ಕನ್ಯಾನಾಮ ಮಲ್ಹೋತ್ರಾ) ಕಳೆದುಕೊಳ್ಳುತ್ತಾನೆ. ಅವನು ಒಂಟಿ ತಂದೆಯಾಗಿ ಅಂಜಲಿಯನ್ನು ತನ್ನ ತಾಯಿಯ ನೆರವಿನಿಂದ ಬೆಳೆಸುತ್ತಾನೆ. ಅಂಜಲಿ ತನ್ನ ತಾಯಿಯು ಸಾಯುವ ಮೊದಲು ತಾನು ತನ್ನ ಮೊದಲ ಎಂಟು ಜನ್ಮದಿನಗಳಂದು ಪಡೆಯಲು ತನಗಾಗಿ ಬರೆದ ಪತ್ರಗಳನ್ನು ಶೇಖರಿಸಿಡುತ್ತಾ ಬೆಳೆಯುತ್ತಾಳೆ. ತನ್ನ ಎಂಟನೇ ಜನ್ಮದಿನದಂದು, ಅಂಜಲಿಯು ತನ್ನ ಅಮ್ಮ ತನಗಾಗಿ ಬಿಟ್ಟುಹೋದ ಕೊನೆಯ ಮತ್ತು ಅತ್ಯಂತ ಮುಖ್ಯ ಪತ್ರವನ್ನು ಓದುತ್ತಾಳೆ; ಅದು ರಾಹುಲ್, ಟೀನಾ ಮತ್ತು ಅಂಜಲಿ ಶರ್ಮಾರ ಕಥೆಯನ್ನು ಹೇಳುತ್ತದೆ.

ನಂತರ ಚಿತ್ರವು ಹಿನ್ನೋಟಕ್ಕೆ ಸೇಂಟ್ ಕ್ಸೇವಿಯರ್ಸ್ ಕಾಲೇಜ್‍ಗೆ ಹೋಗುತ್ತದೆ. ಅಲ್ಲಿ ರಾಹುಲ್ ಗಂಡುಬೀರಿ ಅಂಜಲಿ ಶರ್ಮಾಳ ಅತ್ಯುತ್ತಮ ಗೆಳೆಯನಾಗಿರುತ್ತಾನೆ. ಕಾಲೇಜಿನ ಪ್ರಾಂಶುಪಾಲ ಮಿ. ಮಲ್ಹೋತ್ರಾನ ಶ್ರೀಮಂತ ಮತ್ತು ಆಕರ್ಷಕ ಮಗಳಾದ ಟೀನಾ ಸೇಂಟ್ ಕ್ಸೇವಿಯರ್ಸ್‌ಗೆ ಆಗಮಿಸಿ ರಾಹುಲ್ ಮತ್ತು ಅಂಜಲಿಯ ಸ್ನೇಹಿತೆಯಾಗುತ್ತಾಳೆ. ಅವಳ ಪ್ರೀತಿಯನ್ನು ಗೆಲ್ಲಲು ಪ್ರಯತ್ನಿಸುತ್ತಾ ರಾಹುಲ್ ನಿರಂತರವಾಗಿ ಟೀನಾಳ ಜೊತೆ ಚೆಲ್ಲಾಟವಾಡುತ್ತಿರುತ್ತಾನೆ. ನಂತರ, ಅವರಿಬ್ಬರೂ ಪ್ರೀತಿಸತೊಡಗುತ್ತಾರೆ. "ಪ್ರೀತಿಯೇ ಗೆಳೆತನ" ಎಂದು ರಾಹುಲ್ ಹೇಳಿದ ಬಳಿಕ ತಾನು ರಾಹುಲ್‍ನನ್ನು ಪ್ರೀತಿಸುತ್ತಿದ್ದೇನೆ ಎಂದು ಅಂಜಲಿಗೆ ನಿಧಾನವಾಗಿ ಅರಿವಾಗಲು ಶುರುವಾಗುತ್ತದೆ. ಆದರೆ ತನ್ನ ಅನಿಸಿಕೆಗಳನ್ನು ಹೇಳಿಕೊಳ್ಳಲು ಅವಳು ನಿರ್ಧರಿಸಿದಾಗ, ಬದಲಾಗಿ ರಾಹುಲ್ ತಾನು ಟೀನಾಳನ್ನು ಪ್ರೀತಿಸುತ್ತಿದ್ದೇನೆಂದು ಹೇಳುತ್ತಾನೆ. ಬಹಳ ದುಃಖಿತಳಾಗಿ, ಅಂಜಲಿ ಕಾಲೇಕ್ ತೊರೆಯಲು ನಿರ್ಧರಿಸಿ ರಾಹುಲ್‍ನೊಂದಿಗೆ ಅಶ್ರೂಪೂರ್ಣ ವಿದಾಯವನ್ನು ಹಂಚಿಕೊಳ್ಳುತ್ತಾಳೆ.

ವರ್ತಮಾನ ಕಾಲಕ್ಕೆ ಮರಳಿ, ತಾನು ರಾಹುಲ್ ಮತ್ತು ಅಂಜಲಿ ಶರ್ಮಾ ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ತಡೆದಿರಬಹುದೆಂದು ಅರಿವಾಯಿತೆಂದು ಟೀನಾ ತನ್ನ ಪತ್ರದಲ್ಲಿ ವಿವರಿಸುತ್ತಾಳೆ. ಈಗ ರಾಹುಲ್ ಒಬ್ಬಂಟಿಯಾಗಿರುವುದರಿಂದ, ರಾಹುಲ್ ಮತ್ತು ಅಂಜಲಿಯರನ್ನು ಮತ್ತೆ ಸೇರಿಸಿ ರಾಹುಲ್‍ನ ಕಳೆದುಹೋದ ಪ್ರೀತಿ ಮತ್ತು ಗೆಳತಿಯನ್ನು ಅವನಿಗೆ ಮರಳಿ ತರಬೇಕೆಂದು ಟೀನಾ ತನ್ನ ಮಗಳನ್ನು ಕೇಳಿಕೊಳ್ಳುತ್ತಾಳೆ. ಈ ಕಾರ್ಯವನ್ನು ಪೂರೈಸಲು ಪ್ರಯತ್ನಿಸಲು ಅಂಜಲಿ ತನ್ನ ಇಬ್ಬರೂ ಅಜ್ಜ ಅಜ್ಜಿಯರ ಸಹಾಯವನ್ನು ಪಡೆದುಕೊಳ್ಳುತ್ತಾಳೆ.

ವರ್ತಮಾನದಲ್ಲಿ, ಅಂಜಲಿ ಶರ್ಮಾ ಒಬ್ಬ ಸುಂದರ ಮಹಿಳೆಯಾಗಿರುತ್ತಾಳೆ ಮತ್ತು ಅವಳ ಮದುವೆ ಅಮನ್ ಮೆಹ್ರಾಗೆ ನಿಶ್ಚಯವಾಗಿರುತ್ತದೆ, ಆದರೆ ರಾಹುಲ್‍ನ ಕಳೆತ ಅವಳೊಂದಿಗೆ ಉಳಿದುಕೊಂಡಿರುತ್ತದೆ. ತನ್ನ ತಂದೆ ಮತ್ತು ಅವನ ಅತ್ಯುತ್ತಮ ಗೆಳತಿಯನ್ನು ಮತ್ತೆ ಸೇರಿಸಲು ದೃಢ ಸಂಕಲ್ಪ ಹೊಂದಿ, ಅಂಜಲಿ ಖನ್ನಾ ಮತ್ತು ಅವಳ ಅಜ್ಜಿ ರಾಹುಲ್‍ನ ಆಸೆಗಳಿಗೆ ವಿರುದ್ಧವಾಗಿ ಶಿಮ್ಲಾದಲ್ಲಿನ ಒಂದು ಬೇಸಿಗೆ ಶಿಬಿರಕ್ಕೆ ಹೋಗುತ್ತಾರೆ. ಅಲ್ಲಿ ಅಂಜಲಿ ಶರ್ಮಾ ಒಬ್ಬ ವಿದ್ಯಾರ್ಥಿ ಸಲಹಾಗಾರ್ತಿಯಾಗಿರುತ್ತಾಳೆ. ಅಂಜಲಿ ಖನ್ನ ಅಂಜಲಿ ಶರ್ಮಾಳನ್ನು ಭೇಟಿಯಾಗುತ್ತಾಳೆ. ಇಬ್ಬರೂ ಸ್ನೇಹಿತರಾಗುತ್ತಾರೆ. ಯುಕ್ತಿಮಾಡಿ ರಾಹುಲ್ ಶಿಬಿರಕ್ಕೆ ಬರುವಂತೆ ಅವನ ಮಗಳು ಮಾಡುತ್ತಾಳೆ. ಅಲ್ಲಿ ಅವನು ಅಂಜಲಿ ಶರ್ಮಾಳೊಂದಿಗೆ ಮತ್ತೆ ಸೇರುತ್ತಾನೆ. ಒಟ್ಟಾಗಿ ಕಾಲ ಕಳೆದು, ರಾಹುಲ್ ಮತ್ತು ಅಂಜಲಿ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಮನ್ ಶಿಬಿರಕ್ಕೆ ಆಗಮಿಸಿ ಅವನು ಅಂಜಲಿಯ ನಿಶ್ಚಿತ ವರನೆಂದು ರಾಹುಲ್‍ಗೆ ಗೊತ್ತಾದಾಗ, ರಾಹುಲ್‍ನ ಹೃದಯ ಒಡೆದುಹೋಗುತ್ತದೆ, ಆದರೂ ಅಂಜಲಿಯನ್ನು ಅಭಿನಂದಿಸುತ್ತಾನೆ. ಇದನ್ನು ಅಂಜಲಿ ರಾಹುಲ್ ತನ್ನನ್ನು ಮತ್ತೊಮ್ಮೆ ತಿರಸ್ಕರಿಸಿದನು ಎಂದು ಅರ್ಥಮಾಡಿಕೊಂಡು ಬೇಸಿಗೆ ಶಿಬಿರವನ್ನು ತೊರೆದು ಆದಷ್ಟು ಬೇಗೆ ಅಮನ್‍ನನ್ನು ಮದುವೆಯಾಗಬೇಕೆಂದು ನಿರ್ಧರಿಸುತ್ತಾಳೆ.

ರಾಹುಲ್ ಮತ್ತು ಅವನ ಕುಟುಂಬ ಅಂಜಲಿಯ ಮದುವೆಗೆ ಹೋಗುತ್ತದೆ. ಅಲ್ಲಿ ರಾಹುಲ್ ನಿಶ್ಶಬ್ದವಾಗಿ ಅಂಜಲಿ ಮುಂದೆ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆ. ಅವಳನ್ನು ವಿವಾಹಕ್ಕೆ ಕರೆತರುವುದನ್ನು ಕಣ್ಣಿನಲ್ಲಿ ನೀರು ತುಂಬಿಕೊಂಡು ನೋಡುತ್ತಾನೆ. ರಾಹುಲ್‍ನ ಭಾವನೆಗಳ ಬಗ್ಗೆ ಗೊತ್ತಾಗಿ, ಅಂಜಲಿ ಮದುವೆಯನ್ನು ಮುಂದುವರಿಸುವ ಬಗ್ಗೆ ಹಿಂಜರಿಯುತ್ತಾಳೆ. ಮಂಟಪಕ್ಕೆ ಹೋಗುವ ದಾರಿಯಲ್ಲಿ ಬಹಳ ಅಳುತ್ತಾಳೆ. ಅವಳು ಎಂದೆಂದೂ ರಾಹುಲ್‍ನನ್ನು ಪ್ರೀತಿಸುತ್ತಿರುವಳು ಎಂದು ಅಮನ್‍ಗೆ ಅರಿವಾಗುತ್ತದೆ, ಮತ್ತು ಅವನು ಅಂಜಲಿಯನ್ನು ತಮ್ಮ ನಿಶ್ಚಿತಾರ್ಥದಿಂದ ಬಿಡುಗಡೆಗೊಳಿಸುತ್ತಾನೆ. ರಾಹುಲ್ ಮತ್ತು ಅಂಜಲಿ ಭಾವನಾತ್ಮಕ ಪುನರ್ಮಿಲನವನ್ನು ಹಂಚಿಕೊಂಡು ಮದುವೆಯಾಗುತ್ತಾರೆ. ಅಂಜಲಿ ಖನ್ನಾ ತನ್ನ ತಾಯಿಯ ಆತ್ಮವು ತನಗೆ ಮೆಚ್ಚುಗೆ ಸೂಚನೆಯನ್ನು ಕೊಡುವ ಮೂಲಕ ತನ್ನನ್ನು ಪ್ರಶಂಸಿಸುವುದನ್ನು ನೋಡುವುದರೊಂದಿಗೆ ಚಿತ್ರವು ಮುಗಿಯುತ್ತದೆ.

ಪಾತ್ರವರ್ಗ[ಬದಲಾಯಿಸಿ]

  • ರಾಹುಲ್ ಖನ್ನಾ ಪಾತ್ರದಲ್ಲಿ ಶಾರುಖ್ ಖಾನ್
  • ಅಂಜಲಿ ಶರ್ಮಾ ಪಾತ್ರದಲ್ಲಿ ಕಾಜೋಲ್
  • ಟೀನಾ ಖನ್ನಾ (ಕನ್ಯಾನಾಮ ಮಲ್ಹೋತ್ರಾ) ಪಾತ್ರದಲ್ಲಿ ರಾನಿ ಮುಖರ್ಜಿ
  • ಅಮನ್ ಮೆಹ್ರಾ ಪಾತ್ರದಲ್ಲಿ ಸಲ್ಮಾನ್ ಖಾನ್
  • ಅಂಜಲಿ ಖನ್ನಾ ಪಾತ್ರದಲ್ಲಿ ಸಾನಾ ಸಯೀದ್
  • ಮಿಸಸ್ ಸವಿತಾ ಖನ್ನಾ ಪಾತ್ರದಲ್ಲಿ ಫ಼ರೀದಾ ಜಲಾಲ್
  • ಪ್ರಾಂಶುಪಾಲ ಮಲ್ಹೋತ್ರಾ ಪಾತ್ರದಲ್ಲಿ ಅನುಪಮ್ ಖೇರ್
  • ಮಿಸ್ ಬ್ರಗ್ಯಾಂಜ಼ಾ ಪಾತ್ರದಲ್ಲಿ ಅರ್ಚನಾ ಪೂರಣ್ ಸಿಂಗ್
  • ಮಿಸಸ್ ಶರ್ಮಾ ಪಾತ್ರದಲ್ಲಿ ರೀಮಾ ಲಾಗೂ
  • ರಿಫ಼ತ್ ಬೀ ಪಾತ್ರದಲ್ಲಿ ಹಿಮಾನಿ ಶಿವ್‍ಪುರಿ
  • ಕರ್ನಲ್ ಆಲ್ಮೇಡಾ ಪಾತ್ರದಲ್ಲಿ ಜಾನಿ ಲಿವರ್
  • ನಿಸ್ಶಬ್ದ ಸರ್ದಾರ್ಜಿ ಪಾತ್ರದಲ್ಲಿ ಪರ್ಜ಼ಾನ್ ದಸ್ತೂರ್
  • ನೀಲಮ್ ಪಾತ್ರದಲ್ಲಿ ನೀಲಮ್ ಕೋಠಾರಿ
  • ಅತಿಥಿ ಪಾತ್ರದಲ್ಲಿ ನಿಖಿಲ್ ಆಡ್ವಾಣಿ
  • ಅತಿಥಿ ಪಾತ್ರದಲ್ಲಿ ಮನೀಶ್ ಮಲ್ಹೋತ್ರಾ
  • ಅತಿಥಿ ಪಾತ್ರದಲ್ಲಿ ಫ಼ಾರಾ ಖಾನ್
  • "ತುಝೆ ಯಾದ್ ನಾ ಮೇರಿ ಆಯೆ" ಹಾಡಿನಲ್ಲಿ ಗೀತಾ ಕಪೂರ್
  • ಅತಿಥಿ ಪಾತ್ರದಲ್ಲಿ ಹೀರೂ ಜೋಹರ್

ತಯಾರಿಕೆ[ಬದಲಾಯಿಸಿ]

ಕಥೆ[ಬದಲಾಯಿಸಿ]

ಆದಿತ್ಯ ಚೋಪ್ರಾ ನಿರ್ದೇಶನದ ಮೊದಲ ಚಿತ್ರದಲ್ಲಿ ಸಹಾಯಕನಾಗಿದ್ದ ಅನುಭವವಾದ ಮೇಲೆ, ಕರನ್ ಜೋಹರ್ ತಾವೇ ನಿರ್ದೇಶನ ಮಾಡಲು ಪ್ರೋತ್ಸಾಹಿತರಾದರು. ತಮ್ಮ ಸ್ವಂತ ಪ್ರಣಯಪ್ರಧಾನ ಚಲನಚಿತ್ರ ಕುಛ್ ಕುಛ್ ಹೋತಾ ಹೇ ನಲ್ಲಿ, ಅವರು ಆ ಚಿತ್ರದಲ್ಲಿದ್ದ ಮುಖ್ಯ ನಟರನ್ನೇ, ಅಂದರೆ ಶಾರುಖ್ ಖಾನ್ ಮತ್ತು ಕಾಜೋಲ್‍ರನ್ನು ಆಯ್ಕೆಮಾಡಿದರು.[೪] ಅವರನ್ನು ೧೯೯೭ರಲ್ಲಿ ಚಿತ್ರತಂಡದಲ್ಲಿ ಸೇರಿಸಿಕೊಳ್ಳಲಾಯಿತು.[೫]

ಜೋಹರ್ ಮೊದಲು ಒಬ್ಬ ಗಂಡುಬೀರಿ, ಒಬ್ಬ ಬಹಳ ಸುಂದರ ಹುಡುಗಿ ಮತ್ತು ಸ್ವಲ್ಪ ಅಸಂವೇದಿಯಾದ ಹುಡುಗನ ನಡುವಿನ ಪ್ರೇಮ ತ್ರಿಕೋನವಾಗಿದ್ದ ಕಥೆಯನ್ನು ಬರೆದರು. ಆದರೆ ಬಹಳ ತೃಪ್ತಿಯಾಗದೆ ಆ ವಿಚಾರವನ್ನು ಕೈಬಿಟ್ಟರು. ಆಮೇಲೆ ಒಬ್ಬ ವಿಧುರ ಮತ್ತು ಅವನ ಮಗುವಿನ ಬಗೆಗಿನ ಮತ್ತೊಂದು ಕಥೆಯನ್ನು ಬರೆದರು. ಅದನ್ನೂ ಕೈಬಿಟ್ಟರು. ಅಂತಿಮವಾಗಿ ಈ ಎರಡು ಕಥೆಗಳನ್ನು ಒಂದಾಗಿ ವಿಲೀನಗೊಳಿಸಲು ನಿರ್ಧರಿಸಿದರು. ಕಥೆಯು ವೈಯಕ್ತಿಕ ಬಯಕೆಗಳು ಮತ್ತು ಹೆತ್ತವರ ಬಗ್ಗೆ ನಿಷ್ಠೆಯ ವಿಷಯವನ್ನು ಕೂಡ ಒಳಗೊಳ್ಳುತ್ತದೆ ಮತ್ತು ಕೆಲವು ಪೂರ್ವ ಪಶ್ಚಿಮಗಳ ಸಮಾಗಮದ ವಿಷಯಗಳನ್ನು ಹೊಂದಿದೆ. ಆದರೆ ಪಾತ್ರಗಳು ವಿದೇಶಕ್ಕೆ ಹೋಗುವ ಬದಲು, ಅದು ಭಾರತದೊಳಗೆ ಅವಾಸ್ತವ ಪಶ್ಚಿಮವನ್ನು ಸೃಷ್ಟಿಸುತ್ತದೆ.[೬]

ಬೆಳವಣಿಗೆ[ಬದಲಾಯಿಸಿ]

ಮುಖ್ಯ ಪಾತ್ರದಲ್ಲಿ ಶಾರುಖ್ ಖಾನ್ ಇರಬೇಕೆಂದು ಮೊದಲಿನಿಂದಲೂ ಕರನ್ ಜೋಹರ್ ಖಚಿತವಾಗಿದ್ದರು.[೭] ಟೀನಾಳ ಪಾತ್ರವನ್ನು ತುಂಬಲು ಹೆಚ್ಚು ಸಮಯ ಬೇಕಾಯಿತು. ಟ್ವಿಂಕಲ್‍ಗಾಗಿ ಆ ಪಾತ್ರವನ್ನು ಬರೆಯಲಾಗಿತ್ತದಾದರೂ ಅವರು ಅದನ್ನು ನಿರಾಕರಿಸಿದರು. ಆ ಪಾತ್ರದ ಪ್ರಸ್ತಾಪವನ್ನು ಇತರ ನಟಿಯರ ಮುಂದಿಡಲಾಯಿತಾದರೂ ಅವರು ಕೂಡ ಅದನ್ನು ನಿರಾಕರಿಸಿದರು.[೮] ಆದಿತ್ಯ ಚೋಪ್ರಾ ಮತ್ತು ಶಾರುಖ್ ಖಾನ್ ರಾನಿ ಮುಖರ್ಜಿಯ ಹೆಸರನ್ನು ಕರನ್ ಜೋಹರ್‌ ಮುಂದೆ ಪ್ರಸ್ತಾಪಿಸಿದರು. ಹಾಗಾಗಿ ಆ ಪಾತ್ರವನ್ನು ರಾನಿಗೆ ನೀಡಲಾಯಿತು. ಆರಂಭದಲ್ಲಿ ಅಮನ್‍ನ ಪಾತ್ರದ ಪ್ರಸ್ತಾಪವನ್ನು ಇತರ ನಟರ ಮುಂದಿಡಲಾಯಿತಾದರೂ ಅವರೆಲ್ಲ ನಿರಾಕರಿಸಿದರು. ಹಾಗಾಗಿ ಕರನ್ ಆ ಪಾತ್ರವನ್ನು ಸಲ್ಮಾನ್ ಖಾನ್‍ಗೆ ನೀಡಿದರು.

ಒಬ್ಬ ವಸ್ತ್ರ ವಿನ್ಯಾಸಕರೂ ಆಗಿರುವ ಜೋಹರ್ ಈ ಚಿತ್ರದ ಮೂಲಕ ಹಿಂದಿ ಸಿನಿಮಾದಲ್ಲಿ ಹೊಸ ಮಟ್ಟದ ಶೈಲಿಯನ್ನು ಸ್ಥಾಪಿಸಲು ಬಯಸಿದ್ದರು. ಮನೀಶ್ ಮಲ್ಹೋತ್ರಾರೊಂದಿಗೆ ವಸ್ತ್ರಗಳಿಗಾಗಿ ಲಂಡನ್‍ಗೆ ಪ್ರಯಾಣಗಳನ್ನು ಮಾಡಿದರು. ವಿನ್ಯಾಸಕ ಶೈಲಿಗಳ ಜೊತೆಗೆ, ಜೋಹರ್ ಸ್ವಲ್ಪಮಟ್ಟಿಗೆ ಭ್ರಾಮಕ ಪ್ರಪಂಚವನ್ನು ಸೃಷ್ಟಿಸಿದರು. ಇದರಲ್ಲಿ ವಿದ್ಯಾರ್ಥಿಗಳು ಹಿಂಗ್ಲಿಷ್ ಮಾತಾಡುತ್ತಾರೆ ಮತ್ತು ಶುದ್ಧರೂಪದ ಕಾಲೇಜ್ ಆವರಣವನ್ನು ಅನುಭವಿಸುತ್ತಾರೆ. ಅಲ್ಲಿ ಅಪರಾಧ ಮತ್ತು ದ್ವೇಷವಿರುವುದಿಲ್ಲ. ಸಾಂಪ್ರದಾಯಿಕ ಹಿಂದೂ ಮೌಲ್ಯಗಳು ವ್ಯಾಪಕವಾಗಿರುತ್ತವೆ.[೯] ಶರ್ಮಿಷ್ಠ ರಾಯ್ ಈ ಚಿತ್ರದ ಕಲಾ ನಿರ್ದೇಶಕರಾಗಿದ್ದರು. ಫ಼ಾರಾ ಖಾನ್ ಚಿತ್ರದ ನೃತ್ಯ ನಿರ್ದೇಶಕರಾಗಿದ್ದರು. ಜತಿನ್-ಲಲಿತ್ ಚಿತ್ರದ ಸಂಗೀತ ಸಂಯೋಜಕರಾಗಿದ್ದರು. ನಿಖಿಲ್ ಆಡ್ವಾಣಿ ಸಹಾಯಕ ನಿರ್ದೇಶಕರಾಗಿದ್ದರು. ಶಬೀನಾ ಖಾನ್ ಮನೀಶ್ ಮಲ್ಹೋತ್ರಾಗೆ ಸಹಾಯಕಿಯಾಗಿದ್ದರು.

ಚಿತ್ರೀಕರಣ[ಬದಲಾಯಿಸಿ]

ಚಿತ್ರೀಕರಣವು ೨೧ ಅಕ್ಟೋಬರ್ ೧೯೯೭ರಂದು ಆರಂಭವಾಯಿತು. ಚಿತ್ರತಂಡವು ಯುವ ಮತ್ತು ಅನನುಭವಿಯಾಗಿದ್ದರಿಂದ ಚಿತ್ರೀಕರಣದ ಮೂಲಭೂತ ತಾಂತ್ರಿಕತೆಗಳನ್ನು ಶಾರುಖ್ ಖಾನ್ ವಿವರಿಸಬೇಕಾಯಿತು. ಸಂಪೂರ್ಣ ಚಿತ್ರವನ್ನು ಒಂಭತ್ತೂವರೆ ತಿಂಗಳಿನಲ್ಲಿ ಚಿತ್ರೀಕರಿಸಲಾಯಿತು.[೧೦] ಇದರ ಗಣನೀಯ ಪ್ರಮಾಣದ ಭಾಗವನ್ನು ಮಾರಿಷಸ್‍ನಲ್ಲಿ ಚಿತ್ರೀಕರಿಸಲಾಯಿತು.[೧೧][೧೨] ಶೀರ್ಷಿಕೆ ಗೀತೆಯನ್ನು ಹತ್ತು ದಿನಗಳ ಅವಧಿಯಲ್ಲಿ ಸ್ಕಾಟ್‌ಲೆಂಡ್‍ನ ಹಲವಾರು ಚಿತ್ರೋಪಮ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು.[೧೩] ಊಟಿಯಲ್ಲೂ ಸ್ವಲ್ಪ ಚಿತ್ರೀಕರಣ ನಡೆಯಿತು.[೧೪]

ಧ್ವನಿವಾಹಿನಿ[ಬದಲಾಯಿಸಿ]

ಕುಛ್ ಕುಛ್ ಹೋತಾ ಹೇ ಚಿತ್ರದ ಧ್ವನಿವಾಹಿನಿಯನ್ನು ಜತಿನ್-ಲಲಿತ್ ಸಂಯೋಜಿಸಿದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಸಮೀರ್ ಬರೆದರು. ಇದನ್ನು ೧೨ ಸೆಪ್ಟೆಂಬರ್ ೧೯೯೮ರಂದು ಬಿಡುಗಡೆ ಮಾಡಲಾಯಿತು.[೧೫] ಈ ಧ್ವನಿಸುರುಳಿ ಸಂಗ್ರಹವು ಆ ವರ್ಷದ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿಯಾಯಿತು.[೧೬] ಶೀರ್ಷಿಕೆ ಗೀತೆಯು ಬಹಳ ಜನಪ್ರಿಯವಾಯಿತು.

ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇರದಾಗ, ಹಾಡುಗಳನ್ನು ಬರೆಯಲು ಜಾವೇದ್ ಅಕ್ತರ್‌ರನ್ನು ನೇಮಿಸಿಕೊಳ್ಳಲಾಯಿತು. ಆದರೆ ಚಿತ್ರಕ್ಕೆ ಕುಛ್ ಕುಛ್ ಹೋತಾ ಹೇ ಎಂದು ಶೀರ್ಷಿಕೆ ನೀಡಿದ ಮೇಲೆ ಅವರಿಗೆ ಆ ಶೀರ್ಷಿಕೆಯು ಕಳಪೆ, ಅಶ್ಲೀಲ, ಅಸಭ್ಯವೆಂದು ಅನಿಸಿದ್ದರಿಂದ ಅವರು ಆ ಚಿತ್ರದಿಂದ ಹೊರಬಂದರು. ಆದರೆ ನಂತರ ಅದರ ಬಗ್ಗೆ ವಿಷಾದಿಸಿದರು.

ಸಂ.ಹಾಡುಗಾಯಕ(ರು)ಸಮಯ
1."ಕುಛ್ ಕುಛ್ ಹೋತಾ ಹೇ"ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್4:56
2."ಕೋಯಿ ಮಿಲ್ ಗಯಾ"ಕವಿತಾ ಕೃಷ್ಣಮೂರ್ತಿ, ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್7:16
3."ಸಾಜನ್‍ಜಿ ಘರ್ ಆಯೆ"ಕವಿತಾ ಕೃಷ್ಣಮೂರ್ತಿ, ಕುಮಾರ್ ಸಾನು, ಅಲ್ಕಾ ಯಾಗ್ನಿಕ್7:14
4."ಯೇ ಲಡಕಾ ಹೇ ದೀವಾನಾ"ಉದಿತ್ ನಾರಾಯಣ್, ಅಲ್ಕಾ ಯಾಗ್ನಿಕ್6:36
5."ರಘುಪತಿ ರಾಘವ್"ಅಲ್ಕಾ ಯಾಗ್ನಿಕ್, ಶಂಕರ್ ಮಹಾದೇವನ್2:05
6."ತುಝೆ ಯಾದ ನಾ ಮೇರಿ ಆಯೆ"ಅಲ್ಕಾ ಯಾಗ್ನಿಕ್, ಮನ್‍ಪ್ರೀತ್ ಅಖ್ತರ್, ಉದಿತ್ ನಾರಾಯಣ್7:05
7."ಲಡಕಿ ಬಡಿ ಅಂಜಾನಿ ಹೇ"ಕುಮಾರ್ ಸಾನು, ಅಲ್ಕಾ ಯಾಗ್ನಿಕ್6:23
8."ಕುಛ್ ಕುಛ್ ಹೋತಾ ಹೇ (ದುಃಖಭರಿತ)"ಅಲ್ಕಾ ಯಾಗ್ನಿಕ್1:26
ಒಟ್ಟು ಸಮಯ:42:59

ಬಿಡುಗಡೆ ಮತ್ತು ಪ್ರತಿಕ್ರಿಯೆ[ಬದಲಾಯಿಸಿ]

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ಈ ಚಿತ್ರದ ಪ್ರಥಮ ಪ್ರದರ್ಶನದವರೆಗೆ ಇದರಿಂದ ಬಹಳ ನಿರೀಕ್ಷೆಗಳಿದ್ದವು, ಮತ್ತು ನಿರ್ದಿಷ್ಟವಾಗಿ ಕರನ್ ಜೋಹರ್‌ರ ಪಾದಾರ್ಪಣೆಗೆ ಸಂಬಂಧಿಸಿದಂತೆ ನಿರೀಕ್ಷೆಗಳಿದ್ದವು.[೧೭]

₹10 ಕೋಟಿ ಬಂಡವಾಳದಲ್ಲಿ ತಯಾರಾದ ಈ ಚಿತ್ರವು ಭಾರತದಲ್ಲಿ ₹80.12 ಕೋಟಿಯಷ್ಟು ಮತ್ತು ಇತರ ದೇಶಗಳಲ್ಲಿ $6.3 ದಶಲಕ್ಷದಷ್ಟು ಹಣಗಳಿಸಿ ವಿಶ್ವಾದ್ಯಂತ ಇದರ ಗಳಿಕೆ ₹1.06 ಶತಕೋಟಿಯಷ್ಟಾಯಿತು. ಇದು ವಿಶ್ವಾದ್ಯಂತ ₹1 ಶತಕೋಟಿಗಿಂತ ಹೆಚ್ಚು ಹಣಗಳಿಸಿದ ಮೂರನೇ ಚಲನಚಿತ್ರವೆನಿಸಿಕೊಂಡಿತು.[೧೮]

ಪ್ರಶಸ್ತಿ ಗೌರವಗಳು[ಬದಲಾಯಿಸಿ]

೨೧ ಫ಼ೆಬ್ರುವರಿ ೧೯೯೯ ರಂದು ನಡೆದ ಆ ವರ್ಷದ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲ ಪ್ರಮುಖ ವರ್ಗಗಳನ್ನು ಬಾಚುವುದನ್ನು ಸೇರಿದಂತೆ, ಕುಛ್ ಕುಛ್ ಹೋತಾ ಹೇ ಅನೇಕ ಪ್ರಶಸ್ತಿಗಳನ್ನು ಗೆದ್ದಿತು.[೧೯] ಇದು ಫಿಲ್ಮ್‌ಫೇರ್‌ನಲ್ಲಿ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು (ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ) ಗೆದ್ದ ಮೂರನೇ ಚಲನಚಿತ್ರವಾಗಿತ್ತು.

೪೬ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಚಲನಚಿತ್ರ - ಯಶ್ ಜೋಹರ್, ಕರನ್ ಜೋಹರ್ - ಗೆಲುವು
  • ಅತ್ಯುತ್ತಮ ಹಿನ್ನೆಲೆ ಗಾಯಕಿ - ಅಲ್ಕಾ ಯಾಗ್ನಿಕ್ ("ಕುಛ್ ಕುಛ್ ಹೋತಾ ಹೇ") - ಗೆಲುವು

೪೪ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು

  • ಅತ್ಯುತ್ತಮ ಚಲನಚಿತ್ರ - ಯಶ್ ಜೋಹರ್ - ಗೆಲುವು
  • ಅತ್ಯುತ್ತಮ ನಿರ್ದೇಶಕ - ಕರನ್ ಜೋಹರ್ - ಗೆಲುವು
  • ಅತ್ಯುತ್ತಮ ನಟ - ಶಾರುಖ್ ಖಾನ್ - ಗೆಲುವು
  • ಅತ್ಯುತ್ತಮ ನಟಿ - ಕಾಜೋಲ್ - ಗೆಲುವು
  • ಅತ್ಯುತ್ತಮ ಪೋಷಕ ನಟ - ಸಲ್ಮಾನ್ ಖಾನ್ - ಗೆಲುವು
  • ಅತ್ಯುತ್ತಮ ಪೋಷಕ ನಟಿ - ರಾನಿ ಮುಖರ್ಜಿ - ಗೆಲುವು
  • ಅತ್ಯುತ್ತಮ ಕಲಾ ನಿರ್ದೇಶನ - ಶರ್ಮಿಷ್ಠ ರಾಯ್ - ಗೆಲುವು
  • ಅತ್ಯುತ್ತಮ ಚಿತ್ರಕಥೆ - ಕರನ್ ಜೋಹರ್ - ಗೆಲುವು

ಇತರ ಮಾಧ್ಯಮಗಳು[ಬದಲಾಯಿಸಿ]

ಚಿತ್ರದ ಬಿಡುಗಡೆಯ ಕೆಲವು ವರ್ಷಗಳ ನಂತರ, ಸೋನಿ ಚಿತ್ರದ ಉಪಗ್ರಹ ಹಕ್ಕುಗಳನ್ನು ₹೪ crore ಕೋಟಿಗೆ ಖರೀದಿಸಿತು.[೨೦][೨೧] ಚಿತ್ರವನ್ನು ವಿಎಚ್ಎಸ್, ಡಿವಿಡಿ ಮತ್ತು ಅಂತಿಮವಾಗಿ ಬ್ಲೂ-ರೇ ನಲ್ಲಿ ಕೂಡ ಬಿಡುಗಡೆ ಮಾಡಲಾಯಿತು.[೨೨]

ಬಿಡುಗಡೆಯ ನಂತರ[ಬದಲಾಯಿಸಿ]

ಅದರ ಆರಂಭಿಕ ಬಿಡುಗಡೆಯ ನಂತರ ಕುಛ್ ಕುಛ್ ಹೋತಾ ಹೇ ವಿಮರ್ಶೆಗಳು ಮತ್ತು ವಿಮರ್ಶಾತ್ಮಕ ವಿಶ್ಲೇಷಣೆಯ ವಿಷಯವಾಗಿತ್ತು. ಈ ಚಿತ್ರವು ಪ್ರಶಂಸೆಗೆ ಪಾತ್ರವಾಗಿದೆಯಾದರೂ ಅವಾಸ್ತವ ಪ್ರಪಂಚಗಳು ಮತ್ತು ಪಾತ್ರಗಳನ್ನು ಸೃಷ್ಟಿಸಿದ್ದಕ್ಕೆ ಟೀಕೆಗೂ ಒಳಗಾಗಿದೆ.[೯] ಇದು ಪಲಾಯನವಾದದ ತಮ್ಮ ದೂರದೃಷ್ಟಿಯ ಭಾಗವಾಗಿತ್ತು ಎಂದು ಇದಕ್ಕೆ ಪ್ರತಿಕ್ರಿಯೆಯಾಗಿ ಜೋಹರ್ ಹೇಳಿದ್ದಾರೆ.[೨೩]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Kuch Kuch Hota Hai (1998) – British Board of Film Classification". Archived from the original on 7 January 2016. Retrieved 27 November 2012.
  2. Johar, Karan; Saxena, Poonam (2017). An Unsuitable Boy. Penguin Books. p. 70. ISBN 9789385990939.
  3. "Kuch Kuch Hota Hai Box office". Box Office India. 22 July 2015. Archived from the original on 5 October 2015. Retrieved 22 July 2015.
  4. "Birthday Special: The Best Karan Johar Film? VOTE!". Rediff.com. 25 May 2012. Archived from the original on 8 August 2012. Retrieved 9 October 2012.
  5. "Shah Rukh-Kajol teamed". Archived from the original on 19 April 1997. Retrieved 13 November 2018.
  6. Stuart Cunningham; John Sinclair (2000). Floating Lives: The Media and Asian Diasporas. Rowman & Littlefield. p. 177. ISBN 978-0-7425-1136-1. Retrieved 8 October 2012.
  7. "Rediff On The NeT, Movies: An interview with Karan Johar". Rediff.com. 15 October 1998. Archived from the original on 25 October 2012. Retrieved 9 October 2012.
  8. "Rani, the 'replacing' queen!". The Times of India. 17 January 2011. Archived from the original on 1 May 2014. Retrieved 17 October 2015.
  9. ೯.೦ ೯.೧ "Indian cinema : Shading out reality". The Economist. 27 February 1999. Archived from the original on 7 January 2016. Retrieved 14 October 2012. – via Highbeam (subscription required)
  10. "Rediff On The NeT, Movies: An exclusive interview with director Karan Johar". Rediff.com. Archived from the original on 12 January 2012. Retrieved 21 March 2012.
  11. "F.A.L.T.U. has a Kuch Kuch Hota Hai connection". The Indian Express. 7 November 2010. Archived from the original on 10 December 2010. Retrieved 7 November 2013.
  12. Chowdhury, Nandita (26 October 1998). "Three is company Movie review: 'Kuch Kuch Hota Hai', starring Shah Rukh Khan, Kajol, Rani Mukherjee". India Today. Archived from the original on 14 June 2013. Retrieved 4 February 2014.
  13. Emma Cowing (20 July 2000). "Indian summer". The Scotsman. Archived from the original on 11 June 2014. Retrieved 7 November 2012. – via Highbeam (subscription required)
  14. "KKHH Filming Locations". awaradiaries.com. 7 October 2018. Retrieved 8 October 2018.
  15. "Kuch Kuch Hota Hai Various Artists". Archived from the original on 10 June 2015. Retrieved 9 October 2012.
  16. "Music Hits 1990–1999 (Figures in Units)". Box Office India. 22 January 2009. Archived from the original on 15 February 2008. Retrieved 9 May 2012.
  17. "Film Review: Kuch Kuch Hota Hai". Planet Bollywood. 16 October 1998. Archived from the original on 13 August 2012. Retrieved 9 October 2012.
  18. "The 100 Crore Worldwide Grossers: 34 Films Since 1994". Box Office India. Archived from the original on 7 January 2012. Retrieved 19 December 2011.
  19. "'Kuch Kuch Hota Hai' wins all top Filmfare honors". India Abroad. 26 February 1999. Archived from the original on 8 June 2014. Retrieved 14 October 2012. – via Highbeam (subscription required)
  20. "As film music industry struggles, Bollywood goes for rightsizing of copyright price tags". India Today. Archived from the original on 7 January 2016. Retrieved 28 March 2013.
  21. Nandini Raghavendra, ET Bureau 2 October 2012, 06.42AM IST (2 October 2012). "Sony bags TV rights of two films from Dharma Productions for Rs 50 crore — Economic Times". Economic Times. Retrieved 28 March 2013.{{cite news}}: CS1 maint: multiple names: authors list (link) CS1 maint: numeric names: authors list (link)
  22. "Kuch Kuch Hota Hai". Amazon.com. Retrieved 28 March 2013.
  23. Shandilya, Vikrant (26 September 2012). "My office is my marriage : Karan Johar". The Times of India. Archived from the original on 3 ಜನವರಿ 2013. Retrieved 10 October 2012.

ಹೊರಗಿನ ಕೊಂಡಿಗಳು[ಬದಲಾಯಿಸಿ]