ಕಾರ್ಲ್ ಮಾರ್ಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಮಾರ್ಕ್ಸ್

ಕಾರ್ಲ್ ಹಾಯ್ನ್‌ರಿಕ್ ಮಾರ್ಕ್ಸ್ (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) ಜರ್ಮನಿಯ ಒಬ್ಬ ತತ್ತ್ವಶಾಸ್ತ್ರಜ್ಞ, ರಾಜಕೀಯ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಸಿದ್ಧಾಂತ ಪರಿಣತ, ಸಮಾಜಶಾಸ್ತ್ರಜ್ಞ, ಸಮತಾವಾದಿ ಮತ್ತು ಕ್ರಾಂತಿಕಾರಿಯಾಗಿದ್ದರು. ಇವರ ವಿಚಾರಗಳೇ ಸಮತಾವಾದದ ತಳಹದಿಗಳೆಂದು ನಂಬಲಾಗಿದೆ. ಮಾರ್ಕ್ಸ್, ತಮ್ಮ ಕಾರ್ಯವಿಧಾನವನ್ನು ೧೮೪೮ ರಲ್ಲಿ ಪ್ರಕಟನೆಗೊಂಡ ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊದ ಮೊದಲನೆಯ ಅಧ್ಯಾಯದ ಮೊದಲ ಪಂಕ್ತಿಯಲ್ಲಿ ಸಂಕ್ಷೇಪಿಸಿದರು: “ಇಲ್ಲಿಯವರೆಗಿನ ಅಸ್ತಿತ್ವದಲ್ಲಿದ್ದ ಎಲ್ಲ ಸಮಾಜದ ಇತಿಹಾಸವು ವರ್ಗ ಹೋರಾಟಗಳ ಇತಿಹಾಸವಾಗಿದೆ.”[೧] [೨]

ಜೀವನಚರಿತ್ರೆ[ಬದಲಾಯಿಸಿ]

ಕಾರ್ಲ್ ಮಾರ್ಕ್ಸ್ ರವರು ಆರು ವರ್ಷದವರಿದ್ದಾಗ ಅವರ ಇಡೀ ಕುಟುಂಬವು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿತು. ಅದಕ್ಕೆ ಮುಖ್ಯ ಕಾರಣವೆಂದರೆ ಕಾರ್ಲ್ ಮಾರ್ಕ್ಸ್ ರವರು ಹುಟ್ಟಿದ ಟ್ರಿಯರ್ ನಗರವು ಒಂದು ಕಾಲದಲ್ಲಿ ರಾಜಕುಮಾರ ಜಾರ್ಚ್ ಬಿಷಪ್ ಆಡಳಿತ ಕೇಂದ್ರವಾಗಿತ್ತು. ಆದರೆ ಹತ್ತೊಂಭತ್ತನೆಯ ಶತಮಾನದ ಆರಂಭದಲ್ಲಿ ಫ್ರೆಂಚರಿಂದ ಆಕ್ರಮಿಸಲ್ಪಟ್ಟಿತ್ತು. ಫ್ರೆಂಚರ ಆಡಳಿತಕ್ಕೆ ಮುಂಚೆ ಯಹೂದಿ ಜನಾಂಗದವರು ನಾಗರಿಕ ಹಕ್ಕುಗಳ ದುರ್ಭರ ಗಮನಕ್ಕೆ ಒಳಗಾಗಿದ್ದರು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಯಹೂದಿಗಳೂ ಸಹ ಇತರ ನಾಗರೀಕರಂತೆ ನಾಗರಿಕ ಹಕ್ಕುಗಳನ್ನು ಪಡೆದುಕೊಂಡರು. ಅಲ್ಲಿಯವರೆಗೂ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳು ಅವರ ಪಾಲಿಗೆ ಮುಚ್ಚಲ್ಪಟ್ಟಿದ್ದವು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಆ ಮುಚ್ಚಲ್ಪಟ್ಟಿದ್ದ ಬಾಗಿಲುಗಳು ಅವರ ಪಾಲಿಗೂ ತೆರೆಯಲ್ಪಟ್ಟಿದ್ದವು. ಅವರೂ ಸಹ ಮನ ಬಂದ ವ್ಯಾಪಾರ ಇಲ್ಲವೆ ಉದ್ಯೋಗವನ್ನು ಪ್ರವೇಶಿಸಬಹುದಾದ ಮುಕ್ತ ಅವಕಾಶ ದೊರೆಯಿತು. ಆ ರೀತಿಯಲ್ಲಿ ನೆಪೋಲಿಯನ್ನನ ರಾಜ್ಯವು ತಮಗೆ ರಾಜಕೀಯ ಮುಕ್ತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ರೈನ್ ಪ್ರದೇಶದ ಯಹೂದಿ ಜನಾಂಗದ ಜನರು ಆ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸಿದರು. ಆದರೆ ಅವರು, ನೆಪೋಲಿಯನ್ ಸೋತ ನಂತರ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡನ್ನು ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಕ್ಕೆ ಒಳಪಡಿಸಿದ ಮೇಲೆ ಒಂದು ಮಹತ್ತರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮತ್ತೆ ಯಹೂದಿಗಳು ತಮ್ಮ ನಾಗರಿಕ ಹಕ್ಕುಗಳಿಂದ ವಂಚಿತರಾದರು. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.

ಕಾರ್ಲ್ ಮರ್ಕ್ಸ್ರ‌ರ ಜನ್ಮಸ್ಥಳ

ಪ್ರಾರಂಭದ ಜೀವನ[ಬದಲಾಯಿಸಿ]

ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದ ಲೂಡ್ ವಿಗ್ ವಾನ್ ವೆಸಟ್ ಪೇಲಿನ್ ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ ವಿದ್ವಾಂಸರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ ಪುಸ್ತಕಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ ಪ್ರಾಚೀನ ಹಾಗೂ ಆಧುನಿಕ ತತ್ವಜ್ಞಾನಿಗಳ ಕೃತಿಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.

ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಅವರಿಗೆ ಆರಂಭದಿಂದಲೂ ಅರ್ಥಶಾಸ್ತ್ರದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.

ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ ಬಾನ್ ವಿಶ್ವ ವಿದ್ಯಾನಿಲಯವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ ತತ್ವಶಾಸ್ತ್ರ ಮತ್ತು ಇತಿಹಾಸಗಳನ್ನೂ ಅಧ್ಯಯನ ಮಾಡಿದರು. ಅವರು ಸಾಹಿತ್ಯದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.[೩]

ಫೈಡ್‌ರಿಚ್ ಏನ್‌ಜಲ್ಸ್ (ಮಾರ್ಕ್ಸ್‌ರ ಆಪ್ತಸ್ನೇಹಿತ)

ವೈದ್ಯಕೀಯ ಶಾಲೆ[ಬದಲಾಯಿಸಿ]

ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.[೪]

ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ ಐತಿಹಾಸಿಪಂಥದ ಸಂಸ್ಥಾಪಕರಾದ ಸಾವಿಗ್‌ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ ವಿಮರ್ಶೆಯ ವಿಧಾನಗಳನ್ನು ಬೋಧಿಸಿದರು.

ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು ಧರ್ಮ ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ ಹೇಗಲಿಯನ್ ಪಂಥಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು ಕಾನೂನುಶಾಸ್ತ್ರದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.

ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ ರಾಜಕೀಯ ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.

ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ ತತ್ವಜ್ಞಾನಿಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.

ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್‌ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು ರಷ್ಯಾ ದೇಶದ ಸರ್ಕಾರವನ್ನು ಯೂರೋಪ್ ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ ಚಕ್ರವರ್ತಿಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.

೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.

೧೮೪೩ ನೇ ಇಸವಿ , ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ ವಾತಾವಣವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ ಫ್ರಾನ್ಸ್ ದೇಶದ ರಾಜಧಾನಿಯಾದ ಪ್ಯಾರಿಸ್ ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.

ಮಾರ್ಕ್ಸ್ ಮತ್ತು ಅವರ ಕುಟುಂಬ

ಲೈಫ್ ಇನ್ ಲಂಡನ್[ಬದಲಾಯಿಸಿ]

೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್‌ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್‌ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಆಡಂ ಸ್ಮಿತ್ ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್‌ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್‌ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್‌ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.

ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ [೫] ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್‌ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್‌ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.

ಪ್ಯಾರಿಸ್‌ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್‌ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,[೬] “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.

ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್‌ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ ಕ್ರಾಂತಿಕಾರಿ ಯಾಗಿದ್ದರು ಮತ್ತು ಯುರೋಪ್‌ನಲ್ಲಿ ಸಮಾಜವಾದಿ ಕ್ರಾಂತಿಯು ಸನ್‌ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’‌ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್‌ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು. [೭] ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್‌ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.

ಪ್ರಭಾವಗಳು[ಬದಲಾಯಿಸಿ]

ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.[೮] “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ ಸಮಾಜದ ತತ್ವವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.[೯]

ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು ಸಾಮಾಜಿಕ ಕ್ರಾಂತಿಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.

೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.

೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.

೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.

೪. ಸಾಗಾಣಿಕೆ ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.

೫. ರಾಷ್ಟ್ರದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.

೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.

೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.

೮. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.

ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. ವಿಜ್ಞಾನಿಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.

ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ ಭೌತಿಕವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್‌ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್‌ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು ಜರ್ಮನಿಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ ಫ್ರಾನ್ಸ್ ದೇಶದ ಪ್ಯಾರಿಸ್‌ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್‌ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್‌]]]]]][[]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.

ಕಾರ್ಲ್ ಮಾರ್ಕ್ಸ್ ರವರು ಲಂಡನ್‌ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.[೧೦]

೧೮೮೨ ರ ಕಾರ್ಲ್ ಮಾರ್ಕ್ಸ್


ಮರಣ[ಬದಲಾಯಿಸಿ]

ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು ರಷ್ಯಾ, ಚೀನಾ ದೇಶಗಳೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಡೆದ ರಾಜಕೀಯ ಹಾಗೂ ಆರ್ಥಿಕ ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.[೧೧]

ಬಾಹ್ಯ ಸಂಪರ್ಕ[ಬದಲಾಯಿಸಿ]

ಇವುಗಳನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://www.historyguide.org/intellect/marx.html
  2. "Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.
  3. "ಆರ್ಕೈವ್ ನಕಲು". Archived from the original on 2010-09-01. Retrieved 2015-05-08.
  4. "ಆರ್ಕೈವ್ ನಕಲು". Archived from the original on 2009-11-01. Retrieved 2009-11-01.
  5. "Karl Heinrich Marx – Biography". Egs.edu. Retrieved 9 March 2011.
  6. https://www.marxists.org/archive/marx/works/1845/german-ideology/
  7. https://www.marxists.org/archive/marx/works/1847/communist-league/
  8. https://www.marxists.org/archive/marx/works/1848/communist-manifesto/
  9. https://www.marxists.org/subject/utopian/
  10. "ಆರ್ಕೈವ್ ನಕಲು" (PDF). Archived from the original (PDF) on 2016-03-04. Retrieved 2015-05-08.
  11. https://www.marxists.org/archive/marx/works/1883/death/dersoz1.htm