ವಿಷಯಕ್ಕೆ ಹೋಗು

ಕಲ್ಲುರ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಗಳೂರಿನಲ್ಲಿ ಕಲ್ಲುರ್ಟಿ ನೇಮ

ಕಲ್ಲುರ್ಟಿ ಎಂಬುದು ಕರ್ನಾಟಕದ ದಕ್ಷಿಣ ಭಾಗದ ತುಳುನಾಡಿನಲ್ಲಿ ಭೂತಾರಾಧನೆಯ ಸಮಯದಲ್ಲಿ ಆರಾಧಿಸಲ್ಪಡುವ ಒಂದು ಹೆಣ್ಣು ದೈವ. ಕಲ್ಲುರ್ಟಿಯನ್ನು ಕಾಳಮ್ಮ ಎಂದೂ ಕರೆಯುತ್ತಾರೆ.[೧] ಇವಳ ಸಹೋದರ ಬೀರು ಕಲ್ಕುಡ. ಇವರಿಬ್ಬರೂ ಅವಳಿ ಮಕ್ಕಳು. ಇವರು ಕೆಲ್ಲತ್ತ ಮಾರ್ನಾಡು ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಶಂಭು ಕಲ್ಕುಡ ಹಾಗೂ ತಾಯಿ ಇವರದಿ.

ಹೆಸರಿನ ಉಗಮ[ಬದಲಾಯಿಸಿ]

ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು.

ಹಿನ್ನೆಲೆ[ಬದಲಾಯಿಸಿ]

ಕಲ್ಲುರ್ಟಿಯ ತಾಯಿಯಾದ ಇವರದಿ, ಕಾಳಮ್ಮ ಹಾಗೂ ಬೀರುವಿನ ಗರ್ಭಿಣಿಯಾಗಿರುವಾಗ ತಂದೆ ಶಂಭು ಕಲ್ಕುಡನಿಗೆ ಬೆಳಗೊಳದ ಅರಸರು ಓಲೆಯನ್ನು ಕಳಿಸಿ ಬರಹೇಳುತ್ತಾರೆ.[೨] ಅತ್ಯುತ್ತಮ ಶಿಲ್ಪಿಯಾದ ಕಲ್ಕುಡನಿಗೆ ಗೊಮ್ಮಟೇಶ್ವರನ ವಿಗ್ರಹ ರಚಿಸುವ ಕಾಯ೯ವಹಿಸುತ್ತಾರೆ. ಸಂಬು ಕಲ್ಕುಡನ್ನು ತನಗೆ ವಹಿಸಿದ ಕಾರ್ಯವನ್ನು ಆರಂಭಿಸುತ್ತಾನೆ.[೩]

ಕೆಲವು ಸಮಯದ ನಂತರ ಇರವದಿ ಅವಳಿ ಮಕ್ಕಳಿಗೆ ಜನ್ಮನೀಡುತ್ತಾಳೆ. ಎರಡು ಮಕ್ಕಳೂ ತಮ್ಮ ತಂದೆಯ ಗೈರುಹಾಜರಿಯಲ್ಲಿ ಬೆಳೆಯುತ್ತಾರೆ.

ಕಲ್ಲುರ್ಟಿ ಕಲ್ಕುಡ ಕೋಲ


ಒಂದು ದಿನ, ಬೀರು ಕಲ್ಕುಡ ಇತರ ಮಕ್ಕಳೊಂದಿಗೆ ಆಟವಾಡುತ್ತಿರುವಾಗ, ಅವನ ಒಬ್ಬ ಗೆಳೆಯ ಬೀರು ಕಲ್ಕುಡನೊಂದಿಗೆ ತನ್ನ ತಂದೆಯ ಕುರಿತು ಪ್ರಶ್ನಿಸುತ್ತಾನೆ. ಇದರಿಂದ ಕೋಪಗೊಂಡ ಬೀರು ತನ್ನ ಮನೆಸೇರಿ ತಾಯಿಗೆ ಇದೇ ಪ್ರಶ್ನೆ ಮಾಡುತ್ತಾನೆ. ತಾಯಿಯಿಂದ ತನ್ನ ತಂದೆ ರಾಜ ಕಾರ್ಯ ನಿರ್ವಹಿಸಲು ಬೆಳಗೊಳಕ್ಕೆ ಹೋದವರು ಮರಳಿ ಬರಲಿಲ್ಲವೆಂಬ ವಿಚಾರ ತಿಳಿದು ತಂದೆಯನ್ನು ಹುಡುಕಲು ಹೊರಡುತ್ತಾನೆ.

ಒಂದು ದಿನ ಶಂಭು ಕಲ್ಕುಡ ತನ್ನ ಕಾರ್ಯವನ್ನು ಮುಗಿಸಿ ಕೆರೆಯ ಬಳಿ ವಿಶ್ರಾಂತಿ ಮಾಡುತ್ತಿರುವ ವೇಳೆಗೆ ಬೀರು ಅದೇ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾನೆ. ಬೀರುವನ್ನು ಗಮನಿಸಿದ ಶಂಭು ಅವನ ಬಗ್ಗೆ ವಿಚಾರಿಸುತ್ತಾನೆ. ಬೀರು ಅವರಿಗೆ ನಮಸ್ಕರಿಸಿ "ನಾನು ನನ್ನ ತಂದೆಯನ್ನು ಹುಡುಕುತ್ತ ಹೊರಟಿದ್ದೇನೆ " ಎಂದು ಹೇಳುತ್ತಾನೆ. ಬೀರು ತನ್ನ ತಂದೆ ತಾಯಿಯ ಬಗ್ಗೆ ಹೇಳಿದಾಗ ಅವರಿಬ್ಬರೂ ತಂದೆ-ಮಗನೆಂದು ಅರಿವಾಗುತ್ತದೆ.

ಬೀರು ತನ್ನ ತಂದೆಯೊಂದಿಗೆ ಅವನ ರಚನೆಗಳನ್ನು ನೋಡುವ ಆಸೆ ವ್ಯಕ್ತಪಡಿಸುತ್ತಾನೆ. ಬೆಳಗೊಳದಲ್ಲಿ ರಚಿಸಿದ ಶಿಲ್ಪಾಕೃತಿಯನ್ನು ನೋಡಿದೊಡನೆ ಬೀರು ಆ ಶಿಲ್ಪಾಕೃತಿಗಳಲ್ಲಿರುವ ತಪ್ಪುಗಳನ್ನು ಗುರುತಿಸುತ್ತಾನೆ. ಬೀರುವಿನ ಮಾತುಗಳನ್ನು ಕೇಳಿ ತನ್ನ ತಪ್ಪಿಗೆ ಅರಸರು ತನಗೆ ಮರಣ ದಂಡನೆ ವಿಧಿಸುವರು ಎಂಬ ಭಯದಲ್ಲಿ ಶಂಭು ಕಲ್ಕುಡ ತನ್ನ ಜೀವ ತಾನೇ ತೆಗೆದುಕೊಳುತ್ತಾನೆ.[೪]

ತಂದೆಯ ಸಾವಿನಿಂದ ನೊಂದ ಬೀರು ತಂದೆಯ ಉಪಕರಣಗಳೊಂದಿಗೆ ತುಳುನಾಡಿಗೆ ಹಿಂದಿರುಗುತ್ತಾನೆ. ವರ್ಷಗಳು ಕಳೆಯುತ್ತವೆ, ಬೀರು ತನ್ನ ತಂದೆಯನ್ನು ಮೀರಿ ಕೀರ್ತಿಗಳಿಸುತ್ತಾನೆ. ಬೀರುವಿನ ಸಾಧನೆಗಳ ಬಗ್ಗೆ ಕೇಳಿದ ಕಾರ್ಕಳದ ರಾಜ ಭೈರಾ ಬೀರುವನ್ನು ಆಸ್ಥಾನಕ್ಕೆ ಬರಹೇಳಿ ಅವನಿಗೆ ಸಾವಿರ ಕಂಬದ ಬಸದಿ, ಗೊಮ್ಮಟಸ್ವಾಮಿಯ ವಿಗ್ರಹಗಳನ್ನು ಹಾಗೂ ಇತರ ಶಿಲ್ಪಾಕೃತಿಗಳನ್ನು ನಿಮಿ೯ಸಲು ಆದೇಶಿಸುತ್ತಾನೆ. ರಾಜನ ಆಜ್ಞೆಯಂತೆ ವಹಿಸಿದ ಕಾರ್ಯವನ್ನು ಬೀರು ಕುಶಲವಾಗಿ ಪೂರೈಸುತ್ತಾನೆ. ಆತನ ಕೆಲಸದಿಂದ ಪ್ರಸನ್ನನಾದ ರಾಜ ಭೈರಾ ಅವನ ಬಲಗೈ ಹಾಗೂ ಎಡಗಾಲಿಗೆ ಬೆಳ್ಳಿಯ ಕಡಗವನ್ನು ಬಹುಮಾನವಾಗಿ ಹಾಕುವುದಾಗಿ ಹೇಳುತ್ತಾನೆ.

ಮರುದಿನ ಮರಳಿದ ಬೀರು ಬಹುಮಾನ ತೆಗೆದುಕೊಳ್ಳಲು ಹೋದಾಗ ರಾಜನು " ನನ್ನ ರಾಜ್ಯದಲ್ಲಿ ನೀನು ಮಾಡಿದ ಕೆಲಸವನ್ನು ಇನ್ನೊಂದು ರಾಜ್ಯದಲ್ಲಿ ಮಾಡಲು ನಾನು ಬಿಡಲಾರೆ" ಎಂದು ಹೇಳಿ ಚಾಚಿದ್ದ ಅವನ ಬಲಗೈ ಹಾಗೂ ಎಡಗಾಲನ್ನು ಕಡಿಸುತ್ತಾನೆ. ಈ ರೀತಿ ಅಪಮಾನಗೊಂಡ ಬೀರು ತನಗೆ ವಂಚನೆಯಾದ ರಾಜ್ಯದ ನೀರನ್ನು ಸಹ ಮುಟ್ಟಲಾರೆ ಎಂದು ಅಲ್ಲಿಂದ ಹೊರಟು ಬಿಡುತ್ತಾನೆ.

ನಂತರ ವೇಣೂರು ತಲುಪಿದ ಕಲ್ಕುಡ ತನ್ನ ಒಂದು ಕೈ ಹಾಗೂ ಕಾಲಿನಲ್ಲೇ ಗೊಮ್ಮಟನ ವಿಗ್ರಹವನ್ನು ಮಾಡುತ್ತಾನೆ.

ವರ್ಷ ಕಳೆದರೂ ಸಹೋದರ ಹಿಂತಿರುಗಿ ಬರದಿದ್ದದ್ದನ್ನು ಕಂಡು ಕಾಳಮ್ಮ ಚಿಂತೆಗೀಡಾಗುತ್ತಾಳೆ. ತಾನೇ ಅವನನ್ನು ಹುಡುಕಲು ಹೊರಡುತ್ತಾಳೆ. ಒಂದು ಚೀಲದಲ್ಲಿ ತನಗೆ ಹಾಗೂ ಬೀರುವಿಗೆ ಆಹಾರವನ್ನು ತೆಗೆದುಕೊಂಡಿರುತ್ತಾಳೆ. ಕೊನೆಗೆ ಅವಳಿಗೆ ಕೈ ಕಾಲು ಕಳೆದುಕೊಂಡು ನರಳಾಡುವ ಸ್ಥಿತಿಯಲ್ಲಿದ್ದ ಬೀರು ಸಿಕ್ಕುತ್ತಾನೆ. ಅವನನ್ನು ಕಂಡು ಖೇದಗೊಂಡ ಕಾಳಮ್ಮನಿಗೆ ಬೀರು ತನ್ನೆಲ್ಲಾ ಕಥೆಯನ್ನು ಹೇಳುತ್ತಾನೆ. ಇಬ್ಬರೂ ರಾಜ ಭೈರನ ಮೇಲೆ ಸೇಡು ತೀರಿಸಿಕೊಳ್ಳಲು ಸಿರ್ಧರಿಸುತ್ತಾರೆ.

ಬೀರು ಹಾಗೂ ಕಾಳಮ್ಮ ಅಲ್ಲೇ ಇದ್ದ ನದಿಯಲ್ಲಿ ಸ್ನಾನ ಮಾಡಿ, ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುತ್ತಾರೆ. ನಂತರ ಅಲ್ಲಿದ್ದ ಬಾವಿಗೆ ಹಾರಿ ಪ್ರಾಣ ಬಿಡುತ್ತಾರೆ. ಅವರು ಅಲ್ಲಿನ ದೇವರ ಕೃಪೆಯಿಂದ ಬಾವಿಯಿಂದ ಮಾಯವಾಗಿ ದೈವಿಕ ಶಕ್ತಿ ಪಡೆಯುತ್ತಾರೆ. ನಂತರ ರಾಜ ಭೈರನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿ ಅವನನ್ನು ರಾಜ್ಯ ವಂಚಿತನನ್ನಾಗಿ ಮಾಡುತ್ತಾರೆ. ಕೊನೆಗೆ ರಾಜ ಭೈರ ಅವರಿಬ್ಬರಲ್ಲಿ ಕ್ಷಮೆ ಕೇಳಿ, ಅವರನ್ನು ನಂಬುವುದಾಗಿ ಹೇಳುತ್ತಾನೆ. ಆ ಇಬ್ಬರೇ ಮುಂದೆ ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳಾಗುತ್ತಾರೆ.[೫]

ಮೋಸ[ಬದಲಾಯಿಸಿ]

ವರ್ಷ ಕಳೆದಂತೆ ರಾಜ ಭೈರನಿಗೆ ಕಲ್ಲುರ್ಟಿ ಹಾಗೂ ಕಲ್ಕುಡರ ಆರಾಧನೆಯಲ್ಲಿ ಅನಾಸಕ್ತಿ ಬೆಳೆಯುತ್ತದೆ. ಅವನು ಅವರಿಗೆ ನೀಡುವ ಆಹಾರದಲ್ಲಿ ವಿಷ ಬೆರೆಸಲು ನಿರ್ಧರಿಸುತ್ತಾನೆ. ಆದರೆ ಈ ವಿಷಯ ದೈವಗಳಿಗೆ ತಿಳಿದು, ಅವು ರಾಜ ಭೈರನ ಕುಟುಂಬದವರೇ ಆ ಆಹಾರವನ್ನು ತಿನ್ನುವಂತೆ ಮಾಡುತ್ತವೆ. ರಾಜ ಭೈರವ ಪುನಃ ದೈವಗಳಲ್ಲಿ ಕ್ಷಮೆ ಕೇಳಿ ತನ್ನ ಕುಟುಂಬವನ್ನು ಉಳಿಸಿಕೊಡುವಂತೆ ಕೇಳಿಕೊಳ್ಳುತ್ತಾನೆ. ನಂತರ ದೈವಗಳು ಅವನಲ್ಲಿ ಈ ತಪ್ಪು ಪನರಾವರ್ತನೆಯಾಗದಂತೆ ಭಾಷೆ ತೆಗುದುಕೊಂಡು ಅವನನ್ನು ಕ್ಷಮಿಸುತ್ತವೆ.

ಈ ದೃಶ್ಯವನ್ನು ಇಂದೂ ಕೋಲದ ಸಮಯದಲ್ಲಿ ತೋರಿಸಲಾಗುತ್ತದೆ. ಕಲ್ಲುರ್ಟಿಗೆ ಆಹಾರವನ್ನು ನೀಡುವಾಗ ಅದನ್ನು ಬೇರೆ ೩-೪ ಮಕ್ಕಳಿಗೆ ತಿನ್ನಿಸಿ ಅದರಲ್ಲಿ ಬೇರೆ ಏನೂ ಮಿಶ್ರಿತವಾಗಿಲ್ಲವೆಂದು ಖಚಿತಪಡಿಸಿಕೊಂಡು ನಂತರ ದೈವಕ್ಕೆ ನೀಡಲಾಗುತ್ತದೆ.

ಪನೋಲಿಬೈಲು ಕಲ್ಲುರ್ಟಿ[ಬದಲಾಯಿಸಿ]

ಕಲ್ಲುರ್ಟಿ ದೈವಸ್ಥಾನಕ್ಕೆ ಬಂಟ್ವಾಳ ತಾಲೂಕಿನ ಪಣೋಲಿಬೈಲು ಕ್ಷೇತ್ರ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ.[೬] ಇಲ್ಲಿ ದಿನನಿತ್ಯ ಸಾವಿರಾರು ಭಕ್ತರು ಹರಕೆ ಸಲ್ಲಿಸಲೆಂದೇ ಬರುತ್ತಾರೆ. ಕಲ್ಲುರ್ಟಿ ದೈವಕ್ಕೆ ‘ಅಗೇಲು ಸೇವೆ’ ಬಲುಪ್ರಿಯ.

ದೈವಗಳ ನೈವೇದ್ಯ

[೭] ಒಂದು ಮೊಟ್ಟೆ ಇಡದ ಹೆಣ್ಣು ಕೋಳಿ, ೧ ಕೆಜಿ ಕುಚ್ಚಲಕ್ಕಿ, ೩ ಬಾಲೆ ಎಳೆ, ೨ ತೆಂಗಿನ ಕಾಯಿ, ಕಾಡ ಗುಡ್ಡೆಯಲ್ಲಿ ಸಿಗುವ ಕೆಂಪು (ಕೇಪುಳ ಹೂ) ಇದು ಕಲ್ಲುರ್ಟಿ ದೈವದ ಅಗೇಲು ಸಾಮಾನಿನ ಪಟ್ಟಿ. ಪಣೋಲಿಬೈಲು ಕಲ್ಲುರ್ಟಿ ದೈವದ ಕಾರ್ಣಿಕದ ಕ್ಷೇತ್ರ.[೮][೯] ಇಲ್ಲಿ ವಾರದಲ್ಲಿ ೩ ದಿನ (ಭಾನುವಾರ, ಮಂಗಳವಾರ ಮತ್ತು ಶುಕ್ರವಾರ) ಅಗೇಲು ಸೇವೆ ನಡೆಯುತ್ತದೆ. ಪ್ರತಿನಿತ್ಯ ೩ರಿಂದ ೫ ಸಾವಿರ ತನಕ ಅಗೇಲು ಸೇವೆ ಭಕ್ತರಿಂದ ಹರಕೆ ರೂಪದಲ್ಲಿ ಬರುತ್ತದೆ.

ಬಣ್ಣ[ಬದಲಾಯಿಸಿ]

ಕಲ್ಕುಡ ದೈವ

"ಕಪ್ಪು ಕಲ್ಲನ್ನು ಹೊಡೆದಾಗ ಅದರ ಮೇಲೆ ಬಿಳಿ ಬಣ್ಣ ಉಳಿಯುತ್ತದೆ" ಎಂಬ ಪರಿಕಲ್ಪನೆಯನ್ನು ಕೋಲದಲ್ಲಿ ಕಲ್ಲುರ್ಟಿ ಹಾಗೂ ಕಲ್ಕುಡದ ಮುಖಬಣ್ಣದಲ್ಲಿ ಕಾಣಬಹುದು. ದೈವಗಳು ಕಪ್ಪು ಬಣ್ಣವನ್ನು ಬಿಳಿ ಚುಕ್ಕೆಯೊಂದಿಗೆ ಹಾಕಿರುತ್ತವೆ. ಆದರೆ, ಸಮಯದ ಬದಲಾವಣೆ ಮತ್ತು ಇತರ ರೂಪಗಳ ಒಳಗೊಳ್ಳುವಿಕೆಯಿಂದ, ಕಲ್ಲುರ್ಟಿಯ ಮುಖದ ಬಣ್ಣವನ್ನು ಗುಲಾಬಿ ಮತ್ತು ಕಲ್ಕುಡನ ಮುಖದ ಬಣ್ಣವನ್ನು ನೀಲಿ ಬಣ್ಣದಿಂದ ಇತ್ತೀಚಿನ ದಿನಗಳಲ್ಲಿ ಚಿತ್ರಿಸಲಾಗುತ್ತದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]