ಕರಿಬಸವಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಿಬಸವಯ್ಯ
ಜನನ1959
ನೆಲಮಂಗಲದ ಕೊಡಿಗೇಹಳ್ಳಿ
ಮರಣ3 ಫೆಬ್ರವರಿ ೨೦೧೨ (ವಯಸ್ಸು ೫೨–೫೩)
ಬೆಂಗಳೂರು
ಸಂಗಾತಿಶಾಂತ
ಪ್ರಮುಖ ಕಾರ್ಯಗಳುKotreshi Kanasu, Janumada Jodi, Galate Aliyandru, Mungarina Minchu, Yaarige Salute Sambala

ಕನ್ನಡ ಸಿನೆಮ,ಕಿರುತೆರೆ ಮತ್ತು ರಂಗಭೂಮಿ ಕಲಾವಿದರು,ಕರಿಬಸವಯ್ಯ ಹುಟ್ಟಿ ಬೆಳೆದದ್ದು ಬೆಂಗಳೂರಿಗೆ ಸಮೀಪವೇ ಇರುವ ನೆಲಮಂಗಲದ ಕೊಡಿಗೇಹಳ್ಳಿ ಎಂಬ ಗ್ರಾಮದಲ್ಲಿ. ಓದಿದ್ದು ಸಿದ್ಧಗಂಗೆಯಲ್ಲಿ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲ ವರ್ಷ ಅವರು ಸೇವೆ ಸಲ್ಲಿಸಿದ್ದರು.ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಕೊಟ್ರೇಶಿ ಕನಸು ಚಿತ್ರಕ್ಕೆ ರಾಜ್ಯಪ್ರಶಸ್ತಿಯೂ ಅವರ ಮುಡಿಗೇರಿತ್ತು. ಒಬ್ಬ ಮಗಳು ರಾಧಾ 2009ರಲ್ಲಿ ಆತ್ಮಹತ್ಯೆಗೆ ಶರಣಾದ ಬಳಿಕ ಕರಿಬಸವಯ್ಯ ಮಾನಸಿಕವಾಗಿ ಕುಗ್ಗಿದ್ದರು.

ತೆರೆಯ ಮೇಲೆ ನೋಡುಗರನ್ನು ನಕ್ಕು ನಲಿಸುತ್ತಿದ್ದ ಕರಿಬಸವಯ್ಯ ಹರಿಕಥೆ ಮಾಡಲು ನಿಂತರೆಂದರೆ ನೆರೆದಿರುವವರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ದುಬಿಡುತ್ತಿದ್ದರು. ಅಂಥ ಅಸಾಧಾರಣ ಪಾಂಡಿತ್ಯ ಅವರದ್ದು.

ರಂಗ ಭೂಮಿ[ಬದಲಾಯಿಸಿ]

1979ರ ವೇಳೆಗೆ ಕರಿಬಸವಯ್ಯ ತಮ್ಮ ಸ್ನೇಹಿತ ಹಾಗೂ ರಂಗ ನಿರ್ದೇಶಕ ಕೆ.ಎಸ್.ಡಿ.ಎಲ್.ಚಂದ್ರು ಮುಖಾಂತರ ‘ರೂಪಾಂತರ’ ಎಂಬ ರಂಗತಂಡವನ್ನು ಸೇರಿದರು. ಒಮ್ಮೆ ಕುಂ.ವೀರಭದ್ರಪ್ಪನವರ ಸಣ್ಣಕಥೆಗಳನ್ನು ಆಧರಿಸಿ ಅಮರ್ ನಿರ್ದೇಶಿಸಿದ್ದ ‘ಕತ್ತಲನು ಬೆಳಕಿನ ತ್ರಿಶೂಲ ಹಿಡಿದ ಕಥೆ’ ಎಂಬ ರಂಗಪ್ರಯೋಗ ನಡೆದಿತ್ತು. ಆಗ ತಂಡದ ನಟನೊಬ್ಬ ಕತ್ತಲನ ಪಾತ್ರವನ್ನು ಒಲ್ಲೆ ಎಂದಾಗ ಆ ಅವಕಾಶ ಕರಿಬಸವಯ್ಯರ ಪಾಲಾಯಿತು. ನಾಟಕದ ಮೊದಲ ಪ್ರದರ್ಶನದಲ್ಲೇ ಕರಿಬಸವಯ್ಯನವರ ಖದರ್ರಿಗೆ ಇಡೀ ರಂಗಮಂದಿರ ಬೆಚ್ಚಿಬಿದ್ದಿತ್ತು. ಆ ನಾಟಕದ ಮೂಲಕ ಕರಿಬಸವಯ್ಯ ತಾನೊಬ್ಬ ಪರಿಪೂರ್ಣ ನಟ ಎಂಬುದನ್ನು ಇಡೀ ಸಾಂಸ್ಕೃತಿಕ ಲೋಕಕ್ಕೆ ಜಾಹೀರು ಮಾಡಿದ್ದರು.

ವ್ಯವಸ್ಥೆಯ ಲೋಪಗಳ ವಿರುದ್ಧ ಸಿಡಿದೆದ್ದು ತ್ರಿಶೂಲ ಹಿಡಿಯುವ ‘ಕತ್ತಲ’ನ ಪಾತ್ರ ಕರಿಬಸವಯ್ಯರ ಬದುಕಿಗೆ ದೊರೆತ ಮೊಟ್ಟಮೊದಲ ಟರ್ನಿಂಗ್ ಪಾಯಿಂಟ್. ನಂತರ ಪಿ. ಲಂಕೇಶರ ‘ಗುಣಮುಖ’ ದ ಅಲಾವಿಖಾನ್, ‘ಮುಸ್ಸಂಜೆ ಕಥಾಪ್ರಸಂಗ’ದ ಬೂಸಿ ಬಸ್ಯ, ‘ತಲೆದಂಡ’ದ ಬಸವಣ್ಣನ ಪಾತ್ರ ಹಾಗೂ ತೇಜಸ್ವಿಯವರ ‘ಕರ್ವಾಲೋ’ದ ಬಿರಿಯಾನಿ ಕರಿಯನ ಪಾತ್ರಗಳು ಕರಿಬಸವಯ್ಯನವರಿಗೋಸ್ಕರವೇ ಸೃಷ್ಟಿಸಿದಂತಿದ್ದವು.

ಕಿರುತೆರೆ[ಬದಲಾಯಿಸಿ]

ಕರಿಬಸವಯ್ಯ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸಿದ್ದು ‘ದೊಡ್ಡಮನೆ’ ಧಾರಾವಾಹಿಯಲ್ಲಿ. ಆದರೆ ಕಿರುತೆರೆಯಲ್ಲಿ ಕರಿಬಸವಯ್ಯನವರಿಗೊಂದು ಶಾಶ್ವತ ಸ್ಥಾನ ಕಲ್ಪಿಸಿದ್ದು ‘ಶೋಭಾ’ ಎಂಬ ಧಾರಾವಾಹಿ. ಎನ್. ಎಸ್. ಶಂಕರ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಮಾಸ್ಟರ್ ಮಂಜುನಾಥ್, ಮೈನಾ ಚಂದ್ರು ಮುಂತಾದವರು ನಟಿಸಿದ್ದರು. ಕಾಲೇಜಿನ ಹುಡುಗರು ಒಮ್ಮೆ ಟ್ರಕ್ಕಿಂಗ್ ಹೊರಟಾಗ ಅವರೊಂದಿಗೆ ಹೊರಡುವ ಸಹಾಯಕನ ಪಾತ್ರದಲ್ಲಿ ಕರಿಬಸವಯ್ಯ ನಟಿಸಿದ್ದರು.


ಚಿತ್ರಗಳಲ್ಲಿ[ಬದಲಾಯಿಸಿ]

ಕರಿಬಸವಯ್ಯನವರಿಗೆ ಹಿರಿತೆರೆಯಲ್ಲಿ ಅವಕಾಶ ಕೊಟ್ಟವರು ನಾಗತಿಹಳ್ಳಿ ಚಂದ್ರಶೇಖರ್. ತಮ್ಮ ನಿರ್ದೇಶನದ ಮೊದಲ ಚಿತ್ರ ಉಂಡೂ ಹೋದ ಕೊಂಡೂ ಹೋದ ಚಿತ್ರದಲ್ಲಿ ಹಾಲು, ಬೆಣ್ಣೆಗೆ ಆಸೆಪಟ್ಟು ಕೌ ಇನ್ಸ್‌ಪೆಕ್ಟರ್‌ನಿಂದ ಮೋಸ ಹೋಗುವ ಕರಿಮಳೆ ಪಾತ್ರವನ್ನು ನಾಗತಿಹಳ್ಳಿ ನೀಡಿದ್ದರು. ನಂತರ ‘ಕೊಟ್ರೇಶಿ ಕನಸು’ ಚಿತ್ರದಲ್ಲಿ ತನ್ನ ಮಗನನ್ನು ವಿದ್ಯಾವಂತನನ್ನಾಗಿ ಮಾಡಲು ಹೆಣಗಾಡುವ ತಂದೆ ದಿಬ್ಬನ ಪಾತ್ರದಲ್ಲಿ ಕರಿಬಸವಯ್ಯ ಅದೆಷ್ಟು ಸಹಜವಾಗಿ ನಟಿಸಿದ್ದರೆಂದರೆ, ಅವರ ನಟನೆಗೆ ರಾಜ್ಯ ಪ್ರಶಸ್ತಿಯೂ ದೊರಕಿತು. ನಂತರ ಚಿತ್ರರಂಗದಲ್ಲಿ ಭದ್ರವಾಗಿ ಕಾಲೂರಿದ ಆತ ಎಂದೂ ಹಿಂತಿರುಗಿ ನೋಡುವ ಪ್ರಮೇಯವೇ ಒದಗಿಬರಲಿಲ್ಲ. ರೂಪವಂತ ಹುಡುಗಿಯನ್ನು ಮದುವೆಯಾಗಲು ಇಚ್ಛಿಸುವ ಜನುಮದ ಜೋಡಿಯ ಕುಡುಕ ಅಂದಾನಿ ಪಾತ್ರದ ಮೂಲಕ ಎಲ್ಲ ಬಗೆಯ ಚಿತ್ರಾಸಕ್ತರನ್ನು ಕರಿಬಸವಯ್ಯ ತನ್ನತ್ತ ಸೆಳೆದರು

ಅಬಿನಯದ ಇತರೆ ಚಿತ್ರಗಳು ತಾಯಿ,ಉಲ್ಟಾಪಲ್ಟಾ,ಪರಿಚಯ,ಯಾರಿಗೆ ಸಾಲತ್ತೆ ಸಂಬಳ,ಜನುಮದ ಜೋಡಿ,ಹೋಳಿ,ನೂರೂ ಜನ್ಮಕು,ಮುಂಗಾರಿನ ಮಿಂಚು,ಕೊಟ್ರೇಶಿ ಕನಸು,ಭೂಮಿ ತಾಯಿಯ ಚೊಚ್ಚಲ ಮಗ,ಅರಮನೆ ,ಸಂಗೊಳ್ಳಿ ರಾಯಣ್ಣ, ಬ್ರೇಕಿಂಗ್ ನ್ಯೂಸ್,ನೆನಪಿನಂಗಳ,ಮಂಜುನಾಥ ಬಿಎಎಲ್‌ಎಲ್‌ಬಿ

ಮರಣ[ಬದಲಾಯಿಸಿ]

ಫೆಬ್ರವರಿ 3, 2012ನೇ ದಿನಾಂಕದಂದು ಕನ್ನಡ ಚಿತ್ರರಂಗ, ದೂರದರ್ಶನ ಮತ್ತು ರಂಗಭೂಮಿ ಕಲಾವಿದ ಕರಿಬಸವಯ್ಯ ಅವರು ರಸ್ತೆ ಅಪಘಾತದಿಂದ ಈ ಲೋಕವನ್ನು ಅಗಲಿದರು.