ವಿಷಯಕ್ಕೆ ಹೋಗು

ಕನ್ನಡ ಅಭಿವೃದ್ಧಿ ಪ್ರಾಧಿಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಶಾಸನಬದ್ಧ ಅಧಿಕಾರಗಳನ್ನು ಹೊಂದಿರುವ ಪ್ರಾಧಿಕಾರವಾಗಿದೆ. ಕರ್ನಾಟಕದಲ್ಲಿ ಅಧಿಕೃತ ಆಡಳಿತ ಭಾಷೆಯಾಗಿ ಕನ್ನಡ ಅಳವಡಿಕೆ ಮತ್ತು ಬಳಕೆಯನ್ನು ಇದು ಪರಿಶೀಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಶಿಫಾರಸ್ಸು ಮಾಡುತ್ತದೆ. ಕನ್ನಡ ಭಾಷೆಯ ಪ್ರೋತ್ಸಾಹ ಹಾಗೂ ಬೆಳವಣಿಯ ಕಾರ್ಯಚಟುವಟಿಕೆಗಳನ್ನು ನಡೆಸುವ ಕಾರ್ಯವ್ಯಾಪ್ತಿ ಹೊಂದಿದೆ. 1 ನವಂಬರ್ 1995 ರಂದು ಪ್ರಾಧಿಕಾರ ರಚನೆಯಾಯಿತು.

ಕನ್ನಡ ಅಭಿವೃದ್ಧಿಗೆ ಪ್ರಾಧಿಕಾರ[ಬದಲಾಯಿಸಿ]

 • ಭಾಷಾವಾರು ಪ್ರಾಂತ್ಯಗಳ ರಚನೆಯ ಹಲವು ಉದ್ದೇಶಗಳಲ್ಲಿ ಆಯಾಪ್ರದೇಶದಲ್ಲಿ ಪ್ರಧಾನವಾಗಿ ಬಳಕೆಯಲ್ಲಿರುವ ಭಾಷೆಯಲ್ಲಿ ಆಡಳಿತವನ್ನು ನಡೆಸುವುದು ಒಂದಾಗಿರುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ವಿಚಾರದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಹಿಂದೆ ಇದ್ದ ಸ್ಥಿತಿಯೇ ಆನಂತರದ ವರ್ಷಗಳಲ್ಲೂ ಮುಂದುವರೆಯಿತು. ಆಡಳಿತ ಎಂದರೆ ಇಂಗ್ಲಿಷ್ ಭಾಷೆಯಲ್ಲಿನ ಆಡಳಿತವೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು.
 • ಇದನ್ನು ತಪ್ಪಿಸುವ ಪ್ರಯತ್ನವಾಗಿ ಸರ್ಕಾರವು 'ಕರ್ನಾಟಕ ರಾಜ್ಯಭಾಷಾ ಅಧಿನಿಯಮ 1963' ಎಂಬ ಒಂದು ಕಾಯಿದೆಯನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡವು ರಾಜ್ಯದ ಅಧಿಕೃತ ಆಡಳಿತ ಭಾಷೆಯೆಂದು ಘೋಷಿಸಿತು. ಆಡಳಿತ ಭಾಷೆ ಯಾಗಿ ಕನ್ನಡವನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ 1963ರಿಂದಲೇ ತನ್ನ ನೂರಾರು ಆದೇಶಗಳು, ಸುತ್ತೋಲೆಗಳು ಹಾಗೂ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಪ್ರಯತ್ನಶೀಲವಾಯಿತು.
 • ಕನ್ನಡ ಆಡಳಿತ ಭಾಷಾ ಇತಿಹಾಸದಲ್ಲಿ ಸಾಧನೆಯ ದೃಷ್ಟಿಯಿಂದ ಆಡಳಿತ ಭಾಷೆಯಾಗಿ ಕನ್ನಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂಬ ಆಶಯದಿಂದ ಸರ್ಕಾರವು 10-02-1983ರಲ್ಲಿ ಶ್ರೀ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ 'ಕನ್ನಡ ಭಾಷಾ ಕಾವಲು ಸಮಿತಿ'ಯನ್ನು ಸ್ಥಾಪಿಸಿತು.
 • ಸಮಗ್ರ ಆಡಳಿತದಲ್ಲಿ ಸಂಪೂರ್ಣ ಕನ್ನಡವೆಂಬ ದಿಟ್ಟ ನಿಲುವನ್ನು ಕಾರ್ಯರೂಪಕ್ಕೆ ತರಲು ಪುನಪರಿವರ್ತನೆಯ ಜೊತೆಗೆ ಗಟ್ಟಿ ನಿಲುವಿನ ಬಿಗಿ ಕ್ರಮಗಳೂ ಅತ್ಯವಶ್ಯವೆಂಬುದನ್ನು ಪೂರ್ವಾನುಭವದಿಂದ ಮನಗಂಡ ಸರ್ಕಾರವು ಸರ್ಕಾರ ಹೊರಡಿಸಿರುವ ಆದೇಶಗಳು, ಸುತ್ತೋಲೆಗಳು ಹಾಗೂ ಕನ್ನಡ ಅನುಷ್ಠಾನ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಕನ್ನಡ ಕಾವಲು ಸಮಿತಿಯನ್ನು ಅಕ್ಟೋಬರ,1,1994ರಲ್ಲಿ 'ಕನ್ನಡ ಅಭಿವೃದ್ಧಿ ಪ್ರಾಧಿಕಾರ' ಎಂದು ಮರುನಾಮಕರಣಗೊಳಿಸಿತು.
 • ಈ ಅಧಿನಿಯಮದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಪ್ರಾಧಿಕಾರಕ್ಕೆ ಸ್ವಾಯತ್ತತೆ ಮತ್ತು ಶಾಸನಬದ್ಧ ಸ್ಥಾನಮಾನಗಳನ್ನು ನೀಡಲಾಗಿದೆ. ಈ ಸಚಿವಾಲಯದ ಕಾರ್ಯದರ್ಶಿಯು ಸರ್ಕಾರದ ಯಾವ ಕಚೇರಿಗಾದರೂ ಅನಿರೀಕ್ಷಿತವಾಗಿ ಭೇಟಿ ಕೊಟ್ಟು, ಯಾವ ಕಡತವನ್ನಾದರೂ ತೆಗದು ಅದರ ಭಾಷೆಯನ್ನು ಗುರುತಿಸಿ,ಕನ್ನಡದ ಬಳಕೆ ಆಗುತ್ತಿದೆಯೇ ಎನ್ನುವುದನ್ನು ನೋಡಬಹುದು ಎಂಬ ಆದೇಶವನ್ನು ಕೂಡಾ ಸರ್ಕಾರ ಹೊರಡಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳು[ಬದಲಾಯಿಸಿ]

 • ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುವುದು ಎಲ್ಲರ ಜವಾಬ್ದಾರಿ. ಸರ್ಕಾರದ ನೀತಿಯನ್ನು ಒಮ್ಮನಸ್ಸಿನಿಂದ ಕಾರ್ಯರೂಪಕ್ಕೆ ಇಳಿಸುವ ಶ್ರದ್ಧೆ ನಮ್ಮ ಅಧಿಕಾರಿಗಳಲ್ಲಿ, ನೌಕರರಲ್ಲಿ ಅಂಕುರವಾಗಬೇಕು. ಒಮ್ಮೆ ಕನ್ನಡ ಅನುಷ್ಠಾನ ಕಾರ್ಯ ಮುಗಿಯಿತೆಂದರೆ ಮುಂದೆ ತಾನಾಗಿಯೇ ಅದು ಪುಷ್ಟಿಗೊಳ್ಳುತ್ತಾ ಹೋಗುತ್ತದೆ. ರಾಜ್ಯಾಡಳಿತದಲ್ಲಿ ರಾಜ್ಯಭಾಷೆಗೆ ಮಾತ್ರ ಅಗ್ರಸ್ಥಾನವಿರಬೇಕು.
 • ಈ ಹಿನ್ನೆಲೆಯಲ್ಲಿ ಸಮಗ್ರ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನಕ್ಕೆ ಅಗತ್ಯವಿರುವ ವಿವಿಧ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ಪ್ರಾಧಿಕಾರವು ನೀಡುತ್ತಿದೆ. ಈ ಸಲಹೆಗಳನ್ನು ಅನುಸರಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದಲ್ಲೂ ಆಡಳಿತದಲ್ಲಿ ಕನ್ನಡ ಅನುಷ್ಠಾನ, ಸ್ಥಳೀಯ ಕನ್ನಡಿಗರಿಗೆ ಆದ್ಯತೆಯಲ್ಲಿ ಉದ್ಯೋಗ ದೊರಕಿಸಿಕೊಡುವ ಡಾ.ಸರೋಜಿನಿ ಮಹಿಷಿ ವರದಿಯ ಅನುಷ್ಠಾನ, ಗಡಿ ಸಮಸ್ಯೆಗಳಿಗೆ ಪರಿಹಾರ, ಗಡಿ ಭಾಗದಲ್ಲಿ ಭಾಷಾ ಸಾಮರಸ್ಯಕ್ಕೆ ಒತ್ತು ನೀಡುವ ದಿಟ್ಟ ನಿಲುವು ತಳೆದಿದೆ.
 • ಕನ್ನಡದ ಬೆಳವಣಿಗೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಾರ್ಯಗಾರ, ನ್ಯಾಯಾಂಗದಲ್ಲಿ ಕನ್ನಡ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾಧ್ಯಮ ಪ್ರಶಸ್ತಿ, ಹೊರನಾಡ ಕನ್ನಡಿಗರ ಸಮಾವೇಶ, ಭಾಷಾ ಭಾವೈಕ್ಯ ಸಮಾವೇಶ, ಕವಿ ಗೋಷ್ಠಿ, ಕನ್ನಡ ನುಡಿಹಬ್ಬ, ಕನ್ನಡ ಜಾಗೃತಿ ಜಾಥಾ, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ, ಶೈಕ್ಷಣಿಕವಾಗಿ ಹಿಂದುಳಿದ ಹೊರರಾಜ್ಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವುದೇ ಅಲ್ಲದೆ ಕನ್ನಡ ಭವನ ನಿರ್ಮಾಣ ಮುಂತಾದ ಹಲವು ಹತ್ತು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿ ಕನ್ನಡವನ್ನು ಜನಸಮುದಾಯದ ಸಮೀಪಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಹಾಗೂ ಬದ್ಧತೆಯ ಕೆಲಸ ಮಾಡುತ್ತಾ ಬಂದಿದೆ.

ಆಡಳಿತದಲ್ಲಿ ಕನ್ನಡ[ಬದಲಾಯಿಸಿ]

ಕನ್ನಡವನ್ನು ಆಡಳಿತ ಭಾಷೆಯೆಂದು ಸರ್ಕಾರ ಘೋಷಿಸಿದೆಯಾದರೂ ಅನುಷ್ಠಾನಕ್ಕೆ ತರುವಲ್ಲಿ ಬಹಳಷ್ಟು ತೊಡಕುಗಳಿದ್ದು ಈ ತೊಡಕುಗಳನ್ನು ನಿವಾರಿಸಿ, ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುವಂತೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಲ್ಲಿ ಕನ್ನಡ ಬಳಸುವವರ ಸಂಖ್ಯೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಆಡಳಿತ ತರಬೇತಿ ಸಂಸ್ಥೆಗಳಲ್ಲಿ ಆಡಳಿತ ಕನ್ನಡ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಹಾಗೂ ಜಿಲ್ಲಾ ಮಟ್ಟದಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರೀಶೀಲನೆ ಮತ್ತು ಕನ್ನಡ ಭಾಷೆ ಬಳಸದ 305 ಅಧಿಕಾರಿಗಳಿಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಮಾಧ್ಯಮ ಪ್ರಶಸ್ತಿ[ಬದಲಾಯಿಸಿ]

 • ರಾಜ್ಯದಲ್ಲಿ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಪ್ರೋತ್ಸಾಹಿಸಿ, ಆತ್ಮವಿಶ್ವಾಸ ತುಂಬುವ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಳೆದ ಐದು ವರ್ಷಗಳಿಂದ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
 • ಅಲ್ಲದೇ ಹೊರರಾಜ್ಯದ ಗಡಿಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಮೊದಲನೇ ಬಹುಮಾನ 8,000/- ಎರಡನೇ ಬಹುಮಾನ 7,000/-, ಮೂರನೇ ಬಹುಮಾನವಾಗಿ 6,000/- ರೂಗಳ ನಗದು ಪುರಸ್ಕಾರ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಕೈಗಡಿಯಾರ, ಬ್ಯಾಗು, ಕನ್ನಡ-ಕನ್ನಡ ನಿಂಟು, ಕನ್ನಡ-ಇಂಗ್ಲಿಷ್ ನಿಘಂಟು ಹಾಗೂ ಪೆನ್ ಸೆಟ್ನ್ನು ನೀಡಿ ಗೌರವಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 5,146 ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಗಿದೆ.

ಹೊರರಾಜ್ಯದ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು[ಬದಲಾಯಿಸಿ]

 • ಕನ್ನಡ ಭಾಷೆಯ ಬಳಕೆಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿರುವ ಪ್ರಾಧಿಕಾರ ಕಳೆದ ನಾಲ್ಕು ವರ್ಷಗಳಲ್ಲಿ ಹೊರರಾಜ್ಯಗಳಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಹೊರರಾಜ್ಯದಲ್ಲಿ ಕನ್ನಡವನ್ನು ಉಳಿಸಿ-ಬೆಳೆಸುವ ಪ್ರಯತ್ನ ನಡೆದಿದೆ.
 • ಹೊರರಾಜ್ಯದ ಏಳು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ಒಬ್ಬ ವಿದ್ಯಾರ್ಥಿಗೆ 2000/- ರೂಗಳಂತೆ ವಾರ್ಷಿಕವಾಗಿ 20,000/-ರೂಗಳ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ 353 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತವನ್ನು ನೀಡಿ ಪ್ರೋತ್ಸಾಹಿಸಲಾಗಿದೆ.

ನ್ಯಾಯಾಂಗದಲ್ಲಿ ಕನ್ನಡ[ಬದಲಾಯಿಸಿ]

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎನ್ನುವುದು ಸರ್ಕಾರದ ನಿಲುವು ಕೂಡ ಆಗಿದೆ. ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿಯೇ ನ್ಯಾಯಾಲಯಗಳಲ್ಲಿ ದಿನನಿತ್ಯದ ಪತ್ರ ವ್ಯವಹಾರ, ವಾದ-ಪ್ರತಿವಾದ, ತೀರ್ಪು ಹೊರಬರುವಂತೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪುನೀಡಿದ ನ್ಯಾಯಮೂರ್ತಿಗಳನ್ನು ಪ್ರಾಧಿಕಾರ ಕಳೆದ ನಾಲ್ಕು ವರ್ಷಗಳಲ್ಲಿ 240 ನ್ಯಾಯಾಧೀಶರುಗಳಿಗೆ. ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಶಾಲು, ಫಲತಾಂಬೂಲ, ನಗದು ಪ್ರೋತ್ಸಾಹಧನ ನೀಡಿ ಗೌರವಿಸಿ, ಪುರಸ್ಕರಿಸಲಾಗಿದೆ.

ಕಾಲೇಜು ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ[ಬದಲಾಯಿಸಿ]

ಕನ್ನಡ ಕಟ್ಟುವ ಯೋಜನೆಗಳಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮವೂ ಒಂದು. ಈ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸುಮಾರು ಒಟ್ಟು 310 ಕಾಲೇಜುಗಳಲ್ಲಿ ಆಯೋಜಿಸಿ, ವಿದ್ಯಾರ್ಥಿ ಸಮುದಾಯದ ಮನಸ್ಸುಗಳಲ್ಲಿ ಕನ್ನಡ ಭಾಷೆಯ ಇತಿಹಾಸ, ಸತ್ವ, ವೈವಿಧ್ಯತೆ ಹಾಗೂ ಉಪಯುಕ್ತತೆಗಳನ್ನು ಮನವರಿಕೆಮಾಡಿಕೊಡುವ ಮೂಲಕ ಹೊಸ ತಲೆಮಾರಿನಲ್ಲಿ ಸದೃಢ ಕನ್ನಡ ಜಗತ್ತೊಂದನ್ನು ನಿರ್ಮಿಸುವುದಕ್ಕೆ ಅನುಕೂಲವಾಗುವಂತೆ ವಿಶೇಷ ಉಪನ್ಯಾಸ, ಮುಕ್ತಚರ್ಚೆ, ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹಳಗನ್ನಡ ಕಾವ್ಯದ ರಸಗ್ರಹಣ ಶಿಬಿರ[ಬದಲಾಯಿಸಿ]

 • ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಇತಿಹಾಸವಿರುವ ಕನ್ನಡ ಭಾಷೆ ಹಲವು ಅವಸ್ಥಾಂತರಗಳನ್ನು ದಾಟಿ ಬಂದಿದೆ. ಅದರಲ್ಲಿ 9-10ನೇ ಶತಮಾನದಲ್ಲಿ ಪ್ರಖ್ಯಾತ ಕಾವ್ಯ ಶಾಸ್ತ್ರಗಳು ಸೃಜನಶೀಲತೆಯ ದೃಷ್ಟಿಯಿಂದ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಅಂದಿನ ಕಾಲದ ಆಡುಮಾತುಗಳು, ನುಡಿಗಟ್ಟುಗಳು, ಗಾದೆ-ಒಗಟುಗಳು, ಆ ಕಾಲದ ಸಾಹಿತ್ಯ ಕೃತಿಗಳಲ್ಲಿ ದಾಖಲಾಗಿರುವ ಪದ ಇಂದಿನ ಜನಬಳಕೆಯ ಭಾಷೆಯಲ್ಲಿ ಹೇಗೆ ಪ್ರಯೋಗವಾಗುತ್ತಿದೆ.
 • ಇದನ್ನು ಅರಿಯಲು ಹಳಗನ್ನಡವನ್ನು ಓದಿ ಅರ್ಥಮಾಡಿಕೊಂಡು ಇಂದಿನ ಸಾಹಿತ್ಯ, ಸಂಸ್ಕೃತಿ, ಜನಬಳಕೆಯ ಭಾಷಾ ವಿಧಾನದ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಪ್ರಾಧಿಕಾರ ಕಳೆದ ಮೂರು ವರ್ಷಗಳಲ್ಲಿ ಒಟ್ಟು 67 ಹಳೆಗನ್ನಡ ಕಾವ್ಯ ರಸಗ್ರಹಣ ಶಿಬಿರಗಳನ್ನು ಆಯೋಜಿಸಿದೆ.

ಕನ್ನಡ ನುಡಿತೇರು ಜಾಗೃತಿ ಜಾಥಾ[ಬದಲಾಯಿಸಿ]

 • ರಾಜ್ಯದ ಜಿಲ್ಲಾಕೇಂದ್ರಗಳು ಸೇರಿದಂತೆ 75 ತಾಲೂಕುಗಳಲ್ಲಿ ಕನ್ನಡ ನುಡಿತೇರು ಎಂಬ ಹೆಸರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ, ನುಡಿ ಸೊಗಡು, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ, ಪ್ರವಾಸಿ ತಾಣಗಳು ಹಾಗೂ ಉದ್ಯಾನವನಗಳಲ್ಲಿ ಕನ್ನಡ ಚಿಂತನೆ, ಕಾರ್ಖಾನೆಗಳಿಗೆ ಭೇಟಿ, ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ, ಕನ್ನಡೇತರರಿಗೆ ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ ಹಾಗೂ ಸಾಂಸ್ಕೃತಿಕ ಉತ್ಸವಗಳು ಈ ಎಲ್ಲಾ ಕಾರ್ಯಕ್ರಮಗಳ ತಿರುಳೇ ಕನ್ನಡ ನುಡಿತೇರು ಜಾಗೃತಿ ಜಾಥಾ.
 • ಕನ್ನಡ ಬಗ್ಗೆ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವುದು, ಕನ್ನಡದ ಕುರಿತು ಅಗಾಧವಾದ ಪ್ರೀತಿಯನ್ನು ಬೆಳೆಸುವುದು, ಕನ್ನಡ ವಾತಾವರಣವನ್ನು ಹುಟ್ಟು ಹಾಕುವುದು, ಕನ್ನಡವೇ ನಮ್ಮ ಬದುಕು, ಕನ್ನಡವೇ ನಮ್ಮ ಉಸಿರು ಎಂಬ ನಂಬಿಕೆಯನ್ನು ಬೆಳೆಸುವುದೇ ಅಲ್ಲದೆ, ಅನ್ಯ ಭಾಷಿಕರು ಕನ್ನಡವನ್ನು ಕಲಿತು ಕನ್ನಡದ ವಾತಾವರಣದಲ್ಲಿ ಸುಲಭವಾಗಿ ಸಮ್ಮಿಲನಗೊಳ್ಳುವಂತೆ ಉತ್ತೇಜಿಸುವುದುದರೊಂದಿಗೆ ಕನ್ನಡದ ವಾತಾವರಣವನ್ನು ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡುವ ಉದ್ದೇಶದಿಂದ ಪ್ರಾಧಿಕಾರ ಈ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ದೆಹಲಿ ನಿಯೋಗ[ಬದಲಾಯಿಸಿ]

ಕನ್ನಡಿಗರು ನಾಡು-ನುಡಿ, ಗಡಿ, ಜಲ, ನೆಲ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳು ಸಾಕಷ್ಟಿದ್ದು, ಈ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಸಾಹಿತಿಗಳು, ಚಿಂತಕರು, ರಂಗಕರ್ಮಿಗಳು, ಕನ್ನಡ ಸಂಘಗಳ ಮುಖಂಡರು, ಕಾರ್ಮಿಕ ಮುಖಂಡರ ನಿಯೋಗ ದೆಹಲಿಗೆ ತೆರಳಿ ರಾಷ್ಟ್ರದ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರುಗಳು, ವಿರೋಧಪಕ್ಷದ ನಾಯಕರುಗಳು ಹಾಗೂ ಕರ್ನಾಟಕದ ಸಂಸದರನ್ನು ಭೇಟಿಮಾಡಿ, ಚರ್ಚಿಸಿ, ತುರ್ತಾಗಿ ಆಗಬೇಕಾಗಿರುವ ಕೆಲಸಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಯಿತು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ-ಮಾನ, ರಾಷ್ಟ್ರೀಯ ನಾಟಕ ಶಾಲೆ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ-ಮಾನ ದೊರಕಿಸಿಕೊಡುವಂತಹ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಯಿತು.

ನುಡಿಸೊಗಡು ಸಮಾವೇಶ[ಬದಲಾಯಿಸಿ]

 • ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾರತೀಯ ಸಂಸ್ಕೃತಿಯಲ್ಲಿ ಪ್ರಧಾನ ಭಾಷಾ ವಾಹಿನಿಯಾಗಿ ನಿರಂತರವಾಗಿ ತನ್ನ ಜಂಗಮತ್ವವನ್ನು ಕನ್ನಡ ಭಾಷೆ ಉಳಿಸಿಕೊಂಡಿದೆ. ಜಾನಪದ ಸಾಹಿತ್ಯ, ಪ್ರಾಚೀನ ಸಾಹಿತ್ಯ, ಆಧುನಿಕ ಸಾಹಿತ್ಯಗಳ ಬೇರುಗಳು ಕನ್ನಡವನ್ನು ಸದೃಢಗೊಳಿಸಿವೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಇಲ್ಲಿಯ ಕನ್ನಡಿಗರ ಬಹುಸಂಸ್ಕೃತೀಯತೆ ಮತ್ತು ಪ್ರಾದೇಶಿಕತೆಯ ಕಾರಣದಿಂದಾಗಿ ಭಾಷಾ ಬಳಕೆಯಲ್ಲಿ ಹಲವು ಬಗೆಯ ವೈಶಿಷ್ಟ್ಯಗಳಿಂದ ಕೂಡಿದೆ.
 • ಕನ್ನಡ ಭಾಷೆಯ ನುಡಿಸೊಗಡು ಒಂದೊಂದು ಜಿಲ್ಲೆಯಲ್ಲಿಯೂ ತನ್ನದೇ ಆದ ಸೊಬಗನ್ನು ಹೊಂದಿದೆ. ಇಂದಿನ ನಾಗರೀಕತೆಯ ಪರಿಣಾಮವಾಗಿ ಮಾಧ್ಯಮಗಳ ಪ್ರಭಾವದಿಂದಾಗಿ ಇಂತಹ ಬಹುಸೊಗಡಿನ ಕನ್ನಡ ಏಕರೂಪತೆಯನ್ನು ತಾಳುವ ಸಾಧ್ಯತೆಗಳು ಹೆಚ್ಚಾಗಿದೆ. ಏಕರೂಪತೆಯ ಜತೆಗೆ ಕನ್ನಡದ ಈ ವೈವಿಧ್ಯಮಯ ನುಡಿ ಸೊಗಡಿನ ಸೊಬಗನ್ನು ಉಳಿಸಿಕೊಳ್ಳುವ ಅಗತ್ಯತೆಯನ್ನು ಮನಗಂಡು ರಾಜ್ಯಾದ್ಯಂತ ನುಡಿಸೊಗಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೊರನಾಡ ಕನ್ನಡಿಗರ ಸಮಾವೇಶ[ಬದಲಾಯಿಸಿ]

ಹೊರನಾಡಿನಲ್ಲಿ ಚದುರಿಹೋಗಿರುವ ಕನ್ನಡಿಗರನ್ನು ಒಗ್ಗೂಡಿಸುವ ಉದ್ದೇಶದ ಹಿನ್ನೆಲೆಯಲ್ಲಿ ಹೊರನಾಡ ಕನ್ನಡಿಗರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಹೊರನಾಡ ಕನ್ನಡಿಗರಲ್ಲಿ ಕನ್ನಡ ಅಭಿಜಾತ ಸಾಹಿತ್ಯ, ಅಧ್ಯಯನ ಅವಕಾಶಗಳು, ಭಾರತದ ಇತರ ಅಭಿಜಾತ ಭಾಷೆಗಳು ಮತ್ತು ಕನ್ನಡ, ಕನ್ನಡ ಅಭಿಜಾತ ಸಾಹಿತ್ಯ ಮತ್ತು ಭಾಷಿಕ ಪರಂಪರೆ, ತೌಲನಿಕ ಅಧ್ಯಯನ ಸಾಧ್ಯತೆಗಳು, ಹೊರನಾಡ ಕನ್ನಡ ಸ್ನಾತಕೋತ್ತರ ಕೇಂದ್ರಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಹೊರನಾಡ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ತಜ್ಞರಿಂದ ಚಿಂತನ-ಮಂಥನ ಕಾರ್ಯಕ್ರಮಗಳನ್ನು ಏರ್ಪಡಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

ಭಾಷಾ ಭಾವೈಕ್ಯ ಸಮಾವೇಶ[ಬದಲಾಯಿಸಿ]

 • ಸಾಂಸ್ಕೃತಿಕ ಕರ್ನಾಟಕದ ಪರಿಕಲ್ಪನೆಯೊಂದಿಗೆ ಕನ್ನಡವನ್ನು ಮತ್ತಷ್ಟು ಜಾಗೃತಿಗೊಳಿಸುವ ಸಾಂಸ್ಕೃತಿಕವಾಗಿ ಸೌಹಾರ್ದ ಬದುಕನ್ನು ಕಟ್ಟಿಕೊಳ್ಳಲು ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಭಾಷಾ ಭಾವೈಕ್ಯ ಸಮಾವೇಶಗಳನ್ನು ಆಯೋಜಿಸಲಾಗಿದೆ. ಭಾರತೀಯ ಭಾಷೆಗಳಲ್ಲಿಯೇ ಅತ್ಯಂತ ಸಮೃದ್ಧವಾದ ಸಾಹಿತ್ಯವನ್ನು ಹೊಂದಿರುವ ಭಾಷೆ ಕನ್ನಡ.
 • ಇದರ ಜತೆಗೆ ತಮಿಳು, ತೆಲುಗು, ಮಲಯಾಳಂ, ತುಳು, ಮರಾಠಿ, ಕೊಂಕಣಿ, ಹಿಂದಿ ಭಾಷೆಗಳೊಡೆನೆ ಉಂಟಾಗುವ ಕೊಡು-ಕೊಳ್ಳುವ ಸಂಬಂಧವೇ ಭಾಷಾ ಸಮೃದ್ಧಿಗೆ ನಿದರ್ಶನ. ಇದರಿಂದ ಜನರ ನಡುವೆ ಇರುವ ಸುಮಧುರ ಬಾಂಧವ್ಯವನ್ನು ಶ್ರೀಮಂತಗೊಳಿಸುವ ಜತೆಗೆ ಭಾಷಾ ವೈವಿಧ್ಯತೆಯನ್ನು ಬೆಸೆದು ಏಕತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ.

ಕನ್ನಡ ಕಲಿಕಾ ಕೇಂದ್ರಗಳು[ಬದಲಾಯಿಸಿ]

ರಾಜ್ಯಕ್ಕೆ ಉದ್ಯೋಗನಿಮಿತ್ತ ಸಾಕಷ್ಟು ಜನರು ಹೊರನಾಡಿನಿಂದ ಅನ್ಯಭಾಷಿಗರು ವಲಸೆ ಬರುತ್ತಿದ್ದು, ಇವರನ್ನು ಅನ್ಯರೆಂದು ಭಾವಿಸದೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ವಾತಾವರಣದಲ್ಲಿ ಸುಲಭವಾಗಿ ಸಮ್ಮಿಲನವಾಗುವಂತೆ ಕನ್ನಡ ಕಲಿಸಲು ಕನ್ನಡ ಕಲಿಕಾ ಕೇಂದ್ರಗಳನ್ನು ರಾಜ್ಯದ ಕಾರ್ಖಾನೆಗಳು, ಮಸೀದಿಗಳು, ಚರ್ಚ್ಗಳಲ್ಲಿ ಪ್ರಾರಂಭಿಸುವ ಮೂಲಕ ಸೌಹಾರ್ದ ವಾತಾವರಣವನ್ನು ಸೃಷ್ಠಿಸಲಾಗಿದೆ. ಅಲ್ಲದೇ ಹೊರದೇಶಗಳಲ್ಲಿ ನೆಲಸಿರುವ ಕನ್ನಡಿಗರ ಮಕ್ಕಳ ಮಾತೃಭಾಷೆಯಾದ ಕನ್ನಡವನ್ನು ಉಳಿಸಿಕೊಳ್ಳಲು ಉದ್ದೇಶದಿಂದ ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

ಕಾರ್ಮಿಕ ಲೋಕದಲ್ಲಿ ಕನ್ನಡ[ಬದಲಾಯಿಸಿ]

ರಾಷ್ಟ್ರದ ನಾನಾ ಭಾಗಗಳಿಂದ ಉದ್ಯೋಗವನ್ನರಸಿ ಕರ್ನಾಟಕಕ್ಕೆ ಬರುತ್ತಿರುವ ಅನ್ಯಭಾಷಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಇವರನ್ನು ಕನ್ನಡ ಜಾಯಮಾನದೊಳಗೆ ತರುವ ಉದ್ದೇಶದಿಂದ ರಾಜ್ಯದ ಎಲ್ಲಾ ಉದ್ದಿಮೆಗಳಲ್ಲಿ ಕನ್ನಡ ನುಡಿ ಉತ್ಸವ, ಕನ್ನಡ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಅಲ್ಲದೆ, ಕನ್ನಡೇತರ ಕಾರ್ಮಿಕರಿಗೆ ಬಿಡುವಿನ ವೇಳೆಯಲ್ಲಿ ಕನ್ನಡ ಕಲಿಸಲು ಕಾರ್ಖಾನೆಗಳಲ್ಲಿಯೇ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.

ಗಣಕ ಕನ್ನಡದ ಏಕೀಕರಣ[ಬದಲಾಯಿಸಿ]

ಗಣಕ ಯಂತ್ರವು ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂಚಾರಿ ದೂರವಾಣಿಯಿಂದ ಪ್ರಾರಂಭಗೊಂಡು, ನಮ್ಮ ಬದುಕನ್ನು ಗಣಕ ಜಗತ್ತು ಆವರಿಸಿದೆ. ಈ ಗಣಕದಲ್ಲಿ ಕನ್ನಡದ ಬಳಕೆಯಾಗುತ್ತಿದೆ. ಆದರೆ, ಒಂದು ಗಣಕದಲ್ಲಿ ಬರೆದ ಕನ್ನಡವು ಮತ್ತೊಂದು ಗಣಕ ಯಂತ್ರದಲ್ಲಿ ಅನೇಕ ತಂತ್ರಾಂಶಗಳ ಕಾರಣದಿಂದಾಗಿ ಸರಿಯಾಗಿ ಬರುತ್ತಿಲ್ಲ. ಅದಕ್ಕಾಗಿ ಹೊಸ ಲಿಪಿ ಶೈಲಿಗಳು, ಲಿಪ್ಯಂತರದ ಸರಳೀಕರಣ ಕಾರ್ಯಕ್ರಮಗಳ ಮೂಲಕ ಹೊಸ ತಂತ್ರಾಂಶಗಳನ್ನು ಕನ್ನಡ ಗಣಕ ಪರಿಷತ್ತಿನ ಸಹಯೋಗದಲ್ಲಿ ರೂಪಿಸುವ ಕೆಲಸ ಬರದಿಂದ ಸಾಗುತ್ತಿದೆ.

ಕನ್ನಡ ಚಿಂತನೆ[ಬದಲಾಯಿಸಿ]

ಕನ್ನಡದ ಸೊಗಡನ್ನು ಕುರಿತು ಚಿಂತಿಸುವಾಗಲೇ ನಗರ ಪ್ರದೇಶದಲ್ಲಿನ ಕನ್ನಡಿಗರು ಕನ್ನಡದಿಂದ ದೂರವಾಗುತ್ತಿರುವ ಸತ್ಯವನ್ನು ಅರಿತ ಹಿನ್ನೆಲೆಯಲ್ಲಿ ನಗರದ ಜನರಲ್ಲಿ ಕನ್ನಡದ ಪ್ರೀತಿಯನ್ನು ಹೆಚ್ಚಿಸಲು ಕನ್ನಡ ಚಿಂತನೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಾಲ್ಕು ವರ್ಷಗಳಿಂದ ಆಯೋಜಿಸುತ್ತಾ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಕುರಿತು ಉಪನ್ಯಾಸ ಮಾಲಿಕೆಗಳನ್ನು ಏರ್ಪಡಿಸುವ ಮೂಲಕ ಕನ್ನಡ ವಾತಾವರಣವನ್ನು ಸೃಷ್ಠಿಸಲಾಗಿದೆ. ಇದೇ ರೀತಿ ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಕಳೆದ ಮೂರು ವರ್ಷಗಳಲ್ಲಿ 36 ಕಾರ್ಯಕ್ರಮಗಳು ಹಾಗೂ ಬೆಂಗಳೂರಿನ ಸುಚಿತ್ರ ಕಲಾಕೇಂದ್ರದಲ್ಲಿ 72 ಕಾರ್ಯಕ್ರಮಗಳು ಸೇರಿದಂತೆ ಒಟ್ಟು 318 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪೀಠೋಪಕರಣಗಳು[ಬದಲಾಯಿಸಿ]

ರಾಜ್ಯ ಹಾಗೂ ಹೊರರಾಜ್ಯದ ಗಡಿ ಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಾಠೋಪಕರಣ ಹಾಗೂ ಪೀಠೋಪಕರಣಗಳನ್ನು ಪೂರೈಸಲು ಕಳೆದ ಐದು ವರ್ಷಗಳಲ್ಲಿ ಪ್ರಾಧಿಕಾರ 35 ಕನ್ನಡ ಶಾಲೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ.

ಕನ್ನಡ ಭವನ ನಿರ್ಮಾಣ[ಬದಲಾಯಿಸಿ]

 • ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಗಡಿ ತಾಲೂಕುಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಜತೆಗೆ ನಿರಂತರವಾಗಿ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಳೆದ ಐದು ವರ್ಷಗಳಲ್ಲಿ ಒಟ್ಟು 50 ಕನ್ನಡ ಭವನವನ್ನು ನಿರ್ಮಾಣಮಾಡಲು ಆರ್ಥಿಕ ನೆರವು ನೀಡಲಾಗಿದೆ.
 • ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಹೆಚ್ಚಿಸಿ, ಕಲಿಕೆಯನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಕೆಲವು ಖಾಸಗಿ ಸಂಸ್ಥೆಗಳು ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಗಣಕದ ಮೂಲಕ ನೀಡಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಉದ್ಯೋಗ ನೀತಿ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ರಾಷ್ಟ್ರೀಯ ಜಲ ನೀತಿ ರೂಪಿಸುವಂತೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರದಲ್ಲಿ ಹಕ್ಕೊತ್ತಾಯ ಮಂಡಿಸಲಾಗುತ್ತಿದ್ದು, ಈ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದೇವೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಗಳು[ಬದಲಾಯಿಸಿ]

 1. ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರು
 2. ಪಠ್ಯಾನುಸಂಧಾನ,
 3. ಆಡಳಿತ ಕನ್ನಡ,
 4. ಜಾನಪದ ನಿಘಂಟು (ಮೂರು ಸಂಪುಟಗಳು),
 5. ನುಡಿಸೊಗಡು,
 6. ಆಡಳಿತ ಪದಕೋಶ,
 7. ಆಡಳಿತದಲ್ಲಿ ಕನ್ನಡ (ಪ್ರಮುಖ ಆದೇಶಗಳು - ಸುತ್ತೋಲೆಗಳು),
 8. ದಾರಿ ದೀವಿಗೆ,
 9. ಬಯಲು ಸೀಮೆ ಭಾಷಾವೈವಿಧ್ಯ,
 10. ದೇಸಿ ಮಾತು ಮುಂತಾದ ಪುಸ್ತಕಗಳನ್ನು ಹೊರತರಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಇದುವರೆಗಿನ ಅಧ್ಯಕ್ಷರುಗಳು[ಬದಲಾಯಿಸಿ]

ಕ್ರಮ ಸಂಖ್ಯೆ ಅಧ್ಯಕ್ಷರ ಹೆಸರು ಇಸವಿ
ಸಿದ್ದರಾಮಯ್ಯ ೧೯೮೩-೧೯೮೪
ಪಾಟೀಲ ಪುಟ್ಟಪ್ಪ ೧೯೮೫-೧೯೮೮
ಜಿ. ನಾರಾಯಣ ೧೯೯೨-೧೯೯೫
ಹೆಚ್.ನರಸಿಂಹಯ್ಯ ೧೯೯೫-೧೯೯೬
ಚಂದ್ರಶೇಖರ ಪಾಟೀಲ ೧೯೯೬-೧೯೯೯
ಬರಗೂರು ರಾಮಚಂದ್ರಪ್ಪ ೨೦೦೦-೨೦೦೩
ಬಿ.ಎಂ.ಇದಿನಬ್ಬ ೨೦೦೩-೨೦೦೬
ಸಿದ್ದಲಿಂಗಯ್ಯ ೨೦೦೬-೨೦೦೮
ಮುಖ್ಯಮಂತ್ರಿ ಚಂದ್ರು ೨೦೦೮-೦೯ ಜೂನ್ ೨೦೧೪
೧೦ ಎಲ್. ಹನುಮಂತಯ್ಯ ಜೂನ್ ೨೦೧೪
೧೧ ಎಸ್.ಜಿ. ಸಿದ್ಧರಾಮಯ್ಯ ೨೦೧೯ ರವರೆಗೆ
೧೨ ಟಿ.ಎಸ್ ನಾಗಾಭರಣ ೨೦೦೯-೨೦೨೪
೧೩ ಪುರುಷೋತ್ತಮ ಬಿಳಿಮಲೆ ೨೦೨೪-ಪ್ರಸ್ತುತ

ಉಲ್ಲೇಖಗಳು[ಬದಲಾಯಿಸಿ]

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]