ವಿಷಯಕ್ಕೆ ಹೋಗು

ಆಣ್ಣೆಸೊಪ್ಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕತ್ತೆಕಾಲಂಬು ಇಂದ ಪುನರ್ನಿರ್ದೇಶಿತ)
ಆಣ್ಣೆಸೊಪ್ಪು
Tylophora indica at Talakona forest, in Chittoor District of ಆಂಧ್ರ ಪ್ರದೇಶ, India.
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಕುಲ:
Tylophora

ಈ ಬಳ್ಳಿಯು ಬೀಳು ಭೂಮಿಯಲ್ಲಿ ಮತ್ತು ಹಾದಿಬದಿಯಲ್ಲಿ ಬೆಳೆಯುತ್ತದೆ.ದುಂಡನೆಯ ಬಳ್ಳಿಕಾಂಡವು ಬೇಲಿಗಿಡಗಳ ಮೇಲೆ ಇಲ್ಲವೆ ನೆಲದ ಮೇಲೆ ಹಬ್ಬಿಬೆಳೆಯುತ್ತದೆ.ಸರಳವಾದ ಉದ್ದ-ಅಂಡಾಕಾರದ ಮತ್ತು ಸ್ವಲ್ಪ ದಪ್ಪನೆಯ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತವೆ.ಎಲೆಯ ಮೇಲ್ಭಾಗ ಹೊಳಪಿನಿಂದ ಕೂಡಿರುತ್ತದೆ ಮತ್ತು ಕೆಳಭಾಗದಲ್ಲಿ ಸೂಕ್ಷ್ಮಮೃದು ರೋಮಗಳಿರುತ್ತವೆ.ಎಲೆಯ ಕಂಕುಳದಲ್ಲಿ ಛತ್ರಿಯಾಕಾರದ ಪುಷ್ಪಮಂಜರಿಯಲ್ಲಿ ಎಕ್ಕದ ಹೂವನ್ನು ಹೋಲುವ ಹಳದಿ ಬಣ್ಣದ ಹೂಗಳಿರುತ್ತವೆ.ಒಂದು ಹೂತೊಟ್ಟಿನ ಮೇಲೆ ಎರಡು ಕಾಯಿಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ.

ಭಾರತದಲ್ಲಿ ಎಲ್ಲ ಕಡೆಗಳಲ್ಲಿಯೂ ಬಂಜರು ಪ್ರದೇಶಗಳಲ್ಲಿ ಕಲ್ಲುಬಂಡೆಗಳ ನಡುವೆ ಬೆಳೆಯುತ್ತದೆ. ಈ ಗಿಡಕ್ಕೆ ಅನೇಕ ಬೇರುಗಳಿವೆ. ಅವು ದಪ್ಪನಾಗಿ ರಸಭರಿತವಾಗಿವೆ. ಕಾಂಡ ನೀಳ, ನುಣುಪು ಅಥವಾ ರೋಮಮಯ. ಎಲೆಗಳು ಸ್ವಲ್ಪ ಹೆಚ್ಚುಕಡಿಮೆ ಅಭಿಮುಖವಾಗಿ ಜೋಡಣೆಗೊಂಡಿವೆ. ಎಲೆಗಳು ಸು. 1.2 ಮೀ ಉದ್ದ ಸು. 1.6 ಮೀ ಅಗಲ ಇವೆ. ಅವುಗಳ ತಳಭಾಗ ರೋಮಮಯ. ಆಕಾರ ಕತ್ತಿಯಂತೆ ಅಥವಾ ಅಂಡಾಕಾರ. ತುದಿ ಚೂಪು. ಎಲೆಗಳ ಬುಡದಲ್ಲಿ ಸು. 1" ಉದ್ದದ ವೃಂತಪರ್ಣಗಳಿವೆ. ಹೂಗಳು ಸರಳ ರಸೀಮ್ ಮಾದರಿಯ ಅಥವಾ ಛತ್ರಿಯಾಕಾರದ ಕವಲೊಡೆದ ಸೈಮೋಸ್ ಹೂಗೊಂಚಲುಗಳಲ್ಲಿರುತ್ತವೆ. ಹೂಗಳು ಗಾತ್ರದಲ್ಲಿ ಚಿಕ್ಕವು ಮತ್ತು ಆರೀಯ ಸಮಾಂಗತೆಯುಳ್ಳವು. ಅವುಗಳ ಬಣ್ಣ ಹಳದಿಮಿಶ್ರಿತ ಕೆಂಪು. ಪುಷ್ಪಪಾತ್ರೆ ಅಂಡಾಕಾರದ ಐದು ವಿಭಾಗಗಳನ್ನೊಳಗೊಂಡಿದೆ. ಗಂಟೆಯಾಕಾರದ ಪುಷ್ಟದಳಸಮೂಹ 5 ಭಾಗಗಳಾಗಿ ವಿಭಾಗವಾಗಿದೆ. ಕೇಸರಗಳು ಐದು. ಒಂದರೊಡನೊಂದು ಕೂಡಿವೆ. ಕೇಸರಗಳಿಗೂ ದಳಗಳಿಗೂ ಮಧ್ಯೆ ದಳಗಳಿಂದ ಹೊರಟ ಮುಕುಟವಿದೆ. ಪರಾಗಕೋಶ ಚಿಕ್ಕವು ಮತ್ತು ಹೂವಿನ ಕೇಂದ್ರ ಭಾಗದೆಡೆ ಬಾಗಿವೆ. ಒಂದೊಂದು ಪರಾಗಕೋಶದಲ್ಲಿಯೂ ಒಂದೊಂದೇ ಪರಾಗರಾಶಿಯಿದೆ. ಅಂಡಾಶಯದಲ್ಲಿ ಎರಡು ಕಾರ್ಪೆಲುಗಳಿವೆ. ಕಾರ್ಪೆಲುಗಳು ಶಲಾಕೆ ಮತ್ತು ಶಲಾಕಾಗ್ರದ ಭಾಗದಲ್ಲಿ ಮಾತ್ರ ಕೂಡಿಕೊಂಡಿದ್ದು ಅವುಗಳ ಬುಡ ಬಿಡಿಯಾಗಿದೆ. ಶಲಾಕಾಗ್ರ 5 ಮೂಲೆಗಳ ಬಿಲ್ಲೆಯಂತಿದೆ. ಫಲ ಎರಡು ಫಾಲಿಕಲ್ಗಳ ಜೋಡಿ. ಕೆಲವೊಮ್ಮೆ ಒಂದರ ಬೆಳೆವಣಿಗೆ ಕುಂಠಿತಗೊಂಡು ಒಂದೇ ಫಲವಾಗುವುದೂ ಉಂಟು. ಫಲದ ತುದಿ ಚೂಪು, ಮೈ ನುಣುಪು. ಬೀಜಗಳು ಅನೇಕ, ಅವುಗಳಿಗೆ ಪ್ರಸರಣಕಾರ್ಯದಲ್ಲಿ ಸಹಕಾರಿಯಾಗುವ ಕೂದಲುಗಳಿವೆ.

ವೈಜ್ಞಾನಿಕ ಹೆಸರು

[ಬದಲಾಯಿಸಿ]
  • ಟೈಲೊಫೊರ ಇಂಡಿಕ (Tylophora indica (N.Burman) Merrill)[]
  • ಟೈ. ಆಸ್ತಮ್ಯಾಟಿಕ (T.asthmatica(L.f.)Wight & Arn.)[]

ಸಸ್ಯದ ಕುಟುಂಬ

[ಬದಲಾಯಿಸಿ]

ಆಸ್ಲ್ಕಿಪಿಯಡೇಸಿ(Asclepiadaceae)[]

ಕನ್ನಡದ ಇತರ ಹೆಸರುಗಳು

[ಬದಲಾಯಿಸಿ]
  • ಅಂತಮುಲ
  • ಆಡುಮುತ್ತಡ
  • ಕಿರುಮಂಜಿ

ಇತರ ಭಾಷೆಯ ಹೆಸರುಗಳು

[ಬದಲಾಯಿಸಿ]

ಉಪಯೋಗಗಳು

[ಬದಲಾಯಿಸಿ]
  1. ಎಲೆ ಮತ್ತು ಬೇರನ್ನು ಅರೆದು ಕುಡಿಸುವುದರಿಂದ ಗೂರಲು,ದಮ್ಮು ಮತ್ತು ಭೇದಿ,ರಕ್ತಭೇದಿ ಶಮನವಾಗುತ್ತವೆ.(ಸೂಚನೆ: ಈ ಗಿಡದ ಬೇರಿನ ಗಂಧವನ್ನು ವಾಂತಿ ಮಾಡಿಸಲು ಯೋಗ್ಯವಾದ ಶ್ವಾಸಕೋಶ ರೋಗಿಗಳಿಗೆ ಮಾತ್ರ ಬಳಸಬೇಕು.)
  2. ಆಡುಮುಟ್ಟದ ಸೊಪ್ಪಿನರಸ ¼ ಲೀಟರ್ ಗೆ,ಆರಿಸಿನ ೨೦ ಗ್ರಾಂ ಮತ್ತು ಕೊಬ್ಬರಿಎಣ್ಣೆ ¼ ಲೀಟರ್ ಸೇರಿಸಿ ಜೊತೆಗೆ ಸ್ವಲ್ಪ ಬಜೆಯ ಗಂಧ ಸೇರಿಸಿ ಇಡಬೇಕು.ಮರುದಿವಸ ಈ ರಸವನ್ನು ಕಾಯಿಸಿ ತೈಲಮಾಡಿ ಬಾಟಲ್ನಲ್ಲಿ ಸಂಗ್ರಹಿಸಿಟ್ಟುಕೊಂಡು,ಪ್ರತಿದಿವಸ ಮುಖಕ್ಕೆ ಈ ಎಣ್ಣೆಯನ್ನು ಲೇಪಿಸಿ ಅರ್ಧ ಗಂಟೆಯನಂತರ ಮುಖವನ್ನು ಹೆಸರುಬೇಳೆ ಹಿಟ್ಟಿನಿಂದ ತೊಳೆದುಕೊಳ್ಳಬೇಕು.ಈ ರೀತಿ ಕೆಲವು ದಿವಸ ಚಿಕಿತ್ಸೆಯನ್ನು ಅನುಸರಿಸುವುದರಿಂದ ಮುಖದಲ್ಲಿ ಮೊಡಿಮೆಗಳು ಏಳುವುದಿಲ್ಲ ಜೊತೆಗೆ ಮುಖವು ಕಾಂತಿಯುಕ್ತವಾಗುತ್ತದೆ.
  3. ಆಡುಮುಟ್ಟದ ಬಳ್ಳಿಯ ಬೇರಿನ ರಸ ಸುಮಾರು ೧೫-೨೦ ತೊಟ್ಟುಗಳನ್ನು ಹಾಲಿಗೆ ಹಾಕಿ ಕುಡಿಯಲಿಕ್ಕೆ ಕೊಟ್ಟರೆ ಪಿತ್ತಯುಕ್ತ ಕಫ ವಾಂತಿಯಾಗುವುದು.
  4. ಆಡುಮುಟ್ಟದ ಬಳ್ಳಿಯ ಬೇರು ೧ ತೊಲ ಮತ್ತು ಎಲೆ ೧ ತೊಲದಷ್ಟನ್ನು ಹಾಲಿನೊಡನೆ ಅರೆದು ಮದ್ದೀಡಾದವರಿಗೆ(ಕೈಮಸುಕಿನ ವಿಷಕ್ಕೆ ಒಳಗಾದವರಿಗೆ)ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಸಿದರೆ ವಾಂತಿಯಾಗಿ ಮದ್ದು ಹೊರಬಂದು ಆರೋಗ್ಯವಂತರಾಗುತ್ತಾರೆ.ಪಥ:ಮಜ್ಜಿಗೆ ಅನ್ನ.

ಇದರ ಬೇರಿನ ರಸವನ್ನು ಹಾಲಿನೊಡನೆ ಕೂಡಿಸಿ ಶಕ್ತಿ ವರ್ಧಕವಾಗಿ ಬಳಸುವುದುಂಟು. ಎಲೆಗಳನ್ನು ಅರೆದು ವ್ರಣ, ಗಾಯಗಳಿಗೆ ಹಚ್ಚುತ್ತಾರೆ. ಗಿಡವನ್ನು ಇಲಿ, ಜಂತುಗಳಿಗೆ ವಿಷಕಾರಿಯಾಗಿ ಬಳಸಲಾಗುತ್ತದೆ. ಇದನ್ನು ದೇಶೀ ಇಪಿಕ್ಯಾಕುವಾನ ಎಂತಲೂ ಕರೆಯಲಾಗುವುದಲ್ಲದೆ ಅದರ ಔಷಧೀಯ ಉಪಯುಕ್ತತೆಗಳೆಲ್ಲ ಇದಕ್ಕೂ ಇವೆ. ಇದರಲ್ಲಿ ಟೈಲೊಫೋರಿನ್ ಮತ್ತು ಟೈಲೋರಿಫೋರಿನಿನ್ ಎಂಬ 2 ಬಗೆಯ ಕ್ಷಾರಗಳುಂಟು. ಈ ಬಳ್ಳಿಯ ಎಲೆ ಮತ್ತು ಬೇರು ಒಳ್ಳೆಯ ವಾಂತಿಕಾರಕ ಔಷಧವೆಂದು ಪರಿಗಣಿಸಲಾಗಿದೆ. ಒಳಗಿನ ಕಫವನ್ನು ಹೊರಗೆ ಹಾಕಬಲ್ಲುದು. ಹೆಚ್ಚು ಬೆವರು ಬರುವ ಹಾಗೆಯೂ ಮಾಡಬಲ್ಲದು. ಅಲ್ಪಪ್ರಮಾಣದಲ್ಲಿ ಉದರವಾಯವಿಗೆ ಪರಿಣಾಮಕಾರಿ. ಅತಿಸಾರ ಮತ್ತು ರಕ್ತಾತಿಸಾರಕ್ಕೆ ಆರಂಭದಲ್ಲಿ (ಜ್ವರವಿದ್ದರೂ) ಎಲೆಯ ಚೂರ್ಣವನ್ನು ಗೋಂದು (ಅಂಟು) ಮತ್ತು ಅಫೀಮಿನೊಡನೆ ಕೊಡುವುದುಂಟು. ಬೇರನ್ನು ಅರೆದು ತೆಗೆದುಕೊಂಡರೆ ಮಲಶುದ್ಧತೆಯಾಗುತ್ತದೆ. ದಿನಬಿಟ್ಟು ದಿನ ಬರುವ ಜ್ವರ ಅಥವಾ ಮಲೇರಿಯ ಜ್ವರ ಸಂಬಂಧದ ರಕ್ತಾತಿ ಸಾರಕ್ಕೆ ಎಲೆಗಳ ಚೂರ್ಣವನ್ನು ಕ್ವಿನೀನ್ (ಸಿಂಕೋನ) ಗಿಡದ ತೊಗಟೆಯ ಪುಡಿಯೊಡನೆ ಕೊಡುತ್ತಾರೆ. ಇದನ್ನು ವಿರೇಚಕವಾಗಿಯೂ ಸಿಡುಬುರೋಗಕ್ಕೂ ಆರ್ಸಿನಿಕ್ ಮತ್ತು ಸರ್ಪಗಳ ವಿಷಹಾರಿಯಾಗಿಯೂ ಬಳಸುವುದುಂಟು. ಇದರ ಬೇರನ್ನು ಸರಸಪರಿಲ್ಲ ಎಂಬ ಸಸ್ಯದ ಬೇರುಗಳಿಗೆ ಬದಲಾಗಿಯೂ ಬಳಸುವುದುಂಟು. ಅವು ಆಸ್ತಮಾ ಮತ್ತು ಶ್ವಾಸಕೋಶ ಸಂಬಂಧದ ರೋಗಗಳಿಗೆಲ್ಲ ಪರಿಣಾಮಕಾರಿ.

ಪಶುರೋಗ ಚಿಕಿತ್ಸೆಯಲ್ಲಿ

[ಬದಲಾಯಿಸಿ]
  1. ಆಡುಮುಟ್ಟದ ಸೊಪ್ಪು ೨ ತೊಲ,ಲಕ್ಕಿ ಸೊಪ್ಪು ೧ ತೊಲ, ತುಂಬೆಸೊಪ್ಪು ೨ ತೊಲ,ಹಾಲಿವಾಣದ ಸೊಪ್ಪು ೨ ತೊಲ,ಕರಿಮೆಣಸು ½ ತೊಲ,ಬೆಳ್ಳುಳ್ಳಿ ೧ ತೊಲ,ಇವುಗಳೆಲ್ಲವನ್ನು ನೀರಿನಲ್ಲಿ ಅರೆದು ದಿವಸಕ್ಕೆ ಎರಡು ಬಾರಿಯಂತೆ ೩ ದಿವಸ ಕುಡಿಸಿದರೆ ಪಶುಗಳ ತಲೆದೂಗುವ ರೋಗ ವಾಸಿಯಾಗುತ್ತದೆ.
  2. ಆಡುಮುಟ್ಟದ ಬಳ್ಳಿಯನ್ನು ಹಾವು ಕಚ್ಚಿದಾಗ ಉಪಯೋಗಿಸುತ್ತಾರೆ.
  3. ಆಡುಮುಟ್ಟದ ಬೇರನ್ನು ಕೆಮ್ಮು,ದಮ್ಮು ಗೂರಲಿಗೆ ಬಳಸುತ್ತಾರೆ.[]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2017-08-08. Retrieved 2021-08-09.
  2. http://www.sciencedirect.com/science/article/pii/S0975357512800708
  3. http://www.botany.hawaii.edu/faculty/carr/asclepiad.htm
  4. ಕರ್ನಾಟಕದ ಔಷಧಿಯ ಸಸ್ಯಗಳು ಡಾ|| ಮಾಗಡಿ ಆರ್. ಗುರುದೇವ,ದಿವ್ಯಚಂದ್ರ ಪ್ರಕಾಶನ ಬೆಂಗಳೂರು,ಮುದ್ರಣ:೨೦೧೦,ಪುಟ ಸಂಖ್ಯೆ ೨೯,೩೦,೩೧