ಕಜ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಜ್ಜಿ ಎಂಬುದು ಮೇಲ್ಚರ್ಮ ಪದರದಲ್ಲಿ ಮಾನವನ ಮಾಂಸದಿನಿ (ಸಾರ್ಕಾಪ್ಟೀಸ್) ಕಜ್ಜಿಹುಳು[೧][೨] ನೆಲೆಸಿದ್ದರಿಂದ ಏಳುವ ಒಂದು ಅಂಟುರೋಗ (ಸ್ಕೇಬೀಸ್). ಇಸಬು, ತುರಿಗಜ್ಜಿ, ಹುರುಕು ಪರ್ಯಾಯ ಪದಗಳು. ಒಂದು ಜಾತಿಯ ಉಣ್ಣಿಗಳ ಕಡಿತದಿಂದ ಹರಡುವ ರೋಗವಿದು. ಬೆರಳ ಸಂದುಗಳು, ಕಂಕುಳು, ಗಜ್ಜಲುಗಳ ಚರ್ಮದೊಳಕ್ಕೆ ಬಿಲದಂತೆ ತೋಡಿಕೊಂಡು ಕ್ರಿಮಿ ಒಳಸೇರಿ ಮೇಲೆ ದದ್ದು ಗುಳ್ಳೆ ಎದ್ದಿರಬಹುದು. ಚಿಕ್ಕಮಕ್ಕಳಲ್ಲಿ, ಮಾನಸಿಕ ರೋಗಿಗಳಲ್ಲಿ, ನಿಬಿಡ ಜನವಸತಿ ಇರುವಲ್ಲಿ ಇದು ವ್ಯಾಪಕವಾಗಿ ಹಬ್ಬಿರುತ್ತದೆ. ರಾತ್ರಿ ಹೊತ್ತು ಇದರ ಚಟುವಟಿಕೆ ಬಹಳ. ಇದರಿಂದ ಕೆರೆತ, ತುರಿಕೆಯಾಗಿ ಇನ್ನಷ್ಟು ತೊಡಕಾಗಿ ಕೀವುಗೂಡುವುದೂ ಉಂಟು.[೩] ಬರಗಾಲ, ಯುದ್ಧಕಾಲಗಳಲ್ಲಿ ಇದು ಸಾಂಕ್ರಾಮಿಕವಾಗಬಹುದು. ಮನುಷ್ಯರಿಗೆ ಮಾತ್ರ ಹತ್ತುವ ಕಜ್ಜಿಯೇ ಬೇರೆ. ಬೆಕ್ಕು, ನಾಯಿ, ಕುರಿಗಳ ತೆರನ ಸ್ತನಿಗಳಿಗೆ ಹತ್ತುವವೇ ಬೇರೆ. ಪ್ರಾಣಿಗಳವು ಜನರಿಗೆ ಹತ್ತಿದರೆ ಕಜ್ಜಿಯ ಲಕ್ಷಣಗಳು ಬೇರೆಯಾಗಿರುತ್ತವೆ.

ರಂಧ್ರದೊಳಗೆ ತಾಯಿ ಉಣ್ಣಿ, ಮೊಟ್ಟೆ ಮತ್ತು ಮರಿಗಳಿರುತ್ತವೆ. ಯುಕ್ತ ಕಾಲ ಬಂದಾಗ ತಾಯಿ ಉಣ್ಣಿ ತನ್ನ ಸ್ರವಿಕೆಯನ್ನು ಸೂಸುತ್ತದೆ. ಆಗ ವ್ಯಕ್ತಿಗೆ ಆ ಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಅಲ್ಲಿ ಆತ ಕೈ ಆಡಿಸಿ ಕೆರೆದಾಗ ಗುಳ್ಳೆ ಒಡೆದು ಮರಿಗಳು ಹೊರಬಂದು ಅದೇ ವ್ಯಕ್ತಿಯ ದೇಹದ ಬೇರೊಂದು ಭಾಗಕ್ಕೆ ವಲಸೆಹೋಗಬಹುದು ಅಥವಾ ಆತನೊಡನೆ ಸಂಪರ್ಕಕ್ಕೆ ಬರುವ ಇತರರ ದೇಹಗಳಿಗೆ ವರ್ಗಾವಣೆಗೊಳ್ಳಬಹುದು. ಕಜ್ಜಿಗೆ ಅವಶ್ಯವಾದ ಮದ್ದು, ಲೇಪ, ಮುಲಾಮುಗಳು ಹೇರಳವಾಗಿ ಲಭ್ಯ.[೪] ಇವನ್ನು ಉಪಯೋಗಿಸಿ ಸ್ಕೇಬಿಸ್‌ನಿಂದ ಮುಕ್ತರಾಗಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Gates RH (2003). Infectious disease secrets (2nd ed.). Philadelphia: Elsevier, Hanley Belfus. p. 355. ISBN 978-1-56053-543-0.
  2. "Parasites - Scabies: Epidemiology & Risk Factors". Centers for Disease Control and Prevention. November 2, 2010. Archived from the original on 29 April 2015. Retrieved 1 January 2024.
  3. "Parasites – Scabies Disease". Center for Disease Control and Prevention. November 2, 2010. Archived from the original on 2 May 2015. Retrieved 18 May 2015.
  4. "Parasites – Scabies Medications". Center for Disease Control and Prevention. October 2, 2019. Archived from the original on 30 April 2015.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಜ್ಜಿ&oldid=1210614" ಇಂದ ಪಡೆಯಲ್ಪಟ್ಟಿದೆ