ವಿಷಯಕ್ಕೆ ಹೋಗು

ಎರ್ಗಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರ್ಗಟ್
Claviceps purpurea
Scientific classification
ಸಾಮ್ರಾಜ್ಯ:
Division:
ವರ್ಗ:
ಗಣ:
ಕುಟುಂಬ:
ಕುಲ:
Claviceps
Species

About 50, including:
Claviceps africana
Claviceps fusiformis
Claviceps paspali
Claviceps purpurea
Claviceps sorghi
Claviceps zizaniae
"Claviceps lutea"

ಎರ್ಗಟ್: ಹುಲ್ಲಿನ ಜಾತಿಗೆ ಸೇರಿದ ರೈ, ಬಾರ್ಲಿ, ಓಟ್ಸ್‌, ಗೋದಿ ಮುಂತಾದ ಧಾನ್ಯದ ಬೆಳೆಗಳಲ್ಲಿ ತಲೆದೋರಿ ಅವುಗಳ ಕಾಳುಗಳ ಸ್ಥಾನಗಳನ್ನು ಆಕ್ರಮಿಸುವ ಒಂದು ಶಿಲೀಂಧ್ರ. ಈ ಬೆಳೆಗಳಲ್ಲಿ ಒಂದು ವಿಚಿತ್ರ ರೋಗ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತದೆ. ಅಂಥ ಗಿಡಗಳಲ್ಲಿ ಧಾನ್ಯದ ಕಾಳುಗಳು ಕಪ್ಪು ಮಿಶ್ರಿತ ಹಸಿರು ಬಣ್ಣದ 2.5-4ಸೆಂಮೀ. ಉದ್ದವುಳ್ಳ ಬಿರುಸಾದ ವಸ್ತುಗಳಾಗಿ ಮಾರ್ಪಾಟು ಹೊಂದುವುವು. ಇವನ್ನೇ ಎರ್ಗಟ್ ಎಂದು ಕರೆಯಲಾಗುತ್ತದೆ. ಈ ರೋಗಕ್ಕೂ ಅದೇ ಹೆಸರಿದೆ. ಎರ್ಗಟ್ ರೋಗ ಕ್ಲಾವಿಸೆಪ್ಸ್‌ ಪರ್ಪುರಿಯ ಎಂಬ ಬೂಸಲು ಅಥವಾ ಶಿಲೀಂಧ್ರದಿಂದ ಉಂಟಾಗುತ್ತದೆ.

ಪರಿಣಾಮಗಳು

[ಬದಲಾಯಿಸಿ]
Ergot on wheat stalks

ಈ ರೋಗದ ಕೆಲವು ಅನಿಷ್ಟ ಪರಿಣಾಮಗಳು ಎರ್ಗಟುಗಳು ಕೂಡಿದ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ಸೇವಿಸಿದ ಮನುಷ್ಯರಲ್ಲಿಯೂ ಎರ್ಗಟುಗಳು ಕೂಡಿದ ದಂಟು ಮತ್ತು ತೆನೆಗಳನ್ನು ಸೇವಿಸಿದ ದನಕರು ಪ್ರಾಣಿಗಳಲ್ಲಿಯೂ ಕಂಡುಬರುವುವು. ಕ್ಲಾವಿಸೆಪ್ಸ್‌ ಪರ್ಪುರಿಯ ಎಂಬ ಶಿಲೀಂಧ್ರದಲ್ಲಿ 10-12 ಬಗೆಯ ಪ್ರಭೇದಗಳಿವೆ. ಅವೆಲ್ಲವೂ ಗೋದಿ, ಜೋ಼ಳ, ರೈ, ಬಾರ್ಲಿ, ಓಟ್ಸ್‌ ಮುಂತಾದ ಧಾನ್ಯಬೆಳೆಗಳ ಮೇಲೆ ಪರತಂತ್ರ ಜೀವಿಗಳಾಗಿ ಬೆಳೆಯುವುದುಂಟು. ಮುಖ್ಯವಾಗಿ ಈ ಶಿಲೀಂಧ್ರ ಧಾನ್ಯದ ಹೂಗಳ ಅಂಡಾಶಯಕ್ಕೇ ಹೆಚ್ಚಾಗಿ ಗಂಟುಬೀಳುವುದು. ಮುಂದೆ ಆ ಬೆಳೆಗಳಲ್ಲಿ ಎರ್ಗಟ್ ಎಂಬ ರೋಗ ಉಂಟಾಗುತ್ತದೆ. ಈ ಶಿಲೀಂಧ್ರ ಧಾನ್ಯಬೆಳೆಗಳಲ್ಲಿ ರೋಗ ಉಂಟುಮಾಡಿ ಬೆಳೆಗಳನ್ನು ಹಾಳುಮಾಡುವುದಕ್ಕಿಂತ, ಅವು ಉತ್ಪಾದಿಸುವ ಒಂದು ಚಿಕ್ಕ ಕಡ್ಡಿಯಂಥ ಸ್ಕ್ಲೀರೋಷಿಯಂ ಅಥವಾ ಎರ್ಗಟ್ ಎಂಬ ರೂಪಾಂತರ ಹೊಂದಿದ ಧಾನ್ಯಫಲದಲ್ಲಿರುವ ವಿಶಿಷ್ಟ ಸಸ್ಯಕ್ಷಾರ (ಆಲ್ಕಲಾಯಿಡ್) ವಸ್ತುವಿಗೇ ಹೆಚ್ಚು ಮಹತ್ತ್ವವಿದೆ.

ಮಾನವರ ಮೇಲೆ ಪರಿಣಾಮ

[ಬದಲಾಯಿಸಿ]

ಎರ್ಗಟ್ ರೋಗದಿಂದ ಮನುಷ್ಯರಲ್ಲಿ ಆಗುವ ಅನಿಷ್ಟ ಪರಿಣಾಮಗಳು ಹಲವಾರು. ತಲೆಗೂದಲು ಅಕಾಲಿಕವಾಗಿ ಉದುರಿಹೋಗುವುದು; ಹಲ್ಲು ಬೀಳುವುದು; ಉಗುರು ಕಳಚಿ ಬೀಳುವುದು; ತೀವ್ರ ಪ್ರಸಂಗಗಳಲ್ಲಿ ಎಲುಬು ಕೊಳೆಯುವುದು; ಅಂಗಕ್ಷಯ, ಪಾರ್ಶ್ವವಾಯು, ನರಗಳ ದೌರ್ಬಲ್ಯ ಇತ್ಯಾದಿ ವಿಲಕ್ಷಣಗಳು ಕಾಣಸಿಕೊಳ್ಳುವುವು. ಇಂಥ ರೋಗಗಳಿಗೆಲ್ಲ, ಎರ್ಗಟಿಸಂ ಎನ್ನುವುದುಂಟು.

ಪ್ರಾಣಿಗಳ ಮೇಲೆ ಪರಿಣಾಮ

[ಬದಲಾಯಿಸಿ]

ಪ್ರಾಣಿಗಳಲ್ಲಿ ಕೂಡ ಹಲವು ಗಂಡಾಂತರಕಾರಿ ಪರಿಣಾಮಗಳು ಉಂಟಾಗುತ್ತವೆ. ಗೊರಸುಗಳು ಹುಣ್ಣಾಗಿ ಉದುರಿ ಬೀಳುವುದು; ಬಾಲ, ಕಿವಿ, ಕೊಂಬು ಮುಂತಾದುವು ಕಳಚಿ ಬೀಳುವುದು ಮತ್ತು ಗರ್ಭಪಾತವಾಗಿ ಹುಟ್ಟುವ ಕರುಗಳ ಸಾವು ಮುಂತಾದುವು. ರೋಗಗ್ರಸ್ತ ಭಾಗಗಳಲ್ಲಿ ರಕ್ತನಾಳಗಳು ಆಕುಂಚನಗೊಂಡು ಕೋಶಭಿತ್ತಿಗಳು ಬಿರುಸಾಗುವುದರಿಂದ ರಕ್ತಪುರೈಕೆ ನಿಂತಾಗ ಅನಿಷ್ಟ ಪರಿಣಾಮಗಳು ಉಂಟಾಗುತ್ತವೆ.

ಪ್ರಯೋಜನಗಳು

[ಬದಲಾಯಿಸಿ]

ಕೆಲವು ಗಂಡಾಂತರಕಾರಿ ಪರಿಣಾಮಗಳು ಕಂಡುಬಂದರೂ ಈ ಸ್ಕ್ಲೀರೋಷಿಯಂ ಅಥವಾ ಎರ್ಗಟ್ಸ್‌ ಎಂಬುವುಗಳಿಂದ ಮಾನವನಿಗೆ ವೈದ್ಯಕೀಯ ದೃಷ್ಟಿಯಿಂದ ಅನೇಕ ರೀತಿಯ ಪ್ರಯೋಜನಗಳೂ ಆಗುತ್ತವೆ. ಅವುಗಳಲ್ಲಿ ಕೆಲವು ಬಗೆಯ ಸಸ್ಯಕ್ಷಾರದಂಥ ರಾಸಾಯನಿಕವಸ್ತುಗಳು ಇದ್ದು ಅವು ಸ್ನಾಯುಗಳ ಕ್ರಿಯೆಗಳನ್ನು ನಿಯಂತ್ರಿಸಬಲ್ಲವು. ರಕ್ತಸ್ರಾವ ನಿಲ್ಲಿಸುವುದಕ್ಕೆ ಮತ್ತು ಪ್ರಸವಕಾಲದಲ್ಲಿ ಗರ್ಭಕೋಶ ಆಕುಂಚನಗೊಂಡು ಜನನಕ್ರಿಯೆ ಸರಾಗವಾಗಿ ಕೊನೆಗೊಳ್ಳುವುದಕ್ಕೆ ಪೋಷಕವಾಗುವಂತೆ ಔಷಧಗಳ ರೂಪದಲ್ಲಿ ಬಳಸುವುದುಂಟು. ಸಸ್ಯಕ್ಷಾರಗಳಲ್ಲಿ ಒಟ್ಟು ಏಳು ಬಗೆ. ಅವುಗಳಲ್ಲಿ ಎರ್ಗಟೊಮಿನ್ ಮತ್ತು ಎರ್ಗಟಾಕ್ಸಿನ್ ಎಂಬುವು ಪ್ರಭಾವಿಯಾದುವು. ಇವೆರಡರ ಜೊತೆಗೆ ಎರ್ಗಟಿನಲ್ಲಿ ಅಸಿಟೈಲ್ ಕೋಲಿನ್ ಎಂಬ ವಸ್ತುವೊಂದು ಇದ್ದು ಅದೇ ಸ್ನಾಯುಗಳ ಆಕುಂಚನಕ್ಕೆ ಮುಖ್ಯ ಕಾರಣವೆನ್ನಲಾಗುತ್ತದೆ.

ಔಷಧವಾಗಿ ಉಪಯೋಗ

[ಬದಲಾಯಿಸಿ]
Ergot-derived drug to stop postnatal bleeding

ಇಟಲಿ, ಆಸ್ಟ್ರೇಲಿಯ ಮುಂತಾದ ಕೆಲವು ದೇಶಗಳಲ್ಲಿಯೂ ಭಾರತದಲ್ಲಿಯೂ ಈ ಕ್ಲಾವಿಸೆಪ್ಸ್‌ ಶಿಲೀಂಧ್ರವನ್ನು ಪ್ರಾಯೋಗಿಕವಾಗಿ ಬೆಳೆಸಿ ಅದರಿಂದ ಎರ್ಗಟನ್ನು ಉತ್ಪಾದಿಸುವ ಪ್ರಯತ್ನಗಳು ಸಾಗಿವೆ. ಹೀಗೆ ರೈ, ಬಾರ್ಲಿ, ಓಟ್ಸ್‌ ಮುಂತಾದ ಬೆಳೆಗಳ ಮೇಲೆ ಕೆಲವು ಬೀಜಾಣುಗಳಿಂದ ಕೃತಕವಾಗಿಯೂ ಉದ್ದೇಶಪುರ್ವಕವಾಗಿಯೂ ರೋಗಲಕ್ಷಣಗಳನ್ನು ಉಂಟುಮಾಡಿ ಆ ಬೆಳೆಗಳಲ್ಲಿ ಕ್ರಮೇಣ ಹೆಚ್ಚೆಚ್ಚು ಸ್ಕ್ಲೀರೋಷಿಯಂ ಅಥವಾ ಎರ್ಗಟ್ ಉತ್ಪತ್ತಿಯಾಗುವಂತೆ ಯೋಜಿಸುತ್ತಾರೆ. ಇದರಿಂದ ಒಂದು ರೀತಿಯಲ್ಲಿ ಎರ್ಗಟಿನ ವ್ಯವಸಾಯವೇ ಒಂದು ಮುಖ್ಯ ಕಸುಬಿನಂತೆ ಆರಂಭವಾಗಿ ಎರ್ಗಟಿನ ಉತ್ಪಾದನೆ ಹೆಚ್ಚುತ್ತಿದೆ. ಮುಂದೆ ಅವನ್ನು ಔಷಧ ಪ್ರಯೋಗಶಾಲೆಗಳಿಗೆ ಕಳುಹಿಸಿ ಅಲ್ಲಿ ಅವುಗಳಿಂದ ಔಷಧ ರೂಪದ ವಿಷವಸ್ತುಗಳನ್ನು (ಎರ್ಗಟೊಮಿನ್, ಎರ್ಗಟಾಕ್ಸಿನ್ ಇತ್ಯಾದಿ) ಹೊರತೆಗೆದು ಮಾರಾಟಕ್ಕೆ ಬಿಡುಗಡೆ ಮಾಡುತ್ತಾರೆ. ಎರ್ಗಟನ್ನು ಧಾನ್ಯಗಳಿಂದ ಬೇರ್ಪಡಿಸಲು ದೊಡ್ಡ ತಟ್ಟೆ ಅಥವಾ ಕಡಾಯಿಗಳಲ್ಲಿ ಶೇ. 20 ಉಪ್ಪುನೀರು ಹಾಕಿ ಅದರಲ್ಲಿ ಧಾನ್ಯವನ್ನು ಸುರಿಯುತ್ತಾರೆ. ಕಾಳುಗಳು ನೀರಿನಲ್ಲಿ ಮುಳುಗಿ ತಳಭಾಗದಲ್ಲಿ ಸಂಗ್ರಹಗೊಳ್ಳುತ್ತವೆ. ಆದರೆ ಎರ್ಗಟುಗಳು ನೀರಿನ ಮೇಲೆ ತೇಲುವುದರಿಂದ ಅವನ್ನು ಜಾಲರಿ, ಸೌಟುಗಳಲ್ಲಿ ಹೊರತೆಗೆದು, ಬಿಸಿಲಿನಲ್ಲಿ ಒಣಗಿಸಿ ಅನಂತರ ಸಣ್ಣ ಚೀಲ ಅಥವಾ ಪ್ಯಾಕೆಟುಗಳಲ್ಲಿ ತುಂಬಿ ಕಳುಹಿಸುತ್ತಾರೆ. ಮುಂದೆ ಪ್ರಯೋಗಶಾಲೆಗಳಲ್ಲಿ ಅವುಗಳಿಂದ ಸಸ್ಯಕ್ಷಾರಗಳನ್ನು ಹೊರತೆಗೆಯುತ್ತಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಎರ್ಗಟ್&oldid=1245752" ಇಂದ ಪಡೆಯಲ್ಪಟ್ಟಿದೆ