ಎಚ್. ಜಿ. ದತ್ತಾತ್ರೇಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಚ್. ಜಿ. ದತ್ತಾತ್ರೇಯ
ಜನನಏಪ್ರಿಲ್ ೨೦, ೧೯೪೨
ಚಿತ್ರದುರ್ಗ
ವೃತ್ತಿಚಲನಚಿತ್ರ ನಟರು

ಹರಿಹರ್ ಗುಂಡುರಾವ್ ದತ್ತಾತ್ರೇಯ (ಏಪ್ರಿಲ್ ೨೦, ೧೯೪೨)[೧], ಭಾರತೀಯ ವಾಯುಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್, ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ನಟರಾಗಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದವರಾಗಿದ್ದಾರೆ.

ಜೀವನ[ಬದಲಾಯಿಸಿ]

ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೆಯನವರು ಏಪ್ರಿಲ್ ೨೦, ೧೯೪೨ರಂದು ಚಿತ್ರದುರ್ಗದಲ್ಲಿ ಜನಿಸಿದರು.[೨] ಅವರ ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಓದಿದ್ದು ಎಂಜನಿಯರಿಂಗ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಎಂ.ಇ.ಪದವಿ ಪಡೆದವರು.[೩] ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್‌ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್‌ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ, ಅಲ್ಲಿನ ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಮಹತ್ವದ ಸೇವೆ ಸಲ್ಲಿಸಿದವರು. ಅವಿವಾಹಿತರಾಗಿ ತಮ್ಮ ಕಾಯಕ ಮತ್ತು ಕಲೆಯನ್ನು ಗಂಭೀರವಾಗಿ ಸ್ವೀಕರಿಸಿದವರು.

ಎಚ್ ಜಿ ದತ್ತಾತ್ರೇಯ ನಿಜವಾದ ಹೆಸರಾದರೂ ಅನೇಕರು ನನ್ನನ್ನು ದತ್ತಣ್ಣ ಎಂದೇ ಕರೆಯುತ್ತಾರೆ. ಚಿತ್ರದುರ್ಗದಲ್ಲಿ ೧೯೪೨ರಲ್ಲಿ ಹುಟ್ಟಿದ ನಾನು ಅಲ್ಲೇ ಹದಿನಾರು ವರ್ಷಗಳನ್ನು ಕಳೆದೆ. ನಾನು ಹುಟ್ಟುವುದಕ್ಕೆ ಮೊದಲೇ ನನ್ನ ತಂದೆ ಹರಿಹರ ಗುಂಡೂರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿ, ಚಿತ್ರದುರ್ಗಕ್ಕೆ ಬಂದು ನೆಲೆಸಿದ್ದರು.

ಆ ದಿನಗಳಲ್ಲಿ ದೇಶದ ಎಲ್ಲಕಡೆಗಳಲೂ ಸ್ವಾತಂತ್ರ್ಯ ಚಳವಳಿಯ ಕಾವು. ರಾಜರ ಆಳ್ವಿಕೆಯಲ್ಲಿದ್ದ ಚಿತ್ರದುರ್ಗದ ಜನತೆ ಅದರ ಬಗ್ಗೆ ಹೆಚ್ಚಿನ ಗಮನಹರಿಸಿರಲಿಲ್ಲ. ಗುಂಡೂರಾಯರು ತಮ್ಮ ಪುಣೆಯ ನಂಟಿನಿಂದಾಗಿ, ಬಾಲಗಂಗಾಧರ ತಿಲಕರ ಕೆಲಸಗಳಿಂದ ಪ್ರೇರಿತರಾಗಿದ್ದರು. ಹಾಗಾಗಿ ಚಿತ್ರದುರ್ಗದ ಜನತೆಯಲ್ಲೂ ದೇಶಪ್ರೇಮ-ಸ್ವದೇಶಿ ನಿಲುವು-ಸ್ವಾತಂತ್ರ್ಯ ಚಳವಳಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ನಿರ್ಧಾರ ಕೈಗೊಂಡರು.

ಆ ನಿಟ್ಟಿನಲ್ಲಿ ಅವರು ಮಾಡಿದ ಕೆಲಸ ಅಂದರೆ ಮನೆ ಮನೆಗೂ ತೆರಳಿ, ಅಲ್ಲಿ ದಿನಪತ್ರಿಕೆಯನ್ನು ಓದುತ್ತಿದ್ದರು. ಚಳವಳಿಯ ಬಗ್ಗೆ ಮಾಹಿತಿ ನೀಡುವುದು, ತನ್ಮೂಲಕ ಪ್ರಚಲಿತ ವಿಷಯಗಳನ್ನು ತಿಳಿಸುವುದು ಅವರ ಉದ್ದೇಶವಾಗಿತ್ತು. ಈ ವಿನೂತನ ಪ್ರಕ್ರಿಯೆಗೆ ಜನ ಸ್ಪಂದಿಸುತ್ತಿದ್ದರು. ಇದರ ಮುಂದಿನ ಕಾರ್ಯಕ್ರಮವಾಗಿ ಒಂದು ವೇದಿಕೆಯಾಗಿ 'ತಿಲಕ ಸಂಘ' ಸ್ಥಾಪಿಸಿದರು. ಆ ಮೂಲಕ ಚಳವಳಿಗೆ ಪೂರಕವಾದ ವಿಚಾರ ವಿನಿಮಯಕ್ಕೆ ಅನುವು ಮಾಡಿಕೊಟ್ಟರು. ಸ್ವದೇಶಿ ಭಾವನೆಯನ್ನು ಬೆಳೆಸುವ ಸಲುವಾಗಿ, ಚರಕದ ಪರಿಚಯ ಮಾಡಿಸಿ, ನೂಲು ತೆಗೆಯುವುದಕ್ಕೆ ಪ್ರೇರೇಪಿಸಿದರು. 'ಖಾದಿಯ ಮಹಿಮೆ' ಎನ್ನುವ ಪುಸ್ತಕವನ್ನು ಬರೆದರು. ಸಾಮೂಹಿಕವಾಗಿ ವಿದೇಶಿ ವಸ್ತ್ರದಹನ ಮಾಡಿದರು. ಗಣೇಶೋತ್ಸವವನ್ನು ಪ್ರಾರಂಭಿಸಿ, ಅಲ್ಲಿ ಬೇರೆ ಬೇರೆ ಊರಿನ ಮುಂಚೂಣಿ ನಾಯಕರ ಉಪನ್ಯಾಸಗಳನ್ನು ಏರ್ಪಡಿಸಿ ಚಳವಳಿಯ ಸ್ವರೂಪವನ್ನು ತಿಳಿಸಿಕೊಟ್ಟರು. ಹೀಗೆ ಬಹಳ ವರ್ಷಗಳು ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.

ತಂದೆಯ ಈ ಗುಣ ನನ್ನ ಬದುಕಿನ ಟರ್ನಿಂಗ್ ಪಾಯಿಂಟ್ ಎಂದು ಹೇಳಬಹುದು. ಪ್ರೌಢಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ತಾಯಿ ವೆಂಕಮ್ಮ ನನ್ನಿಂದ ಸಾರ್ವಜನಿಕ ಲೈಬ್ರರಿಯಿಂದ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದರು. ಅವರು ಓದಿದ ಪುಸ್ತಕಗಳ ಬಗ್ಗೆ ನನಗೆ ವಿವರಿಸುತ್ತಿದ್ದರು. ಕಥೆ ಹೇಳುತ್ತಿದ್ದರು. ಇದು ನನ್ನೊಳಗೆ ಪುಸ್ತಕದ ಆಸಕ್ತಿಯನ್ನು ಬೆಳೆಸಿತು. ಹೋಮ್ ವರ್ಕ್ ಇರಲಿಲ್ಲ. ಮನೆಯಲ್ಲಿ ಮತ್ತೆ ಆವತ್ತಿನ ಪಾಠ ಓದುವುದು ಅಷ್ಟಾಗಿ ಇರಲಿಲ್ಲ. ತರಗತಿಯಲ್ಲಿ ಕೇಳಿಸಿಕೊಂಡಿದ್ದಷ್ಟೆ. ಆಗಿನ ಉಪಾಧ್ಯಾಯರಲ್ಲಿ ನಮ್ಮ ಏಕಾಗ್ರತೆಯನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇತ್ತು. ಹಾಗಾಗಿ ತರಗತಿಯಲ್ಲಿ ಕೇಳಿದ್ದಷ್ಟೂ ನನ್ನ ಸ್ಮತಿಪಟಲದಲ್ಲಿ ನಿಂತು ಬಿಡುತ್ತಿತ್ತು. ಪರೀಕ್ಷೆಯಲ್ಲಿ ಬರೆಯುವಾಗ ಅವೆಲ್ಲಾ ತಾವೇ ತಾವಾಗಿ ಕಣ್ಣ ಮುಂದೆ ಬಂದು ಬಿಡುತ್ತಿತ್ತು. ಆ ಉಪಾಧ್ಯಾಯರುಗಳ ನಿಷ್ಠೆ, ಬದ್ಧತೆ, ವಿದ್ವತ್ತು, ಬೋಧನಾಕ್ರಮ ಮತ್ತು ಸಾರ್ಥಕ ಬದುಕಿಗೆ ಅವರು ಕೊಟ್ಟ ಮಾರ್ಗದರ್ಶನ ಇವೆಲ್ಲಾ ನನ್ನ ಮೇಲೆ ಗಾಢ ಪ್ರಭಾವ ಬೀರಿದವು. ಮುಂದೆ ನಾನು ಎಚ್ ಎ ಎಲ್ ಸ್ಟಾಫ್ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಾಗ ಆ ಉಪಾಧ್ಯಾಯರುಗಳಿಂದ ಕಲಿತ ಮಾರ್ಗವನ್ನೇ ಅನುಸರಿಸಿದೆ. ಅದನ್ನು ನನ್ನ ವಿದ್ಯಾರ್ಥಿಗಳು ಮೆಚ್ಚಿದ್ದರು. ವಿದ್ಯಾರ್ಥಿಯಾಗಿದ್ದಾಗ ಆಟಪಾಠಗಳೆರಡಲ್ಲೂ ಮುಂದೇ ಇದೆ. ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಪ್ರಥಮ ರ್ಯಾಂಕ್ ಪಡೆದು ಭಾರತ ಸರ್ಕಾರದ ಮೆರಿಟ್ ಸ್ಕಾಲರ್ಶಿಪ್ ಪಡೆದುಕೊಂಡೆ. ಅಮ್ಮ ಇದನ್ನು ಅಪ್ಪನ ಮುಂದೆ ಹೇಳಿ ಸಂಭ್ರಮಿಸಿದಾಗ, 'ರ್ಯಾಂಕ್ ಬಂದಿದೆ ಅಂತ ತಲೆ ತಿರುಗಬಾರದು ಎಂದ ಹೇಳವನಿಗೆ' ಎಂದು ಪ್ರತಿಕ್ರಿಯಿಸಿದ್ದರು. ನನಗದು ಪಾಠವಾಯಿತು. ಸಾಮಾನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಪಿಯುಸಿ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುವುದೇ ಕಷ್ಟವೆನ್ನುತ್ತಾರೆ. ನಾನು ರಾಜ್ಯಕ್ಕೆ ಎರಡನೆಯ ರ್ಯಾಂಕ್ ಪಡೆದೇ. ಐಐಟಿ ಸೇರಬೇಕೆಂದು ಮದ್ರಾಸಿಗೆ ಹೋದೆ. ಆದರೆ ಹೆಚ್ಚು ಕಾಲ ಇರಲಾಗಲಿಲ್ಲ. ನನ್ನೂರು, ನನ್ನಭಾಷೆಯ ಸೆಳೆತ, ನನ್ನನ್ನು ಬೆಂಗಳೂರಿಗೆ ಕರೆತಂತು. ಯೂನಿವರ್ಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಸೇರಿಕೊಂಡೆ. ಕಾಲೇಜಿನಲ್ಲಿ ನಾಟಕ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಡನ್ಲಪ್ ಗರ್ಲ್ ನಾಟಕವೊಂದರಲ್ಲಿ ಹೆಣ್ಣಾಗಿ ನಟಿಸಿದರು. ರಂಗಕರ್ಮಿ ಈರಣ್ಣ ಅವರನ್ನು ಈ ಪಾತ್ರ ಸೆಳೆಯಿತು. ನಂತರದ ದಿನಗಳಲ್ಲಿ ಸ್ವಲ್ಪ ಕಾಲ ಎನ್ಜಿಇಎಫ್ನಲ್ಲಿ ಎಲೆಕ್ಟ್ರಿಸಿಟಿ ಬೋರ್ಡ್ನಲ್ಲಿ ಕೆಲಸ ಮಾಡಿದೆ. ಆಮೇಲೆ ವಾಯುಸೇನೆ ಸೇರಬೇಕೆಂದು ನಿರ್ಧರಿಸಿದೆ. ಮನೆಯಲ್ಲಿ ಎಲ್ಲರೂ ಒಪ್ಪಿದರು. ಆದರೆ ತಾಯಿ ಸ್ವಲ್ಪ ಹಿಂದೇಟು ಹಾಕಿದರು. ಸೇರಲು ನಮೂದಿಸಿದ ದಿನ 'ಅಮವಾಸ್ಯೆ'ಯಾದ್ದರಿಂದ ಸುತಾರಾಂ ಆ ದಿನ ಬೇಡ ಅಂದರು ತಾಯಿ. ಎಲ್ಲಿಯ ಮಿಲಿಟರಿ ಎಲ್ಲಿಯ ಅಮಾವಾಸ್ಯೆ! ಆದರೂ ತಾಯಿಯ ಮಾತು ಎಷ್ಟೇ ಮುಜುಗರವಾದರೂ, ತಾಯಿಯ ಮಾತಿನಲ್ಲೇ ಬೇರೆ ದಿನ ಬರಲು ಒಪ್ಪಿಗೆಯನ್ನು ಕೇಳಲು ಹೋದಾಗ, ಎದುರಾದದ್ದು ಸಂಸ್ಥೆಯ ಮುಖ್ಯಸ್ಥ ಗ್ರೂಪ್ ಕೆಡೆಟ್ ನರಸಿಂಹನ್. ಆ ಹೆಸರು ಕೇಳಿದಾಗ ಸ್ವಲ್ಪ ಧೈರ್ಯವಾಯಿತು. ಅವರಿಗೆ ಅಮಾವಾಸ್ಯೆಯ ಮಹತ್ವ ಗೊತ್ತಿರುತ್ತೆ ಅನ್ನುವ ಧೈರ್ಯ. ಅಂದುಕೊಂಡಂತೆಯೇ ನರಸಿಂಹನ್ ಅವರು ಒಪ್ಪಿ ಬಿಟ್ಟರು. ೧೩ ಅಕ್ಟೋಬರ್ ೧೯೬೪ ಐಎಎಫ್ ಸೇರಿದೆ. ಸದ್ಯ ೧೩ ಕೆಟ್ಟ ನಂಬರ್ ಅಂತ ನನಗೆ ಆಗ ಯಾರೂ ಹೇಳಲಿಲ್ಲ! ಅದರಿಂದ ಯಾವ ತೊಂದರೆಯೂ ಇದುವರೆಗೂ ಆಗಿಲ್ಲ. ಐಎಎಫ್ಗೆ ಸೇರಿದ್ದೇ ಜೀವನದ ಮುಖ್ಯ ತಿರುವು. ಸೆಪ್ಟೆಂಬರ್ ೧೯೬೫ರಲ್ಲಿ ಇನ್ನೇನು ತರಬೇತಿ ಮುಗಿಯುವುದರಲ್ಲಿತ್ತು. ಅಷ್ಟರಲ್ಲೇ ಭಾರತ-ಪಾಕಿಸ್ತಾನ ಯುದ್ಧ ಪ್ರಾರಂಭವಾಗಿತ್ತು. ನನ್ನನ್ನು ದೆಹಲಿಗೆ ಕಳಿಸಿಬಿಟ್ಟರು. ರೈಲಿನಲ್ಲಿ ನಾಗಪುರದವರೆಗೂ ಸಾಮಾನ್ಯ ಪ್ರಯಾಣ. ಅಲ್ಲಿಂದ ಮುಂದೆ ನೋಡಿದ್ದು ಮರೆಯಲಾಗದ ಅನುಭವ. ರೈಲು ನಿಂತ ಜಾಗದಲ್ಲೆಲ್ಲ ಜನರು ಬಂದು ಯುದ್ಧಕ್ಕೆ ಹೊರಟ ನನಗೆ ಮತ್ತು ಸಂಗಡಿಗರಿಗೆ ಕುಂಕುಮ ಹಚ್ಚಿ, ಆರತಿ ಎತ್ತಿ, ಸಿಹಿಕೊಟ್ಟು ಬೀಳ್ಕೊಡುಗೆ ನೀಡುತ್ತಿದ್ದರು. ಅಲ್ಲಿಂದ ಮುಂದೆ ಪಾಲಂ, ಕಾನ್ಪುರ, ಅಂಡಮಾನ್, ಬೆಂಗಳೂರು, ಚಂಡೀಗಢ, ಭಟಿಂಡಾ, ದೆಹಲಿಗೆ ೨-೩ ವರ್ಷಕ್ಕೊಮ್ಮೆ ವರ್ಗಾವಣೆ. ಈ ಮಧ್ಯೆ ಜೋಧಪುರ, ಲಖನೌ, ಆಗ್ರಾ, ಕೊಯಂಬತ್ತೂರು, ಪಾಣಿಪತ್, ಅಂಬಾಲ, ಆದಂಪುರ ಇತ್ಯಾದಿ ಜಾಗಗಳಿಗೆ ಭೇಟಿ. ಈ ದಿನಗಳಲ್ಲಿ ಮಾಡಿದ ಕೆಲಸಗಳು, ಬೆಳೆದ ಸ್ನೇಹವರ್ಗ, ಕಲಿತ ಪಾಠಗಳು ಇವೆಲ್ಲ ನನ್ನ ಜೀವನದ ಸಂಗಾತಿಗಳು. ಅದಕ್ಕೇ ಜೀವನದ ಈ ತಿರುವು ಬಹಳ ಇಷ್ಟ. ೧೯೭೫ರಿಂದ ೭೭ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಎಂಇ ಪದವಿ ಪಡೆದೆ. ಇದೊಂದು ತಿರುವು. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಆಗಿರುವ ಎಲ್ಲ ಬದಲಾವಣೆಗಳ ಬಗೆ ಮಾಹಿತಿ ಪಡೆದ ಸೌಭಾಗ್ಯ. ೧೯೭೮ರಿಂದ ೧೯೮೩ ಮರೆಯಲಾಗದ ದಿನಗಳು. ದೆಹಲಿಯಲ್ಲಿ ಪೋಸ್ಟಿಂಗ್. ಕೆಲಸ ಮಾಡುವ ಸ್ಥಳ, ಏರ್ ಹೆಡ್ ಕ್ವಾರ್ಟರ್ಸ್ ರಾಜಪಥ್ನಲ್ಲಿ ಸಾಂಗತ್ಯ. ಕನ್ನಡ ಭಾರತೀ ಸಾಂಸ್ಕೃತಿಕ ಸಂಸ್ಥೆ ಪಕ್ಕದಲ್ಲೇ ದೆಹಲಿಯ ಸಾಂಸ್ಕತಿಕ ವಲಯ- ಮಂಡಿಹೌಸ್ ಸಮುಚ್ಛಯ. ಅಲ್ಲೇ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ, ಕಮಾನಿ ಥೀಯೇಟರ್, ಶ್ರೀರಾಮ್ ಸೆಂಟರ್ ಥೀಯೇಟರ್ ಇತ್ಯಾದಿ. ಪ್ರತಿದಿನ, ಬೇರೆ ಬೇರೆ ಭಾಷೆಗಳ ನಾಟಕ ನೋಡುವುದು, ಚರ್ಚಿಸುವುದು, ಪ್ರಮುಖ ರಂಗಕರ್ಮಿಗಳೊಡನೆ ಒಡನಾಟ. 'ನಹಿ ನಹಿರಕ್ಷತಿ', 'ನಾನೆ ಬಿಜ್ಜಳ', 'ಹಿಟ್ಟಿನ ಹುಂಜ' ನಾಟಕಗಳಲ್ಲಿ ನಟನೆ. ಯು ಪ್ರಭಾಕರ ರಾವ್ ನಿರ್ದೇಶನದ 'ನಾನೆ ಬಿಜ್ಜಳ' ನಾಟಕಕ್ಕೆ ಎಲ್ಲ ಪತ್ರಿಕೆಗಳಲ್ಲಿ ಅದ್ಭುತ ಪ್ರತಿಕ್ರಿಯೆ. ಅದರಲ್ಲೂ ಬಿಜ್ಜಳ ಪಾತ್ರಧಾರಿಯಾದ ನನಗೆ ಪ್ರತ್ಯೇಕ ಮೆಚ್ಚುಗೆ. ಒಂದು ಪತ್ರಿಕೆ ಹೇಳಿದ್ದು, 'ಟ್ರೂಲಿ ಓವರ್ವೆಲ್ಮಿಂಗ್ ಪರ್ಫಾರ್ಮೆನ್ಸ್' (ಅದ್ಭುತ ಅಭಿನಯ). ಬಿಜಾಪುರದಲ್ಲಿ, ಬೆಂಗಳೂರಿನಲ್ಲಿ ಪ್ರದರ್ಶನ ಮತ್ತು ಮೆಚ್ಚುಗೆ ಸಿಕ್ಕಿತು. (ಧಾರವಾಡದ ಪ್ರದರ್ಶನಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕೊಕ್). ಇದಲ್ಲವೆ ತಿರುವು ಎಂದರೆ? ೧೯೮೩ರಿಂದ ಮುಂದೆ ಬೆಂಗಳೂರು-ಹೈದರಾಬಾದಿನಲ್ಲಿ ಕೆಲಸ. ೧೯೮೭ರಿಂದ ೧೯೯೪ ಎಚ್‌ಎಎಲ್ನಲ್ಲಿ ಕೆಲಸ. ೧೯೯೪ರಲ್ಲಿ ಸ್ವಯಂ ನಿವೃತ್ತಿ. ಪೂರ್ಣ ಪ್ರಮಾಣದಲ್ಲಿ ನಟನೆಗೆ ಹಚ್ಚಿಕೊಂಡಿದ್ದು (ನಾಟಕ-ಸಿನಿಮಾ-ಟಿವಿ). ಇದು ದೊಡ್ಡ ತಿರುವು. ಇಂಜಿನಿಯರಿನಿಂದ ನಟ. ಇದುವರೆಗೂ ಸುಮಾರು ೧೬೦ ಚಲನಚಿತ್ರಗಳು, ೪೦ ನಾಟಕಗಳು ಮತ್ತು ಅನೇಕ ಟಿವಿ ಧಾರವಾಹಿಗಳಲ್ಲಿ ನಟನೆ. 'ಮುನ್ನುಡಿ'ಗೆ ಅತ್ಯುತ್ತಮ ಸಹನಟ ಪ್ರಶಸ್ತಿ, ಅದೇ ಸಿನಿಮಾಗೆ ಉತ್ತಮ ನಟ ರಾಜ್ಯ ಪ್ರಶಸ್ತಿ, 'ಅಸ್ಫೋಟ' ಸಿನಿಮಾಗೆ ಉತ್ತಮ ಸಹನಟ ರಾಜ್ಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ನಾಟ್ಯಪ್ರಶಸ್ತಿಗಳು ಈಗ ಸಾಧಕನ ಪಟ್ಟವನ್ನು ಕೊಟ್ಟಿವೆ.

ಚಿಕ್ಕಂದಿನಿಂದ ನಾಟಕದ ಗೀಳು[ಬದಲಾಯಿಸಿ]

ಮಾಧ್ಯಮಿಕ ಶಾಲೆಯಿಂದಲೇ ದತ್ತಣ್ಣನವರಿಗೆ ನಾಟಕದ ಗೀಳು. ಅಕ್ಕಪಕ್ಕದ ಹುಡುಗರನ್ನು ಸೇರಿಸಿ ಮಾಡಿದ ಸೊಹ್ರಾಬ್-ರುಸ್ತುಂ ನಾಟಕ ಅವರಿಗೆ ಪ್ರಖ್ಯಾತಿ ತಂದಿತ್ತು. ತುಮಕೂರಿನ ಪ್ರೌಢಶಾಲೆಯ ನಾಟಕದಲ್ಲಿ ಅವರದ್ದು ಮದಕರಿ ನಾಯಕನ ಪಾತ್ರ. ಚಿತ್ರದುರ್ಗಕ್ಕೆ ಬರುತ್ತಿದ್ದ ಜಮಖಂಡಿ ಕಂಪನಿ, ಗುಬ್ಬಿ ಕಂಪನಿ ನಾಟಕಗಳ ಪ್ರಭಾವ ಅವರ ಮೇಲಿತ್ತು. ಚಿತ್ರದುರ್ಗದ ಪ್ರೌಢ ಶಾಲೆಯಲ್ಲಿ ಅಳಿಯ ದೇವರು ನಾಟಕದಲ್ಲಿ ರುಕ್ಕುಪಾತ್ರ, ದುರ್ಗದ ಹವ್ಯಾಸಿ ತಂಡ ಅಭಿನಯಿಸಿದ ದೇವದಾಸಿ ನಾಟಕದಲ್ಲಿ ಸೀತಾಲಕ್ಷ್ಮಿ ಪಾತ್ರ, ಬೆಂಗಳೂರಿನ ಅಂತರ ಕಾಲೇಜು ನಾಟಕ ಸ್ಪರ್ಧೆಗಾಗಿ ‘ಡನ್‌ಲಪ್ ಗರ್ಲ್’ನಲ್ಲೂ ಅವರದು ಹೆಣ್ಣು ಪಾತ್ರ. ಹೀಗೆ ಮೊದ ಮೊದಲು ಅವರಿಗೆ ಸಿಕ್ಕಿದ್ದು ಹೆಣ್ಣು ಪಾತ್ರಗಳೇ! ಏರ್‌ ಫೋರ್ಸ್ ಅಡ್ಮಿನಿಸ್ಟ್ರೇಟಿವ್ ಕಾಲೇಜಿನಲ್ಲಿ ಸಹಾ ಅಂಬಾಸಿಡರ್‌ ಪಾತ್ರದಲ್ಲಿ ಅಭಿನಯಿಸಿ ಪ್ರಶಂಸೆ ಪಡೆದರು.

ಹವ್ಯಾಸಿ ರಂಗಭೂಮಿಯಲ್ಲಿ ಪ್ರಖ್ಯಾತಿ[ಬದಲಾಯಿಸಿ]

ದೆಹಲಿಯ ಕನ್ನಡ ಭಾರತಿ ಸಂಸ್ಥೆಯಲ್ಲಿ ಬಿ.ವಿ.ಕಾರಂತರ ನಹಿ ನಹಿ ರಕ್ಷತಿ, ಸಿಕ್ಕು, ಎಚ್ಚಮನಾಯಕ, ನಾನೇ ಬಿಜ್ಜಳ ಮುಂತಾದ ನಾಟಕಗಳಲ್ಲಿ ದತ್ತಣ್ಣ ನಟಿಸಿದ್ದರು. ‘ನಾನೇ ಬಿಜ್ಜಳ’ ನಾಟಕದಲ್ಲಿ ಬಿಜ್ಜಳನ ಪಾತ್ರ ದತ್ತಣ್ಣನವರಿಗೆ ಬಹಳ ಖ್ಯಾತಿ ತಂದು ಕೊಟ್ಟ ಪಾತ್ರ. ಹಲವಾರು ಗಣ್ಯರ ಅಪೇಕ್ಷೆಯ ಮೇರೆಗೆ ಅದು ಹಲವು ಬಾರಿ ಮರು ಪ್ರದರ್ಶನಗೊಂಡ ನಾಟಕ. ಎಂ.ಎಸ್.ಸತ್ಯು ರವರ ’ಕುರಿ’ನಾಟಕಕ್ಕೆ ನೇಪಥ್ಯದಲ್ಲಿ ದತ್ತಣ್ಣನವರದು ಪ್ರಮುಖಪಾತ್ರ. ಬೆಂಗಳೂರಿನಲ್ಲಿ ಸುಧೀಂದ್ರರವರ ‘ಮಳೆ ನಿಲ್ಲುವವರೆಗೂ’, ಸಮುದಾಯದ ‘ಕೊಂದುಕೂಗಿತ್ತು ನೋಡಾ’, ‘ಸಂಕ್ರಾಂತಿ’, ‘ರುಡಾಲಿ’, ‘ಈ ಮುಖದವರು’, ‘ಪುರುಷ್’, ‘ಹಾವು ಏಣಿ’, ‘ರಕ್ತ ಕಲ್ಯಾಣ್’, ‘ನೆರಳು’, ‘ಸಿಂ’ಗಾರವ್ವ ಮತ್ತು ಅರಮನೆ’. ‘ಕುರುಕ್ಷೇತ್ರದಿಂದ ಕಾರ್ಗಿಲ್’ವರೆಗೆ ಹೀಗೆ ಹಲವಾರು ನಾಟಕಗಳಲ್ಲಿನ ಪ್ರಮುಖ ಪಾತ್ರದಿಂದ ದತ್ತಣ್ಣ ಪ್ರಸಿದ್ಧಿ ಪಡೆದರು.

ಚಲನಚಿತ್ರ ಕ್ಷೇತ್ರಕ್ಕೆ ತಡವಾದ ಆಗಮನ[ಬದಲಾಯಿಸಿ]

ದತ್ತಣ್ಣನವರು ಸಿನಿಮಾ ರಂಗಕ್ಕೆ ಬಂದದ್ದು ಬಹಳ ತಡವಾಗಿ, ಅಂದರೆ 45 ವರ್ಷ ತುಂಬಿದ ಮೇಲೆ. ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್‌ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಾಗಿ ಬೆಂಗಳೂರಿನಲ್ಲಿರಲ್ಲಿಲ್ಲ. ಭಾರತದ ಇತರ ನಗರಗಳಾದ ಚಂಡೀಗಢ, ದೆಹಲಿ, ಅಂಡಮಾನ್‌ ಮುಂತಾದೆಡೆ ಇದ್ದರು. 1987ರಲ್ಲಿ ಅವರು ಬೆಂಗಳೂರಿನ ಎಚ್.ಎ.ಎಲ್‌ಗೆ ವರ್ಗವಾಗಿ ಬಂದರು. ಟಿ.ಎಸ್‌. ರಂಗ ಅವರು ಮೊದಲ ಬಾರಿಗೆ 1 ಘಂಟೆ ಅವಧಿಯ ‘ಉದ್ಭವ್‌’ ಎಂಬ ಸಿನಿಮಾದಲ್ಲಿ ‘ದತ್ತಣ್ಣ’ನವರನ್ನು ಪರಿಚಯಿಸಿದರು. ಅದಾದ ನಂತರ ನಾಗಾಭರಣರ ‘ಆಸ್ಫೋಟ’ ಚಿತ್ರ ಬಂತು. ಆ ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರಕಿತು. ನಂತರ ‘ಶರವೇಗದ ಸರದಾರ’, ‘ಮಾಧುರಿ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದರು. ಆಮೇಲೆ ‘ವೈದ್ಯೋ ನಾರಾಯಣೋ ಹರಿ’ ಎಂಬ ಧಾರವಾಹಿ ಮೂಲಕ ದೂರದರ್ಶನಕ್ಕೂ ಕಾಲಿಟ್ಟರು. ಆಗ ಕೆಲಸದಲ್ಲಿದ್ದುದರಿಂದ ಹೆಚ್ಚಾಗಿ ನಟಿಸಲಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರು. 1994ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿದ ನಂತರದಲ್ಲಿ ನಿರಂತರವಾಗಿ ಸಿನಿಮಾ, ನಾಟಕ, ಟಿವಿ ಮತ್ತು ರೇಡಿಯೋಗಳಲ್ಲಿ ನಟಿಸುತ್ತಾ ಸಾಗಿದ್ದಾರೆ.

ಮಹತ್ವದ ಪಾತ್ರಗಳು[ಬದಲಾಯಿಸಿ]

ದತ್ತಣ್ಣನವರು ಅತ್ಯಂತ ವ್ಯಾಪಕವಾಗಿ ಕನ್ನಡಿಗರ ಮನ ಸೆಳೆದದ್ದು ‘ಮಾಯಾ ಮೃಗ’ ಧಾರಾವಾಹಿಯ ಶಾಸ್ತ್ರಿಗಳಾಗಿ. ಈಗಲೂ ದತ್ತಣ್ಣನವರೆಂದರೆ ಮನಸ್ಸಿಗೆ ಅತ್ಯಂತ ಆಪ್ತವಾಗಿ ನಿಲ್ಲುವ ಪಾತ್ರವದು. ತಮ್ಮ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡುವ ಅಪ್ಪಟ ಕಲಾವಿದರು ದತ್ತಣ್ಣ. ‘ಆಸ್ಫೋಟ’ದ ಖಳ, ‘ಅತಿಥಿ’ಯ ಅಸಹಾಯಕ ವೈದ್ಯ, ‘ಮುನ್ನುಡಿ’ಯ ಹುಡುಗಿ ಹುಡುಕ, ‘ಉಲ್ಟಾ ಪಲ್ಟಾ’ದ ತಲೆ ಚಚ್ಚಿಕೊಳ್ಳುವ ಇನ್ಸ್‌ಪೆಕ್ಟರು...,, ‘ಮುಸ್ಸಂಜೆ’ಯ ಶೇಷಣ್ಣ, ‘ರಾಮಾ ಶಾಮಾ ಭಾಮಾ’ದ ರಮೇಶನ ತಂದೆ, ‘ಬೆಟ್ಟದ ಜೀವ’ದ ಗೋಪಾಲಯ್ಯ ಮತ್ತು ಇತ್ತೀಚೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿಗಳಲ್ಲಿ ವಿಶೇಷ ಗೌರವ ತಂದ ಭಾರತ್ ಸ್ಟೋರ್ಸ್ ಚಿತ್ರದಲ್ಲಿ ಅಂಗಡಿಯ ಮಾಲೀಕ ಗೋವಿಂದ ಶೆಟ್ಟರ ಪಾತ್ರ. ಹೀಗೆ ತರಾವರಿ ಪಾತ್ರಗಳಿಗೆ ಜೀವ ತುಂಬಿರುವ ದತ್ತಣ್ಣ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದ ಗಮನಾರ್ಹ ಪ್ರತಿಭೆ. ಕಿರುತೆರೆಯಲ್ಲಿ ತೀರಾ ಗಂಭೀರ ಪಾತ್ರಗಳಿಂದ ಹಿಡಿದು ಡಂಡಂ ಡಿಗಡಿಗ’ ದಂತಹ ಧಾರಾವಾಹಿಗಳವರೆಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ಅವರು.

ಪ್ರಶಸ್ತಿ ಗೌರವಗಳ ಲೋಕದಲ್ಲಿ[ಬದಲಾಯಿಸಿ]

ಗಿರೀಶ್‌ ಕಾಸರವಳ್ಳಿ, ಜಿ.ವಿ. ಐಯ್ಯರ್‌, ಬಿ.ವಿ.ಕಾರಂತ್‌, ಶೇಷಾದ್ರಿ, ಸೀತಾರಾಂ, ನಾಗಾಭರಣ, ಟಿ.ಎಸ್. ರಂಗ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದ ಪ್ರಖ್ಯಾತ ನಿರ್ದೇಶನಗಳಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ದತ್ತಣ್ಣ ಅವರು ಅಭಿನಯಿಸಿರುವ ಈ ಮಹಾನ್ ನಿರ್ದೇಶಕರ ಬಹುತೇಕ ಚಿತ್ರಗಳು ರಾಷ್ಟ್ರ ಪ್ರಶಸ್ತಿಗಳಿಸಿವೆ ಎಂಬುದು ಗಮನಾರ್ಹ. ಆಸ್ಫೋಟ, ಕ್ರೌರ್ಯ, ಕೊಟ್ರೇಶಿ ಕನಸು, ಚೈತ್ರದ ಚಿಗುರು, ಚಿನ್ನಾರಿ ಮುತ್ತ, ಉಲ್ಟಾ ಪಲ್ಟಾ, ಮುನ್ನುಡಿ, ಮುಸ್ಸಂಜೆ, ಬೆಟ್ಟದ ಜೀವ, ಭಾರತ್ ಸ್ಟೋರ್ಸ್ ಮುಂತಾದ ಪಾತ್ರಗಳು ದತ್ತಣ್ಣನವರಿಗೆ ಖುಷಿ ಕೊಟ್ಟಿವೆ. ಮುನ್ನುಡಿ ಚಿತ್ರದ ಅಭಿನಯಕ್ಕೆ ದತ್ತಣ್ಣನವರಿಗೆ ರಾಷ್ಟ್ರಪ್ರಶಸ್ತಿ ದೊರಕಿದೆ. ಇತ್ತೀಚೆಗೆ ಪ್ರಕಟವಾದ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಪ್ರಶಸ್ತಿ ಪಡೆದ ಪಿ. ಶೇಷಾದ್ರಿಯವರ ನಿರ್ದೇಶನದ ‘ಭಾರತ್ ಸ್ಟೋರ್ಸ್’ ಚಿತ್ರದಲ್ಲಿನ ಅವರ ಅಭಿನಯಕ್ಕೆ ತೀರ್ಪುಗಾರರ ವಿಶೇಷ ಮೆಚ್ಚುಗೆಯ ಗೌರವ ಸಂದಿದೆ. ಆಸ್ಪೋಟ ಚಿತ್ರಕ್ಕೆ ಅವರಿಗೆ ಶ್ರೇಷ್ಠ ನಟರೆಂಬ ರಾಜ್ಯಪ್ರಶಸ್ತಿ ಮತ್ತು ಹಲವಾರು ಬಾರಿ ಪೋಷಕ ನಟ ರಾಜ್ಯ ಪ್ರಶಸ್ತಿಗಳೂ ಅಲ್ಲದೆ ಅನೇಕ ಸಂಘಸಂಸ್ಥೆಗಳ ಪ್ರಶಸ್ತಿ ಗೌರವಗಳೂ ಸಂದಿವೆ.

ತಮ್ಮ ಕಾಯಕವನ್ನು ಗೌರವಿಸುವವರನ್ನು ಇಡೀ ಸಮಾಜವೇ ಗೌರವಿಸುತ್ತದೆ. ಹಾಗಾಗಿ ದತ್ತಣ್ಣನವರು ಎಲ್ಲೆಡೆ ಗೌರವಾನ್ವಿತರು. ಇಂತಹ ಕಲಾವಿದರು ಕಲಾರಂಗದಲ್ಲಿ ಇನ್ನೂ ಇರುವುದರಿಂದಲೇ ಕಲಾರಂಗ ಇನ್ನೂ ತನ್ನ ಮಹತ್ವವನ್ನು ಅಲ್ಲಲ್ಲಿ ಉಳಿಸಿಕೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. "ಇಂದು ಜನುಮದಿನ: ಎಚ್. ಜಿ. ದತ್ತಾತ್ರೇಯ". Vijay Karnataka. Retrieved 12 April 2023.
  2. "ದತ್ತಣ್ಣ's biography and latest film release news". FilmiBeat. Retrieved 12 April 2023.
  3. "Weekend With Ramesh: ವಾಯುಸೇನೆಗೆ ರಾಷ್ಟ್ರಪತಿಗಳಿಂದ ನೇರವಾಗಿ ನೇಮಕಗೊಂಡವರು ದತ್ತಣ್ಣ!". Vijay Karnataka. Retrieved 12 April 2023.