ಎಚ್.ಎಸ್.ದೊರೆಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿಯವರು [೧೦ ಏಪ್ರಿಲ್ ೧೯೧೮ - ೨೬ ಮೇ ೨೦೨೧] ಭಾರತದ ಸ್ವಾತಂತ್ರ್ಯ ಹೋರಾಟಗಾರರು. ಕರ್ನಾಟಕದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರು ಸ್ವಾತಂತ್ರ್ಯಾನಂತರದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಮತ್ತು ಹೋರಾಟಗಳಲ್ಲೂ ಸಹ ಪಾಲ್ಗೊಂಡಿದ್ದಾರೆ. ರೈತ, ಕಾರ್ಮಿಕ ಚಳುವಳಿ, ಪರಿಸರ ಹೋರಾಟ, ನಾಗರೀಕ ಚಳುವಳಿ, ಭೂಒತ್ತುವರಿ ವಿರುದ್ಧದ ಹೋರಾಟ ಮುಂತಾದ ಹಲವು ಚಳುವಳಿಗಳಲ್ಲಿ ಮುಂದಾಳುವಾಗಿದ್ದರು. ಅನೇಕ ಇತರ ಚಳುವಳಿಗಳಿಗೆ ನೈತಿಕ ಮತ್ತು ಸಾಂಕೇತಿಕ ಬೆಂಬಲವಾಗಿ ಪಾಲ್ಗೊಂಡಿದ್ದರು.

ಎಚ್.ಎಸ್.ದೊರೆಸ್ವಾಮಿ

ಆರಂಭಿಕ ಜೀವನ[ಬದಲಾಯಿಸಿ]

ಎಚ್.ಎಸ್.ದೊರೆಸ್ವಾಮಿಯವರು ತಂದೆ ಶ್ರೀನಿವಾಸ ಅಯ್ಯರ್ ಮತ್ತು ತಾಯಿ ಲಕ್ಷ್ಮಮ್ಮರಿಗೆ ನಾಲ್ಕನೆಯ ಮಗ. ಅವರು ೫ ವರ್ಷದವನಿದ್ದಾಗ ತಂದೆ ಮರಣದ ನಂತರ ಅಜ್ಜನ ಜೊತೆ ಬೆಳೆದರು. ಹಾರೋಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಬೆಂಗಳೂರಿಗೆ ಬಂದರು. ಕೋಟೆ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ 'ಕಿರಿಯ ತರುಣರ ಸಂಘ' ಸ್ಥಾಪಿಸಿದ್ದರು. ಮಹಾತ್ಮ ಗಾಂಧಿಯವರ "ಮೈ ಅರ್ಲಿ ಲೈಫ್" ಪುಸ್ತಕವು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸೇರಲು ಪ್ರಭಾವ ಬೀರಿತು. ಅವರ ಮಧ್ಯಂತರ ಕಾಲೇಜು ಶಿಕ್ಷಣದ ಸಮಯದಲ್ಲಿ, ಅವರು ಬೆಂಗಳೂರಿನ ಕಬ್ಬನ್ ಪೇಟೆ ಬಳಿ ಬನ್ನಪ್ಪ ಉದ್ಯಾನವನದಲ್ಲಿ ನಡೆದ ಸ್ವಾತಂತ್ರ್ಯ ಜಾಗೃತಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಅಲ್ಲಿ ಅವರ ನಾಯಕನನ್ನು ಬಂಧಿಸಲಾಯಿತು. ಮರುದಿನ ವಿದ್ಯಾರ್ಥಿಗಳು ಮುಷ್ಕರವನ್ನು ಕರೆದರು. ಪೊಲೀಸರು ನಂತರ ಲಾಠಿ ಪ್ರಹಾರ ಮಾಡಿದರು.[೧]

ಸ್ವಾತಂತ್ರ್ಯ ಚಳವಳಿಗೆ ಪ್ರವೇಶ[ಬದಲಾಯಿಸಿ]

ಅನೇಕ ನಾಯಕರು ಆ ಸಮಯದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ೧೯೪೨ ರ ಹೊತ್ತಿಗೆ, ಅವರು ಸೆಂಟ್ರಲ್ ಕಾಲೇಜಿನಲ್ಲಿ ತಮ್ಮ ಬಿ.ಎಸ್.ಸಿ ಯನ್ನು ಪೂರ್ಣಗೊಳಿಸಿದರು ಮತ್ತು ಉಪನ್ಯಾಸಕರಾಗಿ ಕಾಲೇಜಿನಲ್ಲಿ ಸೇರಿಕೊಂಡರು. ೧೯೪೨ರ ಆಗಸ್ಟಲ್ಲಿ ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡರು. ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎ. ಜಿ. ರಾಮಚಂದ್ರ ರಾವ್ ಅವರೊಡಗೂಡಿ ಬ್ರಿಟೀಷರ ವಿರುದ್ಧ ಸಣ್ಣ ಪ್ರಮಾಣದ ಬಾಂಬುಗಳನ್ನು ಹೂಡಿ ಸರ್ಕಾರಿ ದಾಖಲೆಗಳನ್ನು ನಾಶ ಮಾಡುವ ಹೋರಾಟದಲ್ಲಿದ್ದಾಗ ಈ ಪ್ರಕರಣದಲ್ಲಿ ದೊರೆಸ್ವಾಮಿಯವರನ್ನು ೧೪ ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು. ಅವರ ಸಹೋದರ ಎಚ್.ಎಸ್. ಸೀತಾರಾಂ ಅವರು ಕೂಡ ಹೋರಾಟಗಾರರಾಗಿದ್ದು ಭಾರತ ಸ್ವಾತಂತ್ರ್ಯಾ ನಂತರ ಬೆಂಗಳೂರಿನ ಮೇಯರ್ ಆಗಿದ್ದರು. ಅವರು ೧೪ ತಿಂಗಳ ಕಾಲ ಮೊದಲ ಬಾರಿಗೆ ಜೈಲಿನಲ್ಲಿದ್ದಾಗ ಅವರು ಅಹಿಂಸೆ ಮತ್ತು ಸತ್ಯಾಗ್ರಹದ ಗಾಂಧಿಯವರ ಆದರ್ಶಗಳನ್ನು ಅನುಸರಿಸಲು ನಿರ್ಧರಿಸಿದರು.

ಪತ್ರಿಕಾರಂಗದಲ್ಲಿ[ಬದಲಾಯಿಸಿ]

ಕಾರಾಗೃಹದಿಂದ ಬಿಡುಗಡೆಯಾದ ನಂತರ ದೊರೆಸ್ವಾಮಿಯಾವರು 'ಸಾಹಿತ್ಯ ಮಂದಿರ' ಎಂಬ ಪ್ರಕಾಶನ ಸಂಸ್ಥೆ ಮತ್ತು ಪುಸ್ತಕ ಮಳಿಗೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. ಅನಂತರ ಗೆಳೆಯರೊಬ್ಬರು ನಡೆಸುತ್ತಿದ್ದ 'ಪೌರವಾಣಿ' ಎಂಬ ಪತ್ರಿಕೆಯನ್ನು ಮುನ್ನಡೆಸಲು ಮೈಸೂರಿಗೆ ತೆರಳಿದರು. ಈ ಪತ್ರಿಕೆಯು ಆಗಿನ ಮದ್ರಾಸ್ ಪ್ರೆಸಿಡೆನ್ಸಿಯ 'ಹಿಂದೂಪುರ'ದಿಂದ ಪ್ರಕಟವಾಗುತ್ತಿತ್ತು. ೧೯೪೭ರ ಕಾಲದಲ್ಲಿ ಮೈಸೂರು ಸಂಸ್ಥಾನವು ಭಾರತದೊಂದಿಗೆ ವಿಲೀನವಾಗುವಂತೆ ಒತ್ತಡ ಹೇರಲು ನಡೆದ ಮೈಸೂರು ಚಲೋ ಚಳವಳಿಯಲ್ಲಿ ಹಲವಾರು ಕಾಂಗ್ರಸ್ಸಿನ ಮುಖಂಡರನ್ನು ಬಂಧಿಸಲಾಯಿತು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಅಮಾನತ್ತಿನಲ್ಲಿಡಲಾಗಿತ್ತು. ಆಗ ದೊರೆಸ್ವಾಮಿ ಮತ್ತು ಇತರ ಹಲವು ಪತ್ರಕರ್ತರು ಭೂಗತ ತಾಣಗಳಿಂದ ಪತ್ರಿಕೆಗಳನ್ನು ಹೊರತರುವುದರಲ್ಲಿ ತೊಡಗಿದ್ದರು. ಶೇಷಗಿರಿ ಎಂಬ ಶಿಕ್ಷಕ ಈ ಪತ್ರಿಕಾ ಮುಚ್ಚುವಿಕೆಯ ಸಂದರ್ಭದಲ್ಲಿ ವೃತ್ತಪತ್ರಿಕೆ ಪ್ರಸಾರ ಮಾಡಲು ನೆರವಾದರು[೨] ದೊರೆಸ್ವಾಮಯವ್ರು ಪುಸ್ತಕಮಳಿಗೆಗೆ ಸಾಹಿತ್ಯ ಪ್ರಮುಖರಾದ ಆರ್. ಕೆ. ನಾರಾಯಣ್ ಮತ್ತು ಕೆ.ಎಸ್. ನರಸಿಂಹಸ್ವಾಮಿ ಆಗಾಗ ಭೇಟಿ ನೀಡುತ್ತಿದ್ದರು. ಆ ದಿನಗಳಲ್ಲಿ ಇದು ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿತು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಗಾಂಧಿ ಸೇವಾ ಪುರಸ್ಕಾರ, ಬಸವ ಪುರಸ್ಕಾರ, ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ

ವಿವಾದ[ಬದಲಾಯಿಸಿ]

ಸಾವರ್ಕರ್ ಒಬ್ಬ ಹೇಡಿ ನನ್ನನ್ನು ಸಾವರ್ಕರ್ ಗೆ ಹೋಲಿಸಬೇಡಿ ಎಂದು ದೊರೆಸ್ವಾಮಿ ಹೇಳಿದ್ದು ವಿವಾದವಾಯಿತು[೩]. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕಿಸ್ತಾನದ ಏಜೆಂಟ್ ಎಂದು ಟೀಕಿಸಿದರು. ಈ ಬಗ್ಗೆ ಅವರನ್ನು ಕ್ಷಮೆ ಕೇಳುವಂತೆ ಆಗ್ರಹಿಸಿದಾಗ ಕ್ಷಮೆ ಕೇಳಲು ನಿರಾಕರಿಸಿದರು[೪]. ಆರ್.ಟಿ.ಐ ನಲ್ಲಿ ಕೇಳಿದ ಪ್ರಶ್ನೆಗೆ ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರ ಎಂಬುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಸರಕಾರ ಉತ್ತರಿಸಿತ್ತು.[೫]

ನಿಧನ[ಬದಲಾಯಿಸಿ]

ದೊರೆಸ್ವಾಮಿಯವರು ತಮ್ಮ ೧೦೪ ವರ್ಷ ವಯಸ್ಸಿನಲ್ಲಿ ೨೬ ಮೇ ೨೦೨೧ ರಂದು ನಿಧನರಾದರು.[೬] ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಅವರು ಅದಾಗಿ ಕೆಲದಿನಗಳ ಆನಂತರ ಮರಣ ಹೊಂದಿದರು.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. https://yourstory.com/2017/08/hs-doreswamy-freedom-fighter-bengaluru
  2. https://timesofindia.indiatimes.com/city/bengaluru/fighting-for-causes-doreswamy-all-set-to-step-into-centenary-year/articleshow/58087251.cms
  3. ಹೇಡಿ ಸಾವರ್ಕರ್ ಗೆ ನನ್ನ ಹೋಲಿಸಬೇಡಿ : ದೊರೆಸ್ವಾಮಿ
  4. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯನ್ನ ಪಾಕ್ ಏಜೆಂಟ್ ಎಂದ ಬಿಜೆಪಿ ಶಾಸಕ
  5. ಸ್ವಾತಂತ್ರ್ಯಕ್ಕಾಗಿ ದುಡಿದಿಲ್ಲ ದೊರೆ (ವಿಶ್ವವಾಣಿ ೨೦-೦೬-೨೦೨೦)
  6. Freedom fighter H.S. Doreswamy passes away, Deccan Herald, May 26,2021