ಇನ್ವರ್ಟೇಸ್
ಇನ್ವರ್ಟೇಸ್ ಜೀವಿಗಳ ದೇಹದಲ್ಲಿ ಸಕ್ಕರೆಯ (ಬಳಸುವ ಸಕ್ಕರೆಯ ಹೆಸರು ಸುಕ್ರೋಸ್) ಜಲವಿಚ್ಛೇದನ ಕ್ರಿಯೆಯನ್ನು (ಹೈಡ್ರಾಲಿಸಿಸ್) ವರ್ಧಿಸುವ ಕಿಣ್ವ (ಎಂಜೈಮ್).[೧][೨] ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಕ್ಕರೆಗಳ ಸಂಯೋಜನೆಯಿಂದ ರಚನೆಗೊಳ್ಳುವ ದ್ವಿಶರ್ಕರವಾದ ಸಕ್ಕರೆ ವಿಭಜನೆಹೊಂದಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ (ಲೆವ್ಯುಲೋಸ್) ಸಕ್ಕರೆಯ ಅಣುಗಳನ್ನು ಬಿಡುಗಡೆ ಮಾಡುತ್ತದೆ.
C12H22O11 + H2O ಇನ್ವರ್ಟೇಸ್ C6H12O6 + C6H12O6 ಸಕ್ಕರೆ ನೀರು → ಗ್ಲೂಕೋಸ್ ಫ್ರಕ್ಟೋಸ್
ಈ ಕಿಣ್ವ ಯೀಸ್ಟ್, ಕೀಟ, ಸಸ್ಯ ಮತ್ತು ಸ್ತನಿಗಳಲ್ಲಿ ಉತ್ಪತ್ತಿಯಾಗುತ್ತದೆ. ಮನುಷ್ಯನಲ್ಲಿ ಇದು ಚಿಕ್ಕ ಕರುಳಿನಲ್ಲಿದೆ.
ವಿಂಗಡಣೆ
[ಬದಲಾಯಿಸಿ]ಸಕ್ಕರೆಯ ವಿಭಜನೆ ಎರಡು ಬಂಧಗಳೆಡೆಯಲ್ಲಿ ಜರುಗಬಹುದು. ಛೇದನೆ ಹೊಂದುವ ಬಂಧಗಳ ಆಧಾರದ ಮೇಲೆ ಇನ್‌ವರ್ಟೇಸ್ ಕಿಣ್ವಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಒಂದನೆಯ ಬಂಧದ ಛೇದನೆಯನ್ನು ವರ್ಧಿಸುವ ಕಿಣ್ವಗಳನ್ನು β ಫ್ರಕ್ಟೋಫ್ಯೂರನೋ ಸೈಡೇಸ್ I ಎಂಬುದಾಗಿಯೂ ಎರಡನೆಯ ಬಂಧವನ್ನು ಛೇದಿಸುವ ಕಿಣ್ವಗಳನ್ನು ಗ್ಲೂಕೋಸಿಡೊ ಇನ್‌ವರ್ಟೇಸ್ II ಗಳೆಂದೂ ಕರೆಯಲಾಗಿದೆ. ಈ ಕಿಣ್ವಗಳು ಸಕ್ಕರೆಯನ್ನು ಛೇದಿಸುವ ಕ್ರಿಯೆಯನ್ನು ಮಾತ್ರವಲ್ಲದೆ, ಗ್ಲೂಕೋಸ್ ಅಥವಾ ಫ್ರಕ್ಟೋಸ್ ಅಂಶಗಳನ್ನು ಇತರ ಪರಿಗ್ರಾಹ (ಎಕ್ಸೆಪ್ಟರ್) ಅಣುಗಳಿಗೆ ವರ್ಗಾಯಿಸುವ ಕ್ರಿಯೆಯನ್ನು ವರ್ಧಿಸುತ್ತದೆ. I ನೆಯ ಗುಂಪಿಗೆ ಸೇರಿದ ಕಿಣ್ವಗಳು ಫ್ರಕ್ಟೋಸ್ ಅಂಶವನ್ನೂ IIನೆಯ ಗುಂಪಿನ ಕಿಣ್ವಗಳು ಗ್ಲೂಕೋಸ್ ಅಂಶವನ್ನೂ ವರ್ಗಾಯಿಸುತ್ತವೆ. ಸಕ್ಕರೆ, ಅರಾಬಿನೋಸ್ ಸಕ್ಕರೆ, ಮೀಥೈಲ್ ಆಲ್ಕೋಹಾಲ್, ಮದ್ಯಸಾರದ ಅಣುಗಳು ಪರಿಗ್ರಾಹಿಗಳಂತೆ ವರ್ತಿಸುತ್ತವೆ. ಸಕ್ಕರೆ ಪರಿಗ್ರಾಹಿಯಾದಾಗ ಫ್ರಕ್ಟೋಸ್ ಅಂಶಗಳ ವರ್ಗಾವಣೆಯಿಂದ, ಕೆಸ್ಟೋಸ್, ಐಸೊಕೆಸ್ಟೋಸ್ ಮತ್ತು ನಿಯೋಕೆಸ್ಟೋಸ್ ಎಂಬ ತ್ರಿಶರ್ಕರಗಳೂ ಇತರ ಬಹುಶರ್ಕರಗಳೂ ಉತ್ಪತ್ತಿಯಾಗುತ್ತವೆ.
ಚಟುವಟಿಕೆಯನ್ನು ಅಳೆಯುವ ವಿಧಾನಗಳು
[ಬದಲಾಯಿಸಿ]ಇನ್‌ವರ್ಟೇಸ್ ಕಿಣ್ವದ ಚಟುವಟಿಕೆಯನ್ನು ಸಾಮಾನ್ಯವಾಗಿ ಎರಡು ವಿಧಾನಗಳಿಂದ ಅಳೆಯುತ್ತಾರೆ. ಸಕ್ಕರೆ ಅಪಕರ್ಷಕ ವಸ್ತುವಲ್ಲ. ಕಿಣ್ವದೊಂದಿಗೆ ಹುದುಗೇರಿಸಿದಾಗ ಅಪಕರ್ಷಕ ಗುಣವುಳ್ಳ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಸಕ್ಕರೆಗಳು ಉತ್ಪತ್ತಿಯಾಗುವುದರಿಂದ ಅಪಕರ್ಷಕ ಶಕ್ತಿಯನ್ನು ಅಳೆದು ಚಟುವಟಿಕೆಯ ಮಟ್ಟವನ್ನು ಗೊತ್ತು ಮಾಡಬಹುದು. ಹುದುಗೇರಿಸಿಟ್ಟ ಸಕ್ಕರೆಯ ದ್ರಾವಣದ ಮೂಲಕ ಧ್ರುವೀಕೃತ ಬೆಳಕಿನ ಕಿರಣವನ್ನು ಹಾಯಿಸಿ ಕಿರಣಸಮತಲದ ದಿಕ್ಕಿನಲ್ಲಿ ಉಂಟಾಗುವ ವ್ಯತ್ಯಾಸವನ್ನು ಪೋಲಾರಿಮೀಟರಿನಲ್ಲಿ ಅಳೆಯುವುದು ಇನ್ನೊಂದು ವಿಧಾನ. ಸಕ್ಕರೆ ಧ್ರುವೀಕೃತ ಕಿರಣದ ಸಮತಲವನ್ನು (ಪರೀಕ್ಷಕನ) ಬಲ ಪಾರ್ಶ್ವಕ್ಕೂ (ಧನಚಿಹ್ನೆ) ಫ್ರಕ್ಟೋಸ್ ಎಡಪಾರ್ಶ್ವಕ್ಕೂ (ಋಣಚಿಹ್ನೆ) ತಿರುಗಿಸುತ್ತದೆ. ಸಕ್ಕರೆಯ ವಿಭಜನೆಯ ಪರಿಣಾಮವಾಗಿ ಧ್ರುವೀಕೃತ ಕಿರಣ ಸಮತಲದ ದಿಕ್ಕು ಎಡಕ್ಕೆ ತಿರುಗುತ್ತದೆ. ಸಂಪ್ರದಾಯದ ಪ್ರಕಾರ ಧನಚಿಹ್ನೆ ಋಣಚಿಹ್ನೆಗೆ ಪರಿವರ್ತನೆಯಾದಾಗ ಆ ಕ್ರಿಯೆಗೆ ಪ್ರತಿಲೋಮಕ್ರಿಯೆ (ಇನ್ವರ್ಷನ್) ಎನ್ನುತ್ತಾರೆ. ಬದಲಾವಣೆಯ ಪ್ರಮಾಣವನ್ನು ಪೋಲಾರಿಮೀಟರಿನಲ್ಲಿ ಕೋನಮಾಪಕ ವಿಧಾನದಿಂದ ಅಳೆಯಬಹುದು.
ಇನ್ವರ್ಟೇಸ್‍ನ ಉಪಯೋಗಗಳು
[ಬದಲಾಯಿಸಿ]ದೇಹದಲ್ಲಿ ಸಕ್ಕರೆಯ ವಿಭಜನೆಗೆ ಇನ್‌ವರ್ಟೇಸ್ ನೆರವಾಗುತ್ತದೆ; ಔದ್ಯೋಗಿಕವಾಗಿ ಸಕ್ಕರೆಪಾಕ (ಸಿರಪ್) ಮತ್ತು ಕ್ಯಾಂಡಿಗಳ ತಯಾರಿಕೆಗೆ ಉಪಯೋಗವಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Myrbäck K (1960). "Invertases". In Boyer PD, Lardy H, Myrbäck K (eds.). The Enzymes. Vol. 4 (2nd ed.). New York: Academic Press. pp. 379–396.
- ↑ Neumann NP, Lampen JO (February 1967). "Purification and properties of yeast invertase". Biochemistry. 6 (2): 468–75. doi:10.1021/bi00854a015. PMID 4963242.