ವಿಷಯಕ್ಕೆ ಹೋಗು

ಅ.ನಾ.ಪ್ರಹ್ಲಾದರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅ.ನಾ.ಪ್ರಹ್ಲಾದ ರಾವ್‌ರವರು, ಕನ್ನಡಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ೪೦,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇದುವರೆವಿಗೂ ಇವರು ರಚಿಸಿರುವ ಪದಬಂಧಗಳಿಗಾಗಿ ಹನ್ನೆರಡು ಲಕ್ಷ ಸುಳುಹುಗಳನ್ನು ನೀಡಿದ್ದಾರೆ. ಇವರ ಪದಬಂಧಗಳು ಕನ್ನದದ ಪ್ರಮುಖ ಪ್ರತ್ರಿಕೆಗಳು ಹಾಗು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಪದಬಂಧ ರಚನೆಯಲ್ಲಿ ಭಾರತದಲ್ಲೇ ಇವರು ಅಗ್ರಗಣ್ಯರು ಎಂದು ಹೇಳಲಾಗಿದೆ. ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತಿ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ್ದಾರೆ

ಜೀವನ[ಬದಲಾಯಿಸಿ]

ಅ.ನಾ.ಪ್ರಹ್ಲಾದರಾವ್ ಕೋಲಾರ ಜಿಲ್ಲೆಯ ಅಬ್ಬಣಿ ಗ್ರಾಮದಲ್ಲಿ ಜುಲೈ ೨೪, ೧೯೫೩ರಂದು ಜನಿಸಿದರು. ತಂದೆ ಎ.ಆರ್.ನಾರಾಯಣರಾವ್, ತಾಯಿ ಕಾವೇರಮ್ಮ. ಅಬ್ಬಣಿ, ಬೆಂಗಳೂರು, ಕೋಲಾರದಲ್ಲಿ ವ್ಯಾಸಂಗ ಮುಗಿಸಿ, ವಿಜ್ಞಾನ ಪದವೀಧರರಾದರು. ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ೧೯೭೫ರಲ್ಲಿ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.

ವೃತ್ತಿಜೀವನ[ಬದಲಾಯಿಸಿ]

ಕೋಲಾರದಿದ ಪ್ರಕಟಗೊಳ್ಳುವ ಕೋಲಾರಪತ್ರಿಕೆ ದೈನಿಕದಲ್ಲಿ ಪತ್ರಕರ್ತರಾಗಿ (೧೯೭೫) ವೃತ್ತಿ ಆರಂಭಿಸಿದರು. ಕೋಲಾರದಿಂದ ಪ್ರಕಟಗೊಳ್ಳುತ್ತಿರುವ ಹೊನ್ನುಡಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾಗಿ (1979) ಮೂರು ವರ್ಷ ಕಾಲ ಆ ಪತ್ರಿಕೆಯನ್ನು ಮುನ್ನೆಡೆಸಿದರು. ಜಿಲ್ಲಾ ಮಟ್ಟದಲ್ಲಿ ಪ್ರಕಟಗೊಳ್ಳುವ ದೈನಿಕಗಳಲ್ಲಿ ಪ್ರತಿ ನಿತ್ಯ ಸಂಪಾದಕೀಯ ಲೇಖನ ಬರೆದ ಹೆಗ್ಗಳಿಕೆಗೆ `ಹೊನ್ನುಡಿ` ಪಾತ್ರವಾಯಿತು.

೧೯೮೩ರಲ್ಲಿ ವಾರ್ತಾ ಇಲಾಖೆ ಸೇರ್ಪಡೆಗೊಂಡು, ಸುದ್ದಿ ಮತ್ತು ಪತ್ರಿಕಾ ಶಾಖೆಯಲ್ಲಿ ಕಾರ್ಯನಿರ್ವಹಿಸಿದರು. ೧೯೮೮ರಿಂದ ೧೯೯೦ರವರೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಹಾಯಕ ಸಂಪರ್ಕ ಅಧಿಕಾರಿಯಾಗಿ, ೧೯೯೦ರಲ್ಲಿ ಹಾಸನ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಕಛೇರಿಯಲ್ಲಿ ವಾರ್ತಾ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ೧೯೯೨ರಿ0ದ ೧೯೯೬ರವರೆಗೆ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯಾಲಯದಲ್ಲಿ ಕೆಲಸ ಮಾಡಿ ಅನುಭವಹೊಂದಿದರು. ೧೯೯೬ರಿಂದ ೨೦೦೦ರವರೆವಿಗೂ ಮಂಡ್ಯ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ೨೦೦೦ರಿ0ದ ೨೦೦೩ರವರೆವಿಗೂ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ೨೦೦೩ರಿಂದ ಬೆಂಗಳೂರಿನಲ್ಲಿ ವಾರ್ತಾ ಇಲಾಖೆಯ ಸುದ್ದಿ ಶಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ೨೦೦೪ರ ನವೆಂಬರ್‍ನಿಂದ ೨೦೧೧ರ ಆಗಸ್ಟ್ ತಿಂಗಳವರೆಗೆ ಸುಮಾರು ಏಳು ವರ್ಷಗಳ ಕಾಲ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಲಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2013ರಲ್ಲಿ ರಾಮನಗರ ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸಿ, 2013ರ ಜುಲೈ ತಿಂಗಳಾಂತ್ಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದರು. 2014ರಿಂದ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಬಿ.ಎಂ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಧನೆ[ಬದಲಾಯಿಸಿ]

ಪದಬಂಧ ಹಾಗೂ ಲೇಖನಗಳು[ಬದಲಾಯಿಸಿ]

೧೯೮೪ರಲ್ಲಿ ಪತ್ರಿಕೆಗಳಿಗೆ ಪದಬಂಧಗಳನ್ನು ರಚಿಸಲು ಆರಂಭಿಸಿದ ಇವರು ಇಲ್ಲಿಯವರೆವಿಗೂ 40,000 ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗೊಳ್ಳುವ ನಿತ್ಯ ಪದಬಂಧಗಳಲ್ಲಿ ಬಹುಪಾಲು ಪ್ರಹ್ಲಾದ್ ಅವರದೆ. ದಿನ ಪತ್ರಿಕೆಗಳ ಪುರವಣಿಗಳಲ್ಲಿ ಹಾಗೂ ನಿಯತಕಾಲಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಮಾನ್ಯ ಬಂಧಗಳೊಂದಿಗೆ, ಸಿನಿಮಾ, ಸಾಹಿತ್ಯ, ಅಪರಾಧ, ವಿಜ್ಞಾನ, ಪುರಾಣ, ತಿಂಡಿ-ತಿನಿಸು, ಕ್ರೀಡೆ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಪದಬಂಧಗಳನ್ನು ಇವರು ರಚಿಸಿದ್ದಾರೆ. ಇದುವರೆವಿಗೂ 8 ಸಾವಿರ ಸಿನಿಮಾ ಪದಬಂಧಗಳು ಸೇರಿದಂತೆ 40 ಸಾವಿರಕ್ಕೂ ಮಿಗಿಲು ಪದಬಂಧಗಳು ಇವರಿಂದ ರಚಿತಗೊಂಡಿವೆ. ಇದಕ್ಕಾಗಿ ಪ್ರಹ್ಲಾದ್ ಅವರು ಸುಮಾರು 12 ಲಕ್ಷ ಸುಳುಹುಗಳನ್ನು ಬರೆದಿದ್ದಾರೆ. ಇವರು ರಚಿಸಿದ ಪದಬಂಧಗಳು, ಕರ್ನಾಟಕದ ಪ್ರಮುಖ ಪತ್ರಿಕೆಗಳಾದ, ಪ್ರಜಾವಾಣಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಮಂಗಳ, ಬಾಲಮಂಗಳ, ತರಂಗ, ಈ ಸಂಜೆ, ಅರಗಿಣಿ, ಪ್ರಿಯಾಂಕ, ಚಿತ್ರ, ಕಂದಾಯವಾತೆ೯ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರತಿನಿತ್ಯ `ವಿಜಯಕರ್ನಾಟಕ`, `ಕನ್ನಡಪ್ರಭ`, `ಸಂಯುಕ್ತಕರ್ನಾಟಕ` ಪತ್ರಿಕೆಗಳಲ್ಲಿ ಇವರು ನಿತ್ಯ ಪದಬಂಧ ರಚಿಸಿದ್ದಾರೆ. ಪ್ರತಿ ನಿತ್ಯ ಪದಬಂಧ ಪ್ರಕಟಿಸಲಾರಂಭಿಸಿದ ಹೆಗ್ಗಳಿಕೆ ವೈ.ಎನ್.ಕೆ ಸಾರಥ್ಯದ `ಕನ್ನಡಪ್ರಭ` ಪತ್ರಿಕೆಯದಾದರೆ, ಈ ಪತ್ರಿಕೆಗಾಗಿ ಮೊದಲು ಪದಬಂಧ ಬರಯಲಾರಂಭಿಸಿದವರು ಅ.ನಾ.ಪ್ರಹ್ಲಾದರಾವ್. `ಪ್ರಜಾವಾಣಿ` ಸಿನಿಮಾರಂಜನೆ ಪುರವಣಿಯಲ್ಲಿ ಸುಮಾರು 15 ವರ್ಷಗಳ ಕಾಲ ಪ್ರತಿ ಶುಕ್ರವಾರ ಇವರ ಸಿನಿಮಾ ಪದಬಂಧ ಪ್ರಕಟಗೊಂಡಿದೆ. `ಮಂಗಳ` ವಾರ ಪತ್ರಿಕೆಯಲ್ಲಿ ಕಳೆದ 25 ವರ್ಷಗಳಿಂದ ಪ್ರತಿವಾರ ಪದಬಂಧ ಹಾಗೂ ಪದಾನ್ವೇಷಣೆ ಕ್ವಿಜ್ ಪ್ರಕಟವಾಗುತ್ತಿವೆ. `ಬಾಲಮಂಗಳ` ಪಾಕ್ಷಿಕ ಪತ್ರಿಕೆಯಲ್ಲಿ ಕನ್ನಡ ಸುಳಿವುಗಳ ಮೂಲಕ ಇಂಗ್ಲಿಷ್ ಪದಗಳನ್ನು ತುಂಬಿಸುವ ವಿಶಿಷ್ಟ ಪದಬಂಧ ಹಾಗೂ ಸಾಮಾನ್ ಜ್ಞಾನ ಕ್ವಿಜ್ ಪ್ರಕಟಗೊಂಡಿದೆ. `ಪ್ರಿಯಾಂಕ` ಮಾಸ ಪತ್ರಿಕೆಗಾಗಿ ಸುಮಾರು 12 ವರ್ಷಗಳಿಂದ ಪದಬಂಧ ಸಿದ್ಧಪಡಿಸಿಕೊಡುತ್ತಿದ್ದಾರೆ. ರವಿ ಬೆಳಗೆರೆ ಸಂಪಾದಕತ್ವದಲ್ಲಿ ಪುನರಾರಂಭಗೊಂಡ `ಕರ್ಮವೀರ` ವಾರಪತ್ರಿಕೆಗಾಗಿ ಮೊದಲ ಸಂಚಿಕೆಯಿಂದ ಪದಸಂಪದ ಬರೆದುಕೊಟ್ಟ ಖ್ಯಾತಿಯೂ ಪ್ರಹ್ಲಾದ್ ಅವರದೆ. `ಕರ್ಮವೀರ` ಸಾಪ್ತಾಹಿಕಕ್ಕಾಗಿ ಚರ್ವಿತಚರ್ವಣ ಹಾಗೂ ಒಳಗುಟ್ಟು ಹೆಸರಿನ ವಿಶೇಷ ಫಜಲ್ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸುತ್ತಿರುವ `ಕಂದಾಯ ವಾರ್ತೆ` ಮಾಸ ಪತ್ರಿಕೆಗಾಗಿ ಕಂದಾಯ ಇಲಾಖೆಗೆ ಪ್ರಸ್ತುತವೆನಿಸುವ ಪದಬಂಧ ರಚಿಸುತ್ತಿದ್ದಾರೆ. ಚಲನಚಿತ್ರ ಮಾಸಿಕ `ಚಿತ್ರ` ಪತ್ರಿಕೆಗಾಗಿ ಪದಬಂಧ ಹಾಗೂ ಸಿನಿಮಾ ಕ್ವಿಜ್ ಬರೆದುಕೊಡುತ್ತಿದ್ದಾರೆ. `ಈಸಂಜೆ` ಪತ್ರಿಕೆಗಾಗಿ ಪ್ರತಿವಾರ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಏಕಮೇವ ಸಿನಿಮಾ ಸಾಪ್ತಾಹಿಕ `ಅರಗಿಣಿ` ಮೊದಲ ಸಂಚಿಕೆಯಿಂದ ಇವರ ಗಿಣಿಬಂಧ ಪ್ರಕಟಿಸುತ್ತಾ ಬಂದಿದೆ.

`ಸಿಲ್ಲಿಲಲ್ಲಿ` ಹಾಗೂ `ಪಾಪಪಾಂಡು` ಧಾರಾವಾಹಿಗಳನ್ನು ಆಧರಿಸಿದ ಪದಬಂಧ ಪ್ರತಿ ಭಾನುವಾರ `ವಿಜಯಕರ್ನಾಟಕ` ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. `ಜನವಾಹಿನಿ` ದಿನ ಪತ್ರಿಕೆ ಪ್ರತಿ ಭಾನುವಾರ ಇವರ ಪದವಾಹಿನಿ ಪ್ರಕಟಿಸಿದೆ. ಸಂಯುಕ್ತಕರ್ನಾಟಕ ಪ್ರತಿ ಭಾನುವಾರ ಇವರ ಪೋಣಿಸುಪದವ ಬಂಧವನ್ನು 15 ವರ್ಷಗಳ ಕಾಲ ಪ್ರಕಟಿಸಿದೆ. `ಮಂಗಳ` ವಾರಪತ್ರಿಕೆಗಾಗಿ ಒಂದು ವರ್ಷ ಕಾಲ ಕನ್ನಡದ ಖ್ಯಾತ ಬರಹಗಾರರ ಕಾದಂಬರಿಗಳನ್ನು ಆಧರಿಸಿ ಸಾಹಿತ್ಯ ಪದಬಂಧ ರಚಿಸಿದ್ದಾರೆ. ಹಂಪೆಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಜನಪ್ರಿಯ ವಿಜ್ಞಾನ ಪತ್ರಿಕೆ `ವಿಜ್ಞಾನಸಂಗಾತಿ`ಗಾಗಿ ಮೂರು ವರ್ಷ ಕಾಲ ವಿಜ್ಞಾನ ಪದಬಂಧ ಹಾಗೂ ವಿಜ್ಞಾನಕ್ಕೆ ಸಬಂಧಿಸಿದಂತೆ ಕ್ವಿಜ್ ಸಿದ್ಧಪಡಿಸಿಕೊಟ್ಟಿದ್ದಾರೆ. ಸಕಾಂರದ ಪ್ರಕಟಣೆಗಳಾದ `ಜನಪದ`, `ಯುವಕರ್ನಾಟಕ`, `ಮಾರ್ಚ್ಆಫ್ ಕರ್ನಾಟಕ` ಪತ್ರಿಕೆಗಳಿಗೂ ಇವರು ಪದಬಂಧ ರಚಿಸಿದ್ದಾರೆ. `ಸಂಚು`, `ಪಲೀಸ್ಫೈಲ್`, `ಪೊಲೀಸ್ ನ್ಯೂಸ್` ಪತ್ರಿಕೆಗಳಿಗಾಗಿ ಅಪರಾಧ ಪದಬಂಧಗಳನ್ನು ರಚಿಸಿದ್ದಾರೆ. `ಹೋಟೆಲ್ಪತ್ರಿಕೆ`ಗಾಗಿ ತಿಂಡಿ ತಿನಿಸು ಪದಬಂಧ ಇವರಿಂದ ಸಿದ್ದಗೊಂಡಿದೆ. ಮುಂಬಯಿನಿಂದ ಪ್ರಕಟಗೊಳ್ಳುತ್ತಿದ್ದ `ಉದಯರಾಗ` ಹಾಗೂ ನವದೆಹಲಿಯಿಂದ ಪ್ರಕಟಗೊಳ್ಳುತ್ತಿರುವ `ದೆಹಲಿ ವಾರ್ತೆ` ದಿನ ಪತ್ರಿಕೆಗಳಿಗಾಗಿ ನಿತ್ಯ ಪದಬಂಧ ರಚಿಸಿದ್ದಾರೆ. ಮದರಾಸಿನಿಂದ ಪ್ರಕಟಗೊಳ್ಳುತ್ತಿದ್ದ ಚಂದಮಾಮ ಅವರ ಜನಪ್ರಿಯ ಮಾಸಿಕಗಳಾದ `ವಿಜಯಚಿತ್ರ` ಹಾಗು `ವನಿತಾ` ಪತ್ರಿಕೆಗಳಿಗಾಗಿ ಹಲವಾರು ವರ್ಷ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದ ಮೊದಲ ಕನ್ನಡ ಸುದ್ದಿಜಾಲ `ಕರ್ನಾಟಕ ನ್ಯೂಸ್ ನೆಟ್`ಗಾಗಿ ಇವರು ಸಿದ್ದಪಡಿಸಿಕೊಡುತ್ತಿದ್ದ ಪದಬಂಧ ರಾಜ್ಯದ ಹಲವಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಭಿಮಾನಿ ಪ್ರಕಾಶನ ಹೊರ ತರುತ್ತಿದ್ದ `ಅಭಿಮಾನಿ`, `ಅಭಿಮಾನ` ದಿನ ಪತ್ರಿಕೆ, `ತಾಯಿ`, `ಕ್ರೀಡಾಭಿಮಾನಿ` ಪತ್ರಿಕೆಗಳಿಗೆ ಹಲವು ವರ್ಷ ಕಾಲ ಪದಬಂಧಗಳನ್ನು ಬರೆದುಕೊಟ್ಟಿದ್ದಾರೆ. ಕನ್ನಡದ ಮೊದಲ ಪದಬಂಧಗಳಿಗೇ ಮೀಸಲಾಗಿ ಹೊರ ಬಂದ `ಶೃತಿ` ಪತ್ರಿಕೆಗಾಗಿ ಹಲವು ತಿಂಗಳು ಪ್ರತಿ ಬಾರಿಗೆ 50ರ0ತೆ ಪದಬಂಧಗಳನ್ನು ರಚಿಸಿದ್ದಾರೆ. ಚಲನಚಿತ್ರ ಪತ್ರಿಕೆಗಳಾದ `ರಂಗವಲ್ಲಿ`, `ಸ್ಟಾರ್`, `ಸಿನಿಮಾ ಮಕರಂದ` ಪತ್ರಿಕೆಗಳಿಗಾಗಿ ಚಲನಚಿತ್ರ ಪದಬಂಧಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಪ್ರಯೋಗಗೊಂಡ ಹಲವು ಪತ್ರಿಕೆಗಳ ಮೊದಲ ಸಂಚಿಕೆಗಳಲ್ಲ್ಲೇ ಇವರ ಪದಬಂಧ ಅಂಕಣ ಇತ್ತೆಂಬುದು ಗಮನಾರ್ಹ.

ಪದಬಂಧಗಳಷ್ಟೇ ಅಲ್ಲದೇ ಚಲನಚಿತ್ರ ಲೇಖನಗಳನ್ನು ಬರೆದಿದ್ದಾರೆ. `ಅರಗಿಣಿ` ಪತ್ರಿಕೆಗಾಗಿ ಸ್ಮರಣೀಯ ಚಿತ್ರಗಳು, ಕರ್ಮವೀರಕ್ಕಾಗಿ ಗತವೈಭವ, ಮಂಗಳ ಪತ್ರಿಕೆಗಾಗಿ ಚಲನಚಿತ್ರ ಇತಿಹಾಸ ಲೇಖನ ಮಾಲೆ ಹಲವಾರು ವರ್ಷ ಕಾಲ ನಿರಂತರವಾಗಿ ಪ್ರಕಟಗೊಂಡಿದೆ. ಕರ್ನಾಟಕ ವಿಶ್ವವಿದ್ಯಾಲಯ ಹೊರ ತಂದಿರುವ ಕಿರಿಯರ ಕರ್ನಾಟಕ ಹಾಗೂ ಚಲನಚಿತ್ರ ಇತಿಹಾಸ ಗ್ರಂಥಗಳಿಗೆ ಮತ್ತು ಉದಯಬಾನು ಕಲಾಸಂಘ ಹೊರ ತಂದಿರುವ ಬೃಹತ್ ಕೃತಿ ಬೆಂಗಳೂರುದರ್ಶನಕ್ಕಾಗಿ ಮಾಹಿತಿ ಲೇಖನಗಳನ್ನು ಬರೆದಿದ್ದಾರೆ. ಮಂಗಳ, ಬಾಲಮಂಗಳ, ಕರ್ಮವೀರ, ಅರಗಿಣಿ, ಸ್ಟಾರ್, ಸಂಯುಕ್ತಕರ್ನಾಟಕ, ಸಿನಿಮಾಮಕರಂದ, ಬೆಳ್ಳಿತೆರೆ ವಿಡಿಯೋ ಮ್ಯಾಗ್ಜೆನ್ಗಾಗಿ ಕ್ವಿಜ್ ರಚಿಸಿದ್ದಾರೆ. ವಾರ್ತ ಇಲಾಖೆ ಸಾದರ ಪಡಿಸುತ್ತಿದ್ದ ಕರ್ನಾಟಕ ವಾರ್ತಾಚಿತ್ರ, ಅವಲೋಕನಕ್ಕಾಗಿ ನಿರೂಪಣಾ ಸಾಹಿತ್ಯ ರಚಿಸಿದ್ದಾರೆ. ಸರ್ಕಾರ ಪ್ರಕಟಿಸುತ್ತಿರುವ ಜನಪದ, ಕರ್ನಾಟಕವಿಕಾಸ, ಸಹಕಾರ ಪತ್ರಿಕೆಗಳಿಗಾಗಿ ಅಭಿವೃದ್ದಿ ಲೇಖನಗಳನ್ನು ಬರೆದಿದ್ದಾರೆ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳ ಸಂದರ್ಭದಲ್ಲಿ ಹೊರತಂದ `ನಂದೂಸ್ಪೀಕ್ಸ್` ಪತ್ರಿಕೆ ಒಂದು ತಿಂಗಳ ಕಾಲ ಪ್ರಕಟಗೊಳ್ಳಲು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹಲವಾರು ಲೇಖನಗಳು, ಕಥೆ, ಕವನಗಳು ಮಲ್ಲಿಗೆ, ವಾರಪತ್ರಿಕೆ, ತರಂಗ, ರೂಪತಾರ, ಸುಧಾ, ಚಿತ್ರ, ಪ್ರಿಯಾಂಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕವಿ ದೊಡ್ಡರಂಗೇಗೌಡರ ಅಭಿನಂದನ ಗ್ರಂಥ `ಜಾನಪದಜಂಗಮ`ಕ್ಕಾಗಿ ಜಾನಪದ ಸೊಗಡಿನ ಜೋಪಾನಕಾರ ಲೇಖನ ಬರೆದಿದ್ದಾರೆ.ಡಿ.ಎಸ್.ವೀರಯ್ಯನವರ ಅಭಿನಂದನ ಗ್ರಂಥ ಹೋರಾಟದ ಹೆಜ್ಜೆಗಳು ಕೃತಿಗಾಗಿ `ಕನ್ನಡ ಚಲನಚಿತ್ರ: ದಲಿತ ಸಂವೇದನೆ` ಲೇಖನ ರಚಿಸಿದ್ದಾರೆ. ಕರ್ನಾಟಕ ಸರ್ಕಾರ ಪ್ರಕಟಿಸಿರುವ ಕೋಲಾರ ಜಿಲ್ಲೆ ಗೆಜೆಟಿಯರ್‍ನಲ್ಲಿ ಮೂರು ಕಡೆ ಇವರ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಗೆಜೆಟಿಯರ್ನಲ್ಲಿ ಇವರ ಹೆಸರನ್ನು ಉಲ್ಲೇಖಿಸಲಾಗಿದೆ. ಸಿ.ಎಸ್.ನಂಜುಂಡಯ್ಯ ಅವರ `ಅಮ್ಮ ಪಂಡರಿಬಾಯಿ` ಹಾಗೂ `ಅಭಿನಯ ಸವ್ಯಸಾಚಿ ಹೆಚ್.ಎಲ್.ಎನ್.ಸಿಂಹ ಕೃತಿಗಳಲ್ಲಿ ಇವರ ಹೆಸರನ್ನು ಉಲ್ಲ್ಲೇಖಿಸಲಾಗಿದೆ. ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅಭಿನಂದನಗ್ರಂಥ `ನಿಸಾರ್ ನಿಮಗಿದೋ ನಮನ` ಹೆಬ್ಬೊತ್ತಿಗೆಯಲ್ಲಿ ಡಾ.ರಾಜಕುಮಾರ್ ಹಾಗೂ ನಿಸಾರ್ ಕುರಿತ ಲೇಖನ ಬರೆದಿದ್ದಾರೆ. ಚಿಂತಾಮಣಿಯ ವೆ.ಎಸ್.ಗುಂಡಪ್ಪನವರ ಸ್ಮರಣಸಂಚಿಕೆ ಸೇರಿದಂತೆ ಹಲವಾರು ಸ್ಮರಣಸಂಚಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು: ವಿಜಯ ಕರ್ನಾಟಕ (ಪ್ರತಿನಿತ್ಯ), ಸಂಯುಕ್ತ ಕರ್ನಾಟಕ (ಪ್ರತಿ ನಿತ್ಯ), ಮಂಗಳ (ಪ್ರತಿವಾರ), ಅರಗಿಣಿ (ಚಲನಚಿತ್ರ), ಪ್ರಿಯಾಂಕ (ಮಾಸಿಕ), ಚಿತ್ರ (ಚಲನಚಿತ್ರ ಮಾಸಿಕ). ಆನ್‍ಲೈನ್ ಮೂಲಕ `ಇಂಡಿಕ್ರಾಸ್` ಜಾಲದಲ್ಲಿ ಪ್ರತಿನಿತ್ಯ ಅ.ನಾ.ಪ್ರಹ್ಲಾದರಾವ್ ಅವರ ಪದಬಂದಗಳು ಪ್ರಕಟಗೊಳ್ಳುತ್ತಿದ್ದು, ವಿಶ್ವದಾದ್ಯಂತ ಕನ್ನಡಿಗರು ನಿತ್ಯ ಪದಬಂಧ ತುಂಬಿಸುವಲ್ಲಿ ಸಹಕಾರಿಯಾಗಿದೆ. ಅ.ನಾ.ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಂಡ ಪತ್ರಿಕೆಗಳು: ಕನ್ನಡಪ್ರಭ (ಪ್ರತಿನಿತ್ಯ), ಈಸಂಜೆ (ಪ್ರತಿನಿತ್ಯ), ಪ್ರಜಾವಾಣಿ (ಚಲನಚಿತ್ರ-ಪ್ರತಿವಾರ), ಬಾಲಮಂಗಳ (ಪಾಕ್ಷಿಕ), ದೆಹಲಿವಾರ್ತೆ (ನವದೆಹಲಿ-ಪ್ರತಿನಿತ್ಯ), ಉದಯರಾಗ (ಮುಂಬಯಿ-ಪ್ರತಿನಿತ್ಯ), ರಂಗವಲ್ಲಿ (ವಾಪ), ಚೆಲುವೆ (ವಾರ ಪತ್ರಿಕೆÀ), ಹೋಟೆಲ್ ಪತ್ರಿಕೆ (ಪಾಕ್ಷಿಕ ತಿಂಡಿ ತಿನಿಸು), ರಾಜಕೀಯಸುದ್ದಿ (ವಾರ ಪತ್ರಿಕೆÀ), ಮಾರ್ಚ್ ಆಫ್ ಕರ್ನಾಟಕ (ಮಾಸಿಕ-ವಾರ್ತಾ ಇಲಾಖೆ), ಜನಪದ (ಮಾಸಿಕ-ವಾರ್ತಾಇಲಾಖೆ), ಯುವ ಕರ್ನಾಟಕ (ಮಾಸಿಕ-ಯುವಜನಸೇವಾ ಇಲಾಖೆ), ವಿಜ್ಞಾನ ಸಂಗಾತಿ (ಮಾಸಿಕ-ಕನ್ನಡ ವಿ.ವಿ, ಹಂಪೆ), ವಿಜಯಚಿತ್ರ (ಮಾಸಿಕ-ಚಲನಚಿತ್ರ, ಚಂದಮಾಮ ಪ್ರಕಟಣೆ), ವನಿತಾ (ಮಾಸಿಕ-ಚಂದಮಾಮ ಪ್ರಕಟಣೆ), ಪೆÇಲೀಸ್ ನ್ಯೂಸ್ (ವಾರ ಪತ್ರಿಕೆ-ಅಪರಾಧ), ಪೆÇಲಿಸ್ ಫೈಲ್ (ವಾರ ಪತ್ರಿಕೆ-ಅಪರಾಧ), ಸಂಚು (ಮಾಸಿಕ-ಅಪರಾಧ), ತಾಯಿ (ಮಾಸಿಕ-ಗೃಹ), ಕ್ರಿಡಾಭಿಮಾನಿ (ಮಾಸಿಕ-ಕ್ರೀಡೆ), ಅಭಿಮಾನಿ-(ವಾರ ಪತ್ರಿಕೆ), ಅಭಿಮಾನ (ಪ್ರತಿನಿತ್ಯ), ತರಂಗ (ಮಕ್ಕಳಿಗಾಗಿ), ಕನ್ನಡಮ್ಮ (ವಾರಕ್ಕೊಮ್ಮೆ), ಕೆ.ಎನ್.ಎನ್ ನ್ಯೂಸ್‍ನೆಟ್ ಮೂಲಕ ಹಲವಾರು ಜಿಲ್ಲಾಪತ್ರಿಕೆಗಳು, ಶೃತಿ (ಪದಬಂಧ ಮಾಸಿಕ), ಜನವಾಹಿನಿ (ಪ್ರತಿ ವಾರ), ಕರ್ಮವೀರ (ವಾರ ಪತ್ರಿಕೆÀ), ಈಸಂಜೆ (ಪ್ರತಿ ವಾರ-ಸಿನಿಮಾ), ಕಂದಾಯ ವಾರ್ತೆ (ಕಂದಾಯ ಇಲಾಖೆ ಮಾಸಿಕ), ಸಂಯುಕ್ತ ಕರ್ನಾಟಕ (ಪ್ರತಿ ವಾರ), ಕೃಷ್ಣವೇದಾಂತ ದರ್ಶನ (ಮಾಸಿಕ-ಇಸ್ಕಾನ್), ಇಂಡಿಕ್ರಾಸ್ ಆನ್‍ಲೈನ್ ಪದಬಂಧಗಳು ಮತ್ತು ಒಂಬತ್ತು ಪದಬಂಧ ಪುಸ್ತಕಗಳು.

ಕೃತಿಗಳು[ಬದಲಾಯಿಸಿ]

2005ರ ಜುಲೆನಲ್ಲಿ ಡಾ.ರಾಜಕುಮಾರ್ ಅಭಿನಯದ ಐವತ್ತು ವರ್ಷಗಳ ಚಿನ್ನದ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬೆಂಗಳೂರಿನಲಿ ಏರ್ಪಡಿಸಿದ್ದ `ಸಾರ್ಥಕಸುವರ್ಣ` ಸಮಾರಂಭದಲ್ಲಿ ಡಾ.ರಾಜಕುಮಾರ್ ಜೀವನ ಸಾಧನೆ ಕುರಿತು ಇವರು ಬರೆದ `ಬಂಗಾರದಮನುಷ್ಯ` ಕೃತಿ ಬಿಡುಗಡೆ ಆಯಿತು. ಈ ಕೃತಿ ಅಮೆರಿಕಾದ ವಾಷಿಂಗ್ಟನ್ ಡಿಸಿ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, ಕುವೈತ್ ಕನ್ನಡ ಸಂಘ, ಲಂಡನ್ ಕನ್ನಡ ಸಂಘ ಹಾಗೂ ನ್ಯೂಜರ್ಸಿ ಕನ್ನಡ ಸಂಘಗಳಲ್ಲಿ ಬಿಡುಗಡೆಗೊಂಡಿದೆ. ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ 115 ಮಂದಿ ಮಹಾನುಭಾವರ ಪರಿಚಯ ಲೇಖನಗಳನ್ನೊಳಗೊಂಡ `ಬೆಳ್ಳಿತೆರೆ ಬೆಳಗಿದವರು` ಕೃತಿ 2007ರ ಮೇ ತಿಂಗಳಿನಲ್ಲಿ ಲೋಕಾರ್ಪಣೆಗೊಂಡಿತು. ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಇವರು ರಚಿಸಿದ ಪದಬಂಧಗಳ 5 ಪುಸ್ತಕಗಳು 2008ರಲ್ಲಿ ಬಿಡುಗಡೆಗೊಂಡಿತು. 2008ರ ಮೆ ತಿಂಗಳಿನಲ್ಲಿ `ಬಂಗಾರದಮನುಷ್ಯ` ಕೃತಿಯ ಇಂಗ್ಲಿಷ್ ಭಾಷಾಂತರ 'ದಿ ಇನ್ಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜರ್ಸಿ ಕನ್ನಡ ಸಂಘ `ಬೃಂದಾವನ` ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅ.ನಾ.ಪ್ರಹ್ಲಾದರಾವ್ ಮತ್ತು ಅವರ ಪತ್ನಿ ಶ್ರೀಮತಿ ಎಂ.ಬಿ.ಮಲ್ಲಿಕಾ ಪಾಲ್ಗೊಂಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ವಜ್ರಮಹೋತ್ಸವ ಅಂಗವಾಗಿ ಡಾ.ಬರಗೂರು ರಾಮಚಂದ್ರಪ್ಪ ಻ವರ ಸಂಪಾದಕತ್ವದಲ್ಲಿ ಹೊರ ತಂದ 75 ಪುಸ್ತಕಗಳಲ್ಲಿ ಡಾ.ರಾಜಕುಮಾರ್ ಹಾಗೂ ಕರಿಬಸಯ್ಯನವರ ಬಗ್ಗೆ 2 ಪುಸ್ತಕಗಳನ್ನು ರಚಿಸಿದ್ದಾರೆ. ಅ.ನಾ.ಪ್ರಹ್ಲಾದರಾವ್ ರಚಿಸಿದ ಭಾವಗೀತೆಗಳ ಸಾಂದ್ರಿಕೆ ವಸಂತ ಮಲ್ಲಿಕಾ 2009ರಲ್ಲಿ ಬಿಡುಗಡೆಗೊಂಡಿತು. ಪುತ್ತೂರು ನರಸಿಂಹ ನಾಯಕ್ ಸಂಗೀತ ನೀಡಿರುವ ಈ ಗೀತೆಗಳನ್ನು ಅಮೆರಿಕದಲ್ಲಿ ನೆಲೆಸಿರುವ ಗಾಯಕಿ ಶ್ರೀಮತಿ ವಸಂತ ಶಶಿ ಹಾಡಿದ್ದಾರೆ. 2008ರ ಮೆ ತಿಂಗಳಿನಲ್ಲಿ ಇವರು ರಚಿಸಿದ ಬಂಗಾರದಮನುಷ್ಯ ಕೃತಿಯ ಇಂಗ್ಲಿಷ್ ಭಾಷಾಂತರ 'ದಿ ಇನ್ಮಿಟಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್' ಅಮೆರಿಕದ ನ್ಯೂಜರ್ಸಿ ನಗರದಲ್ಲಿ ಬಿಡುಗಡೆಗೊಂಡ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಿಂಗಪುರ, ಮಲೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ಅಧ್ಯಯನ ಪ್ರವಾಸ ಮಾಡಿದ್ದಾರೆ.

 • ಬಂಗಾರದ ಮನುಷ್ಯ (ಆತ್ಮಚರಿತ್ರೆ) : ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರ ಆತ್ಮಚರಿತ್ರೆಯಾದ 'ಬಂಗಾರದ ಮನುಷ್ಯ' ಪುಸ್ತಕವನ್ನು ಇವರು ರಚಿಸಿದ್ದಾರೆ. ಡಾ.ರಾಜ್‌ಕುಮಾರ ಅಭಿನಯದ ೨೦೮ ಚಲನಚಿತ್ರಗಳ ಸಮಗ್ರ ಮಾಹಿತಿಯನ್ನು ಹಾಗೂ ಡಾ.ರಾಜಜಕುಮಾರ್ ಅವರ ಜೀವನ ಸಾಧನೆಯನ್ನು ಈ ಪುಸ್ತಕ ಒಳಗೊಂಡಿದೆ. ಬಂಗಾರದ ಮನುಷ್ಯ ಪುಸ್ತಕ 'ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್'ಹೆಸರಿನಲ್ಲಿ ಇಂಗ್ಲಿಷ್ ಭಾಷೆಗೆ ಭಾಷಾಂತರಗೊಂದಿದೆ. ಈ ಪುಸ್ತಕ ಅಮೆರಿಕ ದೇಶದ ನ್ಯೂಜಸಿ೯ ನಗರದಲ್ಲಿ ಬಿಡುಗಡೆಗೊಂಡಿತು. ಆ ಸಂದಭ೯ದಲ್ಲಿ ಅ.ನಾ.ಪ್ರಹ್ಲಾದ ರಾವ್‌ ಅವರನ್ನು ಅಮೆರಿಕದ ನ್ಯೂಜಸಿ೯ ನಗರದ ಕನ್ನಡ ಸಂಘ ಬೃಂದಾವನ ಅಮೆರಿಕೆಗೆ ಕರೆಸಿಕೊಂಡು ಸನ್ಮಾನ ಮಾಡಿತು. ನಟರೊಬ್ಬರನ್ನು ಕುರಿತ ಮೊದಲ ಇಂಗ್ಲಿಷ್ ಪುಸ್ತಕ ಇದಾಗಿದ್ದು,ವಿದೇಶದಲ್ಲಿ ಬಿಡುಗಡಯಾದ ಡಾ.ರಾಜಕುಮಾರ್ ಕುರಿತ ಮೊದಲ ಪುಸ್ತಕವೂ ಆಗಿದೆ.
 • ಬೆಳ್ಳಿತೆರೆ ಬೆಳಗಿದವರು ಇವರ ಎರಡನೆಯ ಪುಸ್ತಕ. ಕನ್ನಡ ಚಲನಚಿತ್ರ ರಂಗದ ವಿವಿಧ ಕ್ಷೇತ್ರಗಳಲ್ಲಿ ದುಡಿದ ೧೧೫ ಮಂದಿ ಮಹಾನುಭಾವರ ವ್ಯಕ್ತಿ ಚಿತ್ರಣವನ್ನು ಈ ಪುಸ್ತಕ ಒಳಗೊಂಡಿದೆ.
 • ಕನ್ನಡ ಚಲನಚಿತ್ರರಂಗಕ್ಕೆ ೭೫ ವಷ೯ಗಳು ಸಂದ ಸಂದಭ೯ದಲ್ಲಿ ಕನ್ನಡ ಚಿತ್ರರಂಗದ ಮಹಾನುಭಾವರನ್ನು ಕುರಿತು ಕನಾ೯ಟಕ ಚಲನಚಿತ್ರ ವಾಣಿಜ್ಯ ಮಂಡಲಿ ಪ್ರಕಟಿಸಿದ ೭೫ ಪುಸ್ತಕಗಳಲ್ಲಿ ಡಾ.ರಾಜಕುಮಾರ್ ಮತ್ತು ಟಿ.ಎಸ್.ಕರಿಬಸಯ್ಯನವರನ್ನು ಕುರಿತ ಎರಡು ಪುಸ್ತಕಗಳನ್ನು ಅ.ನಾ.ಪ್ರಹ್ಲಾದರಾವ್ ರಚಿಸಿದ್ದಾರೆ.
 • ಕನ್ನಡದ ಮೊದಲ ಪದಬಂಧ ಪುಸ್ತಕಗಳು: ೨೦೦೮ರ ಫಬ್ರವರಿಯಲ್ಲಿ ಇವರು ವಿವಿಧ ಪತ್ರಿಕೆಗಳಿಗೆ ರಚಿಸಿದ ಪದಬಂಧಗಳನ್ನು ಆಧರಿಸಿದ ೫ ಪದಬಂಧ ಪುಸ್ತಕಗಳು ಬಿಡುಗಡೆಯಾದವು. ಕನ್ನಡ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ಕನ್ನಡ ಪದಬಂಧ ಪುಸ್ತಕಗಳು ಇವಾಗಿವೆ. ಕನ್ನಡ ಭಾಷೆಯ ಮಟ್ಟಿಗೆ ಇದೊಂದು ದಾಖಲೆ. ೫ ಪುಸ್ತಕಗಳಲ್ಲಿ ೨ ಸಾಮಾನ್ಯ, ೧ ಕನ್ನಡ ಸಿನಿಮಾ ಹಾಗೂ ಮತ್ತೊಂದು ಮಕ್ಕಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಿದ್ಡಪಡಿಸಿದ ಪದಬಂಧ ಪುಸ್ತಕಗಳಾಗಿವೆ. ಇಂಗ್ಲಿಷ್ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡ ೮೮ ವಷ೯ಗಳ ನಂತರ ಕನ್ನಡ ಭಾಷೆಯಲ್ಲಿ ಪದಬಂಧ ಪುಸ್ತಕ ಪ್ರಕಟಗೊಂಡಿರುವುದು ವಿಶೇಷವಾಗಿದೆ.
 • ಜೈತ್ರಯಾತ್ರೆ: ಹಿರಿಯ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್ ಅವರು ತಮ್ಮ ಆಡಳಿತ ಅನುಭವಗಳನ್ನು ಕುರಿತು ರಚಿಸಿದ "ಜೈತ್ರಯಾತ್ರೆ" ಪುಸ್ತಕವನ್ನು ಕನ್ನಡದಲ್ಲಿ ಅ.ನಾ.ಪ್ರಹ್ಲಾದರಾವ್ ಸಿದ್ಧಗೊಳಿಸಿದರು. ೨೦೧೨ರ ಜೂನ್ ತಿಂಗಳಿನಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಇನ್ಫೋಸಿಸ್ ಅಧ್ಯಕ್ಞರಾದ ಎನ್.ಆರ್.ನಾರಾಯಣಮೂರ್ತಿ, ಜ್ಞಾನಪೀಠ ಪ್ರಶಸ್ತಿ ಸಮ್ಮಾನಿತ ಲೇಖಕ ಗಿರೀಶ್ ಕಾರ್ನಾಡ್, ಧರ್ಮಸ್ಥಳ ಕ್ಷೇತ್ರಪಾಲಕ ಶ್ರೀ ವೀರೇಂದ್ರ ಹೆಗ್ಗಡೆ, ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 • ವಸಂತ ಮಲ್ಲಿಕಾ : ಅ.ನಾ.ಪ್ರಹ್ಲಾದ ರಾವ್‌ ಕವಿಗಳು ಆಗಿದ್ಫ್ದು ಇವರು ಬರೆದ ೯ ಭಾವಗೀತೆಗಳ ಸಿ.ಡಿ ವಸಂತ ಮಲ್ಲಿಕಾ ೨೦೦೮ರ ಡಿಸೆಂಬರ್ ತಿಂಗಳಿನಲ್ಲಿ ಲೋಕಾಪ೯ಣೆಗೊಂಡಿತು. ಅಮೆರಿಕ ದೇಶದ ನ್ಯೂಜಸಿ೯ ನಗರದಲ್ಲಿ ನೆಲೆಸಿರುವ ಐ.ಟಿ ಎಂಜನಿಯರ್ ಶ್ರೀಮತಿ ವಸಂತ ಶಶಿ ಅವರು ಗೀತೆಗಳನ್ನು ಹಾಡಿದ್ದು, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್ ಸಂಗೀತ ಸಂಯೋಜಿಸಿದ್ದಾರೆ.
 • ಪದಲೋಕ ಮತ್ತು ಪದಕ್ರೀಡೆ 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಮತ್ತೆರಡು ಪದಬಂಧ ಪುಸ್ತಕಗಳು. ವಿಶ್ವ ಪದಬಂಧ ಶತಮಾನೋತ್ಸವದ ಅಂಗವಾಗಿ ಅ.ನಾ.ಪ್ರಹ್ಲಾದರಾವ್ ಅವರು ಈ ಎರಡು ಪದಬಂಧ ಪುಸ್ತಕಗಳನ್ನು ಹೊರತಂದರು. ವಸಂತ ಪ್ರಕಾಶನ ಪ್ರಕಾಶನಗೊಳಿಸಿದ ಈ ಪುಸ್ತಕಗಳಲ್ಲಿ ತಲಾ 160 ಪದಬಂಧಗಳನ್ನು ಅಡಕಗೊಳಿಸಲಾಗಿದೆ. ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ `ಪದಬಂಧ`. ಭಾಷಾ ಪ್ರೌಢಿಮೆ, ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ `ಪದಬಂಧ`ದ ಇತಿಹಾಸ ಒಂದು ಶತಮಾನದ್ದ್ಲು. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ ಮಾಡಿದ ಪದರಚನೆಯೇ ಪದಬಂಧದ ಉಗಮವಾಗಲು ಕಾರಣ. ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 21ರ ಸಂಚಿಕೆಯಲ್ಲಿ. ಕ್ರಿಸ್‍ಮಸ್ ವಿಶೇóಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ `ದಿ ನ್ಯೂಯಾರ್ಕ್ ವರ್ಡ್` ಪತ್ರಿಕೆಯ ಸಂಪಾದಕ ಆರ್ಥರ್ ವಿನ್ನೆ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು `ವರ್ಡ್‍ಕ್ರಾಸ್` ಎಂಬ ಅಂಕಣವನ್ನು ಸೃಷ್ಟಿಸಿದ. ನಂತರ, ಆ ಆಂಕಣ ಎಷ್ಟು ಜನಪ್ರಿಯವಾಯಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ಪುರವಣಿಗಳಲ್ಲಿ ಪ್ರಕಟಿಸಲೇ ಬೇಕಾದ ಅನಿವಾರ್ಯತೆಯುಂಟಾಯಿತು. ಅ.ನಾ.ಪ್ರಹ್ಲಾದರಾವ್ ಅವರ ಪದಬಂಧಗಳು ಪ್ರತಿ ನಿತ್ಯ `ವಿಜಯಕರ್ನಾಟಕ` ಹಾಗೂ `ಸಂಯುಕ್ತ ಕರ್ನಾಟಕ` ದಿನ ಪತ್ರಿಕೆಗಳಲ್ಲಿ, `ಮಂಗಳ` ಮತ್ತು `ಅರಗಿಣಿ` ವಾರ ಪತ್ರಿಕೆಗಳು, 'ಪ್ರಿಯಾಂಕ` `ಚಿತ್ರ` `ಕಂದಾಯವಾರ್ತೆ` ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. `ಪ್ರಜಾವಾಣಿ` ಸಿನಿಮಾರಂಜನೆ, `ಕರ್ಮವೀರ`, `ಸಂಯುಕ್ತಕರ್ನಾಟಕ ಸಾಪ್ತಾಹಿಕ, `ಕನ್ನಡಪ್ರಭ` ಸೇರಿದಂತೆ 40ಕ್ಕೂ ಹೆಚ್ಚು ನಿಯತಕಾಲಿಕೆಗಳಲ್ಲಿ ಇವರ ಪದಬಂಧಗಳು ಪ್ರಕಟಗೊಂಡಿವೆ. ಆನ್‍ಲೈನ್‍ನಲ್ಲಿ ಪ್ರತಿ ನಿತ್ಯ ಅನಾವರಣಗೊಳ್ಳುತ್ತಿರುವ `ಇಂಡಿಕ್ರಾಸ್.ಕಾಮ್`ಗಾಗಿಯೂ ಪದಬಂಧಗಳನ್ನು ರಚಿಸಿಕೊಡುತ್ತಿದ್ದಾರೆ.
 • ಪ್ರಾಣಪದಕ ಡಾ.ರಾಜಕುಮಾರ್ ಅವರನ್ನು ಕುರಿತ 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಸ್ವಾರಸ್ಯಕರ ಸಂಗತಿಗಳ ಮತ್ತೊಂದು ಪುಸ್ತಕ. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ನೆನಪಿನಾಳದಲ್ಲಿನ ಡಾ.ರಾಜಕುಮಾರ್ ಸಂಗತಿಗಳನ್ನು ಅನಾವರಣಗೊಳಿಸುವ, ವಸಂತ ಪ್ರಕಾಶನ ಪ್ರಕಾಶನಗೊಳಿಸಿರುವ ವಿಶಿಷ್ಟ ಪುಸ್ತಕ `ಪ್ರಾಣಪದಕ`. ಸುಮಾರು 120 ಪುಟಗಳ ಈ ಪುಸ್ತಕದ ಲೇಖನಗಳು `ಮಂಗಳ` ವಾರಪತ್ರಿಕೆಯಲ್ಲಿ ಪ್ರಕಟಿಗೊಂಡಿದ್ದವು. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ಬೇರೆ ಬೇರೆ ಸಂದರ್ಭಗಳÀಲ್ಲಿ ಲೇಖಕರೊಂದಿಗೆ ಹಲವು ವಿಷಯಗಳನ್ನು ನೆನಪು ಮಾಡಿಕೊಂಡರು. `ಪ್ರಾಣಪದಕ` ಹೆಸರಿನಲ್ಲಿ `ಮಂಗಳ` ವಾರಪತ್ರಿಕೆ ಈ ಲೇಖನಗಳನ್ನು ಪ್ರಕಟಿಸಿತ್ತು. ಕನ್ನಡದ ವರನಟ ಡಾ.ರಾಜಕುಮಾರ್ ಅವರ ಐವತ್ತು ವರ್ಷಗಳ ಚಿತ್ರರಂಗದ ಬದುಕಿನ ನೆನಪಿನಲ್ಲಿ ಕರ್ನಾಟಕ ಸರ್ಕಾರಕ್ಕಾಗಿ ಅ.ನಾ.ಪ್ರಹ್ಲಾದರಾವ್ ಬರೆದ `ಬಂಗಾರದ ಮನುಷ್ಯ` ಜನಪ್ರಿಯತೆ ಗಳಿಸಿದ ಪುಸ್ತಕ. ಈ ಪುಸ್ತಕ ಇಂಗ್ಲಿಷ್ ಭಾಷೆಗೆ `ಡಾ.ರಾಜಕುಮಾರ್ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್` ಹೆಸರಿನಲ್ಲಿ ಭಾಷಾಂತರಗೊಂಡು ಅಮೆರಿಕದ ನ್ಯೂಜರ್ಸಿ ನಗರದಲ್ಲಿ ಬಿಡುಗಡೆಗೊಂಡಿತು. ಕನ್ನಡದ ನಟರೊಬ್ಬರನ್ನು ಕುರಿತ ಇಂಗ್ಲಿಷ್ ಪುಸ್ತಕವೊಂದು ಭಾರತದ ಹೊರಗಡೆ ಬಿಡುಗಡೆಗೊಂಡ ಮೊದಲ ಪುಸ್ತಕ ಇದೆಂಬ ದಾಖಲೆಯನ್ನೂ ಮಾಡಿತು. ಕನ್ನಡ ಪುಸ್ತಕ ಬಿಡುಗಡೆಗೊಂಡ ಸಂದರ್ಭದಲ್ಲಿ ಡಾ.ರಾಜಕುಮಾರ್ ಹಾಗೂ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ತಮ್ಮ ಮನೆಗೆ ಲೇಖಕರ ಕುಟುಂಬವನ್ನು ಬರಮಾಡಿಕೊಂಡು ಆತಿಥ್ಯ ನೀಡಿದ್ದರು.
 • ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್ 2013ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾದ ಮತ್ತೊಂದು ವಿಭಿನ್ನ ಪುಸ್ತಕ. ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಕೃತಿಯಲ್ಲಿ ಮೇರು ನಟ ರಜನಿಕಾಂತ್ ಅವರ ಜೀವನ-ಸಾಧನೆಯನ್ನು ಕನ್ನಡ ನೆಲದ ಸಂಬಂಧಗಳನ್ನು ಆಧರಿಸಿ ಚಿತ್ರಿಸಲಾಗಿದೆ. ರಜನಿಕಾಂತ್ ಚಿತ್ರಗಳ ಪಟ್ಟಿಯನ್ನೂ ಕೊಟ್ಟಿದ್ದಾರೆ. ಚಿತ್ರರಂಗದಲ್ಲಷ್ಟೆ ಅಲ್ಲ, ಸಮಾಜ ಸೇವೆಯಲ್ಲೂ ರಜನಿಕಾಂತ್ ಅವರ ಪಾತ್ರ ಹಿರಿದೆಂಬುದನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಬಳೇಪೇಟೆಯ `ನವಭಾರತ್ ಪಬ್ಲಿಕೇಷನ್` ಸಂಸ್ಥೆ ಈ ಪುಸ್ತಕದ ಪ್ರಕಾಶಕರಾಗಿದ್ದಾರೆ. ಪುಸ್ತಕದ ಮುನ್ನುಡಿಯಲ್ಲಿ ಹಿರಿಯ ಪತ್ರಕರ್ತ ವೈ.ಜಿ.ಗಿರಿಶಾಸ್ತ್ರಿ ಅವರು ಹೀಗೆ ಬರೆದಿದ್ದಾರೆ: `ರಜನಿಕಾಂತ್ ಅವರ ಬದುಕಿನ ಚಿತ್ರಣವನ್ನು ಅ.ನಾ.ಪ್ರಹ್ಲಾದರಾವ್ ಅವರು ಈ ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ವಸ್ತುನಿಷ್ಠವಾದ ಶ್ರೀಯುತರ ಬರವಣಿಗೆಯಲ್ಲಿ ರಜನಿಕಾಂತ್ ಸುಂದರವಾಗಿ ಅನಾವರಣಗೊಂಡಿದ್ದಾರೆ. ಪ್ರಹ್ಲಾದರಾಯರದು ಸುಭಗ ಶೈಲಿಯ ಬರವಣಿಗೆ. ಪ್ರಗಲ್ಭವಾದ ವಿಷಯವನ್ನು ಅತ್ಯಂತ ಸರಳವಾಗಿ ನಿರೂಪಿಸುವುದರಲ್ಲಿ ಅ.ನಾ.ಪ್ರ ನುರಿತವರು. ಕ್ಲಿಷ್ಟ ಪದಗಳನ್ನು ಬಳಸಿ ಓದುಗರಿಗೆ ಕಷ್ಟಕೊಡುವವರಲ್ಲ.`
 • ಪದಬಂಧು ` 2013ರ ಅಕ್ಟೋಬರ್ ತಿಂಗಳಿನಲ್ಲಿ ಅ.ನಾ.ಪ್ರಹ್ಲಾದರಾವ್ ಅವರ ಅಭಿನಂದನಾ ಸಮಾರಂಭದಲ್ಲಿ ಹೊರ ತಂದ ಸಂಭಾವನಾಗ್ರಂಥ. ಕವಿಗಳಾದ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಡಾ.ದೊಡ್ಡರಂಗೇಗೌಡ; ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್; ಲೇಖಕರಾದ ಜಾಣಗೆರೆ ವೆಂಕಟರಾಮಯ್ಯ, ನಾರಾಯಣ ರಾಯಚೂರ್; ಚಲನಚಿತ್ರರಂಗದ ದಿಗ್ಗಜರಾದ ಕೆ.ಎಸ್.ಎಲ್.ಸ್ವಾಮಿ, ಎಸ್.ಶಿವರಾಮ್, ನಾಗಾಭರಣ, ವಿ.ಮನೋಹರ್, ಕೆ.ಕಲ್ಯಾಣ್; ಪತ್ರಕರ್ತರಾದ ವೆಂಕಟನಾರಾಯಣ, ಖಾದ್ರಿ ಅಚ್ಚುತನ್, ಎ.ಎಸ್.ನಾರಾಯಣರಾವ್; ಗಾಯಕರಾದ ಶ್ರೀಮತಿ ಚಂದ್ರಿಕಾ ಗುರುರಾಜ್, ಕಿಕ್ಕೇರಿ ಕೃಷ್ಣಮೂರ್ತಿ ಮುಂತಾದ ಹಿರಿಯರು, ಸ್ನೇಹಿತರು, ಕುಟುಂಬ ಸದಸ್ಯರೂ ಸೇರಿದಂತೆ ಸುಮಾರು 80 ಮಂದಿ ಅ.ನಾ.ಪ್ರಹ್ಲಾದರಾವ್ ಅವರ ವ್ಯಕ್ತ್ತಿತ್ವವನ್ನು ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಕೆ.ಆರ್.ನರಸಿಂಹನ್, ಕರ್ನಾಟಕ ಗ್ಯಾಜೆಟಿಯರ್ನ ನಿವೃತ್ತ ಹಿರಿಯ ಸಂಪಾದಕರಾದ ಎಸ್.ಎ.ಜಗನ್ನಾಥ ಹಾಗೂ ಹಿರಿಯ ಪತ್ರಕರ್ತರಾದ ವೈ.ಜಿ.ಗಿರಿಶಾಸ್ತ್ರಿ ಸಂಪಾದಕೀಯ ಮಂಡಳಿಯಲ್ಲಿರುತ್ತಾರೆ.
 • ಶಾಂತಾ ಹುಬ್ಳೀಕರ್ ರಾಷ್ಟ್ರೋತ್ಥಾನ ಪರಿಷತ್ತು 2014ರಲ್ಲಿ ಹೊರ ತಂದ 50 ಹೊತ್ತಿಗೆಗಳ `ಭಾರತ ಭಾರತಿ' ಪುಸ್ತಕಮಾಲೆಯಲ್ಲಿ ಅ.ನಾ.ಪ್ರಹ್ಲಾದರಾವ್ ಅವರು 20ನೆಯ ಶತಮಾನದ 30-40ರ ದಶಕದಲ್ಲಿ ಹಿಂದಿ ಹಾಗೂ ಮರಾಠಿ ಚಲನಚಿತ್ತರಂಗದಲ್ಲಿ ಪ್ರಖ್ತಾತಗೊಂಡಿದ್ದ ನಟಿ ಕನ್ನಡತಿ ಶಾಂತಾ ಹುಬ್ಳೀಕರ್ ಅವರನ್ನು ಕುರಿತಂತೆ ಕಿರು ಪುಸ್ತಕ ರಚಿಸಿದ್ಧಾರೆ.
 • ದಣಿವಿಲ್ಲದ ಧಣಿ: ಬಿ.ಆರ್.ಪಂತುಲು ಕನ್ನಡದ ಮೇರು ನಿರ್ದೇಶಕ, ನಿರ್ಮಾಪಕ, ನಟ ಬಿ.ಆರ್.ಪಂತುಲು ಅವರನ್ನು ಕುರಿತಂತೆ ಲೇಖಕ ಅ.ನಾ.ಪ್ರಹ್ಲಾದರಾವ್ ರಚಿಸಿರುವ `ದಣಿವಿಲ್ಲದ ಧಣಿ` ಪುಸ್ತಕವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ್ದು. ದಿನಾಂಕ 15.11.206ರಂದುಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ . ಖ್ಯಾತ ಕಲಾವಿದೆ ಪದ್ಮಶ್ರಿ ಡಾ. ಭಾರತಿ ವಿಷ್ಣುವರ್ಧನ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಲೇಖಕ, ಪತ್ರಕರ್ತ   ಶ್ರೀ ಜೋಗಿ (ಗಿರೀಶ್ ರಾವ್) ಪುಸ್ತಕ ಕುರಿತು ಮಾತನಾಡಿದರು. ನಿವೃತ್ತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಶಿಕ್ಷಣ ತಜ್ಞ ವೋಡೆ ಕೃಷ್ಣ ಪಾಲ್ಗೊಂಡಿದ್ದರು.
 • ಅ.ನಾ.ಪ್ರಹ್ಲಾದರಾವ್ ರಚಿಸಿರುವ ತಲಾ 100 ಪದಬಂಧಗಳನ್ನು ಹೊಂದಿದ, ಮೆದುಳಿಗೆ ಕಸರತ್ತು ನೀಡುವ ವಿಭಿನ್ನವಾದ 5 ಪದಬಂಧ ಪುಸ್ತಕಗಳು 2017ರ ಜನವರಿ 16 ಬಿಡುಗಡೆಗೊಂಡವು. ಬೆಂಗಳೂರಿನ ಬಸವನಗುಡಿ ಬಿ.ಪಿ.ವಾಡಿಯ ರಸ್ತೆಯಲ್ಲಿರುವ ವಾಡಿಯ ಸಭಾಂಗಣದಲ್ಲಿ ಸುಪ್ರಸಿದ್ಧ ಕವಿಗಳಾದ ಪ್ರೊ.ದೊಡ್ಡರಂಗೇಗೌಡ ಅವರು ವಸಂತ ಪ್ರಕಾಶನ ಸಂಸ್ಥೆ ಹೊರತಂದ ಪದಸಂಪದ, ಪದವ್ಯೂಹ, ಪದಜಾಲ, ಪದಜಗ ಮತ್ತು ಪದರಂಗ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಪ್ರಸಿದ್ಧ ವಿಮರ್ಶಕರಾದ ಡಾ.ಜಿ.ಬಿ.ಹರೀಶ್ ಪದಬಂಧ ಪುಸ್ತಕಗಳನ್ನು ಕುರಿತು ಮಾತನಾಡಿದರು. ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ ಅವರು ಸಮಾರಂಭದ ಅಧ್ಯಕ್ಷತೆವಹಿಸಿದ್ದರು.

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ `ಪ್ರಜಾರತ್ನ`, `ಪದಬಂಧಬ್ರಹ್ಮ`, `ಪದಬಂಧಸಾಮ್ರಾಟ್` ಮುಂತಾದ ಬಿರುದುಗಳನ್ನು ನೀಡಿವೆ. `ವಿಶ್ವೇಶ್ವರಯ್ಯಪ್ರಶಸ್ತಿ`, `ಕರುನಾಭೂಷಣ` `ಕರ್ನಾಟಕ ವಿಭೂಷಣ` ಮಂಡ್ಯ ಕರ್ನಾಟಕ ಸಂಘ ಪ್ರಶಸ್ತಿಗಳೇ ಅಲ್ಲದೆ ಪ್ರತಿಷ್ಠಿತ `ಆರ್ಯಭಟ`, ಬೆಂಗಳೂರು ಮಹಾನಗರಪಾಲಿಕೆ ಕೊಡಮಾಡುವ `ಕೆಂಪೇಗೌಡ ಪ್ರಶಸ್ತಿ` `ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಸದ್ಬಾವನ ಪ್ರಶಸ್ತಿ, `ಶ್ರೀಕಾಣ್ವಶ್ರೀ`, `ಶಿಂಷಾಶ್ರೀ` `ಬೆಂಗಳೂರು ರತ್ನ`, `ಹಂಸರತ್ನ` ಮುಂತಾದ ಪ್ರಶಸ್ತಿಗಳು ಸಂದಿವೆ.

 • ಅನಾಪ್ರ ಅರವತ್ತು: ವಿಶ್ವ ಇಂದು `ಪದಬಂಧ ಶತಮಾನೊತ್ಸವ` ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕನ್ನಡದ ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ 60 ವಸಂತಗಳನ್ನು ದಾಟಿ ಮುನ್ನಡಿ ಇಟ್ಟಿದ್ದಾರೆ. ಕನ್ನಡ ಪತ್ರಿಕೆಗಳಿಗೆ ಕಳೆದ 30 ವರ್ಷಗಳಿಂದ ಪದಬಂಧ ಸಿದ್ಧಪಡಿಸುತ್ತಾ ಬಂದಿರುವ ಅ.ನಾ.ಪ್ರಹ್ಲಾದರಾವ್ ಇಲ್ಲಿಯವರೆವಿಗೂ 40,000 ಪದಬಂಧಗಳನ್ನು ರಚಿಸಿದ್ದು, ಇವುಗಳಿಗಾಗಿ ಸುಮಾರು 12 ಲಕ್ಷ ಸುಳುಹುಗಳನ್ನು ನೀಡಿದ್ದ್ದಾರೆ. ಈ ಸಂಬಂಧ 2013ರ ಅಕ್ಟೋಬರ್ 7 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡೀ ದಿನದ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಪದಬಂಧ ಕಮ್ಮಟ, ಸಂಜೆ ಅನಾಪ್ರ ರಚಿಸಿದ ಗೀತೆಗಳ ಗಾಯನ, ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳ ಲೋಕಾರ್ಪಣೆ, ಸಂಭಾವನಾಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಪಂಚದಲ್ಲಿ ಮೊದಲ `ಪದಬಂಧ ಶತಮಾನೋತ್ಸವ` ಆಚರಿಸುತ್ತಿರುವ ಹೆಗ್ಗಳಿಕೆ ಕನ್ನಡಿಗರದು. ಕವಿ, ವಿಧಾನ ಪರಿಷತ್ ಸದಸ್ಯರಾದ ಪ್ರೊ.ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಲನಚಿತ್ರ ನಿರ್ದೇಶಕ ನಾಗಣ್ಣ, ಚಲನಚಿತ್ರ ಸಾಹಿತಿಗಳಾದ ವಿ.ಮನೋಹರ್ ಮುಖ್ಯ ಅತಿಥಿಗಳಾಗಿದ್ದರು. ಸಂಜೆ 5 ಗಂಟೆಗೆ ಅನಾಪ್ರ ವಿರಚಿತ ಗೀತೆಗಳನ್ನು ಎಲ್.ಎನ್.ಶಾಸ್ತ್ರಿ, ಚಂದ್ರಿಕಾ ಗುರುರಾಜ್, ಆಕಾಂಕ್ಷ ಬಾದಾಮಿ, ಹೇಮಾಪ್ರಸಾದ್, ಅನುಪಮಾರಾವ್, ರಮ್ಯ ಹಾಡಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ `ಅನಾಪ್ರ ಅರವತ್ತು` ಸಂಭಾವನಾಗ್ರಂಥ `ಪದಬಂಧು` ಬಿಡುಗಡೆ ಮಾಡಿದರು. ಲೋಕಸಭಾ ಸದಸ್ಯರಾದ ಅನಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅ.ನಾ.ಪ್ರಹ್ಲಾದರಾವ್ ಅವರ ನಾಲ್ಕು ಪುಸ್ತಕಗಳು ಬಿಡುಗಡೆಗೊಂಡವು. `ಪದಕ್ರೀಡೆ` `ಪದಲೋಕ` `ಪ್ರಾಣಪದಕ` ಮತ್ತು `ನನ್ನ ದಾರಿ ವಿಭಿನ್ನ ದಾರಿ-ರಜನಿಕಾಂತ್` ಪುಸ್ತಕಗಳನ್ನು ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್, ನಿರ್ಮಾಪಕ-ನಟ ಎಸ್.ಶಿವರಾಂ ಮತ್ತು ಚಲನಚಿತ್ರ ನಿರ್ದೇಶಕ ನಾಗಾಭರಣ ಲೋಕಾರ್ಪಣೆ ಮಾಡಿದರು.
 • ಕನ್ನಡದಲ್ಲಿ 33 ಸಾವಿರ ಪದಬಂಧ ರಚಿಸಿ ದಾಖಲೆ ಮಾಡಿರುವ ಅ.ನ.ಪ್ರಹ್ಲಾದ್‌ರಾವ್‌ ಅವರ ಹೆಸರನ್ನು ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರಿಸಲಾಗಿದೆ. ಈವರೆಗೆ ಅತಿಹೆಚ್ಚು ಪದಬಂಧ ರಚಿಸಿರುವ ಹಿನ್ನೆಲೆಯಲ್ಲಿ ಅ.ನ.ಪ್ರಹ್ಲಾದ್‌ರಾವ್‌ ಅವರಿಗೆ ಈ ಗೌರವ ಸಂದಿದೆ.[೧] ಮತ್ತು <[(http://www.limcabookofrecords.in/record-detail.aspx?rid=1027 Archived 2016-05-04 ವೇಬ್ಯಾಕ್ ಮೆಷಿನ್ ನಲ್ಲಿ.]> 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕಗಳಲ್ಲಿ ಸತತವಾಗಿ ಇವರ ಹೆಸರು ಸೇರ್ಪಡೆಗೊಂಡಿರುವುದು ವಿಶೇಷವಾಗಿದೆ.

ಹೊರಸಂಪರ್ಕಗಳು[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

 1. "ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ಗೆ ಪ್ರಹ್ಲಾದರಾವ್‌ - ಉದಯವಾಣಿ,೨೩ಜನವರಿ೨೦೧೫". Archived from the original on 2016-03-04. Retrieved 2015-01-25.