ಅಮಾಲ್ಗಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Arquerite, ಬೆಳ್ಳಿ ಹಾಗೂ ಪಾದರಸದ ಸಾಮಾನ್ಯ ಅಮಾಲ್ಗಂ

ಕಬ್ಬಿಣ ಮತ್ತು ಪ್ಲಾಟಿನಂ ಲೋಹಗಳ ಹೊರತು ಸಾಮಾನ್ಯವಾಗಿ ಇತರ ಎಲ್ಲಾ ಲೋಹಗಳು ಪಾದರಸದಲ್ಲಿ ವಿಲೀನವಾಗುತ್ತವೆ. ಇಂಥ ಲೋಹ ಸಂಯೋಜನೆಗೆ (ಮಿಶ್ರಲೋಹ) ಅಮಾಲ್ಗಂ ಎಂದು ಹೆಸರು. ಲೋಹ ಮತ್ತು ಪಾದರಸದ ಸಂಪರ್ಕಮಾತ್ರದಿಂದ, ಅವೆರಡನ್ನೂ ದುರ್ಬಲ ಆಮ್ಲದಲ್ಲಿಟ್ಟಾಗ, ಲೋಹಲವಣದ ದ್ರಾವಣಕ್ಕೆ ಪಾದರಸವನ್ನು ಸೇರಿಸಿದಾಗ ಅಥವಾ ಅದನ್ನು ಪಾದರಸದ ಕ್ಯಾಥೋಡಿನ ನೆರವಿನಿಂದ ವಿದ್ಯುದ್ವಿಭಜನೆಗೆ ಒಳಪಡಿಸಿದಾಗ ಅಮಾಲ್ಗಂಗಳು ಫಲಿಸುತ್ತವೆ. ಪಾದರಸದ ಅಂಶ ಅಧಿಕವಾಗಿದ್ದಾಗ ಅಮಾಲ್ಗಂಗಳು ದ್ರವರೂಪದಲ್ಲಿರುವುವು. ಉಳಿದವು ಘನವಸ್ತುಗಳು. ಸಾಮಾನ್ಯವಾಗಿ ಕಾಯಿಸಿದರೆ ವಿಭಜನೆಯಾಗುತ್ತವೆ. ಆದರೆ ಚಿನ್ನ, ಬೆಳ್ಳಿ ಮತ್ತು ತಾಮ್ರದ ಅಮಾಲ್ಗಂಗಳು ಪಾದರಸದ ಕುದಿಯುವ ಬಿಂದುವಿನಾಚೆಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ಅಂದರೆ ಇವುಗಳ ಅಮಾಲ್ಗಂಅನ್ನು ವಿಭಜಿಸಲು ಅತ್ಯಂತ ಹೆಚ್ಚಿನ ಉಷ್ಣ ಶಕ್ತಿ ಅಗತ್ಯ ಇದೆ. ಪಾದರಸದ ಕುದಿಯುವ ಬಿಂದು 356.73 °C ಇದೆ.

ಉಪಯೋಗಗಳು[ಬದಲಾಯಿಸಿ]

ಕನ್ನಡಿಗಳ ಹಿಂಬದಿಗೆ ತವರದ ಅಮಾಲ್ಗಂ ಲೇಪಿಸುವುದು ಹಿಂದೆ ವಾಡಿಕೆಯಾಗಿತ್ತು.[೧] ರಾಸಾಯನಿಕ ಲೇಪನ ವಿಧಾನ ಬಳಕೆಗೆ ಬಂದಮೇಲೆ ಇದರ ಉಪಯೋಗ ತಪ್ಪಿಹೋಗಿದೆ. ಬೆಳ್ಳಿ ಮತ್ತು ತವರದ ಅಮಾಲ್ಗಂಗಳು ಹಲ್ಲುಗಳಲ್ಲಿರುವ ರಂಧ್ರಗಳನ್ನು ಮುಚ್ಚಲು ಸಹಾಯಕವಾಗಿವೆ.[೨]ವಿದ್ಯುತ್ಕೋಶಗಳ ಸತುವಿನ ಪ್ಲೇಟುಗಳನ್ನು ಅಮಾಲ್ಗಮೇಟ್ ಮಾಡುವುದರಿಂದ ಧ್ರುವೀಕರಣ ಕ್ರಿಯೆಯನ್ನು ಮಿತಿಗೊಳಿಸಬಹುದು. ಚಿನ್ನ ಮತ್ತು ಬೆಳ್ಳಿಯನ್ನು ತಯಾರಿಸುವಾಗ ಪಾದರಸದ ಉಪಯೋಗ ಒಂದು ಕಾಲಕ್ಕೆ ಅನಿವಾರ್ಯವಾಗಿತ್ತು. ಆಧುನಿಕ ವಿಧಾನಗಳು ಆಚರಣೆಗೆ ಬಂದ ಮೇಲೆ ಅಮಾಲ್ಗಮೇಷನ್ ವಿಧಾನದ ಬಳಕೆ ಕಡಿಮೆಯಾಗಿದೆ. 8.5% ಥ್ಯಾಲಿಯಂ ಅಮಾಲ್ಗಂ ಇರುವ ಉಷ್ಣಮಾಪಕ -60 °C. ಉಷ್ಣತೆಯನ್ನು ಸಹ ಅಳೆಯಬಲ್ಲುದು. ನೀರು ಅಥವಾ ದುರ್ಬಲ ಆಮ್ಲದ ಸಂಪರ್ಕದಲ್ಲಿ ಸೋಡಿಯಂ ಅಮಾಲ್ಗಂ ಪ್ರಬಲ ಅಪಕರ್ಷಣಕಾರಿಯಾಗಿ ವರ್ತಿಸುವುದು. ಸಾವಯವ ರಾಸಾಯನಿಕ ಕ್ರಿಯೆಗಳಲ್ಲಿ ಇದರ ಬಳಕೆ ಸರ್ವಸಾಮಾನ್ಯ.

ಅಮಾಲ್ಗಂಗಳೆಲ್ಲ ಮಾನವನಿರ್ಮಿತ. ಆದರೆ ಅಮಾಲ್ಗಂ ಎಂಬುದು ಖನಿಜ ರೂಪದಲ್ಲಿಯೂ ದೊರೆಯುವುದು ಉಂಟು. ಬೆಳ್ಳಿ ಮತ್ತು ಪಾದರಸದ ಸಂಯೋಜನೆಯಿಂದಾದ ಈ ಶ್ವೇತ ವರ್ಣದ ಖನಿಜ ಬವೇರಿಯ ಜಕೋಸ್ಲವೇಕಿಯಾ, ಫ್ರಾನ್ಸ್ ಇತ್ಯಾದಿ ದೇಶಗಳಲ್ಲಿ ದೊರೆಯುತ್ತದೆ. ಆದರೆ ಇದು ತುಂಬಾ ಹೇರಳ ಪ್ರಮಾಣದಲ್ಲಿ ದೊರೆಯುವುದಿಲ್ಲ. ಇಂತಹ ಅಮಾಲ್ಗಂಗಳು ಭೂಗರ್ಭದಲ್ಲಿ ನೈಸರ್ಗಿಕ ರಾಸಾಯನಿಕ ಕ್ರೀಯೆಗಳಿಂದ ಉಂಟಾಗುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Die Sendung mit der Maus, Sachgeschichte vom Spiegel" (in ಜರ್ಮನ್). Archived from the original on 17 April 2009. Retrieved 2009-04-24.
  2. "Dental Amalgam: A Health Risk?". Archived from the original on 2016-10-05. Retrieved 2016-09-30.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮಾಲ್ಗಂ&oldid=1153046" ಇಂದ ಪಡೆಯಲ್ಪಟ್ಟಿದೆ