ಅನಂತ (ತತ್ವಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Infinity represented in screenshot form

ಅನಂತ ಎಂದರೆ ಕೊನೆ ಇಲ್ಲದ್ದು, ಮಿತಿ ಇಲ್ಲದ್ದು, ಅಗಣಿತವಾದದ್ದು. ಈ ಭಾವನೆಗೆ ವಿಶ್ವದಲ್ಲಿ ಮಾನವ ಕಾಣುವ ಅಗಾಧವಾದ ವೈಚಿತ್ರ್ಯ ಮತ್ತು ವೈಶಾಲ್ಯ ಕಾರಣ. ಭೂಮಿಯ ಮೇಲಿರುವ ವಸ್ತುಗಳು, ಸಸ್ಯಗಳು, ಪ್ರಾಣಿಗಳು ಅಗಣಿತ. ಅದರ ಮೇಲಿನ ಆಕಾಶ ಮಿತಿ ಇಲ್ಲದಷ್ಟು ವಿಸ್ತಾರವಾದದ್ದು. ಆಕಾಶದಲ್ಲಿರುವ ತಾರೆಗಳ ಸಂಖ್ಯೆ ಅಮಿತ. ದೇಶಕ್ಕೆ ಎಣೆ ಇಲ್ಲ. ಕಾಲಕ್ಕೆ ಕೊನೆ ಇಲ್ಲ. ನಾವು ದಿಗಂತದ ಕಡೆಗೆ ಎಷ್ಟು ದೂರ ಹೋದರೂ ಆ ದಿಗಂತ ಅಷ್ಟು ಅಷ್ಟು ಹಿಂದಕ್ಕೆ ಸರಿಯುತ್ತದೆ. ಭೂತಕಾಲವೂ ಭವಿಷ್ಯಕಾಲವೂ ಹಾಗೆಯೇ. ಎಷ್ಟು ಹಿಂದಕ್ಕೆ ಹೋದರೂ ಅದರ ಹಿಂದೆ ಕಾಲವಿದ್ದೇ ಇರುತ್ತದೆ. ನಾವು ಎಷ್ಟೆಷ್ಟು ಭವಿಷ್ಯದಲ್ಲಿ ಮುನ್ನಡೆದರೂ ಅದರ ಮುಂದೆ ಭವಿಷ್ಯವಿದ್ದೇ ಇರುತ್ತದೆ. ಈ ಅಪರಿಮಿತಭಾವನೆ ಕಾಲದೇಶಗಳಿಗೆ ಮಾತ್ರವಲ್ಲದೆ ಎಲ್ಲ ಬಗೆಯ ಗುಣಗಳಿಗೂ ಅನ್ವಯಿಸುತ್ತದೆ. ನಾವು ಲೋಕದಲ್ಲಿ ಕಾಣುವ ಬಣ್ಣಗಳು ಇಷ್ಟೇ ಎಂದು ಹೇಳುವುದಕ್ಕಾಗುತ್ತದೆಯೆ? ಹಾಗೆಯೇ ಗಾತ್ರದಲ್ಲೂ ಅಪರಿಮಿತ ಭೇದಗಳಿವೆ. ಒಂದು ವಸ್ತುವನ್ನು ಎಷ್ಟೇ ಸಣ್ಣ ಅಣುವಾಗಿ ಒಡೆದರೂ ಅದಕ್ಕಿಂತ ಅಲ್ಪವಾದದ್ದು ಇದ್ದೇ ಇರುತ್ತದೆ. ಎಷ್ಟೇ ದೊಡ್ಡ ಗಾತ್ರವನ್ನು ಕಲ್ಪಿಸಿಕೊಂಡರೂ ಅದಕ್ಕಿಂತ ದೊಡ್ಡದು ಸಂಭಾವ್ಯ. ಈ ಅನಂತತೆಯನ್ನು ವಸ್ತುಗಳಲ್ಲದೆ ಮಾನವನ ಪ್ರತಿಭೆಯಲ್ಲೂ ಕಾಣಬಹುದು. ಮಾನವನ ಕಾವ್ಯಸೃಷ್ಟಿ ಇಲ್ಲಿಗೇ ಮುಗಿಯಿತು ಎಂದು ಹೇಳಬಹುದೇ? ಇದು ಕಾವ್ಯಕ್ಕಲ್ಲದೆ, ಗೀತ, ನೃತ್ಯ, ಚಿತ್ರ, ಶಿಲ್ಪ ಮುಂತಾದ ಎಲ್ಲ ಕಲೆಗಳಿಗೂ ಅನ್ವಯಿಸುತ್ತದೆ. ಮಾನವನಿಗೆ ಸಹಜವಾದ ಆಶ್ಚರ್ಯ, ಅದ್ಭುತಭಾವ ಈ ಅನಂತಭಾವನೆಯ ಚಿಲುಮೆ; ಅದರ ಚಿಮ್ಮುಹೊಮ್ಮುಗಳಿಗೆ ಕೊನೆಯಿಲ್ಲ.

ತತ್ವಶಾಸ್ತ್ರದಲ್ಲಿ[ಬದಲಾಯಿಸಿ]

ಈ ಭಾವನೆಯ ವಿವೇಚನೆ ವಿಶೇಷವಾಗಿ ನಡೆದಿರುವುದು ಗಣಿತಶಾಸ್ತ್ರ ಮತ್ತು ತತ್ತ್ವಶಾಸ್ತ್ರಗಳಲ್ಲಿ, ಇಲ್ಲಿ ನಮಗೆ ಪ್ರಸಕ್ತವಾದದ್ದು ಮತ ಮತ್ತು ತತ್ತ್ವಶಾಸ್ತ್ರಗಳಲ್ಲಿ ನಡೆದಿರುವ ಅದರ ವಿವೇಚನೆ. ಅದಕ್ಕೆ ಸಂಬಂಧಿಸಿದ ಮುಖ್ಯವಾದ ವಾದಗಳು ಹೀಗಿವೆ. ಈ ಬಗ್ಗೆ ಗ್ರೀಕ್ ಮತ್ತು ಭಾರತೀಯ ತತ್ತ್ವಶಾಸ್ತ್ರರೀತ್ಯ ಸ್ಥೂಲವಾಗಿ ಎರಡು ವಾದಗಳಿವೆ. ಒಂದು ವಾದದವರು ಅನಂತ ಭಾವನೆ ಕೇವಲ ನೇತ್ಯರ್ಥವಾದದ್ದು (ನೆಗೆಟೀವ್), ಅನಿರ್ದಿಷ್ಟವಾದದ್ದು (ಇನ್‍ಡೆಫಿನೆಟ್), ಸ್ಪಷ್ಟ ಮತ್ತು ನಿರ್ದಿಷ್ಟಜ್ಞಾನಾಭಾವ (ಇಗ್ನೊರೆನ್ಸ್) ಸೂಚಕವಾದದ್ದು ಎಂದು ಅದನ್ನು ತುಚ್ಫೀಕರಿಸುತ್ತಾರೆ. ಇನ್ನೊಂದು ವಾದದವರು ಅದು ಭಾವಪ್ರದವಾದದ್ದು, ಭವ್ಯವಾದದ್ದು, ಭೂಮವಾದದ್ದು, ಜೀವದ ಎಲ್ಲ ಬಗೆಯ ಮೌಲ್ಯಗಳಿಗೂ ಜೀವನದ ಅಭ್ಯುದಯಕ್ಕೂ ನಿಶ್ರೇಯಸಕ್ಕೂ ಆಶ್ರಯವಾದದ್ದು ಎಂದು ಹೊಗಳುತ್ತಾರೆ. ಈ ಭಾವನೆ ಜ್ಞಾನಾಭಾವ ಅಥವಾ ಅಸ್ಪಷ್ಟ ಮತ್ತು ಅನಿರ್ದಿಷ್ಟ ಜ್ಞಾನದ ಕುರುಹೆಂದು ಭಾರತೀಯರಲ್ಲಿ ಚಾರ್ವಾಕರೂ ಪಾಶ್ವಾತ್ಯರಲ್ಲಿ ಸಂದೇಹವಾದಿಗಳೂ (ಸ್ಕೆಪ್ಟಿಕ್ಸ್) ಅನುಭವರೂಢವಾದಿಗಳೂ (ಎಂಪಿರಿಸಿಸ್ಟ್ಸ್) ಅದನ್ನು ಅವಹೇಳನ ಮಾಡುತ್ತಾರೆ. ಸ್ಪಷ್ಟವಾಗಿ ಇಂದ್ರಿಯಾನುಭವವೇದ್ಯವಾದದ್ದೆ ನಂಬಲರ್ಹವದದ್ದು. ಅನಂತವೆಂಬುದು ಅನುಭವಾತೀತವಾದ್ದರಿಂದ ಅದು ನಂಬಲರ್ಹವಲ್ಲ. ಅದು ಮಿಥ್ಯಾ ಭಾವನೆ. ಅದನ್ನು ನಂಬಿದರೆ ಪರಸ್ಪರ ವಿರುದ್ಧವಾದ ತಾತ್ತ್ವಿಕ ಅಭಾಸಗಳು ಹುಟ್ಟುತ್ತವೆ ಎಂದು ಡೇವಿಡ್ ಹ್ಯೂಂ ವಾದಿಸಿರುತ್ತಾನೆ. ಈ ವಿಧವಾದ ಪರಸ್ಪರವಿರುದ್ಧಭಾವನೆಗಳು ಹುಟ್ಟುವುದಕ್ಕೆ ಇಂದ್ರಿಯಾಶ್ರಯವುಳ್ಳ ಬುದ್ಧಿಯ ಭಾವನೆಗಳ ತಳಪಾಯದ ಮೇಲೆ, ಅಂದರೆ ಭೌತವಿಜ್ಞಾನದ ಭಾವನೆಗಳನ್ನು ಆಶ್ರಯಿಸಿ ತತ್ತ್ವಸೌಧವನ್ನು ಕಟ್ಟಲು ಯತ್ನಿಸುವುದೇ ಕಾರಣ. ಆದರೆ ಪ್ರತಿಭಟನಾರೂಢವಾದ ಅಧ್ಯಾತ್ಮ ಧರ್ಮವಿಚಾರದಲ್ಲಿ ಈ ಪರಸ್ಪರ ವಿರೋಧಾಭಾಸಗಳಿಗೆ ಅವಕಾಶವಿಲ್ಲ ಎಂದು ಇಮ್ಯಾನ್ಯುಅಲ್ ಕಾಂಟ್ ತನ್ನ ತತ್ತ್ವವನ್ನು ಮುಕ್ತಾಯಗೊಳಿಸಿರುತ್ತಾನೆ.

ಆಶ್ರಯ ತತ್ವಗಳು[ಬದಲಾಯಿಸಿ]

ಅನಂತನೆಂಬ ಭಾವನೆಯನ್ನು ಭಾವರೂಪವಾಗಿ ಎಣಿಸಿ ಪುರಸ್ಕರಿಸಿದ ತತ್ತ್ವಗಳಲ್ಲಿ ಮುಖ್ಯವಾದುವು ಮೂರು: ಅನುಭಾವತತ್ತ್ವ (ಮಿಸ್ಟಿಸಿಸಮ್), ಸೇಶ್ವರತತ್ತ್ವ (ಥೀಯಿಸಮ್) ಮತ್ತು ಅದ್ವೈತತತ್ತ್ವ. ಲೋಕವ್ಯವಹಾರದಲ್ಲಿ ಗೋಚರವಾದ ವಸ್ತುಗಳೇ ನಿಜವಾಗಿ ಇರುವುವು ಎಂದು ನಾವು ಭಾವಿಸುತ್ತೇವೆ. ಆದರೆ ವಿಚಾರಮಾಡಿದಾಗ ಇವು ಅಸ್ಥಿರ ಎಂದು ಸ್ಪಷ್ಟವಾಗುತ್ತದೆ. ವ್ಯಾವಹಾರಿಕವಾಗಿ ನಾವು ಇರುವುದೆಂದು ಭಾವಿಸುವ ಒಂದೊಂದಕ್ಕೂ ಹುಟ್ಟು, ಬೆಳೆವಣಿಗೆ, ಸಾವು ಇದ್ದೇ ಇರುತ್ತದೆ. ಎಷ್ಟೇ ದೀರ್ಘಕಾಲ ಬಾಳಿದರೂ ಅದು ಕೊನೆಗಾಣಲೇಬೇಕು. ಈ ಭೂಮಿ, ಸೂರ್ಯಚಂದ್ರಾದಿಗಳು ಲಕ್ಷಾಂತರ ವರ್ಷಗಳ ಹಿಂದೆ ಹುಟ್ಟಿರಬಹುದು. ಮುಂದೆ ಲಕ್ಷಾಂತರ ವರ್ಷಗಳ ಕಾಲ ಅವು ಇರಬಹುದು. ಇದರೆ ಅವು ಎಂದಾದರೂ ನಾಶವಾಗುವಂಥವೇ. ಯಾವುದಕ್ಕೆ ಹುಟ್ಟು ಇದೆಯೋ ಅದಕ್ಕೆ ಸಾವೂ ಸಿದ್ಧ. ಅವುಗಳ ಅಸ್ತಿತ್ವ ಸ್ಥಿರಚಿರವಲ್ಲ. ಆದ್ದರಿಂದ ಇವುಗಳನ್ನು ಸತ್ ಎಂದು ಕರೆಯಲಾಗುವುದಿಲ್ಲ. ಇವು ಉಪಾಧಿಗೆ ಒಳಪಟ್ಟುವಾದದ್ದರಿಂದ ಇವುಗಳ ಸ್ವಭಾವಕ್ಕೆ ಸ್ಥಿರವಾದ ಭಾವರೂಪವಿಲ್ಲ. ಸ್ಥಿರವಾದ ಭಾವರೂಪವುಳ್ಳ ವಸ್ತುವೆಂದರೆ ಪರವಸ್ತು ಮಾತ್ರ. ಅನಂತವೆಂದು ಹೆಸರಿಸಲು ಯೋಗ್ಯವಾದ ವಸ್ತು ಪರಮಚೇತನ. ಅದು ಎಲ್ಲದರ ಹುಟ್ಟಿಗೂ ಬೆಳೆವಿಗೂ ಕಾರಣ; ಅದೊಂದೇ ಪೂರ್ಣವಾದದ್ದು; ಉಳಿದವೆಲ್ಲ ಅಪೂರ್ಣ. ಅದು ಇಂದ್ರಿಯವೇದ್ಯವಲ್ಲ. ಅದು ಬುದ್ಧಿಯಿಂದ ತಿಳಿಯಲಾಗದ ವಸ್ತು. ಅಪರೋಕ್ಷ ಪ್ರತಿಭಾವದಿಂದ ಮಾತ್ರ ಅದು ಸಾಕ್ಷಾತ್ಕಾರ ಮಾಡಿಕೊಳ್ಳಬಹುದಾದದ್ದು. ಅದು ಗುಣಾತೀತ. ಅದಕ್ಕೆ ಯಾವುದೊಂದು ಗುಣವನ್ನು ಆರೋಪಿಸಿದರೂ ಅದನ್ನು ಮೊಟಕು ಮಾಡಿದಂತಾಗುತ್ತದೆ. ಇದು ಅನುಭಾವ ತತ್ತ್ವದ ನಿಲುವು. ಸೇಶ್ವರತತ್ತ್ವವಾದರೋ ಅನಂತನಾದ ಈಶ್ವರ ಅನಂತಗುಣ ಪರಿಪೂರ್ಣನೆಂದೂ ಸರ್ವವ್ಯಾಪಿಯೆಂದೂ ಸರ್ವಜ್ಞನೆಂದೂ ಸರ್ವಶಕ್ತನೆಂದೂ ಅನಂದಮಯನೆಂದೂ ಭಾವಿಸುತ್ತದೆ. ಈ ಬಗೆಯ ಈಶ್ವರಭಾವನೆ ಪರಮಸತ್ ಅಲ್ಲ. ಪರವಸ್ತುವಿಗೆ ಬುದ್ಧಿಕಲ್ಪಿತವಾದ ಯಾವ ಗುಣವನ್ನು ಆರೋಪಿಸಿದರೂ ಉಪಾಧಿಗೆ ಒಳಪಡಿಸಿದಂತಾಗುವುದು. ಗುಣಾತೀತವಾದುದೇ ನಿರುಪಾಧಿಕವಾದ ಸತ್. ಆ ಕಾರಣದಿಂದಲೇ ಅದು ಅನಂತವಾಗಬಲ್ಲುದು. ಅದ್ವಿತೀಯವಾಗಬಲ್ಲುದು. ಇದು ಅದ್ವೈತ ತತ್ತ್ವಸಾರ. ಈ ವಾದ ಬಹುಮಟ್ಟಿಗೆ ಅನುಭಾವವಾದವನ್ನು ಒಳಗೊಳ್ಳುತ್ತದೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಜೀವನ್ಮುಕ್ತಿಯೇ ನಿಜವಾದ ಮುಕ್ತಿ. ಅಭೇದ ಸಿದ್ಧಿಯೇ ಜೀವನ್ಮುಕ್ತಿ ಎಂಬ ಭಾವನೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: