ಅತುಲ್‌ ಕುಲಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅತುಲ್‌ ಕುಲಕರ್ಣಿ
Born (1965-09-10) ೧೦ ಸೆಪ್ಟೆಂಬರ್ ೧೯೬೫ (ವಯಸ್ಸು ೫೮)
Nationalityಭಾರತೀಯ
Occupationನಟ
Spouseಗೀತಾಂಜಲಿ ಕುಲಕರ್ಣಿ[೧]
Websitewww.atulkulkarni.com

ಅತುಲ್ ಕುಲಕರ್ಣಿ (ಜನನ:೧೦ ಸೆಪ್ಟೆಂಬರ್ ೧೯೬೫) ಹಿಂದಿ, ಕನ್ನಡ, ತಮಿಳು, ಮಲಯಾಳಂ, ತೆಲುಗು, ಮರಾಠಿ ಮತ್ತು ಇಂಗ್ಲಿಷ್ ಭಾಷೆಯ ಚಲನಚಿತ್ರಗಳಲ್ಲಿ ಅಭಿನಯಿಸಿದ ಭಾರತೀಯ ಚಲನಚಿತ್ರ ನಟ.

ಹೇ ರಾಮ್ ಮತ್ತು ಚಾಂದನಿ ಬಾರ್ ಹಿಂದಿ ಚಲನಚಿತ್ರಗಳಲ್ಲಿನ ತಮ್ಮ ಪಾತ್ರಕ್ಕೆ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಕುಲಕರ್ಣಿಯವರು ಪಡೆದುಕೊಂಡಿದ್ದಾರೆ. ಅವರು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೇಂದ್ರೀಕೃತ ಸಂಶೋಧನಾ-ಸಂಘಟನಾ ಸಂಸ್ಥೆ ಕ್ವೆಸ್ಟ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜನನ[ಬದಲಾಯಿಸಿ]

ಕುಲಕರ್ಣಿ 10 ಸೆಪ್ಟೆಂಬರ್ 1965 ರಂದು ಕರ್ನಾಟಕಬೆಳಗಾವಿಯಲ್ಲಿ ಜನಿಸಿದರು.

ಶಿಕ್ಷಣ[ಬದಲಾಯಿಸಿ]

ಸೊಲ್ಲಾಪುರದ ಹರಿಭಾಯ್ ದೇಯೋಕಾರನ್ ಪ್ರೌಢ ಶಾಲೆಯಲ್ಲಿ ತಮ್ಮ ಮಾಧ್ಯಮಿಕ, ಪ್ರೌಢ ಶಿಕ್ಷಣವನ್ನು ಕುಲಕರ್ಣಿ ಅವರು ಪೂರ್ಣಗೊಳಿಸಿದರು. ಜೂನಿಯರ್ ಕಾಲೇಜ್ ಅನ್ನು ಬೆಳಗಾವಿಯಲ್ಲಿ ಪೂರ್ಣಗೊಳಿಸಿದರು ಮತ್ತು ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ತಮ್ಮ ಪದವಿಯನ್ನು ಪಡೆದರು. ಕುಲಕರ್ಣಿ ಅವರು ರಂಗಭೂಮಿ ನಟಿ ಗೀತಾಂಜಲಿ ಕುಲಕರ್ಣಿ ಅವರನ್ನು ವಿವಾಹವಾದರು.ಅವರು ನವದೆಹಲಿರಾಷ್ಟ್ರೀಯ ನಾಟಕ ಶಾಲೆಯಲ್ಲಿ ಭೇಟಿಯಾಗಿದ್ದರು.

ಕುಲಕರ್ಣಿ ಅವರ ಪ್ರೌಢಶಾಲೆಯ ದಿನಗಳು ಅವರ ಮೊದಲ ಹಂತದ ನಟನೆಗೆ ವೇದಿಕೆಯಾದವು. ನಂತರ ಕಾಲೇಜು ದಿನಗಳಲ್ಲಿ ಅವರು ಸಕ್ರಿಯವಾಗಿ ಸಾಂಸ್ಕೃತಿಕ ಕೂಟಗಳಲ್ಲಿ ಪಾಲ್ಗೊಂಡರು. ಅಧ್ಯಯನ ಮಾಡುವಾಗ, ಅತುಲ್ ಸೊಲ್ಲಾಪುರ ಮೂಲದ ರಂಗತಂಡ ನಾಟ್ಯ ಆರಾಧನಾವನ್ನು ಸೇರಿಕೊಂಡರು. ಹವ್ಯಾಸಿ ನಾಟಕ ತಂಡವಾಗಿದ್ದ ನಾಟ್ಯ ಅರಾಧನಾದಲ್ಲಿ ತಮ್ಮ ಅಭಿನಯವನ್ನು ಹದಗೊಳಿಸಿಕೊಂಡ ಅವರು, ನಂತರದ ದಿನಗಳಲ್ಲಿ ನವದೆಹಲಿರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಾಟಕೀಯ ಕಲೆಗಳಲ್ಲಿ ಪದವಿಪೂರ್ವ ಡಿಪ್ಲೊಮಾವನ್ನು ಪಡೆದರು.

ಅಭಿನಯ[ಬದಲಾಯಿಸಿ]

ಅತುಲ್ ಕೇಸರಿ ಹರವುರವರ ನಿರ್ದೇಶನದ ಭೂಮಿಗೀತ ಕನ್ನಡ ಚಿತ್ರದ ಮೂಲಕ ಚಲನಚಿತ್ರ ನಟನೆಗೆ ಪಾದಾರ್ಪನೆ ಮಾಡಿದರು. ಜಿಲ್ಲಾಧಿಕಾರಿಯಾಗಿ ಹಾಡಿಯೊಳಗೆ ವಾಸವಾಗಿರುವ ಗಿರಿಜನರನ್ನು ಒಕ್ಕಲೆಬ್ಬಿಸುವ ಖಳನಟನಾಗಿ ನಟಿಸಿದ ಅತುಲ್ ವ್ಯಾಪಕ ಪ್ರಶಂಸೆ ಪಡೆದರು. ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ ಅತುಲ್, ಕಮಲ್ ಹಾಸನ್ ನಿರ್ದೇಶನದ ಹೇ ರಾಮ್ ಚಿತ್ರದಲ್ಲಿ ಹಿಂದೂ ಮೂಲಭೂತವಾದಿಯಾಗಿ ನಟಿಸಿ ರಾಷ್ಟ್ರಪ್ರಶಸ್ತಿ ಪಡೆದರು. ೨೦೦೪ರಲ್ಲಿ ರಾಜ್ ಕುಮಾರ್ ಸಂತೋಷಿ ನಿರ್ದೇಶನದ ಖಾಕಿ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಎದುರು ಮತ್ತು ೨೦೦೬ರಲ್ಲಿ ಅಮೀರ್ ಖಾನ್ ರೊಂದಿಗೆ ರಂಗ್ ದೇ ಬಸಂತಿ, ಹೀಗೆ ಹಲವು ಪ್ರಮುಖ ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಮನಗೆದ್ದರು. ಕಲಾತ್ಮಕ-ಬ್ರಿಜ್-ವಾಣಿಜ್ಯಾತ್ಮಕ ಹೀಗೆ ಎಲ್ಲ ಬಗೆಯ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡ ಅಪರೂಪದ ಕಲಾವಿದ ಅತುಲ್.

ಕನ್ನಡದಲ್ಲಿ ಬ್ರಿಜ್ ಚಿತ್ರಗಳಾದ ಆ ದಿನಗಳು, ಮೈತ್ರಿ, ಎದೆಗಾರಿಕೆ, ವಾಣಿಜ್ಯಾತ್ಮಕ ಚಿತ್ರಗಳಾದ ಯಕ್ಷ, ಉಗ್ರಂ, ಅಭಿನೇತ್ರಿ ಚಿತ್ರಗಳಲ್ಲಿ ನಟಿಸಿರುವ ಅತುಲ್, ನಿರ್ದೇಶಕರ ನೆಚ್ಚಿನ ನಟ. ನಿರ್ದೇಶಕಿ ಸುಮನ ಕಿತ್ತೂರ್ ತಮ್ಮ ಚಿತ್ರಗಳಾದ ಆ ದಿನಗಳು ಮತ್ತು ಎದೆಗಾರಿಕೆ, ಈ ಎರಡೂ ಚಿತ್ರಗಳಲ್ಲಿ ಶ್ರೀಧರಮೂರ್ತಿ (ಅಗ್ನಿ ಶ್ರೀಧರ್) ನಿರ್ವಹಿಸಿದ ಅತುಲ್ ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಚೊಚ್ಚಲ ಫಿಲಂಫೇರ್ ಪ್ರಶಸ್ತಿ ಪಡೆಯುವ ಸಂಧರ್ಭದಲ್ಲಿ ಸಾಂಪ್ರದಾಯಿಕ ಪಂಚೆ-ಉತ್ತರೀಯ ತೊಟ್ಟು ಆಗಮಿಸಿದ ಅತುಲ್, ಎಲ್ಲರ ಮೆಚ್ಚುಗೆಗೆ ಪಾತ್ರರಾದರು.[೨] ತಮ್ಮ ಮಾತೃ ಭಾಷೆ ಮರಾಠಿಯಲ್ಲಿ ಕಲಾತ್ಮಕ ಚಿತ್ರಗಳಲ್ಲಿ ನಟಿಸಿರುವ ಅತುಲ್ ವಾಸ್ತುಪುರುಷ್, ದೇವರಾಜ್,ನಟರಂಗ್ ಹೀಗೆ ಅಭಿನಯಕ್ಕೆ ಒತ್ತು ನೀಡುವ ಪಾತ್ರಗಳನ್ನು ಹೆಚ್ಚು ಇಷ್ಟಪಟ್ಟು ಮಾಡುವ ನಟ.

ಪ್ರಶಸ್ತಿಗಳು[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು[ಬದಲಾಯಿಸಿ]

ಫಿಲಂಫೇರ್ ಪ್ರಶಸ್ತಿಗಳು[ಬದಲಾಯಿಸಿ]

  • ೧೯೯೯: ನಾಮನಿರ್ದೇಶಿತ : ಹೇ ರಾಮ್ ಅತ್ಯುತ್ತಮ ಪೋಷಕ ನಟ
  • ೨೦೧೨: ವಿಜೇತ : ಎದೆಗಾರಿಕೆ ಕನ್ನಡಕ್ಕಾಗಿ ಅತ್ಯುತ್ತಮ ಪೋಷಕ ನಟ ಫಿಲಂಫೇರ್ ಪ್ರಶಸ್ತಿ

ಏಷಿಯಾ ಪೆಸಿಫಿಕ್ ಸ್ಕ್ರೀನ್ ಪ್ರಶಸ್ತಿಗಳು[ಬದಲಾಯಿಸಿ]

  • ೨೦೧೦: ನಾಮನಿರ್ದೇಶಿತ : ನಟರಂಗ್ ನಟನೆಗಾಗಿ ಅತ್ಯುತ್ತಮ ನಟನೆ

ಉಲ್ಲೇಖಗಳು[ಬದಲಾಯಿಸಿ]

  1. "ರಂಗ ನಟಿ ಗೀತಾಂಜಲಿ ಕುಲಕರ್ಣಿಯವರ ಕುರಿತ ಆಂಗ್ಲ ದೈನಿಕದ ವರದಿ". ದಿ ಟೈಮ್ಸ್ ಆಫ್‌ ಇಂಡಿಯಾ.
  2. "ಅತ್ಯುತ್ತಮ ಪೋಷಕ ನಟ ಫಿಲಂಫೇರ್ ಪ್ರಶಸ್ತಿ". timesofindia. 5 April 2015. Retrieved 3 August 2015.
  3. "ಹೇ ರಾಮ್ - ಅತ್ಯುತ್ತಮ ಪೋಷಕ ನಟ" (PDF). dff.nic.in. 5 April 2015. Archived from the original (PDF) on 7 ಜನವರಿ 2018. Retrieved 3 August 2015.
  4. "ಚಾಂದನಿ ಬಾರ್ - ಅತ್ಯುತ್ತಮ ಪೋಷಕ ನಟ" (PDF). dff.nic.in. 5 April 2015. Archived from the original (PDF) on 29 ಅಕ್ಟೋಬರ್ 2013. Retrieved 3 August 2015.

ಕೊಂಡಿಗಳು[ಬದಲಾಯಿಸಿ]