ಅಣುರೋಹಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೆಟಲ್ ಹ್ಯಾಲೈಡ್‍ನ ಅಣುರೋಹಿತ

ರಾಸಾಯನಿಕ ಕ್ರಿಯೆಗೆ ಒಳಗಾಗಿ ಉರಿಯುತ್ತಿರುವ ಅನಿಲಗಳ ಜ್ವಾಲೆಯ ಬೆಳಕಿನ ರೋಹಿತ (ಉದಾ:ಗಾಳಿಯಲ್ಲಿ ಉರಿಯುತ್ತಿರುವ ಕಲ್ಲಿದ್ದಲಿನ ಅನಿಲ) ಅವಿಚ್ಛಿನ್ನವಾಗಿ ಇರುವುದಿಲ್ಲ. ಅದು ಪ್ರಕಾಶಮಾನವಾದ ಗೆರೆಗಳ ಪರಂಪರೆಯಿಂದ ಅಥವಾ ಪಟ್ಟಿಗಳಿಂದ ಕೂಡಿರುವಂತೆ ಕಾಣುತ್ತದೆ. ಇದು ಅಣುರೋಹಿತದ (ಮೊಲಿಕ್ಯುಲರ್ ಸ್ಪೆಕ್ಟ್ರಮ್) ವೈಶಿಷ್ಟ್ಯ. ಪರಮಾಣುರೋಹಿತ ಹೀಗಿರುವುದಿಲ್ಲ. ಅಲ್ಲಿ ಗೆರೆಗಳು ವಿಚ್ಛಿನ್ನವಾಗಿರುವುವು. ಪರಮಾಣುರೋಹಿತವನ್ನು ರೇಖಾರೋಹಿತ (ಲೈನ್ ಸ್ಪೆಕ್ಟ್ರಮ್) ಎಂದೂ ಅಣುರೋಹಿತವನ್ನು ಪಟ್ಟಿರೋಹಿತ (ಬ್ಯಾಂಡ್ ಸ್ಪೆಕ್ಟ್ರಮ್) ಎಂದೂ ಕರೆಯುತ್ತಾರೆ. ಅಣುರೋಹಿತಗಳ ಅಭ್ಯಾಸ ಭೌತ ಮತ್ತು ರಸಾಯನಶಾಸ್ತ್ರಗಳ ಬೆಳೆವಣಿಗೆಗೂ ಅಣುಗಳ ರಚನಾಕ್ರಮವನ್ನು ವಿವರಿಸುವುದರಲ್ಲಿಯೂ ಪ್ರಮುಖ ಪಾತ್ರವಹಿಸಿದೆ. ಖಭೌತಶಾಸ್ತ್ರದಲ್ಲಿ ಮತ್ತು ಉಷ್ಣಚಲನಶಾಸ್ತ್ರದಲ್ಲಿ ಇದರ ಉಪಯೋಗ ಗಮನಾರ್ಹವಾಗಿದೆ.

ವೀಕ್ಷಣೆ ಹಾಗೂ ವಿಧಗಳು[ಬದಲಾಯಿಸಿ]

ಅಣುರೋಹಿತಗಳ ಅಭ್ಯಾಸ ಭೌತ ಮತ್ತು ರಸಾಯನಶಾಸ್ತ್ರಗಳ ಬೆಳೆವಣಿಗೆಗೂ ಅಣುಗಳ ರಚನಾಕ್ರಮವನ್ನು ವಿವರಿಸುವುದರಲ್ಲಿಯೂ ಪ್ರಮುಖ ಪಾತ್ರವಹಿಸಿದೆ. ಖಭೌತಶಾಸ್ತ್ರದಲ್ಲಿ ಮತ್ತು ಉಷ್ಣಚಲನಶಾಸ್ತ್ರದಲ್ಲಿ ಇದರ ಉಪಯೋಗ ಗಮನಾರ್ಹವಾಗಿದೆ. ಬೆಳಕಿನ ಒಂದೊಂದು ತರಂಗಮಾನ ಪ್ರದೇಶದ ಅಭ್ಯಾಸಕ್ಕೂ ಅನುಗುಣವಾಗಿ ಅಣುರೋಹಿತ ವೀಕ್ಷಣೆಯಲ್ಲಿ ಒಂದೊಂದು ಕ್ರಮವಿದೆ. ೧ ಸೆಂ.ಮೀ. ತರಂಗಮಾನದಿಂದ ತೊಡಗಿ ಸುಮಾರು ಸೆಂ.ಮೀ. ವರೆಗೂ (ಅಥವಾ ೧,೦೦೦ ಆಂಗ್‍ಸ್ಟ್ರಾಂ, ೧°= ಸೆಂ. ಮೀ.) ಅಣುರೋಹಿತವನ್ನು ನೋಡಬಹುದು. ಅಣುಗಳು ಬೇರೆ ಬೇರೆ ಶಕ್ತಿ ಸ್ಥಿತಿಗಳಲ್ಲಿರುತ್ತವೆ. ಅಣು ಒಂದು ಶಕ್ತಿಸ್ಥಿತಿಯಿಂದ ಇನ್ನೊಂದು ಶಕ್ತಿ ಸ್ಥಿತಿಗೆ ಜಿಗಿಯುವಾಗ ರೋಹಿತದಲ್ಲಿ ಗೆರೆಗಳು ಉಂಟಾಗುತ್ತದೆ. ಹೀಗೆ ಅಣು ಅಧಿಕ ಶಕ್ತಿಯಿಂದ ಕಡಿಮೆ ಶಕ್ತಿಗೆ ಜಿಗಿದಾಗ ಒಂದು ಫೋಟಾನ್‍ನಷ್ಟು ಶಕ್ತಿ ಬಿಡುಗಡೆ ಹೊಂದುತ್ತದೆ. ಇದನ್ನು ಪ್ಲಾಂಕ್ಸ್‍ನ ಸ್ಥಿರಾಂಕದ ಮೂಲಕ ಅಳೆಯುತ್ತಾರೆ.

ಇತಿಹಾಸ[ಬದಲಾಯಿಸಿ]

೧೯ನೇಯ ಶತಮಾನದಲ್ಲಿ ಬುನ್‍ಸನ್ ಮತ್ತು ಕೀರ್ಷಾಫ್ ಇವರು ಪರಮಾಣು ರೋಹಿತದ ಮೂಲಕ ಗುಣಸಂಬಂಧಿ ವಿಭಜನೆ ನಡೆಸುವ ದಾರಿಯಲ್ಲಿ ಸಾಗಿದರು. ಸೀಸಿಯಂ ಮತ್ತು ಥಾಲಿಯಂನಂಥ ಹೊಸ ಮೂಲವಸ್ತುಗಳು ಹೀಗೆ ಶೋಧಿತವಾದುವು. ಸೂರ್ಯನಲ್ಲಿ ಹೀಲಿಯಂ ಎಂಬ ಮೂಲವಸ್ತುವಿರುವುದನ್ನು ಗುರುತಿಸಿದ್ದು ಈ ಕ್ರಮದಿಂದಲೇ, ೧೯೨೦-೧೯೩೦ರವರೆಗೆ ಅಣುಗಳಲ್ಲಿನ ಶಕ್ತಿ ಮಟ್ಟಗಳ ವಿಷಯವಾಗಿ ಸಿದ್ಧಾಂತಗಳನ್ನು ಸೂತ್ರಗಳ ಮೂಲಕ ಸ್ಪಷ್ಟಪಡಿಸುವವರೆಗೆ ಅಣು ರೋಹಿತಶಾಸ್ತ್ರದಲ್ಲಿ ಹೆಚ್ಚು ಪ್ರಗತಿ ಆಗಲಿಲ್ಲ. ಬಹುಪರಮಾಣುವಿನ ಅಣುಗಳ ರೋಹಿತ ಕ್ಲಿಷ್ಟ ಸಮಸ್ಯೆಗಳನ್ನು ಒಡ್ಡಿ ಹೆಚ್ಚು ಗಮನ ಸೆಳೆಯಿತು (೧೯೪೫). ೧೯೬೦ರ ವೇಳೆಗೆ ಪ್ರಯೋಗಗಳು ಸಿದ್ಧಾಂತಗಳಿಗಿಂತ ಅದೆಷ್ಟೊ ಮುಂದೆ ಇದ್ದುವು. ಬಹು ಪರಮಾಣುವಿನ ಅಣುಗಳ ರಚನೆಯನ್ನು ಕುರಿತು ಪರಿಮಾಣಸಂಬಂಧಿ ಸಿದ್ಧಾಂತಗಳನ್ನು ಇನ್ನೂ ಕಂಡುಹಿಡಿಯಬೇಕಾಗಿದೆಯಷ್ಟೆ.

ಅನ್ವೇಷಣೆ[ಬದಲಾಯಿಸಿ]

ಎಲೆಕ್ಟ್ರಾನಿಕ್ ರೋಹಿತಗಳ ವಿಷಯವನ್ನು ಇಲ್ಲಿ ಉಲ್ಲೇಖಿಸಬಹುದು. ಎರಡು ಪರಮಾಣುಗಳು ದೂರದಲ್ಲಿದ್ದರೆ ಅವುಗಳ ಪರಸ್ಪರಕ್ರಿಯೆಗಳು ಗಮನಾರ್ಹವಲ್ಲ. ಅವುಗಳನ್ನು ಸಾಕಷ್ಟು ಹತ್ತಿರ ತಂದಾಗ ಋಣಧ್ರುವ-ಋಣಧ್ರ್ರುವ ಮತ್ತು ಬೀಜಾಣು-ಬೀಜಾಣುಗಳ ಪರಸ್ಪರ ಕ್ರಿಯೆಗಳಿಂದ ವಿಕರ್ಷಣೆ ಉಂಟಾಗುತ್ತದೆ. ಯಾವುದೇ ಮಧ್ಯ ದೂರಗಳಲ್ಲಿ ಪರಮಾಣುಗಳು ಪರಸ್ಪರ ಕ್ರಿಯೆಯಿಂದ ಸ್ಥಿರವಾದ ರಾಸಾಯನಿಕ ಬಂಧನಗೊಂಡು (ಸ್ಟೇಬಲ್ ಕೆಮಿಕಲ್ ಬಾಂಡ್) ರೂಪುಗೊಳ್ಳುವುದರಿಂದ ಸ್ಥಿತಿಶಕ್ತಿ (ಪೊಟೆನ್ಷಿಯಲ್ ಎನರ್ಜಿ) ಕಡಿಮೆಯಾಗುತ್ತದೆ ಅಥವಾ ಪರಮಾಣುಗಳು ಎಲ್ಲ ದೂರಗಳಲ್ಲಿಯೂ ಒಂದನ್ನೊಂದು ವಿಕರ್ಷಿಸುತ್ತವೆ.

ಹೈಡ್ರೋಜನ್‍ನ ರೋಹಿತ

ಬೇರೆ ಬೇರೆ ಸ್ಥಿತಿಯ ಋಣಕಣದ ಶಕ್ತಿಯನ್ನು ಕೊಡುವ ಋಣಕಣಗಳನ್ನು ಪರಮಾಣುವಿನ ಬೀಜಾಣುವಿನ ಸುತ್ತಲೂ ಬೇರೆ ಬೇರೆ ರೀತಿಯಲ್ಲಿ ವ್ಯವಸ್ಥೆ ಮಾಡುವಂತೆ ಅಣುಗಳಲ್ಲೂ ಕೂಡ ಇದೇ ರೀತಿ ವ್ಯವಸ್ಥೆ ಇದೆ. ಅಣುವಿನ ಎರಡು ಬೇರೆ ಋಣ ಸಂಬಂಧ (ಎಲೆಕ್ಟ್ರಾನಿಕ್) ಸ್ಥಿತಿಗಳ ಭ್ರಮಣದ ಮತ್ತು ಕಂಪನದ ಮಟ್ಟಗಳ ಮಧ್ಯೆ ಉಂಟಾಗುವ ಬದಲಾವಣೆಯಿಂದ ಎಲೆಕ್ಟ್ರಾನಿಕ್ ರೋಹಿತ ಉದಯಿಸುತ್ತದೆ. ಅನೇಕ ವೇಳೆ ಇಂಥ ಸ್ಥಿತಿಗಳು ಹೆಚ್ಚಾಗಿ ಶಕ್ತಿಯಲ್ಲಿ ಬೇರ್ಪಟ್ಟಿರುವುದರಿಂದ ಸ್ಥಾನಾಂತರಗಳು ಸೆಂ.ಮೀ. ಅಥವಾ ೧೦,೦೦೦ ಆ.-೧೦೦೦ ಆ. ತರಂಗಮಾನದಲ್ಲಿ ಸಂಭವಿಸುತ್ತವೆ. ಈ ತರಂಗಮಾನದ ಭಾಗ ಊದಾಬಣ್ಣದಿಂದ (ಸುಮಾರು ೪೦೦೦ ಆ.) ಕೆಂಪು ಬಣ್ಣದ ವರೆಗೆ (ಸುಮಾರು ೭೦೦೦ ಆ.) ಇರುವ ಕಣ್ಣಿಗೆ ಕಾಣುವ ಬೆಳಕನ್ನು ಒಳಗೊಂಡಿದೆ. ಇಂಥ ಸ್ಥಿತ್ಯಂತರವನ್ನು ಎಲೆಕ್ಟ್ರಾನಿಕ್ ಪಟ್ಟಿ ವ್ಯವಸ್ಥೆ (ಎಲೆಕ್ಟ್ರಾನಿಕ್ ಬ್ಯಾಂಡ್ ಸಿಸ್ಟಮ್) ಎಂದು ಕರೆಯುತ್ತಾರೆ.

ಕಬ್ಬಿಣದ ರೋಹಿತ

ಅಣುರಚನೆಯನ್ನು ಪ್ರತ್ಯಕ್ಷವಾಗಿ ತಿಳಿಸುವ ಸಾಧನ ಅಣುರೋಹಿತ. ದ್ವಿಪರಮಾಣು (ಅಂದರೆ ಎರಡು ಪರಮಾಣುಗಳಿಂದ ಕೂಡಿದ) ಅಣುವಿನ ಗಾತ್ರವನ್ನು ನಿಖರವಾಗಿ ಅದರ ರೋಹಿತದಿಂದ ತಿಳಿಯಬಹುದು. ಇಲ್ಲಿಯವರೆಗೂ ಬಹುಪರಮಾಣು ಅಣುಗಳ ಅಭ್ಯಾಸದಲ್ಲಿ ಅತಿರಕ್ತ, ರಾಮನ್ ಮತ್ತು ಸೂಕ್ಷ್ಮತರಂಗ ರೋಹಿತಗಳು ಅತ್ಯಂತ ಸಹಕಾರಿಯಾಗಿವೆ. ಬಹುಪರಮಾಣು ಅಣುಗಳ ಎಲೆಕ್ಟ್ರಾನಿಕ್ ರೋಹಿತಗಳು ಸಾಮಾನ್ಯವಾಗಿ ಕ್ಲಿಷ್ಟವಾಗಿವೆ. ಸರಳ ಸಂದರ್ಭಗಳಲ್ಲಿ ರೋಹಿತ ಅಣುವಿನ ಸಮಸ್ಥಿತಿ ವಿನ್ಯಾಸ ಮತ್ತು ಕಂಪನದ ಕ್ರಮವನ್ನು ತಿಳಿಸುತ್ತದೆ.

ಉಲ್ಲೇಖ[ಬದಲಾಯಿಸಿ]

Emission spectra of atmospheric gases