ನಾಲ್ಕುನಾಡು ಅರಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಲ್ಕುನಾಡು ಅರಮನೆಯು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿದೆ. ಕೊಡಗನ್ನು ಕ್ರಿಸ್ತ ಶಕ ಸುಮಾರು ೧೬೦೦ರಿಂದ ೧೮೩೪ರವರೆಗ ಆಳಿದ ಇಕ್ಕೇರಿಯ ಲಿಂಗಾಯತ ರಾಜರು ಮಡಿಕೇರಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಈ ಸ್ಥಳ ಎದ್ದು ಕಾಣುವಂತಿದ್ದು, ಶತ್ರುಗಳಿಂದ ತಲೆಮರೆಸಿರಲು, ಅಥವಾ ಇನ್ಯಾವದೇ ಕಾರಣಕ್ಕಾಗಿ ಗೋಪ್ಯವಾಗಿರಲು ಆಗಿನ ಕಾಲಕ್ಕೆ ದುರ್ಗಮವಾಗಿದ್ದ ನಾಲ್ಕುನಾಡಿನಲ್ಲಿ ಈ ಅರಮನೆಯನ್ನು ಕಟ್ಟಿಸಿದರು.

ಅರಮನೆಯ ರೂಪರೇಖೆಗಳು[ಬದಲಾಯಿಸಿ]

ನಾಲ್ಕುನಾಡು ಮಡಿಕೇರಿಯಿಂದ ಸುಮಾರು ೪೫ ಕಿಲೊಮೀಟರ್ ದೂರದಲ್ಲಿದೆ. ಅರಮನೆಯು ಎರಡು ಅಂತಸ್ತಿನ ಹೆಂಚು ಹೊದಿಸಿದ ಮನೆಯಾಗಿದೆ. ಕಟ್ಟಡದಲ್ಲಿ ಹೇಳಿಕೊಳ್ಳವಂಥ ವಿಶೇಷವೇನಿಲ್ಲ. ಗೋಡೆಗಳ ಮೇಲೆಯೂ ಮಾಡಿನಲ್ಲೂ ವಿವಿಧ ಬಣ್ಣಗಳ ಚಿತ್ರಗಳಿವೆ.

ಇತಿಹಾಸ[ಬದಲಾಯಿಸಿ]

ಕೊಡಗನ್ನು ಆಳುತ್ತಿದ್ದ ಲಿಂಗಾಯತ ರಾಜರಲ್ಲಿ ೯ನೆಯವನಾದ ಮೊದಲನೆಯ ಲಿಂಗರಾಜನು ೧೭೮೦ರಲ್ಲಿ ಸತ್ತಾಗ ಅವನ ಇಬ್ಬರು ಮಕ್ಕಳು - ವೀರರಾಜ ಮತ್ತು ಎರಡನೇ ಲಿಂಗರಾಜ- ಅಪ್ರಾಪ್ತ ವಯಸ್ಕರಾಗಿದ್ದರು. ಇದನ್ನು ದುರುಪಯೋಗಪಡಿಸಿಕೊಂಡು ಮೈಸೂರಿನ ಹೈದರಲಿಯು ಕೊಡಗನ್ನು ಸ್ವಾಧೀನಪಡಿಸಿಕೊಂಡನು. ಆದರೆ ಕೊಡವರು ದಂಗೆಯೆದ್ದು, ಹೈದರಲಿಯನ್ನು ಸೋಲಿಸಿ ಓಡಿಸಿದರು. ಬಳಿಕ ಹೈದರಲಿಯ ಮಗ ಟಿಪ್ಪುವೂ ವೀರರಾಜನನ್ನು ತನ್ನ ವಶಕ್ಕೆ ತೆಗೆದುಕೊಂಡು ಕೊಡಗನ್ನು ಮತ್ತೆ ಸ್ವಾಧೀನಪಡಿಸಿಕೊಂಡನು.


ಟಿಪ್ಪುವಿನ ಬಂಧನದಿಂದ ತಪ್ಪಿಸಿಕೊಂಡ ವೀರರಾಜನು ಕೊಡವರ ಸಹಾಯದಿಂದ ಟಿಪ್ಪುವಿನ ವಿರುದ್ಧ ಸತತವಾಗಿ ಯುದ್ಧ ಮಾಡುತ್ತಿರುವಾಗ ಅವನ ಕುಟುಂಬವನ್ನು ಸುರಕ್ಷಿತವಾದ ಸ್ಥಳದಲ್ಲಿಡಲು ಯೋಜಿಸುತ್ತಿದ್ದನು. ಆ ಸಂದರ್ಭದಲ್ಲಿ ಅವನ ಆಪ್ತ ಕಾರ್ಯಕಾರರಲ್ಲಿ ಒಬ್ಬನಾದ ಕೇಟುವಳಿರ ಅಚ್ಚುವಂಣನು ಪಾಡಿ ನಾಲ್ಕುನಾಡಿನ ಯುವಕಪಾಡಿ ಗ್ರಾಮದಲ್ಲಿ ಒಂದು ಅರಮನೆಯನ್ನು ಕಟ್ಟಿಸಲು ಸೂಚಿಸಿದನು. ಈ ಪ್ರದೇಶವು ಒಂದು ಬೆಟ್ಟದ ಮೇಲಿದ್ದು, ಕಾಡುಗಳಿಂದಲೂ ಆಳವಾದ ಕಣಿವೆಗಳಿಂದಲೂ ಸುತ್ತುವರೆದಿತ್ತು. ಬಯಲು ಸೀಮೆಯ ಟಿಪ್ಪುವಿನ ಸೈನಿಕರಿಗೇ ಅಲ್ಲದೆ ಕೊಡಗಿನವರಿಗೂ ದುರ್ಗಮವಾಗಿತ್ತು.


ವೀರರಾಜನಿಗೆ ಮನೆ ಕಟ್ಟಲು ನಿರ್ದೇಶಿಸಲ್ಪಟ್ಟ ಪ್ರದೇಶವು ಪುಲಿಯಂಡ ಮನೆತನಕ್ಕೆ ಸೇರಿತ್ತು. ಆ ಮನೆತನದ ಮುಖ್ಯಸ್ಥನಾದ ಪೊನ್ನಪ್ಪನನ್ನು ಕರೆಸಿ, ತಾನು ಮನೆ ಕಟ್ಟಲು ಉದ್ದೇಶಿಸಿರುವ ಪ್ರದೇಶಕ್ಕೆ ಬದಲಾಗಿ ಅವನಿಗೆ ಅನುಕೂಲವಾಗಿರುವ ಬೇರೆ ಯಾವದೇ ಪ್ರದೇಶವನ್ನು ಕೇಳಿ ಪಡೆದುಕೊಳ್ಳಬಹುದೆಂದು ಆದೇಶಿಸಿದನು. ಪುಲಿಯಂಡ ಮನೆತನಕ್ಕೆ ಎಡೆನಾಲ್ಕುನಾಡಿನ (ಈಗಿನ ವೀರರಾಜಪೇಟೆಯ ಸಮೀಪದ) ಮಗ್ಗುಲ ಗ್ರಾಮದ ಚೋಕಂಡ ಮನೆತನದಿಂದ ಮದುವೆಯಾಗಿ ಬಂದಿದ್ದವಳೊಬ್ಬಳ ಸೂಚನೆಯಂತೆ ಪೊನ್ನಪ್ಪನು ಮಗ್ಗುಲ ಗ್ರಾಮದಲ್ಲಿ ಭೂಮಿಯನ್ನು ಕೇಳಿದನು. ರಾಜನು ಅದಕ್ಕೆ ಸಮ್ಮತಿಸಿ, ಹಾಗೆಯೇ ಪುಲಿಯಂಡ ಮನೆತನದವರು ಅಲ್ಲಿನೆಲೆಸಲು ಅನುಕೂಲ ಮಾಡಿಕೊಟ್ಟನು.


ಹೀಗೆ ನಾಲ್ಕುನಾಡಿನ ಅರಮನೆಯ ಕೆಲಸವು ಆರಂಭವಾಗಿ ಕೆಲವು ತಿಂಗಳುಗಳ ಬಳಿಕ ೧೭೯೧ರ ಡಿಸೆಂಬರಿನಲ್ಲಿ ಪೂರ್ಣಗೊಂಡಿತು.

ಆಧಾರ[ಬದಲಾಯಿಸಿ]

ಕೊಡಗಿನ ಇತಿಹಾಸ - ಡಿ ಎನ್ ಕೃಷ್ಣಯ್ಯ - ಪ್ರಸಾರಾಂಗ, ಮೈ ವಿ ವಿ - ೧೯೭೪.

ನಾಲ್ಕುನಾಡು ಅರಮನೆ - ಕರ್ನಾಟಕ ರಾಜ್ಯ